Sunday, 15th December 2024

Srivathsa joshi Column: ವಿಜಯ ಭಾಸ್ಕರ್‌ ರಾಗಸಂಯೋಜನೆ ಮಾಡಿದ್ರೆ ಎಲ್ಲೆಲ್ಲು ಸಂಗೀತವೇ !

ಅರಿಶಿನ ಕುಂಕುಮ ಸೌಭಾಗ್ಯ ತಂದ ತಾಯಾಗುವಾನಂದ ನಿನದಾಯಿತು…’ ಗೀತೆಯಿಂದ ಆರಂಭಿಸೋಣ. ಇದು ೧೯೭೦ರಲ್ಲಿ ಬಿಡುಗಡೆಯಾದ, ಕೆ.ಎಸ್.ಎಲ್ ಸ್ವಾಮಿ (ರವೀ) ನಿರ್ದೇಶನದ, ‘ಅರಿಶಿನ ಕುಂಕುಮ’ ಚಿತ್ರದ ಗೀತೆ. ಕಲ್ಪನಾ, ಕಲ್ಯಾಣ್ ಕುಮಾರ್, ರಾಜೇಶ್, ಕೆ.ಎಸ್.ಅಶ್ವಥ್ ಮುಂತಾದವರು ಆ ಚಿತ್ರದ ತಾರಾಗಣದಲ್ಲಿದ್ದರು. ಬೇಂದ್ರೆಯವರ ಪ್ರಖ್ಯಾತ ‘ಗಂಗಾವತರಣ’ ಗೀತೆಯನ್ನು ಡಾ. ಪಿ.ಬಿ.ಶ್ರೀನಿವಾಸ್ ತೆರೆಯ ಮೇಲೆ ಕಾಣಿಸಿಕೊಂಡು ಹಾಡಿದ್ದು ಆ ಚಿತ್ರದಲ್ಲಿಯೇ. ಆಗಿನ ಕಾಲದ ಚಿತ್ರಸಾಹಿತ್ಯದ ತ್ರಿಮೂರ್ತಿಗಳಾದ ವಿಜಯನಾರಸಿಂಹ, ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್- ಮೂವರೂ ಚಿತ್ರಕ್ಕಾಗಿ ಗೀತರಚನೆ ಮಾಡಿದ್ದರು.

ಶೀರ್ಷಿಕೆಗೀತೆಯ ಗಾಯಕಿ ಎಸ್.ಜಾನಕಿ. ಚಿತ್ರದ ಸಂಗೀತ ನಿರ್ದೇಶಕ- ಏಕಮೇವಾ ದ್ವಿತೀಯ ವಿಜಯಭಾಸ್ಕರ್. ಹಾಂ! ಮುದ್ದಾಂ ಆಗಿ ‘ಏಕಮೇವಾದ್ವಿತೀಯ’ ಎಂದು ಬರೆದಿದ್ದೇನೆ. ಅವರು ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲೊಬ್ಬರು ಎಂಬ ಕಾರಣಕ್ಕಷ್ಟೇ ಅಲ್ಲ, ಇಂದಿನ ಅಂಕಣವಿಡೀ ವಿಜಯಭಾಸ್ಕರ್ ಸಂಗೀತ ನಿರ್ದೇಶನದ ಒಂದಿಷ್ಟು ಮಧುರಾತಿಮಧುರ ಕನ್ನಡ ಚಿತ್ರಗೀತೆಗಳನ್ನು ಮೆಲುಕುಹಾಕುವ ಯೋಜನೆಯಿದೆ. ಅದನ್ನು ತುಸು ವಿಭಿನ್ನವಾಗಿ, ನೀವಿದುವರೆಗೆ ಕಂಡುಕೇಳರಿಯದ ವಿಚಿತ್ರ ರೀತಿಯಲ್ಲಿ ಪ್ರಸ್ತುತಪಡಿಸುವ ಇರಾದೆಯೂ ಇದೆ. ಸಂದರ್ಭ ಏನೆಂದು ಆಮೇಲೆ ತಿಳಿಸುತ್ತೇನೆ.

ಅಂಕಣದ ಮಿತಿಯೊಳಗೆ ಎಷ್ಟು ಸಾಧ್ಯವೋ ಅಷ್ಟು ಹಾಡುಗಳನ್ನು ತುಂಬಬೇಕೆಂದು ಪ್ರತಿ ಹಾಡಿನ ಜತೆಯಲ್ಲಿ
ಚಿತ್ರದ ಹೆಸರನ್ನಷ್ಟೇ ದಾಖಲಿಸುತ್ತೇನೆ. ಆ ಮೂಲಕ ಆಯಾ ಚಿತ್ರಗಳ ತಂಡದ ಸಮಸ್ತರನ್ನೂ ಸ್ಮರಿಸಿ ಗೌರವಿಸಿದ್ದೇ ನೆಂದು ಭಾವಿಸುತ್ತೇನೆ. ಏಕೆಂದರೆ, ಒಂದು ಚಿತ್ರಗೀತೆಯ ಜನಪ್ರಿಯತೆಯ ಹಿಂದೆ ಬರೀ ಸಂಗೀತನಿರ್ದೇಶಕನಷ್ಟೇ ಅಲ್ಲದೆ ಹತ್ತಾರು ಕಲಾವಿದರ ಪ್ರತಿಭೆ-ಪರಿಶ್ರಮಗಳಿರುತ್ತವೆ. ಆಕಾಶವಾಣಿಯಲ್ಲಾದರೆ ಗೀತೆಯ ಸಾಹಿತ್ಯ ಯಾರದು, ಸಂಗೀತ ನಿರ್ದೇಶನ, ಗಾಯನ ಯಾರದು ಎಂಬಷ್ಟು ವಿವರಗಳನ್ನಾದರೂ ಹೇಳುತ್ತಾರೆ.

ಖಾಸಗಿ ಎಫ್.ಎಂ ವಾಹಿನಿಗಳಲ್ಲಿ ಆರ್‌ಜೆಗಳು ತಮ್ಮ ಹೆಸರನ್ನು ನಿಮಿಷಕ್ಕೊಮ್ಮೆ ಉಸುರುತ್ತಾರೆಯೇ ಹೊರತು ಕಲಾವಿದರ‌ ಹೆಸರುಹೇಳಿ ಗೌರವ ಸಲ್ಲಿಸುವುದಿಲ್ಲ. ಇದು ತಪ್ಪಲ್ಲವೇ? ಹೋಗಲಿಬಿಡಿ, ವಿಜಯ ಭಾಸ್ಕರ್ ಸಂಗೀತ ನಿರ್ದೇಶನದ್ದೇ ಒಂದು ಗೀತೆಯ ಮೂಲಕ ಹೇಳುವುದಾದರೆ- ‘ತಪ್ಪಂತೆ ಸರಿಯಂತೆ ಏಕೆ ಹೀಗಂತೆ ನನ್ನ ನಾನೇ ಕೇಳಿಕೊಂಡೆ ಬೇಕೇ ಈ ಚಿಂತೆ…’ (ಮುಗ್ಧ ಮಾನವ); ಚಿಂತೆ ಬೇಡ. ತಿಳಿರುತೋರಣ ಅಂಕಣ ಓದುವಾಗ
‘ತುಟಿಯ ಮೇಲೆ ತುಂಟ ಕಿರುನಗೆ ಕೆನ್ನೆ ತುಂಬ ಕೆಂಡಸಂಪಿಗೆ ಒಲವಿನೊಸಗೆ ಎದೆಯ ಬೇಸಗೆ ಈ ಬಗೆ ಹೊಸ ಬಗೆ ಹೊಸ ಬಗೆ…’ (ಮನ ಮೆಚ್ಚಿದ ಮಡದಿ); ಕಾಮಾಲೆಪೀಡಿತರಿಗೆ ಭೂಮ್ಯಾಕಾಶಗಳೆಲ್ಲ ಹಳದಿಯಾಗಿ ಕಾಣುತ್ತವೆನ್ನುವ ‘ಗಗನವು ಯೆಲ್ಲೋ ಭೂಮಿಯು ಯೆಲ್ಲೋ ಒಂದೂ ಅರಿಯೆ ನಾ, ಎನಗೆ ನೀ ನೀಡಿದ ವಚನವ ಕೇಳಿ ತೇಲಿ ತೇಲಿ ಹೋದೆ ನಾ…’ (ಗೆಜ್ಜೆ ಪೂಜೆ) ಹಾಡಿನ ಸಾಲಲ್ಲೂ ತಮಾಷೆ ಕಂಡರೆ ಕಿರುನಗೆ ಮೂಡದಿರುತ್ತದೆಯೇ? ಅಂಥ ತರಲೆ-ತಮಾಷೆ ರುಚಿಗೆ ತಕ್ಕಷ್ಟಾದರೂ ಇದ್ದರೆ ಮಾತ್ರ ‘ನಿನ್ನ ಕಂಗಳ ಜ್ಯೋತಿಯಾಗುವೆ ನಾನು ನನ್ನ ಕಣ್ಣಲಿ ಜಗವ ಕಾಣುವೆ ನೀನು…’ (ಚಿರಂಜೀವಿ) ಆಗುವುದು; ಮತ್ತು, ‘ನೀ ತಂದ ಕಾಣಿಕೆ ನಗೆಹೂವ ಮಾಲಿಕೆ, ನಾ ತಂದ ಕಾಣಿಕೆ ಅನುರಾಗ ಮಾಲಿಕೆ ಅದಕ್ಕಿಲ್ಲ ಹೋಲಿಕೆ…’ (ಹೃದಯ ಸಂಗಮ) ಎಂದೆನಿಸುವುದು.

ಅಂದಹಾಗೆ, ಈ ಜೋಡಣೆಯ ವಾಕ್ಯಗಳನ್ನೆಲ್ಲ ಗಂಭೀರವಾಗಿ ತಗೋಬೇಡಿ. ಉಲ್ಲೇಖಗೊಳ್ಳುವ ಹಾಡುಗಳ ಮೇಲಷ್ಟೇ ನಿಮ್ಮ ಗಮನವಿರಲಿ. ಆಮೇಲೆ ರಸಪ್ರಶ್ನೆಯೂ ಇದೆ! ಆಮೇಲಲ್ಲ ಅಲಮೇಲು: ‘ಕರ್ಪೂರದ ಬೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು, ನಿನ್ನ ಪ್ರೇಮಜ್ವಾಲೆ ಸೋಕೆ ನನ್ನ ಮೇಲೆ ಕರಗಿ ಕರಗಿ ನೀರಾದೆ ನಾನು…’ (ನಾಗರಹಾವು); ಅಥವಾ ಸ್ವಾತಂತ್ರ್ಯದಿನಾಚರಣೆಯ ‘ನಮ್ಮ ತಾಯಿ ಭಾರತಿ ಪಡೆದ ಪುನೀತ ಸಂತತಿ ವಿಶ್ವಕೆಲ್ಲ ಕೀರುತಿ ನಡೆಸುವ ವರ್ಧಂತಿ…’ (ನಾಂದಿ). ಕಣ್ತುಂಬಿಸಿಕೊಳ್ಳುವುದಕ್ಕೆ ‘ತೋಟದಾಗೆ ಹೂವ ಕಂಡ ಹೂವ ಒಳಗೆ ನಿನ್ನ ಕಂಡೆ ನನ್ನ ರಾಜಾ ರೋಜಾ ಹಂಗೆ ನಗ್ತಾ ಇರ್ಲಿ ಯಾವತ್ತೂ…’ (ಚಿರಂಜೀವಿ) ಇದ್ದರೆ ಮತ್ತಿನ್ನೇನು ಬೇಕು? ‘ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ…’ (ಜಿಮ್ಮಿಗಲ್ಲು); ಒನಕೆ ಓಬವ್ವಳನ್ನು ನೆನಪಿಸಿಕೊಳ್ಳುತ್ತ ‘ಕನ್ನಡ ನಾಡಿನ ವೀರ ರಮಣಿಯ ಗಂಡುಭೂಮಿಯ ವೀರನಾರಿಯ ಚರಿತೆಯ ನಾನು ಹಾಡುವೆ…’ (ನಾಗರಹಾವು).

ಹಿಂದೆಲ್ಲ ಓಲೆ ಬರೆಯುತ್ತಿದ್ದದ್ದು ಕಾಗದದಲ್ಲಿ, ಈಗ ಸ್ಮಾಟ್ ಫೋನ್‌ನಲ್ಲಿ. ಆದರೆ ‘ವಸಂತ ಬರೆದನು ಒಲವಿನ ಓಲೆ
ಚಿಗುರಿದ ಎಲೆ ಎಲೆ ಮೇಲೆ ಪಂಚಮದಲ್ಲಿ ಹಾಡಿತು ಕೋಗಿಲೆ ಪ್ರೇಮಿಗೆ ಓರ್ವಳೇ ನಲ್ಲೆ…’ (ಬೆಸುಗೆ); ಪ್ರತಿವರ್ಷ ಓಲೆ
ಬರೆಯುತ್ತಾನೆ. ಪಾಪ ಅವನಿಗೂ ‘ಲೊಳಲೊಟ್ಟೆ ಈ ಬದುಕು ಲೊಳಲೊಟ್ಟೆ ನಲವತ್ತು ತುಂಬಿ ನೌಕರಿ ಇಲ್ಲದ ಅಲೆಮಾರಿ ಬರಿ ಸುಳ್ಳು ಬಾಳೆಲ್ಲ…’ (ಉಂಡೂಹೋದ ಕೊಂಡೂಹೋದ) ಆಗಿದೆಯೋ ಏನೋ. ‘ಲೈ- ಇಸ್ ಎ ಮೆರ್ರಿ ಮೆಲೋಡಿ ಲವ್ ಇಸ್ ದ ಹಾಂಟಿಂಗ್ ರಾಪ್ಸಡಿ ಸ್ಮೈಲ್ ಆಂಡ್ ಎಂಜಾಯ್…’ (ಬೆಸುಗೆ) ಎಂದು ಬೆಂಗ್ಳೂರ್-ಕನ್ನಡಿ ಗರ ಭಾಷೆಯಲ್ಲಿ ವಸಂತನಿಗೂ ಸ್ವಲ್ಪ ಬೋಧನೆ ಬೇಕು. ಬೆಂಗ್ಳೂರಲ್ಲಿ ಕನ್ನಡ ಮಾತಾಡುವವರೂ ಇದ್ದಾರೆ ಮಾರಾಯ್ರೇ! ಕೆಲವರು ವಿದೇಶಿಯರು ಭಾರತದ ಆಕರ್ಷಣೆಯಿಂದ ಬಂದವರು ಕನ್ನಡ ಭಾಷೆ ಕಲಿತು
ಮಾತನಾಡುತ್ತಾರೆ.

ಅಂಥವರಿಗೆ ನಿಜಕ್ಕೂ ‘ಯಾವ ತಾಯಿಯು ಪಡೆದ ಮಗಳಾದರೇನು ಕನ್ನಡಾಂಬೆಯ ಮಡಿಲ ಹೂವಾದೆ ನೀನು…’ (ಬಿಳಿಹೆಂಡ್ತಿ) ಎನ್ನಬಹುದು. ಹೆಂಡ್ತಿ ಆಗುವವರೆಗೂ ಮುಂದುವರಿಯದಿದ್ದರೂ ‘ನೀನೇ ನನ್ನ ಕಾವ್ಯಕನ್ನಿಕೆ ಓಡುವುದೇತಕೆ ಬಾರೇ ಸನಿಹಕೆ…’ (ಮಾಗಿಯ ಕನಸು) ಎನ್ನುವುದಕ್ಕೇನೂ ಅಡ್ಡಿಯಿಲ್ಲ. ಕನ್ನಡಪ್ರೀತಿ ತೋರಲಿಕ್ಕೆ ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ, ಮುನ್ನಡೆಯ ಕನ್ನಡದ ದಾರಿದೀವಿಗೆ ನೀಯೇ…’ (ಪೋಸ್ಟ್ ಮಾಸ್ಟರ್); ಒಳಗೊಳಗೇ ‘ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸೀ…’ (ಮಸಣದ ಹೂವು) ಎಂದು ಹಾಡಿದರೆ ಪ್ರೀತಿ ಬೆಚ್ಚಗಿರುತ್ತದೆ. ಯಾವ ಕಾರಣಕ್ಕೂ ಮುನಿಸು ಸಲ್ಲದು.

‘ಸೂರ್ಯಂಗೂ ಚಂದ್ರಂಗೂ ಬಂದರೆ ಮುನಿಸು ನಗತಾದ ಭೂತಾಯಿ ಮನಸು? ರಾಜಂಗು ರಾಣಿಗೂ ಮುರಿ ದ್ಹೋದ್ರೆ ಮನಸು ಅರಮನೆಯಾಗೇನೈತೆ ಸೊಗಸು?…’ (ಶುಭಮಂಗಳ); ‘ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ ಪ್ರೀತಿಯ ತೀರವ ಸೇರುವುದೊಂದೇ ಬಾಳಿನ ಗುರಿಯಮ್ಮ…’ (ಶುಭಮಂಗಳ) ಆಗಿದ್ದರೆ ಮುಂದೊಂದು ದಿನ ‘ಮಂಗಳದ ಈ ಸುದಿನ ಮಧುರವಾಗಲಿ ನಿಮ್ಮೊಲವೇ ಈ ಮನೆಯ ನಂದಾದೀ ಪವಾಗಲಿ…’ (ನಾ ಮೆಚ್ಚಿದ ಹುಡುಗ) ಉಜ್ವಲ ಸಾಧ್ಯತೆ!

ಮಂಗಳದ ಸುದಿನ ಆಗಿ ಮತ್ತೂ ಒಂದಿಷ್ಟು ತಿಂಗಳಾದ ಮೇಲೆ ‘ಲಾಲಿಸಿದಳು ಮಗನ ಯಶೋದೆ ಲಾಲಿಸಿದಳು ಮಗನ…’ (ದೇವರು ಕೊಟ್ಟ ತಂಗಿ); ಮಗು ದೊಡ್ಡವನಾಗಿ ಶಾಲೆಗೆ ಸೇರಿದ ಮೇಲೆ- ‘ನಿನ್ನೊಲುಮೆ ನಮಗಿರಲಿ ತಂದೆ ಕೈಹಿಡಿದು ನೀ ನಡೆಸು ಮುಂದೆ…’ (ನಮ್ಮ ಮಕ್ಕಳು); ನಿರೀಶ್ವರವಾದಿಯಾದರೆ ಅಥವಾ ಬದುಕಲ್ಲಿ ನಿರಾಸೆ ತುಂಬಿದರೆ ‘ದೇವಮಂದಿರದಲ್ಲಿ ದೇವರು ಕಾಣಲೇ ಇಲ್ಲ ನ್ಯಾಯಮಂದಿರದಲ್ಲಿ ನ್ಯಾಯವು ಸಿಗಲೇ ಇಲ್ಲ…’ (ಜಿಮ್ಮಿಗಲ್ಲು) ಎಂದು ದುಃಖಿಸುತ್ತ ಶಿವರಂಜಿನಿ ರಾಗದಲ್ಲೇ ಹಾಡಬೇಕಾದಿತು. ಭಗ್ನಪ್ರೇಮಿಯಾದರೆ ‘ಲವ್
ಎಂದರೇನು ಅದು ಹೇಗಿದೆ ಗೊತ್ತೇನು ಬಲ್ಲವರಿದ್ದರೆ ಸಿಗುವುದು ಎಲ್ಲಿ ಹೇಳುವಿರೇನು?…’ (ಫಲಿತಾಂಶ) ಎಂದು ಅವರಿವರನ್ನು ಕೇಳಬೇಕಾದೀತು.

ಅಷ್ಟುಹೊತ್ತಿಗೆ ಚೆಲುವೆಯೊಬ್ಬಳು ‘ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ, ಈ ಪತ್ರದಿ ಬರೆದ ಪದಗಳನು ಚುಂಬಿಸಿ ಕಳಿಸಿರುವೆ…’ (ನಾ ಮೆಚ್ಚಿದ ಹುಡುಗ) ಎಂದು ಒದಗಿಬಂದರೆ ಗ್ರೇಟ್! ಅವಳೂ ಒಂದುವೇಳೆ ಕೈಕೊಟ್ಟರೆ ‘ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು, ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು…’ (ಮಾನಸ ಸರೋವರ) ಇದ್ದೇಇದೆ. ಜಗವೇ ಒಂದು ನಾಟಕರಂಗ. ನಾವೆಲ್ಲ ‘ನಟನ ವಿಶಾರದ ನಟಶೇಖರ ಸಂಗೀತ ಸಾಹಿತ್ಯ ಗಂಗಾಧರ…’ (ಮಲಯಮಾರುತ) ಆಗಲೇಬೇಕು, ಆಯ್ಕೆಯಿಂದಲ್ಲ ಪರಿಸ್ಥಿತಿಯಿಂದ.

ಬಡತನ-ಸಿರಿತನಗಳಾವುದೂ ಶಾಶ್ವತವಲ್ಲ. ‘ರಂಗೇನ ಹಳ್ಳಿಯಾಗೆ ಬಂಗಾರ ಕಪ್ಪ ತೊಟ್ಟ ರಂಗಾದ ರಂಗೇಗೌಡ
ಮೆರೆದಿದ್ದ… ’ (ಬಿಳಿ ಹೆಂಡ್ತಿ) ಅಂದಮೇಲೆ ಯಾರು ಬೇಕಾದರೂ ಮೆರೆಯಬಹುದು. ನಂಬಿದವರನ್ನು ಮರೆಯ ಬಾರದು ಅಷ್ಟೇ. ‘ದೋಣಿಯೊಳಗೆ ನೀನು ಕರೆಯ ಮೇಲೆ ನಾನು, ಈ ಮನದ ಕರೆಯು ನಿನಗೆ ಕೇಳದೇನು…’ (ಉಯ್ಯಾಲೆ) ಎಂದು ಹೇಳಿಸಿಕೊಳ್ಳುವುದು ತರವಲ್ಲ. ‘ನಮಸ್ಕಾರ ಓ ಗೆಳೆಯ ಮನ ಸೆಳೆದ ಮಹಾರಾಯ ಹೇಳು ನೀನು ಕುಶಲವೇ ತನು ಮನ ಸೌಖ್ಯವೇ…’ (ಮನೆ ಬೆಳಗಿದ ಸೊಸೆ) ಉಭಯಕುಶಲೋಪರಿ ಆಗಾಗ ನಡೆಯುತ್ತಿರಬೇಕು.

‘ವಂದನೆ ಅಭಿನಂದನೆ ನನ್ನ ಪ್ರೇಮದ ಚಂದ್ರಮನೇ ಈ ಹೃದಯವ ಗುಡಿಯಾಗಿಸಿ ನಗುನಗುತಲಿ ನಿಂದವನೇ…’
(ಭೂಮಿತಾಯಾಣೆ) ಎಂದು ಖುಷಿಖುಷಿಯಾಗಿ ಇದ್ದರೆ ‘ನಲಿದಿದೆ ಜೀವನಗಂಗಾ ಬಾಳಿನ ಭಾವತರಂಗ ಒಲವೂ ನಲಿವೂ ಎಂಥ ಸಂಗಮ…’ (ಅದಲುಬದಲು) ಆಗುತ್ತದೆ. ಎಲ್ಲೋ ಒಬ್ಬಿಬ್ಬರು ‘ಮಲ್ನಾಡಿನ ಮೂಲೆನಾಗೇ ಇತ್ತೊಂದು ಸೋಮ್ನಹಳ್ಳಿ ಆ ಹಳ್ಳಿಯೆಲ್ಲ ಜನರು ಲೋಕನೇ ಗೊತ್ತಿಲ್ದೋರು ಅವರೊಳಗೆ ಮುದುಕಿ ಒಬ್ಳು ದವಲಿಂದ್ಲೇ ಮೆರೀತಿದ್ಲು ಅವಳಂತೂ ಬೋ ಘಾಟಿ ಜಂಬಗಾತಿ…’ (ಸುವರ್ಣಸೇತುವೆ) ಮಾದರಿಯವರು
ವಕ್ಕರಿಸಬಹುದು. ಅಂಥವರ ಒಡನಾಟದಲ್ಲಿ ಎಚ್ಚರ ಬೇಕು. ‘ತೂಕಡಿಸಿ ತೂಕಡಿಸಿ ಬೀಳದಿರೊ ತಮ್ಮ ನನ್ನ ತಮ್ಮ ಮಂಕುತಿಮ್ಮ, ತೂಕಡಿಸಿ ತೂಕಡಿಸಿ ಬಿದ್ದರು ನನ್ನಜ್ಜ ನಿನ್ನಜ್ಜ ಮುತ್ತಜ್ಜ…’ (ಪಡುವಾರಹಳ್ಳಿ ಪಾಂಡವರು); ಬದುಕು ಪಕ್ವವಾಗಿ ಅಧ್ಯಾತ್ಮ-ಭಕ್ತಿಯತ್ತ ಹೊರಳಿದರೆ ‘ಜಯತು ಜಯ ವಿಠಲ ನಿನ್ನ ನಾಮವು ಶಾಂತಿಧಾಮವು ಸೌಖ್ಯದಾರಾಮ…’ (ಸಂತ ತುಕಾರಾಮ್); ವೃದ್ಧಾಪ್ಯದಲ್ಲೂ ಪುಟ್ಟ ಮಗುವಿನಂಥ ಹೃದಯ -ಮನಸ್ಸುಗಳಿದ್ದರೆ ‘ಮುದ್ದಿನ ಗಿಣಿಯೆ ಬಾರೋ ಮುತ್ತನು ತರುವೆ ಬಾರೋ ಹೆಗಲನೇರಿ ಆಡಿ ಕುಣಿವ ಕೂಸುಮರಿ ಯಾರೋ…’ (ಬೆಳ್ಳಿಮೋಡ); ದುಶ್ಚಟಗಳ ದಾಸನಾದರೆ ‘ರಮ್ಮಿ ಇಲ್ಲದೆ ಶೋ ಇಲ್ಲ, ಶೋ ಇಲ್ಲದೆ ರಮ್ಮಿ ಇಲ್ಲ, ರಮ್ಮಿಗಾಗಿ ಶೋ
ಶೋಗಾಗಿ ರಮ್ಮಿ, ರಮ್ಮಿ ಶೋ ರಮ್ಮಿ ಶೋ ರಮ್ಮಿ ಮತ್ತು ಶೋ…’ (ನಮ್ಮಮ್ಮನ ಸೊಸೆ); ದಿವಾಳಿಯಾಗಿ ಸಂಸಾರ ಬೀದಿಪಾಲಾದರೆ ‘ಶ್ರೀ ತುಳಸಿ ದಯೆ ತೋರಮ್ಮ ಅಮ್ಮ ಶ್ರೀ ತುಳಸಿ ದಯ ತೋರಮ್ಮ ಅರಿಶಿನ ಕುಂಕುಮ ಸೌಭಾಗ್ಯ ನೀಡಿ ಚಿರಕಾಲ ಕಾಪಾಡಮ್ಮ…’ (ತುಳಸಿ); ಎಲ್ಲವೂ ಚೆನ್ನಾಗಿ ನಡೆದರೆ ‘ಮಲಯಮಾರುತ ಗಾನ ಈ ಪ್ರಣಯಜೀವನ ಯಾನ ಮಧುರ ತಾನ ಸುಖಸೋಪಾನ ಸಂಗೀತನಾಟ್ಯದ ಮಿಲನ…’ (ಮಲಯಮಾರುತ); ಜೀವನದಲ್ಲಿ ನಯ ವಂಚಕರು ಅನಾವರಣಗೊಂಡರೆ ಮಾತ್ರ ‘ನೀನೇ ಸಾಕಿದ ಗಿಳಿ ನಿನ್ನ ಮುದ್ದಿನ ಗಿಳಿ ಹದ್ದಾಗಿ ಕುಕ್ಕಿತಲ್ಲೋ ನಿನ್ನ ಹದ್ದಾಗಿ ಕುಕ್ಕಿತಲ್ಲೋ’ (ಮಾನಸ ಸರೋವರ).

ಮತ್ತೊಮ್ಮೆ ಹೇಳುತ್ತಿದ್ದೇನೆ, ಇಲ್ಲಿ ನಮೂದಿಸಿರುವ ಹಾಡುಗಳತ್ತ ಮಾತ್ರ ನಿಮ್ಮ ವಿಶೇಷ ಗಮನವಿರಲಿ. ಈ ರನ್ನಿಂಗ್
ಕಾಮೆಂಟರಿ ಸುಮ್ನೆ ಹೂವಿನ ಜತೆ ನಾರಿನಂತೆ ಅಷ್ಟೇ. ಮುಂದಿನ ಗೀತೆಯಲ್ಲಿ ಲವ್ ಎಂದರೇನು ಎಂಬ ಪ್ರಶ್ನೆಗೆ ಉತ್ತರ: ‘ಲವ್ ಎಂದರೆ ಯಾರೂ ಬಿಡಿಸದ ಬಂಧನ ಎಂದೂ ನಿಲ್ಲದ ಸ್ಪಂದನ ಎಂದೂ ಮರೆಯದ ಮಧುರಗಾನ…’ (ಫಲಿತಾಂಶ); ಅದನ್ನು ಕಂಡುಕೊಂಡ ಮೇಲೆ ‘ನಡೆ ನಡೆ ನಡೆ ನಡೆ ನಡೆ ಮನವೇ ನವಜೀವನದ ಕಡೆಗೇ ನಮ್ಮಯ ಜತೆಯಲೆ ನಡೆ ಜಗವೇ ನವಸಾಧನೆಯ ಕಡೆಗೇ…’ (ಹೃದಯ ಸಂಗಮ); ಒಬ್ಬಂಟಿಯಾಗಿ ನಡೆಯಬೇಕೆಂದೇನಿಲ್ಲ, ‘ಗೆಳತಿ ಓ ಗೆಳತಿ ಅಪ್ಪಿಕೋ ಎನ್ನ ಅಪ್ಪಿಕೋ ಬಾಳೆಲ್ಲ ಎನ್ನ ತಬ್ಬಿಕೋ…’ (ಧರಣಿ ಮಂಡಲ ಮಧ್ಯದೊಳಗೆ) ಎಂದು ಜತೆಜತೆಯಲಿ ನಡೆಯಬಹುದು.

ಅಷ್ಟಿಷ್ಟು ರಸಿಕತೆ ಇದ್ದರೆ ಸಮರ್ಥಿಸಬಹುದು: ‘ಕಾಳಿದಾಸನ ಕಾವ್ಯಲಹರಿಗೆ ಕಾರಣ ಹೆಣ್ಣಿನ ಅಂದ, ಉಮರ್ ಖಯಾಮನ ಕಾವ್ಯದ ನಿಶೆಗೆ ಕಾರಣ ಹೆಣ್ಣಿನ ಆನಂದ…’ (ಕಥಾಸಂಗಮ). ಬದುಕಿನ ಟಾರ್ಚ್‌ಲೈಟ್‌ನಲ್ಲಿ ಪವರ್-ಲ್ ಬ್ಯಾಟ್ರಿ ಬೇಕು, ಇಲ್ಲದಿದ್ದರೆ ‘ದಾರಿ ಕಾಣದಾಗಿದೆ ರಾಘವೇಂದ್ರನೇ, ಬೆಳಕ ತೋರಿ ನಡೆಸು ಬಾ ಯೋಗಿವರ್ಯನೇ…’ (ದೀಪ); ಗುರುರಾಯರು ಕೈಬಿಡುವುದಿಲ್ಲ, ಹರಸುತ್ತಾರೆ, ‘ನಾನೇ ರಾಜಕುಮಾರ ಕನ್ನಡ ತಾಯಿಯ ಪ್ರೇಮದ ಕುವರ ಅನೀತಿ ಅಳಿಸಿ ನ್ಯಾಯವ ಉಳಿಸಿ ಶಾಂತಿಯ ನಿಲಿಸಲು ಬಂದ ಕಿಶೋರ…’ (ಭಾಗ್ಯದ ಬಾಗಿಲು) ಅತ್ಯುತ್ತಮ ನಿದರ್ಶನ. ಕಷ್ಟಗಳು ಮಂಜಿನಂತೆ ಕರಗಿ ‘ರಾತ್ರಿಯು ಸುರಿಸಿದ ಕಂಬನಿಯು ಇಬ್ಬನಿಯೆನಿಸಿತು ಹಗಲಾದೊಡನೆ…’
(ಶ್ರಾವಣ ಸಂಭ್ರಮ) ಆಗುತ್ತದೆ. ‘ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ ಈ ಅಗಲಿಕೆ ಇನ್ನೇತಕೆ…’
(ಆನಂದಕಂದ) ಎಂದು ಕೊರಗಬೇಕಿಲ್ಲ.

ಪ್ರಕೃತಿಯನ್ನು, ಗಿಡ-ಮರ ನದಿ-ಕೆರೆ-ಬೆಟ್ಟಗಳನ್ನೂ ಪ್ರೀತಿಸುವವರಿಗೆ ‘ಕಾವೇರಿ ಕೊಡಗಿನ ಕಾವೇರಿ ಕಾವೇರಿ ನೀ ಬೆಡಗಿನ ವೈಯಾರಿ ಕನ್ನಡ ಕುಲನಾರಿ ಕಾವೇರಿ ನೀ ಒಲವಿನ ಸಿಂಗಾರಿ….’ (ಶರಪಂಜರ); ಬದುಕಿನ ಅಂತಃಸತ್ತ್ವ ವೆಲ್ಲವೂ ದೇವನಿಂದಲೇ ಎಂದು ನಂಬುವವರಿಗೆ ‘ರಾಮನಾಮ ಸಿಹಿಯ ಜೇನು ಕೃಷ್ಣನಾಮ ಸಿರಿಯ ಹೊನ್ನು…’ (ಅಖಂಡ ಬ್ರಹ್ಮಚಾರಿಗಳು); ಚಿತ್ರಗೀತೆ ಸಾಲನ್ನು ತಮಾಷೆಗೂ ತರಲೆಗೂ ತತ್ತ್ವಜ್ಞಾನಕ್ಕೂ ವಿಸ್ತರಿಸುವು ದೆಂದರೆ ಹೀಗೆಯೇ. ‘ನಂಜನಗೂಡಿಂದ ನಂಜುಂಡ ಬರುತಾನೆ ನೋಡೇ ಅಮ್ಮಯ್ಯ ನೋಡೇ ಅಮ್ಮಯ್ಯ…’ (ನಂದಗೋಕುಲ) ಎಂದು ಹರ್ಷಕ್ಕೂ, ‘ಯೌವನದ ಹೊಳೆಯಲ್ಲಿ ಈಜಾಟ ಆಡಿದರೆ ಓ ಹೆಣ್ಣೇ ಸೋಲು ನಿನಗೇ ಸೋಲು ನಿನಗೇ…’ (ಸಂಘರ್ಷ) ಎಂದು ಹಿತೋಪದೇಶಕ್ಕೂ, ‘ಗುಡಿ ಸೇರದ ಮುಡಿ ಏರದ ಕಡೆಗಾಣಿಸೊ ಹೂವಲ್ಲ…’ (ಭಾಗ್ಯಜ್ಯೋತಿ) ಎಂದು ಹೂವಿನೊಡನೆ ಹೋಲಿಕೆಗೂ ಒದಗಿಬರುತ್ತದೆ. ಜತೆಯಲ್ಲೇ ಒಂದಿಷ್ಟು ಹಾಸ್ಯ, ಚೆಲ್ಲಾಟ: ‘ಲವ್ ಲವ್ ಲವ್ ಎಂದರೇನು ಒಲವು ಕನ್ನಡದೊಲವೇ ಎಂಬೆ ನಾನು…’ (ಮನ ಮೆಚ್ಚಿದ ಮಡದಿ); ಎಲ್ಲದಕ್ಕೂ ಭದ್ರ ತಳಪಾಯ ವಾಗಿ, ‘ನೀತಿವಂತ ಬಾಳಲೇಬೇಕು ಸತ್ಯವೆಂದೂ ಉಳಿಯಲೇ ಬೇಕು…’ (ಬಾಳು ಬೆಳಗಿತು).


2024ರ ಇಸವಿ ವಿಜಯಭಾಸ್ಕರ್ (1924-2002) ಅವರ ಜನ್ಮಶತಮಾನೋತ್ಸವ. ಬದುಕಿದ್ದಿದ್ದರೆ ಭರ್ತಿ ನೂರು
ವರ್ಷ ದವರಾಗುತ್ತಿದ್ದರು. ರಸಸಿದ್ಧರು ದೈಹಿಕವಾಗಿ ಇಹಲೋಕ ತೊರೆದಿದ್ದರೂ ಅವರ ಕಲಾಕೃತಿಗಳಿಂದ ಅಜರಾಮರರಾಗಿರುತ್ತಾರೆ ಎನ್ನುತ್ತದೆ ಒಂದು ಸಂಸ್ಕೃತ ಶ್ಲೋಕ. ವಿಜಯಭಾಸ್ಕರ್ ಅದೇ ಮೇಲ್ಪಂಕ್ತಿಯವರು. ಅವರ ಸಂಗೀತರಸಧಾರೆಯಲ್ಲಿ ಮಿಂದೆದ್ದ ಅಭಿಮಾನಿಗಳು ಈವರ್ಷ ಜನ್ಮಶತಮಾನೋತ್ಸವವನ್ನು ಅರ್ಥ ಪೂರ್ಣ ವಾಗಿ ಆಚರಿಸುತ್ತಿದ್ದಾರೆ. ಇಂದು (ರವಿವಾರ, ಅಕ್ಟೋಬರ್ ೨೦) ಬೆಂಗಳೂರಿನಲ್ಲಿ ಅಂಥದೊಂದು ಕಾರ್ಯಕ್ರಮ ಏರ್ಪಾಡಾಗಿದೆಯಂತೆ, ವಿಜಯಭಾಸ್ಕರ್ ಅವರ ಸುಪುತ್ರಿಯರ ಮುಂದಾಳತ್ವದಲ್ಲಿ. ಕಾರ್ಯಕ್ರಮದ ಭಾಗವಾಗಿ- ಚಿತ್ರರಂಗಕ್ಕೆ ವಿಜಯಭಾಸ್ಕರ್ ಅವರ ಕೊಡುಗೆಗಳು- ಎಂಬ ಗೋಷ್ಠಿಯಲ್ಲಿ ನನ್ನ ಸೋದರಮಾವ, ಕನ್ನಡ ಮತ್ತು ಹಿಂದಿ ಚಿತ್ರಸಂಗೀತದ ಸ್ವಾರಸ್ಯಕರ ಮಾಹಿತಿಗಳ ಅದ್ಭುತ ಸಂಗ್ರಹಕಾರ, ಚಿದಂಬರ ಕಾಕತ್ಕರ್ ಭಾಗವಹಿಸುತ್ತಿದ್ದಾರೆ.

ಮತ್ತೊಬ್ಬ ಅಂಥದೇ ಪ್ರಕಾಂಡ ಸಂಗ್ರಹಕಾರ ಎನ್.ಎಸ್.ಶ್ರೀಧರಮೂರ್ತಿಯವರೂ ಈ ಉತ್ಸವದಲ್ಲಿ ಸಕ್ರಿಯ ಪಾಲುದಾರರೆಂದು ಕಾಣುತ್ತದೆ. ಬೆಂಗಳೂರಲ್ಲಿರುತ್ತಿದ್ದರೆ ಪ್ರೇಕ್ಷಕನಾಗಿ ಭಾಗವಹಿಸುವ ಉಮೇದು ನನಗೂ ಖಂಡಿತ ಇರುತ್ತಿತ್ತು. ಬದಲಿಗೆ ಇಂದಿನ ಅಂಕಣದಲ್ಲಿ ನನ್ನದೇ ಆದ ವಿಭಿನ್ನ (ವಿಚಿತ್ರ ಎಂದು ಓದಿಕೊಳ್ಳಿ) ವಿಜಯ ಭಾಸ್ಕರ್ ಸ್ಮರಣೆ ಮಾಡಿದ್ದೇನೆ. ಅವರ ಸಂಗೀತಸಿಂಧುವಿನಿಂದ ಒಂದಿಷ್ಟು ಬಿಂದುಗಳನ್ನು ಎತ್ತಿದ್ದೇನೆ. ಲೆಕ್ಕ ಮಾಡಿದರೆ ಬರೋಬ್ಬರಿ 56 ಗೀತೆಗಳ ಉಲ್ಲೇಖ ಬಂದಿದೆ!

ಈಗ ನಿಮಗೊಂದು ಆಸಕ್ತಿಕರ ಚಟುವಟಿಕೆ. ಇಲ್ಲಿರುವ 56 ಗೀತೆಗಳನ್ನು ಯಾವ ರೀತಿಯಲ್ಲಿ ಪೋಣಿಸಲಾಗಿದೆ ಎಂದು ನೀವು ಕಂಡುಕೊಳ್ಳಬೇಕು. ಬೇಕಿದ್ದರೆ ಈ ಲೇಖನದಲ್ಲಿ ಮೊದಲಿಂದ ಉದ್ಧರಣ ಚಿಹ್ನೆಯೊಳಗಿನ ಸಾಮಗ್ರಿಯನ್ನಷ್ಟೇ ಇನ್ನೊಮ್ಮೆ ಓದಿ ಅಥವಾ ಕಣ್ಣಾಡಿಸಿ. ಆಮೇಲೆ ನೀವು ಮಾಡಬೇಕಾದ್ದು, ಹೂಮಾಲೆ (ಗೀತಮಾಲೆ)ಗೆ ಕನಿಷ್ಠ ಒಂದು ಹೂವನ್ನು ನೀವೂ ಸೇರಿಸಬೇಕು. ಸದ್ಯಕ್ಕೆ ಮಾಲೆಯಲ್ಲಿ ಕೊನೆಯ ಚಿತ್ರಗೀತೆಯ
ಸಾಲು ‘ಕ’ ಅಕ್ಷರದಿಂದ ಕೊನೆಗೊಂಡಿದೆ. ಅಂದರೆ, ನೀವು ‘ಕ’ ಬಳ್ಳಿಯಿಂದ ಆರಂಭವಾಗುವ, ವಿಜಯಭಾಸ್ಕರ್ ಅವರದೇ ಸಂಗೀತ ನಿರ್ದೇಶನವುಳ್ಳ ಕನ್ನಡ ಚಿತ್ರಗೀತೆಯ ಪಲ್ಲವಿಯನ್ನು ಸೇರಿಸಬೇಕು.

ಮಾಲೆಯಲ್ಲಿ ಈಗಾಗಲೇ ಪೋಣಿಸಿರುವ ಹೂವನ್ನು ಕೀಳಬೇಡಿ. ‘ಕ’ ದಿಂದ ಆರಂಭವಾಗುವ, ವಿಜಯ ಭಾಸ್ಕರ್ ಅವರದೇ ಸಂಗೀತ ನಿರ್ದೇಶನದ ಇನ್ನೂ ಆರು ಗೀತೆಗಳು ನನಗೆ ಗೊತ್ತಿವೆ. ಬೇಕಿದ್ದರೆ ಚಿತ್ರಗಳ ಹೆಸರನ್ನಷ್ಟೇ ಬರೆಯುತ್ತೇನೆ: ಎಲ್ಲಿಂದಲೋ ಬಂದವರು, ಬಾಳು ಬೆಳಗಿತು, ಭಲೇ ಅದೃಷ್ಟವೋ ಅದೃಷ್ಟ, ಭಾಗ್ಯಜ್ಯೋತಿ, ದೀಪ ಮತ್ತು ನಾಗರಹಾವು. ಇವಲ್ಲದೆ ನಿಮಗೆ ಬೇರೆಯೇ ಹಾಡು ನೆನಪಾದರೆ ಮತ್ತೂ ಒಳ್ಳೆಯದೇ. ಎಲ್ಲೆಲ್ಲು ಸಂಗೀತವೇ ಎನ್ನುತ್ತ ಒಂದು ಪ್ರಯತ್ನ ಮಾಡಿ. ವಿಜಯಭಾಸ್ಕರ್ ಸಂಸ್ಮರಣೆ ನಿಮ್ಮಿಂದಲೂ ಆಗಲಿ!

ಇದನ್ನೂ ಓದಿ: Srivathsa joshi Column: ಆಕಳಿಕೆಯೆಂದರೆ ಬಾಯ್ತೆರೆದು ತಿಳಿಸಿದ ಪ್ರಾಮಾಣಿಕ ಅಭಿಪ್ರಾಯ