Thursday, 12th December 2024

ಸ್ಟೀವ್ ಜಾಬ್ಸ್ ಅಂದು ಹೇಳಿದ ಪವಾಡ-ಪ್ರವಾಸಿ ಸದೃಶ ಹೇಳಿಕೆ !

ಇದೇ ಅಂತರಂಗ ಸುದ್ದಿ

‘ನೀವು ಯಾವುದಾದರೂ ಒಂದು ವಸ್ತುವನ್ನು ತೋರಿಸುವ ತನಕ, ಅದು ತಮಗೆ ಬೇಕಾಗಬಹುದು ಎಂಬ ಸಣ್ಣ ಕಲ್ಪನೆಯೂ ಜನರಿಗಿರುವುದಿಲ್ಲ. ಅದಕ್ಕಾಗಿ ನಾನು ಮಾರ್ಕೆಟ್ ರೀಸರ್ಚ್ ಅನ್ನು ಎಂದೂ ಓದುವುದಿಲ್ಲ. ಪುಟಗಳ ಮೇಲೆ ಬರೆದಿಲ್ಲದಿರುವುದನ್ನು ಓದುವು- ದರಲ್ಲಿ ನನಗೆ ಆಸಕ್ತಿ.’

ಇದೊಂದು ಪ್ರಸಿದ್ಧ ಮತ್ತು ಪರಿಣಾಮಕಾರಿಯಾದ ಉಕ್ತಿ. ಅಂದ ಹಾಗೆ ಇದನ್ನು ಹೇಳಿದವನು ಆಪಲ್ ಕಂಪನಿಯ ಮುಖ್ಯಸ್ಥನಾಗಿದ್ದ ಸ್ಟೀವ್ ಜಾಬ್ಸ್. ನೀವು ಸುಮ್ಮನೆ ಈ ಹೇಳಿಕೆಯನ್ನು ಓದಿಕೊಂಡು ಮುನ್ನಡೆದರೆ, ಅದೇನು ಅಂಥ ಮಹಾನ್ ಹೇಳಿಕೆ ಎಂದು ಅನಿಸುವುದಿಲ್ಲ. ಆದರೆ ಈ ಹೇಳಿಕೆಯನ್ನು ಎರಡನೇ ಸಲ
ಓದಿ, ತುಸು ಆಳವಾಗಿ ಯೋಚಿಸಿದರೆ, ಅದರ ಅಂತರಂಗ ಅರ್ಥವಾದೀತು. ಸರ್ಚ್ ಎಂಜಿನ್ ಬೇಕು ಎಂದು ಯಾರು ಅಂದುಕೊಂಡಿದ್ದರು? ಅಥವಾ ತಮಗೆ ಬೇಕಾದ ವಿಷಯಗಳ ಹೆಸರು ಬರೆದರೆ ಸಾಕು, ಅದರ ವಿವರಗಳೆಲ್ಲ ಕಂಪ್ಯೂಟರ್ ಪರದೆಯ ಮೇಲೆ ಮೂಡಬೇಕು ಎಂಬ ಬೇಡಿಕೆಯನ್ನು ಮಾರ್ಕೆಟ್ ರೀಸರ್ಚ್ ಸಂದರ್ಭದಲ್ಲಿ ಯಾರು ಇಟ್ಟಿದ್ದರು? ಫೇಸ್ ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ, ಯೂಟ್ಯೂಬ್, ಗೂಗಲ್ ಮ್ಯಾಪ್ಸ್ ಬೇಕು ಎಂದು ಯಾರೂ ಹೇಳಿರಲಿಲ್ಲ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕ್ರಿಪ್ಟೋ ಕರೆನ್ಸಿ, ಚಾಟ್ ಜಿಪಿಟಿ, ಸ್ಪೇಸ್ ಟ್ರಾವೆಲ್ ಬೇಕು ಎಂದು ಯಾರೂ ಹೇಳಿರಲಿಕ್ಕಿಲ್ಲ. ಆದರೂ ಅವೆಲ್ಲ ನಮ್ಮ ಮುಂದೆ ಇಂದು ಸಾಕಾರಗೊಂಡಿದೆ. ಇಡೀ ಜಗತ್ತು ಯೋಚಿಸಿರದ, ಇಂಥದ್ದೊಂದು ಸಂಗತಿ ಸೃಷ್ಟಿಸಲು ಸಾಧ್ಯ ಎಂದು ಯಾರೂ ಊಹಿಸಿರದವುಗಳೆಲ್ಲ ನಮ್ಮ ಮುಂದೆ
ಇಂದು ಅನಾವರಣಗೊಂಡಿವೆ. ತಮಗೇನು ಬೇಕು ಎಂಬುದು ಜಗತ್ತಿನ ಯಾವ ವ್ಯಕ್ತಿಯೂ ಯೋಚನೆಯನ್ನೂ ಮಾಡದಿರುವ ಹೊತ್ತಲ್ಲಿ ಈ ಎಲ್ಲ ಸಂಗತಿಗಳು ನಮ್ಮ ಮುಂದೆ ಕಣ್ಣೊಡೆದು, ಜನಪ್ರಿಯವಾಗಿ, ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ.

ಈಗ ಸ್ಟೀವ್ ಜಾಬ್ಸ್ ಹೇಳಿದ ಆ ಹೇಳಿಕೆಯನ್ನು ಇನ್ನೊಮ್ಮೆ ಓದಬೇಕು. ಜಾಬ್ಸ್ ಅದೆಂಥ ಅದ್ಭುತ ಆಣಿಮುತ್ತನ್ನು ಉದುರಿಸಿದ್ದ ಎಂಬುದು ಅರ್ಥವಾದೀತು.
ಜಗತ್ತಿನ ಮೊಟ್ಟ ಮೊದಲ ಕ್ರಿಪ್ಟೋ ಕರೆನ್ಸಿಯಾದ ಬಿಟ್ ಕಾಯಿನ್ ಅನ್ನು ಕಂಡು ಹಿಡಿದಿದ್ದು ಸತೋಷಿ ನಕಮೋಟೊ ಅಂತಾರೆ. ಈ ಹೆಸರು ಗಂಡಸಿನದಾ, ಹೆಂಗಸಿನದಾ ಅಥವಾ ಇಬ್ಬರ ಹೆಸರಾ, ಏನೂ ಗೊತ್ತಿಲ್ಲ. ಆದರೆ ಪ್ರತಿ ವರ್ಷ ಏಪ್ರಿಲ್ ಐದರಂದು ಸತೋಷಿ ನಕಮೋಟೊ ಜನ್ಮದಿನವನ್ನು ಆಚರಿಸಲಾಗುತ್ತದೆ.
ಜಗತ್ತು ಮುಂದಿನ ದಿನಗಳಲ್ಲಿ ಬಿಟ್ ಕಾಯಿನ್ ಮೂಲಕವೇ ವ್ಯವಹರಿಸಬಹುದು ಎಂಬ ಸಣ್ಣ ಆಲೋಚನೆಯೂ ಯಾರಿಗೂ ಇರಲಿಲ್ಲ. ಈಗ ಹೇಳಿದರೂ ಅನೇಕರಿಗೆ ಅರ್ಥವಾಗುವುದಿಲ್ಲ.

ಹಾಗಿರುವಾಗ ಸತೋಷಿ ನಕಮೋಟೊ ಅದನ್ನು ಕಂಡು ಹಿಡಿದಿದ್ದು ನಿಜಕ್ಕೂ ಬೆರಗು ಹುಟ್ಟಿಸುವಂಥದ್ದು. ಭೂಮಿಯ ಮೇಲೆಯೇ ಜನವಸತಿ ಇಲ್ಲದ ಸಾಕಷ್ಟು ಜಾಗಗಳಿರುವಾಗ, ಬಾಹ್ಯಾಕಾಶಕ್ಕೆ ನೆಗೆಯುವ ಅಗತ್ಯ ಏನಿತ್ತು? ಆದರೂ ಎಲಾನ್ ಮಸ್ಕ್ ಸ್ಪೇಸ್ ಟ್ರಾವೆಲ್ ಸಂಸ್ಥೆ – ಸ್ಪೇಸ್ ಎಕ್ಸ್ – ಯಶಸ್ವಿಯಾಗಿದ್ದು ಹೇಗೆ? ಮನುಷ್ಯರು ಈ ಬ್ರಹ್ಮಾಂಡದಲ್ಲಿಯೇ ಅತ್ಯಂತ ಬುದ್ಧಿಮತ್ತೆಯುಳ್ಳವರಾದರೆ, ಅವರು ಕೇವಲ ಭೂಮಿಯ ಮೇಲೆ ಮಾತ್ರ ಏಕೆ ಇರಬೇಕು, ಬೇರೆ ಗ್ರಹಗಳ
ಮೇಲೂ ಮನುಷ್ಯ ಇರಲು ಅರ್ಹನಲ್ಲವೇ, ಎಂಬ ಒಂದು ಆಲೋಚನೆ ಸ್ಪೇಸ್ ಟ್ರಾವೆಲ್‌ನ ಕಲ್ಪನೆಯನ್ನು ಸಾಕಾರಗೊಳಿಸಲು ಸಾಧ್ಯವಾಯಿತು. ಆದ್ದರಿಂದ ನಾನು ಕಂಪನಿಯನ್ನು ಸ್ಥಾಪಿಸಬೇಕಾ, ಬೇಡವಾ, ಸ್ಥಾಪಿಸಿದರೆ ಯಶಸ್ವಿಯಾಗುತ್ತೇನಾ, ಇಲ್ಲವಾ, ಜನ ಅದನ್ನು ಅದನ್ನು ಹೇಗೆ ಸ್ವೀಕರಿಸಬಹುದು, ಒಂದು ವೇಳೆ
ಸ್ವೀಕರಿಸದಿದ್ದರೆ, ಕಂಪನಿ ನಷ್ಟವನ್ನು ಅನುಭವಿಸಬೇಕಾಗುತ್ತದಲ್ಲ… ಹೀಗೆಲ್ಲ ಯೋಚಿಸುತ್ತ ಕುಳಿತುಕೊಳ್ಳುವವನು ಮಾರ್ಕೆಟ್ ರೀಸರ್ಚ್‌ನಲ್ಲಿ ನಂಬಿಕೆ ಇರುವವರು ಮಾತ್ರ. ಆದರೆ ಜಗತ್ತಿನಲ್ಲಿ ಮಹಾನ್ ಸಾಧನೆ ಮಾಡಿದವರೆಲ್ಲ ಮಾರ್ಕೆಟ್ ರೀಸರ್ಚಿನಲ್ಲಿ ನಂಬಿಕೆ ಇಲ್ಲದವರು.

ಸಾಧ್ಯವಾದರೆ ಸ್ಟೀವ್ ಜಾಬ್ಸ್ ಹೇಳಿಕೆಯನ್ನು ಮತೊಮ್ಮೆ ಓದಿ. ನಾನಂತೂ ನನ್ನ ಕಂಪ್ಯೂಟರ್ ಸ್ಕ್ರೀನ್ ಸೇವರ್‌ಗೆ ಈ ಹೇಳಿಕೆಯನ್ನು ಹಾಕಿಕೊಂಡಿದ್ದೇನೆ. ಪ್ರತಿ ಸಲ ಓದಿದಾಗಲೂ ಹೊಸ ‘ಜಾಬ್ಸ್’ ಸಿಕ್ಕಷ್ಟು ಸಂತೋಷವಾಗುತ್ತದೆ. ಇದೊಂದು ಥರ ಪವಾಡದ ಅಥವಾ ಪ್ರವಾದಿಯ ಹೇಳಿಕೆಯಂತೆ ಭಾಸವಾಗುತ್ತದೆ.
ಮಾರ್ಕೆಟ್ ರೀಸರ್ಚ್ ವರದಿ ಓದಿದರೆ, ನಿಮ್ಮ ಸುತ್ತ ಗೋಡೆ ಕಟ್ಟಿಕೊಳ್ಳುತ್ತೀರಿ. ನಿಮ್ಮ ಕಲ್ಪನೆಗೆ ವರದಿಯಾದರೆ ಆ ಗೋಡೆಗಳನ್ನು ಕಿತ್ತೆಸೆಯುತ್ತೀರಿ. ಅಷ್ಟೇ ವ್ಯತ್ಯಾಸ.

ಕಕ್ಕರ್ ಎಂಬ ವಿಲಕ್ಷಣ ಪ್ರತಿಭೆ

ನಿಮಗೆ ಜಾಹೀರಾತು ಮತ್ತು ಜಾಹೀರಾತು ಚಿತ್ರ ಅಥವಾ ಕಮರ್ಷಿಯಲ್‌ಗಳಲ್ಲಿ ಆಸಕ್ತಿಯಿದ್ದರೆ ಖಂಡಿತವಾಗಿಯೂ ಪ್ರಹ್ಲಾದ್ ಕಕ್ಕರ್ ಹೆಸರನ್ನು ಕೇಳಿರುತ್ತೀರಿ.

ಸುಮಾರು ಹತ್ತು ವರ್ಷಗಳ ಹಿಂದೆ, ಮುಂಬೈಯಲ್ಲಿ ವಿಜಯ ಸಂಕೇಶ್ವರ ಅವರ ಜತೆಗೆ ಕಕ್ಕರ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ತೀರಾ ವಿಚಿತ್ರ
ಮತ್ತು ವಿಲಕ್ಷಣ ಮನುಷ್ಯ. ಜಾಹೀರಾತು ಜಗತ್ತಿನಲ್ಲಿರುವವರು ಹಾಗೆ ಇರುತ್ತಾರೆ ಎಂದುಕೊಂಡರೂ, ಕಕ್ಕರ್ ಮಾತ್ರ ಇನ್ನೂ ವಿಚಿತ್ರ. ಆದರೆ ಆ ಮನುಷ್ಯ ಎಲ್ಲರಂತಲ್ಲ. ಹೇಳಬೇಕಾದುದನ್ನು ನೇರವಾಗಿ ಹೇಳುವ, ವಿಚಿತ್ರವಾಗಿ ಹೇಳುವ, ಅದನ್ನೇ ಸೃಜನಶೀಲತೆ ಎಂದುಕೊಳ್ಳಬೇಕೆಂದು ಬಯಸುವ, ಎಂದುಕೊಳ್ಳ ದಿದ್ದರೆ ತಲೆಕೆಡಿಸಿಕೊಳ್ಳದ ವ್ಯಕ್ತಿ. ಸತತ ಹದಿನೇಳು ಫ್ಲಾಪ್ ಸಿನಿಮಾಗಳನ್ನು ನೀಡಿದ್ದಕ್ಕೆ ಅಮಿತಾಬ್ ಬಚ್ಚನ್ ಹೆಸರನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡಿನಲ್ಲಿ ಸೇರಿಸಬೇಕು ಎಂದು ಹೇಳಿ ವಿವಾದವನ್ನು ಎಳೆದುಕೊಂಡಿದ್ದರು.

ಮೊದಲ ನೋಟದಲ್ಲಿ ಒಂದೋ ಅವರು ಗಮನ ಸೆಳೆಯುತ್ತಾರೆ, ಇಲ್ಲವೇ ಗಮನ ಸೆಳೆಯುತ್ತಲೇ ಇರುತ್ತಾರೆ. ಆದರೆ ಅವರನ್ನು ನಿರ್ಲಕ್ಷಿಸುವುದು ಮಾತ್ರ ಸಾಧ್ಯವಿಲ್ಲ. ಕಾಮಸೂತ್ರ ಜಾಹೀರಾತನ್ನು ಸೇರಿದಂತೆ, ನಮ್ಮ ದೇಶದ ಹಲವು ಪ್ರಸಿದ್ಧ ಜಾಹೀರಾತು ಕ್ಯಾಂಪೇನ್‌ಗಳ ಹಿಂದೆ ಕಕ್ಕರ್ ತಲೆ ಕೆಲಸ ಮಾಡಿದೆ.
‘ಯೆಹಿ ಹೈ ರೈಟ್ ಚಾಯ್ಸ್ ಬೇಬಿ ಆಹಾ’ ಎಂಬ ಪೆಪ್ಸಿ ಜಾಹೀರಾತು, ‘ದಿ ಜಿಂಗ್ ಥಿಂಗ್’ ಎಂಬ ಗೋಲ್ಡ್ ಸ್ಪಾಟ್ ಜಾಹೀರಾತು, ‘ಟು ಮಿನಿಟ್ಸ್ ಮ್ಯಾಗ್ಗಿ’ ಜಾಹೀರಾತು, ‘ಜೋರ್ ಕಾ ಝಟ್ಕಾ’ ಎಂಬ ಲಿಮ್ಕಾ ಜಾಹೀರಾತು ಸ್ಲೋಗನ್‌ಗಳನ್ನೂ ಮರೆಯುವಂತೆಯೇ ಇಲ್ಲ.

ನೆಸ್ಟ್ಲೆ, ಬ್ರಿಟಾನಿಯ, ಪೆಪ್ಸಿಕೋ, ಹಿಂದೂಸ್ತಾನ್ ಲಿವರ್ಸ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಗ್ರಾಹಕ ವಸ್ತುಗಳ ಜಾಹೀರಾತಿನ ಹಿಂದೆ ಕಕ್ಕರ್ ಕೆಲಸ ಮಾಡಿದ್ದಾರೆ. ೧೯೭೭ರ ಜೆನೆಸಿಸ್ ಫಿಲಂ ಪ್ರೊಡಕ್ಷನ್ ಸ್ಥಾಪಿಸಿ, ಆ ಮೂಲಕ ಹಲವು ಜಾಹೀರಾತು ಚಿತ್ರಗಳನ್ನು ಮಾಡಿದ ಅಗ್ಗಳಿಕೆ ಅವರದು. ಖ್ಯಾತ ನಿರ್ದೇಶಕ ಶ್ಯಾಮ್ ಬೆನೆಗಲ್ ಅವರ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಕಕ್ಕರ್, ‘ಅಂಕುರ್’, ‘ಮಂಥನ್’ ಮತ್ತು ‘ಭೂಮಿಕಾ’ ಚಿತ್ರಗಳಲ್ಲಿ ಕೆಲಸ ಮಾಡಿದವರು. ಕಕ್ಕರ್ ನಿರ್ದೇಶಿಸಿದ ಜಾಹೀರಾತು ಕಮರ್ಷಿಯಲ್ ಅಂದ್ರೆ ಉದ್ಯಮ- ದಲ್ಲಿನ ಜನ ತೀವ್ರ ನಿರೀಕ್ಷೆಗಳಿಂದ ನೋಡುವುದುಂಟು. ಅಂಥ ತಮ್ಮದೇ ಆದ ಬ್ರ್ಯಾಂಡ್ ಅನ್ನು ಅವರು ಸೃಷ್ಟಿಸಿಕೊಂಡಿದ್ದಾರೆ.

ಇಷ್ಟಾಗಿಯೂ ನನಗೆ ಕಕ್ಕರ್ ಇಷ್ಟವಾಗುವುದು ಅವರ Out of the box thinking. ಹೇಳಬೇಕಾದುದನ್ನು ಅತ್ಯಂತ ಸರಳವಾಗಿ, ನೇರವಾಗಿ, ವಿನೂತನ ವಾಗಿ, ಅಷ್ಟೇ ಪರಿಣಾಮಕಾರಿಯಾಗಿ ನಿವೇದಿಸುವ ಶೈಲಿ ಎಂಥವರನ್ನಾದರೂ ತಟ್ಟುತ್ತದೆ. ಇತ್ತೀಚೆಗೆ ಲೇಖಕಿ ರೂಪಾಂಗಿ ಶರ್ಮ ಜತೆಗೂಡಿ ಕಕ್ಕರ್ Ad
Man, Mad Man : Unapologetically Prahlad ಎಂಬ ಪುಸ್ತಕ ಬರೆದಿzರೆ. ಕಕ್ಕರ್ ಅವರನ್ನು ಬಹಳ ವರ್ಷಗಳಿಂದ ಬಲ್ಲ ಭಾರತೀಯ ಜಾಹೀರಾತು ಉದ್ಯಮದ ಪ್ರಮುಖರಬ್ಬರಾದ ಮೊಹಮದ್ ಖಾನ್ ಬೆನ್ನುಡಿಯಲ್ಲಿ ಕಕ್ಕರ್ ಬಗ್ಗೆ ಹೀಗೆ ಬರೆದಿದ್ದಾರೆ.

‘ಪ್ರಹ್ಲಾದ್ ಕಕ್ಕರ್ ಹುಟ್ಟಿದ್ದು ೧೯೪೮ರಲ್ಲಿ. ಐದನೇ ವರ್ಷದಲ್ಲಿದ್ದಾಗ ಅವರನ್ನು ಸ್ಕೂಲಿನಿಂದ ಹೊರ ಹಾಕಲಾಗಿತ್ತು. ಹನ್ನೊಂದನೇ ವಯಸ್ಸಿನಲ್ಲಿzಗ ವರ್ಜಿನಿಟಿ (ಮೊದಲ ಬಾರಿಗೆ ಸೆಕ್ಸ್)ಯನ್ನು ಕಳೆದುಕೊಂಡರು. ಹದಿನೇಳು ತುಂಬುವ ಹೊತ್ತಿಗೆ ಕಾಲೇಜ್ ಹಾಸ್ಟೆಲ್‌ನಿಂದ ಹೊರಹಾಕಲ್ಪಟ್ಟರು. ಸೇನೆಯಲ್ಲಿ ಜನರಲ್ ಆಗ-
ಬೇಕು, ಕುದುರೆ ಸಾಕಬೇಕು, ನೀಲಿಚಿತ್ರ (ಬ್ಲೂ ಫಿಲಂ)ಗಳನ್ನು ನಿರ್ದೇಶಿಸಬೇಕು ಎಂದು ಕನಸು ಕಂಡವರು. ಆಕಸ್ಮಿಕವಾಗಿ ಜಾಹೀರಾತು ಪ್ರಪಂಚಕ್ಕೆ ಕಾಲಿಟ್ಟರು. ಶ್ಯಾಮ್ ಬೆನೆಗಲ್ ಅಂದ್ರೆ ಪ್ರಾಣ. ತಾನವರ ‘ಗುಲಾಮ‘ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಕೆಲಸದಿಂದ ವಜಾ ಮಾಡುವ ಮೊದಲೇ ರಾಜೀನಾಮೆ ನೀಡಿ ಮುಖ ಉಳಿಸಿಕೊಂಡವರು. ನಂತರ ತಮ್ಮದೇ ಪ್ರೊಡಕ್ಷನ್ ಹೌಸ್ ಸ್ಥಾಪಿಸಿದರು. ನಂತರ ತಮ್ಮ ಢಾಬಾ ತೆರೆದರು. ರೆಸ್ಟೋರೆಂಟ್
ಆರಂಭಿಸಿದರು. ಬೀಚ್ ರೆಸಾರ್ಟ್ ಅನ್ನು ತೆರೆದರು. ಸ್ಕೂಬಾ ಡೈವಿಂಗ್ ಸ್ಕೂಲನ್ನು ಸ್ಥಾಪಿಸಿದರು.

ಸಿಗಾರ್ ಬ್ರಾಂಡನ್ನೂ. ಸ್ವಯಂ ಸೇವಾ ಸಂಸ್ಥೆಯನ್ನು ಆರಂಭಿಸಿದರು. ಅವರು ವೈನ್ ಟೇಸ್ಟರ್ ಮತ್ತು ಚಹಾ ಪ್ರಿಯ. ಭಾರತದ ಪ್ರಪ್ರಥಮ ಟೀ ಹೌಸನ್ನು  ಮುಂಬೈಯಲ್ಲಿ ಶುರು ಮಾಡಿದರು. ಅವರಲ್ಲಿ ಇರುವಷ್ಟು ಹ್ಯಾಟ್‌ಗಳನ್ನು ನಾನು ಬೇರೆ ಯಾರಲ್ಲೂ ನೋಡಿಲ್ಲ. ಸ್ವಯಂ ಘೋಷಿತ ತತ್ವಜ್ಞಾನಿ. ತಮ್ಮನ್ನು ಮಹತ್ವಾಕಾಂಕ್ಷಿ ವೀರ್ಯ ದಾನಿ ಎಂದು ಕರೆದುಕೊಳ್ಳುತ್ತಾರೆ. ಅವರಿಗೆ ಹೆಂಗಸರು ಅಂದ್ರೆ ಬಹಳ ಪ್ರೀತಿ. ಅಡುಗೆ ಮಾಡುವುದು, ಮೇಲಿಂದ ಮೇಲೆ ತಮ್ಮ ಮಾತುಗಳನ್ನೇ ಕೇಳುವುದು, ಕುದುರೆಗಳೆಂದರೆ ಬಹಳ ಇಷ್ಟ. ಇಷ್ಟೆಲ್ಲ ಹೇಳಿದ ಬಳಿಕ ಗಮನಿಸಬೇಕಾದ ಮುಖ್ಯ ವಿಷಯವೇನೆಂದರೆ, ಅವರಿಗೆ ಸುಂದರಿ
ಯಾದ ಪತ್ನಿಯಿzಳೆ ಮತ್ತು ಮೂವರು ಗಂಡುಮಕ್ಕಳಿದ್ದಾರೆ.’ ಒಬ್ಬ ಲೇಖಕನ ಬಗ್ಗೆ ಬೆನ್ನುಡಿಯಲ್ಲಿ ಇಷ್ಟೆಲ್ಲ ಓದಿದ ಬಳಿಕ ಖರೀದಿಸದೇ ಇರಲು ಸಾಧ್ಯವಾ?

ಗಾಜಿನಲ್ಲಿ ಮಾತ್ರ ಪಾರದರ್ಶಕತೆ

ಕಳೆದ ಐವತ್ತು ವರ್ಷಗಳಲ್ಲಿ ಚೀನಾ ಸಾಧಿಸಿದ ಆರ್ಥಿಕ ಮತ್ತು ಜಿಡಿಪಿ ಬೆಳವಣಿಗೆ ಅಸಾಧಾರಣವಾದುದು. ಜಗತ್ತಿನಲ್ಲಿ ಚೀನಾ- ದಂಥ ಅದ್ಭುತ ಸಾಧನೆಯನ್ನು ಯಾವ ದೇಶವೂ ಮಾಡಿಲ್ಲ. ‘ಚೀನಾ ಜಾಗತಿಕ ಸೂಪರ್ ಪವರ್’ ಎಂದು ಕರೆಯಿಸಿಕೊಂಡಿರುವುದು ಪ್ರಪಂಚದ ಅನೇಕ ದೇಶಗಳ ಕಣ್ಣುಗಳನ್ನು ಕುಕ್ಕಿವೆ. ವಿಶ್ವದ ಬಲಿಷ್ಠ ಕಂಪೆನಿಗಳೆಲ್ಲ ತಮ್ಮ ‘ಅಂಗಡಿ’ಗಳನ್ನು ಚೀನಾದಲ್ಲಿ ತೆರೆಯಲೇಬೇಕು.

ಇಲ್ಲದಿದ್ದರೆ ಅವು ಜಾಗತಿಕ ಮಾನ್ಯತೆ ಪಡೆಯಲಾರವು. ಜಗತ್ತಿನ ಯಾವುದೇ ಒಂದು ಶಕ್ತಿಶಾಲಿ ದೇಶ, ಐದು ಸಾವಿರ ರೂಮುಗಳಿರುವ ಒಂದು ಹಡಗನ್ನು ನಿರ್ಮಿಸಲು ಒಂದೂವರೆ ವರ್ಷ ಅವಧಿಯನ್ನು ತೆಗೆದುಕೊಂಡರೆ, ಚೀನಾ ಕೇವಲ ಒಂದು ತಿಂಗಳಲ್ಲಿ ಆ ಕೆಲಸವನ್ನು ಮಾಡಿ ಮುಗಿಸಬಹುದು. ಈ ಮಾತು ವಿಮಾನ ತಯಾರಿಕೆಗೂ ಅನ್ವಯ. ಜಗತ್ತೇ ಬೆರಗಾಗುವ, ಅಂತಾರಾಷ್ಟ್ರೀಯ ಗುಣಮಟ್ಟದ, ಎಲ್ಲವೂ ಬೃಹತ್ ಎನಿಸುವ ಗಾತ್ರದ ಮೂಲಸೌಕರ್ಯವನ್ನು
ನಿರ್ಮಿಸಿರುವುದು ಚೀನಾದ ಅಗ್ಗಳಿಕೆ. ಚೀನಾ ಜತೆಗೆ ಯಾವ ದೇಶವೂ ಪೈಪೋಟಿ ಮಾಡಿ ನಿಲ್ಲಲು, ಗೆಲ್ಲಲು ಸಾಧ್ಯವಿಲ್ಲ. ಇಂದು ಎಲ್ಲ ರಂಗಗಳಲ್ಲೂ ಚೀನಾ ಅಸಾಮಾನ್ಯ ಪ್ರಗತಿ ಸಾಧಿಸಿದೆ.

ಚೀನಾದ ವಿಶ್ವವಿದ್ಯಾಲಯಗಳಂತೂ ವಲ್ಡ ಕ್ಲಾಸ್! ಒಂದು ಕಾಲ ದಲ್ಲಿ ಜಪಾನ್, ಅಮೆರಿಕ, ರಷ್ಯಾ, ಬ್ರಿಟನ್ ಯಾವುದಕ್ಕೆ ಹೆಸರಾಗಿತ್ತೋ, ಇಂದು ಚೀನಾ ಆ ಸ್ಥಾನವನ್ನು ಆಕ್ರಮಿಸಿದೆ. ಇಷ್ಟಾಗಿಯೂ ಚೀನಾಕ್ಕೆ ಇಂದು ಯಶಸ್ಸಿನ, ಔನ್ನತ್ಯದ ಉತ್ತುಂಗವನ್ನು ಏರಲು ಸಾಧ್ಯವಾಗಿಲ್ಲ. ಚೀನಾದ ಬಗ್ಗೆ ಅಭಿಮಾನ- ದಿಂದ, ಒಳ್ಳೆಯ ಮಾತಾಡುವವರು, ಕೊನೆಯಲ್ಲಿ ಅಪಸ್ವರ ಎತ್ತುತ್ತಾರೆ. ಜಗತ್ತು ಬಯಸುವ ಎಷ್ಟೋ ಉತ್ತಮ ಸಂಗತಿಗಳನ್ನು ಆ ದೇಶ ಇನ್ನೂ ಅಳವಡಿಸಿಕೊಂಡಿಲ್ಲ. ಚೀನಾದಲ್ಲಿ ಸರಕಾರವನ್ನು ಅಥವಾ ನಾಯಕರನ್ನು ಟೀಕಿಸುವಂತಿಲ್ಲ. ಅಧ್ಯಕ್ಷರ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ. ಚೀನಾ ಕ್ರಮವನ್ನು ಪ್ರಶ್ನಿಸಿದರೆ, ಪತ್ರಿಕೆಗಳಲ್ಲಿ
ನಕಾರಾತ್ಮಕವಾಗಿ ಬರೆದರೆ, ಮುಲಾಜಿಲ್ಲದೇ ಆ ದೇಶದಿಂದ ಹೊರ ಹಾಕಲಾಗುತ್ತದೆ. ಟ್ವಿಟರ್ ಮತ್ತು ಫೇಸ್ ಬುಕ್‌ಗೆ ಪ್ರವೇಶವನ್ನು ನಿರಾಕರಿಸಲಾಗಿದೆ. ಗೂಗಲ್ ಗೂ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿಲ್ಲ. ಸರಕಾರದಲ್ಲಿ ಪಾಲ್ಗೊಳ್ಳಲು ಅಲ್ಲಿನ ಜನತೆಗೆ ಅವಕಾಶವೇ ಇಲ್ಲ.

ಭಾರತೀಯ ಜನತಾ ಪಕ್ಷದ ನಂತರ, ಚೀನಾದ ಕಮ್ಯುನಿಷ್ಟ್ ಪಾರ್ಟಿ ವಿಶ್ವದ ಎರಡನೇ ದೊಡ್ಡ ರಾಜಕೀಯ ಪಕ್ಷ. ಆ ದೇಶ- ದಿಂದ ಹೊರಹೋಗುವ ಪ್ರತಿ ಮಾಹಿತಿಯನ್ನೂ ಕಮ್ಯುನಿಷ್ಟ್ ಪಾರ್ಟಿ ಸೋಸಿ, ಜರಡಿ ಹಿಡಿಯುತ್ತದೆ. ಪಕ್ಷ ಮತ್ತು ಸರಕಾರದ ವಿರುದ್ಧ ಯಾರಾದರೂ ದನಿಯೆತ್ತಿದರೆ, ಒದ್ದು ಒಳಗೆ ಹಾಕಲಾಗುತ್ತದೆ. ಈ ಸಂಗತಿಗಳು ಚೀನಾಕ್ಕೆ ಮಾರಕ ಎನಿಸಿವೆ. ಜಾಗತಿಕ ಮಟ್ಟ-ದಲ್ಲಿ ಚೀನಾ ಸಾಧಿಸಿದ್ದೆಲ್ಲವೂ ಈ ಸಂಗತಿಗಳಲ್ಲಿ ಕೊಚ್ಚಿಕೊಂಡು
ಹೋಗಿವೆ. ಅಲ್ಲಿನ ಜನರಿಗೆ ವಾಕ್ ಸ್ವಾತಂತ್ರ್ಯವೇ ಇಲ್ಲ. ಚೀನಾ ಒಂದು ನಿಗೂಢ ಲೋಕದಂತೆ ಹೊರಜಗತ್ತಿಗೆ ಭಾಸವಾಗುತ್ತಿದೆ. ಗಾಜಿನಲ್ಲಿ ಮಾತ್ರ ಪಾರದರ್ಶಕತೆಯನ್ನು ಕಾಣಬಹುದು.

ಟರ್ನ್ ಎ ಲಿಟಲ್
ನಾನು ಪ್ರಕಾಶ ಅಯ್ಯರ್ ಬರೆದ How Come no one told me that? : Life lessons, Practical advice and Timeless wisdom for success ಎಂಬ ಪುಸ್ತಕ ಓದುತ್ತಿದ್ದೆ. ಪುಸ್ತಕದ ಶೀರ್ಷಿಕೆ ನೋಡಿಯೇ, ಆ ಕೃತಿಯನ್ನು ಓದಬೇಕು ಎಂದೆನಿಸಿತು. ಕೆಲವು ಸಲ ನಮಗೆ ಈ ಮೊದಲು ಈ ಸಂಗತಿ
ಯನ್ನು ಯಾರೂ ಹೇಳಿಯೇ ಇಲ್ಲವಲ್ಲ ಎಂದು ಅನಿಸುವು ದುಂಟು. ಕಾರಣ ವಿಷಯ ಅಷ್ಟೊಂದು ಅನೂಹ್ಯವಾಗಿರುತ್ತದೆ ಮತ್ತು ಅದಕ್ಕಿಂತ ಮೊದಲು ಯಾರ ಬಾಯಿಂದಲೂ ನಾವು ಅದನ್ನು ಕೇಳಿರುವುದಿಲ್ಲ. ಹಾಗಂತ ಆ ವಿಷಯ ಹೇಳಿಕೊಳ್ಳುವಂಥ ಮಹಾನ್ ಸಂಗತಿಯಾಗಿರುವುದಿಲ್ಲ.

ಆದರೂ ನಮಗೆ ಗೊತ್ತಿರುವುದಿಲ್ಲ. ಪ್ರಕಾಶ ಅಯ್ಯರ್ ಇಂಥ ಅನೇಕ ವಿಷಯಗಳನ್ನು ಈ ಕೃತಿ- ಯಲ್ಲಿ ಹೇಳಿದ್ದಾರೆ. ದೈನಂದಿನ ಜೀವನದಲ್ಲಿ ನಮ್ಮ ಕಣ್ಮುಂದಿನ
ಪ್ರಸಂಗಗಳನ್ನೇ ಇಟ್ಟುಕೊಂಡು, ಬದುಕಿನ ಪಾಠವನ್ನು ಕಟ್ಟಿಕೊಡುವುದು ಅವರ ವಿಶೇಷ. ಕೆಲವು ವರ್ಷಗಳ ಹಿಂದೆ ಹಂಗೇರಿಯ ನಯನ ಮನೋಹರ
ಲೇಕ್ ಬಲಟೋನ್‌ನಲ್ಲಿ ಚಿಕ್ಕ ಹಡಗಿನಲ್ಲಿ ವಿಹಾರ ಹೋದ ಒಂದು ಪ್ರಸಂಗವನ್ನು ಅವರು ಬರೆದಿದ್ದಾರೆ. ಆ ಹಡಗಿನ ಕ್ಯಾಪ್ಟನ್ ಜತೆ ಮಾತಾಡದಿದ್ದರೆ, ಇದು ಹತ್ತರಲ್ಲಿ ಹನ್ನೊಂದನೇ ಪ್ರಯಾಣವಾಗು ತ್ತಿತ್ತೇನೋ. ಅಯ್ಯರ್ ಅವರು ಆ ಸರೋವರದ ಮಧ್ಯಭಾಗದಲ್ಲಿದ್ದರು. ತಿಳಿ ನೀಲಿ ಬಣ್ಣದ ನೀರು ಶಾಂತವಾಗಿತ್ತು. ಆ ಹಡಗಿನ ಕ್ಯಾಪ್ಟನ್ ಸ್ನೇಹಪ್ರಿಯನಾಗಿದ್ದ. ಹೀಗಾಗಿ ಸಹಪ್ರಯಾಣಿಕರೆಲ್ಲ ಕ್ಯಾಪ್ಟನ್‌ಗೆ ಬಹುಬೇಗ ಆಪ್ತರಾದರು.

ಅಲ್ಲಿದ್ದವರೆಲ್ಲ ಅವನೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಕ್ಯಾಪ್ಟನ್ ಅಯ್ಯರ್ ಅವರನ್ನು ಕರೆದು, ತನ್ನ ಪಕ್ಕದಲ್ಲಿಯೇ ನಿಂತುಕೊಳ್ಳುವಂತೆ ಹೇಳಿದ. ಅಷ್ಟೇ ಅಲ್ಲ, ಆ ಹಡಗಿನ ಸ್ಟಿಯರಿಂಗ್ ವೀಲ್ ಅನ್ನು ಹಿಡಿದುಕೊಳ್ಳುವಂತೆ ಹೇಳಿದ. ಸಾಮಾನ್ಯವಾಗಿ ಎಲ್ಲರಿಗೂ ಅಂಥ ಒಂದು ಸಾಹಸ ಮಾಡಬೇಕು ಎಂಬ ಮನಸಿರುತ್ತದೆ. ಆದರೆ ಕ್ಯಾಪ್ಟನ್ ಯಾರನ್ನೂ ಹತ್ತಿರ ಸೇರಿಸಿಕೊಳ್ಳುವುದಿಲ್ಲ. ಆದರೆ ಆ ಕ್ಯಾಪ್ಟನ್ ಹಾಗಿರಲಿಲ್ಲ. ಆತ ಅಯ್ಯರ್‌ಗೆ ಹಡಗನ್ನು ‘ಎಡಕ್ಕೆ ತಿರುಗಿಸಿ’ ಎಂದು ಹೇಳಿದ. ಆತ ಹೇಳಿದಂತೆ ಅವರು ಎಡಕ್ಕೆ ತಿರುಗಿಸಿದರು. ಬಹಳ ಸಲೀಸಾಗಿ ಹಾಗೆ ಮಾಡಿದರು. ಅವರು ಎಡಕ್ಕೆ ತಿರುಗಿಸಿದರೂ ಹಡಗು ಮಾತ್ರ ನೇರವಾಗಿ ಹೋಗು ತ್ತಿತ್ತು. ಅದನ್ನು ಗಮನಿಸಿದ ಅಯ್ಯರ್, ಮತ್ತೊಮ್ಮೆ ಹಡಗಿನ ವೀಲ್ ಅನ್ನು ಎಡಕ್ಕೆ ತಿರುಗಿಸಿದರು. ಆದರೂ ಏನೂ ಆಗಲಿಲ್ಲ. ಹಡಗು ನೇರವಾಗಿಯೇ ಚಲಿಸುತ್ತಿತ್ತು. ಇದನ್ನು ಗಮನಿಸಿದ ಅಯ್ಯರ್, ಮತ್ತೊಮ್ಮೆ ವೀಲ್ ನ್ನು ಎಡಕ್ಕೆ ತಿರುಗಿಸಿದರು. ಇದನ್ನು ಗಮನಿಸಿದ ಕ್ಯಾಪ್ಟನ್, ‘ಸಾಕು..ಸಾಕು.. ಅಷ್ಟೆಲ್ಲ ತಿರುಗಿಸಬಾರದು. ಸ್ವಲ್ಪ ತಿರುಗಿಸಿದರೆ ಸಾಕು. ಸ್ವಲ್ಪ ತಿರುಗಿಸಿದ ಬಳಿಕ ಏನಾಗುತ್ತದೆ ಎಂಬುದನ್ನು ಗಮನಿಸಬೇಕು’ ಎಂದು ಹೇಳಿದ.

ಹಾಗಾದರೆ ದೊಡ್ಡ ಹಡಗನ್ನು ಹೇಗೆ ತಿರುಗಿಸುತ್ತಾರೆ ಎಂಬ ಜಿಜ್ಞಾಸೆ ಅಯ್ಯರ್ ಅವರಲ್ಲಿ ಮೂಡಿತು. ‘ನೀವು ವೀಲ್‌ನ್ನು ತಿರುಗಿಸುತ್ತಲೇ ಇದ್ದರೆ, ಅದು ಜಾಸ್ತಿ ಯಾಗುತ್ತದೆ. ಆಗ ಹಡಗು ಯದ್ವಾತದ್ವಾ ಎಲ್ಲಿಗೋ ಹೋಗುತ್ತದೆ’ ಎಂದು ಕ್ಯಾಪ್ಟನ್ ಹೇಳಿದ. ಕ್ಯಾಪ್ಟನ್ ಹೇಳಿದ ಆ ಒಂದು ಮಾತು ಅಯ್ಯರ್ ಮನಸ್ಸಿನಲ್ಲಿಯೇ ಕಣ್ಣ ಕೊರೆಯಲಾರಂಭಿಸಿತು – Turn a little. Wait for the results. ಅದೊಂದು ಅದ್ಭುತ ಸಲಹೆ. ಅದು ಹಡಗಿನ ವೀಲ್ ಹಿಡಿದವನಿಗಿರಬಹುದು, ನಾವು ಮಾಡುವ ವ್ಯವಹಾರದಲ್ಲಿರಬಹುದು ಅಥವಾ ಜೀವನದಲ್ಲಿರಬಹುದು, ‘ಸ್ವಲ್ಪವೇ ತಿರುಗಿಸಿ, ಮುಂದಿನ ಫಲಿತಾಂಶಕ್ಕಾಗಿ ಕಾಯಿರಿ’ ಎಂಬ ಸಲಹೆ ಅತ್ಯಂತ ಅದ್ಭುತವಾದುದು. ನೀವೇನು ಮಾಡಬೇಕೋ ಅದನ್ನು ಮಾಡಬೇಕು ಮತ್ತು ಫಲಿತಾಂಶಕ್ಕಾಗಿ ಕಾಯಬೇಕು.

ಆದರೆ ಬಹಳ ಜನರಿಗೆ ಸಹನೆ ಇರುವುದಿಲ್ಲ. ಹಡಗು ತಿರುಗಲಿಲ್ಲವೆಂದು ತಕ್ಷಣ ಪುನಃ ಎಡಕ್ಕೆ ತಿರುಗಿಸುತ್ತಾರೆ. ಒಳಗಿಂದೊಳಗೆ ಹಡಗು ಎಡಕ್ಕೆ ಚಲಿಸುವುದನ್ನು ನೋಡುವಷ್ಟು ತಾಳ್ಮೆ ಇರುವುದಿಲ್ಲ. ಕಾರಿನ ಸ್ಟಿಯರಿಂಗ್ ತಿರುಗಿಸುತ್ತಿದ್ದಂತೆ ಎಡಕ್ಕೋ, ಬಲಕ್ಕೋ ತಿರುಗುತ್ತದಲ್ಲ, ಹಡಗೂ ಹಾಗೇ ಎಂದು ಭಾವಿಸುತ್ತಾರೆ. ಹೀಗಾಗಿ ಎಡಕ್ಕೆ ತಿರುಗಿಸಿದಾಗ, ಹೊರಳದಿದ್ದರೆ ತಟ್ಟನೆ ತಿರುಗಿಸುತ್ತಾರೆ. ಇದನ್ನೇ ನೀವು ಬಿಜಿನೆಸ್ ಅಥವಾ ಸ್ಟಾರ್ಟ್ ಅಪ್‌ಗೆ ಅನ್ವಯಿಸಿ ನೋಡಿ.

ಎಲಾನ್ ಮಸ್ಕ್ ಆರು ಮಂತ್ರ

ಇತ್ತೀಚೆಗೆ ಆರ್ಪಿಜಿ ಎಂಟರ್‌ಪ್ರೈಸಸ್ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ ಹೇಳಿದ ಕೆಲವು ಕಾರ್ಯಮಂತ್ರಗಳನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದರು. ಆ ಆರು ಪುಟ್ಟ ಸಂಗತಿಗಳಲ್ಲಿ ಒಂದು ಪುಸ್ತಕಕ್ಕಾಗುವಷ್ಟು ವಿಷಯಗಳಿದ್ದವು.

? ಒಂದು ಕೆಲಸ, ಯೋಜನೆ ಆರಂಭಿಸಿದಾಗ ಅದು ಅಲ್ಲಲ್ಲಿ ಕೈ ಕೊಡಬೇಕು. ಆರಂಭದಲ್ಲಿ ಆಗಾಗ ನಾವು ಸೋಲಬೇಕು. ಈ ಸೋಲು ನಮ್ಮನ್ನು ಅಧೀರರನ್ನಾಗಿ ಮಾಡಬಾರದು. ಇದು ಇಡೀ ವ್ಯವಸ್ಥೆಯಲ್ಲಿ ಏನೋ ದೋಷವಿದೆ ಎಂಬುದನ್ನು ನಮ್ಮನ್ನು ಎಚ್ಚರಿಸುವ ಗಂಟೆ ಎಂದು ಭಾವಿಸಬೇಕು. ಅದಕ್ಕಿಂತ ಹೆಚ್ಚು ತಲೆಕೆಡಿ ಸಿಕೊಳ್ಳಬಾರದು.

? ಮಹಾನ್ ಸಂಸ್ಥೆ ಎಂದು ಕರೆಯಿಸಿಕೊಳ್ಳಬೇಕಾದರೆ, ನೀವು ಯಾರೂ ತಯಾರಿಸದ ಅತ್ಯತ್ತಮ ಪ್ರಾಡಕ್ಟ್ ಸಿದ್ಧಪಡಿಸಬೇಕು. ಕಾರಣ ನೀವು ನಿಮ್ಮ ಸಂಸ್ಥೆಯಲ್ಲಿ ಏನು ಮಾಡುತ್ತೀರಿ ಎಂಬುದು ಹೊರ ಜಗತ್ತಿಗೆ ಗೊತ್ತಾಗುವುದು ನೀವು ತಯಾರಿಸುವ ಪ್ರಾಡಕ್ಟ್ ಗಳಿಂದ.

? ಒಂದು ಪ್ರಾಡಕ್ಟ್ ಮಾಡಿದ ನಂತರ ಸಂತೃಪ್ತರಾಗಿ ಅಲ್ಲಿಗೆ ಕೈಕಟ್ಟಿ ಕುಳಿತುಕೊಳ್ಳಬೇಡಿ. ನೀವು ಮಾಡದಿದ್ದರೆ, ನೀವು ತಯಾರಿಸಿದ ಪ್ರಾಡಕ್ಟನ್ನು ಬೇರೆಯವರು ಸುಧಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ನಿಮ್ಮನ್ನು ಮೀರಿಸುತ್ತಾರೆ. ಹೀಗಾಗಿ ಯಾವತ್ತೂ ನಿಮ್ಮ ಪ್ರಾಡಕ್ಟ್‌ಗಳನ್ನು ಸುಧಾರಿಸುತ್ತಲೇ ಇರಬೇಕು.

? ನಿಮ್ಮ ಸಂಸ್ಥೆಯಲ್ಲಿ ಸಾಮಾನ್ಯ (Ordinary) ವ್ಯಕ್ತಿಗಳಿದ್ದರೆ ಅವರನ್ನು ನಿರ್ಲಕ್ಷಿಸಬೇಡಿ. ಅವರೂ ಅಸಾಮಾನ್ಯ (extraordinary) ಕೆಲಸ ಮಾಡಬಲ್ಲರು. ಎಲ್ಲ ಸಂಸ್ಥೆಗಳಲ್ಲೂ ಅಸಾಮಾನ್ಯ ಕೆಲಸ ಮಾಡುವ ಸಾಮಾನ್ಯರು ಇರುತ್ತಾರೆ. ಅಷ್ಟಕ್ಕೂ ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಹೊಣೆಗಾರಿಕೆ ನಿಮ್ಮದು ಎಂಬುದು ಗೊತ್ತಿರಲಿ.

? ಸಣ್ಣ ಸಣ್ಣ ಸಂಗತಿಗಳನ್ನು ನಿರ್ಲಕ್ಷಿಸಬೇಡಿ. ಮುಂದೆ ಅವೇ ದೊಡ್ಡದಾಗುತ್ತವೆ ಎಂಬುದು ಗೊತ್ತಿರಲಿ. ಎಲ್ಲ ದೊಡ್ಡ ಸಮಸ್ಯೆಗಳೂ ಆರಂಭದಲ್ಲಿ ಸಣ್ಣದಾಗಿಯೇ ಇರುತ್ತವೆ. ಸಣ್ಣದಾಗಿದ್ದಾಗಲೇ ಅವನ್ನು ಪರಿಹರಿಸಬೇಕು. ಇದನ್ನು ಅಭ್ಯಾಸವಾಗಿ ಮಾಡಿಕೊಳ್ಳಬೇಕು.

? ನೀವು ಯಾವತ್ತೂ ಹಠಮಾರಿ ಆಗಿರಬೇಕು. ಕೆಲವು ಸಲ ಸಮಾಧಾನಿ ಆಗಿರಲೇಬಾರದು. ನಿಮ್ಮ ಹಠ ಕೈಗೊಡಿದ ನಂತರವಷ್ಟೇ ಸಂತೃಪ್ತರಾಗಬೇಕು.