ವಿದೇಶವಾಸಿ
dhyapaa@gmail.com
ಕಾಫಿ ಇಬ್ಬರ ನಡುವಿನ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟು ಬಿಗಿಗೊಳಿಸುವ ಪಾನೀಯ. ಬಿಗಡಾಯಿಸಿದ ಸಂಬಂಧವನ್ನು ಪುನಃ ಸ್ಥಾಪಿಸುವ, ಕಿತ್ತುಹೋದ ಸ್ನೇಹವನ್ನು ಒಂದುಗೂಡಿಸುವ ತಾಕತ್ತು ಈ ದ್ರವಕ್ಕಿದೆ. ಸಣ್ಣ-ದೊಡ್ಡ, ವ್ಯಾಪಾರ-ವ್ಯವಹಾರವನ್ನು ಕುದುರಿಸುವ ಸಾಮರ್ಥ್ಯ ಈ ಪೇಯಕ್ಕಿದೆ.
ಕರ್ನಾಟಕದ ಕಾಫಿ ಘಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ್ದ, ದಶಕಗಳ ಕಾಲ ಕಾಫಿ ಕ್ಷೇತ್ರವನ್ನು ಆಳಿದ್ದ ದಿ. ಸಿದ್ಧಾರ್ಥ್ ಅವರ ಒಡೆತನದ ‘ಕಫೆ ಕಾಫಿ ಡೇ’ನ (ಸಿಸಿಡಿ) ಮೂಲಸಂಸ್ಥೆ ದಿವಾಳಿ ಅಂಚಿಗೆ ಬಂದಿದೆ ಎನ್ನುವ ಕೆಟ್ಟ ಸುದ್ದಿ ಕೇಳಿಬರುತ್ತಿದೆ. ಪ್ರೇಮಿಗಳ ಖಾಸಗಿ ಭೇಟಿಯಿಂದ ಹಿಡಿದು ಕೋಟ್ಯಂತರ ರುಪಾಯಿ ಬಿಸಿನೆಸ್ ಮೀಟಿಂಗ್‌ವರೆಗೆ ‘ಸಿಸಿಡಿ’ಯಲ್ಲಿಯೇ ನಡೆಯುತ್ತಿದ್ದವು. ಅಂಥ ಬ್ರ್ಯಾಂಡ್ ಬಿಲ್ಡ್ ಮಾಡಿದ್ದ ಸಂಸ್ಥೆ ಇಂದು ದಿವಾಳಿ ಹಂತಕ್ಕೆ ಬಂದು ನಿಂತಿದೆ. ಸಿಸಿಡಿ ಈ ಹಂತಕ್ಕೆ ಕುಸಿದಿರುವ ಬಗ್ಗೆ ಯೋಚಿಸುತ್ತಿದ್ದಾಗ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಸಿಡಿಗೆ ಪ್ರತಿಸ್ಪರ್ಧಿಯಾಗಿ ಬೆಳೆದಿರುವ ಸ್ಟಾರ್‌ಬಕ್ಸ್ ಕಟ್ಟಿ ಬೆಳೆಸಿದ ಪರಿಯನ್ನು ಕಂಡು ವಿಸ್ಮಿತನಾದೆ.
ಈ ಸಮಯದಲ್ಲಿ ಸ್ಟಾರ್‌ಬಕ್ಸ್ ನ ಬಗ್ಗೆ ಹೇಳಬೇಕು ಅನಿಸಿತು. ಕಾಫಿ ಆಯ್ತಾ?’, ‘ಸಾಯಂಕಾಲ ಕಾಫಿಗೆ ಸಿಗೋಣ್ವಾ?’, ‘ಎಷ್ಟು ದಿನ ಆಗೋಯ್ತು, ಬನ್ನಿ ಒಟ್ಟಿಗೆ ಕಾಫಿ ಕುಡಿಯೋಣ’, ‘ನೀವು ಅಲ್ಲಿಯ ಕಾಫಿ ಕುಡಿಯಲೇಬೇಕು’, ‘ಅಲ್ಲಿ ಕಾಫಿ ಚೆನ್ನಾಗಿರತ್ತೆ’, ‘ಅಲ್ಲಿ ಕಾಫಿ ಕುಡಿದಿ ಅಂದ್ರೆ ಬದುಕಿದ್ದೇ ವೇಸ್ಟು’,
ಇಂಥ ಸಂಭಾಷಣೆಗಳೆ ಅಂತಿಮವಾಗಿ ಕೊನೆಗೊಳ್ಳುವುದು, ‘ಎರಡು ಕಾಫಿ ಕೊಡಿ’ ಅಥವಾ ‘ಬೈ ಟು ಕಾಫಿ ಪ್ಲೀಸ್’ ಎಂಬಲ್ಲಿಗೆ.
ಕಾಫಿ ಇಬ್ಬರ ನಡುವಿನ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟು ಬಿಗಿಗೊಳಿಸುವ ಪಾನೀಯ. ಬಿಗಡಾಯಿಸಿದ ಸಂಬಂಧವನ್ನು ಪುನಃ ಸ್ಥಾಪಿಸುವ,
ಕಿತ್ತುಹೋದ ಸ್ನೇಹವನ್ನು ಒಂದುಗೂಡಿಸುವ ತಾಕತ್ತು ಈ ದ್ರವಕ್ಕಿದೆ. ಸಣ್ಣ-ದೊಡ್ಡ, ವ್ಯಾಪಾರ- ವ್ಯವಹಾರವನ್ನು ಕುದುರಿಸುವ ಸಾಮರ್ಥ್ಯ ಈ
ಪೇಯಕ್ಕಿದೆ. ಪರಿವಾರದ ಸದಸ್ಯರೊಂದಿಗೆ, ಸ್ನೇಹಿತರ ಮಧ್ಯೆ, ಪ್ರೇಮಿಗಳ ನಡುವೆ ಸಂಬಂಧದ ಸೇತು ಬೆಸೆಯಬಲ್ಲ ಅಸಾಮಾನ್ಯ ರಸ ‘ಕಾಫಿ’ ಎಂದರೆ
ತಪ್ಪಾಗಲಾರದು. ಈ ‘ಕಾಫಿ’ ಕಲಿಯುಗದಲ್ಲಿ ಭೂಲೋಕದ ಅಮೃತ. ಹಾ, ‘ಅತಿಂ ಸರ್ವತ್ರ ವರ್ಜಯೇತ್’ ಎಂಬ ಮಾತಿದೆ, ಅದು ಇಲ್ಲೂ ಸಲ್ಲುವಂ
ಥದ್ದೇ. ಅತಿಯಾದರೆ ಆರೋಗ್ಯಕ್ಕೆ ಹಾನಿಕಾರಕವಾಗ ಬಲ್ಲ ಕಾಫಿಯ ಬಳಕೆ ಮಿತಿಯಲ್ಲಿದ್ದರೆ ಒಳಿತು.
ಆದರೂ ದಿನಕ್ಕೆ ನಾಲ್ಕು ಸಿಪ್‌ನ ಎರಡು ಸಣ್ಣ ಕಪ್ ಕಾಫಿಗೆ ದೊಡ್ಡ ಅಭ್ಯಂತರ ಇಲ್ಲ ಬಿಡಿ. ಗುಡ್ ಮಾರ್ನಿಂಗ್ ಹೇಳುವಾಗ ಕೈಯಂದು ಕಾಫಿ ಕಪ್ ಇರಬೇಕು. ದೇಹದ ಜಡ್ಡು ದೂರ ಓಡಬೇಕಾದರೆ, ಮನದ ಮಬ್ಬು ದೂರ ಹೋಗಬೇಕಾದರೆ ಕಾಫಿಯ ಘಮಲು ಮೂಗಿಗೆ ರಾಚಬೇಕು. ಚಳಿಗಾಲದಲ್ಲಿ, ಮೈ ಮನ ಬೆಚ್ಚಗಿಡುವ ಕಾಫಿಯೊಂದಿದ್ದರೆ, ಆಹಾ… ಅದೇ ಸ್ವರ್ಗ ಸುಖ. ಮಳೆಗಾಲದಲ್ಲಿ, ಹೊರಗೆ ಮಳೆ ಸುರಿಯುತ್ತಿರುವಾಗ ಕುರುಕಲು ತಿಂಡಿಯೊಂದಿಗೆ ನಾಲ್ಕು ಗುಟುಕು ಕಾಫಿಯೊಂದಿದ್ದರೆ, ‘ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ…’ ಸಕ್ಕರೆ ಹಾಕಿ, ಬಿಡಿ, ಇದು ಕೊಡುವ ಕಿಕ್ ಮಾತ್ರ ವಿಭಿನ್ನ, ವಿಶಿಷ್ಟ, ಆಹ್ಲಾದಕರ.
ಇಂದು ಹತ್ತು ರುಪಾಯಿ ಕೊಟ್ಟು ರಸ್ತೆ ಬದಿಯಲ್ಲೂ ಕಾಫಿ ಕುಡಿಯಬಹುದು, ಸಾವಿರ ರುಪಾಯಿ ಕೊಟ್ಟು ಪಂಚತಾರಾ ಹೋಟೆಲ್‌ನಲ್ಲೂ ಕಾಫಿ ಕುಡಿಯಬಹುದು. ಇಂದು ಕಾಫಿಯನ್ನೇ ಬ್ರ್ಯಾಂಡ್ ಆಗಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಅನೇಕ ಅಂಗಡಿಗಳಿವೆ, ಉಪಹಾರ ಗೃಹಗಳಿವೆ, ಕಾಫಿ
ಹೌಸ್‌ಗಳಿವೆ. ಇವೆಲ್ಲದರ ನಡುವೆ ಎದ್ದು ಕಾಣುವುದು ‘ಸ್ಟಾರ್‌ಬಕ್ಸ್’. ಹಸಿರು ವೃತ್ತದಲ್ಲಿ ಕಿರೀಟ ತೊಟ್ಟ ಬಿಳಿಯ ರಾಣಿಯ ಲಾಂಛನ ಹೊಂದಿದ ಸ್ಟಾರ್‌ಬಕ್ಸ್ ಬೆಳೆದು ಬಂದ ರೀತಿಯೇ ವಿಭಿನ್ನವಾದದ್ದು, ರೋಚಕವಾದದ್ದು. ೧೯೭೧ರಲ್ಲಿ ಜೆರ್ರಿ ಬಾಲ್ಡ್ವಿನ್, ಜೆವ್ ಸೀಗಲ್ ಮತ್ತು ಗೋರ್ಡಾನ್ ಬೌಕರ್ ಸೇರಿ ಆರಂಭಿಸಿದ ಸಂಸ್ಥೆ ಅದು. ಆದರೆ ಶುಕ್ರದೆಸೆ ಆರಂಭವಾದದ್ದು ಮಾತ್ರ ೧೯೮೬ರ ನಂತರವೇ. ಅಲ್ಲಿಂದ ಸಂಸ್ಥೆ ನಡೆದು ಬಂದ ಹಾದಿ ಅಭೂತಪೂರ್ವ.
ಇಂದು ಸ್ಟಾರ್ ಬಕ್ಸ್ ವಿಶ್ವದಾದ್ಯಂತ ಎಂಬತ್ಮೂರು ದೇಶಗಳಲ್ಲಿ, ಸುಮಾರು ಮೂವತ್ಮೂರು ಸಾವಿರ ಮಳಿಗೆ ಹೊಂದಿದೆ. ಅದರಲ್ಲಿ ಹದಿನೇಳು ಸಾವಿರ ಕಂಪನಿ ಕಾರ್ಯ ನಿರ್ವಹಿಸುವ ಮಳಿಗೆಗಳಾದರೆ, ಹದಿನಾರು ಸಾವಿರ ಪರವಾನಗಿ ಪಡೆದ ಮಳಿಗೆಗಳಾಗಿವೆ. ಹತ್ತೊಂಬತ್ತು ಸಾವಿರ ಮಳಿಗೆಗಳು ಅಮೆರಿಕ,
ಕೆನಡಾ ಮತ್ತು ಲ್ಯಾಟಿನ್ ಅಮೆರಿಕ ಪ್ರದೇಶದಲ್ಲಿವೆ. ಸಂಸ್ಥೆ ಈಗ ಹೋಲ್ ಬೀನ್ ಕಾಫಿ, ಚಹಾ, ತಂಪು, ಬಿಸಿ ಪಾನೀಯಗಳು, ಹಣ್ಣಿನ ರಸ, ಚಾಕೊಲೆಟ್,
ಬಿಸ್ಕತ್ತು, ಸ್ಯಾಂಡ್ವಿಚ್, ಕೇಕ್ ಇತ್ಯಾದಿಗಳನ್ನೂ ಮಾರುತ್ತಿದೆ. ಸಂಸ್ಥೆ ಇಂದು ವಿಶ್ವದಾದ್ಯಂತ ಮೂರೂವರೆ ಲಕ್ಷ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿದ್ದು, ವಾರ್ಷಿಕ ಇಪ್ಪತ್ತೇಳು ಬಿಲಿಯನ್ ಡಾಲರ್ ಆದಾಯ ಗಳಿಸುತ್ತಿದೆ. ಇಂದು ಸ್ಟಾರ್ ಬಕ್ಸ್‌ನಲ್ಲಿ ಕಾಫಿ ಕುಡಿಯುವುದೇ ಒಂದು ಅಭಿಮಾನದ ಸಂಗತಿ. ಸಂಸ್ಥೆ ಇಂದು ಈ ಔನ್ನತ್ಯಕ್ಕೆ ಏರಿದೆ ಯೆಂದರೆ ಅದಕ್ಕೆ ಕಾರಣ, ಒನ್ ಆಂಡ್ ಓನ್ಲಿ ‘ಹಾವರ್ಡ್ ಶಲ್ಜ’. ಸ್ಟಾರ್‌ಬಕ್ಸ್ ಕಥೆ ಎಷ್ಟು ರೋಚ ಕವೋ, ಹಾವರ್ಡ್ ಶಲ್ಜ ಕಥೆಯೂ ಅಷ್ಟೇ ರೋಚಕ.
ಸಾಮಾನ್ಯ ಕಥೆಗಳಂತೆ ಹಾವರ್ಡ್ ಶಲ್ಜ್ ಕಥೆ ಆರಂಭವಾಗುವುದೂ ಒಂದು ತೀರಾ ಬಡ ಕುಟುಂಬದಿಂದ. ೧೯೫೩ರಲ್ಲಿ, ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಜನಿಸಿದ ಶಲ್ಜ್‌ನ ತಂದೆ -ಡ್, ತಾಯಿ ಎಲೆನ್. ಶಲ್ಜ ತಂದೆಯ ಮುತ್ತಜ್ಜ ಮ್ಯಾಕ್ಸ್ ೧೯೦೦ಕ್ಕೂ ಮೊದಲೇ ಪೂರ್ವ ಯುರೋಪ್‌ನಿಂದ ಅಮೆರಿಕಕ್ಕೆ ವಲಸೆ ಬಂದವರು. ಇಂಗ್ಲಿಷ್ ಮಾತನಾಡಲು ಬಾರದ, ಕಿಸೆಯಲ್ಲಿ ಕೇವಲ ಹತ್ತು ಡಾಲರ್ ಇಟ್ಟುಕೊಂಡು ಬಂದಿದ್ದ ಮ್ಯಾಕ್ಸ್ ದರ್ಜಿ ಕೆಲಸ ಮಾಡಿ ಕೊಂಡಿದ್ದರು. ಹಾವರ್ಡ್ ತಂದೆ ತಾಯಿ ಇಬ್ಬರೂ ಹೈಸ್ಕೂಲ್ ಕೂಡ ಮುಗಿಸಿದವರಲ್ಲ. ತಂದೆ ಎರಡನೆಯ ವಿಶ್ವ ಮಹಾಯುದ್ಧದಲ್ಲಿ ಸೈನಿಕನಾಗಿ ಪಾಲ್ಗೊಂಡಿದ್ದರು. ಯುದ್ಧ ಮುಗಿಸಿ ಹಿಂತಿರುಗಿದ ನಂತರ ಕಡಿಮೆ ಸಂಬಳದ, ಸಾಮಾನ್ಯ ಕಾರ್ಮಿಕ ಕೆಲಸಕ್ಕೆ ಸೇರಿಕೊಂಡಿದ್ದರು.
ಅವರು ಬ್ರೂಕ್ಲಿನ್‌ನ ಸಾರ್ವಜನಿಕ ವಸತಿ ಯೋಜನೆಯ ಒಂದು ಸಣ್ಣ ಮನೆಯಲ್ಲಿ ವಾಸವಾಗಿದ್ದರು. ಒಂದು ರೂಮ್‌ನ ಮನೆಯಲ್ಲಿ ತಂದೆ, ತಾಯಿ ಮತ್ತು ಮೂರು ಮಕ್ಕಳು ದಿನ ಕಳೆಯುತ್ತಿದ್ದರು. ತಂದೆಯ ಜತೆ ಹೋಗಿ ಅಮೆರಿಕದ ಪ್ರಸಿದ್ಧ ಬೇಸ್‌ಬಾಲ್ ಆಟಗಾರ ಮಿಕ್ಕಿ ಮಾಂಟೆಲ್‌ನ ಆಟ ನೋಡುವುದು ಬಿಟ್ಟರೆ ಬೇರೆ ಯಾವ ಸಂತಸದ ಕ್ಷಣಗಳನ್ನೂ ಕಂಡವರಲ್ಲ. ಅವರ ತಂದೆ ಕೆಲಸದ ವೇಳೆಯಲ್ಲಿ ಮಂಜಿನ ಮೇಲೆ ಜಾರಿ ಬಿದ್ದು, ಸೊಂಟ ಮತ್ತು ಕಾಲು ಮುರಿದುಕೊಂಡಿದ್ದರು. ಅವರನ್ನು ಕೆಲಸದಿಂದ ವಜಾ ಮಾಡಲಾಯಿತು. ಅವರಿಗೆ ಕಾರ್ಮಿಕ ಪರಿಹಾರವೂ ಸಿಗಲಿಲ್ಲ, ಆರೋಗ್ಯ ವಿಮೆಯೂ ಇರಲಿಲ್ಲ, ಉಳಿತಾಯವಂತೂ ಮೊದಲೇ ಇರಲಿಲ್ಲ.
ದುಡಿಯಬೇಕಾದ ಜೀವ ಅಸಹಾಯಕವಾಗಿ ಮಂಚದ ಮೇಲೆ ಮಲಗಿತ್ತು. ಆಗ ಮನೆಯ ಹಿರಿಯ ಮಗನಾದ ಹಾವರ್ಡ್‌ಗೆ ಕೇವಲ ಏಳು ವರ್ಷ ಪ್ರಾಯ.
ತಾಯಿ ಸಣ್ಣ ಪುಟ್ಟ ಕೆಲಸ ಮಾಡಿ, ಹಾಗೂ ಹೀಗೂ ಮನೆಯ ಖರ್ಚು ನಿಭಾಯಿಸುತ್ತಿದ್ದರು. ಆದರೆ ಪ್ರತಿನಿತ್ಯ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುತ್ತಿದ್ದರು.
ಮೆಟ್ಟಿಲ ಮೇಲೆ ಕುಳಿತು ಮನೆಯ ಪರಿಸ್ಥಿತಿಯ ಕುರಿತು ಯೋಚಿಸುತ್ತಿದ್ದ ಹಾವರ್ಡ್‌ಗೆ ಆಗ ಆಶಾಕಿರಣವಾಗಿ ಕಾಣುತ್ತಿದ್ದುದು ಎರಡು ಸಂಗತಿಗಳು.
ಒಂದು, ಭವಿಷ್ಯದಲ್ಲಿ ಉತ್ತಮ ಜೀವನ, ಇನ್ನೊಂದು, ಫುಟ್ಬಾಲ್ ಮತ್ತು ಬಾಸ್ಕೆಟ್‌ಬಾಲ್ ಮೈದಾನ. ಹೈಸ್ಕೂಲ್‌ನಲ್ಲಿ ಹಾವರ್ಡ್ ಹೆಚ್ಚು ಫುಟ್ಬಾಲ್
ಆಡುತ್ತಿದ್ದರು. ಅದಕ್ಕೆ ಆಟದಲ್ಲಿರುವ ಆಸಕ್ತಿಗಿಂತಲೂ ವಿದ್ಯಾರ್ಥಿವೇತನ ಪಡೆಯಬಹುದು ಎಂಬ ಆಶಾಭಾವ ಕಾರಣವಾಗಿತ್ತು.
ಆದರೆ ಆ ಕನಸು ಕನಸಾಗಿಯೇ ಉಳಿಯಿತೇ ವಿನಾ ಎಂದಿಗೂ ಸಫಲವಾಗಲಿಲ್ಲ. ವಿದ್ಯಾರ್ಥಿ ಸಾಲ ಮತ್ತು ಅರೆಕಾಲಿಕ ಉದ್ಯೋಗಗಳೊಂದಿಗೇ ಶಿಕ್ಷಣ ಮುಂದುವರಿಬೇಕಾಯಿತು. ತೀರಾ ಅಡಚಣೆ ಉಂಟಾದಾಗ ಹಣಕ್ಕಾಗಿ ರಕ್ತ ಮಾರುತ್ತಿದ್ದರು. ಅಂತೂ ಇಂತೂ ಕಾಲೇಜ್ ಶಿಕ್ಷಣ ಮುಗಿಸಿದರು. ಆದರೆ ಪರಿಸ್ಥಿತಿ ಹೇಗಿತ್ತೆಂದರೆ, ಮನೆತನದಲ್ಲಿಯೇ ಮೊದಲ ಪದವಿ ಪಡೆದ ಮಗನನ್ನು ಕಾಣಬಹುದಾಗಿದ್ದ ಸಮಾರಂಭಕ್ಕೆ ಮನೆಯವರು ಯಾರೂ ಬಂದಿರ ಲಿಲ್ಲ. ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿಕೊಂಡ ಹಾವರ್ಡ್ ಪ್ರತಿ ತಿಂಗಳು ತಮ್ಮ ಸಂಬಳದ ಅರ್ಧವನ್ನು ಮನೆಯ ಖರ್ಚಿ ಗೆಂದು ಕೊಡುತ್ತಿದ್ದರು.
ಹಾವರ್ಡ್ ಮನೆ ಮನೆಗೆ ಕಚೇರಿ ಉಪಕರಣ ಗಳನ್ನು ತಲುಪಿಸುವ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಕೊಂಡರು. ದಿನಕ್ಕೆ ಕಮ್ಮಿ ಎಂದರೂ ಐವತ್ತು
ಜನರಿಗೆ ದೂರವಾಣಿ ಕರೆ ಮಾಡಿ ತಾವು ಮಾರುತ್ತಿದ್ದ ವಸ್ತುಗಳ ವಿಷಯ ತಿಳಿಸುತ್ತಿದ್ದರು. ಅವರ ಗ್ರಾಹಕರ ಪಟ್ಟಿಯಲ್ಲಿ ಸ್ಟಾರ್‌ಬಕ್ಸ್ ಕೂಡ ಒಂದಾಗಿತ್ತು. ಸ್ಟಾರ್ ಬಕ್ಸ್ ಕಾಫಿ ಆಗಿನ್ನೂ ಸಣ್ಣ ಕಂಪನಿ. ಒಂದು ದಿನ ಆ ಕಂಪನಿಯ ಸಂಸ್ಥಾಪಕರನ್ನು ಭೇಟಿಯಾಗಿ ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡರು. ಒಂದೇ ವರ್ಷದಲ್ಲಿ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಪ್ರಮುಖರಾದರು. ಅದಾಗಿ ಒಂದು ವರ್ಷಕ್ಕೆ ಅವರಿಗೆ ಸಂಸ್ಥೆಯ ಪರವಾಗಿ ಕಾರ್ಯನಿಮಿತ್ತ ಇಟಲಿಗೆ ಹೋಗುವ ಅವಕಾಶ ಒದಗಿಬಂದಿತ್ತು. ಇಟಲಿಯಲ್ಲಿ ಮೊದಲ ಬಾರಿ ಎಸ್ಪ್ರೆಸ್ಸೊ ಕಾಫಿಯ ರುಚಿ ನೋಡಿ ಪ್ರಭಾವಿತರಾದ ಹಾವರ್ಡ್ ತಮ್ಮ ಸಂಸ್ಥೆಯೂ ಕಾಫಿ ಮಾಡಿ ಮಾರಬಹುದು, ಜನರಿಗೆ ಕುಳಿತು ಕಾಫಿ ಕುಡಿಯಲು ಸ್ಥಳಾವಕಾಶ ಮಾಡಿಕೊಡಬಹುದು ಎಂಬ ಸಲಹೆ ನೀಡಿದರು.
ಅದುವರೆಗೂ ಬರೀ ಕಾಫಿ ಬೀಜಗಳನ್ನಷ್ಟೇ ಮಾರುತ್ತಿದ್ದ ಸ್ಟಾರ್‌ಬಕ್ಸ್‌ನ ಅಂದಿನ ವ್ಯವಸ್ಥಾಪಕರು ಹಾವರ್ಡ್ ಕೊಟ್ಟ ಸಲಹೆಯನ್ನು ತಿರಸ್ಕರಿಸಿದ್ದರು.
ಹಾವರ್ಡ್ ತಮ್ಮ ಕನಸಿನ ಎಸ್ಪ್ರೆಸ್ಸೋ ಬಾರ್ (ನಮ್ಮ ಭಾಷೆಯಲ್ಲಿ ಕಾಫಿ ಅಂಗಡಿ) ತೆರೆಯುವ ಉದ್ದೇಶದಿಂದ ಸ್ಟಾರ್‌ಬಕ್ಸ್‌ನ ನೌಕರಿಗೆ ರಾಜೀನಾಮೆ ನೀಡಿದರು. ಆದರೆ ಹೊಸ ಉದ್ಯಮ ಆರಂಭಿಸಲು ಅವರ ಬಳಿ ಹಣವಿರಲಿಲ್ಲ. ತಮ್ಮ ಯೋಜನೆಯಲ್ಲಿ ನಾಲ್ಕು ಲಕ್ಷ ಡಾಲರ್ ಹಣ ಹೂಡುವಂತೆ ಕೋರಿ ಅವರು ಸುಮಾರು ಇನ್ನೂರ ನಲವತ್ತೆರಡು ಜನರನ್ನು ಸಂಪರ್ಕಿಸಿದರು. ಆ ಪೈಕಿ ಇನ್ನೂರ ಹದಿನೇಳು ಜನರಿಗೆ ಹೋವರ್ಡ್ ಮೇಲೆ ಭರವಸೆ ಇರಲಿಲ್ಲ. ಒಂದು ವರ್ಷಕ್ಕೂ ಹೆಚ್ಚು ಹೂಡಿಕೆದಾರರಿಗಾಗಿ ಅಲೆದಾಡಿದ ಮೇಲೆ ಕೆಲವರು ಹಾವರ್ಡ್ ಯೋಜನೆಯಲ್ಲಿ ಹಣ ಹೂಡಲು ಮುಂದಾದರು.
ಹಾವರ್ಡ್ ‘ಇಲ್ ಜಿಯೋ ರ್ನಲ’ ಹೆಸರಿನಲ್ಲಿ ತಮ್ಮ ಕಾಫಿ ಅಂಗಡಿ ಆರಂಭಿ ಸಿದರು. ಮೂರು ವರ್ಷದ ಅವಧಿಯಲ್ಲಿ ಅವರ ಒಂದು ಅಂಗಡಿ ಮೂರು ಅಂಗಡಿಯಾಗಿ ವೃದ್ಧಿಸಿತು. ಈ ನಡುವೆ ಕೆಲಸವಿಲ್ಲದೆ ಅಲೆಯುತ್ತಿದ್ದ ಸಮಯದಲ್ಲಿ ತಮ್ಮ ಹೆಂಡತಿಯ ಸಂಬಳದ ಜೀವನ ನಡೆಸಿದರು. ಎರಡು ವರ್ಷದಲ್ಲಿ ಹಾವರ್ಡ್ ಎಷ್ಟು ಬೆಳೆದರೆಂದರೆ, ಸ್ವತಃ ಸ್ಟಾರ್‌ಬಕ್ಸ್ ತನ್ನ ರಿಟೇಲ್ ವ್ಯಾಪಾರದ ಹಕ್ಕನ್ನು ಹಾವರ್ಡ್‌ಗೆ ಮಾರಿತು. ಸುಮಾರು ನಾಲ್ಕು ಮಿಲಿಯನ್ ಡಾಲರ್‌ನಲ್ಲಿ ಆ ಹಕ್ಕನ್ನು ಖರೀದಿಸಿದ ಹಾವರ್ಡ್ ತಮ್ಮ ಸಂಸ್ಥೆಯನ್ನೂ ಅದರೊಂದಿಗೆ ಸೇರಿಸಿದರು. ಗ್ರಾಹಕರು ಕುಳಿತುಕೊಂಡು
ಮಾತನಾಡಲು ಸೌಲಭ್ಯ ಕಲ್ಪಿಸಿಕೊಟ್ಟರು.
ಪ್ರೇಮಿಗಳು ಹೃದಯದ ಮಾತು ಹಂಚಿಕೊಳ್ಳಲು, ಉದ್ಯಮಿಗಳು ವ್ಯವಹಾ ರದ ಮಾತನಾಡಲು, ಸ್ನೇಹಿತರು ಸುಖ-ದುಃಖ ತೋಡಿಕೊಳ್ಳಲು, ಸಮಯ ಕಳೆಯಲು ಸ್ಥಳ ಒದಗಿಸಿಕೊಟ್ಟರು. ಅವರು ೧೯೮೬ ರಿಂದ ೨೦೦೦ದ ವರೆಗೆ, ಹದಿನಾಲ್ಕು ವರ್ಷಗಳವರೆಗೆ ಸಿಇಒ ಆಗಿ ಕಾರ್ಯ ನಿರ್ವಹಿಸಿದರು.
ಹಾವರ್ಡ್ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ವಿಮೆ ಒದಗಿಸಿಕೊಟ್ಟರು. ತನ್ನ ತಂದೆಗೆ, ತಮ್ಮ ಮನೆಗೆ ಬಂದ ಪರಿಸ್ಥಿತಿ ತನ್ನ ಸಂಸ್ಥೆಯಲ್ಲಿ ಕೆಲಸ
ಮಾಡುವ ಯಾವ ನೌಕರನಿಗೂ ಬರಬಾರದು ಎಂಬುದು ಅವರ ಉದ್ದೇಶವಾಗಿತ್ತು. ೨೦೦೮ರಲ್ಲಿ ಸಂಸ್ಥೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾಗ ಮತ್ತೆ
ಬಂದು, ಕುಸಿಯುತ್ತಿದ್ದ ಸಂಸ್ಥೆಯನ್ನು ಎತ್ತಿ ಹಿಡಿದರು. ಮುಂದಿನ ಹತ್ತು ವರ್ಷದಲ್ಲಿ ಸಂಸ್ಥೆಗೆ ನೂರು ಬಿಲಿಯನ್ ಡಾಲರ್ ಹೂಡಿಕೆ ತರುವಲ್ಲಿ
ಯಶಸ್ವಿಯಾದರು. ಹಾವರ್ಡ್ ೨೦೧೭ರಲ್ಲಿ ಅಮೆರಿಕದ ಡೆಮಾಕ್ರಟಿಕ್ ಪಕ್ಷವನ್ನು ಸೇರಿಕೊಂಡರು. ನಂತರ ಅದರಿಂದಲೂ ಹೊರಬಂದು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದರು. ಒಂದಂತೂ ಸತ್ಯ, ವ್ಯಾಪಾರದಲ್ಲಿ ಅವರ ಕೈ ಹಿಡಿದ ಅದೃಷ್ಟ ದೇವತೆ, ರಾಜಕೀಯ ಜೀವನದಲ್ಲಿ ಅವರ ಕೈ ಹಿಡಿಯಲಿಲ್ಲ.
ಇನ್ನೊಂದು ವಿಷಯ ಗೊತ್ತಾ? ವ್ಯಾಪಾರ, ವ್ಯವಹಾರದ ವಿಷಯಕ್ಕೆ ಸಂಬಂಧಿಸಿದ ನಾಲ್ಕು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಮನುಷ್ಯನ ಜೀವನದಲ್ಲಿ ಕಷ್ಟ ಶಾಶ್ವತವಲ್ಲ, ಸಾಧನೆಯ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಉದಾಹರಣೆ ಹಾವರ್ಡ್ ಶಲ್ಜ. ಕಾಫಿಯ ಪರಿಮಳಕ್ಕೆ ಉದ್ಯಮದ ರುಚಿ ತುಂಬಿದ ಕೆಲವರಲ್ಲಿ ಹಾವರ್ಡ್ ಶಲ್ಜ ಕೂಡ ಒಬ್ಬರು. ಕಾಫಿ ಕಿಂಗ್ ಬಗ್ಗೆ ಇಷ್ಟು ತಿಳಿದಮೇಲೂ ಒಂದು ಕಪ್ ಕಾಫಿ ಕುಡಿಯದಿದ್ದರೆ ಹೇಗೆ? ಬನ್ನಿ ಹೋಗೋಣ, ಕಾಫಿ ಕುಡಿಯೋಣ!