Thursday, 12th December 2024

ಆಂತರಿಕ ಶಿಸ್ತಿಲ್ಲದೇ ಬೆತ್ತಲಾಗುತ್ತಿರುವ ರಾಜ್ಯ ಬಿಜೆಪಿ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ಬಿಜೆಪಿ ಶಿಸ್ತಿನ ಪಕ್ಷ. ಪಕ್ಷದಲ್ಲಿ ಆಂತರಿಕ ಶಿಸ್ತು ಪಾಲಿಸಿ, ನಿಷ್ಠಾವಂತ ಕಾರ್ಯಕರ್ತ ಎನಿಸಿಕೊಳ್ಳುವುದೇ ಅಲ್ಲಿ ಬೆಳೆಯುವುದಕ್ಕೆ ಮೊದಲ ಮೆಟ್ಟಿಲು. ಒಮ್ಮೆ ವರಿಷ್ಠರಿಂದ ಒಂದು ಸೂಚನೆ ಬಂದರೆ ಅದನ್ನು ಪಕ್ಷದ ಕಾರ್ಯಕರ್ತರಿಂದ ಹಿಡಿದು ಹಿರಿಯ ನಾಯಕರ ತನಕ ಪಾಲಿಸಲೇಬೇಕು. ಅನೇಕ ಪಕ್ಷಗಳು ಈ ಹಿಂದೆ ಆಂತರಿಕ ಶಿಸ್ತಿನ ವಿಷಯದಲ್ಲಿ ಬಿಜೆಪಿಯನ್ನು ‘ಕೋಟ್’ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಷಯ.

ಆದರೆ ಕರ್ನಾಟಕದ ಮಟ್ಟಿಗೆ ಈ ಎಲ್ಲವೂ ಇತ್ತೀಚಿನ ದಿನದಲ್ಲಿ ಇತಿಹಾಸ ವಾಗುತ್ತಿದೆಯೇ ಎನ್ನುವ ಅನುಮಾನಗಳು ಮೂಡುತ್ತಿವೆ. ರಾಜ್ಯ ಬಿಜೆಪಿಯಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ, ಈ ಮಾತು ಸುಳ್ಳು ಎನಿಸುವುದಿಲ್ಲ. ದೆಹಲಿಯಲ್ಲಿ ಗಟ್ಟಿ ನಾಯಕತ್ವವಿದ್ದು, ಬಿಜೆಪಿಯಲ್ಲಿ ಹುಲ್ಲುಕಡ್ಡಿ ಆಚೀಚೆ ಅಲುಗಾಡಬೇಕು ಎಂದರೂ, ದೆಹಲಿ ಯಿಂದ ಒಪ್ಪಿಗೆ ಬರಬೇಕು ಎನ್ನುವ ಸ್ಥಿತಿಯಿದೆ.

ಇದೇ ರೀತಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಡೆಯುತ್ತಿದೆ ಕೂಡ. ಆದರೆ ಕರ್ನಾಟಕದ ಮಟ್ಟಿಗೆ ಮಾತ್ರ ಅದ್ಯಾಕೋ ಪೂರ್ಣ ಪ್ರಮಾಣದಲ್ಲಿ ಇದು ಅನ್ವಯಿಸುತ್ತಿಲ್ಲ. ಯಾವುದೇ ತೀರ್ಮಾನ ಕೈಗೊಳ್ಳಬೇಕಾದರೂ ದೆಹಲಿ ನಾಯಕರತ್ತ ಬೊಟ್ಟು ಮಾಡುವ ರಾಜ್ಯ ಬಿಜೆಪಿ ನಾಯಕರು, ಶಿಸ್ತಿನ ವಿಚಾರದಲ್ಲಿ ಮಾತ್ರ ವರಿಷ್ಠರ ಮಾತನ್ನು ಪದೇ ಪದೆ ಉಲ್ಲಂಸುತ್ತಿದ್ದಾರೆ. ಈ ಮಾತನ್ನು ಏಕೆ ಪ್ರಸ್ತಾಪ ಮಾಡುತ್ತಿದ್ದೇನೆ ಎಂದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎನ್ನುವ ಮಾತು ಕಳೆದೊಂದು ತಿಂಗಳಿನಿಂದ ಭಾರಿ ಮಹತ್ವಪಡೆದಿದೆ. ಇದಕ್ಕೆ ಪೂರಕವಾಗಿ ಯಡಿಯೂರಪ್ಪ ವಿರೋಧಿ ಬಣ ದೆಹಲಿಗೆ ದಂಡೆತ್ತಿ ಹೋಗುವುದೇನು, ಇನ್ನು 15 ದಿನದಲ್ಲಿ ಎಲ್ಲವೂ ತಿಳಿಯುತ್ತದೆ ಎನ್ನುವುದೇನು.

ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಬಣದವರು ಸಹಿ ಸಂಗ್ರಹಿಸಿದ್ದೇ ಸಂಗ್ರಹಿಸಿದ್ದು. ಈ ಎರಡು ಬಣದವರು, ನಾವೆಲ್ಲ ಒಂದೇ
ಪಕ್ಷದವರು ಎನ್ನುವುದನ್ನು ಮರೆತು, ವಾಕ್ಸಮರ ನಡೆಸಿದರು. ಆರೋಪ ಪ್ರತ್ಯಾರೋಪ ಮಾಡಿದರು. ಈ ಎಲ್ಲ ಪ್ರಹಸನದ
ಬಳಿಕ ಸ್ವತಃ ಯಡಿಯೂರಪ್ಪ ಅವರು ‘ಹೈಕಮಾಂಡ್ ಸೂಚಿಸಿದರೆ ರಾಜೀನಾಮೆಗೆ ಸಿದ್ಧ’ ಎಂದು ಹೇಳಿದ್ದೂ ಇದೆ. ಈ ಎಲ್ಲ ಬೆಳವಣಿಗೆ ಬಳಿಕ ಬಿಜೆಪಿ ವರಿಷ್ಠರು ತಮ್ಮ ನಿಲುವುದನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂಲಕ, ‘ಯಡಿಯೂ ರಪ್ಪ ಅವರು ಮುಂದಿನ ಎರಡು ವರ್ಷಕ್ಕೆ ಮುಖ್ಯಮಂತ್ರಿ. ಅವರ ವಿರುದ್ಧ ಯಾರೊಬ್ಬರು ಮಾತನಾಡುವಂತಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎನ್ನುವ ಸದ್ಯಕ್ಕಿಲ್ಲ’ ಎಂದು ಹೇಳಿಸಿದರು.

ಇದರಿಂದ ಈ ಆಂತರಿಕ ಬೇಗುದಿ ಬಗೆಹರಿಯುತ್ತದೆ ಎಂದು ಅನೇಕರು ಭಾವಿಸಿದ್ದರು. ವರಿಷ್ಠರಿಂದ ಸ್ಪಷ್ಟ ಸೂಚನೆ ಬಂದ ಬಳಿಕವೂ, ರಾಜ್ಯದಲ್ಲಿ ಕೆಲವರು ನಾಯಕತ್ವ ಬದಲಾವಣೆಯನ್ನು ಜೀವಂತ ವಾಗಿರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅರವಿಂದ ಬೆಲ್ಲದ್ ಖಾಸಗಿ ಕಾರ್ಯಕ್ರಮದ ನೆಪದಲ್ಲಿ ದೆಹಲಿಗೆ ತಲುಪಿದ್ದು, ಅವರು ವಾಪಸಾಗುತ್ತಿದ್ದಂತೆ ಇನ್ನೊಬ್ಬರು ದೆಹಲಿ ಯಾತ್ರೆ
ಕೈಗೊಳ್ಳುವ ಲೆಕ್ಕಚಾರದಲ್ಲಿದ್ದಾರೆ. ಇದರಿಂದ ಅವರು ಅಂದುಕೊಂಡಿದ್ದು ಸಾಧ್ಯವಾಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯ ಬಿಜೆಪಿಗಿರುವ ಗೌರವವಂತೂ ಕ್ಷೀಣಿಸುತ್ತದೆ.

ಗೊಂದಲ ಸೃಷ್ಟಿಸುತ್ತಿರುವವರಿಗೆ, ಈ ರೀತಿ ಆಂತರಿಕ ಕಚ್ಚಾಟದಿಂದ ಆಗುವ ಗೊಂದಲಗಳಿಗೆ ಪ್ರತಿಪಕ್ಷಗಳು ಕಾಯುತ್ತಿರುತ್ತವೆ ಎನ್ನುವುದನ್ನು ತಿಳಿಯದಿರುವಷ್ಟು ಚಿಕ್ಕವರು ಏನಲ್ಲ. ಇನ್ನು ಸೋಮವಾರವೂ ಸಹ ಅರವಿಂದ ಬೆಲ್ಲದ್ ಅವರು ಅರುಣ್ ಸಿಂಗ್‌ರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಈ ಭೇಟಿಯಿಂದ ಪುನಃ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಗೆ ರೆಕ್ಕೆ – ಪುಕ್ಕ ಶುರುವಾಗಿದೆ. ಈ ರೀತಿಯ ಭೇಟಿಗಳು ಈ ಅನುಮಾನಕ್ಕೆ ಪುಷ್ಟಿ ನೀಡುತ್ತವೆ ಎನ್ನುವುದು ಗೊತ್ತಿದ್ದರೂ, ಭೇಟಿಗೆ ಸಮಯಾವಕಾಶ ನೀಡುತ್ತಿರುವುದು ಏಕೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಈ ರೀತಿ ಆಂತರಿಕ ಶಿಸ್ತಿಲ್ಲದಿದ್ದರೆ ಪಕ್ಷವನ್ನು ಕಟ್ಟುವುದು ಹೋಗಲಿ, ಕಟ್ಟಿರುವ ಗೋಪುರವೂ ಪತನವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಹಾಗೆ ನೋಡಿದರೆ ಬಿಜೆಪಿಯಲ್ಲಿ ಈ ರೀತಿಯ ಆಂತರಿಕ ಅಶಿಸ್ತನ್ನು ಉಲ್ಲಂಘಿಸಿದವರ ವಿರುದ್ಧ “zero tolerance’.  ಹಿಂದಿದ್ದ ಬಿಜೆಪಿ ನಾಯಕರು ಪಕ್ಷ ಹಾಗೂ ಸಿದ್ಧಾಂತಕ್ಕೆ ಹೆಚ್ಚು ಬದ್ಧರಾಗಿರುತ್ತಿದ್ದರು. ಯಾರೇ ಪಕ್ಷದ ವಿರುದ್ಧ ಹೋದರೂ, ಅವರ ವಿರುದ್ಧ ಶೋಕಾಸ್ ನೊಟೀಸ್ ಸಿದ್ಧವಾಗಿರುತ್ತಿತ್ತು. ಬೂತ್ ಅಧ್ಯಕ್ಷನಿಂದ ರಾಷ್ಟ್ರಾಧ್ಯಕ್ಷನ ತನಕ ಇದೇ ನಿಯಮವಿತ್ತು. ಅದಕ್ಕೆ ಬಿಜೆಪಿಗರು ನಮ್ಮಲ್ಲಿ ‘ಆಂತರಿಕ ಪ್ರಜಾಪ್ರಭುತ್ವ’ವಿದೆ ಎಂದು ಈಗಲೂ ಎದೆ ಉಬ್ಬಿಸಿ ಹೇಳುವುದನ್ನು ಕೇಳಿದ್ದೇವೆ. ಆದರೆ ಈಗ ಆಗುತ್ತಿರುವು ದೇನು? ರಾಜ್ಯಾಧ್ಯಕ್ಷರು, ರಾಜ್ಯ ಉಸ್ತುವಾರಿ ಕಡ್ಡಿ ಮುರಿದಂತೆ ಹೇಳಿದರೂ, ಓಪನ್ ಸಿಕ್ರೇಟ್ ರೀತಿ ಯಡಿಯೂರಪ್ಪ ವಿರುದ್ಧ
ಕೆಲಸಗಳು ನಡೆಯುತ್ತಿದೆ.

ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ಕೆಲಸಗಳು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕರ್ನಾಟಕದಿಂದ ದೆಹಲಿಯ ಆಯಕಟ್ಟಿನ ಸ್ಥಾನದಲ್ಲಿ ಕೂತಿರುವ ಬಿ.ಎಲ್. ಸಂತೋಷ್, ಸಿ.ಟಿ. ರವಿ ಅವರಿಗೆ ತಿಳಿದಿಲ್ಲ ಎಂದಲ್ಲ. ಎಲ್ಲರೂ ‘ಹೇಗಾಗುವುದೋ ಹಾಗೇ ಆಗಲಿ’ ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಆದರೆ ಬಿಜೆಪಿ ನಾಯಕರು ಒಂದು ವಿಷಯವನ್ನು ಇಲ್ಲಿ
ಅರ್ಥ ಮಾಡಿಕೊಳ್ಳುತ್ತಿಲ್ಲ. ಮನೆಯ ಜಗಳವನ್ನು ಬೀದಿಯಲ್ಲಿ ಮಾಡಿದರೆ, ಪ್ರಯೋಜನವಾಗುವುದು ಬೀದಿಯಲ್ಲಿ ಓಡಾಡು ವವರಿಗೆ ಹೊರತು, ಮನೆಯಲ್ಲಿರುವವರಿಗೆ ಅಲ್ಲ ಎನ್ನುವುದು.

ಈಗಾಗುತ್ತಿರುವುದು ಇದೇ, ಬಿಜೆಪಿಯ ಆಂತರಿಕ ಕಚ್ಚಾಟವನ್ನು ಗಮನಿಸುತ್ತಿರುವ ಕಾಂಗ್ರೆಸ್, ಅದನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯಲ್ಲಿ ವಾಜಪೇಯಿ ಅವರ ಕಾಲದಿಂದಲೂ ಶಿಸ್ತಿಗೆ ಹೆಸರಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಜೋಡಿ ಬಿಜೆಪಿಯ ಚುಕ್ಕಾಣಿ ಹಿಡಿದ ಬಳಿಕ, ಈ ಶಿಸ್ತು ಇನ್ನಷ್ಟು ಹೆಚ್ಚಿತ್ತು. ಹೈಕಮಾಂಡ್ ಕೇವಲ ರಾಜ್ಯ ನಾಯಕರ ಮಾತನ್ನು ಕೇಳಿ ನಿರ್ಧರಿಸುವ ಬದಲು, ತಮ್ಮ ‘ಮೂಲ’ಗಳನ್ನು ಬಳಸಿಕೊಂಡು, ರಾಜ್ಯ ಬಿಜೆಪಿ ಘಟಕಗಳನ್ನು ಹ್ಯಾಂಡಲ್ ಮಾಡಲು ಶುರು ಮಾಡಿದರು. ಈ ರೀತಿಯಾಗಲು ಶುರುವಾದ ಬಳಿಕವೇ, ರಾಜ್ಯದಲ್ಲಿ ಹಲವು ಅಚ್ಚರಿಯ ಆಯ್ಕೆಗಳು ಆಗಿರುವುದನ್ನು ನಾವು ನೋಡಿದ್ದೇವೆ. ಇನ್ನು ಮುಖ್ಯಮಂತ್ರಿಗಳ ಆಯ್ಕೆಯಿಂದ ಹಿಡಿದು ಸಚಿವರಾಗಿ ಯಾರು ಆಯ್ಕೆಯಾಗಬೇಕು ಎನ್ನುವುದು
ಶಾಸಕಾಂಗ ಸಭೆ ಅಥವಾ ಮುಖ್ಯಮಂತ್ರಿಗಳು ನಿರ್ಧರಿಸುವ ಬದಲು, ಪಕ್ಷ ‘ಹೈಕಮಾಂಡ್‌ನಿಂದ ಬರುವ ಲಕೋಟೆ’ಯಲ್ಲಿ
ನಿರ್ಧಾರವಾಗಲಿದೆ ಎನ್ನುವುದಕ್ಕೆ ಈಗಾಗಲೇ ಅನೇಕ ನಿದರ್ಶನಗಳು ನಮ್ಮ ಕಣ್ಣಮುಂದಿವೆ.

ಒಂದು ರೀತಿ ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್‌ನಲ್ಲಿದ್ದಂತೆ ಈಗ ಬಿಜೆಪಿಯಲ್ಲಿದೆ ಎನ್ನುವ ಮಾತುಗಳನ್ನು ಅನೇಕ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಇಷ್ಟು ಶಿಸ್ತಿದ್ದರೂ ರಾಜ್ಯದ ಕೆಲ ನಾಯಕರು ಮಾತ್ರ ಈ ಎಲ್ಲವನ್ನು ಮೀರಿ ನಡೆದುಕೊಳ್ಳು ತ್ತಿದ್ದಾರೆ. ಈ ರೀತಿ ನಡೆದುಕೊಳ್ಳುವುದಕ್ಕೆ ಭಂಡ ಧೈರ್ಯವೋ ಅಥವಾ ಕಣ್ಣಿಗೆ ಕಾಣದ ಕೆಲ ನಾಯಕರ ಬೆಂಬಲವೋ ಗೊತ್ತಿಲ್ಲ. ಆದರೆ ಪಕ್ಷದಲ್ಲಿರುವ ಈ ಎಲ್ಲ ಗೊಂದಲವನ್ನು ನಿವಾರಿಸಿ, ಆಂತರಿಕ ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸ
ಬೇಕಿರುವುದು ಪಕ್ಷದ ರಾಜ್ಯಾಧ್ಯಕ್ಷರು. ಆದರೆ ಈ ವಿಷಯದಲ್ಲಿ ಕಟೀಲ್ ಅವರು ಯಶಸ್ವಿಯಾಗಿಲ್ಲ.

ಪಕ್ಷದ ವಿರುದ್ಧ ಮಾತನಾಡುವವರಿಗೆ ಮಾಧ್ಯಮಗಳ ಮುಂದೆ ಎಚ್ಚರಿಕೆ ನೀಡುವುದು ಬಿಟ್ಟರೆ ಇನ್ಯಾವ ಕೆಲಸಗಳೂ ಆಗುತ್ತಿಲ್ಲ.
ಪಕ್ಷದ ಮೇಲಿರಬೇಕಿದ್ದ ಹಿಡಿತ ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿರುವುದು ಈ ಸಮಸ್ಯೆಗೆ ಕಾರಣ. ಇನ್ನು ಇಲ್ಲಿ ಇನ್ನೊಂದು ವಿಷಯವನ್ನು ಪ್ರಸ್ತಾಪಿಸಬೇಕಿದೆ. ಈಗಾಗಲೇ ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಿ ಆರಂಭಿಸಬೇಕು ಎನ್ನುವ ಮಾತನ್ನು ಕಾಂಗ್ರೆಸ್ ಆಡಿದೆ. ಬಿಜೆಪಿಯ ವರಿಷ್ಠರು ಸಹ ಕರೋನಾ ಮುಗಿಯುತ್ತಿದ್ದಂತೆ ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.  ಈ ಸಮಯದಲ್ಲಿ, ಬಿಜೆಪಿಯಲ್ಲಿ ಆಂತರಿಕ ಕಲಹದಿಂದ ಲಾಭವಾಗುವುದು ಕಾಂಗ್ರೆಸ್‌ಗೆ.

ಆದರೆ ಇದನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾಗಿರುವ ಅಥವಾ ಅರ್ಥ ಮಾಡಿಕೊಂಡರೂ, ತಿಳಿಯದವರಂತೆ ವರ್ತಿಸುತ್ತಿರುವ
ಬಿಜೆಪಿಯ ಕೆಲ ನಾಯಕರಿಗೆ ಬುದ್ಧಿ ಹೇಳಬೇಕಾದ ಕೆಲಸವನ್ನು ಬಿಜೆಪಿಯ ಸಂಘಟನೆಯಲ್ಲಿರುವ ನಾಯಕರು ಮಾಡುತ್ತಿಲ್ಲ.
ಹಾಗೆ ನೋಡಿದರೆ ಬಿಜೆಪಿ ಆಂತರಿಕ ಶಿಸ್ತಿಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಹೆಸರಾಗಿರುವ ಪಕ್ಷ. ಪಕ್ಷ ಕಟ್ಟಿದ ಮೊದಲ ಹಂತದ ನಾಯಕರು ಇದೇ ರೀತಿಯಲ್ಲಿಯೇ ಇದ್ದರು. ಪಕ್ಷದ ವಿರುದ್ಧ ಒಂದು ಮಾತು ಆಡಿದ್ದಕ್ಕೆ ಶೋಕಾಸ್ ನೀಡಿದ ಅನೇಕ ಉದಾಹರಣೆ ಗಳು ನಮ್ಮ ಮುಂದಿವೆ. ಈಗ ಪಕ್ಷದ ವಿರುದ್ಧ ಮಾತನಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಾಜಪೇಯಿ ಅವರ ಕಾಲದಲ್ಲಿ ರೈಲ್ವೇ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದರು.

ಇದರೊಂದಿಗೆ ಆರ್‌ಎಸ್‌ಎಸ್ ಹಾಗೂ ಕೇಂದ್ರ ಬಿಜೆಪಿ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಆದರೆ ಪಕ್ಷದ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕೆ, ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿದಿರುವುದು ನಮ್ಮ ಕಣ್ಣ ಮುಂದಿದೆ. ಇನ್ನು ಇದೇ ರೀತಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಹಾಗೂ ಉಮಾಭಾರತಿ ಅವರಿಗೆ ಆತ್ಮೀಯವಾಗಿದ್ದ ಕೆ.ಎನ್.
ಗೋವಿಂದಾಚಾರ್ಯ ಅವರು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧ ಹೇಳಿಕೆ ನೀಡಿದ್ದ ಒಂದೇ ಕಾರಣಕ್ಕೆ ಅವರನ್ನು ಪಕ್ಷ ಪ್ರಮುಖ ಹುದ್ದೆಯಿಂದ ಕೆಳಗಿಳಿಸಿ ಬಳಿಕ ಉಚ್ಚಾಟಿಸ ಲಾಯಿತು. ಆರ್‌ಎಸ್‌ಎಸ್‌ನಲ್ಲಿ ಉನ್ನತ ಸ್ಥಾನದಲ್ಲಿದ್ದ ಗೋವಿಂದಾಚಾರ್ಯ ಅವರು, ‘”Prime Minister Atal Bihari Vajpayee was a ‘mukhota (mask)’ ಎಂದು ಜರಿದಿದ್ದರು. ಆದ್ದರಿಂದ ಪಕ್ಷದ ಪ್ರಮುಖ ನಾಯಕ ರಾಗಿದ್ದರೂ ಅವರ ವಿರುದ್ಧ ಶಿಸ್ತು ಕ್ರಮವಹಿಸಲಾಯಿತು.

ಆದರೆ ರಾಜ್ಯ ಬಿಜೆಪಿಯಲ್ಲಿ ಸದ್ಯ ಆಗುತ್ತಿರುವುದೇನು? ಯಡಿಯೂರಪ್ಪ ವಿರುದ್ಧ ಅನೇಕ ಶಾಸಕರು ಬಂಡಾಯ ಏಳುತ್ತಿದ್ದಾರೆ. ಅದರಲ್ಲಿಯೂ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಯೋಗೇಶ್ವರ ಅವರು ಯಡಿಯೂರಪ್ಪ ವಿರುದ್ಧ ನೇರವಾಗಿಯೇ ಆರೋಪಿಸಿದ್ದಾರೆ. ಆದರೆ ಈ ಇಬ್ಬರ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯತ್ನಾಳ್ ವಿರುದ್ಧ ಕಾಟಾಚಾರಕ್ಕೆ ಎನ್ನುವ ಹಾಗೆ ಶೋಕಾಸ್ ನೋಟಿಸ್ ನೀಡಿದ್ದು ಹೊರತುಪಡಿಸಿ ಇನ್ಯಾವ ಪ್ರಕ್ರಿಯೆಗಳು ನಡೆದಿಲ್ಲ. ಇನ್ನು ಯೋಗೇಶ್ವರ ವಿರುದ್ಧ ಈ ಕ್ರಮವೂ ಕೈಗೊಂಡಿಲ್ಲ.

ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದು, ಅವರಿಂದ ವಿವರಣೆ ಪಡೆಯುತ್ತಿದ್ದೇವೆ ಎನ್ನುವ ಮಾತನ್ನು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದರೂ, ‘ನನಗೆ ಯಾವುದೇ ಶೋಕಾಸ್ ನೊಟೀಸ್ ಸಿಕ್ಕಿಲ್ಲ.’ ಎಂದು ಹೇಳಿಕೊಂಡು, ಪುನಃ ಯಡಿಯೂರಪ್ಪ ವಿರುದ್ಧ ವಾಕ್ಸಮರ ನಡೆಸಿದ್ದು ಮುಂದಿದ್ದರೂ, ಅವರ ವಿರುದ್ಧ ಏನೂ ಮಾಡಲಾಗದೇ ಸುಮ್ಮನೆ ನೋಡಿ ಕೊಂಡು ಕುಳಿತುಕೊಳ್ಳುವ ಸ್ಥಿತಿಗೆ ರಾಜ್ಯ ಬಿಜೆಪಿ ಬಂದು ಕೂತಿದೆ.

ಯಡಿಯೂರಪ್ಪ ವಿರುದ್ಧ ಮಾತನಾಡಿದರು ಎನ್ನುವ ಕಾರಣಕ್ಕೆ ಶಿಸ್ತುಕ್ರಮ ವಹಿಸಬೇಕು ಎನ್ನುವುದಕ್ಕಿಂತ, ಪಕ್ಷವಾಗಿ ಆಂತರಿಕ ಶಿಸ್ತನ್ನು ಕಾಪಾಡಿಕೊಳ್ಳುವುದಕ್ಕೂ ಸಾಧ್ಯವಾಗದೇ ಇದ್ದರೆ, ಮುಂದೆ ಯಾರ ವಿರುದ್ಧ ಯಾರು ಬೇಕಾದರೂ ಮಾತನಾಡಬಹುದು ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಆಂತರಿಕ ಶಿಸ್ತು, ಹೊಂದಾಣಿಕೆ ಇಲ್ಲದೇ ಯಾವುದೇ ಪಕ್ಷ ಹೆಚ್ಚು ದಿನ ಆಡಳಿತ ಪಕ್ಷದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ. ಪಕ್ಷದ ವರಿಷ್ಠರು ದೆಹಲಿಯಲ್ಲಿ ಕೂತು ಪ್ರತಿಯೊಂದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಏರಬೇಕು ಎನ್ನುವ ಉತ್ಸಾಹದಲ್ಲಿರುವ ರಾಜ್ಯ ಬಿಜೆಪಿ ನಾಯಕರ ಈ ವರ್ತನೆ ನಿಜಕ್ಕೂ ಪಕ್ಷದ ಹಾಗೂ ವೈಯಕ್ತಿಕ ಬೆಳವಣಿಗೆ ಸೋಪಾನವಂತೂ ಅಲ್ಲ.