Saturday, 14th December 2024

ಏಕತಾ ಪ್ರತಿಮೆಯ ಸುತ್ತಮುತ್ತ

ಪ್ರಕಾಶಪಥ

ಪ್ರಕಾಶ್ ಶೇಷರಾಘವಾಚಾರ್‌

ತಮ್ಮನ್ನು ಬುದ್ಧಿಜೀವಿಯ ಅಪರಾವತಾರವೆಂದು ಭ್ರಮಿಸಿಕೊಂಡಿರುವ ಚಿತ್ರನಟರೊಬ್ಬರು, ತಮ್ಮಲ್ಲಿ ಉಕ್ಕುವ ಮೋದಿದ್ವೇಷದಿಂದಾಗಿ ಬುಡವಿಲ್ಲದ
ಆರೋಪಗಳನ್ನು ಆಗಾಗ ಮಾಡುವುದಿದೆ. ಹೀಗೆ ಆರೋಪಿಸುವ ಮುನ್ನ ಸತ್ಯಾಸತ್ಯತೆಗಳನ್ನು ಪರಿಶೀಲಿಸುವ ವ್ಯವಧಾನವಿಲ್ಲದೆ, ಟೀಕಿಸುವ ವಿಷಯದ ಅಸಲಿಯತ್ತನ್ನು ಅರಿಯುವ ಕಷ್ಟವನ್ನೇ ತೆಗೆದುಕೊಳ್ಳದೆ, ತೋಚಿದ್ದು ಹೇಳುವುದು ಇವರ ಚಾಳಿಯಾಗಿ ಬಿಟ್ಟಿದೆ.

ಮೊನ್ನೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇವರು, ‘ಪ್ರತಿಮೆಗೆ ೩,೦೦೦ ಕೋಟಿ ರು. ಕೊಡುವ ಮೋದಿಯವರು ಕೇರಳದಲ್ಲಿ ಪ್ರವಾಹ ಬಂದರೆ ಅದಕ್ಕೆ ೫೦೦ ಕೋಟಿ ಯನ್ನೂ ಕೊಡುವುದಿಲ್ಲ. ಶಾಲೆಗಳಲ್ಲಿ ಶೌಚಾಲಯವಿಲ್ಲ, ಅದಕ್ಕೆ ಆದ್ಯತೆಯಿಲ್ಲ’ ಎಂದು ಆರೋಪಿಸಿ ಕಪಟ ಸಮಾಜ ಸುಧಾ ರಕನ ಪೋಸು ನೀಡಿದರು. ಒಂದು ರಾಜ್ಯದ ಹಣವನ್ನು ದೇಶದ ಇತರೆ ರಾಜ್ಯಗಳ ಸಮಸ್ಯೆಗಳ ಪರಿಹಾರಕ್ಕೆ ನೀಡಲಾಗದು ಎಂಬ ಪ್ರಾಥಮಿಕ ಜ್ಞಾನವೂ ಇವರಿಗಿಲ್ಲ.

ಗುಜರಾತಿನ ಕೇವಡಿಯಾದಲ್ಲಿ ಸ್ಥಾಪಿಸಿರುವ ಸರ್ದಾರ್ ಪಟೇಲರ ಪ್ರತಿಮೆಯು, ಮೋದಿ-ವಿರೋಧಿಗಳಿಗೆ ಅವರ ವಿರುದ್ಧ ಆಗಾಗ ಪ್ರಯೋಗಿಸಲು ದಕ್ಕಿರುವ ಆಯುಧವಾಗಿ ಬಿಟ್ಟಿದೆ. ಜನರ ದಾರಿ ತಪ್ಪಿಸಲೆಂದು ಎಲ್ಲ ಸಮಸ್ಯೆಗಳನ್ನೂ ಪ್ರತಿಮೆಯ ವೆಚ್ಚದೊಂದಿಗೆ ಸಮೀಕರಿಸಿ ಆರೋಪಿಸುವುದು ಇಂಥವರ ಜಾಯಮಾನ. ಪಟೇಲರ ಪ್ರತಿಮೆ ಸ್ಥಾಪಿಸಿರುವುದು ಗುಜರಾತ್ ಸರಕಾರ. ಅದಕ್ಕೆಂದು ಗುಜರಾತಿಗರು ೫೦೦ ಕೋಟಿ ರು. ದೇಣಿಗೆ ನೀಡಿದ್ದಾರೆ ಮತ್ತು ಗುಜರಾತಿನ ಸರಕಾರ ಸಿಎಸ್‌ಆರ್ ನಿಧಿಯನ್ನು ಇದಕ್ಕಾಗಿ ಬಳಸಿಕೊಂಡಿದೆ. ಕೇವಡಿಯಾದಲ್ಲಿ ಮೋದಿಯವರು ಪ್ರತಿಮೆಯನ್ನಷ್ಟೇ ಸ್ಥಾಪಿಸಿಲ್ಲ; ಅಲ್ಲಿ ಬೃಹತ್ ಪ್ರವಾಸಿ ಕೇಂದ್ರವನ್ನೇ ನಿರ್ಮಿಸಿ ಸಹಸ್ರಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟಿದ್ದಾರೆ.

ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ರಾಜ್ಯಗಳಿಗೆ ವಿದ್ಯುತ್ ಮತ್ತು ನೀರು ಕೊಡುವ ಜೀವನದಿಯಾದ ನರ್ಮದೆಗೆ, ಅಹಮದಾ ಬಾದ್‌ನಿಂದ ೧೯೨ ಕಿ.ಮೀ. ದೂರದಲ್ಲಿರುವ ಕೇವಡಿಯಾ ಗ್ರಾಮದಲ್ಲಿ ಅಣೆಕಟ್ಟು ನಿರ್ಮಿಸಲಾಗಿದೆ. ಈ ಸುಂದರ ಪರಿಸರವನ್ನು ಹಿನ್ನೆಲೆಯಾಗಿಟ್ಟು ಕೊಂಡು ಪಟೇಲರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ನಾಯಕನಿಗೆ ದೂರದೃಷ್ಟಿಯಿದ್ದರೆ ಮತ್ತು ನೈಜ ಅಭಿವೃದ್ಧಿಯ ತುಡಿತವಿದ್ದರೆ, ಯಾವುದೋ ಮೂಲೆಯಲ್ಲಿ ಅಣೆಕಟ್ಟಿಗೆ ಮಾತ್ರ ಸುದ್ದಿಯಾಗಿದ್ದ ಸ್ಥಳವನ್ನು ದೇಶ- ವಿದೇಶಗಳ ಲಕ್ಷಾಂತರ ಪ್ರವಾಸಿಗರು ಭೇಟಿಕೊಡುವಂತೆ ರೂಪಾಂತರಿಸಲು ಸಾಧ್ಯ ಎಂಬುದನ್ನು ಮೋದಿ ತೋರಿಸಿ ಕೊಟ್ಟಿದ್ದಾರೆ.

ಇಲ್ಲಿ ರೂಪುಗೊಂಡಿರುವ ‘ಏಕತಾ ನಗರ’ವು ಪ್ರವಾಸೋದ್ಯಮವನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬುದಕ್ಕೆ ಇತರರಿಗೆ ಮಾದರಿಯಾಗಿದೆ. ಹೀಗೆ, ಪ್ರವಾಸೋದ್ಯಮಕ್ಕೆ ಇಂಬು, ಇತಿಹಾಸ ಪುರುಷನಿಗೆ ಗೌರವ, ನರ್ಮದೆಗೆ ಆರತಿ ಸೇವೆಯ ಸಮರ್ಪಣೆ ಮತ್ತು ಸ್ಥಳೀಯರಿಗೆ ಜೀವನೋಪಾಯ ಕಲ್ಪಿಸಿದೆ ಈ ಯೋಜನೆ. ಪ್ರತಿಮೆಗೆಂದು ಸಾವಿರಾರು ಕೋಟಿ ರು. ತೆರಿಗೆ ಹಣ ಹಾಳುಮಾಡಿದ್ದಾರೆ ಎಂದು ಟೀಕಿಸುವ ನಕಾರಾತ್ಮಕ ಮನಸ್ಥಿತಿಗಳಿಗೆ, ಕೇವಡಿ ಯಾದಲ್ಲಾಗಿರುವ ಅಭಿವೃದ್ಧಿ, ಅದರಿಂದಾಗಿ ರುವ ಬದಲಾವಣೆಯ ಬಗ್ಗೆ ಕಿಂಚಿತ್ತೂ ಅರಿವಿಲ್ಲ; ಅವರಿಗೆ ಗೊತ್ತಿರುವುದು ಮೋದಿಯವರ ಕುರಿತಾಗಿ ದುರುದ್ದೇಶ ಪೂರಿತ, ರಾಜಕೀಯ ಪ್ರೇರಿತ ಆರೋಪ ಮಾಡುವುದಷ್ಟೇ.

ಹಾಗಾದರೆ, ಸತ್ಯವೇನು? ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ೨೦೧೦ರಲ್ಲಿ ಪಟೇಲ್ ಪ್ರತಿಮೆ ಸ್ಥಾಪನೆಗೆ ಯೋಜಿಸಿದರು. ೨೦೧೩ ರಲ್ಲಿ ಇದಕ್ಕೆ ಚಾಲನೆ ಸಿಕ್ಕಿತು. ಸ್ವಾತಂತ್ರ್ಯ ಬಂದ ನಂತರ ಪಟೇಲರು ವಿವಿಧ ರಾಜಸಂಸ್ಥಾನ ಗಳನ್ನು ಒಗ್ಗೂಡಿಸಿ ಸಶಕ್ತ ಭಾರತವನ್ನು ರೂಪಿಸಿದಂತೆ ಮೋದಿಯವರು ೨೦೧೩ರಲ್ಲಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು, ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಿರುವ ಕಬ್ಬಿಣ ವನ್ನು ಎಲ್ಲ ರಾಜ್ಯಗಳಿಂದ ಸಂಗ್ರಹಿಸಿ ತನ್ಮೂಲಕ ದೇಶನಿವಾಸಿಗಳನ್ನು ಅದರ ಪಾಲುದಾರರಾಗಿಸಿದರು.

ಪಟೇಲರ ಭವ್ಯ ಪ್ರತಿಮೆಯು ಅತ್ಯಂತ ಪ್ರಶಸ್ತ ಮತ್ತು ಸುಂದರ ತಾಣದಲ್ಲಿ ಸ್ಥಾಪನೆಗೊಂಡಿದ್ದು, ಗುಜರಾತ್ ವಿಧಾನಸಭೆಯ ೧೮೨ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ೧೮೨ ಮೀ. ಎತ್ತರವನ್ನು ಹೊಂದಿದೆ. ಪ್ರವಾಸಿಗರು ಪ್ರತಿಮೆಯನ್ನಷ್ಟೇ ವೀಕ್ಷಿಸಿ ತೆರಳದಂತೆ, ಒಂದು ದಿನ ಕಳೆಯುವಷ್ಟು ಆಕರ್ಷಣೆ ಗಳನ್ನು ನಿರ್ಮಿಸಲಾಗಿದೆ. ತತ್ಪರಿಣಾಮ ವಾಗಿ ಕೇವಡಿಯಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರೆಸಾರ್ಟು ಗಳು, ಐಷಾರಾಮಿ ಹೋಟೆಲುಗಳು, ಡಾರ್ಮಿಟರಿ ವಸತಿ ಗೃಹಗಳು ತಲೆಯೆತ್ತಿವೆ. ಇದರಿಂದಾಗಿ ಸಾವಿರಾರು ಜನರಿಗೆ ಉದ್ಯೋಗ ದಕ್ಕಿ ಬದುಕಿಗೆ ಆಸರೆಯಾಗಿದೆ.

ಈ ಪ್ರತಿಮೆ ಹಾಗೂ ಸುತ್ತಲಿನ ಅಭಿವೃದ್ಧಿ ಯೋಜನೆಗಳಿಗೆಂದು ಭೂಮಿಯನ್ನು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಪ್ರವಾಸಿಗರು ವಿವಿಧ ತಾಣಗಳನ್ನು ಸಂದರ್ಶಿಸಲು ವಿದ್ಯುತ್ ಚಾಲಿತ ಆಟೋಗಳು ಲಭ್ಯವಿವೆ. ಆದಿವಾಸಿ ಮಹಿಳೆಯರಿಗೆ ಆಟೋ ಚಾಲನೆಯ ತರಬೇತಿ ನೀಡಿ, ಬ್ಯಾಂಕ್ ಮೂಲಕ ಆಟೋಗಳನ್ನು ಒದಗಿಸಲಾಗಿದೆ. ಇದರಿಂದಾಗಿ ೧೨೦ಕ್ಕೂ ಹೆಚ್ಚು ಮಹಿಳೆಯರು ಸ್ವಂತ ಕಾಲಮೇಲೆ ನಿಲ್ಲುವಂತಾಗಿದೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಮಹಿಳೆಯರು ಬೇಕಾಬಿಟ್ಟಿ ದರ ಕೇಳುವುದಿಲ್ಲ, ಒಪ್ಪಿಕೊಂಡ ಹಣಕ್ಕಿಂತ ಹೆಚ್ಚಾಗಿ ಕೊಟ್ಟರೂ ಸ್ವೀಕರಿಸುವುದಿಲ್ಲ. ನಮ್ಮ ಲಕೋಟೆಯೊಂದನ್ನು ನಮ್ಮನ್ನು ಸುತ್ತಾಡಿಸಿದ್ದ ಆಟೋದಲ್ಲೇ ಮರೆತು ಬಂದಾಗ, ಅದರ ಚಾಲಕಿ ೩ ಕಿ.ಮೀ. ದೂರದ ನಮ್ಮ ಹೋಟೆಲ್‌ಗೆ ಬಂದು
ಅದನ್ನು ಹಿಂದಿರುಗಿಸಿದರು. ಆಗ ದುಡ್ಡು ಕೊಡಲು ಹೋದಾಗಲೂ ನಿರಾಕರಿಸಿದರು. ಮಿಕ್ಕೆಡೆಗಳಲ್ಲಿನ ಆಟೋ ಚಾಲಕರಿಗೆ ಇವರು ಅನುಕರಣೀಯರು.

ಏಕತಾ ನಗರದ ಸ್ವಚ್ಛ ಮತ್ತು ವಿಶಾಲ ರಸ್ತೆಗಳು ಯಾವುದೋ ವಿದೇಶಿ ನೆಲದ ಅನುಭೂತಿಯನ್ನು ನೀಡುತ್ತವೆ. ಭಾರತದ ಪ್ರವಾಸಿ ತಾಣವೊಂದರಲ್ಲಿ ಇಂಥದೊಂದು ವ್ಯವಸ್ಥೆ ಸಾಕಾರಗೊಂಡಿರುವುದು ಹೆಮ್ಮೆಯ ಸಂಗತಿ. ರಾತ್ರಿಯಲ್ಲಿ ಬಣ್ಣ ಬಣ್ಣದ ಚಿತ್ತಾರದ ದೀಪಾಲಂಕಾರದಿಂದಾಗಿ ಈ ರಸ್ತೆಗಳು ಲಾಸ್ ವೆಗಾಸ್‌ನಲ್ಲಿನ ವೈಭವವನ್ನೂ ಮೀರಿಸುತ್ತವೆ. ರಾತ್ರಿ ವೇಳೆ ಈ ರಸ್ತೆಗಳಲ್ಲಿ ಸಂಚರಿಸುವುದೇ ಒಂದು ವಿಶಿಷ್ಟ ಅನುಭವ. ಏಕತಾ ನಗರದ ೩೭೫ ಎಕರೆ ಪ್ರದೇಶದಲ್ಲಿ ‘ಜಂಗಲ್ ಸ-ರಿ’ ಲಭ್ಯವಿದೆ. ಪ್ರವಾಸಿಗರನ್ನು ಸೆಳೆಯಲೆಂದು, ವಿವಿಧ ರಾಜ್ಯಗಳ ಕರಕುಶಲ ವಸ್ತುಗಳ ಮಾರಾಟ ಕೇಂದ್ರ ‘ಏಕತಾ ಮಾಲ್’, ಕ್ಯಾಕ್ಟಸ್ ಉದ್ಯಾನ, ಯೂನಿಟಿ ಗ್ಲೋ ಗಾರ್ಡನ್ ಹೀಗೆ ಹಲವಾರು ಆಕರ್ಷಣೆಗಳನ್ನು ನಿರ್ಮಿಸಲಾಗಿದೆ.

ಇವೆಲ್ಲಕ್ಕೂ ಶಿಖರಪ್ರಾಯವಾದ ಪಟೇಲರ ಪ್ರತಿಮೆ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರವೇಶ ದ್ವಾರದಿಂದ ಪ್ರತಿಮೆಯ ಸಮೀಪಕ್ಕೆ ತೆರಳಲು ವಿಮಾನ ನಿಲ್ದಾಣದಲ್ಲಿ ಕಾಣುವ ಟ್ರಾವಲೆಟರ್‌ಗಳನ್ನು ಅಳವಡಿಸಲಾಗಿದೆ. ಹೀಗೆ, ಪ್ರವಾಸಿಗರಿಗೆ ವಿನೂತನ ಅನುಭವ ಸಿಗುವಂತೆ ಯೋಜನೆ ರೂಪಿಸಿರು ವುದು ಇಲ್ಲಿನ ವಿಶೇಷ. ಪ್ರತಿಮೆಯೊಳಗೆ ಅಳವಡಿಸಿರುವ ೨ ಲಿಫ್ಟ್ ಮೂಲಕ ಪ್ರತಿಮೆಯ ಎದೆಮಟ್ಟದವರೆಗೆ ಹೋಗಿ ಏಕತಾ ನಗರದ ವಿಹಂಗಮ ದೃಶ್ಯ ವನ್ನು ಸವಿಯಬಹುದು. ಸಂಜೆಗತ್ತಲಾಗುತ್ತಿದ್ದಂತೆ ಪ್ರತಿಮೆಯನ್ನೇ ವೇದಿಕೆಯಾಗಿಸಿಕೊಂಡು ಆರಂಭ ವಾಗುವ ಲೇಸರ್ ಷೋ ನೋಡುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಈ ಪ್ರದರ್ಶನದಲ್ಲಿ ಪಟೇಲರ ಜೀವನವನ್ನು ಚಿತ್ತಾಕರ್ಷಕವಾಗಿ ತಿಳಿಸಿಕೊಡಲಾಗುತ್ತದೆ.

ಶೂಲಪಾಣೇಶ್ವರ ಮಹಾದೇವ ಮಂದಿರದ ಬಳಿ ನಡೆಯುವ ನರ್ಮದಾ ಆರತಿಯಲ್ಲಿ ಸಾವಿರಾರು ಜನರು ಭಾಗಿಯಾಗುತ್ತಾರೆ. ಗಂಗಾ ಆರತಿಗೆ ಸಮನಾಗಿ ನಡೆಯುವ ನರ್ಮದಾ ಆರತಿಯು ಇಲ್ಲಿನ ಪ್ರಮುಖ ಆಕರ್ಷಣೆ ಗಳಲ್ಲೊಂದು. ಐದು ವರ್ಷಗಳ ಹಿಂದೆ ಐನೂರು ಜನರೂ ಭೇಟಿನೀಡದಿದ್ದ ಈ ಸ್ಥಳ ವನ್ನು ೨೦೨೨-೨೩ರಲ್ಲಿ ೫೦ ಲಕ್ಷ ಪ್ರವಾಸಿಗರು ಸಂದರ್ಶಿಸಿದ್ದಾರೆ.

ಹೀಗೆ ಕೇವಡಿಯಾದಲ್ಲಿ ಪಟೇಲರ ಪ್ರತಿಮೆ ಸ್ಥಾಪಿಸಿ ಆ ಪ್ರದೇಶವನ್ನು ಗುಜರಾತಿನ ಅತಿದೊಡ್ಡ ಪ್ರವಾಸಿ ಕೇಂದ್ರವಾಗಿ ಮಾರ್ಪಡಿಸಿದ ಕೀರ್ತಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಪ್ರತಿಮೆಗಾಗಿ ದುಂದುವೆಚ್ಚವಾಗಿದೆ ಎಂದು ಆರೋಪಿಸುವವರು ಇಲ್ಲಿಗೊಮ್ಮೆ ಭೇಟಿಯಿತ್ತು, ಆಗಿರುವ ಸಕಾರಾತ್ಮಕ ಬದಲಾವಣೆಯನ್ನು ವೀಕ್ಷಿಸಿ ನಂತರ ಮಾತಾಡಬೇಕು. ಅದನ್ನು ಬಿಟ್ಟು ಸುಖಾಸುಮ್ಮನೆ ರಾಜಕೀಯ ಪ್ರೇರಿತ ಟೀಕೆಗಳನ್ನು ಮಾಡಿದರೆ, ಅದು
ಅಂಥವರ ಪೂರ್ವಗ್ರಹಪೀಡಿತ ಮನಸ್ಥಿತಿಗೆ ಕನ್ನಡಿ ಹಿಡಿಯುತ್ತದೆ, ಅಷ್ಟೇ!

(ಲೇಖಕರು ಬಿಜೆಪಿಯ ಮಾಜಿ
ಮಾಧ್ಯಮ ಸಂಚಾಲಕರು)