Saturday, 23rd November 2024

ಶ್ರೀಲಂಕಾ ಬಿಕ್ಕಟ್ಟು ಆಪ್‌ಗೂ ಎಚ್ಚರಿಕೆಯ ಘಂಟೆ

ವೀಕೆಂಡ್ ವಿತ್‌ ಮೋಹನ್

ಮೋಹನ್ ವಿಶ್ವ

camohanbn@gmail.com

ಶ್ರೀಲಂಕಾದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಣದುಬ್ಬರ ದರ ಗಗನಕ್ಕೇರಿದೆ. ಒಂದು ಕಿಲೋಗ್ರಾಮ್ ಕೋಳಿ ಮಾಂಸದ ಬೆಲೆ ಸಾವಿರ ರುಪಾಯಿ ದಾಟಿದೆ. ಒಂದು ಡಾಲರಿಗೆ 230 ಶ್ರೀಲಂಕನ್ ರುಪಾಯಿ ಕೊಡಬೇಕಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದಂತಹ ಲಂಕಾ ಕರೋನ ಹೊಡೆತದ ಪರಿಣಾಮ ಕಳೆದ ಎರಡು ವರ್ಷಗಳಿಂದ ವಿದೇಶಿ ಪ್ರವಾಸಿಗರಿಲ್ಲದೆ ಪರದಾಡುತ್ತಿದೆ.

ಕರೋನ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ವಿಮಾನಯಾನ ಸೇವೆ ಸ್ಥಗಿತಗೊಂಡಿದ್ದರಿಂದ ಪ್ರವಾಸಿಗರು ಶ್ರೀಲಂಕಾದತ್ತ ತಲೆ ಹಾಕಿಲ್ಲ. ಕರೋನ ಮಹಾಮಾರಿ ವಕ್ಕರಿಸುವ ಮುಂಚೆಯೂ ಶ್ರೀಲಂಕಾದಲ್ಲಿ ಮಿತಿಮೀರಿದ ಭಯೋತ್ಪಾದಕ ದಾಳಿಗೆ ಬೆದರಿ ಪ್ರವಾಸಿ ಗರು ಬಂದಿರಲಿಲ್ಲ. ಉಕ್ರೇನ್-ರಷ್ಯಾ ಯುದ್ಧ ಸನ್ನಿವೇಶವಂತೂ ಲಂಕಾದ ಆರ್ಥಿಕತೆ ಯನ್ನು ಅಕ್ಷರಶಃ ಸ್ತಬ್ಧಗೊಳಿಸಿದೆ. ಕಚ್ಚಾ ತೈಲಗಳ ಬೆಲೆಯಲ್ಲಿನ ಏರಿಕೆ ನಿಯಂತ್ರಿಸಲು ಅಲ್ಲಿನ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ.

ಇಡೀ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿದೆ. ರಷ್ಯಾ ಭಾರತಕ್ಕೆ ಕಡಿಮೆ ದರದಲ್ಲಿ ಕಚ್ಚಾ ತೈಲ ನೀಡುವ ಭರವಸೆ ನೀಡಿದೆ. ಆದರೆ ಶ್ರೀಲಂಕಾ ಸಂಕಷ್ಟ ದಲ್ಲಿದ್ದರೂ ಸಹ ರಷ್ಯಾ ಒಂದು ರುಪಾಯಿಯ ಸೋಡಿಯನ್ನು ನೀಡಿಲ್ಲ. ಕಚ್ಚಾ ತೈಲಕ್ಕೆ ಹೊಂದಿಸ  ಬೇಕಾದಂತಹ ಹಣವನ್ನು ನೀಡಲು ಶ್ರೀಲಂಕಾ ಬಳಿ ವಿದೇಶಿ ವಿನಿಮಯ ವಿಲ್ಲ. ಅಲ್ಲಿನ ರಫ್ತು ಪಾತಾಳಕ್ಕಿಳಿದಿದೆ.

ಆಮದಿನಲ್ಲಿ ಏರಿಕೆಯಾಗಿದೆ. ಪರಿಣಾಮ ವಿದೇಶಿ ವಿನಿಮಯದಲ್ಲಿ ಭಾರಿ ವ್ಯತ್ಯಾಸವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಎದುರು ಶ್ರೀಲಂಕನ್ ರುಪಾಯಿ ದೊಡ್ಡಮಟ್ಟದಲ್ಲಿ ಕುಸಿದಿದೆ. ಶ್ರೀಲಂಕಾಕ್ಕೆ ರಫ್ತು ಮಾಡಲು ಇತರ ದೇಶಗಳು ಹೆದರುತ್ತಿವೆ. ಶ್ರೀಲಂಕಾದ ಅಧ್ಯಕ್ಷ ರಾಜಪಕ್ಷೆಯವರ ಅಸಮರ್ಥ ಆರ್ಥಿಕ ನಿರ್ಧಾರಗಳ ಫಲವಾಗಿ ಅಲ್ಲಿನ ಜನ ಬೀದಿಯಲ್ಲಿ ನಿಲ್ಲುವಂತಾಗಿದೆ. ಚೀನಾದ ಸಾಮ್ರಾಜ್ಯಶಾಹಿ ಮನಃಸ್ಥಿತಿಯ ಕೂಪದೊಳಗೆ ಸಿಲುಕಿಕೊಂಡಂತಹ ಶ್ರೀಲಂಕಾ ತನ್ನ ಹಂಬನತೋಟ ಮತ್ತು ಕೊಲಂಬೋದಲ್ಲಿ ಬಂದರು ನಿರ್ಮಾಣ ಮಾಡಲು ಚೀನಾದ ಬ್ಯಾಂಕುಗಳಿಂದ ಬಿಲಿಯನ್ ಗಟ್ಟಲೆ ಹಣವನ್ನು ಸಾಲದ ರೂಪದಲ್ಲಿ ಪಡೆದಿತ್ತು. ಈ ಬಂದರುಗಳು ಯಾವ ಆದಾಯ ವನ್ನೂ ಗಳಿಸದೆ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಮತ್ತಷ್ಟು ಹೊರೆ ಹೆಚ್ಚಿಸಿದವು. ಚೀನಾದ ಸಾಲದ ಕೂಪಕ್ಕೆ ಸಿಲುಕಿದ ಶ್ರೀಲಂಕಾ ನಿರ್ಮಿಸಿದ ಬಂದರುಗಳು ಅವರ ಪಾಲಿಗೆ ‘ಬಿಳಿ ಆನೆ’ಗಳಾಗಿಯೇ ಉಳಿದಿವೆ.

ನಮ್ಮ  ಏರ್ ಇಂಡಿಯಾ ಸಂಸ್ಥೆಯು ಮಾರಾಟವಾದಾಗ ಸರಕಾರದ ಆಸ್ತಿಯನ್ನು ಮಾರಾಟ ಮಾಡಿದರೆಂದು ಬೊಬ್ಬೆ ಹೊಡೆದವರು, ಶ್ರೀಲಂಕಾ ತನ್ನ ಬಂದರನ್ನು ಚೀನಾಕ್ಕೆ 99 ವರ್ಷಗಳ ಭೋಗ್ಯಕ್ಕೆ ಕೊಡುವಂತಹ ಪರಿಸ್ಥಿತಿ ಬಂದಿರುವುದನ್ನು ತಿಳಿಯಬೇಕು. ಚೀನಾ ದಿಂದ ಪಡೆದ ಸಾಲದ ಮೇಲಿನ ಬಡ್ಡಿ ಕಟ್ಟಲಾಗದೆ ಸರಕಾರದ ಆಸ್ತಿಗಳನ್ನು ಮಾರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಚೀನಾ, ಬಂಗಾಳಕೊಲ್ಲಿಯಲ್ಲಿ ತನ್ನ ನಿಯಂತ್ರಣವನ್ನು ಸ್ಥಾಪಿಸಲು ಕೊಲಂಬೊ ಬಂದರಿನ ನಿರ್ಮಾಣಕ್ಕೆ ಸುಮಾರು 10500 ಕೋಟಿ ರುಪಾಯಿ ಯಷ್ಟು ಸಾಲ ನೀಡಿತ್ತು. ಚೀನಾ ಕೂಪಕ್ಕೆ ಬಿದ್ದಂತಹ ಶ್ರೀಲಂಕಾ ವಿಽಯಿಲ್ಲದೆ ತನ್ನ ನೆಲೆಯನ್ನು ಚೀನಾಕ್ಕೆ ಬಿಟ್ಟುಕೊಡಬೇಕಾಯಿತು.

ತೀವ್ರ ಆರ್ಥಿಕ ಹಿಂಜರಿತ ಎದುರಿಸುತ್ತಿರುವಂತಹ ಪರಿಸ್ಥಿತಿಯಲ್ಲೂ ಶ್ರೀಲಂಕಾದ ಸಹಾಯಕ್ಕೆ ಚೀನಾ ಬರಲಿಲ್ಲ. ತಾನು ಪಡೆದಿರುವ ಸಾಲದ ಮರುಪಾವತಿ ಒಪ್ಪಂದವನ್ನು ತಿದ್ದುಪಡಿ ಮಾಡಬೇಕೆಂದು ಕೇಳಿಕೊಂಡರೂ ಅಲ್ಲಿನ ಬ್ಯಾಂಕುಗಳು ತಯಾರಿಲ್ಲ. ಶ್ರೀಲಂಕಾದದಲ್ಲಿ ಚೀನಾದ ಬಂದರು ನಿರ್ಮಾಣ ಕಾರ್ಯವನ್ನು ಅಮೆರಿಕ ವಿರೋಧಿಸಿದರೂ ಲೆಕ್ಕಿಸಿರಲಿಲ್ಲ. ಭಾರತ ಸಹ ಬಂಗಾಳ ಕೊಲ್ಲಿಯಲ್ಲಿ ಚೀನಾ ಬಂದರು ನಿರ್ಮಾಣವನ್ನು ವಿರೋಧಿಸಿತ್ತು. ಆದರೆ, ಕಷ್ಟ ಕಾಲದಲ್ಲಿ ಶ್ರೀಲಂಕಾ ಪರವಾಗಿ ಇಂದು ನಿಂತಿರುವುದು ಭಾರತ. ಭಾರತೀಯ
ರಿಸರ್ವ್ ಬ್ಯಾಂಕ್ ಶ್ರೀಲಂಕಾಕ್ಕೆ ಜನವರಿಯಲ್ಲಿ 400 ಮಿಲಿಯನ್ ಅಮೆರಿಕನ್ ಡಾಲರ್ ಹಣಕಾಸಿನ ನೆರವನ್ನು ನೀಡಿತ್ತು. ಇದರ ಜತೆಗೆ 500 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಸಾಲದ ರೂಪದಲ್ಲಿ ನೀಡಿದೆ.

ಇದೇ ತಿಂಗಳಲ್ಲಿ ಭಾರತ ಹಾಗೂ ಶ್ರೀಲಂಕಾ ಒಂದು ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಅಗತ್ಯ ವಸ್ತುಗಳ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿವೆ. ಇತಿಹಾಸದಲ್ಲಿ ಚೀನಾ ಹಾಗೂ ಅಮೆರಿಕ ಸಣ್ಣ ದೇಶಗಳಿಗೆ ಸಾಲ ನೀಡಿ ಹೇಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿವೆ ಯೆಂಬ ಹತ್ತಾರು ಉದಾಹರಣೆಗಳಿದ್ದರೂ ಶ್ರೀಲಂಕಾ ನಮ್ಮ ಮಾತು ಕೇಳದೆ ಚೀನಾದ ಸ್ನೇಹ ಮಾಡಿತ್ತು. ತನ್ನಲ್ಲಿನ ಹಣದ ಮೂಲಕ ಸಣ್ಣ
ದೇಶಗಳನ್ನು ಕೊಂಡುಕೊಂಡು ನಂತರ ತನ್ನ ಆಟವನ್ನು ಆರಂಭಿಸುವ ಕಲೆ ಚೀನಾಕ್ಕೆ ಕರಗತ. ಅತ್ತ ಪಾಕಿಸ್ತಾನಕ್ಕೆ ಸಾಲ ನೀಡಿ ಭಾರತದ ಮೇಲೆ ಎರಗುವಂತೆ ಮಾಡುತ್ತಿರುವ ಚೀನಾ, ಇತ್ತ ಶ್ರೀಲಂಕಾ ಕಡಲ ತೀರದ ಮೇಲೆ ನಿಯಂತ್ರಣ ಸಾಧಿಸಿ ಭಾರತದ ಜಲಗಡಿಯ ಹತ್ತಿರದಲ್ಲಿ ತನ್ನ ನೆಲೆ ಸ್ಥಾಪಿಸುವ ಯೋಚನೆ ಮಾಡಿತ್ತು. ಶ್ರೀಲಂಕಾದ ನಡೆಯನ್ನು ಸ್ಥಳೀಯರು ವಿರೋಧಿಸಿದ್ದರೂ ಅಧ್ಯಕ್ಷ ಅವರ ಮಾತಿಗೆ ಕಿವಿ ಕೊಟ್ಟಿರಲಿಲ್ಲ.

ಕರೋನ ಹೊಡೆತ ಹಾಗೂ ಚೀನಾದ ಜತೆಗಿನ ಒಪ್ಪಂದದ ಪರಿಣಾಮ ಶ್ರೀಲಂಕಾ ತನ್ನ ಕರೆನ್ಸಿಯ ಮೌಲ್ಯವನ್ನು ಶೇ.೧೫ ಕಡಿತಗೊಳಿಸ ಬೇಕಾಯಿತು. ಯುವಕರಿಗೆ ಉದ್ಯೋಗವಿಲ್ಲ. ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ದಿನನಿತ್ಯದ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ನಿತ್ಯ 10 ಘಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗುತ್ತಿದೆ. ರೈತರಿಗೆ ಬೇಕಿರುವ ರಸ ಗೊಬ್ಬರಗಳ ಆಮದಿನ ಮೇಲೆ ನಿಷೇಧ ಹೇರಲಾಗಿದೆ.

ತನ್ನ 60 ವರ್ಷಗಳ ಇತಿಹಾಸದಲ್ಲಿ ಶ್ರೀಲಂಕಾ ಹಿಂದೆಂದೂ ಕಂಡರಿಯದ ಆರ್ಥಿಕ ಹಿಂಜರಿತವನ್ನು ಕಂಡಿದೆ. ಪೆಟ್ರೋಲ್ ಬಂಕುಗಳಲ್ಲಿ ಜನ ಕಿಲೋಮೀಟರುಗಟ್ಟಲೆ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿನ ಪೆಟ್ರೋಲ್ ತೆಗೆದು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವಲ್ಲಿ ಶ್ರೀಲಂಕಾದ ಜನ ನಿರತರಾಗಿದ್ದಾರೆ. ಅಧ್ಯಕ್ಷ ರಾಜಪಕ್ಷೆಯ ಮನೆಯ ಮುಂದೆ ಜನರು ಧರಣಿ
ನಡೆಸುತ್ತಿzರೆ. ಇಲ್ಲಸಲ್ಲದ ಸವಲತ್ತುಗಳನ್ನು ನೀಡುವೆ ನೆಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಂತಹ ನಾಯಕ ದೇಶದ ಜನರನ್ನು ಅಕ್ಷರಶಃ ಬೀದಿಗಿಳಿಸಿದ್ದಾನೆ. ಕರೋನ ಸಂದರ್ಭದಲ್ಲಿ ಭಾರತದಲ್ಲಿ ಬೆಳವಣಿಗಳ ಬಗ್ಗೆ ಅಣಕು ಮಾಡಿ ಮೋದಿಯವರ ಆಡಳಿತ ಸರಿಯಿಲ್ಲ, ಜನರು ಬೀದಿಗೆ ಬರುತ್ತಾರೆಂದೆಲ್ಲ ಹೇಳುತ್ತಿದ್ದಂತಹ ಪ್ರತಿಪಕ್ಷಗಳು, ಶ್ರೀಲಂಕಾ ಅಧ್ಯಕ್ಷರ ನಡೆಯನ್ನೊಮ್ಮೆ ತಾಳೆ ಮಾಡಿ
ನೋಡಿಕೊಳ್ಳಲಿ.

ಬಲಶಾಲಿ ನಾಯಕನಿದ್ದರೆ ಇಡೀ ಜಗತ್ತನ್ನೇ ಗೆಲ್ಲಬಹುದೆಂಬುದನ್ನು ಮೋದಿ ತೋರಿಸಿ ಕೊಟ್ಟಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೋನ ಹೊಡೆತದಿಂದ ತನ್ನ ದೇಶವನ್ನು ಹೊರತರಲಾಗದೆ ಕುರ್ಚಿಯಿಂದ ಕೆಳಗಿಳಿಯುವ ಪ್ರಸಂಗ ಬಂದಿದೆ. ಇತ್ತ ಶ್ರೀಲಂಕಾದ
ಅಧ್ಯಕ್ಷನ ಕುರ್ಚಿಯೂ ಅಡುತ್ತಿದೆ. ಆಫ್ರಿಕಾದ ಜಿಂಬಾಬ್ವೆ ಇಂದಿಗೂ ಆರ್ಥಿಕ ಮುಗ್ಗಟ್ಟಿಂದ ಹೊರಬಂದಿಲ್ಲ. ದಕ್ಷಿಣ ಅಮೆರಿಕದ ವೆನೆಜುವೆಲಾ
ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ತೈಲ ನಿಕ್ಷೇಪವನ್ನು ಹೊಂದಿರುವ ದೇಶ. ಆದರೂ ಸಹ ಅಲ್ಲಿನ ಆರ್ಥಿಕತೆ ನೆಲಕಚ್ಚಿ, ಹಣದುಬ್ಬರ ದರ ಸಾವಿರ ಪಟ್ಟು ಹೆಚ್ಚಾಗಿದೆ. ರಸ್ತೆಗಳಲ್ಲಿ ಹಣವನ್ನು ತರಕಾರಿಯ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

ಅಲ್ಲಿನ ಹಣಕ್ಕೆ ಬೆಲೆಯೇ ಇಲ್ಲದಂತಾಗಿದೆ. ಶ್ರೀಲಂಕಾದ ಸದ್ಯದ ಪರಿಸ್ಥಿತಿ ಹೀಗೆ ಮುಂದುವರಿದರೆ ವೆನೆಜುವೆಲಾದ ಪರಿಸ್ಥಿತಿಯೇ ಅಲ್ಲಿಯೂ ನಿರ್ಮಾಣವಾಗುವುದರಲ್ಲಿ ಅನುಮಾನವಿಲ್ಲ. ವೆನೆಜುವೆಲಾ ಆಡಳಿತ ಕಮ್ಯುನಿಸ್ಟರ ಕಪಿಮುಷ್ಟಿಗೆ ಸಿಲುಕಿ ತನ್ನ ಅಸ್ತಿತ್ವ
ಕಳೆದುಕೊಂಡಿದೆ. ಚುನಾವಣಾ ಪ್ರಣಾಳಿಕೆಗಳಲ್ಲಿ ಅಲ್ಲಿನ ಜನರಿಗೆ ನೂರಾರು ಉಚಿತ ಯೋಜನೆಗಳ ಭರವಸೆಯನ್ನು ನೀಡಿದ ಕಮ್ಯುನಿಸ್ಟ್ ನಾಯಕರು ಅಧಿಕಾರಕ್ಕೆ ಬಂದ ನಂತರ ತಮ್ಮ ಭರವಸೆಗಳನ್ನು ಈಡೇರಿಸುವ ಭರದಲ್ಲಿ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸಿಬಿಟ್ಟರು. 35 ವರ್ಷಕ್ಕೆ ಅಲ್ಲಿನ ಯುವಕರು ನಿವೃತ್ತಿ ಹೊಂದಿ,ಸರ್ಕಾರ ನೀಡುವ ಉಚಿತ ಸವಲತ್ತುಗಳನ್ನು ಪಡೆದುಕೊಂಡು ಜೀವನ ನಡೆಸುತ್ತಿದ್ದರು.
ಉಚಿತ ಸವಲತ್ತುಗಳನ್ನು ನೀಡಿ ತನ್ನ ಖಾತೆಯಲ್ಲಿನ ಹಣವನ್ನು ಖಾಲಿ ಮಾಡಿಕೊಂಡು ಸಾಲದ ಮೊತ್ತವನ್ನು ಹೆಚ್ಚಿಸಿಕೊಂಡು ಕೊನೆಗೆ ಜನರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿ ತಮ್ಮ ದೇಶದ ಆರ್ಥಿಕ ಅಧಃಪತನಕ್ಕೆ ಕಾರಣರಾದರು.

ದೆಹಲಿಯಲ್ಲಿ ಅಽಕಾರ ಹಿಡಿದ ಆಮ್ ಆದ್ಮಿ ಪಕ್ಷವೂ ಇದೇ ದಾರಿಯಲ್ಲಿ ಸಾಗುತ್ತಿದೆ. ಆಪ್‌ಗೆ ಅಧಿಕಾರ ಸಿಕ್ಕಾಗ ದೆಹಲಿಯ ಖಜಾನೆ ಲಾಭದಲ್ಲಿತ್ತು. ಕರೋನ ಅಲೆ ಏಳುವ ಮುಂಚಿನ ವರ್ಷ ದೆಹಲಿ ಸರಕಾರದ ಖಜಾನೆ ಸುಮಾರು 5500 ಕೋಟಿಯ ಸಾಲದಲ್ಲಿತ್ತು. ಅಽಕಾರದ ಚುಕ್ಕಾಣಿ ಹಿಡಿಯಲು ಮಕ್ಕಳಿಗೆ, ಹೆಂಗಸರಿಗೆ, ವಯಸ್ಸಾದವರಿಗೆ, ವಿದ್ಯಾರ್ಥಿಗಳಿಗೆ ಉಚಿತ ಯೋಜನೆಗಳನ್ನು ನೀಡುವ
ಭರವಸೆ ನೀಡಿದ ಕೇಜ್ರಿವಾಲ್ ನೇತೃತ್ವದ ಸರಕಾರ ದೆಹಲಿಯ ಖಜಾನೆಯನ್ನು ಬರಿದು ಮಾಡಿದೆ. ಸಾಮಾನ್ಯವಾಗಿ ದೆಹಲಿಗೆ ವಲಸಿಗರು ಕೆಲಸ ಅರಿಸಿ ಬರುವುದರಿಂದ ತಮಗೆ ಉಚಿತ ಯೋಜನೆಗಳನ್ನು ನೀಡುವ ಕ್ಷಗಳಿಗೆ ಮತ ಹಾಕುತ್ತಾರೆ.

ದೆಹಲಿಯ ದಾರಿಯಲ್ಲಿಯೇ ಪಂಜಾಬಿನ ಜನರಿಗೆ ಉಚಿತ ಭರವಸೆಗಳ ಸುರಿಮಳೆಗೈದ ಅರವಿಂದ್ ಕೇಜ್ರಿವಾಲ, ಅಲ್ಲಿನ ತಿಜೋರಿ ಯನ್ನೂ ಖಾಲಿ ಮಾಡಿ ಪಂಜಾಬಿನ ಸಾಲದ ಮೊತ್ತವನ್ನು ಎರಡು ಪಟ್ಟು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ನೇರವಾಗಿ ಸರಕಾರದ ಉಚಿತ ಯೋಜನೆಯ ಹಣದ ಮೂಲಕ ಕೇಜ್ರಿವಾಲ್ ಮತ ಖರೀದಿ ಮಾಡುತ್ತಿದ್ದಾರೆ.

ಈಗಾಗಲೇ  ತಾನು ನೀಡಿರುವ ಭರವಸೆಯನ್ನು ಈಡೇರಿಸಲು ಪಂಜಾಬಿನ ಮುಖ್ಯಮಂತ್ರಿ ಭಗವಂತ್ ಮಾನ್, ನರೇಂದ್ರ ಮೋದಿಯವರ ಬಳಿ 50000 ಕೋಟಿಯ ನೆರವನ್ನು ಕೇಳಿಯಾಗಿದೆ. ಮೃದು ಕಮ್ಯುನಿಸ್ಟ್ ಸ್ವಭಾವದ ಕೇಜ್ರಿವಾಲ್ ಹಿಂದೂ ಧರ್ಮದ ಆಚರಣೆಗಳ ಬಗ್ಗೆ ಮಾತನಾಡಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಬದಲಾಗಿ ತನ್ನ ಅಧಿಕಾರದ ನೆರವಿನಿಂದ ಯಾರಿಗೂ ಗೊತ್ತಾಗದ ರೀತಿಯಲ್ಲಿ ತನ್ನ ಬೇಳೆ ಬೇಯಿಸಿ ಕೊಳ್ಳುತ್ತಿರುತ್ತಾರೆ. ಬಂಡವಾಳವಾಡವಿಲ್ಲದೆ ಸಮಾಜವಾದವಿಲ್ಲ, ಹಣವಿದ್ದರಷ್ಟೇ ಖರ್ಚು ಮಾಡಲು ಸಾಧ್ಯ. ಹಣವನ್ನು
ಸಂಪಾದಿಸುವ ಮೂಲವನ್ನು ಗಟ್ಟಿ ಮಾಡದ ಹೊರತು ಸಮಾಜವಾದದಡಿಯಲ್ಲಿ ಬಡವರಿಗೆ ಹಂಚಲು ಸಾಧ್ಯವಿಲ್ಲ.

ವೆನೆಜುವೆಲಾ, ಶ್ರೀಲಂಕಾ, ಜಿಂಬಾಬ್ವೆ ದೇಶಗಳು ಆರ್ಥಿಕ ಶಿಸ್ತು ಕಾಯ್ದುಕೊಳ್ಳದೆ ಕೇವಲ ಒಂದು ದಶಕದಲ್ಲಿ ತಮ್ಮ ಜನರು ಬೀದಿಗೆ ಬರುವಂತೆ ಮಾಡಿದರು. ಈ ದೇಶಗಳ ರಾಜಕೀಯ ನಾಯಕರ ದಾರಿಯನ್ನೇ ಹಿಡಿದು ದೆಹಲಿ ಹಾಗೂ ಪಂಜಾಬಿನಲ್ಲಿ ಅಧಿಕಾರ ಹಿಡಿದಿ ರುವ ಆಪ್, ಈ ದೇಶಗಳಿಗೆ ಬಂದಿರುವ ಪರಿಸ್ಥಿತಿಯನ್ನೇ ತನ್ನ ಆಡಳಿತದ ರಾಜ್ಯಗಳಿಗೆ ತಂದೊಡ್ಡುವಲ್ಲಿ ಯಾವುದೇ ಅನುಮಾನ ವಿಲ್ಲ. ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನೆರವಿಗೆ ಕೇಂದ್ರ ಸರಕಾರ ಬರುವುದರಿಂದ, ಆಪ್ ಮಾಡುವ ಆರ್ಥಿಕ ಹಾನಿಯನ್ನು ಸರಿದೂಗಿಸಲು ಪ್ರಧಾನಿಗಳ ಮೊರೆ ಹೋಗಲೇಬೇಕು.

ಕೇಂದ್ರದ ಮೊರೆ ಹೋಗುವಾಗ ರಾಜಕೀಯ ಬಣ್ಣ ಕಟ್ಟುವ ಕೇಜ್ರಿವಾಲ, ಸಾಮಾನ್ಯ ಜನರಿಗೆ ಆರ್ಥಿಕ ಶಿಸ್ತಿನ ಅರಿವಾಗುವುದಿಲ್ಲವೆಂಬ
ಆತ್ಮವಿಶ್ವಾಸದಲ್ಲಿzರೆ. ಶ್ರೀಲಂಕಾ ದೇಶ ಸಣ್ಣ ರಾಷ್ಟ್ರವಾಗಿರುವುದರಿಂದ ಅದರ ನೆರವಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಸ್ನೇಹಿತ ರಾಷ್ಟ್ರಗಳು ನೆರವಾಗಬೇಕಷ್ಟೆ. ಶ್ರೀಲಂಕಾ ಈ ಕಾರಣಕ್ಕಾಗಿ ಹೆಚ್ಚಿನ ಸುದ್ದಿಯಾಗುತ್ತಿದೆ. ವೆನೆಜುವೆಲಾ ಸಹ ಇದೇ ಕಾರಣಕ್ಕಾಗಿ ಸುದ್ದಿ ಯಾಗಿತ್ತು.

ದೆಹಲಿ ಹಾಗೂ ಪಂಜಾಬ್ ರಾಜ್ಯಗಳ ಆರ್ಥಿಕತೆ ಹದಗೆಟ್ಟಿದರೂ ಆಪ್ ಅಽಕಾರದಲ್ಲಿರುವಾಗ ಕೇಂದ್ರದ ಸಹಾಯ ಹಾಗೂ ಅಽಕಾರ ಕಳೆದುಕೊಂಡ ಮೇಲೆ ಸಾಲದ ಹೊರೆಯನ್ನು ನೂತನ ಪಕ್ಷ ಹೊರಬೇಕಾಗುತ್ತದೆ. 1991ರಲ್ಲಿ ಭಾರತದಲ್ಲಿ ಉಂಟಾದಂತಹ ಆರ್ಥಿಕ ಪರಿಸ್ಥಿಯನ್ನು ನಿಯಂತ್ರಿಸುವಲ್ಲಿ ಮನಮೋಹನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರೆಂದು ಕಾಂಗ್ರೆಸ್ ಹೇಳುತ್ತದೆ. ಆದರೆ ಅಂತಹ
ಪರಿಸ್ಥಿತಿಯನ್ನು ತಂದಿದ್ದು ತಾನೇ ಎಂದು ಎಲ್ಲಿಯೂ ಹೇಳುವುದಿಲ್ಲ. ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ದೆಹಲಿ ಹಾಗೂ ಪಂಜಾಬ ರಾಜ್ಯಗಳಿಗೆ ಎಚ್ಚರಿಕೆಯ ಘಂಟೆ.