ತನ್ನಿಮಿತ್ತ
ನಂ.ಶ್ರೀಕಂಠ ಕುಮಾರ್
ಶ್ರೀ ಸಚ್ಚಿದಾನಂದ ಶಿವಾಭಿನವ್ಯ ನೃಸಿಂಹ ಭಾರತ್ಯಭಿಧಾನ್ ಯತೀಂದ್ರಾನ್ | ವಿದ್ಯಾನಿಧಿನ್ ಮಂತ್ರನಿಽನ್ ಸದಾತ್ಮನಿಷ್ಮಾನ್
ಭಜೇ ಮಾನವ ಶಂಭುರೂಪಾನ್ ||
ಭಗವತ್ಪಾದ ಶ್ರೀ ಶಂಕರಾಚಾರ್ಯರವರಿಂದ ಸ್ಥಾಪಿತ ದಕ್ಷಿಣಾಮ್ನಾಯ ಶೃಂಗಗಿರಿ ಶ್ರೀ ಶಾರದಾ ಪೀಠದಲ್ಲಿ 33ನೇ ಅಧಿಪತಿ ಗಳಾಗಿ ಅಭಿನವ ಶಂಕರರು ಎಂದೇ ಪ್ರಸಿದ್ಧರಾಗಿ ಜಗದ್ಗುರು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿ ಗಳವರು 33 ವರ್ಷಗಳ ಕಾಲ ಪೀಠಾಧಿಪತ್ಯವನ್ನು ವಹಿಸಿ (1879-1912) ಸಂಪ್ರದಾಯನಿಷ್ಠರಾಗಿ ಧರ್ಮ ರಕ್ಷಣೆ ಮಾಡಿ ರಾರಾಜಿಸಿದರು.
ಶ್ರೀಗಳವರದ್ದು ಪಂಡಿತ ವಂಶ. ತಂದೆ ಕುಣಿಗಲ್ ರಾಮಾಶಾಸ್ತ್ರಿಗಳವರು, ತಾಯಿ ಲಕ್ಷಮ್ಮರವರು. ಪೈಂಗಳ ಸಂವತ್ಸರದ ಪಾಲ್ಗುಣ ಮಾಸದ ಬಹುಳ ಏಕಾದಶಿ ದಿವಸ (11.03.1858) ಶ್ರವಣ ನಕ್ಷತ್ರದಲ್ಲಿ ಪುತ್ರರತ್ನಕ್ಕೆ ನಂಜನಗೂಡು ಶ್ರೀಕಂಠೇಶ್ವರನ ಅನುಗ್ರಹದಿಂದ ಜನ್ಮವಿತ್ತರು. ನಂತರ ಶಿಶುವಿಗೆ ‘ಶಿವಸ್ವಾಮಿ’ ಎಂದೇ ನಾಮಕರಣ ಮಾಡಿದರು.
ಬಾಲ್ಯ: ಬಾಲಕ ಶಿವಸ್ವಾಮಿಗೆ ಎರಡು ವರ್ಷವಿನ್ನೂ ತುಂಬಿರಲಿಲ್ಲ. ಆಗಲೇ ಪಿತೃ ವಿಯೋಗ ಉಂಟಾಗಿ ಹಿರಿಯ ಸಹೋದರ ರಾದ ಕುಣಿಗಲ್ ಲಕ್ಷ್ಮೀನರಸಿಂಹ ಶಾಸ್ತ್ರಿಗಳೇ ಇವರಿಗೆ ಪಿತೃಸದೃಶರಾಗಿ ಪ್ರೀತಿ, ವಿಶ್ವಾಸಗಳಿಂದ ಪೋಷಿಸಿ ಯಾವುದೇ ಅಡೆತಡೆ ಗಳಿಲ್ಲದೆ ಇವರ ವೇದ ವಿದ್ಯಾಭ್ಯಾಸವು ನಿರ್ವಿಘ್ನವಾಗಿ ನಡೆಯಿತು.
ಗುರುದರ್ಶನ: ಆಗ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ವಿರಾಜಮಾನರಾಗಿದ್ದವರು ಮಹಾತಪಸ್ವಿಗಳೂ ನಿಗ್ರಹಾನುಗ್ರಹ ಸಮರ್ಥರು ಆದ ಅಷ್ಟಮ ಜಗದ್ಗುರುಗಳು ಶ್ರೀ ನೃಸಿಂಹಭಾರತೀ ಮಹಾಸ್ವಾಮಿಗಳವರು. ಒಮ್ಮೆ ಮುಮ್ಮುಡಿ ಕೃಷ್ಣರಾಜ ಒಡೆಯರ್‌ರ ಪ್ರಾರ್ಥನೆ ಮೇರೆಗೆ ಗುರುಗಳವರು ಮೈಸೂರಿಗೆ ದಯಮಾಡಿಸಿದ್ದರು. ಅವರ ದರ್ಶನಕ್ಕಾಗಿ ಆಸ್ಥಾನ
ವಿದ್ವಾಂಸರಾಗಿದ್ದ ಕುಣಿಗಲ್ ಲಕ್ಷ್ಮಿ ನರಸಿಂಹಶಾಸ್ತ್ರಿಗಳೊಂದಿಗೆ ಅವರ ತಮ್ಮನಾದ ಬಾಲಕ ಶಿವಸ್ವಾಮಿಯೂ ಬಂದಿದ್ದರು. ಆಗ ಬಾಲಕನಾಗಿದ್ದ ಶಿವಸ್ವಾಮಿಗೆ ಕೇವಲ ಎಂಟು ವರ್ಷ ವಯಸ್ಸು.
ಶ್ರೀಗಳವರು ಬಾಲಕನನ್ನು ನೋಡಿ ಸಮೀಪದಲ್ಲಿ ಕುಳ್ಳಿರಿಸಿಕೊಂಡು ‘ನಿನಗೆ ಏನು ಬೇಕಪ್ಪಾ ಮಗೂ?’ ಎಂದು ಕೇಳಿದರು. ಆಗ ಬಾಲಕ ಶಿವಸ್ವಾಮಿಯು ‘ಮಹಾಸ್ವಾಮಿಗಳೇ, ತಮ್ಮಲ್ಲಿ ಸ್ಥಿರವಾದ ಭಕ್ತಿ ಇರುವಂತೆ ನನ್ನನ್ನು ಅನುಗ್ರಹಿಸಿರಿ ಅದರಿಂದಲೇ
ನಾನು ಕೃತಾರ್ಥನಾಗುವೆನು’ ಎಂದು ಬಾಲಕ ಉತ್ತರಿಸಿದನು. ಅಂದೇ ಶ್ರೀಗಳವರು ಶಿವಸ್ವಾಮಿಯೇ ತಮಗೆ ತಕ್ಕ ಶಿಷ್ಯರೆಂದು ಯೋಚಿಸಿ ಫಲ – ವಸ್ತ್ರಾದಿಗಳನ್ನು ಅನುಗ್ರಹಿಸಿ ಶೃಂಗೇರಿ ಶ್ರೀಶಾರದಾ ಪೀಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂದು
ನಿಶ್ಚಯಿಸಿ ಅಂದಿನ ದೊರೆಗಳಾದ ಶ್ರೀಕೃಷ್ಣರಾಜ ಒಡೆಯರ್ ಅವರಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಸನ್ಯಾಸ ಸ್ವೀಕಾರ: ಬಾಲಕ ಶಿವಸ್ವಾಮಿಯ ಸನ್ಯಾಸ ಸ್ವೀಕಾರ ಸಮಾರಂಭವು 1866ನೇ ಅಕ್ಷಯ ಸಂವತ್ಸರದ ಆಷಾಢ ಬಹುಳ ಷಷ್ಠಿ ದಿವಸದಂದು ಗುರುಗಳಾದ ಅಷ್ಟಮ ಶ್ರೀನೃಸಿಂಹಭಾರತೀ ಮಹಾಸ್ವಾಮಿಗಳವರ ಅನುಜ್ಞೆಯಂತೆ ಪುರುಷ ಸೂಕ್ತ,
ಹೋಮ, ಅಷ್ಟಶ್ರಾದ್ಧಗಳು, ಮೊದಲಾದ ಧಾರ್ಮಿಕ ಕಾರ್ಯಗಳೆಲ್ಲಾ ಮೈಸೂರು ಅರಮನೆಯ ಶ್ರೀಲಕ್ಷ್ಮೀರಮಣ ಸ್ವಾಮಿ ಯವರ ದೇವಸ್ಥಾನದಲ್ಲಿ ವಿಧಿವತ್ತಾಗಿ ನೆರವೇರಿಸಿದರು.
ನಂತರ ಕಾರಂಜಿಕೆರೆಗೆ ಆಗಮಿಸಿ ಪ್ರೈಷ ಮಂತ್ರವನ್ನುಚ್ಛರಿಸಿ ಶಿಖಾ, ಯಜ್ಞೋಪವೀತಾದಿಗಳನ್ನು ತ್ಯಜಿಸಿ ಆಶ್ರಮೋಚಿತವಾದ ಕೌಪೀನ ಕಟಿಸೂತ್ರ, ಕಾಷಾಯ ವಸ್ತ್ರಗಳನ್ನು, ದಂಡಕಮಂಡಲು, ಪಾದುಕೆಗಳನ್ನೂ ಸ್ವೀಕರಿಸಿ ಮಹಾವಾಕ್ಯೋಪದೇಶ ಪಡೆದು
‘ಶ್ರೀಸಚ್ಚಿದಾನಂದ ಶಿವಾನಭಿನವ ನೃಸಿಂಹ ಭಾರತೀ’ ಎಂಬುದಾಗಿ ಯೋಗಪಟ್ಟವನ್ನು ಸ್ವೀಕರಿಸಿದರು. ಆಗ ಶ್ರೀಗಳವರಿಗೆ ಎಂಟು ವರ್ಷ ವಯಸ್ಸು. ಶ್ರೀಗಳವರ ಸನ್ಯಾಸ ಸ್ವೀಕಾರ ಸಮಾರಂಭದಲ್ಲಿ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್‌ರವರು, ಆಗಿನ
ಸಂದರ್ಭದಲ್ಲಿ ಚೀಫ್ ಕಮೀಷನರ್ ಆಗಿದ್ದ ಮಿಸ್ಟರ್ ಬೌರಿಂಗ್ ಸಾಹೇಬರವರು, ಆಸ್ಥಾನ ವಿದ್ವಾಂಸರುಗಳು, ಅನೇಕ ಗಣ್ಯ ವ್ಯಕ್ತಿಗಳು, ಭಕ್ತರುಗಳು ಸಹ ಉಪಸ್ಥಿತರಿದ್ದರು.
ಪಟ್ಟಾಭಿಷೇಕ: ಪ್ರಮಾದಿ ಸಂವತ್ಸರದ ಆಷಾಢ ಶುದ್ಧ ಅಷ್ಟಮಿ ಶುಕ್ರವಾರದಂದು (1879) ಸಂಪ್ರದಾಯಾನುಸಾರವಾಗಿ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರಿಗೆ ವ್ಯಾಖ್ಯಾನ ಸಿಂಹಾಸನದಲ್ಲಿ ಪಟ್ಟಾಭಿಷೇಕವು ನಡೆಯಿತು.
ವಿಜಯಯಾತ್ರೆ: ಪಟ್ಟಾಭಿಷಿಕ್ತರಾದ ಶ್ರೀಗಳವರು ವಿಜಯಯಾತ್ರೆಯನ್ನು ಕೈಗೊಳ್ಳಬೇಕೆಂದು ಹಲವಾರು ಭಕ್ತರು ಪ್ರಾರ್ಥಿಸು ತ್ತಿದ್ದರು. ಹಾಗಾಗಿ ಮಹಾಸ್ವಾಮಿಗಳವರು ಪ್ರಥಮ ವಿಜಯ ಯಾತ್ರೆಯನ್ನು 1885ರ ಮಾರ್ಗಶಿರ ಶುದ್ಧ ಪಂಚಮಿ ಶುಕ್ರವಾರ ಶೃಂಗೇರಿಯಿಂದ ಪ್ರಾರಂಭಿಸಿ ಸುಮಾರು 11 ತಿಂಗಳ ಕಾಲ ಉತ್ತರ ಕನ್ನಡ ಪ್ರಾಂತ್ಯಗಳಲ್ಲಿ ವಿಜಯ ಯಾತ್ರೆಯನ್ನು ಮಾಡಿ ಸರ್ವಧಾರಿ ಸಂವತ್ಸರದ ಮಾಘಶುದ್ಧ ತ್ರಯೋದಶಿಯಂದು ಶೃಂಗೇರಿಗೆ ಆಗಮಿಸಿದರು.
ನಂತರ ಖರಸಂವತ್ಸರದ ಜೇಷ್ಠ ಬಹುಳ ಪಂಚಮಿಯಂದು (1891) ಎರಡನೇ ವಿಜಯ ಯಾತ್ರೆಯನ್ನು ಪ್ರಾರಂಭಿಸಿ ಆಷಾಢ ಶುಕ್ಲ ದ್ವಿತೀಯಾದಂದು ಮೈಸೂರು ನಗರವನ್ನು ಪ್ರವೇಶಿಸಿದರು. ಹಿಂದಿನ ಪದ್ಧತಿಯಂತೆ ಮಹಾರಾಜ ಶ್ರೀ ಚಾಮರಾಜ ಒಡೆಯರ್‌ರವರು ಗುರುಗಳವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಶ್ರೀಮನ್ ಮಹಾರಾಜರವರ ಪ್ರಾರ್ಥನೆಯ ಮೇರೆಗೆ
ಶ್ರೀಗಳವರು ಆ ವರ್ಷದ ಚಾತುರ್ಮಾಸ್ಯವನ್ನು, ಶರನ್ನವರಾತ್ರಿ ಮಹೋತ್ಸವವನ್ನು ಮೈಸೂರಿನಲ್ಲಿಯೇ ಆಚರಿಸಿದರು. ಈ ಸಂದರ್ಭದಲ್ಲಿ ಶ್ರೀಚಾಮರಾಜ ಒಡೆಯರ್ ರವರು ಪ್ರಾರಂಭಿಸಿದ್ದ ‘ಶ್ರೀ ಚಾಮರಾಜೇಂದ್ರ ಸರಸ್ವತಿ ಪ್ರಸಾದ’ ಎಂಬ ಹೆಸರಿನ
ಸಂಸ್ಕೃತ ಪಾಠಶಾಲೆಗೆ ದಯಮಾಡಿಸಿ ಖರಸಂವತ್ಸರದ ಕಾರ್ತಿಕ ಶುಕ್ಲ ತದಿಗೆಯಂದು ಶ್ರೀವಿದ್ಯಾಗಣಪತಿಯನ್ನು ಪ್ರತಿಷ್ಠಾಪಿಸಿ ತಮ್ಮ ಅಮೃತಹಸ್ತಗಳಿಂದ ಪೂಜೆ ಸಲ್ಲಿಸಿದರು.
ಆ ಸಮಯದಲ್ಲಿ ಮಹಾರಾಜರಾದ ಶ್ರೀ ಚಾಮರಾಜ ಒಡೆಯರ್ ರವರಿಗೆ, ರಾಜ ಕುಟುಂಬದವರಿಗೆ, ದಿವಾನ್ ಶೇಷಾದ್ರಿ ಅಯ್ಯರ್ ರವರಿಗೆ ಹಾಗೂ ಭಕ್ತಾದಿಗಳಿಗೂ ಫಲ – ಮಂತ್ರಾಕ್ಷತೆಯನ್ನು ಅನುಗ್ರಹಿಸಿದರು. ನಂತರ ಮೈಸೂರಿನಿಂದ ಹೊರಟು, ನಂಜನ ಗೂಡಿನಲ್ಲಿ 22 ದಿವಸಗಳ ವಾಸ್ತವ್ಯ ಹೂಡಿ ಶ್ರೀಪಾರ್ವತೀ ಸಮೇತನಾದ ಶ್ರೀಕಂಠೇಶ್ವರಸ್ವಾಮಿಗೆ ವಿಶೇಷ ಪೂಜಾದಿಗಳನ್ನು ನೆರವೇರಿಸಿ ಭಕ್ತರುಗಳನ್ನು ಅನುಗ್ರಹಿಸಿದರು.
ನಂತರ ಅಲ್ಲಿಂದ ಚಾಮರಾಜ ನಗರ, ಗುಂಡ್ಲುಪೇಟೆ, ಹೆಗ್ಗಡದೇವನ ಕೋಟೆ, ಎಡತೊರೆ, ಹುಣಸೂರು, ಅರಕಲಗೂಡು
ಮಾರ್ಗವಾಗಿ ಕೊಡಗು ಪ್ರದೇಶವನ್ನು ಪ್ರವೇಶಿಸಿ ಯಾತ್ರೆ ಕೈಗೊಂಡು ಕಾವೇರಿ ಉತ್ಪತ್ತಿ ಸ್ಥಾನ ತಲಕಾವೇರಿಗೆ ಚಿತ್ತೈಸಿ ಸುವರ್ಣದ ಪುಷ್ಪಗಳಿಂದ ಪುಷ್ಪಾರ್ಚನೆ ಮಾಡಿ ಪೂಜಿಸಿದರು.
ನಂತರ ಯಾತ್ರೆ ಯನ್ನು ತಮಿಳುನಾಡು ಭಾಗಕ್ಕೆ ಮುಂದುವರಿಸಿ ಸುಮಾರು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಸಂಚರಿಸಿ ಧರ್ಮಪ್ರಸಾರ ಮಾಡಿ ಭಕ್ತಾದಿಗಳನ್ನು ಅನುಗ್ರಹಿಸಿ 1895ರಲ್ಲಿ ಶೃಂಗೇರಿಗೆ ಮರಳಿದರು. ಶ್ರೀಗಳವರು ಶೃಂಗೇರಿಯಲ್ಲಿ
ವಾಸ್ತವ್ಯವಿದ್ದಾಗ ತುಂಗಾ ನದಿ ತೀರದಲ್ಲಿ ವಿವಿಕ್ತವಾಗಿಯೂ, ರಮಣೀಯವಾಗಿಯೂ ಇರುವ ಪ್ರದೇಶಗಳಲ್ಲೂ ಹಾಗೂ ನರಸಿಂಹ ಪರ್ವತದಲ್ಲಿ ಹೆಚ್ಚು ಆತ್ಮಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು.
ಶ್ರೀಗಳವರ ಪೀಠಾವಧಿಯಲ್ಲಿ ಶೃಂಗೇರಿಯಲ್ಲಿ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಮಹಾಪಾಠಶಾಲೆ ಸ್ಥಾಪನೆ ಹಾಗೂ 1907ರಲ್ಲಿ ಶ್ರೀಶಾರದಾ ಅಮ್ಮನವರ ದೇವಾಲಯದ ಜೀರ್ಣೋದ್ಧಾರ ನಡೆಯಿತು. ಬೆಂಗಳೂರಿನಲ್ಲಿ ಶ್ರೀಶಂಕರ ಮಠದ ನಿರ್ಮಾಣ, ಶ್ರೀಶಂಕರ ಭಗವತ್ಪಾದರ ಜನ್ಮಭೂಮಿ ಯಾದ ಕೇರಳದ ಕಾಲಟಿ ಕ್ಷೇತ್ರವನ್ನು ಪರಿಷ್ಕರಿಸಿ ಅಲ್ಲಿ ಶ್ರೀಶಂಕರರ, ಶ್ರೀಶಾರದಾಂಬ
ಅಮ್ಮನವರ ದೇವಾಲಯ ಸ್ಥಾಪಿಸಿ ಅದನ್ನು ಭಾರತದ ಶ್ರೇಷ್ಠ ಆಧ್ಯಾತ್ಮಿಕ ಕೇಂದ್ರವನ್ನಾಗಿ ಪರಿವರ್ತಿಸಿದರು.
ಎಲ್ಲೆಡೆ ಭಗವತ್ಪಾದ ಶ್ರೀಶಂಕರರ ಜಯಂತ್ಯುತ್ಸವವನ್ನು ಆಚರಿಸುವಂತೆ ವ್ಯವಸ್ಥೆ ಮಾಡಿದರು. ಶ್ರೀಗಳವರು ದೇಶಾದ್ಯಂತ ಸಂಚಾರ ಮಾಡಿ ಧರ್ಮವೆಂದರೇನು?, ಧರ್ಮ ಪಾಲಿಸುವುದ ರಿಂದ ದೊರಕುವ ಪ್ರಯೋಜನ ವೇನು?, ಅದನ್ನು ಹೇಗೆ ಪಾಲಿಸಬೇಕು ಎಂದು ಭಕ್ತರಿಗೆ ತಿಳಿಸಿ, ಶ್ರೀಶಂಕರಾಚಾರ್ಯರ ಉಪದೇಶ ಗಳನ್ನು ಪ್ರಸಾರ ಮಾಡಿದರು. ಶ್ರೀಗಳವರ ರಚನೆಗಳು
‘ಭಕ್ತಿಸುಧಾ ತರಂಗಿಣೀ’ ಎಂಬ ಗ್ರಂಥದಲ್ಲಿ ಮುದ್ರಿತವಾಗಿದೆ. ಶ್ರೀಗಳವರು ಶ್ರೀಶಂಕರ ಭಗವತ್ಪಾದರ ಎಲ್ಲಾ ಕೃತಿಗಳನ್ನು ಸಂಪಾದಿಸಿ, ಸಂಶೋಧಿಸಿ ಪುನರ್ ಮುದ್ರಣ ಮಾಡಿಸಿದರು.
ವಿಶೇಷವಾಗಿ ವಿವೇಕ ಚೂಡಾಮಣಿಗೆ ವ್ಯಾಖ್ಯಾನವನ್ನು ರಚಿಸಲು ಸಂಕಲ್ಪಿಸಿ ಮೊದಲ ಏಳು ಶ್ಲೋಕಗಳಿಗೆ ಹೃದ್ಯವಾದ ವ್ಯಾಖ್ಯಾನವನ್ನು ರಚಿಸಿದರು. ಈ ವ್ಯಾಖ್ಯಾನವು ‘ವಿವೇಕೋದಯಃ’ ಎಂಬ ಹೆಸರಿನಿಂದ ಶ್ರೀಮಠದ ವತಿಯಿಂದ ಪ್ರಕಟಿತವಾಗಿದೆ.
ಶ್ರೀಗಳವರು ಕೊನೆಯ ದಿವಸಗಳಲ್ಲಿ ಹೆಚ್ಚು ಹೆಚ್ಚು ಅಂತರ್ಮುಖಿಗಳಾಗುತ್ತಾ ಪರೀಧಾವಿ ಸಂವತ್ಸರದ ಚೈತ್ರ ಶುದ್ಧ ಬಿದಿಗೆ ಯಂದು ಬೆಳಿಗ್ಗೆ ಧ್ಯಾನ ಪರವಶರಾಗಿ ಶರೀರವನ್ನು ತ್ಯಜಿಸಿ ಪರಬ್ರಹ್ಮರಲ್ಲಿ ಐಕ್ಯರಾದರು (1912).
ಮೈಸೂರಿನಲ್ಲಿ ಶ್ರೀ ಶಂಕರಮಠ ಸ್ಥಾಪನೆ: 34ನೇ ಪೀಠಾಧಿಪತಿಗಳಾದ ಶ್ರೀಚಂದ್ರಶೇಖರ ಭಾರತೀ ಮಹಾಸ್ವಾಮಿಗಳವರು ವಿಜಯ ಯಾತ್ರೆಯನ್ನು ಕೈಗೊಂಡು 1924ರಲ್ಲಿ ಮೈಸೂರಿಗೆ ಆಗಮಿಸಿದಾಗ ತಮ್ಮ ಗುರುಗಳಾದ ಶ್ರೀ ಜಗದ್ಗುರು ಸಚ್ಚಿದಾನಂದ
ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳವರು ಜನ್ಮತಾಳಿ, ತಮ್ಮ ಬಾಲ್ಯವನ್ನು ಕಳೆದಿದ್ದ ಜಾಗದಲ್ಲಿ ಅವರ ಸ್ಮರಣಾರ್ಥ ವಾಗಿ ಭವ್ಯವಾದ ಮಂದಿರವನ್ನು ನಿರ್ಮಿಸಿ ಅಲ್ಲಿ ಮಹಾಸ್ವಾಮಿಗಳವರ ಅಮೃತ ಶಿಲಾಮೂರ್ತಿಯನ್ನು ಸ್ಥಾಪಿಸಿ ‘ಅಭಿನವ
ಶಂಕರಾಲಯ’ ಎಂದು ನಾಮಕರಣ ಮಾಡಿದರು.
ಆ ಸಮಯದಲ್ಲಿ ಮೈಸೂರು ಮಹಾರಾಜರಾಗಿದ್ದ ರಾಜರ್ಷಿ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಉಪಸ್ಥಿತರಿದ್ದು, ನೀಡಿದ ಸಹಾಯ ಸ್ಮರಣೀಯ. ಇಂದು ಅಭಿನವ ಶಂಕರಾಲಯವು ಮೈಸೂರಿನ ಧಾರ್ಮಿಕ ಶ್ರದ್ಧಾಕೇಂದ್ರವಾಗಿದ್ದು ಧರ್ಮಾನಿಷ್ಠರಲ್ಲಿ ಧರ್ಮಜಾಗೃತಿಯನ್ನು ಉಂಟು ಮಾಡುತ್ತಿದೆ. ಏ.7ರ ಇಂದು ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಮಹಾಸ್ವಾಮಿ ಗಳವರ ಜಯಂತಿ.