ಶಶಾಂಕಣ
shashidhara.halady@gmail.com
ಮೂಲತಃ ಕಥೆಗಾರ ಎನಿಸಿದ್ದ, ಅದಾಗಲೇ ಹಲವು ಉತ್ತಮ ಕಥೆಗಳನ್ನು ಬರೆದಿದ್ದ ಪೂರ್ಣಚಂದ್ರ ತೇಜಸ್ವಿಯವರು ಕ್ರಮೇಣ ಪರಿಸರ, ವಿಜ್ಞಾನ, ಮಹಾಯುದ್ಧ, ಹಾರುವ ತಟ್ಟೆ, ಕೀಟ, ಪಕ್ಷಿಗಳ ಕುರಿತು ಅದ್ಭುತವಾಗಿ ಬರೆಯತೊಡಗಿದ್ದೇ ಒಂದು ಅಚ್ಚರಿ, ವಿಸ್ಮಯ ಮತ್ತು ಕನ್ನಡದ ಭಾಗ್ಯ.
ಕೆಲವು ದಶಕಗಳ ಹಿಂದೆ ನಾನು ಓದಿದ ಒಂದು ಸಚಿತ್ರ ಲೇಖನ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ‘ಸತ್ತ ಮರಗಳ ಕಾಡು’ ಎಂಬುದು ಲೇಖನದ ಶೀರ್ಷಿಕೆ. ಬರೆದವರು ಪೂರ್ಣಚಂದ್ರ ತೇಜಸ್ವಿ. ತುಷಾರ ಮಾಸ ಪತ್ರಿಕೆಯಲ್ಲಿ ಪ್ರಕಟ. ಶೃಂಗೇರಿ ಸನಿಹದ ಒಂದು ಕಾಡು ಪ್ರದೇಶಕ್ಕೆ ಬೆಂಕಿ ಬಿದ್ದು ಎ ಮರಗಳು ಸುಟ್ಟು ಹೋಗಿದ್ದವು. ಆ ಸುದ್ದಿ ಕೇಳಿ ಕ್ಯಾಮರಾ ಸಹಿತ ಅಲ್ಲಿಗೆ ಹೋಗಿದ್ದ ತೇಜಸ್ವಿಯವರು, ಬೆಂಕಿಗೆ ಸಿಕ್ಕಿ, ಸೀದು ಕರಕಲಾಗಿದ್ದ ಮರಗಳ ಅವಶೇಷ ಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಬೆಂಕಿಗೆ ಸಿಲುಕಿ ನರಳಿದ್ದ ಹಕ್ಕಿಗಳು, ಕರಕಲುರೆಂಬೆಯ ಮೇಲೆ ಕುಳಿತ ಚಿತ್ರ ಹೃದಯ ವಿದ್ರಾವಕ.
ಆಗಿನ್ನು ಡಿಜಿಟಲ್ ಕ್ಯಾಮರಾಗಳು ಬಂದಿರಲಿಲ್ಲ. ಕಥೆಗಾರ ತೇಜಸ್ವಿಯವರು ಸತ್ತ ಮರಗಳ ಕಾಡಿನಲ್ಲಿ ಸುತ್ತಾಡಿ, ಬೆಂಕಿಗೆ ನರಳಿದ ಮರ, ಗಿಡ, ಹಕ್ಕಿ, ಕೀಟ, ಪ್ರಾಣಿ ಮತ್ತಿತರ ಜೀವಿಗಳ ನೋವನ್ನು ಅಕ್ಷರ ರೂಪದಲ್ಲಿ ಮೂಡಿಸಿದ ಪರಿ ಅನನ್ಯ.
ತೇಜಸ್ವಿ ಎಂದರೆ ಹಾಗೇ ತಾನೆ! ಅದಾಗಲೇ ಕನ್ನಡದ ಬಹುಮುಖ್ಯ ಕಥೆಗಾರದಲ್ಲಿ ಒಬ್ಬರು ಎಂಬುದಾಗಿ ವಿಮರ್ಶಾ ವಲಯದ ಪ್ರಶಂಸೆ ಅವರಿಗೆ ದೊರಕಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ಅವರ ಮಗ ಎಂಬ ಪ್ರಭಾವಳಿಯೂ ಅವರಿಗೆ ಇತ್ತು. ಮೈಸೂರು ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿದ್ದ ಅವರಿಗೆ ಉತ್ತಮ ವೇತನ ತರುವ ಹುದ್ದೆ ಸುಲಭವಾಗಿ ದಕ್ಕುತ್ತಿತ್ತು.
ಅವರು ನಗರಗಳಲ್ಲೇ ಇದ್ದಿದ್ದರೆ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿಯೋ, ಇನ್ನೂ ಉನ್ನತ ಸ್ಥಾನವನ್ನು ಅಲಂಕರಿಸಿಯೋ ನಿವೃತ್ತರಾಗಬಹುದಿತ್ತು. ಆದರೆ ತೇಜಸ್ವಿಯವರನ್ನು ಪ್ರಕೃತಿ ಕರೆಯುತ್ತಿತ್ತು. ಅದಕ್ಕೇ ಶೃಂಗೇರಿ ಕಾಡಿಗೆ ಕ್ಯಾಮೆರಾ ಹಿಡಿದು ಹೊರಟರು. ಮನದ ಹಾಡನ್ನು ಆಲಿಸಿ, ಮನಸ್ಸು ಬಯಸಿದ ಕೆಲಸವನ್ನು ಮಾತ್ರವೇ ಮಾಡುವ ಭಾವಜೀವಿ ಅವರು. ಕಾಡು, ಹಕ್ಕಿ, ಕೀಟ, ಮರ, ಗಿಡ, ಮಳೆ, ತೊರೆ, ಚಿಟ್ಟೆ ಮೊದಲಾದ ಪರಿಸರದ ಶಿಶುಗಳೇ ಅವರ ಲೋಕ. ಆ ಮಾಯಾಲೋಕದ ನಿಗೂಢಗಳನ್ನು ಅರಿಯಲೆಂದು, ಅದರಲ್ಲಿ ಬೆರೆಯಲೆಂದೇ ತಾನೇ ಅವರು ಮೈಸೂರು ತೊರೆದು ಮೂಡಿಗೆರೆ ಸನಿಹದ ಹ್ಯಾಂಡ್‌ಪೋಸ್ಟ್‌ಗೆ ಬಂದದ್ದು!
ಹ್ಯಾಂಡ್ ಪೋಸ್ಟ್ (ಕೈಮರ) ದ ಹತ್ತಿರ ಕಾಫಿ ತೋಟ ಖರೀದಿಸಿದ್ದು ಒಂದು ನೆಪ; ಅವರ ನಿಜವಾದ ಉದ್ದೇಶವಿದ್ದದ್ದು ಪರಿಸರದೊಂದಿಗೆ ಬೆರೆಯುವುದು, ಪರಿಸರದ ನಿಗೂಢಗಳನ್ನು ಶೋಧಿಸುವುದು. ಹ್ಯಾಂಡ್‌ಪೋಸ್ಟ್‌ಗೆ ಬಂದು, ಪುಸ್ತಕಗಳನ್ನು ಬರೆದು, ಸಾವಿರಾರು ಅಭಿಮಾನಿಗಳನ್ನು ಪಡೆದು ಜೀವನವನ್ನು ಹೇಗೆ ಅನುಭವಿಸಬೇಕು ಎನ್ನುವುದಕ್ಕೆ ತಾವೇ ಹ್ಯಾಂಡ್ ಪೋಸ್ಟ್ (ದಿಕ್ಕು ಸೂಚಿಸುವ ಕೈಮರ) ಆದವರು ತೇಜಸ್ವಿ.
ಅವರ ಜೀವನವೇ ಒಂದು ವಿಸ್ಮಯ. ಅದರಲ್ಲಿ ಅನುಮಾನವೇ ಇಲ್ಲ. ಲಿಂಗಬಂದ, ಅವಸಾನ, ಅಬಚೂರಿನ ಪೋಸ್ಟ್ ಆಫೀಸ್ ಮೊದಲಾದ ಅರ್ಥ ಪೂರ್ಣ, ಬಹುಚರ್ಚಿತ, ಪ್ರಮುಖ ಕಥೆಗಳನ್ನು ಬರೆದಿದ್ದ ತೇಜಸ್ವಿಯವರು, ‘ಹಕ್ಕಿ ಬಾಲ ಹಿಡಿದು’
ಹೊರಟಿದ್ದೇ ಒಂದು ವಿಸ್ಮಯ. ‘ಹಕ್ಕಿಪುಕ್ಕ’ ಅವರ ವಿಶಿಷ್ಟ ಕೃತಿ. ಅವರು ಬಯಸಿದ್ದರೆ ಗಂಭೀರ ಸಾಹಿತ್ಯವನ್ನೇ ಇನ್ನಷ್ಟು ಗಾಢವಾಗಿ ಬರೆಯುತ್ತ, ಅದೇ ಹಾದಿಯಲ್ಲಿ ಮುಂದುವರಿಯಬಹುದಿತ್ತು.
‘ಜನಪ್ರಿಯ ವಿಜ್ಞಾನ’ ಎಂಬ ಹಣೆಪಟ್ಟಿ ಹೊತ್ತಿದ್ದ ಸಾಹಿತ್ಯ ಪ್ರಕಾರವನ್ನು ಅಂದು ಪ್ರಮುಖ ಸಾಹಿತಿಗಳು ಆಯ್ದುಕೊಳ್ಳುವ ಕ್ರಮವೇ ಇರಲಿಲ್ಲ (ಕಾರಂತರನ್ನು ಹೊರತುಪಡಿಸಿ). ಉತ್ತಮ ಸಣ್ಣ ಕಥೆಗಾರರಾದ, ಕಾದಂಬರಿಕಾರರೂ ಆಗಿದ್ದ ತೇಜಸ್ವಿ ಅವರಿಗೆ ಅವೆಲ್ಲ ಗೊಡವೆಗಳೇ ಬೇಕಿರಲಿಲ್ಲ. ಮನಸ್ಸು ಹೇಳಿದಂತೆ ಮಾಡಿದ ಧೀಮಂತ ತೇಜಸ್ವಿ. ೨೦೦೦ನೇ ಇಸವಿಯ ಸಂದರ್ಭದಲ್ಲಿ ತೇಜಸ್ವಿಯವರು ಕೈಗೊಂಡ ಒಂದು ಮಹಾನ್ ಸಾಹಸವು, ಅವರ ವಿಭಿನ್ನ ಚಿಂತನಾ ಕ್ರಮಕ್ಕೆ ಒಂದು ಉದಾಹರಣೆ.
ಹೊಸ ಮಿಲೇನಿಯಮ್ (2000ನೇ ವರ್ಷದ ಆರಂಭ) ಸಂದರ್ಭದಲ್ಲಿ, ನಮ್ಮ ಮಕ್ಕಳಿಗೆ ಮತ್ತು ಆಸಕ್ತರಿಗೆ ಹೊಸ ಓದನ್ನು ನೀಡಬೇಕು ಎಂದು ನಿಶ್ಚಯಿಸಿದ ಅವರು, ಆ ಸರಣಿಯಲ್ಲಿ 16 ಪುಸ್ತಕಗಳನ್ನು ಬರೆದರು. ಹೊಸ ಸಹಸ್ರಮಾನವನ್ನು ಜ್ಞಾನ ಪಸರಿಸುವ ಮೂಲಕ ಸ್ವಾಗತಿಸಬೇಕೆಂಬ ಅವರ ಚಿಂತನೆ ನಿಜಕ್ಕೂ ಅಭೂತಪೂರ್ವ. ಜತೆಗೆ ಅವರು ಬರೆದ 16 ಪುಸ್ತಕ ಗಳ ವಿಷಯ ವೈವಿಧ್ಯವೂ ಅಭೂತಪೂರ್ವ.
ಚಂದ್ರನ ಚೂರು, ಮಹಾಪಲಾಯನ, ವಿಸ್ಮಯ ವಿಶ್ವ, ಹುಡುಕಾಟ, ಮಹಾಯುದ್ಧ- ಈ ರೀತಿಯ ಪುಸ್ತಕಗಳ ಮೂಲಕ ಕನ್ನಡದ ಓದುಗರಿಗೆ ಮಿಲೇನಿಯಮ್ ಸರಣಿಯಲ್ಲಿ ಹೊಸ ಪ್ರಪಂಚವನ್ನೇ ತೆರೆದಿಟ್ಟರು. 2000ನೇ ವರ್ಷದ ಸಮಯದಲ್ಲಿ ಪ್ರಕಟ ಗೊಂಡ ಮಿಲೇನಿಯಂ ಸರಣಿಯ ಈ ಪುಸ್ತಕಗಳನ್ನು, ಎರಡು ದಶಕಗಳು ಕಳೆದ ನಂತರವೂ ಈಗಲೂ ಜನರು ಮೆಚ್ಚಿ
ಖರೀದಿಸುತ್ತಿದ್ದಾರೆ ಎಂದರೆ!
ತೇಜಸ್ವಿ ಅವರು ಕೈಗೊಂಡ ಮತ್ತೊಂದು ಸಾಹಸವೆಂದರೆ ಅನುವಾದಗಳು. ಬೆಳ್ಳಂದೂರಿನ ನರಭಕ್ಷಕ ಮೊದಲಾದ ಬೇಟೆಯ ಅನುಭವಗಳು, ಪ್ಯಾಪಿಲಾನ್ ಎಂಬ ಮಹಾ ಸಾಹಸ ಕಥನ ಇವುಗಳನ್ನು ಅವರು ಅನುವಾದಿಸಿದ್ದು ಒಂದು ಪುಟ್ಟ ವಿಸ್ಮಯ.
ಮೂಡಿಗೆರೆ ಸುತ್ತಲಿನ ಕಾಡುಗಳಲ್ಲಿ ಅವರು, ಗೆಳೆಯ ಶ್ರೀರಾಮ್ ಜತೆಗೆ ಬೇಟೆಯಾಡಲು ಹೋಗುತ್ತಿದ್ದುದನ್ನು ಬರೆದುಕೊಂಡಿದ್ದಾರೆ. ಈ ಆಸಕ್ತಿಯ ಹಿನ್ನೆಲೆಯಲ್ಲಿ ಅವರು ಅನುವಾದಿಸಿದ ಕೆನೆತ್ ಆಂಡರ್ಸನ್ ಅನುಭವಗಳು, ಕನ್ನಡದ ಓದುಗರಿಗೆ ಹೊಸ ಪ್ರಪಂಚವನ್ನು ತೋರಿಸಿದವು.
ಸಣ್ಣ ಕಥೆಗಳನ್ನು ಬರೆಯುವುದರ ಮೂಲಕ ತೇಜಸ್ವಿಯವರು ಸಾಹಿತ್ಯ ಲೋಕವನ್ನು ಪ್ರವೇಶಿಸಿದರೂ, ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಅವರ ತೀವ್ರ ಆಸಕ್ತಿಯ ಕ್ಷೇತ್ರಗಳು ಎಂಬುದು ಸ್ಪಷ್ಟ. ‘ಲಂಕೇಶ್ ಪತ್ರಿಕೆ’ಯಲ್ಲಿ ಪ್ರತಿವಾರ ಅವರು ಬರೆ
ಯುತ್ತಿದ್ದ ‘ಅದ್ಭುತ ಜಗತ್ತು’ ಅಂಕಣದಲ್ಲಿ ಅವರು ಆರಿಸಿಕೊಳ್ಳುತ್ತಿದ್ದ ವಿಚಾರಗಳೇ ಅಂತಹವು. ಆ ಅಂಕಣದ ಬರಹಗಳ ಸ್ವರೂಪ ಬಹುಮುಖಿ. ಜಗತ್ತಿನ ಹಲವು ಅದ್ಭುತ ಮಾಹಿತಿಯನ್ನು ಮೊದಲ ಬಾರಿ ಕನ್ನಡದಲ್ಲಿ ಪರಿಚಯಿಸಿದ ಆ ಲೇಖನಗಳು
eನದಾಯಕವೂ ಹೌದು, ಉತ್ತಮ ವಿಜ್ಞಾನ ಬರಹಗಳೂ ಹೌದು.
ಆ ಸರಣಿಯ ಲೇಖನಗಳು ಮಕ್ಕಳಿಗೆ ಕುತೂಹಲ ಮೂಡಿಸಿದರೆ ದೊಡ್ಡವರನ್ನು ಚಿಂತನೆಗೆ ಹಚ್ಚುತ್ತಿದ್ದವು. ‘ಅದ್ಭುತ ಜಗತ್ತು’ ಸರಣಿಯ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಓದುಗರನ್ನು ತೇಜಸ್ವಿ ತಲುಪಿದರು. ‘ಹೆಚ್ಚು ಜನರನ್ನು ತಲುಪು ವಂತಹ ಶೈಲಿಯನ್ನು ಆ ಸರಣಿಯ ಮೂಲಕ ನಾನು ರೂಢಿಸಿಕೊಂಡೆ’ ಎಂದು ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ.
ಸುಲಭವಾಗಿ ಸುಲಲಿತವಾಗಿ ಓದಿಸಿಕೊಂಡು ಹೋಗುವ ಶೈಲಿಯಿಂದಾಗಿ ಇಂದಿಗೂ ತೇಜಸ್ವಿ ಅವರ ಹೆಚ್ಚಿನ ಕೃತಿಗಳು ಬೇಗನೆ ಮಾರಾಟವಾಗುತ್ತಿವೆ, ಅಂದರೆ ಅವರ ಕೃತಿಗಳನ್ನು ಇಂದಿಗೂ ಜನರು ಖರೀದಿಸಿ ಓದುತ್ತಿದ್ದಾರೆ.
ಎರಡು ತಲೆಮಾರಿನ ಕನ್ನಡದ ಓದುಗರಿಂದ ಇಷ್ಟು ತೀವ್ರವಾಗಿ ಓದಿಸಿಕೊಂಡ ಲೇಖಕರಲ್ಲಿ ತೇಜಸ್ವಿ ಅವರದು ಪ್ರಮುಖ ಹೆಸರು. ಕಾದಂಬರಿಗಳ ವಿಚಾರಕ್ಕೆ ಬಂದರೆ ಅವರು ಬರೆದ ‘ಕರ್ವಾಲೋ’ ಕನ್ನಡಕ್ಕೇ ವಿಶಿಷ್ಟ. ಪರಿಸರ ವಿಜ್ಞಾನದ ಸಮಸ್ಯೆ ಗಳನ್ನು ಕಾದಂಬರಿಯಲ್ಲಿ ಅಡಕಗೊಳಿಸಿದ ಕನ್ನಡದ ಮೊದಲ ಕಾದಂಬರಿ ಕರ್ವಾಲೋ. ಬಹು ಬೇಗನೆ ಓದಿಸಿಕೊಳ್ಳುವ ಗುಣ ಇರುವುದರಿಂದಾಗಿ ಈ ಕಾದಂಬರಿ, ೨೦ಕ್ಕೂ ಹೆಚ್ಚು ಬಾರಿ ಮರುಮುದ್ರಣಗೊಂಡಿದ್ದು, ಈಗಿನ ತಲೆಮಾರಿನ ಓದುಗರನ್ನು ಸಹ
ತನ್ನ ಪ್ರಭಾವಲಯಕ್ಕೆ ಸೆಳೆಯುತ್ತಿದೆ. ಆ ಕಾದಂಬರಿಯಲ್ಲಿ ಬರುವ ಒಂದೊಂದು ಪಾತ್ರವೂ ವಿಶಿಷ್ಟ.
‘ಕಿವಿ’ ಎಂಬ ಹೆಸರಿನ ತೇಜಸ್ವಿಯವರ ನಾಯಿ ಸಹ ಅಲ್ಲಿ ಒಂದು ಪ್ರಮುಖ ಪಾತ್ರವಾಗಿ ಮೂಡಿಬಂದಿದೆ. ಮಂದಣ್ಣ ಎಂಬ ಹಳ್ಳಗಾಡಿನ ಪ್ರತಿಭೆಯ ಚಿತ್ರಣವೇ ಅನನ್ಯ. ದಟ್ಟ ಕಾಡಿನಲ್ಲಿ ತೇಜಸ್ವಿ ಮತ್ತು ವಿeನಿ ಕರ್ವಾಲೋ ಅವರ ತಂಡ ಅನ್ವೇಷಣಾ
ಯಾತ್ರೆ ನಡೆಸುತ್ತಿzಗ, ಅವರಿಗೆಲ್ಲ ರುಚಿಯಾದ ಬಿರಿಯಾನಿ ಮತ್ತು ಇತರ ತಿನಿಸುಗಳನ್ನು ಮಾಡಿಕೊಡುತ್ತಿದ್ದ ‘ಬಿರಿಯಾನಿ ಕರಿಯಪ್ಪ’ನ ಪಾತ್ರವು, ಒಂದು ದಂತಕತೆಯ ಸ್ವರೂಪವನ್ನೇ ಪಡೆದುಬಿಟ್ಟಿದೆ.
ಆ ಕಾದಂಬರಿಯಲ್ಲಿರುವ ಬಿರಿಯಾನಿ ಕರಿಯಪ್ಪನ ಪಾತ್ರಕ್ಕೆ ಸೂರ್ತಿ ಎನಿಸಿದ್ದ, ನಿಜ ಜೀವನದ ‘ಕರಿಯಪ್ಪ’ ಎಂಬುವವರು ಈ ವರ್ಷ ತೀರಿಕೊಂಡಾಗ, ಸಾವಿರಾರು ಜನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾದಂಬರಿಯ ಪೋಷಕ ಪಾತ್ರವೊಂದು
ಈ ಪರಿಯ ಜನಪ್ರಿಯತೆಯನ್ನು ನಿಜ ಜೀವನದಲ್ಲೂ ಪಡೆದ ಬೇರೊಂದು ಉದಾಹರಣೆಯನ್ನು ಕನ್ನಡ ಸಾಹಿತ್ಯದಲ್ಲಿ ಕಾಣಲು ಸಾಧ್ಯವಿಲ್ಲವೇನೋ! ಅವರ ಕಾದಂಬರಿಗಳಲ್ಲಿ ಸಾಹಿತ್ಯಕವಾಗಿ ಹೆಚ್ಚು ಗಮನ ಸೆಳೆದಿದ್ದು ‘ಚಿದಂಬರ ರಹಸ್ಯ’.
ಅದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಪಾತ್ರವಾಗಿದೆ, ನಾಟಕ ರೂಪವನ್ನೂ ಪಡೆದಿದೆ. ಇನ್ನೊಂದು ಕಾದಂಬರಿ ‘ಜುಗಾರಿ ಕ್ರಾಸ್’ ಬೇರೆಯದೇ ರೀತಿಯಲ್ಲಿ ಗಮನಾರ್ಹ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ, 19ನೇ
ಶತಮಾನದ ಪರಿಸರ, ಕಾಡು ಮತ್ತು ಮನುಷ್ಯನ ಸಂಬಂಧವನ್ನು ಚಿತ್ರಿಸಿದರೆ, ‘ಜುಗಾರಿ ಕ್ರಾಸ್’ ಕಾದಂಬರಿ ಸಮಕಾಲೀನ (20ನೇ ಶತಮಾನದ ಕೊನೆಯ ಕೆಲವು ದಶಕಗಳ) ಪರಿಸರ ಮತ್ತು ಕಾಡಿನ ಚಿತ್ರಣ, ಅರಣ್ಯ ಮತ್ತು ಮಾನವನ ಸಂಬಂಧ ಗಳನ್ನು ಚಿತ್ರಿಸುತ್ತದೆ.
ಅದರಲ್ಲಿ ಬರುವ ಕೆಂಪು ಕಲ್ಲಿನ ಕಳ್ಳಸಾಗಣೆ, ಏಲಕ್ಕಿಯ ಹೊಸತಳಿ, ಕಾಡುಗಳ್ಳರು, ಅವರ ನಡುವೆ ಜೀವಿಸುವ ರೈತರು, ಆ ರೈತರು ತಮಗೆ ಗೊತ್ತಿಲ್ಲದೆಯೇ ಆ ಕಾಡು ವ್ಯಾಪಾರಗಳ ಭಾಗವಾಗುವುದೇ ಮೊದಲಾದ ವಿದ್ಯಮಾನಗಳು ಓದುಗರನ್ನು ನಿಬ್ಬೆರಗಾಗಿಸುತ್ತವೆ. ಕಾದಂಬರಿ ಅಲ್ಲಲ್ಲಿ ಪತ್ತೆದಾರಿ ಕಥನದ ಸ್ವರೂಪವನ್ನು ಮೈಗೂಡಿಸಿಕೊಂಡಿರುವುದು ವಿಶೇಷ. ನಮ್ಮ ರಾಜ್ಯದ ಸಹ್ಯಾದ್ರಿ ಅಂಚಿನಲ್ಲಿ ನಡೆಯುತ್ತಿರುವ ನಿಗೂಢ ವಿದ್ಯಮಾನಗಳನ್ನು ಚಿತ್ರಿಸಲು ತೇಜಸ್ವಿಯವರು ಉದ್ದೇಶ ಪೂರ್ವಕವಾಗಿಯೇ, ಈ ‘ಪತ್ತೆದಾರಿ’ ಶೈಲಿ ಯನ್ನು ಆ ಕಾದಂಬರಿಯಲ್ಲಿ ಅಳವಡಿಸಲು ಯತ್ನಿಸಿರಬೇಕು ಎನಿಸುತ್ತದೆ.
ತೇಜಸ್ವಿಯವರು ಬರೆದ ಸಚಿತ್ರ ಲೇಖನಗಳ ಸಂಗ್ರಹ ‘ಮಾಯೆಯ ಮುಖಗಳು’, ತನ್ನದೇ ರೀತಿ ಯಲ್ಲಿ ವಿಶಿಷ್ಟ. ಕಾಫಿ ಟೇಬಲ್ ಪುಸ್ತಕವನ್ನು ಹೋಲುವ ಇದರಲ್ಲಿ ನೂರಾರು ಫೋಟೋಗಳಿವೆ, ಹಲವು ಬರಹಗಳಿವೆ. ಚಿಟ್ಟೆ, ಕೀಟ, ಹಕ್ಕಿ, ಪರಿಸರ ಮೊದಲಾದ ವಿಷಯಗಳ ಕುರಿತು ಅವರೇ ಚಿತ್ರಿಸಿದ ಛಾಯಾಚಿತ್ರಗಳೊಂದಿಗೆ ರೂಪುಗೊಂಡ ಇಲ್ಲಿನ ಬರಹಗಳನ್ನು ಓದುವುದೇ ಒಂದು ಆಪ್ಯಾಯಮಾನ ಅನುಭವ. ಪ್ರಕೃತಿಯನ್ನು ಪರಿಸರವನ್ನು ತೇಜಸ್ವಿ ಅದೆಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಒಂದು ಪುಟ್ಟ ರೂಪಕ ‘ಮಾಯೆಯ ಮುಖಗಳು’.
ತೇಜಸ್ವಿಯವರು ರಚಿಸಿದ ಪುಸ್ತಕಗಳಲ್ಲಿ ‘ಒಂದು ಹುಲ್ಲಿನ ಕ್ರಾಂತಿ’ಯ ಆಶಯ ಕುತೂಹಲ ಹುಟ್ಟಿಸುತ್ತದೆ. ಜಪಾನಿನ ಕೃಷಿ ಸಂತ ಪುಕುವೋಕನ ಸಹಜ ಕೃಷಿಯ ವಿಚಾರಧಾರೆಗಳು ಅದರಲ್ಲಿವೆ. ಸರಳವಾಗಿ ಬದುಕುವ ಎಂದ ಪುಕುವೋಕ, ತೇಜಸ್ವಿ ಯವರ ಮೇಲೆ ತನ್ನದೇ ರೀತಿಯಲ್ಲಿ ಪ್ರಭಾವ ಬೀರಿದ್ದ. ಮಹಾ ಯುದ್ಧ, ಮಿಸ್ಸಿಂಗ್ ಲಿಂಕ್ಸ್, ಹಾರುವ ತಟ್ಟೆಗಳು ಮೊದಲಾದ ಕೃತಿಗಳು ಅವರ ವಿಭಿನ್ನ ಆಸಕ್ತಿ ಕ್ಷೇತ್ರಗಳ ಕೈಗನ್ನಡಿ. ಕನ್ನಡ ನಾಡಿನ ಮಕ್ಕಳಿಗೆ ಮತ್ತು ಓದುಗರಿಗೆ ವಿವಿಧ ಕ್ಷೇತ್ರಗಳ ಮಾಹಿತಿಯನ್ನು, ಜ್ಞಾನವನ್ನು ತಲುಪಿಸಬೇಕೆಂಬುದೇ ಇಂತಹ ಪುಸ್ತಕ ರಚನೆಯ ಉದ್ದೇಶ ಎಂದು ಅವರು ಹೇಳಿಕೊಂಡಿದ್ದಾರೆ.
ಕಾಡಿನ ನಡುವೆ ಮನೆ ಮಾಡಿಕೊಂಡಿದ್ದ ತೇಜಸ್ವಿಯವರು ಹಕ್ಕಿಗಳನ್ನು ವೀಕ್ಷಿಸಿ, ಅಧ್ಯಯನ ಮಾಡಿ, ಛಾಯಾಚಿತ್ರಗ್ರಹಣಕ್ಕೆ ಒಳಪಡಿಸಿದ ವಿಚಾರವಂತೂ ಮತ್ತೊಂದು ವಿಸ್ಮಯ. ಮಲೆನಾಡಿನ ಅದೆಷ್ಟೋ ಹಕ್ಕಿಗಳ ಛಾಯಾಚಿತ್ರವನ್ನು ಅವರು ತೆಗೆದಿದ್ದಾರೆ. ಕನ್ನಡದಲ್ಲಿ ವರ್ಣಚಿತ್ರ ಸಹಿತ ಹಕ್ಕಿಗಳ ಕುರಿತು ವಿಸ್ತೃತವಾಗಿ ಬರೆದ ಮೊದಲ ಲೇಖಕ ಅವರು.
ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಗೊಂಡ ನೀಲ ಸಾಮ್ರಾಟ ಹಕ್ಕಿಯ ವರ್ಣಚಿತ್ರಗಳನ್ನು ತೆಗೆಯಲು, ಅವರು ಹಲವು ದಿನಗಳ ಕಾಲ ಕಾಡಿನಲ್ಲಿ ಸುತ್ತಾಡಿರಲೇಬೇಕು. ಕರ್ನಾಟಕದ ಹಕ್ಕಿಗಳ ಕುರಿತು ಅವರು ಮೂರು ಪುಸ್ತಕ ಬರೆದಿ
zರೆ. ಆ ಪೈಕಿ ‘ಹಕ್ಕಿಪುಕ್ಕ’ ಎಂಬ ತುಸು ದುಬಾರಿ ಎನ್ನಬಹುದಾದ ಪುಸ್ತಕವು ಹಲವು ಬಾರಿ ಮರುಮುದ್ರಣಗೊಂಡಿದೆ ಮತ್ತು ಪರಿಷ್ಕೃತ ಮುದ್ರಣ ಗಳನ್ನೂ ಕಂಡಿದೆ.
ಪ್ರತಿ ಪುಟದಲ್ಲಿ ಬಣ್ಣದ ಚಿತ್ರ ಹೊಂದಿರುವ ‘ಹಕ್ಕಿಪುಕ್ಕ’ದಲ್ಲಿ ನಮ್ಮ ರಾಜ್ಯದ ಬಹುಪಾಲು ಹಕ್ಕಿಗಳ ಪರಿಚಯವನ್ನು ತೇಜಸ್ವಿ
ಯವರು ಮಾಡಿಕೊಟ್ಟಿzರೆ ಮತ್ತು ಆ ಮೂಲಕ ‘ಕರ್ನಾಟಕದ ಸಲೀಂ ಅಲಿ’ ಎನಿಸಿಕೊಂ ದ್ದಾರೆ. ಮೂಲತಃ ಕಥೆಗಾರ ಎನಿಸಿದ್ದ ತೇಜಸ್ವಿ ಈ ರೀತಿ ಪರಿಸರ, ವಿಜ್ಞಾನ, ಯುದ್ಧ, ಹಾರುವತಟ್ಟೆ, ಕೀಟ, ಪಕ್ಷಿಗಳ ಕುರಿತು ಅದ್ಭುತವಾಗಿ ಬರೆದದ್ದೇ ಒಂದು ಅಚ್ಚರಿ, ವಿಸ್ಮಯ ಮತ್ತು ಕನ್ನಡದ ಭಾಗ್ಯ.