Sunday, 15th December 2024

ಉಚಿತವಲ್ಲದ ನಡೆಯಿಂದ ಲಂಕಾ ಬಿಕ್ಕಟ್ಟು ಸೃಷ್ಟಿ

ವಿಶ್ಲೇಷಣೆ
ವಿಶ್ವನಾಥ್ ಶೇರಿಕಾರ್

ಚುನಾವಣೆ ಸಂದರ್ಭದ ‘ಉಚಿತ’ ಭರವಸೆ ಕೆಲ ರಾಜ್ಯಗಳ ರಾಜಕೀಯ ಪಕ್ಷಗಳಿಂದ ಮುಂದುವರಿದಿದ್ದು, ಕೆಲವೊಮ್ಮೆ ಸಾಮಾನ್ಯ ಬಜೆಟ್ ಅನ್ನೂ ಮೀರಿಸುವಂತಿರುವುದು ಆತಂಕದ ಸಂಗತಿ. ಇದು ನೇರವಾಗಿ ಭ್ರಷ್ಟಾಚಾರವಲ್ಲದಿದ್ದರೂ ಅಸಮಾನ ವೇದಿಕೆ ಸೃಷ್ಟಿಸುತ್ತದೆ ಎಂದು ಸ್ವತಃ ನಮ್ಮ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪಕ್ಕದ ದ್ವೀಪ ರಾಷ್ಟ್ರ ಶ್ರೀಲಂಕಾ ಊಹೆಗೂ ಮೀರಿದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗುತ್ತಿದೆ. ಒಂದು ಕಪ್ ಚಹಾ ಕುಡಿಯುವುದಕ್ಕೂ ಜನ ಭಾರೀ ಬೆಲೆ ತೆರಬೇಕಾದ ಅನಿವಾರ್ಯ ಅಲ್ಲೀಗ ತಲೆದೋರಿದೆ. ಹಣ, ಪಾನೀಯ ಹೀಗೆ ಇನ್ನಿತರೆ ವಸ್ತುಗಳು ಸಾಮಾನ್ಯ ಜನರ ಕೈಗೆಟುಕದಷ್ಟೂ ದುಬಾರಿಯಾಗಿವೆ.

ಕೇವಲ ಬ್ರೆಡ್, ಹಾಲನ್ನು ಪಡೆಯಲೂ ಜನ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಒಂದು ಕೆಜಿ ಅಕ್ಕಿಯ ಬೆಲೆ 500 ಶ್ರೀಲಂಕನ್ ರುಪಾಯಿ, 400 ಗ್ರಾಂ ಹಾಲಿನಪುಡಿಯ ದರ ಸುಮಾರು 790 ರುಪಾಯಿ, ಒಂದು ಕೆ.ಜಿ ಸಕ್ಕರೆಯ  ಬೆಲೆ ಸುಮಾರು 300 ರುಪಾಯಿಯಷ್ಟು ತುಟ್ಟಿಯಾಗಿದೆ. ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಸಂಗ್ರಹ ಖಾಲಿ ಯಾಗುತ್ತ ಸಾಗಿದ್ದು ಈಗ ಆಮದು ಸಾಮಾಗ್ರಿಗೆ ಪಾವತಿಸಲು ಅಥವಾ ಅದರ ಬಾಹ್ಯ ಸಾಲವನ್ನು ತೀರಿಸಲು ಹಣವಿಲ್ಲದಂತಾಗಿದೆ. ಸುಟ್ಟ ಗಾಯದ ಮೇಲೆ ಬರೆಯೆಂಬಂತೆ ಈ ರಾಷ್ಟ್ರ ಸುಮಾರು 700 ಕೋಟಿ ಡಾಲರ್‌ಗಿಂತ ಅಽಕ ಸಾಲವನ್ನು ತೀರಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಶ್ರೀಲಂಕೆಯ ರುಪಾಯಿ ಮೌಲ್ಯ ಕೇವಲ 8 ಪ್ರತಿಶತಕ್ಕೆ ಕುಸಿದಿದೆ.

ಕಳೆದ 18 ತಿಂಗಳಿನಿಂದ ಇಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಸರಿದೂಗಿಸಲು, ಜನರಿಗೆ ಹಣದ ಅಭಾವ ಉಂಟಾಗದಿರ ಲೆಂದು ಅಲ್ಲಿನ ಸೆಂಟ್ರಲ್ ರಿಸರ್ವ್ ಬ್ಯಾಂಕ್ ಏನೇನೋ ಪ್ರಯತ್ನಗಳನ್ನು ನಿರಂತರ ಮಾಡುತ್ತಿದೆ. ಸರಿ ಸುಮಾರು 800 ಡಾಲರ್‌ಗಳಷ್ಟು ಅಧಿಕ ಮೌಲ್ಯದ ಕರೆನ್ಸಿಯನ್ನು ಅಲ್ಲಿನ ಸೆಂಟ್ರಲ್ ಬ್ಯಾಂಕ್ ಛಾಪಿಸಿದರೂ ಕೂಡ ವಿಫಲವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಲ್ಲಿ ವಸ್ತುಗಳನ್ನ ಖರೀದಿಸುವ ಬೇಡಿಕೆ ಹೆಚ್ಚಾಗಿ ಪೂರೈಕೆಯ ಅಭಾವ ತಲೆ ದೋರಿದೆ. ಹೀಗಾಗಿ ಸಂಪೂರ್ಣ ದಿವಾಳಿಯತ್ತ ಶ್ರೀಲಂಕಾ ಈಗ ಸಾಗುತ್ತಿದೆ. ಇದು ಬಹಳ ಆತಂಕಕಾರಿ ವಿಷಯ.

ನಿಜಕ್ಕೂ ಶ್ರೀಲಂಕಾದಲ್ಲಿ ಆದದ್ದು ಏನು? ಬಜೆಟ್ ರೂಪಿಸುವಲ್ಲಿ ವಿತ್ತೀಯ ಶಿಸ್ತು ನಿರ್ಲಕ್ಷಿಸಿದ್ದು ಅಲ್ಲಿನ ಸರಕಾರ ಮಾಡಿದ ಮೊದಲ ತಪ್ಪು. ಇದರ ಜತೆಗೆ ರಾಜಪಕ್ಷೆ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ, ಚುನಾವಣಾ ಭರವಸೆಯಂತೆ ತೆರಿಗೆ ಕಡಿತ ಘೋಷಿಸಿತು. ಈ ಘೋಷಣೆ ಹೊರಬಿದ್ದ ಕೆಲ ಸಮಯದ ವಿಶ್ವದೆಡೆ ಕೊವಿಡ್ ಪಿಡುವ ಹರಡಿದ್ದರಿಂದ ಆರ್ಥಿಕ ಹಿಂಜರಿಕೆ ಕಾಣಿಸಿಕೊಂಡಿತು. ಪ್ರವಾಸೋದ್ಯಮವೇ ಶ್ರೀಲಂಕಾದ ಪ್ರಮುಖ ಆದಾಯ ಮೂಲ.

ಕರೋನಾದ ಎರಡು ಅಲೆಗಳು ಈ ಆದಾಯ ಮೂಲವನ್ನು ಬತ್ತಿಸಿತು. ವಿದೇಶಗಳಲ್ಲಿ ಇರುವ ಶ್ರೀಲಂಕಾದ ಜನರು ದುಡಿದು ಕಳಿಸುವ ಹಣ ಅಲ್ಲಿನ ಆರ್ಥಿಕತೆಯ ಮತ್ತೊಂದು ಆಧಾರ ಸ್ತಂಭ. ಈ ಆಧಾರವನ್ನೂ ಕರೋನಾ ಕಸಿದುಕೊಂಡಿತು. ಇತರ ದೇಶಗಳಲ್ಲಿದ್ದ ಹಲವರು ಕರೋನಾ ಡುಗಿನ ವೇಳೆ ಉದ್ಯೋಗ ಕಳೆದುಕೊಂಡರು. ಕ್ರೆಡಿಟ್ ರೇಟಿಂಗ್ ಕಂಪನಿಗಳು ವರ್ಷದಿಂದ ವರ್ಷಕ್ಕೆ ಲಂಕಾದ ರೇಟಿಂಗ್ ಕಡಿಮೆ ಮಾಡಿದ್ದರಿಂದ ಸರಕಾರ ಪಾವತಿಸ ಬೇಕಾದ ಬಡ್ಡಿ ಪ್ರಮಾಣ ಹೆಚ್ಚಾಯಿತು. ಅಷ್ಟೇ ಅಲ್ಲ, ಇತರ ದೇಶಗಳಿಂದ ಸಾಲವೂ ಸುಲಭವಾಗಿ ಹುಟ್ಟುತ್ತಿರಲಿಲ್ಲ.

ಗಾಯದ ಮೇಲೆ ಬರೆ ಎಳೆದಂತೆ 2021ರಲ್ಲಿ ಶ್ರೀಲಂಕಾ ಸರ್ಕಾರವು ರಾಸಾಯನಿಕ ಗೊಬ್ಬರ ಬಳಕೆಯನ್ನು ನಿಷೇಽಸಿತು. ಅಲ್ಲಿನ ಕೃಷಿ ಉತ್ಪನ್ನಗಳ ಉತ್ಪಾದನೆಯೂ ಏಕಾಏಕಿ ಕಡಿಮೆಯಾಗುವುದರಿಂದ ಆಹಾರ ಧಾನ್ಯಗಳ ಕೊರತೆ ಕಾಣಿಸಿಕೊಂಡಿತು. ಅದಾಗಲೇ ಹದಗೆಟ್ಟಿದ್ದ ಜನರ ಬದುಕು, ತುತ್ತು ಅನ್ನಕ್ಕೂ ಪರಿತಪಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಪಕ್ಕದ ರಾಷ್ಟ್ರ ದಿವಾಳಿಯಾಗಿ, ಸುಸ್ಥಿ ಸಾಲಗಾರ ಪಟ್ಟಿಯಲ್ಲಿ ಸೇರ್ಪಡೆಯಾಗುವತ್ತ ದಾಪುಗಾಲಿಟ್ಟಿದ್ದು, ಅಲ್ಲಿನ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿದೆ. ಊಹಿಸಲಾರದಷ್ಟೂ ಪತನದ ಹಾದಿಯಲ್ಲಿ ಸಾಗುತ್ತಿರುವ ಶ್ರೀಲಂಕೆಯನ್ನು ನೋಡಿದಾಗ ಭಾರತದ ಗತಿಯೇನು ಎಂಬ ಸಂಶಯ ಈಗ ಹಲವಡೆ ಕೇಳಿಬರುತ್ತಿದೆ.

ಲಂಕೆಯಂತೆ ಭಾರತದಲ್ಲೂ ಆರ್ಥಿಕ ಬಿಕ್ಕಟ್ಟು ತಲೆದೋರಿದರೆ ಆಗುವ ಅಪಾಯಗಳು ಎಂಥದ್ದು ಎಂಬ ಚರ್ಚೆಗಳು ಈಗ ದೇಶಾದ್ಯಂತ ನಡೆಯುತ್ತಿವೆ. ಇದಕ್ಕೆ ಪೂರಕವೆಂಬಂತೆ ಕೆಲ ದಿನಗಳ ಹಿಂದೆಯಷ್ಟೇ ಹಲವು ಉನ್ನತ ಅಽಕಾರಿಗಳು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಲ್ಲದೆ ಮಹತ್ವದ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರದಿದ್ದರೆ ಲಂಕೆಯಂತೆ ನಮ್ಮಲ್ಲೂ ಅದೇ ಸಮಸ್ಯೆ ಕಾಡುವುದರಲ್ಲಿ ಸಂಶಯವೇ ಇಲ್ಲ ಎಂಬ ಬಾಂಬ್ ಸಿಡಿಸಿದ್ದಾರೆ.

ಶ್ರೀಲಂಕೆಯಂತೆ ಭಾರತಕ್ಕೂ ಆರ್ಥಿಕ ಸಂಕಷ್ಟ ಎದುರಾಗಬಹುದು ಎಂದು ಹೇಳುವುದಕ್ಕೆ ಕಾರಣ ನಮ್ಮಲ್ಲಿನ ರಾಜಕೀಯ ಪಕ್ಷಗಳು ಜನತೆಗೆ ನೀಡು ತ್ತಿರುವ ಉಚಿತ ಯೋಜನೆಗಳು. ಹೌದು! ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳು ನೀಡುವ ಉಚಿತ ಭರವಸೆಯ ಯೋಜನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಧಿಕಾರಿಗಳು, ಈ ಪ್ರವೃತ್ತಿ ಹೀಗೇ ಮುಂದುವರಿದರೆ, ಶ್ರೀಲಂಕೆಯಂತೆ ನಮ್ಮಲ್ಲಿನ ಹಲವು ರಾಜ್ಯಗಳು ಕೂಡ ಆರ್ಥಿಕ ಸಮಸ್ಯೆಯನ್ನು ತಂದೊಡ್ಡುಕೊಳ್ಳುತ್ತವೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಪಂಜಾಬ, ದೆಹಲಿ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಪಶ್ಚಿಮ ಬಂಗಾಳದಂತಹ ರಾಜ್ಯ ಸರಕಾರಗಳು ಈಗಾಗಲೇ ಹಲವು ಉಚಿತ ಸೌಲಭ್ಯಗಳ ಆಫರ್ ನೀಡಿವೆ. ಆದರೆ ಈ ಸಮಯದಲ್ಲಿ ಅವರು ಮಾಡಿರುವ ಘೋಷಣೆಗಳು ಸಮರ್ಥನೀಯವಲ್ಲ. ಅದರಲ್ಲೂ ಅವರು ನೀಡಿರುವ ಉಚಿತ ವಿದ್ಯುತ್ ಯೋಜನೆಯು ಆರ್ಥಿಕವಾಗಿ ದಿವಾಳಿಯನ್ನು ತಂದೊಡ್ಡಬಲ್ಲದಾಗಿದೆ. ಇದರಿಂದ ಆರೋಗ್ಯ ಮತ್ತು ಶಿಕ್ಷಣದಂತಹ ನಿರ್ಣಾಯಕ ಕ್ಷೇತ್ರಗಳಿಗೆ ಹೆಚ್ಚಿನ ಹಣಕಾಸನ್ನು ಒದಗಿಸದಿರುವ ಆಪತ್ತನ್ನು ತಂದೊಡ್ಡುತ್ತವೆ ಎಂದು ಕಳವಳ ವ್ಯಕ್ತಪಡಿಸಿzರೆ.

ಇತ್ತೀಚಿನ ದಿನಗಳಲ್ಲೂ ಚುನಾವಣೆ ಸಂದರ್ಭದಲ್ಲಿ ಉಚಿತ ಕೊಡುಗೆಗಳ ಭರವಸೆ ಪುಂಕಾನುಪುಂಕವಾಗಿ ಕೆಲ ರಾಜ್ಯಗಳ ರಾಜಕೀಯ ಪಕ್ಷಗಳಿಂದ ಮುಂದುವರಿದಿದ್ದು, ಕೆಲವೊಮ್ಮೆ ಸಾಮಾನ್ಯ ಬಜೆಟ್ ಅನ್ನೂ ಮೀರಿಸುವಂತಿರುವುದು ಆತಂಕದ ಸಂಗತಿ. ಇದು ನೇರವಾಗಿ ಭ್ರಷ್ಟಾಚಾರವಲ್ಲದಿದ್ದರೂ ಅಸಮಾನ ವೇದಿಕೆ ಸೃಷ್ಟಿಸುತ್ತದೆ ಎಂದು ಸ್ವತಃ ನಮ್ಮ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇಂಥ ಉಚಿತ ಕೊಡುಗೆಗಳಿಂದ ಪ್ರತಿ ವ್ಯಕ್ತಿ ತಲಾ 3 ಲಕ್ಷ ರು. ಸಾಲದ ಹೊರೆ ಹೊತ್ತಿರುವ ರಾಜ್ಯಗಳೂ ನ್ಮಲ್ಲಿವೆ. ಆದರೂ ಈಗಲೂ ಪುಕ್ಕಟೆ ಕೊಡುಗೆಗಳನ್ನು ನೀಡಲಾಗುತ್ತಿದೆ.

ಚುನಾವಣಾ ಆಯೋಗ ಹಲ್ಲುಗಳಿಲ್ಲದ ಕಾನೂನು ರೂಪಿಸಿದೆ. ಪ್ರತೀ ಪಕ್ಷವೂ ಇದನ್ನು ಮಾಡುತ್ತಿದ್ದು, ಕಳೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್‌ನಲ್ಲೂ ಆಪ್ ಇಂಥ ಭರವಸೆಗಳನ್ನು ನೀಡಿದೆ. ದೆಹಲಿಯಲ್ಲೂ ಆಪ್ ಇದನ್ನೇ ಮಾಡಿದೆ. ಕೇಜ್ರಿವಾಲ್ ನೇತೃತ್ವದ ಆಪ್‌ಗೆ ಅಧಿಕಾರ ಸಿಕ್ಕಾಗ
ದೆಹಲಿಯ ಖಜಾನೆ ಲಾಭದಲ್ಲಿತ್ತು. ಆದರೆ ಕರೋನ ಅಲೆ ಏಳುವ ಮುಂಚಿನ ವರ್ಷ ದೆಹಲಿ ಸರಕಾರದ ಖಜಾನೆ ಸುಮಾರು 5500 ಕೋಟಿಯ ಸಾಲಕ್ಕೆ ತುತ್ತಾಗಿತ್ತು. ಅಧಿಕಾರದ ಚುಕ್ಕಾಣಿ ಹಿಡಿಯಲು ಮಕ್ಕಳಿಗೆ, ಹೆಂಗಸರಿಗೆ, ವಯಸ್ಸಾದವರಿಗೆ, ವಿದ್ಯಾರ್ಥಿಗಳಿಗೆ ಉಚಿತ ಯೋಜನೆಗಳನ್ನು ನೀಡುವ ಭರವಸೆ ನೀಡಿದ ಕೇಜ್ರಿವಾಲ್ ನೇತೃತ್ವದ ಸರಕಾರ ದೆಹಲಿಯ ಖಜಾನೆಯನ್ನು ಬರಿದು ಮಾಡಿದೆ.

ಸಾಮಾನ್ಯವಾಗಿ ದೆಹಲಿಯಲ್ಲಿರುವ ಹೆಚ್ಚಿನವರೆಲ್ಲ ವಲಸಿಗರು. ಹೀಗಾಗಿ ಉಚಿತ ಯೋಜನೆಗಳನ್ನು ನೀಡುವ ಪಕ್ಷಗಳಿಗೆ ಮತ ಹಾಕಿದ್ದರಿಂದಲೇ ಆಪ್ ಅಧಿಕಾರಕ್ಕೇರಿದೆ. ದೆಹಲಿಯ ದಾರಿಯಲ್ಲಿಯೇ ಪಂಜಾಬಿನ ಜನರಿಗೆ ಉಚಿತ ಭರವಸೆಗಳ ಸುರಿಮಳೆಗೈದ ಅರವಿಂದ್ ಕೇಜ್ರಿವಾಲ, ಅಲ್ಲಿನ ತಿಜೋರಿ ಯನ್ನೂ ಖಾಲಿ ಮಾಡಿ ಪಂಜಾಬಿನ ಸಾಲದ ಮೊತ್ತವನ್ನು ಹೆಚ್ಚಿಸುವ ಆತಂಕ ಎದುರಾಗಿದೆ. 1991 ಭಾರತ ಎದುರಿಸಿದ್ದ ಆರ್ಥಿಕ ಬಿಕ್ಕಟ್ಟನ್ನು ಈ ಸನ್ನಿವೇಶದಲ್ಲಿ ನೆಪಿಸಿಕೊಳ್ಳಲೇಬೇಕು. ಆಗ ಭಾರತದಲ್ಲಿನ ವಿದೇಶಿ ವಿನಿಮಯ ಸಂಗ್ರಹ ಖಾಲಿಯಾಗತೊಡಗಿತ್ತು.

ಆಗಿನ ಪರಿಸ್ಥತಿಯಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹ 1 ಅರಬ್ ಡಾಲರ್‌ಗಿಂತ ಕಡಿಮೆ ಮಟ್ಟಕ್ಕೆ ಕುಸಿದಿತ್ತು. ಪರಿಸ್ಥಿತಿ ಅದೆಷ್ಟು ಹದೆಗೆಟ್ಟಿತ್ತು ಅಂದರೆ ನಮ್ಮ ದೇಶ ಇತರೆ ರಾಷ್ಟ್ರಗಳೊಂದಿಗಿನ ವಿದೇಶಿ ವಿನಿಮಯ ಒಪ್ಪಂದ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗಿರಲಿಲ್ಲ. ದೇಶದೊಳಗಿನ ವಿದೇಶಿ ವಿನಿಮಯ ಸಂಗ್ರಹದ ಹಣದ ಖರ್ಚುವೆಚ್ಚ 72 ಅರಬ್ ಡಾಲರ್‌ನಷ್ಟು ತಲುಪಿತ್ತು. ಬ್ರೆಜಿಲ್ ಹಾಗೂ ಮೆಕ್ಸೊಕೋ ನಂತರ ಭಾರತ ಆಗ ವಿಶ್ವದಲ್ಲಿ ಅತೀ ಹೆಚ್ಚು ಸಾಲಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.

ದೇಶದ ಅರ್ಥವ್ಯವಸ್ಥೆ ಹಾಗೂ ಸರಕಾರದ ಪರ ಜನರಿಗೆ ಭರವಸೆಯೇ ಕಮರಿ ಹೋಗಿತ್ತು. ಎಲ್ಲ ಅಗತ್ಯ ವಸ್ತುಗಳ ಬೆಲೆ ಆಕಾಶಕ್ಕೇರಿತ್ತು. ಈ ಸಮಯ ದಲ್ಲಿ ದೇಶದೊಳಗಿನ ಎಲ್ಲ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತಕ್ಕೆ ಸಾಲ ತೀರಿಸುವುದಕ್ಕೆ ಸಾಧ್ಯವೇ ಇಲ್ಲವೆಂಬಂತೆ ಮನಃ ಸ್ಥಿತಿಯುಂಟಾಗಿ ಒಬ್ಬರೊಬ್ಬರಾಗಿ ಇಲ್ಲಿಂದ ಕಾಲ್ಕಿತ್ತಿದ್ದರು. ತೈಲದ ಬೆಲೆ ಗಗನಕ್ಕೇರಿತ್ತು. ಸರಕಾರದ ಖರ್ಚುಗಳನ್ನು ಕಡಿತಗೊಳಿಸಬೇಕಾಯಿತು. ಬ್ಯಾಂಕ್‌ಗಳು ಸಾಲದ ಬಡ್ಡಿದರಗಳನ್ನು ಏರಿಸಿದ್ದವು. ಅಂತಾರಾಷ್ಟ್ರೀಯ ಅರ್ಥವ್ಯವಸ್ಥೆ ಪ್ರಾಧಿಕಾರ(ಐಎಂಎಫ್) ನಮ್ಮ ದೇಶಕ್ಕೆ ಸುಮಾರು 1.27 ಅರಬ್ ಡಾಲರ್‌ನಷ್ಟು ಸಾಲವನ್ನು ನೀಡಿತ್ತು. ಆದರೆ ಇದರಿಂದ ದೇಶದೊಳಗಿನ ಅರ್ಥವ್ಯವಸ್ಥೆ ಸುಧಾರಣೆಯಂತೂ ಆಗಿರಲಿಲ್ಲ.

ಪರಿಸ್ಥಿತಿಯನ್ನು ಹತೋಟಿಗೆ ತರುವ ಉದ್ದೇಶದಿಂದ ಆಗಿನ ಪ್ರಧಾನಿ ಚಂದ್ರಶೇಖರ್ ಅವರ ಸರ್ಕಾರ ಸುಮಾರು 20 ಟನ್ ಚಿನ್ನವನ್ನು ಗಿರವಿಯಿಟ್ಟಿತ್ತು. ಆದರೆ ಇವರ ನಂತರ ಬಂದ ಮುಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಸರಕಾರವೂ ಭಾರತದೊಳಗಿನ ಪರಿಸ್ಥಿತಿಯನ್ನು ಸರಿದೂಗಿಸಲು ಸಾಧ್ಯ ವಾಗುವುದಿಲ್ಲ ಹಾಗೂ ಭಾರತ ಸುಸ್ಥಿ ಸಾಲಗಾರ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ತನ್ನ ವಿತ್ತ ಮಂತ್ರಿ ಮನಮೋಹನ್ ಸಿಂಗ್ ಅವರ ಜತೆಗೂಡಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅದೆಷ್ಟೋ ಸುಧಾರಣೆಗಳಿಗೆ ಒತ್ತು ನೀಡಿದರು. ಇದರಿಂದಾಗಿ ಭಾರತದ ಅರ್ಥವ್ಯವಸ್ಥೆ ಕಂಡು ಕೇಳರಿಯದಂತೆ ಬದಲಾಗುತ್ತ ಸಾಗಿತ್ತು. ಇದನ್ನು ಕಂಡು ವಿಶ್ವವೇ ಬೆಕ್ಕಸ ಬೆರಾಗಾಗಿತ್ತು.

ಈಗ ನಾವು ಆರ್ಥಿಕವಾಗಿ ಸಬಲರಾಗಿದ್ದೇವೆ. ಆದರೆ ಆಗಲೇ ತಿಳಿಸಿದ ಹಾಗೆ ಎಚ್ಚರ ತಪ್ಪಿದ್ದಲ್ಲಿ ಮತ್ತದೇ ಕರಾಳ ಇತಿಹಾಸ ಮರುಕಳಿಸುವ ಸಂಭವ ವಿದ್ದು, ಇದನ್ನು ತಡೆಹಿಡಿಯಲು ಎಲ್ಲ ಪಕ್ಷಗಳೂ ಶ್ರಮವಹಿಸಬೇಕಾಗಿವೆ.