ಸತ್ವಪರೀಕ್ಷೆ
ಟಿ.ದೇವಿದಾಸ್
ಪರೀಕ್ಷೆಯಲ್ಲಿ ಉತ್ತರ ಬರೆಯುವುದೊಂದೇ ಕಲಿಕೆಯ ಉದ್ದೇಶ ಅಲ್ಲದಿದ್ದರೂ ಉತ್ತರ ಬರೆಯುವುದು ಕೂಡ ಒಂದು ಉದ್ದೇಶವೇ ಆಗಿದೆ. ಪರೀಕ್ಷೆಯಲ್ಲಿ ಉತ್ತರ ಬರೆಯುವುದಕ್ಕಾಗಿಯೇ ಶಾಲೆಗೆ ಹೋಗುವುದು ಎಂಬುದು ಸಾರ್ವತ್ರಿಕ ನಿಲುವಾಗಿ ಒಪ್ಪಿತವಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನು ಇರುವುದು ೧೩ ದಿನಗಳು ಮಾತ್ರ. ಈ ಹೊತ್ತಲ್ಲಿ ನಡೆಸುವ ಸಿದ್ಧತೆಗಳು ಅತಿ ಮಹತ್ವದ್ದು. ಸಹಜವಾದ ಸಿದ್ಧತೆಗಳನ್ನು ಸರಿಯಾಗಿ ನಡೆಸಿದರೆ ಹತ್ತರಿಂದ ಹದಿನೈದು ಅಂಕಗಳನ್ನು ಗಳಿಸಬಹುದು ಎಂಬುದು ಅನುಭವಜನ್ಯ ಮಾತು. ಯಾವುದೇ ಸಿದ್ಧತೆಯ ಮೊದಲ
ಮತ್ತು ಮೂಲಭೂತ ಅಗತ್ಯವೂ ಅನಿವಾರ್ಯವೂ ಎಂದರೆ ಆತ್ಮವಿಶ್ವಾಸ. ಈ ಆತ್ಮವಿಶ್ವಾಸ ಎಂಬುದು ಒಳಮನಸ್ಸಿಗೆ ದಕ್ಕುವಂಥದ್ದು. ನೆಗೆಟಿವ್ ಆದ ಆಲೋಚನೆಗಳು ಆತ್ಮವಿಶ್ವಾಸವನ್ನು ಸಾಯಿಸುತ್ತವೆ. ಅದು ಹೇಗೆಂದರೆ, ಇರುವ ಹದಿಮೂರು ದಿನಗಳಲ್ಲಿ ಎಲ್ಲವನ್ನೂ ಓದಲು ನನ್ನಿಂದ ಆಗುತ್ತದಾ, ಓದಿದ್ದೆ ಲ್ಲವೂ ನೆನಪಿರುತ್ತದಾ, ಎಷ್ಟೆಲ್ಲ ಓದುವುದು ಬಾಕಿಯಿದೆ, ನನ್ನಿಂದ ಇದು ಸಾಧ್ಯನಾ, ಅಂದುಕೊಂಡಷ್ಟು ಅಂಕಗಳನ್ನು ನಾನು ಪಡೆಯ ಬಲ್ಲೆನೆ…ಹೀಗೆ ನೆಗೆಟಿವ್ ಆಲೋಚನೆಗಳು ಬರುವುದೂ ಸಹಜ; ಕೊನೆಗೆ ಅಂಥ ಆಲೋಚನೆಗಳೇ ಇರುವ ಅಲ್ಪಸ್ವಲ್ಪದ ಆತ್ಮವಿಶ್ವಾಸವನ್ನು ಸಾಯಿಸು ವುದೂ ಸಹಜವೇ ಆಗಿರುತ್ತದೆ ಮನುಷ್ಯರ ಮನಸ್ಸಿನ ಒಳಗೊಳಗೇ ಹುಟ್ಟಿಕೊಳ್ಳುವ ಈ ನೆಗೆಟಿವಿಟಿ ಎಂಬುದು ಸಾಧನೆಗೆ ಮೊದಲ ಶತ್ರುವಾಗಿದೆ ಎಂಬುದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ.
ಇರುವಷ್ಟೂ ದಿನಗಳಲ್ಲಿ ಎಲ್ಲ ವಿಷಯಗಳಿಗೂ ಕ್ರಮಬದ್ಧತೆ ಮತ್ತು ಕ್ರಮವಿಧಾನದಿಂದ ಪರೀಕ್ಷೆಗೆ ಸರಿಯಾಗಿ ಸಿದ್ಧತೆ ಮಾಡಿಕೊಳ್ಳುತ್ತೇನೆ ಎಂದು ಗಟ್ಟಿಯಾಗಿ ನಿರ್ಧರಿಸುವುದು ಮತ್ತು ಅಂತೆಯೇ ಅನುಸರಿಸುವುದು ಆತ್ಮವಿಶ್ವಾಸದ ವೃದ್ಧಿಗೆ ತೀರಾ ಅನಿವಾರ್ಯವೂ ಅಗತ್ಯವೂ ಆಗಿರುತ್ತದೆ. ಈ ನಿರ್ಧಾರಕ್ಕೆ ಬದ್ಧರಾಗಿ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಇರುವ ದಿನ ಗಳಲ್ಲಿ ಎಷ್ಟು ಸಮಯವನ್ನು ಓದುವುದಕ್ಕೆ (ಬರೆಯುವುದೂ ಸೇರಿ) ಹೊಂದಿಸು ತ್ತೀರಿ ಎಂಬುದನ್ನು ಅಂದಾಜಿಸಿ ಎಲ್ಲ ವಿಷಯಗಳಿಗೂ ಆದ್ಯತೆಯನ್ನು ಕ್ರಮವಾಗಿ ನೀಡುತ್ತ ಒಂದು ಟೈಂ ಟೇಬಲ್ಲನ್ನು ಮಾಡಿಕೊಳ್ಳುವುದು. ಇಷ್ಟೊತ್ತಿ ಗಾಗಲೇ ಮಾಡಿಕೊಳ್ಳಬೇಕಿತ್ತು. ಮಾಡಿಕೊಂಡಿದ್ದರೆ ಅದನ್ನೇ ಮುಂದುವರಿಸಬಹುದು.
ಆದ್ಯತೆಯ ಮೇಲೆ ಬದಲಾಯಿಸಿಕೊಳ್ಳಬಹುದು. ಏನೇ ಇದ್ದರೂ ಟೈಂ ಟೇಬಲ್ಲನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಈ ಸಂದರ್ಭದಲ್ಲಿ ಅತಿ ಮುಖ್ಯ.
ಈಗಾಗಲೇ ನಡೆಸಲಾದ ರಾಜ್ಯಮಟ್ಟದ (ಬೋರ್ಡಿನವರು ನಡೆಸಿದ್ದು) ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಸೂಕ್ಷ್ಮವಾಗಿ ಪುನಃ ಅವಲೋಕಿ ಸುವುದು. ಪ್ರಶ್ನೆಗಳ ಮಾದರಿಯನ್ನು ನೀಲಿನಕ್ಷೆಯ ಪ್ರಕಾರ ಅರ್ಥೈಸಿಕೊಳ್ಳುವುದು. ಪ್ರಶ್ನೆಗಳ ರಚನಾ ಸ್ವರೂಪವನ್ನು ಅರಿತುಕೊಳ್ಳುವುದು. ಅದೇ ಪ್ರಕಾರವಾಗಿ ಪ್ರತಿ ಪಾಠದಲ್ಲೂ ಪ್ರಶ್ನೆಗಳನ್ನು ಸ್ವ ಸಿದ್ಧಪಡಿಸಿಕೊಳ್ಳುತ್ತ ಅಧ್ಯಯನವನ್ನು ಮಾಡುವುದು ತೀರಾ ಅಗತ್ಯ ವಾದುದು.
ವಿದ್ಯಾರ್ಥಿಗಳು ಎಚ್ಚರದಿಂದ ನೆನಪಿಡಬೇಕಾದ ಸಂಗತಿಯೇನೆಂದರೆ, ಎಷ್ಟೇ ಪ್ರಶ್ನೆಪತ್ರಿಕೆಗಳನ್ನು, ಪ್ರಶ್ನೆಕೋಠಿಯನ್ನು, ಗೈಡುಗಳನ್ನು, ಸ್ಟಡಿ ಮಟೀರಿ ಯಲ್ಲುಗಳನ್ನು ಅವಲೋಕನ ಮಾಡಿದರೂ, ಅಭ್ಯಾಸ ಮಾಡಿದರೂ ಇವು ಗಳಲ್ಲಿ ಲಭ್ಯವಿಲ್ಲದ ಯಾವುದೋ ಪ್ರಶ್ನೆಯನ್ನು ಕೇಳಲು ಸಾಧ್ಯವಿದೆ. ಮತ್ತು ಪಠ್ಯಪುಸ್ತಕವನ್ನು ಆಧಾರವಾಗಿಟ್ಟು ಕೊಂಡೇ ಕೇಳಲಾಗುತ್ತದೆ. ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಗೈಡುಗಳು, ಸ್ಟಡಿ ಮಟೀರಿಯಲ್ಲುಗಳು ಉತ್ತರದಾಯಿಯಲ್ಲ. ಪಠ್ಯಪುಸ್ತಕವೇ ಎಲ್ಲದಕ್ಕೂ ಉತ್ತರ ದಾಯಿ ಎಂಬುದನ್ನು ಮರೆಯಬಾರದು. ಶಿಕ್ಷಕರಿಗೂ ಇದು ಅರಿವಿರಬೇಕು. ವಿದ್ಯಾರ್ಥಿಗಳಿಗೂ ಅರಿವಿರಬೇಕು. ಅರಿವಿಲ್ಲದಿದ್ದರೆ ಶಿಕ್ಷಕರು ಅವರಲ್ಲಿ ಅಂಥ ಅರಿವು ಮೂಡಿಸಬೇಕು.
ಆದ್ದರಿಂದ ಪಠ್ಯಪುಸ್ತಕವನ್ನು ಅತ್ಯಂತ ಸೂಕ್ಷ್ಮವಾಗಿ ಓದುವ, ಓದಿಸುವ ಜವಾಬ್ದಾರಿ ಶಿಕ್ಷಕರದ್ದು. ಪೋಷಕರದ್ದೂ ಅಹುದು.. ನೆನಪಿಡಬೇಕಾದ ಸಂಗತಿಯೇನೆಂದರೆ, ಪರೀಕ್ಷೆಯ ಕುರಿತಾದ ಒಂದು ಮಟ್ಟದ ಒತ್ತಡ ಇರಲೇಬೇಕು. ಅಂದಾಗ ಮಾತ್ರ ಓದು ಸರಿದಾರಿಯಲ್ಲಿರುತ್ತದೆ. ಒತ್ತಡದಿಂದ ಉಂಟಾ
ಗುವ ಭಯವೂ ಅನಿವಾರ್ಯವೆಂದೇ ನಾನು ಅಭಿಪ್ರಾಯ ಪಡುತ್ತೇನೆ. ಆದರೆ ಯಾವ ಸಂದರ್ಭದಲ್ಲೂ ಒತ್ತಡ ಮತ್ತು ಭಯ ಮಿತಿಮೀರಬಾರದು. ಮಿತಿ ಮೀರದಂತೆ ನಿಭಾಯಿ ಸುವ ಕಲೆಯನ್ನು ಶಿಕ್ಷಕರು, ಪೋಷಕರು ಕಲಿಸಬೇಕು. ತರಗತಿಯಲ್ಲಿ ಐದು ವರ್ಷಗಳ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಶಿಕ್ಷಕರು ಸಮಗ್ರವಾಗಿ ಅವಲೋಕಿಸಬೇಕು. ಪುನರಾವರ್ತನೆ ಮಾಡಬೇಕು. ಅವುಗಳಲ್ಲಿ ಕೇಳಲಾದ ಪ್ರಶ್ನೆಗಳ ಸ್ವರೂಪವನ್ನು ಮನವರಿಕೆ ಮಾಡಿಕೊಟ್ಟರೆ ಪ್ರತಿ ವಿಷಯಗಳ ಪ್ರತಿಪಾಠದಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ಮಕ್ಕಳೊಂದಿಗೆ ಸೇರಿಕೊಂಡು ಊಹಿಸಲು ಸಾಧ್ಯವಿದೆ.
ಇಲ್ಲಿಯೂ ಪಠ್ಯಪುಸ್ತಕವನ್ನು ಎಲ್ಲ ದೃಷ್ಟಿಕೋನದಿಂದಲೂ ಸಮರ್ಪಕವಾಗಿ ಅಭ್ಯಾಸ ಮಾಡಿಸುವುದು, ಮಾಡಿಕೊಳ್ಳುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದೆಲ್ಲ ಪ್ರಕ್ರಿಯೆಗಳು ಈಗಾಗಲೇ ಆಗಬೇಕಿತ್ತು. ಕೊನೆಯ ಪಕ್ಷ ಈಗಲಾದರೂ ಮಾಡಿಕೊಳ್ಳಬೇಕು. ಈ ಹೊತ್ತಿನಲ್ಲಿ ಎಲ್ಲ ವಿಷಯಗಳನ್ನು ಒಟ್ಟಿಗೇ ತಂದು ಅಭ್ಯಾಸಕ್ಕೆ ಹರಡಿಕೊಳ್ಳಬಾರದು. ಓದಾಗಿಲ್ಲ ಎಂದು ಅವಸರಕ್ಕೆ ಬಿದ್ದು ಓದುವುದು ಖಂಡಿತ ಒಳ್ಳೆಯದಲ್ಲ. ಅವಸರವೇ ಅವಘಡ ವನ್ನು ಹುಟ್ಟಿಸುತ್ತದೆ. ಆದರೆ, ಯಾವುದು ಅರ್ಥವಾಗಿಲ್ಲ ಎಂಬುದನ್ನು ಸ್ಪಷ್ಟಮಾಡಿಕೊಂಡು ಶಿಕ್ಷಕರಲ್ಲಿ ಹೇಳಿಸಿಕೊಳ್ಳಬೇಕು. ಯಾವ ಪಾಠಾಂಶ ವನ್ನೂ ಬಿಡಬಾರದು.
ಎಲ್ಲ ವಿಷಯಗಳ ಪ್ರಶ್ನೆಪತ್ರಿಕೆಯ ಸ್ವರೂಪವನ್ನು ಈ ಸನ್ನಿವೇಶದಲ್ಲಿ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರಬೇಕು. ಓದುವಾಗ ಈ ಪಾಠಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಪ್ರಶ್ನೆಗಳೆಲ್ಲ ಬರಬಹುದು, ಯಾವ ರೀತಿಯಲ್ಲಿ ಉತ್ತರವನ್ನು ಬರೆಯಬೇಕಾಗುತ್ತದೆ ಎಂಬುದನ್ನು ಮನದಟ್ಟು
ಮಾಡಿಕೊಳ್ಳುತ್ತ ಓದಬೇಕು. ಆರಂಭದಿಂದಲೇ ಪ್ರತಿ ಪಾಠದ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತ ಬರಬೇಕು. ಮಾಡಿಕೊಳ್ಳದೇ ಇದ್ದರೆ ಈ ಹಂತದಲ್ಲಾ ದರೂ ಪ್ರತಿ ಪಾಠದ ವಿಚಾರಗಳನ್ನು ಟಿಪ್ಪಣಿಗಳಾಗಿ ಮಾಡಿಕೊಂಡಲ್ಲಿ, ಪರೀಕ್ಷೆಯ ಹಿಂದಿನ ದಿನದ ಓದಿಗೆ ತುಂಬಾ ಅನುಕೂಲವಾಗುತ್ತದೆ.
ಗಣಿತದ ಸಮಸ್ಯೆಗಳನ್ನು ಹೆಚ್ಚೆಚ್ಚು ಬಿಡಿಸಿದಷ್ಟೂ ಗಣಿತ ಸುಲಭ. ಗಣಿತ ಕಲಿಯುವುದಕ್ಕೆ ಇದೊಂದೇ ಮಾರ್ಗವಿರುವುದು ಜಗತ್ತಿನಲ್ಲಿ! ಸೂತ್ರಗಳನ್ನು, ನಿಯಮಗಳನ್ನು, ಮಗ್ಗಿಗಳನ್ನು, ಪದ್ಯಗಳನ್ನು, ಹೇಳಿಕೆಗಳನ್ನು, ಸಿದ್ಧಾಂತಗಳನ್ನು, ವ್ಯಕ್ತಿ ಕಾಲ ಸ್ಥಳವನ್ನು ಬಾಯಿಪಾಠ ಮಾಡಲೇಬೇಕು. ಆಯಾ
ಪ್ರಶ್ನೆಗಳಿಗೆ ಉತ್ತರಿಸುವ ಕ್ರಮವನ್ನು ಸರಿಯಾಗಿ ನೆನಪಿಟ್ಟು ಕೊಳ್ಳುವುದಕ್ಕೆ ಅವಶ್ಯವಾಗಿ ಪ್ರಶ್ನೆಪತ್ರಿಕೆಗಳ ಸ್ವರೂಪವನ್ನು ಆಧರಿಸಿ ಉತ್ತರಗಳನ್ನು ಬರೆಯುವುದನ್ನು ಪ್ರಾಕ್ಟೀಸ್ ಮಾಡುವುದು ತೀರಾ ಅನಿವಾರ್ಯವೂ ಅಗತ್ಯವೂ ಆದುದಾಗಿದೆ.
ಪರೀಕ್ಷೆಯ ಕುರಿತಾಗಿ ಯಾವುದೇ ರೀತಿಯ ಬಾಹ್ಯ ಭಯ ವನ್ನು ಹುಟ್ಟಿಸಬಾರದೆಂಬ ಪ್ರe ಎಲ್ಲರಿಗೂ ಇರಬೇಕಾಗುತ್ತದೆ. ಧೈರ್ಯವನ್ನು ತುಂಬುವು ದರಿಂದ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಧೈರ್ಯದಿಂದ ಪರೀಕ್ಷೆಯನ್ನು ಬರೆಯುವಂತೆ ಹುರಿದುಂಬಿಸುವ ಕೆಲಸ ಮನೆಯಲ್ಲಿಯೂ ಶಾಲೆ
ಯಲ್ಲಿಯೂ ಆಗಬೇಕು. ಅದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಈ ಹಂತದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಅತಿ ಅಗತ್ಯವಾದ ಸಿದ್ಧತೆಯಾಗಿದೆ. ತಮ್ಮೊಂದಿಗೆ ಹೆತ್ತವರು ಮತ್ತು ಶಿಕ್ಷಕರು ಇದ್ದಾರೆ ಎಂಬ ಭಾವವೇ ಮಕ್ಕಳಲ್ಲಿರುವ ಆತ್ಮ ವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ.
(ಲೇಖಕರು ಹಿರಿಯ ಪತ್ರಕರ್ತರು)