Tuesday, 10th September 2024

ಸ್ಥಿರ ಸರಕಾರ, ಬಲಿಷ್ಠ ವಿರೋಧ ಪಕ್ಷಗಳ ಸಮತೋಲನ !

ಸಂಗತ

ಡಾ.ವಿಜಯ್ ದರಡಾ

ಮತದಾರರು ತಮ್ಮ ನಿಜವಾದ ಭಾವನೆಯನ್ನು ಖುಲ್ಲಂಖುಲ್ಲಾ ವ್ಯಕ್ತಪಡಿಸಿ ಸ್ಪಷ್ಟ ಜನಾದೇಶವನ್ನು ನೀಡಿದಾಗ ಇನ್ನುಳಿದ ಎಲ್ಲ ಸಂಗತಿಗಳೂ ಗೌಣವಾಗುತ್ತವೆ. ಇದೇ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗಿರುವ ಅನುಪಮ ಗುಣ ಮತ್ತು ಶಕ್ತಿ.

ಕಳೆದ ವಾರ ಇದೇ ಅಂಕಣದಲ್ಲಿ ಪ್ರಜಾಪ್ರಭುತ್ವ ಸತ್ತಿಲ್ಲ, ಅದು ಗೆದ್ದಿದೆ ಎಂದು ಬರೆದಿದ್ದೆ. ಏಕೆಂದರೆ ನನಗೆ ಭಾರತದ ಮತದಾರರ ನಿರ್ಣಾಯಕ ಶಕ್ತಿ
ಹಾಗೂ ಅವರ ಪ್ರಬುದ್ಧತೆಯ ಬಗ್ಗೆ ಯಾವುದೇ ಅನುಮಾನವಿರಲಿಲ್ಲ. ಮತದಾರರು ಸಾಮಾನ್ಯವಾಗಿ ಯಾವುದೇ ರಾಜಕೀಯ ಪಕ್ಷದ ಸಾಮರ್ಥ್ಯವನ್ನು ಕೇವಲ ತಮ್ಮ ಬದುಕಿನ ಮೂಲಭೂತ ಅಗತ್ಯಗಳಿಗೆ ಅನುಗುಣವಾದ ಮಾನದಂಡಗಳನ್ನಿಟ್ಟುಕೊಂಡು ಅಳೆಯುವುದಿಲ್ಲ. ಭಾರತೀಯರಿಗೆ ಈ ದೇಶದ
ಸಂವಿಧಾನದ ಬಗ್ಗೆ ಚೆನ್ನಾಗಿ ಅರಿವಿದೆ.

ಹೀಗಾಗಿ ಸಾಂವಿಧಾನಿಕ ಮಾನದಂಡಗಳನ್ನೂ ಪರಿಗಣಿಸಿ ಅವರು ಯಾವುದೇ ರಾಜಕೀಯ ಪಕ್ಷವೊಂದರ ಬಗ್ಗೆ ತಮ್ಮದೇ ಆದ ನಿರ್ಣಯಕ್ಕೆ ಬರುತ್ತಾರೆ.
ಮತದಾರರು ತಮ್ಮ ನಿಜವಾದ ಭಾವನೆಯನ್ನು ಚುನಾವಣೆಯಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದಾದರೆ ಬೇರೆಲ್ಲವೂ ಗೌಣವಾಗುತ್ತದೆ. ಆದರೆ, ಅವರೇ ಅನುಮಾನ ವ್ಯಕ್ತಪಡಿಸಿದ್ದರೆ ಅದರ ಅರ್ಥವೇನು ಎಂಬುದನ್ನು ಗಮನಿಸ ಬೇಕಾಗುತ್ತದೆ. ಇಂಗ್ಲಿಷ್‌ನಲ್ಲೊಂದು ಮಾತಿದೆ: ‘ಗೆಲ್ಲುವುದು ಯಾವಾ ಗಲೂ ಜಯವಲ್ಲ ಮತ್ತು ಸೋಲುವುದು ಯಾವಾಗಲೂ ಪರಾಭವವಲ್ಲ. ಈ ಬಾರಿ ನಮ್ಮ ದೇಶದ ಲೋಕಸಭೆ ಚುನಾವಣೆಯಲ್ಲಿ ಆಗಿರುವುದೂ ಇದೇ. ಮತದಾರರು ಎನ್‌ಡಿಎ ಮೈತ್ರಿಕೂಟದ ೪೦೦ ಸೀಟುಗಳ ಅಬ್ಬರದ ಪ್ರಚಾರಕ್ಕೂ ಮರುಳಾಗಲಿಲ್ಲ, ಹಾಗೆಯೇ ಇಂಡಿಯಾ ಮೈತ್ರಿಕೂಟದವರ ಬಹು ಮತದ ನಿರೀಕ್ಷೆಗಳಿಗೂ ಬೆಲೆ ಕೊಡಲಿಲ್ಲ.

ಅವರು ಬಿಜೆಪಿಗೆ ಅಧಿಕ ಮತ ನೀಡಿ ಆ ಪಕ್ಷವನ್ನು ಅತಿದೊಡ್ಡ ಪಕ್ಷವನ್ನಾಗಿ ಮಾಡಿದ್ದೇನೋ ನಿಜ. ಆದರೆ, ಬಹುಮತವನ್ನು ಎನ್‌ಡಿಎ ಮೈತ್ರಿಕೂಟಕ್ಕೆ
ನೀಡಿದ್ದಾರೆ. ಇದರ ಅರ್ಥ ಸ್ಪಷ್ಟವಾಗಿದೆ: ‘ಕೇಂದ್ರದಲ್ಲಿ ಮತ್ತೊಮ್ಮೆ ಎನ್‌ಡಿಎ ಮೈತ್ರಿಕೂಟವೇ ಅಧಿಕಾರಕ್ಕೆ ಬರಬೇಕು, ಆದರೆ ಅದು ಬಲಿಷ್ಠವಾದ ವಿಪಕ್ಷವನ್ನು ಎದುರಿಸಿ ಅಧಿಕಾರ ನಡೆಸಬೇಕು’. ಯಾವಾಗಲೂ ಒಂದೇ ಬದಿ ತುಂಬಾ ಬಲಿಷ್ಠವಾಗಿ, ಇನ್ನೊಂದು ಬದಿ ಸದಾ ದುರ್ಬಲವಾಗಿ ಇದ್ದು ಬಿಟ್ಟರೆ ಸಮತೋಲನ ತಪ್ಪುತ್ತದೆ. ಇದು ತುಂಬಾ ಸರಳವಾದ ಸಂಗತಿ. ಮತದಾರರು ಈ ಬಾರಿ ಈ ಅಸಮತೋಲನವನ್ನು ಸರಿಪಡಿಸಿದ್ದಾರೆ.

ಡಚ್ ಲೇಖಕ ಪೌಲ್ ಹೆನ್ನಿಂಗ್ ಹೇಳುವಂತೆ, ‘ವಿರೋಧ ಪಕ್ಷವು ಪ್ರಸ್ತುತವಾಗಿದ್ದಾಗ ಮಾತ್ರ ಯಾವುದೇ ದೇಶದ ಪ್ರಜಾಪ್ರಭುತ್ವ ಹೇಗೆ ಕೆಲಸ ಮಾಡುತ್ತಿದೆ
ಎಂಬುದನ್ನು ಅಳೆಯಬಹುದು. ವಿರೋಧ ಪಕ್ಷ ನಗಣ್ಯವಾಗಿದ್ದರೆ ಆ ದೇಶದಲ್ಲಿ ಪ್ರಜಾಪ್ರಭುತ್ವ ಹೇಗಿದೆ ಎಂಬುದನ್ನು ಹೇಳುವುದು ಕಷ್ಟ’. ಮ್ಯಾನ್ಮಾರ್‌ನ ಪ್ರಸಿದ್ಧ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿ ಇದನ್ನು ಇನ್ನೂ ಕಠಿಣವಾಗಿ ಹೇಳಿದ್ದಾರೆ. ಅವರ ಪ್ರಕಾರ,
‘ವಿರೋಧ ಪಕ್ಷಗಳನ್ನು ಟೀಕಿಸಿದರೆ ನಿಮಗೆ ಪ್ರಜಾಪ್ರಭುತ್ವದ ನಿಜವಾದ ಅರ್ಥವೇ ಗೊತ್ತಿಲ್ಲ ಎಂದರ್ಥ. ವಿರೋಧ ಪಕ್ಷಗಳನ್ನು ನಾಶಪಡಿಸಲು ಯತ್ನಿಸಿದರೆ ನೀವು ಪ್ರಜಾಪ್ರಭುತ್ವದ ಬೇರುಗಳನ್ನೇ ಕತ್ತರಿಸಿ ಹಾಕುತ್ತಿದ್ದೀರಿ ಎಂದರ್ಥ’.

ಭಾರತದ ಮೊದಲ ಪ್ರಧಾನ ಮಂತ್ರಿ ಪಂ.ಜವಾಹರಲಾಲ್ ನೆಹರು ಕೂಡ ಇದೇ ರಾಜಕೀಯ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದ್ದರು. ನಾನು ಕೂಡ ಈ ಬಗ್ಗೆ ಪದೇಪದೇ ಬರೆದಿದ್ದೇನೆ. ನನ್ನ ಪ್ರಕಾರ, ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕು ಎಂದಾದರೆ ದೇಶದಲ್ಲಿ ಬಲಿಷ್ಠವಾದ ವಿರೋಧ ಪಕ್ಷವಿರುವುದು ಅತ್ಯಗತ್ಯ.
ಪ್ರಧಾನಿ ನರೇಂದ್ರ ಮೋದಿಯವರ ೧೦ ವರ್ಷಗಳ ಆಡಳಿತದ ಅವಧಿಯಲ್ಲಿ ದೇಶ ಸಾಕಷ್ಟು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದೆ. ಅನೇಕ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಅವರ ಸರಕಾರ ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ದಿದೆ. ಸಂವಿಧಾನದ ೩೭೦ನೇ ಪರಿಚ್ಛೇದವನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷಸ್ಥಾನಮಾನವನ್ನು ಹಿಂಪಡೆಯುವಂತಹ ಅಸಾಧ್ಯ ಕೆಲಸಗಳನ್ನೂ ಮೋದಿ ಸರಕಾರ ಮಾಡಿದೆ. ಅವರ ಕರ್ತೃತ್ವ ಶಕ್ತಿಯ ಬಗ್ಗೆ ಯಾವ ಅನುಮಾನಗಳೂ ಇಲ್ಲ. ಅವರ ಅವಽಯಲ್ಲಿ ಭಾರತದ ಧ್ವನಿ ಜಗತ್ತಿನ ಮೂಲೆಮೂಲೆಗೂ ತಲುಪುವಂತಾಯಿತು.

ಭಾರತ ಏನಾದರೂ ಹೇಳಿದರೆ ಎಲ್ಲಾ ದೇಶಗಳೂ ಕಿವಿಗೊಟ್ಟು ಕೇಳಿಸಿಕೊಳ್ಳುವಂತಾಯಿತು. ಇದೇನೂ ಸಣ್ಣ ಬದಲಾವಣೆಯಲ್ಲ. ಆದರೆ, ಮತದಾರರಿಗೆ
ನಮ್ಮ ದೇಶದಲ್ಲಿ ವಿರೋಧ ಪಕ್ಷ ದಿನೇದಿನೇ ದುರ್ಬಲವಾಗುತ್ತಿದೆ ಮತ್ತು ಆಡಳಿತಾರೂಢ ಪಕ್ಷ ಈ ಅಸಮತೋಲನವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ ಎಂದು ಅನ್ನಿಸತೊಡಗಿತ್ತು. ಯಾವಾಗ ಆಡಳಿತ ಪಕ್ಷದ ನಾಯಕರು ತೀರಾ ಅತಿ ಎನ್ನಿಸುವಂತೆ ‘ಕಾಂಗ್ರೆಸ್ ಮುಕ್ತ ಭಾರತ ಎನ್ನುವಂತಹ ತಲೆಬುಡವಿಲ್ಲದ ಕನಸುಗಳನ್ನು ಕಾಣತೊಡಗಿ ದರೋ ಆಗಲೇ ಮತದಾರರು ಎಚ್ಚೆತ್ತು ಕೊಂಡರು’.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದಾದರೊಂದು ರಾಜಕೀಯ ಪಕ್ಷವು ಇನ್ನೊಂದು ರಾಜಕೀಯ ಪಕ್ಷವನ್ನು ಸಂಪೂರ್ಣ ಅಳಿಸಿಹಾಕುವಂತಹ ಯೋಚನೆಯನ್ನಾದರೂ ಹೇಗೆ ಮಾಡಲು ಸಾಧ್ಯ? ಇದು ಅತಿರೇಕವಲ್ಲದೇ ಇನ್ನೇನು? ಕಾಂಗ್ರೆಸ್ ಪಕ್ಷವನ್ನು ಯಾರೂ ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂದು ನಾನು ಯಾವಾಗಲೂ ಹೇಳುತ್ತಾ ಬಂದಿದ್ದೇನೆ. ಕಾಂಗ್ರೆಸ್ ಎಂಬ ಹೆಮ್ಮರ ಈಗ ದುರ್ಬಲವಾಗಿರುವಂತೆ ಕಾಣಿಸಬಹುದು, ಆದರೆ ಅದರ
ಬೇರುಗಳು ತುಂಬಾ ಗಟ್ಟಿಯಾಗಿವೆ ಮತ್ತು ಬಹಳ ಆಳಕ್ಕೆ ಇಳಿದಿವೆ. ಆಲದ ಮರದ ಒಂದು ಬಿಳಲು ಹೇಗೆ ನೆಲಕ್ಕೆ ತಲುಪಿ, ಅಲ್ಲೇ ಬೇರು ಬಿಟ್ಟು, ಮತ್ತೊಂದು ಮರವಾಗಿ ಬೆಳೆಯುತ್ತದೆಯೋ ಹಾಗೆಯೇ ಕಾಂಗ್ರೆಸ್ ಪಕ್ಷ ಕೂಡ ತನ್ನನ್ನು ತಾನು ವಿಸ್ತರಿಸಿಕೊಳ್ಳುವ ಮತ್ತು ಬುಡವನ್ನು ಗಟ್ಟಿಗೊಳಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಒಂದಷ್ಟು ಆಂತರಿಕ ಬಿಕ್ಕಟ್ಟುಗಳು ಹಾಗೂ ಪರಸ್ಪರರ ಕಾಲೆಳೆಯುವ ಅದರ ನಾಯಕರ ಕ್ಷುಲ್ಲಕ ಗುಣದಿಂದಾಗಿ ಆ ಪಕ್ಷ ಇತ್ತೀಚಿನ ವರ್ಷಗಳಲ್ಲಿ ಕೆಟ್ಟ ದಿನಗಳನ್ನು ನೋಡಬೇಕಾಗಿ ಬಂದಿತು ಅಷ್ಟೆ. ಆದರೆ ಈಗಲೂ ಕಾಂಗ್ರೆಸ್ ಪಕ್ಷ ಜೀವಂತವಾಗಿದೆ ಮತ್ತು ಗಟ್ಟಿಯಾಗಿ ಎದ್ದುನಿಲ್ಲುವ ಸಾಮರ್ಥ್ಯ ಅದಕ್ಕೆ ಇದ್ದೇ ಇದೆ. ಈ ಬಾರಿ ಚುನಾವಣೆಗೂ ಮುನ್ನವೇ ಎಚ್ಚೆತ್ತುಕೊಂಡು ಕಾಂಗ್ರೆಸ್ ನಾಯಕರು ಪ್ರಾದೇಶಿಕ ಪಕ್ಷಗಳ ಜೊತೆ ಸೇರಿ ಮೈತ್ರಿಕೂಟವನ್ನು ರಚಿಸಿಕೊಂಡರು. ತನ್ಮೂಲಕ ಮತದಾರರ ವಿಶ್ವಾಸವನ್ನು ಮರಳಿ ಗಳಿಸಿಕೊಂಡರು. ಹೀಗಾಗಿ, ಇಂಡಿಯಾ ಮೈತ್ರಿಕೂಟದ ಶಕ್ತಿಯೇನು ಎಂಬುದು ಚುನಾವಣೆಯಲ್ಲಿ ಸಾಬೀತಾಗಿದೆ. ಈಗ ಆ ಪಕ್ಷಗಳ ನಾಯಕರು ಮತದಾರರ ನಿರೀಕ್ಷೆಗಳನ್ನು ಹೇಗೆ ತಮ್ಮಿಂದ ತಲುಪಲು ಸಾಧ್ಯ ಎಂಬುದನ್ನು
ಸಾಽಸಿ ತೋರಿಸಬೇಕಿದೆ. ಇಂಡಿಯಾ ಮೈತ್ರಿಕೂಟದ ಮುಂದಿರುವ ಸವಾಲುಗಳ ಬಗ್ಗೆ ಚರ್ಚಿಸುವುದಕ್ಕಿಂತ ಮೊದಲು, ಈಗಾಗಲೇ ಮೂರನೇ ಬಾರಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿಯವರ ಎದುರು ಇರುವ ಪ್ರಮುಖ ಸವಾಲುಗಳನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.

ಅವರ ಮೊದಲ ಎರಡು ಅವಧಿಯ  ಸರ್ಕಾರಗಳಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೊಡ್ಡ ಸಂಖ್ಯಾಬಲವಿತ್ತು. ಹೀಗಾಗಿ, ಸರಕಾರ ಎನ್‌ಡಿಎಯದ್ದೇ ಇದ್ದರೂ ಅಲ್ಲಿ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳ ಮಾತನ್ನು ಕೇಳುವ ದರ್ದು ಬಿಜೆಪಿಗೆ ಇರಲಿಲ್ಲ. ಅದರ ಲಾಭ ಪಡೆದುಕೊಂಡು ಬಿಜೆಪಿಯವರು ಎನ್‌ಡಿಎ ಅಂಗಪಕ್ಷಗಳನ್ನು ಮೂಲೆಗೆ ತಳ್ಳಿದ್ದರು. ಆದರೆ ಈ ಬಾರಿ ಹಾಗಾಗಿಲ್ಲ. ಬಿಜೆಪಿಗೆ ಬಹುಮತ ಬಂದಿಲ್ಲ. ಅದು ಅತಿದೊಡ್ಡ ಪಕ್ಷವಾಗಿ
ಹೊರಹೊಮ್ಮಿದ್ದರೂ, ಸರಕಾರ ನಡೆಸಲು ಹಾಗೂ ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆಯನ್ನು ತೋರಿಸಲು ಅದು ಮೈತ್ರಿಪಕ್ಷಗಳ ಮೇಲೆ ಅವಲಂಬಿತವಾಗಲೇ ಬೇಕಿದೆ. ಅಂಗಪಕ್ಷಗಳನ್ನು ಬಿಟ್ಟು ಅಥವಾ ಅವುಗಳನ್ನು ಕಡೆಗಣಿಸಿ ಬಿಜೆಪಿ ಏನೂ ಮಾಡುವಂತಿಲ್ಲ.

ಟಿಡಿಪಿಯ ಚಂದ್ರಬಾಬು ನಾಯ್ಡು, ಜೆಡಿಯುನ ನಿತೀಶ್ ಕುಮಾರ್, ಶಿವಸೇನೆಯ ಏಕನಾಥ್ ಶಿಂಧೆ ಹಾಗೂ ಎಲ್ ಜೆಪಿಯ ಚಿರಾಗ್ ಪಾಸ್ವಾನ್ ಅವರು ಪೂರ್ತಿ ಐದು ವರ್ಷ ತಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರಾದರೂ ಅದನ್ನೇ ನಂಬಿಕೊಂಡು ಕುಳಿತುಕೊಳ್ಳುವ ಪರಿಸ್ಥಿತಿ ಇಲ್ಲ. ನಾಯ್ಡು ಮತ್ತು ನಿತೀಶ್ ಸಾಕಷ್ಟು ಪಳಗಿರುವ ರಾಜಕಾರಣಿಗಳು. ಅವರು ಯಾವುದನ್ನೂ ಉಚಿತವಾಗಿ ಮಾಡುವುದಿಲ್ಲ. ಕಾಲ ಕೂಡಿಬಂದಾಗ ತಮ್ಮ ಪಾಲಿನ ರೊಟ್ಟಿಯನ್ನು ಕಿತ್ತುಕೊಂಡೇ ಕಿತ್ತುಕೊಳ್ಳುತ್ತಾರೆ. ಇಷ್ಟಕ್ಕೂ ಅವರು ಬಿಜೆಪಿಯಿಂದ ಬಂದವರಲ್ಲ!

ಇಂತಹ ಪರಿಸ್ಥಿತಿ ಇರುವಾಗ ನರೇಂದ್ರ ಮೋದಿ ಮುಂದೆ ಇರುವ ಸವಾಲು ಕಠಿಣ ವಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಮೂರನೇ ಅವಽಯಲ್ಲಿ ಭಾರತವನ್ನು ಇನ್ನಷ್ಟು ಸಶಕ್ತವಾಗಿ ಕಟ್ಟುವ ಹಾಗೂ ಭಾರತೀಯರನ್ನು ಇನ್ನಷ್ಟು ಸಬಲೀಕರಣಗೊಳಿಸುವ ಅವರ ಯೋಜನೆಗಳು ಸಾಕಾರಗೊಳ್ಳುತ್ತವೆಯೇ? ಈಗಲೂ ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ತನ್ನ ಕನಸನ್ನು ನನಸಾಗಿಸಿಕೊಳ್ಳಲಿದೆಯೇ? ಸಾಮಾನ್ಯವಾಗಿ ಸಮ್ಮಿಶ್ರ ಸರಕಾರಗಳು ಜಾಗತಿಕ ವೇದಿಕೆಯಲ್ಲಿ ದೇಶದ ಇಮೇಜ್ ಹೇಗಿರಬೇಕು ಎಂಬುದರ ಬಗ್ಗೆ
ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ನಂಬಿಕೆಯಿದೆ.

ಸರಕಾರ ಬದಲಾದಂತೆ ವಿದೇಶಾಂಗ ನೀತಿಗಳು ಹಾಗೂ ಬೇರೆ ಬೇರೆ ದೇಶಗಳನ್ನು ನೋಡುವ ದೃಷ್ಟಿಕೋನಗಳು ಬದಲಾಗುತ್ತವೆ. ಕಳೆದ ೧೦
ವರ್ಷಗಳಿಂದ ಬಹಳ ಕಷ್ಟಪಟ್ಟು ಜಾಗತಿಕ ರಂಗದಲ್ಲಿ ಭಾರತಕ್ಕೊಂದು ಅದ್ಭುತ ಇಮೇಜ್ ತಂದುಕೊಟ್ಟ ಮೋದಿಗೆ ಇದು ಬಹುದೊಡ್ಡ ಸವಾಲೇ ಸರಿ. ಅದಕ್ಕಿಂತ ಹೆಚ್ಚಾಗಿ, ‘ಮೋದಿ ಕಿ ಗ್ಯಾರಂಟಿ’ ಎಂದು ಪ್ರಚಾರಕ್ಕೆ ಹೋದಲ್ಲೆಲ್ಲ ಕೂಗಿ ಕೂಗಿ ಹೇಳಿದ ಮನುಷ್ಯ ಆ ಗ್ಯಾರಂಟಿ ಯನ್ನು ಈಡೇರಿಸಲು ಸಾಧ್ಯವಾಗಲಿದೆಯೇ? ಅಥವಾ ಅವುಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾಗಿ ಬರುತ್ತದೆಯೇ?

ನಾಯ್ಡು, ನಿತೀಶ್, ಶಿಂಧೆ ಮತ್ತು ಚಿರಾಗ್ ಪಾಸ್ವಾನ್‌ರನ್ನು ಹದ್ದುಬಸ್ತಿನಲ್ಲಿ ಇರಿಸಲು ಬೇರೆ ಪಕ್ಷಗಳ ಸಂಸದರನ್ನು ತನ್ನತ್ತ ಸೆಳೆದು ಪಕ್ಷಾಂತರ ಮಾಡಿಸಿಕೊಳ್ಳುವ ಆಪರೇಷನ್‌ಗೆ ಬಿಜೆಪಿ ಕೈಹಾಕಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ನನ್ನ ಪ್ರಕಾರ ಈ ವಿಷಯದಲ್ಲಿ ಬಿಜೆಪಿ ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಇಂತಹ ಒಡೆದು ಆಳುವ ರಾಜಕೀಯವನ್ನು ಭಾರತದ ಮತದಾರರು ಇಷ್ಟಪಡುವುದಿಲ್ಲ. ರಾಜಕೀಯ ಪಂಡಿತರ ವಿಶ್ಲೇಷಣೆಗಳ ಪ್ರಕಾರ, ಬೇರೆ ಪಕ್ಷಗಳ ಜನಪ್ರತಿನಿಧಿಗಳನ್ನು ಸೆಳೆಯುವ ಬಿಜೆಪಿಯ ರಣತಂತ್ರವೇ ಮಹಾರಾಷ್ಟ್ರದಲ್ಲಿ ಆ ಪಕ್ಷ ಸೋತಿದ್ದಕ್ಕೆ ಕಾರಣ. ಆದ್ದರಿಂದ ಈ ಮಾದರಿಯ ಆಪರೇಷನ್‌ಗಳಿಗೆ ಕೈಹಾಕುವ ಮುನ್ನ ಹತ್ತು ಸಲ ಯೋಚಿಸುವುದು ಒಳಿತು.

ಅದೇ ರೀತಿ, ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟದ ಮುಂದಿರುವ ಸವಾಲು ಕೂಡ ದೊಡ್ಡದೇ. ಚುನಾವಣೆಯಲ್ಲಿ ಒಳ್ಳೆಯ ಪ್ರದರ್ಶನ ನೀಡಿದ ಬಳಿಕ ಅವು ಈಗ ತಮ್ಮನ್ನು ಬಲಿಷ್ಠ ಹಾಗೂ ರಚನಾತ್ಮಕ ವಿರೋಧ ಪಕ್ಷವಾಗಿ ಸಾಬೀತುಪಡಿಸುವ ಅಗತ್ಯವಿದೆ. ಇಂಡಿಯಾ ಒಕ್ಕೂಟದಲ್ಲಿ ಅಷ್ಟೊಂದು ರಾಜಕೀಯ ಪಕ್ಷಗಳು ಇರುವಾಗ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವುದು ಸುಲಭವಿಲ್ಲ. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ
ಆಶೋತ್ತರಗಳು ಇರುತ್ತವೆ. ಆಮಿಷಗಳ ಪ್ರಚೋದನೆಗೆ ಜೊಲ್ಲು ಸುರಿಸುವ ಅಪಾಯವಂತೂ ಯಾವಾಗಲೂ ಇದ್ದಿದ್ದೇ. ಇಷ್ಟಕ್ಕೂ ಇದು ‘ಒಂದು ವೇಳೆ’ ‘ಆದರೆ’ಗಳ ಜಮಾನ. ಇಲ್ಲಿ ಏನು ಬೇಕಾದರೂ ಆಗಬಹುದು!

(ಲೇಖಕರು: ಹಿರಿಯ ಪತ್ರಕರ್ತರು,
ರಾಜ್ಯಸಭಾ ಮಾಜಿ ಸದಸ್ಯರು)

Leave a Reply

Your email address will not be published. Required fields are marked *