ರಾಮರಥ(ಭಾಗ -೨)
ಯಗಟಿ ರಘು ನಾಡಿಗ್
‘ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಯಾವಾಗ ಉದ್ಘಾಟನೆಯಾಗುವುದೋ, ದಿವ್ಯಪುರುಷನ ಭವ್ಯರೂಪವನ್ನು ಯಾವಾಗ ಕಣ್ತುಂಬಿಕೊಳ್ಳುತ್ತೇವೋ’ ಎಂದು ಭಕ್ತಹೃದಯಗಳು ತವಕಿಸುತ್ತಿವೆ. ತ್ರೇತಾಯುಗದಲ್ಲಿ ಶ್ರೀರಾಮನ ಅವತಾರವಾಗುವುದಕ್ಕೂ ಮುಂಚೆ ಹತ್ತು ಹಲವು ಹೃದಯಗಳು ಹೀಗೆಯೇ ಹಂಬಲಿಸುತ್ತಿದ್ದವು. ಭರತಭೂಮಿಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅವತಾರವಾಗುವುದಕ್ಕೆ ಸಾಕಷ್ಟು ನಿಮಿತ್ತಗಳಿದ್ದವು.
‘ನೀನು ಕಲ್ಲಾಗಿ ಬಿದ್ದಿರು’ ಎಂದು ಋಷಿ ಗೌತಮರಿಂದ ಶಾಪಕ್ಕೊಳಗಾದ ಅಹಲ್ಯೆಯು ‘ರಾಮದರ್ಶನ-ಪಾದ ಸ್ಪರ್ಶನ’ದಿಂದ ಮಾತ್ರವೇ ಶಾಪ ವಿಮೋಚಿತಳಾಗಬೇಕಾದ ಅನಿವಾರ್ಯವಿತ್ತು. ಮತ್ತೊಂದೆಡೆ, ಮೋಕ್ಷಕ್ಕಾಗಿ ಹಂಬಲಿಸುತ್ತಿದ್ದ ಶಬರಿ ರಾಮನ ಬರುವಿಕೆಗಾಗಿ ಇನ್ನಿಲ್ಲದಂತೆ ಕಾಯು ತ್ತಿದ್ದಳು. ಹೇಳುತ್ತ ಹೋದರೆ ಇಂಥ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ವೈಕುಂಠದಲ್ಲಿ ಮಹಾವಿಷ್ಣುವಿನ ನಿಲಯದ ದ್ವಾರಪಾಲಕರಾಗಿದ್ದ ಜಯ-ವಿಜಯರು ಬ್ರಹ್ಮನ ಮಾನಸ ಪುತ್ರರಿಂದ ಶಾಪಗ್ರಸ್ತರಾಗಿ ಭೂಮಿಯಲ್ಲಿ ಜನಿಸಬೇಕಾಗಿ ಬಂದಾಗ, ಅನ್ಯಮಾರ್ಗ ಕಾಣದೆ ವಿಷ್ಣುವಿನ ಕಾಲುಹಿಡಿಯು ತ್ತಾರೆ. ಆಗ ವಿಷ್ಣು, ‘ಶಾಪದ ತಾಪದಿಂದ ನೀವು ತಪ್ಪಿಸಿ ಕೊಳ್ಳುವಂತೆಯೇ ಇಲ್ಲ; ಹೇಳಿ, ಭೂಮಿಯಲ್ಲಿ ನನ್ನ ಮಿತ್ರರಾಗಿ ಆರು ಜನ್ಮವೆತ್ತಿ ಅದು ಮುಗಿದ ತರುವಾಯ ನನ್ನ ಸನ್ನಿಧಿಗೆ ಮರಳುತ್ತೀರೋ ಅಥವಾ ನನ್ನ ಶತ್ರುಗಳಾಗಿ ಮೂರು ಜನ್ಮವೆತ್ತಿ ನನ್ನ ಮೂರು ಅವತಾರಗಳಿಂದಲೇ ಹತರಾಗಿ ವೈಕುಂಠಕ್ಕೆ ಮರಳುತ್ತೀರೋ?’ ಎಂಬ ಆಯ್ಕೆ ನೀಡುತ್ತಾನೆ.
ಆಗ ಜಯ-ವಿಜಯರು, ‘ನಿನ್ನನ್ನು ಬಹುಕಾಲ ಬಿಟ್ಟಿರಲಾರೆವು ಪ್ರಭು. ಆರು ಜನ್ಮ ದೀರ್ಘವಾಯಿತು; ನಿನ್ನ ಶತ್ರುಗಳಾಗಿ ಹುಟ್ಟಿದರೂ ಪರವಾಗಿಲ್ಲ, ಮೂರು ಜನ್ಮ ಮುಗಿಸಿ ನಿನ್ನ ಪಾದಸೇವೆಗೆ ಬಂದು ಬಿಡುತ್ತೇವೆ’ ಎನ್ನುತ್ತಾರೆ. ಹೀಗೆ ಶತ್ರುಗಳಾಗಿ ರಾಕ್ಷಸ ಕುಲದಲ್ಲಿ ಹುಟ್ಟಿದವರೇ ರಾವಣ-ಕುಂಭಕರ್ಣರು. ಇವರ ಸಂಹಾರಕ್ಕಾಗಿಯೇ ಅವತರಿಸಿದವನು ಶ್ರೀರಾಮ. ಅಯೋಧ್ಯೆ ಸಾಮ್ರಾಜ್ಯದ ಮೇಲೆರಗಿದ ರಾವಣನು ‘ಅನರಣ್ಯ’ ಎಂಬ ಅಲ್ಲಿನ ಅಧಿಪತಿ
ಯನ್ನು ಸಾಯಿಸಿದನಂತೆ. ಅನರಣ್ಯ ಉಸಿರು ನಿಲ್ಲಿಸುವುದಕ್ಕೂ ಮುನ್ನ, ‘ಬಾಹು ಬಲದಲ್ಲಿ ನಿನಗೆ ಸರಿಸಾಟಿಯಿಲ್ಲದ ಕಾರಣಕ್ಕೆ ನಾನು ಕೈಚೆಲ್ಲಿ ಮರಣವನ್ನು ಅಪ್ಪಬೇಕಾಗಿದೆ; ಆದರೆ ಮುಂದೆ ನನ್ನ ವಂಶದಲ್ಲಿ ಜನಿಸುವ ರಾಮನಿಂದಲೇ ನಿನಗೆ ಸಾವು ಕಟ್ಟಿಟ್ಟಬುತ್ತಿ, ಮರೆಯಬೇಡ’ ಎಂದು ಶಾಪವಿತ್ತನಂತೆ! ಇತ್ತ, ಕಿಷಿಂದೆಯಲ್ಲಿ ವಾಲಿ ಮತ್ತು ಸುಗ್ರೀವ ಎಂಬ ಕಪಿರಾಜರ ಸಂಘರ್ಷ ಮುಗಿಲುಮುಟ್ಟಿತ್ತು.
ಅಣ್ಣ ವಾಲಿಯಿಂದ ಹಲವು ನೆಲೆಯಲ್ಲಿ ಅನ್ಯಾಯಕ್ಕೊಳ ಗಾಗಿದ್ದ ಸುಗ್ರೀವ, ದುರ್ಜನರನ್ನು ಶಿಕ್ಷಿಸಿ ಸಜ್ಜನರನ್ನು ರಕ್ಷಿಸಲೆಂದೇ ಟೊಂಕ ಕಟ್ಟುವ ಬಾಹು ಬಲಿಗಾಗಿ, ಧರ್ಮರಕ್ಷಕನಿಗಾಗಿ ಕಾಯುತ್ತಿದ್ದ. ಇವರೆಲ್ಲರ ಹಂಬಲವನ್ನು ನೆರವೇರಿಸಲು ಆಗಿಯೇಹೋಯಿತು ರಾಮಾವತಾರ… ‘ನೀವು ಹೇಳೋ ಹಾಗೆ, ಒಂದೊಮ್ಮೆ ರಾಮ ದೇವರೇ ಆಗಿದ್ದಿದ್ರೆ, ಕೈಕೇಯಿ-ಮಂಥರೆಯರ ಸಂಚಿಗೆ ಬಲಿಯಾಗಿ ಪಟ್ಟಾಭಿಷೇಕದಿಂದ ವಂಚಿತನಾಗಿದ್ದನ್ನು, ತಾನು ಸಾಕ್ಷಿಯಾದ
ವನವಾಸ, ಸೀತಾಪಹರಣ, ರಾವಣ ಸಂಹಾರದ ನಂತರ ಅಯೋಧ್ಯೆಗೆ ಮರಳಿದ ಮೇಲೂ ಒದಗಿದ ಸೀತಾವಿಯೋಗ ಇವೆಲ್ಲವನ್ನೂ ತಪ್ಪಿಸಬಹುದಾಗಿತ್ತಲ್ಲವಾ?’ ಎಂದು ಕೊಂಕು ನುಡಿದು ವಿತಂಡವಾದ ಮಾಡುವವರಿದ್ದಾರೆ.
ಆದರೆ ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು: ಶ್ರೀರಾಮ ಸಾಕ್ಷಾತ್ ಭಗವಂತ ಎಂಬುದು ಆವನಿಗಾಗಿ ಹಂಬಲಿಸುತ್ತಿದ್ದ ಹೃದಯಗಳಿಗೆ ಗೊತ್ತಿತ್ತು; ಆದರೆ ಸ್ವಯಂದೇವರಾದರೂ ಭೂಸ್ಪರ್ಶವಾಗುತ್ತಿದ್ದಂತೆ ಮನುಷ್ಯ-ಸಹಜ ಆಯಾಮಗಳಿಗೆ ಒಡ್ಡಿಕೊಂಡವನು ಶ್ರೀರಾಮ. ಹೀಗಾಗಿ ಹುಲುಮಾನವರಿಗೆ
ಒದಗುವ ವೈವಿಧ್ಯಮಯ ಸಂಕಷ್ಟಗಳಿಗೆ ತಾನೂ ಈಡಾಗಿ, ಅದರ ಕುಲುಮೆಯ ಬೆಂಕಿಯಲ್ಲಿ ಬೆಂದು ಪುಟಕ್ಕಿಟ್ಟ ಚಿನ್ನ ವಾದ. ಸೀತಾವಿಯೋಗದ ವೇಳೆ ‘ವೈದೇಹಿ ಏನಾದಳು..? ಮಲ್ಲಿಗೆ ಜಾಜಿ ಸಂಪಿಗೆಯ ಹೂಗಳೇ, ಕೋಗಿಲೆಯೇ ಧರಣಿಜಾತೆಯ ಕಾಣಿರಾ?’ ಎಂದು ಪ್ರಲಾಪಿಸಿ ಕಣ್ಣೀರಾದ.
ಬಾಳಹಾದಿಯಲ್ಲಿ ಕಲ್ಲು-ಮುಳ್ಳುಗಳೇ ತುಂಬಿದ್ದರೂ ತನ್ನ ಆದರ್ಶಗಳಿಗೆ ಮತ್ತು ಚಾರಿತ್ರ್ಯಕ್ಕೆ ಕರಿಛಾಯೆ ಮುಸುಕದಂತೆ ನೋಡಿಕೊಂಡ ಽಮಂತ ಈ ಶ್ರೀರಾಮ. ಯಾವುದೋ ದುರ್ಬಲ ಕ್ಷಣದಲ್ಲಿ ರಾಣಿ ಕೈಕೇಯಿಗೆ ಕೊಟ್ಟ ವಚನದ ಈಡೇರಿಕೆಗೆಂದು, ರಾಮನಿಗೆ ಜನ್ಮಸಿದ್ಧವಾಗಿ ದಕ್ಕಬೇಕಿದ್ದ ಸಿಂಹಾಸನದ ಹಕ್ಕಿನಿಂದಲೂ ವಂಚಿಸಿದ್ದಕ್ಕೆ ಮತ್ತು ಅದರ ಮುಂದುವರಿದ ಭಾಗವಾಗಿ ಅವನನ್ನು ವನವಾಸಕ್ಕೆ ಕಳಿಸಬೇಕಾಗಿ ಬಂದಿದ್ದಕ್ಕೆ ಇನ್ನಿಲ್ಲದಂತೆ ಕೊರಗುವ ತಂದೆ ದಶರಥನಿಗೆ ತಾನು ಮಾಡಿದ್ದು ತಪ್ಪು ಎಂಬುದು ಗೊತ್ತಿರುತ್ತದೆ; ಆದರೆ ಅದನ್ನು ಹೇಳಿಕೊಳ್ಳಲಾಗದ ಅಸಹಾಯಕನಾಗಿರುತ್ತಾನೆ ಆತ. ಆದರೂ ರಾಮನನ್ನು ಏಕಾಂತದಲ್ಲಿ ಸಂಧಿಸುವ ದಶ ರಥ, ‘ರಾಮಾ, ಕೇವಲ ಒಂದು ಹೆಣ್ಣಿಗಾಗಿ ಅಯೋಧ್ಯೆಯ ಹಿತವನ್ನೇ ಬಲಿಕೊಟ್ಟವನು ನಾನು; ನೀನೇ ನನ್ನನ್ನು ಹೆಡೆ ಮುರಿ ಕಟ್ಟಿ ಸೆರೆವಾಸಕ್ಕೆ ತಳ್ಳಿಬಿಡು.
ನಂತರ ನೀನೇ ಸಾಮ್ರಾಟ ನಾಗು, ವನವಾಸಕ್ಕೆ ಮಾತ್ರ ತೆರಳಬೇಡ’ ಎಂದು ಅಂಗಲಾ ಚಿದ. ಆದರೆ, ರಾಮನ ಸಂಕಲ್ಪದ ಗೋಡೆ ಒಂದಿನಿತೂ ಕದಲ ಲಿಲ್ಲ. ಪಿತೃವಾಕ್ಯ ಪರಿಪಾಲನೆಗೆ ಆತ ಕಟಿಬದ್ಧನಾಗಿದ್ದ. ಅವನನ್ನು ಕಟ್ಟಿಹಾಕುವ ಯತ್ನದಲ್ಲಿ ವಿ-ಲನಾದ ದಶರಥ ಕೊನೆಗೆ ಗದ್ಗದಿತನಾಗಿ, ‘ಮಗು ರಾಮಾ, ನಿನ್ನನ್ನಗಲಿ ಅರೆಕ್ಷಣವೂ ಬದುಕಿರಲಾರೆ; ಆದರೆ ನೀನು ವಚನಬದ್ಧ ಎಂಬುದನ್ನು ಬಲ್ಲೆ; ಕಡೇಪಕ್ಷ ಇದೊಂದು ಹೊತ್ತು ನನ್ನೊಂದಿ ಗಿದ್ದು ತುತ್ತು ಊಟವನ್ನಾದರೂ ಮಾಡಿಕೊಂಡು ಹೋಗು ಕಂದಾ’ ಎನ್ನುತ್ತಾನೆ.
ಆಗ ರಾಮ, ‘ಎಲ್ಲಾದರೂ ಉಂಟೇ ಪಿತಾಶ್ರೀ? ವನವಾಸಕ್ಕೆ ತೆರಳುವ ಕ್ಷಣ ನಿಗದಿಯಾಗಿದೆ, ವನವಾಸಕ್ಕೆ ನನ್ನ ಮನವೂ ಸಜ್ಜಾಗಿದೆ. ಒಂದೊಮ್ಮೆ ಈ ಗಳಿಗೆ ಯನ್ನು ಮೀರಿ ಅರೆಕ್ಷಣ ನಿಂತರೂ, ನನ್ನ ಬುದ್ಧಿ ಬದಲಾಗಿ ಬಿಡಬಹುದು. ಏಕೆಂದರೆ ಮನುಷ್ಯನ ಮನಸ್ಸು ಚಂಚಲ. ಈಗಿದ್ದ ದೃಢಮನಸ್ಸು, ನಿಮ್ಮೊಂದಿಗೆ ಊಟ ಮಾಡುತ್ತಿದ್ದಂತೆ ಬದಲಾಗಿಬಿಡಬಹುದು. ಹೀಗಾಗಿ ನಾನು ತೆರಳಲೇಬೇಕು’ ಎಂದು ಖಾಲಿಹೊಟ್ಟೆಯಲ್ಲೇ ಹೆಜ್ಜೆಹಾಕುತ್ತಾನೆ ರಾಮ.
ಆತನ ಧರ್ಮನಿಷ್ಠುರತೆ ಮತ್ತು ಕೊಟ್ಟ ಮಾತಿನಿಂದ ಹಿಂದೆಯ ಬಾರದು ಎಂಬ ಮನೋ ಧರ್ಮ ಇಲ್ಲಿ ಕೆನೆಗಟ್ಟಿವೆ. ವಚನಬದ್ಧತೆಯ ಮಾತು ಬಂದಾಗ, ರಾಜ ಧರ್ಮದ ಪಾಲನೆಯಲ್ಲಿ ಅದು ಅನಿವಾರ್ಯ ಅಧ್ಯಾಯವೇ ಆದಾಗ, ವ್ಯಕ್ತಿಗತ ಹಿತಾಸಕ್ತಿಗಳು ಮತ್ತು ಕೌಟುಂಬಿಕ ಬಾಂಧವ್ಯಗಳು ಗೌಣವಾಗಿ,
ಸಮಷ್ಟಿಯ ಹಿತವೇ ಪ್ರಧಾನವಾಗುತ್ತವೆ ಎಂಬು ದನ್ನು ಹೀಗೆ ಪ್ರತ್ಯಕ್ಷವಾಗಿ ತೋರಿಸಿಕೊಟ್ಟವನು ರಾಮ.
ವಾಲ್ಮೀಕಿಗಳ ಬಣ್ಣನೆಯ ಪ್ರಕಾರ ರಾಮ ‘ಧರ್ಮದ ಮೂರ್ತರೂಪ’. ರಾಜ, ಪ್ರಜೆ, ಮಗ, ಸ್ನೇಹಿತ, ಪತಿ, ಸೋದರ ಹೀಗೆ ತಾನು ವಿಭಿನ್ನ ಪಾತ್ರಗಳನ್ನು ನಿರ್ವಹಿಸಬೇಕಾಗಿ ಬಂದಾಗಲೂ ‘ಧರ್ಮಚ್ಯುತಿ’ ಆಗದಂತೆ ನೋಡಿಕೊಂಡವನು ರಾಮ. ಅಧಿಕಾರ, ಸಿರಿವಂತಿಕೆ ಇತ್ಯಾದಿಗಳ ಸೆಳೆತ ಅದೆಷ್ಟು ತೀವ್ರ ವೆಂದರೆ ಅದನ್ನು ಬಿಟ್ಟುಕೊಡಲು ದೇವತೆಗಳೂ ಹಿಂದೇಟು ಹಾಕುತ್ತಾರಂತೆ; ಆದರೆ ತಂದೆಗೆ ತಾನು ನೀಡಿದ ವಚನಕ್ಕೆ ಚ್ಯುತಿಯಾಗಬಾರದು ಎಂಬ ಒಂದೇ ಕಾರಣಕ್ಕೆ ಇವೆರಡನ್ನೂ ನಿರಾಕರಿಸಿದ ರಾಮನ ‘ಅವಧೂತ ಪ್ರಜ್ಞೆ’ ಆತನನ್ನು ನಿರಾಯಾಸವಾಗಿ ವನಮಾರ್ಗದೆಡೆಗೆ ಹೆಜ್ಜೆ ಹಾಕಿಸಿತು.
ಇಂಥ ಕಟ್ಟುನಿಟ್ಟಿನ ಆದರ್ಶದ ಅನುಸರಣೆ, ಅಂದು ಕೊಂಡಷ್ಟು ಸುಲಭವಲ್ಲ. ಹೀಗಾಗಿಯೇ ರಾಮ ಆದರ್ಶ ವ್ಯಕ್ತಿ, ಮರ್ಯಾದಾ ಪುರುಷೋತ್ತಮ ನಾಗಿದ್ದಾನೆ ಮತ್ತು ಇಂಥ ಆದರ್ಶದ ಅನುಸರಣೆಯಿಂದಾಗಿ ಮನುಷ್ಯನಾಗಿದ್ದೂ ‘ದೈವ’ದ ಸ್ತರಕ್ಕೆ ಏರಬಹುದು ಎಂಬುದರ ಸಾಕ್ಷಿರೂಪವಾಗಿದ್ದಾನೆ.
(ಲೇಖಕರು ಪತ್ರಕರ್ತರು)