ವೀಕೆಂಡ್ ವಿತ್ ಮೋಹನ್
camohanbn@gmail.com
ನವೆಂಬರ್ ೨೬, ೧೯೪೯ರಂದು ಅಂಗೀಕರಿಸಲ್ಪಟ್ಟು, ೧೯೫೦ರ ಜನವರಿ ೨೬ರಂದು ಜಾರಿಗೆ ಬಂದ ಭಾರತದ ಮೂಲ ಸಂವಿಧಾನವು, ಅಯೋಧ್ಯೆಯಲ್ಲಿ ರಾಮರಾಜ್ಯವನ್ನು ಸ್ಥಾಪಿಸಲು ಲಂಕೆಯಿಂದ ಹಿಂದಿರುಗಿದ ಶ್ರೀರಾಮ, ಸೀತಾ ದೇವಿ ಮತ್ತು ಲಕ್ಷ್ಮಣನ ಚಿತ್ರಗಳನ್ನು ಹೊಂದಿತ್ತು. ಆದ್ದರಿಂದ, ರಾಮ ರಾಜ್ಯ ನಮ್ಮ ಸಂವಿಧಾನದ ಮೂಲಭೂತ ರಚನೆಯ ಭಾಗವಾಗಿದೆ ಎಂದು ಹೇಳಲಾಗುತ್ತದೆ.
ಮಹಾತ್ಮ ಗಾಂಧಿಯವರೂ ಭಾರತದಲ್ಲಿ ರಾಮರಾಜ್ಯ ಸ್ಥಾಪಿಸಲು ತೋರಿಸಿದ್ದ ಉತ್ಸುಕತೆಯನ್ನು ಮರೆಯುವ ಹಾಗಿಲ್ಲ. ಧಾರ್ಮಿಕ ದೃಷ್ಟಿಕೋನ ದಿಂದ, ಮೂಲ ಸಂವಿಧಾನದಲ್ಲಿ ಬಳಸಲಾದ ವಿವರಣೆಗಳು ಆಳವಾದ ಪ್ರಾಮುಖ್ಯವನ್ನು ಹೊಂದಿವೆ. ಮೂಲಭೂತ ಹಕ್ಕುಗಳ ಅಧ್ಯಾಯವನ್ನು ಒಳಗೊಂಡಿರುವ ಸಂವಿಧಾನದ ಭಾಗ ೩ರಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾದೇವಿಯ ಚಿತ್ರಗಳಿದ್ದವು. ಸಂವಿಧಾನ ರಚನಾ ಸಭೆಯು ಇದನ್ನು ಸರ್ವಾನುಮತದಿಂದ ಅಂಗೀಕರಿಸಲು ಕಾರಣವಾದ ಇತಿಹಾಸ, ಚಿಂತನೆಗಳು ಮತ್ತು ಚರ್ಚೆಗಳನ್ನು ಬಲವಾಗಿ ಪುನರುಚ್ಚರಿಸುವ ಸಮಯ ರಾಮ ಮಂದಿರ ಉದ್ಘಾಟನೆಯ ಸಮಯದಲ್ಲಿ ಬಂದಿದೆ. ಆ ದೃಷ್ಟಾಂತಗಳನ್ನು ಬಳಸುವುದರ ಹಿಂದಿನ ಕಲ್ಪನೆ ಭಾರತದ ಪ್ರಾಚೀನ ಪರಂಪರೆ, ಸಂಸ್ಕೃತಿ, ಪದ್ಧತಿಗಳು, ಜೀವನ ಮತ್ತು ಆಧುನಿಕ ಕಾಲದವರೆಗಿನ ಭಾರತದ ಆತ್ಮವನ್ನು ಪ್ರತಿನಿಽಸುತ್ತದೆ. ಹಿಂದೂ ಸಮಾಜದಲ್ಲಿದ್ದಂಥ ಅಸ್ಪೃಶತೆ ಯನ್ನು ಕಟುವಾಗಿ ವಿರೋಧಿಸುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ರಂಥ ಮಹಾನ್ ವ್ಯಕ್ತಿ ಇದನ್ನು ಅನುಮೋದಿಸಿದರೇ? ಎಂಬ ಪ್ರಶ್ನೆ ಮೂಡುವುದು ಸಹಜ.
ವಾಸ್ತವದಲ್ಲಿ ಅವರು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರಿಗೆ ವೈಯಕ್ತಿಕವಾಗಿ ಚಿತ್ರಸಹಿತ ಸಂವಿಧಾನವನ್ನು ಪ್ರಸ್ತುತಪಡಿಸಿದ್ದರು. ಈ ವಿಚಾರ ವನ್ನು ವಿರೋಧಿಸಿದ ಸಂವಿಧಾನ ಸಭೆಯ ಒಬ್ಬ ಸದಸ್ಯನ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ದೇಶವು ತನ್ನ ಸಾಂವಿಧಾನಿಕ ಭರವಸೆಯನ್ನು ತಿರಸ್ಕರಿಸ ಬಾರದೆಂಬುದು ರಾಮರಾಜ್ಯದ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ತಮ್ಮ ರಾಜ್ಯಗಳನ್ನು ವಿಲೀನಗೊಳಿಸಿದ ರಾಜ ಮನೆತನಗಳಿಗೆ ನೀಡಿದ್ದ ಹಲವು ಭರವಸೆಗಳನ್ನು ಮುರಿದಾಗ ಈ ತತ್ವದ ಉಲ್ಲಂಘನೆಯಾಗುತ್ತದೆ. ಈ ಭರವಸೆಗಳನ್ನು ಸರ್ದಾರ್ ವಲ್ಲಭಭಾಯಿ ಪಟೇಲರು ಸಂವಿಧಾನ ದಲ್ಲಿ ಅಳವಡಿಸಿ ದ್ದರು. ಆದರೆ ೧೯೭೦ರಲ್ಲಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನದ ೨೬ನೇ ತಿದ್ದುಪಡಿ ಮೂಲಕ ಇದನ್ನು ತೆಗೆದು ಹಾಕಲಾಯಿತು.
ಸಾಂವಿಧಾನಿಕ ಸಭೆಯಲ್ಲಿ ಪಟೇಲರು ಹಿಂದಿನ ಆಡಳಿತ ಗಾರರಿಗೆ ನೀಡಿದ ಪ್ರತಿeಯನ್ನು ಸಂವಿಧಾನದ ೨೬ನೇ ತಿದ್ದುಪಡಿಯನ್ನು ಜಾರಿಗೊಳಿಸುವ ಮೂಲಕ ಅವಮಾನಿಸಲಾಯಿತು. ಪ್ರಖ್ಯಾತ ಸಾಂವಿಧಾನಿಕ ವಕೀಲರಾದ ದಿವಂಗತ ನಾನಿ ಪಾಲ್ಖಿವಾಲಾ ಅವರು ಭಾರತ ಸರಕಾರದ ಈ ಕ್ರಮ ಸಾಂವಿ ಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ ಎಂದು ಭಾವಿಸಿದರು. ಆದ್ದರಿಂದ ರಾಮರಾಜ್ಯವು ನಮ್ಮ ಸಂವಿಧಾನದ ಮೂಲಭೂತ ರಚನೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಬಹುದು. ನಮ್ಮ ಸಂವಿಧಾನದ ವ್ಯಾಖ್ಯಾನವನ್ನು ನಿಯಂತ್ರಿಸುವ ಸಾಂವಿಧಾನಿಕ ನೈತಿಕತೆಯ ತತ್ವವು ರಾಮನ ಆದರ್ಶಗಳಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಖಚಿತಪಡಿಸುತ್ತದೆ. ಆದರೆ ಮೂಡುವ ದೊಡ್ಡ ಪ್ರಶ್ನೆಯೆಂದರೆ, ಮೂಲ ಸಂವಿಧಾನದ ರಚನೆಯಲ್ಲಿ ಒಳಗೊಂಡಿರುವ ರಾಮರಾಜ್ಯವನ್ನು ಮೂಲಭೂತ ರಚನೆಯ ಭಾಗವಾಗಿ ನಾವು ಹೇಗೆ ಗುರುತಿಸುತ್ತೇವೆ? ಕಾರ್ಯ ನಿರ್ವಾಹಕ ಆದೇಶದ ಮೂಲಕ ನೀಡಲಾದ ದೇವಾಲಯದ ಹಕ್ಕುಗಳ ನಿರ್ಣಯವು ಇದನ್ನು ಮಾಡಲು ಒಂದು ಮಾರ್ಗವಾಗಿದೆ.
ಸಂವಿಧಾನದ ೩೬೩ನೇ ವಿಧಿಯು ಸಂವಿಧಾನವನ್ನು ಅಂಗೀಕರಿಸುವ ಮೊದಲು ಮಾಡಿಕೊಂಡ ಒಪ್ಪಂದಗಳಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿ ಸುವುದನ್ನು ಅನುಮತಿಸುವುದಿಲ್ಲ. ಭಾರತದ ಸಂವಿಧಾನವು ಒಂದು ಆಕರ್ಷಕ ಕಲಾಕೃತಿಯಾಗಿದೆ. ಭೂತಕಾಲವನ್ನು ನಿರಂತರವಾಗಿ ಅಂಗೀಕರಿಸಿ, ವರ್ತಮಾನಕ್ಕೆ ಮಾರ್ಗದರ್ಶನ ನೀಡಿ ಮತ್ತು ನಮ್ಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಬೇರೆ ಯಾವ ಪುಸ್ತಕವೂ ಸಹಾಯ ಮಾಡುವುದಿಲ್ಲ. ನಾವು ಅದರ ಆಳಕ್ಕೆ ಹೊಕ್ಕು ನೋಡಬೇಕಷ್ಟೆ. ಸಂವಿಧಾನವು ನಾಗರಿಕರಾಗಿ ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ದಾಖಲೆಯಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಆದರೆ ಸಂವಿಧಾನದ ಪ್ರತಿಯೊಂದು ಭಾಗವು ನಮ್ಮ ೫,೦೦೦ ವರ್ಷಗಳ ಇತಿಹಾಸವನ್ನು ಗುರುತಿಸುವ ಕಲೆಯೊಂದಿಗೆ ಪ್ರಾರಂಭವಾಗುತ್ತದೆ ಎಂಬುದು ನಮಗೆ ತಿಳಿದಿಲ್ಲ. ಜನಪ್ರಿಯ ಸಿಂಧೂ ಕಣಿವೆಯ ನಾಗರಿಕತೆಯನ್ನು ಬಿಂಬಿಸುವ ಗೂಳಿಯ ಚಿಹ್ನೆಯನ್ನು ಸಂವಿಧಾನದಲ್ಲಿ ಕಾಣಬಹುದು. ಈ ಗೂಳಿಯು ಹರಪ್ಪ ಮತ್ತು ಮೊಹೆಂಜೊದಾರೋದಲ್ಲಿ ಕಂಡುಬಂದಿದ್ದ ಅತ್ಯಂತ ಶಕ್ತಿಶಾಲಿ ಕುಲ ಮತ್ತು ಉನ್ನತ ಅಧಿಕಾರಿಗಳನ್ನು ಪ್ರತಿನಿಧಿಸುತ್ತದೆ. ಎಡಚರರು ತಲೆಬುಡವಿಲ್ಲದೆ ಹಬ್ಬಿಸಿರುವ ಆರ್ಯ ಮತ್ತು ದ್ರಾವಿಡರೆಂಬ ಸುಳ್ಳು ಇತಿಹಾಸದ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಯಾಕೆಂದರೆ ಸುಳ್ಳು ಇತಿಹಾಸಕ್ಕೆ ಇದುವರೆಗೂ ಯಾವುದೇ ಪುರಾವೆ ಸಿಕ್ಕಿಲ್ಲ.
ಸಂವಿಧಾನದ ಮೂಲಭೂತ ಹಕ್ಕುಗಳ ಭಾಗವು ರಾಮ, ಲಕ್ಷ್ಮಣ, ಸೀತೆಯ ಚಿತ್ರಣದಿಂದ ಚಿತ್ರಿಸಲ್ಪಟ್ಟಿದೆ ಮತ್ತು ರಾಜ್ಯನೀತಿಯು ಭಗವದ್ಗೀತೆಯಲ್ಲಿರುವ ಅರ್ಜುನ ಮತ್ತು ಕೃಷ್ಣನ ನಡುವಿನ ಸಂಭಾಷಣೆಯ ಸಾಂಪ್ರದಾಯಿಕ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಬುದ್ಧನ ಜ್ಞಾನೋದಯದ ಚಿತ್ರವನ್ನು ರಾಷ್ಟ್ರಪತಿ ಮತ್ತು ಉಪಾರಾಷ್ಟ್ರಪತಿಗಳಿಗೆ ಸಂಬಂಧಿಸಿದ ನಿಯಮಗಳ ಭಾಗಕ್ಕೆ ನೀಡಲಾಗಿದೆ. ‘ಜ್ಞಾನೋದಯ’ ಎಂಬ ಪದವನ್ನು ಮಾನವ ಜನಾಂಗ ವನ್ನು ಮುಗ್ಧತೆಯಿಂದ ಪ್ರಜ್ಞೆಗೆ ಜಾಗೃತ ಗೊಳಿಸುವುದು ಎಂದು ಅರ್ಥೈಸಿಕೊಳ್ಳಬಹುದು.
ಗುಪ್ತರ ಕಾಲವನ್ನು ಭಾರತದ ಸುವರ್ಣಯುಗ ಎಂದು ಹೇಳಲಾ ಗುತ್ತದೆ, ಅಜಂತ ಮತ್ತು ಎಲ್ಲೋರದ ಚಿತ್ರಗಳು, ಕಾಳಿದಾಸನ ಗ್ರಂಥಗಳು, ಆರ್ಯಭಟನ ಗಣಿತ ಇವೆಲ್ಲವೂ ಗುಪ್ತರ ಕಾಲದ ಭಾಗವಾಗಿದ್ದವು. ಆ ಸಮಯದಲ್ಲಿ, ಭಾರತವು ವಿಶ್ವದ ಜಿಡಿಪಿಗೆ ಶೇ.೨೫ರಷ್ಟು ಕೊಡುಗೆ ನೀಡುತ್ತಿತ್ತು ಮತ್ತು ಸುಮಾರು ೧,೦೦೦ ವರ್ಷಗಳವರೆಗೆ ಜಗತ್ತಿನಲ್ಲಿ ಮೊದಲನೆಯ ಸ್ಥಾನದಲ್ಲಿತ್ತು. ನಳಂದ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಕಲಾಕೃತಿಯಲ್ಲಿ ಗುಪ್ತರ ಆಳ್ವಿಕೆ ಯು ಸ್ವತಃ ಪ್ರಕಟವಾಗುತ್ತದೆ. ನಳಂದ ವಿಶ್ವವಿದ್ಯಾಲಯದಲ್ಲಿ ವಿವಿಧ ಸಂಸ್ಕೃತಿಗಳ ಮಿಲನವು ಸಾಮಾನ್ಯವಾಗಿತ್ತು. ಸ್ವಾತಂತ್ರ್ಯ ಹೋರಾಟವನ್ನು ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯವರಿಂದ ಪ್ರಾರಂಭಿಸಿ, ಮಹಾತ್ಮ ಗಾಂಧಿಯವರ ದಂಡಿ ಸತ್ಯಾಗ್ರಹದ ಮೆರವಣಿಗೆಯವರೆಗಿನ ವೀರರ ಸರಣಿ ಯಿಂದ ಸಂವಿಧಾನದಲ್ಲಿ ಚಿತ್ರಿಸಲಾಗಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೂ ಒಂದು ಕಲಾಕೃತಿಯನ್ನು ಸಮರ್ಪಿಸಲಾಗಿದೆ.
ಕೆಲ ಎಡಚರರು ಮೂಲ ಸಂವಿಧಾನದ ವಿವರಣೆಗಳು ಕೇವಲ ಅಲಂಕಾರದ ಉದ್ದೇಶಕ್ಕಾಗಿ ಮಾತ್ರ ಎಂಬ ಭಂಡವಾದ ಮಾಡುತ್ತಾರೆ. ಆದರೆ ಭಾರತದ ಸಾವಿರಾರು ವರ್ಷಗಳ ಇತಿಹಾಸವನ್ನು ಮಾತ್ರ ಒಪ್ಪಿಕೊಳ್ಳುವುದಿಲ್ಲ. ಸಂವಿಧಾನವು ಜಾರಿಗೆ ಬರುವ ಮೊದಲು ಪ್ರಾಂತ್ಯಗಳನ್ನು ಅಳುತ್ತಿದ್ದ ರಾಜ ಮನೆತನದ ಆಡಳಿತಗಾರನು ಮಾಡಿಕೊಂಡ ಯಾವುದೇ ಒಪ್ಪಂದಗಳಿಗೆ ನ್ಯಾಯಾಲಯಗಳು ಮಧ್ಯ ಪ್ರವೇಶಿಸುವುದನ್ನು ೩೬೩ನೇ ವಿಧಿ ನಿರ್ದಿಷ್ಟವಾಗಿ ತಡೆಯು ತ್ತದೆ. ಮೂಲ ಸಂವಿಧಾನದಲ್ಲಿ ಚಿತ್ರಿಸಲಾದ ಚಿತ್ರಗಳನ್ನು ಸದ್ದಿಲ್ಲದೆ ಕಾನೂನುಬಾಹಿರಗೊಳಿಸುವ ಸೂಕ್ಷ್ಮ ಕ್ರಮವು ೩೬೩ನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಅಪರೂಪದ ರೇಖಾಚಿತ್ರಗಳು ಕೇವಲ ಅಲಂಕಾರವಲ್ಲ.
ಆದ್ದರಿಂದ ಸಾಮಾನ್ಯ ನಾಗರಿಕರ ಮನಸ್ಸಿನಲ್ಲಿ ಉಳಿದಿರುವ ಅಂಥ ಅನುಮಾನಗಳನ್ನು ತೆಗೆದುಹಾಕುವುದು ಅತ್ಯಗತ್ಯ. ಸಂವಿಧಾನದ ಕೆಲವು ಪುಟಗಳು ನಮ್ಮ ಇತಿಹಾಸದ ಬಗ್ಗೆ ನೆನಪಿರುವ ಎಲ್ಲವನ್ನೂ ವಿವರಿಸುತ್ತವೆ. ಮುಘಲರ ಆಳ್ವಿಕೆಯನ್ನು ಚಿತ್ರಿಸುವ ಅಕ್ಬರನ ಆಸ್ಥಾನದ ದೃಶ್ಯ, ನಂತರ ಅವರ ಆಕ್ರಮಣ ಅಂತಿಮವಾಗಿ ಮರಾಠ ಮತ್ತು ಸಿಖ್ ಸಾಮ್ರಾಜ್ಯಗಳ ಉದಯಕ್ಕೆ ಕಾರಣವಾಗುತ್ತದೆ. ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಗುರು ಗೋಬಿಂದ್ ಸಿಂಗ್ ಆಡಳಿತವು ಅಂತಿಮವಾಗಿ ಮುಘಲರ ಆಳ್ವಿಕೆಯನ್ನು ದುರ್ಬಲಗೊಳಿಸಿತು ಮತ್ತು ಯುರೋಪಿಯನ್ ವ್ಯಾಪಾರವು ನಮಗೆ ತಿಳಿದಿರುವ ಸಾಮ್ರಾಜ್ಯಶಾಹಿ ಆಳ್ವಿಕೆಗೆ ದಾರಿ ಮಾಡಿಕೊಟ್ಟಿತೆಂಬುದನ್ನು ಹೇಳುತ್ತದೆ.
ಹಿಂದೂ ದೇವತೆಗಳು ಧರ್ಮವನ್ನು ರಕ್ಷಿಸುವ ಧಾರ್ಮಿಕ ಉದ್ದೇಶದಿಂದ ನಮ್ಮ ದೇವಾಲಯಗಳಲ್ಲಿ ಅವತರಿಸಿದ್ದಾರೆ. ಅನೇಕ ಆಕ್ರಮಣಗಳ ನಂತರವೂ ದೇವತೆಗಳು ಭಾರತದ ಹೆಚ್ಚಿನ ಭಾಗಗಳಲ್ಲಿ ಧರ್ಮದ ರಕ್ಷಣೆಯನ್ನು ಮಾಡಿದ್ದಾರೆ ಮತ್ತು ಸನಾತನ ಧರ್ಮವನ್ನು ಅದರ ಮೂಲಭೂಮಿಯಲ್ಲಿಯೇ ಅಳಿವಿನಂಚಿನಲ್ಲಿರುವಂತೆ ಮಾಡುವ ಪ್ರಯತ್ನಗಳನ್ನು ಹಿಮ್ಮೆಟ್ಟಿಸಲಾಗಿದೆ. ಸಾಂವಿಧಾನಿಕ ನೈತಿಕತೆಯ ಸಿದ್ಧಾಂತವು ಸರಳವಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಪ್ರಕ್ರಿಯೆಯ ಮೂಲಕ ನ್ಯಾಯಾಂಗದಿಂದ ಸನಾತನ ಧರ್ಮದ ವಿವಿಧ ಸಂಪ್ರದಾಯಗಳು ಅಸ್ತಿತ್ವದಿಂದ ಸುಧಾರಣೆ ಪಡೆಯುವ ಪರಿಸ್ಥಿತಿಗೆ ಕಾರಣವಾಗಬಹುದು.
ಮುಘಲರ ಆಕ್ರಮಣಗಳ ಸಮಯದಲ್ಲಿ ಸನಾತನ ಹಿಂದೂ ಧರ್ಮವನ್ನು ರಕ್ಷಿಸಿದ ಪ್ರಾಚೀನ ಮಠಗಳ ಹಕ್ಕುಗಳನ್ನು ಸಂವಿಧಾನದ ೨೬ನೇ ವಿಧಿಯು ರಕ್ಷಿಸುತ್ತದೆ. ಪೆರಿಯಾರ್ ಸಿದ್ಧಾಂತದ ಮೋಡಿಗೆ ಒಳಗಾಗಿ ದಶಕಗಳಿಂದ ದ್ರಾವಿಡ ರಾಜಕಾರಣ ಮಾಡಿಕೊಂಡು ಬಂದಿರುವ ತಮಿಳುನಾಡಿನ ದ್ರಾವಿಡ ಪಕ್ಷದ ನಾಯಕರಿಗೆ ಸನಾತನ ಧರ್ಮವನ್ನು ಅವಹೇಳನ ಮಾಡುವುದೇ ದಿನನಿತ್ಯದ ಕಾಯಕವಾಗಿದೆ. ಸಂವಿಧಾನದಲ್ಲಿ ಸನಾತನ ಧರ್ಮಕ್ಕೆ ನೀಡಿರುವ ರಕ್ಷಣೆಯ ಅರಿವಿಲ್ಲದವರು ಜಾತ್ಯತೀತತೆಯ ಹೆಸರಿನಲ್ಲಿ ಧರ್ಮದ ಅವಹೇಳನದಲ್ಲಿ ತೊಡಗಿದ್ದಾರೆ. ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಲಾಂಛನದಲ್ಲಿ ‘ಯತೋ ಧರ್ಮಸ್ತತೋ ಜಯಃ’ (ಎಲ್ಲಿ ಧರ್ಮವಿದೆಯೋ ಅಲ್ಲಿ ವಿಜಯವಿದೆ) ಎಂಬ ಧ್ಯೇಯವಾಕ್ಯವನ್ನು ಹೊಂದಿದೆ.
‘ಧರ್ಮೇಣ ಹನ್ಯತೇ ವ್ಯಾಧಿಃ ಹನ್ಯನ್ತೇ ವೈ ತಥಾ ಗ್ರಹಾಃ, ಧರ್ಮೇಣ ಹನ್ಯತೇ ಶತ್ರುಃ ಯತೇ ಧರ್ಮಸ್ತತೌ ಜಯಃ’ ಅಂದರೆ, ಧರ್ಮವನ್ನು ಅನುಸರಿಸುವು ದರಿಂದಲೇ ನಾವು ಹಲವು ರೋಗಗಳ ಮೇಲೆ ಜಯವನ್ನು ಪಡೆಯುತ್ತೇವೆ ಎಂದರ್ಥ. ಇದು ಮಹಾಭಾರತದಲ್ಲಿರುವ ಸಲಹೆ. ಕೋವಿಡ್-೧೯, ಚೀನಾ ದಿಂದ ಒದಗಿದ ಬೆದರಿಕೆ ಮತ್ತು ಗಂಭೀರ ಆರ್ಥಿಕ ಸವಾಲುಗಳ ನಡುವೆಯೂ ಭಾರತ ಬಿಕ್ಕಟ್ಟನ್ನು ಎದುರಿಸಿದ ಸಂದರ್ಭವನ್ನು ಮಹಾಭಾರತದ ಈ ಶ್ಲೋಕ ನೆನಪಿಸುತ್ತದೆ.
ರಾಮರಾಜ್ಯದ ಧರ್ಮದ ಮನೋಭಾವವನ್ನು ಅನೇಕ ಪ್ರಾಚೀನ ಸಾಮ್ರಾಜ್ಯಗಳು ಅನುಸರಿಸಿದ್ದವು. ಅವರು ತಮ್ಮ ರಾಜ್ಯಗಳಿಗೆ ಪ್ರತ್ಯೇಕ ಸಂವಿಧಾನದ ಆಯ್ಕೆಯನ್ನು ಅನುಸರಿಸಲಿಲ್ಲ. ಏಕೆಂದರೆ ಅವರು ಭಾರತೀಯ ಒಕ್ಕೂಟಕ್ಕೆ ಸೇರ್ಪಡುವ ಸಾಧನಗಳಿಗೆ ಸಹಿ ಹಾಕಿದಾಗ ವಲ್ಲಭಭಾಯಿ ಪಟೇಲರು ನೀಡಿದ್ದ ಭರವಸೆಗಳನ್ನು ನಂಬಿದ್ದರು. ಈ ಕಾರಣಕ್ಕಾಗಿಯೇ ಶ್ರೀಕೃಷ್ಣದೇವರಾಯನ ಮನೆತನದ ಪತ್ರದ ಮಾದರಿಯಲ್ಲಿ ಪ್ರಾಚೀನ ಅರಸರ ಕುಟುಂಬಗಳಿಂದ ಬೆಂಬಲ ಪತ್ರಗಳನ್ನು ಕೇಳಲಾಗಿತ್ತು. ೫ನೇ ಆಗಸ್ಟ್ ೨೦೨೦ ರಂದು ಅಯೋಧ್ಯೆಯಲ್ಲಿ ಮಾಡಿದ ಐತಿಹಾಸಿಕ ಸಂಕಲ್ಪದಿಂದ ರಾಮರಾಜ್ಯವನ್ನು ಸ್ಥಾಪಿಸುವುದು, ಅಯೋಧ್ಯೆ ಯಲ್ಲಿನ ಶ್ರೀರಾಮನ ಭವ್ಯ ದೇವಾಲಯದ ಉದ್ದೇಶವಾಗಿದೆ.
ಕ್ರಿಶ್ಚಿಯನ್ ಅಥವಾ ಇಸ್ಲಾಮಿಕ್ ಬದಲಿಗೆ ಹಿಂದೂ ಧರ್ಮವನ್ನು ಅನುಸರಿಸಿ, ರಾಮರಾಜ್ಯವನ್ನು ಸ್ಥಾಪಿಸಲು ಭಗವದ್ಗೀತೆ ಶ್ಲೋಕದಲ್ಲಿ ಸೃಷ್ಟಿಕರ್ತನು ನೀಡಿದ ಆಯ್ಕೆಯನ್ನು ಚಲಾಯಿಸಿದ್ದೇವೆ. ಶ್ರೀಕೃಷ್ಣನು ಅರ್ಜುನನಿಗೆ ಈ ಸಲಹೆಯನ್ನು ನೀಡುತ್ತಿರುವ ಚಿತ್ರವು ಶ್ರೀರಾಮ ಮತ್ತು ಸೀತಾದೇವಿಯ ಚಿತ್ರದೊಂದಿಗೆ ನಮ್ಮ ಸಂವಿಧಾನದ ಭಾಗ ವಾಗಿದೆ. ತಿರುವಾಂಕೂರು ರಾಜಮನೆತನದ ದೊರೆ, ಶ್ರೀ ಪದ್ಮನಾಭ ದಾಸ ಬಾಲರಾಮ ವರ್ಮರು ಒಡಂಬಡಿ ಕೆಗೆ ಸಹಿ ಹಾಕುವ ಮೊದಲು ಭಾರತ ಸರಕಾರದೊಂದಿಗೆ ರಾಮನ ತತ್ವಗಳ ಪ್ರಕಾರ ರಾಜ್ಯಾಡಳಿತ ನಡೆಯಬೇಕೆಂಬು ದನ್ನು ಖಚಿತಪಡಿಸಿ ಕೊಂಡರು. ಈ ಸತ್ಯವನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಅವರು ‘ಯುನೈಟೆಡ್ ಸ್ಟೇಟ್ ಆಫ್ ಟ್ರಾವಂ ಕೂರ್ ಮತ್ತು ಕೊಚ್ಚಿನ್’ಗಾಗಿ ಭಾರತದ ಸಂವಿಧಾನ ವನ್ನು ಅಳವಡಿಸಿಕೊಂಡರು.
ತಿರುವಾಂಕೂರು ರಾಮರಾಜ್ಯದಲ್ಲಿ ಅಳವಡಿಸಿಕೊಂಡ ಅನೇಕ ಸುಧಾರಣಾ ಕ್ರಮಗಳು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಅಧ್ಯಾಯದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಸಂವಿಧಾನದ ೨೫ನೇ ವಿಧಿಯ ರೂಪದಲ್ಲಿ ದೇವಾಲಯ ಪ್ರವೇಶದ ಘೋಷಣೆ ಯಾಗಿದೆ. ದೇವಾಲಯ ಪ್ರವೇಶ ವಿಷಯದಲ್ಲಿ ತಿರುವಾಂಕೂರು ರಾಮರಾಜ್ಯವು ನಮ್ಮ ಸಾಂವಿಧಾನಿಕ ರಾಮರಾಜ್ಯಕ್ಕೆ ಪ್ರೇರಣೆ ಎಂದರೆ ತಪ್ಪಿಲ್ಲ.