ರಾಜಬೀದಿ
ವಿನಾಯಕ ಮಠಪತಿ
ಕೌರವರ ಜತೆಗಿನ ಪಗಡೆಯಾಟದಲ್ಲಿ ಸೋತ ಪಾಂಡವರು ತಾವು ಕೊಟ್ಟ ಮಾತಿನಂತೆ ದ್ರೌಪದಿಯನ್ನು ಕೌರವರಿಗೆ ಒಪ್ಪಿಸಿಯಾಗಿತ್ತು. ವಿಲಕ್ಷಣ ಭಾವದಲ್ಲಿ ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ ಅವಳ ನೆರವಿಗೆ ಬಂದಿದ್ದು ಶ್ರೀಕೃಷ್ಣ ಪರಮಾತ್ಮ. ಆದರೆ ಕಲಿಯುಗದ ದ್ರೌಪದಿ ವಸ್ತ್ರಾಪಹರಣದ
ಸಂದರ್ಭದಲ್ಲಿ ಕೃಷ್ಣನ ಅನುಪಸ್ಥಿತಿ ಇತ್ತು. ಇಲ್ಲಿ ಸ್ಥಿತಿವಂತರ ವಿಲಕ್ಷಣ ಭಾವದಲ್ಲಿ ಕಾನೂನು ಬೆಚ್ಚನೆಯ ನಿದ್ರೆಗೆ ಜಾರಿತ್ತು.
ಹೌದು, ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ, ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿರುವ ಬೆಳಗಾವಿ ಜಿಲ್ಲೆಯ ಹೊಸ ವಂಟಮೂರಿ ಗ್ರಾಮದಲ್ಲಿ ನಡೆದ, ಮಹಿಳೆ ಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ಸಾಮಾನ್ಯ ಜನರನ್ನು ರಕ್ಷಿಸಬೇಕಿದ್ದ ಪೊಲೀಸ್ ಇಲಾಖೆ, ಸ್ಥಿತಿವಂತರ ಆರ್ಭಟದ ಮುಂದೆ ಕೈಕಟ್ಟಿ ಕುಳಿತಿತ್ತು. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ನೆಲದ ಮಹಿಳೆ ಯೊಬ್ಬಳು ದುರುಳರ ಅಟ್ಟಹಾಸಕ್ಕೆ ನಲುಗಿಹೋಗಿದ್ದಳು.
ಇತ್ತ ಮುಖ್ಯಮಂತ್ರಿ ಸೇರಿದಂತೆ ಇಡೀ ರಾಜ್ಯ ಸರಕಾರವು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಬಿಡಾರ ಹೂಡಿತ್ತು. ನಗರಕ್ಕೆ ಕೇವಲ ೨೫ ಕಿ.ಮೀ. ಅಂತರದಲ್ಲಿದ್ದ ಹಳ್ಳಿಯಲ್ಲಿ ಮಹಿಳೆಯ ಮೇಲೆ ದಾಳಿ ನಡೆದಿತ್ತು. ಪತಿ ಹಾಗೂ ತಾಯಿ ಅಸಹಾಯಕರಾಗಿ ವ್ಯವಸ್ಥೆಯನ್ನು ಶಪಿಸುತ್ತಾ ಕೈಕಟ್ಟಿ ಕುಳಿತಿದ್ದರು. ಡಿಸೆಂಬರ್ ೧೦ರ ತಡರಾತ್ರಿ, ಸುಮಾರು ೧೫ ಜನರನ್ನು ಒಳಗೊಂಡ ಕುಟುಂಬದ ಸದಸ್ಯರು ಮಹಿಳೆಯನ್ನು ಎಳೆದು ಹೊಡೆಯಲಾರಂಭಿಸಿದರು. ಮನೆಯ ಹೊರಗಿನ ಕಂಬಕ್ಕೆ ಕಟ್ಟಿ ಮೈಮೇಲಿನ ಬಟ್ಟೆ ಹರಿದುಹಾಕಿ, ನಿರಂತರ ೪ ಗಂಟೆಗಳ ಕಾಲ ದಾಳಿ ನಡೆಸಿ ಅಟ್ಟಹಾಸ ಮೆರೆದರು.
ವಿಷಯ ತಿಳಿದ ಹತ್ತಿರದ ಕಾಕತಿ ಪೊಲೀಸ್ ಠಾಣೆಯ ಸಿಬ್ಬಂದಿ ಇದೊಂದು ಸಣ್ಣ ಜಗಳವೆಂದು, ಸಂದರ್ಭ ಅರಿಯದೆ ಮಾಡಿದ ಆ ಒಂದು ತಪ್ಪಿನಿಂದಾಗಿ ಈ ಪ್ರಕರಣ ಸದ್ಯ ಇಡೀ ದೇಶದಲ್ಲೇ ಸಂಚಲನ ಹುಟ್ಟುಹಾಕಿದೆ. ದುರುಳರ ಅಟ್ಟಹಾಸಕ್ಕೆ ಈಡಾದ ಮಹಿಳೆ ಅತ್ತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೆ, ಇತ್ತ
ಪೊಲೀಸರು ಆನೆನಡಿಗೆಯಲ್ಲಿ ಘಟನಾಸ್ಥಳಕ್ಕೆ ಬಂದಿದ್ದಾರೆ. ಹಾಗಂತ, ಪೊಲೀಸರು ಬಂದ ಮಾತ್ರಕ್ಕೆ ದಾಳಿಕೋರರ ಆರ್ಭಟ ಶಾಂತವಾಗಿರಲಿಲ್ಲ; ನಿರಂತರ ೪ ಗಂಟೆಯ ದಾಳಿಯಲ್ಲಿ ಅರ್ಧದಷ್ಟು ಭಾಗ ಪೊಲೀಸರ ಉಪಸ್ಥಿತಿಯಲ್ಲೇ ನಡೆದಿದ್ದು ನಮ್ಮ ಕಾನೂನು ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಹೊಸ ವಂಟಮೂರಿ ಪ್ರಕರಣದಲ್ಲಿ ಸ್ವತಃ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದು ಸ್ವಾಗತಾರ್ಹ ಬೆಳವಣಿಗೆ. ಮಹಿಳೆಯನ್ನು ವಿವಸ್ತ್ರಗೊಳಿಸಿದ ಘಟನೆಯನ್ನು, ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು ಅತ್ಯಂತ ಕಠೋರ ಶಬ್ದಗಳಿಂದ ಖಂಡಿಸಿದೆ. ‘ಹಿಂಸಾಚಾರದಲ್ಲಿ ಭಾಗಿಯಾದವರನ್ನು ಮನುಷ್ಯರು ಎನ್ನಲು ಸಾಧ್ಯವಿಲ್ಲ. ಮಹಾಭಾರತದಲ್ಲಾದ ದ್ರೌಪದಿಯ ವಸ್ತ್ರಾಪಹರಣಕ್ಕಿಂತಲೂ ಇದು ಕ್ರೂರ. ಅಂದು ಕೃಷ್ಣನು ದ್ರೌಪದಿಯ ಸಹಾಯಕ್ಕೆ ಬಂದರೆ, ಇಂದು ಕಂಡಿದ್ದು ದುರ್ಯೋಧನ ಹಾಗೂ ದುಶ್ಯಾಸನರಿಂದ ಕೂಡಿದ ಜಗತ್ತು’ ಎಂದು ಘಟನೆಯನ್ನು ಟೀಕಿಸಿದೆ.
ಮದುವೆಯ ದಿನಾಂಕ ನಿಗದಿಯಾದ ನಂತರ ಮಗಳು ಊರಿನ ಯುವಕನ ಜತೆ ಓಡಿಹೋಗಿದ್ದಾಳೆ ಎಂಬ ಕೋಪ ಯುವತಿಯ ಮನೆಯವರಿಗೆ ಇರಬಹುದು. ಹಾಗಂತ, ಏನೂ ಅರಿಯದ ಯುವಕನ ತಾಯಿಯನ್ನು ಮನಬಂದಂತೆ ಥಳಿಸುವುದು ಯಾವ ನ್ಯಾಯ? ಒಂದು ವೇಳೆ ಯುವಕನು ಯುವತಿಯನ್ನು ಬಲವಂತ ವಾಗಿ ಕರೆದುಕೊಂಡು ಹೋಗಿದ್ದಾನೆ ಎಂದಿದ್ದರೆ, ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸುವ ಅವಕಾಶವೂ ಕುಟುಂಬಕ್ಕೆ ಇತ್ತು. ಆದರೆ ಇದಾವುದನ್ನೂ ಲೆಕ್ಕಿಸದೆ, ಹಣದ ಅಹಂಕಾರದಿಂದ ಮತ್ತು ನಮ್ಮನ್ನು ಯಾರು ಪ್ರಶ್ನೆ ಮಾಡುತ್ತಾರೆ ಎಂಬ ಧಾರ್ಷ್ಟ್ಯ ಮನೋಭಾವದಿಂದಲೇ ವಂಟಮೂರಿ ಪ್ರಕರಣ ನಡೆದಿರುವುದು ಸತ್ಯ.
ಬೆಳಗಾವಿ ನಗರದಿಂದ ಸ್ವಲ್ಪ ದೂರದಲ್ಲಿರುವ ಹೊಸ ವಂಟಮೂರಿ ಗ್ರಾಮದಲ್ಲಿ ಜರುಗಿದ ಈ ಘಟನೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಇಲ್ಲಿ ಪೊಲೀಸರು
ಸೂಕ್ತ ಸಮಯದಲ್ಲಿ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಿದ್ದರೆ, ಮಹಿಳೆಗಾದ ಅನ್ಯಾಯವನ್ನು ತಡೆಗಟ್ಟಬಹುದಿತ್ತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಹಳ್ಳಿ ಪ್ರದೇಶದಲ್ಲಿ ಮಹಿಳೆಯನ್ನು ವಿವಸಗೊಳಿಸಿ ಹಲ್ಲೆ ನಡೆಸುತ್ತಿದ್ದರೆ, ನಾಗರಿಕ ಸಮಾಜವು ಜವಾಬ್ದಾರಿ ಮರೆತು ಪ್ರತ್ಯಕ್ಷ ಸಾಕ್ಷಿಗಳಾಗಿದ್ದು ಎಷ್ಟು ಸರಿ? ಎಲ್ಲರೂ ಒಟ್ಟುಗೂಡಿ ವಿರೋಧ ವ್ಯಕ್ತಪಡಿಸಿದ್ದಿದ್ದರೆ ಅದು ಮಹಿಳೆಗೆ ಆಸರೆಯಾಗುತ್ತಿತ್ತು.
ಸದ್ಯ ದೇಶದಲ್ಲಿ ಅಮಾಯಕ ಮಹಿಳೆಯರ ಮೇಲಿನ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ದೇಶದ ನಾನಾ ಭಾಗಗಳಲ್ಲಿ ಈ ರೀತಿಯ ಪ್ರಕರಣಗಳು ಸಾಮಾನ್ಯವಾಗಿವೆ. ಸಾಕ್ಷರತೆಯ ಪ್ರಮಾಣ ಹಾಗೂ ತಂತ್ರಜ್ಞಾನದ ವೇಗದ ಬೆಳವಣಿಗೆಯ ನಡುವೆ ಮಾನವೀಯ ಮೌಲ್ಯಗಳು ಪಾತಾಳಕ್ಕೆ ಕುಸಿಯುತ್ತಿರುವುದು ಶೋಚನೀಯ. ಪದೇಪದೆ ದಾಳಿಗೆ ಒಳಗಾದ ಸೀಸಂಕುಲವು, ಈ ಸಮಾಜ ಮತ್ತು ಕಾನೂನು ವ್ಯವಸ್ಥೆಯಿಂದ ನೊಂದು
ಯಾವ ನಿರ್ಧಾರವನ್ನೂ ಮಾಡಬಹುದು. ಈ ಕುರಿತು ಪುರುಷಪ್ರಧಾನ ವ್ಯವಸ್ಥೆಯು ಗಂಭೀರ ಚಿಂತನೆ ನಡೆಸಿ ಬದಲಾಗದಿದ್ದರೆ, ಎಷ್ಟೇ ಗಟ್ಟಿಕಾನೂನು ತಂದರೂ
ಪ್ರಯೋಜನವಿಲ್ಲ.
ಭಾರತೀಯ ಸಂವಿಧಾನವು ಪ್ರಜೆಗಳಿಗೆ ಹಲವಾರು ಮೂಲಭೂತ ಹಕ್ಕುಗಳನ್ನು ನೀಡಿದೆ. ಪ್ರತಿಯೊಬ್ಬರೂ ಗೌರವಯುತವಾಗಿ ಬದುಕುವ ವ್ಯವಸ್ಥೆಯನ್ನು ನಮ್ಮ
ಸಂವಿಧಾನ ಗಟ್ಟಿಯಾಗಿ ಪ್ರತಿಪಾದಿಸಿದೆ. ಆದರೆ, ಇವೆಲ್ಲವನ್ನು ಕೊಟ್ಟರೂ ನಾಗರಿಕ ಸಮಾಜವು ತನ್ನ ನೈತಿಕ ಹೊಣೆಗಾರಿಕೆಯನ್ನು ಮರೆತಿರುವುದನ್ನು ವಂಟಮೂರಿ ಪ್ರಕರಣದಲ್ಲಿ ಕಾಣಬಹುದು. ದುರುಳರು ಮಹಿಳೆಯನ್ನು ವಿವಸ್ತ್ರಗೊಳಿಸಿ ನಿರಂತರ ೪ ಗಂಟೆಗಳ ಕಾಲ ಹಲ್ಲೆ ನಡೆಸಿದರೂ ಗ್ರಾಮದ ಯಾರೊಬ್ಬರೂ ಸಹಾಯಕ್ಕೆ ಬಾರದಿರುವುದು ಶೋಚನೀಯ.
ಈ ದೇಶದಲ್ಲಿ ಮಾನವೀಯ ಮೌಲ್ಯಗಳು ಉಳಿದಿರುವುದು ಹಳ್ಳಿಗಳಲ್ಲಿ ಮಾತ್ರ ಎಂದು ಹೇಳುತ್ತೇವೆ. ಆದರೆ ವಂಟಮೂರಿ ಘಟನೆಯ ನಂತರ, ಸಮಾಜಪರ
ದನಿಯೆತ್ತಬೇಕಿದ್ದ ಹಳ್ಳಿಯ ಜನರು ನಿಷ್ಪ್ರಯೋಜಕರಾಗಿದ್ದು ಬದಲಾದ ವ್ಯವಸ್ಥೆಯನ್ನು ಎತ್ತಿ ತೋರಿಸುತ್ತದೆ. ಒಂದು ಕಡೆ, ಘಟನೆ ನಡೆದ ಸಂದರ್ಭದಲ್ಲಿ ಪೊಲೀಸ್ ವ್ಯವಸ್ಥೆ ನಡೆದುಕೊಂಡ ರೀತಿ, ಮತ್ತೊಂದೆಡೆ ಪಕ್ಕದ ಮನೆಯ ಮಹಿಳೆಗೆ ಅನ್ಯಾಯವಾದರೂ ತಡೆಯದ ನಾಗರಿಕ ಸಮಾಜ- ಈ ಎರಡೂ ‘ನಾವು ಮಾಡಿದ್ದು ಸರಿಯೇ?’ ಎಂದು ಸ್ವತಃ ಪ್ರಶ್ನಿಸಿಕೊಳ್ಳಬೇಕು.
ಭಾರತ ದೇಶದಲ್ಲಿ ಮಹಿಳೆಗೆ ನೀಡಿದ ಎತ್ತರದ ಸ್ಥಾನವು ಜಗತ್ತಿನ ಬೇರಾವ ದೇಶದಲ್ಲೂ ಕಾಣಸಿಗದು. ‘ಯತ್ರನಾರ್ಯಸ್ತು ಪೂಜ್ಯಂತೆ ರಮಂತೇ ತ್ರ ದೇವತಾಃ,
ಯತ್ರೈತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾ ಫಲಾಃ ಕ್ರಿಯಾಃ’ ಎಂದಿರುವ ದೇಶ ನಮ್ಮದು. ಅಂದರೆ, ‘ಎಲ್ಲಿ ಸ್ತ್ರೀಯರಿಗೆ ಗೌರವ, ಸನ್ಮಾನಗಳು ದೊರೆಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ. ಯಾವ ಜಾಗದಲ್ಲಿ ಮಹಿಳೆಗೆ ಗೌರವ ಸಿಗುವುದಿಲ್ಲವೋ ಅಂಥ ಕಡೆಗಳಲ್ಲಿ ಯಜ್ಞ-ಯಾಗಾದಿಗಳನ್ನು ಮಾಡಿದರೂ ನಿಷ್ಪ್ರಯೋಜಕ’ ಎಂದರ್ಥ. ಆದರೆ ಭಾರತೀಯ ಪರಂಪರೆಯು ಆಧುನಿಕ ಕಾಲಘಟ್ಟದಲ್ಲಿ ಯಾವ ಮಟ್ಟಿಗೆ ಬದಲಾಗಿದೆ ಎಂಬುದಕ್ಕೆ ವಂಟಮೂರಿ ಗ್ರಾಮದ ಪ್ರಕರಣವೇ ಸಾಕ್ಷಿ. ಇದನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಳ್ಳಬೇಕಾಗಿದೆ.
ಸದ್ಯ ನಮ್ಮ ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವೆ ಸಂಘರ್ಷ ನಡೆಯುತ್ತಿದೆ. ಹಣವಂತರು ಮತ್ತು ಅಧಿಕಾರಸ್ಥರು ಆಡುವ ಆಟಗಳೇ ಇಲ್ಲಿ ನಿರ್ಣಾಯಕ. ಹೀಗಾಗಿ ಸಮಾಜದಲ್ಲಿ ಬಡವರ ನೋವು ಮತ್ತು ಅರಚಾಟವನ್ನು ಕೇಳುವವರು ಯಾರೂ ಇಲ್ಲ. ನೊಂದವರಿಗೆ ಒತ್ತಾಸೆಯಾಗಿ ನಿಲ್ಲಬೇಕಿದ್ದ ಸಮಾಜವು ಪ್ರಸ್ತುತ ಸ್ಥಿತಿವಂತರ ಕಾಲಕೆಳಗೆ ಬೆಚ್ಚನೆಯ ಆಶ್ರಯ ಪಡೆದು ಸುಖವಾಗಿ ನಿದ್ರಿಸುತ್ತಿದೆ, ಅಷ್ಟೇ. ಮಾತನಾಡಬೇಕಾದವರು ನಿದ್ರೆಯಲ್ಲಿದ್ದಾರೆ, ಸಮಾಜ ಒಡೆಯುವವರು ಸದಾಕಾಲವೂ ಜಾಗೃತರಾಗಿದ್ದಾರೆ!
(ಲೇಖಕರು ಪತ್ರಕರ್ತರು)