ನ್ಯಾಯದ ಗಂಟೆ
ಕಪಿಲ್ ಸಿಬಲ್
ಲೋಕಸಭೆ ಚುನಾವಣೆಗೆ ಮುಂಚೆಯೇ ಹೇಮಂತ್ ಸೊರೇನ್ ಮತ್ತು ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಿರು ವುದು, ನಮ್ಮ ಪ್ರಜಾಪ್ರಭುತ್ವದ ಸ್ಥಿತಿಗತಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ಕ್ರಮಗಳನ್ನು ಕೈಗೊಂಡಿರುವ ಕಾಲಘಟ್ಟವೇ ಇದನ್ನು ಹೇಳುತ್ತಿದೆ.
ನಿಮಗಿದು ಗೊತ್ತಿರುವ ಸಂಗತಿಯೇ. ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಬಂಧಿಸಿದ ರೀತಿ ನಿಜಕ್ಕೂ ಅಭೂತಪೂರ್ವವಾಗಿತ್ತು ಅಥವಾ ಇದು ಹಿಂದೆಂದೂ ಕಂಡಿಲ್ಲದ ನಿರ್ದಶನವಾಗಿತ್ತು ಎನ್ನಬೇಕು. ಸೊರೇನ್ ಅವರು
ರಾಜೀನಾಮೆ ನೀಡಿದ ನಂತರ ಅವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಸಮರ್ಥಿಸಿಕೊಂಡಿತು.
ಇದು ಸಂಪೂರ್ಣ ಸತ್ಯವಲ್ಲ; ವಾಸ್ತವವಾಗಿ, ಸೊರೇನ್ ಅವರು ತಮ್ಮ ನಿವಾಸದಲ್ಲಿರುವಾಗಲೇ ಅವರನ್ನು ಬಂಧಿಸಲು ಇ.ಡಿ. ಅದಾಗಲೇ ನಿರ್ಧರಿಸಿ ಆಗಿತ್ತು. ಆದರೆ, ಸೊರೇನ್ ಅವರ ಔಪಚಾರಿಕ ಬಂಧನವು ರಾಜಭವನದ ಆವರಣದಲ್ಲಿ ನಡೆಯಿತು; ತಮ್ಮ ಪಕ್ಷಕ್ಕೆ ಜಾರ್ಖಂಡ್ ವಿಧಾನಸಭೆಯಲ್ಲಿ ಈಗಲೂ ವಿಶ್ವಾಸಮತವಿದೆ ಎಂದು ಸಮರ್ಥಿಸಿಕೊಂಡು ತಮ್ಮ ರಾಜೀನಾಮೆ ಯನ್ನು ಅಲ್ಲಿಸಲು ಅವರು ಅಲ್ಲಿಗೆ ತೆರಳಿದ್ದರು ಎಂಬುದಿಲ್ಲಿ ಉಲ್ಲೇಖನೀಯ. ಮತ್ತೊಂದೆಡೆ, ಅರವಿಂದ ಕೇಜ್ರಿವಾಲರನ್ನು
ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಬಂಽಸಲಾಯಿತು; ವಿಶೇಷ ನ್ಯಾಯಾಲಯವು ಅವರನ್ನು ಆರು ದಿನಗಳವರೆಗೆ ಇ.ಡಿ. ವಶಕ್ಕೆ ಒಪ್ಪಿಸಿದ್ದರೂ ಅವರ ಮುಖ್ಯಮಂತ್ರಿಗಿರಿ ಹಾಗೆಯೇ ಮುಂದುವರಿದಿದೆ ಎನ್ನಿ.
ವಿಪಕ್ಷಗಳ ಪ್ರತಿಯೊಬ್ಬ ನಾಯಕರೂ ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, ೨೦೦೨’ರ (ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್, ೨೦೦೨- ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಬಂಧನದ ಬೆದರಿಕೆಯನ್ನು ಎದುರಿಸುವಂತಾಗಿದೆ. ಈ ಸರಕಾರವು ಈ
ಹಿಂದೆಯೂ, ವಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿನ ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸಲೆಂದು ಪಕ್ಷಾಂತರಗಳಿಗೆ ಪ್ರಚೋದಿಸಲು, ಕಾನೂನು ಕ್ರಮ ಜರುಗಿಸಲು ಅಥವಾ ಅಂಥದೊಂದು ಬೆದರಿಕೆ ಹಾಕಲೆಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇ.ಡಿ. ಎರಡನ್ನೂ ಬಳಸಿಕೊಂಡಿದ್ದಿದೆ.
ತನಿಖಾ ಸಂಸ್ಥೆಗಳು ಮತ್ತು ರಾಜಕೀಯ ಅಸ್ತಿತ್ವಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಸ್ಪರ ಕೈಜೋಡಿಸಿ ಕೆಲಸ ಮಾಡುತ್ತಿರು ವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎನ್ನಬೇಕು! ೨೦೧೪ರ ಕಾಲಘಟ್ಟಕ್ಕಿಂತಲೂ ಮೊದಲು ಸಿಬಿಐ ವಿಷಯದಲ್ಲಿ ಇಂಥದೇ ಉದ್ದೇಶದ ಹೊಂದಾಣಿಕೆಯಿದ್ದ ಪ್ರತ್ಯೇಕ ನಿದರ್ಶನಗಳನ್ನು ನಾವು ಕಂಡಿರ ಬಹುದಾದರೂ, ಅವು ಇಂಥ ‘ಕಪಟ ಶೈಲಿ’ಯಲ್ಲಿ ಹಿಂದೆಂದೂ ಕಂಡಿರಲಿಲ್ಲ.
ಪ್ರಸಕ್ತ ಸಂದರ್ಭದಲ್ಲಿ ನಮ್ಮೆದುರು ಇರುವ ಸಮಸ್ಯೆಯೆಂದರೆ, ಕಾನೂನು ಸಂಬಂಧಿತ ಪ್ರಕ್ರಿಯೆಗಳು ತೀರಾ ವಿಳಂಬಕಾರಿ ಅಥವಾ ಮಂದಗತಿಯಲ್ಲಿದ್ದು, ಇಂಥ ಸ್ವರೂಪದ ಪ್ರಕರಣಗಳಲ್ಲಿ ಕ್ಷಿಪ್ರ ಪರಿಹಾರವನ್ನು ಹುಡುಕುವುದು ಅಸಾಧ್ಯವಾಗಿದೆ. ಈ ಸ್ಥಿತಿಗೆ ಎರಡು ಮೂಲಭೂತ ಕಾರಣಗಳಿವೆ. ಮೊದಲನೆಯದಾಗಿ, ಇಂಥ ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಬಾಗಿಲುಗಳು ತೆರೆದಿರುವುದಿಲ್ಲ.
‘ಸರ್ವೋಚ್ಚ ನ್ಯಾಯಾಲಯವೆಂಬುದು ಮೊದಲ ನಿದರ್ಶನದ ನ್ಯಾಯಾಲಯವಲ್ಲ ಹಾಗೂ ಜಾಮೀನಿಗಾಗಿ ವಿಶೇಷ ನ್ಯಾಯಾಲ ಯದ ಮೊರೆಹೋಗಬೇಕು’ ಎಂದು ನಮಗೆ ತಿಳಿಹೇಳಲಾಗಿದೆ. ಎರಡನೆಯದಾಗಿ, ಆರೋಪಿಗಳಿಗೆ ಶೀಘ್ರ ಪರಿಹಾರವು ಬಹುತೇಕ ವಾಗಿ ಅಸಾಧ್ಯವಾಗಿರುತ್ತದೆ. ವಿಶೇಷ ನ್ಯಾಯಾಲಯದಿಂದ ಸರ್ವೋಚ್ಚ ನ್ಯಾಯಾಲಯದೆಡೆಗಿನ ಪ್ರಯಾಣಕ್ಕೆ ಏನಿಲ್ಲವೆಂದರೂ ಒಂದೆರಡು ತಿಂಗಳು ಹಿಡಿಯುತ್ತವೆ. ಇದಕ್ಕೊಂದು ಪುರಾವೆ ಇಲ್ಲಿದೆ ನೋಡಿ- ಹೇಮಂತ್ ಸೊರೇನ್ ಅವರನ್ನು ಜನವರಿ ೩೧ರಂದು ಬಂಧಿಸಲಾಯಿತು, ಆದರೆ ಅವರಿನ್ನೂ ನ್ಯಾಯಾಂಗ ಬಂಧನದಲ್ಲೇ ಕೊಳೆಯುತ್ತಿದ್ದಾರೆ. ಹೀಗಾಗಿ, ವಿಚಾರಣೆ
ಸಂಬಂಧಿತ ಇಂಥ ಪ್ರಕ್ರಿಯೆಯೇ ಸ್ವತಃ ಶಿಕ್ಷೆ ಎನಿಸಿ ಬಿಡುತ್ತದೆ ಮತ್ತು ತತ್ಪರಿಣಾಮದ ಪರಿಹಾರವು (ಒಂದೊಮ್ಮೆ ಅದನ್ನು ನೀಡಿದರೆ) ಯಾವುದೇ ಮೌಲ್ಯವನ್ನು ಹೊಂದಿರುವುದಿಲ್ಲ.
ಅರವಿಂದ ಕೇಜ್ರಿವಾಲರ ಪ್ರಕರಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ತಥಾಕಥಿತ ಮದ್ಯದ ಹಗರಣದಲ್ಲಿ ಅವರು ‘ಕಿಂಗ್ ಪಿನ್’ ಆಗಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈಗಾಗಲೇ ಒಪ್ಪಿಕೊಳ್ಳಲಾಗಿರುವಂತೆ, ಅಕ್ರಮ ಹಣ ವರ್ಗಾವಣೆಯ ಸುಳಿವು ಅಥವಾ ಜಾಡಿನೊಂದಿಗೆ ಅವರನ್ನು ಸಂಪರ್ಕಿಸುವಂಥ ಯಾವೊಂದು ಪುರಾವೆಯೂ ಶೋಧದ ಸಂದರ್ಭದಲ್ಲಿ ಕೇಜ್ರಿವಾಲ್ ಅವರ ಬಳಿ ಕಂಡುಬಂದಿಲ್ಲ. ವಾಸ್ತವವಾಗಿ, ಯಾವೊಬ್ಬ ಆರೋಪಿಯನ್ನೂ ದೋಷಾರೋಪಣೆಗೆ ಸಿಕ್ಕಿಸುವಂಥ ಅಕ್ರಮ ಹಣ ವರ್ಗಾವಣೆಯ ಜಾಡು ಇಲ್ಲಿ ಕಂಡುಬಂದಿಲ್ಲ. ಮಾತ್ರವಲ್ಲದೆ, ಪ್ರಕರಣದ ಪ್ರತಿಯೊಬ್ಬ ಆಪಾದಿತರಿಂದ ಸತತವಾಗಿ ಹಲವಾರು ಹೇಳಿಕೆಗಳನ್ನು ಪಡೆದ ನಂತರವಷ್ಟೇ ಅವರು ‘ಅಪ್ರೂವರ್’ ಆಗಿ ಬದಲಾಗಿದ್ದಾರೆ.
ಎರಡನೆಯದಾಗಿ, ತರುವಾಯದಲ್ಲಿ ಅಪ್ರೂವರ್‌ಗಳಾಗಿ ಬದಲಾದ ಆರೋಪಿಗಳಿಂದ ನೀಡಲ್ಪಟ್ಟ ಹೇಳಿಕೆಗಳು ಈ ಬಂಧನಕ್ಕೆ ಆಧಾರವಾಗಿವೆ. ಹೀಗೆ ಅಪ್ರೂವರ್‌ಗಳಾಗಿ ಬದಲಾದ ಪ್ರತಿಯೊಬ್ಬ ಆರೋಪಿಯೂ, ತಮ್ಮ ಸ್ವಹಿತಾಸಕ್ತಿಗಾಗಿ, ನಿರಂತರ ಸೆರೆವಾಸ ದಿಂದ ತಪ್ಪಿಸಿಕೊಳ್ಳಲು ಇಂಥ ಹೆಜ್ಜೆಯಿಡುತ್ತಾರೆ.
ಕಂಪನಿಗಳನ್ನು ನಡೆಸುತ್ತಿರುವ ಈ ಆರೋಪಿಗಳಲ್ಲಿ ಕೆಲವರು, ತಾವು ಅಪ್ರೂವರ್‌ಗಳಾಗಿ ಬದಲಾಗುವ ತನಕವೂ ತಮಗೆ ಜಾಮೀನು ಸಿಗುವ ಸಾಧ್ಯತೆಯಿಲ್ಲ ಎಂಬ ಪರಿಸ್ಥಿತಿ ಇರುವುದನ್ನು ಕಂಡುಕೊಳ್ಳುತ್ತಾರೆ; ಅಪ್ರೂವರ್ ಗಳಾಗುವುದಕ್ಕೆ ಮತ್ತು ತರುವಾಯದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳದಿರುವುದಕ್ಕೆ ಸಂಬಂಧಿಸಿ ಅವರಿಗೆ ಒಡ್ಡಲಾಗುವ ಆಮಿಷವು, ಇತರರ ಮೇಲೆ ದೋಷಾರೋಪಣೆ ಮಾಡುವುದಕ್ಕೆ ಅಥವಾ ಅವರ ತಲೆಯ ಮೇಲೆ ಗೂಬೆ ಕೂರಿಸುವುದಕ್ಕೆ ಸಾಕಾಗುತ್ತದೆ.
ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪುಗಳ ಸುದೀರ್ಘ ಪಟ್ಟಿಯಲ್ಲಿ, ‘ಓರ್ವ ಅಪ್ರೂವರ್‌ನ ಹೇಳಿಕೆಯು ಅಸಾಧಾರಣವಾಗಿ ದುರ್ಬಲವಾದ ಸಾಕ್ಷ್ಯವಾಗಿರುವುದರಿಂದ, ಇಂಥ ಅಪ್ರೂವರ್‌ಗಳ ಹೇಳಿಕೆ ಯನ್ನು ದೃಢೀಕರಿಸುವ ಸ್ವತಂತ್ರ ಪುರಾವೆಗಳು
ಬೆಳಕಿಗೆ ಬರದ ಹೊರತು, ಆ ಹೇಳಿಕೆಯನ್ನು ಯಾವುದೇ ಅಪರಾಧ ನಿರ್ಣಯದ ಆಧಾರವಾಗಿ ಬಳಸಲಾಗುವುದಿಲ್ಲ’ ಎಂದು ಸಮರ್ಥಿಸಿದೆ. ಈ ಪ್ರಕರಣದಲ್ಲಿ, ಇಂಥ ಯಾವುದೇ ಪುರಾವೆಯೂ ಲಭ್ಯವಿಲ್ಲ.
ಸದರಿ ಕಾನೂನು ಕ್ರಮದ ಉದ್ದೇಶವೇ ಕಳಂಕಿತವಾಗಿದೆ, ತಥಾಕಥಿತ ಸಾಕ್ಷ್ಯವೇ ಕಳಂಕಿತವಾಗಿದೆ ಮತ್ತು ಆರೋಪಿಯನ್ನು
ಬಂಧಿಸಿರುವ ಸಮಯವನ್ನು ಅಳೆದು-ತೂಗಿ ನೋಡಿದರೆ, ಇದರ ಹಿಂದೆ ರಾಜಕೀಯ ಪರಿಗಣನೆಗಳ ಪ್ರಚೋದನೆಯಿರುವುದು
ಸ್ಪಷ್ಟವಾಗುತ್ತದೆ. ನಂತರ, ವಿಶೇಷ ನ್ಯಾಯಾಲಯದ ಮೊರೆಹೋಗುವಂತೆ ಆರೋಪಿಗೆ ಸೂಚಿಸುವುದಿದೆಯಲ್ಲಾ, ಅದು
ಆರೋಪಿಯು ಚುನಾವಣಾ ಪ್ರಕ್ರಿಯೆ ಯಲ್ಲಿ ಭಾಗವಹಿಸುವ ಹಕ್ಕನ್ನು ಅವನಿಂದ ಕಸಿದುಕೊಳ್ಳುತ್ತದೆ; ಅದರಲ್ಲೂ ವಿಶೇಷವಾಗಿ, ಆರೋಪಿಯು ರಾಜಕೀಯ ಪಕ್ಷದ ನಾಯಕನಾಗಿಬಿಟ್ಟಿದ್ದರಂತೂ, ಈ ಪ್ರಕರಣದಲ್ಲಿರುವಂತೆ ಹಾಲಿ ಮುಖ್ಯಮಂತ್ರಿ ಆಗಿಬಿಟ್ಟಿದ್ದ ರಂತೂ ಇದರಿಂದ ಒದಗುವ ವ್ಯತಿರಿಕ್ತ ಪರಿಣಾಮ ತೀವ್ರವಾಗಿರುತ್ತದೆ.
ಅಂದರೆ, ಇಂಥ ಬೆಳವಣಿಗೆಯು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಸುಸ್ಪಷ್ಟವಾಗಿರುತ್ತದೆ. ಆದ್ದರಿಂದ, ಇಂಥ ಪ್ರಕ್ರಿಯೆಯು ಗಂಭೀರ ಸ್ವರೂಪದಲ್ಲಿ ಪೂರ್ವಗ್ರಹಪೀಡಿತವಾಗಿರುತ್ತದೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ‘ಸಮತಟ್ಟಾ ಗಿಲ್ಲದ ಚುನಾವಣಾ ಅಖಾಡ’ವನ್ನು ಸರಕಾರದ ಪರವಾಗಿ ಶಾಶ್ವತವಾಗಿ ಸಜ್ಜುಗೊಳಿಸಿಬಿಡುತ್ತದೆ. ಇಲ್ಲಿ ಉಲ್ಲೇಖಿಸಬೇಕಾದ ಇನ್ನೊಂದು ಅಂಶವೆಂದರೆ, ಪಿಎಂಎಲ್‌ಎ ಸಂಬಂಧಿತ ವಿಚಾರಣಾ ಪ್ರಕ್ರಿಯೆಯೊಂದರಲ್ಲಿ, ಆರೋಪಿಯು ಉಲ್ಲೇಖಿತ ಆರೋಪ ದಲ್ಲಿ ತಪ್ಪಿತಸ್ಥನಲ್ಲ ಎಂಬುದಾಗಿ ನ್ಯಾಯಾಲಯವು ಒಂದೊಮ್ಮೆ ತೀರ್ಮಾನಿಸಿದರೆ ಮಾತ್ರವೇ ಅವನಿಗೆ ಜಾಮೀನು ಮಂಜೂ ರಾಗುವುದು ಸಾಧ್ಯವಿರುತ್ತದೆ. ಯಥೋಚಿತ ವಿಚಾರಣೆಯ ಅನುಪಸ್ಥಿತಿಯಲ್ಲಿ ನ್ಯಾಯಾಲಯವು ಇಂಥದೊಂದು ತೀರ್ಮಾನಕ್ಕೆ ಹೇಗೆ ತಾನೇ ಬರಲು ಸಾಧ್ಯ ಎಂಬುದೇ ನನಗೆ ಅಚ್ಚರಿ ಉಂಟುಮಾಡಿರುವ ಸಂಗತಿ.
ಹೊರನೋಟಕ್ಕೇ ಅಸಾಂವಿಧಾನಿಕವಾಗಿ ತೋರುವ, ಕಾನೂನಿನಲ್ಲಿನ ಇಂಥ ನಿಬಂಧನೆಗಳನ್ನು ಸರ್ವೋಚ್ಚ ನ್ಯಾಯಾಲಯ
ಎತ್ತಿಹಿಡಿದಿದೆ. ಯಾವುದೇ ನಿರ್ದಿಷ್ಟ ಪ್ರಕರಣ ದಲ್ಲಿ, ಒಂದೊಮ್ಮೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೆ ಮತ್ತು ಆರೋಪಿಯು ವಿಶೇಷ ನ್ಯಾಯಾಲಯದ ಮೊರೆಹೋದರೆ, ‘ಪಿಎಂಎಲ್ ಎ’ಯಲ್ಲಿ ನಿಗದಿಪಡಿಸಲಾಗಿರುವ ಅವಳಿ ಪರೀಕ್ಷೆಗಳನ್ನು ಅನ್ವಯಿಸಿ ಅವನಿಗೆ ಜಾಮೀನು ನೀಡುವ ಸಾಧ್ಯತೆ ಇರುವುದಿಲ್ಲ.
ವಿಚಾರಣಾ ನ್ಯಾಯಾಲಯವು ಜಾಮೀನಿನ ಸಂದರ್ಭದಲ್ಲಿ ನ್ಯಾಯವ್ಯಾಪ್ತಿಯನ್ನು ಚಲಾಯಿಸುವಾಗ ಅದನ್ನು ಮಂಜೂರು ಮಾಡುವುದು ವಿರಳ ಎಂಬ ವಾಸ್ತವದ ಬಗ್ಗೆ ಭಾರತದ ಈಗಿನ ಮುಖ್ಯ ನ್ಯಾಯಮೂರ್ತಿಗಳು ವಿಷಾದಿಸಿದ್ದಾರೆ. ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಇದೇ ಮಾದರಿಯ ಜಾಮೀನು ನಿರಾಕರಣೆಗಳು ಹೊರಹೊಮ್ಮುವುದನ್ನು ನಾವು ಕಾಣಬಹುದು. ಪ್ರಸಕ್ತ ಸರಕಾರದ ಕಾರ್ಯತಂತ್ರಗಳು ತೀರಾ ಸ್ಪಷ್ಟವಾಗಿರುವಂತೆ ತೋರುತ್ತಿದೆ. ಈ ಪೈಕಿ ಮೊದಲನೆಯದು, ಕೇಂದ್ರದಲ್ಲಿ ಅಧಿಕಾರ
ದಲ್ಲಿರುವ ರಾಜಕೀಯ ಪಕ್ಷವಾಗಿ, ಚುನಾವಣಾ ಬಾಂಡ್‌ಗಳ ಯೋಜನೆಯ ಮೂಲಕ ಅಗಾಧ ಸಂಪತ್ತನ್ನು ಕ್ರೋಡೀಕರಿಸಿ, ಸಮತ ಟ್ಟಾಗಿಲ್ಲದ ಚುನಾವಣಾ ಅಖಾಡವೊಂದನ್ನು ಹುಟ್ಟುಹಾಕುವುದು. ಎರಡನೆಯದು, ಚುನಾವಣೆ ಘೋಷಣೆಯಾಗುವ ಕೆಲವೇ ದಿವಸ ಮೊದಲು, ಬಿಜೆಪಿಗೆ ಸವಾಲಾಗಿ ಪರಿಣಮಿಸಬಹುದು ಎಂದು ಗ್ರಹಿಸಲ್ಪಟ್ಟಿರುವ ರಾಜಕೀಯ ಪಕ್ಷಗಳ ನಾಯಕರ ಬಂಧನ ವನ್ನು ಆರಂಭಿಸುವುದು!
ಇಲ್ಲೊಂದು ಸಂಗತಿಯನ್ನು ಗಮನಿಸಬೇಕು- ಅರವಿಂದ ಕೇಜ್ರಿವಾಲರ ವಿರುದ್ಧವಾಗಿವೆ ಎಂಬುದಾಗಿ ಜಾರಿ ನಿರ್ದೇಶನಾಲಯವು ಹೇಳಿಕೊಳ್ಳುತ್ತಿರುವ ಎಲ್ಲ ಸಾಕ್ಷ್ಯ-ಪುರಾವೆಗಳು ೨೦೨೩ರ ಆಗಸ್ಟ್‌ನಿಂದಲೇ ಅದರ ಬಳಿ ಲಭ್ಯವಿದ್ದವು. ೨೦೨೩ರ ಆಗಸ್ಟ್ ನಂತರ, ಅಪ್ರೂವರ್ ಆಗಿ ಬದಲಾದ ಆರೋಪಿಗಳ ಪೈಕಿ ಯಾರಿಂದಲೂ ಯಾವುದೇ ಹೇಳಿಕೆಯು ಹೊಮ್ಮಿಲ್ಲ. ಹಾಗಿದ್ದ ಮೇಲೆ, ೨೦೨೪ರ ಮಾರ್ಚ್‌ನಲ್ಲಿ ಕೇಜ್ರಿವಾಲ್ ರನ್ನು ಬಂಧಿಸುವ ಅಗತ್ಯವೇನಿತ್ತು? ೨೦೨೩ರ ಆಗಸ್ಟ್ ನಲ್ಲಿಯೇ ಅವರನ್ನು ಬಂಧಿಸಬಹುದಾ ಗಿತ್ತಲ್ಲವೇ? ಸ್ವಾರಸ್ಯಕರ ಸಂಗತಿಯೆಂದರೆ, ಆಗ ಅವರನ್ನು ಬಂಧಿಸಲೇ ಇಲ್ಲ; ಒಂದೊಮ್ಮೆ ಅವರನ್ನು ಆಗಲೇ ಬಂಧಿಸಿದ್ದಿದ್ದರೆ, ಚುನಾವಣೆಗಳು ಘೋಷಣೆ ಯಾಗುವ ಹೊತ್ತಿಗೆ ಅವರು ಜಾಮೀನಿನ ಮೇಲೆ ಹೊರಗಿರುತ್ತಿದ್ದರು!
ಕಾನೂನುಗಳಲ್ಲಿ ಅಡಕವಾಗಿರುವ ಕಠಿಣ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಭಿನ್ನಮತೀಯ/ವಿರೋಧಿ ದನಿಗಳನ್ನು ಅಡಗಿಸಲು ದೇಶಾದ್ಯಂತ ಈ ಮಾದರಿಯನ್ನು ಅನುಸರಿಸುವುದು ವಾಡಿಕೆಯಾಗಿಬಿಟ್ಟಿದೆ; ಕಾನೂನಿನ ಈ
ನಿಬಂಧನೆಗಳ ಪೈಕಿ ಕೆಲವೊಂದು ವಸಾಹತುಶಾಹಿ ಕಾಲಘಟ್ಟದ ಪಳೆಯುಳಿಕೆಗಳಾಗಿಬಿಟ್ಟಿವೆ ಎಂಬುದು ಗಮನಾರ್ಹ.
ತೀರಾ ದಮನಕಾರಿಯೂ ಅಸಾಂವಿಧಾನಿಕವೂ ಆಗಿರುವ ಇಂಥ ಕೆಲವೊಂದು ಪ್ರಕ್ರಿಯೆಗಳು ನಮ್ಮ ಒಕ್ಕೂಟವನ್ನು ಬಲವಂತ ವಾಗಿ ತಮ್ಮ ವಶಕ್ಕೆ ತೆಗೆದುಕೊಂಡುಬಿಟ್ಟಿವೆ. ನಮ್ಮ ಸ್ಥಾಪಿತ ವ್ಯವಸ್ಥೆಗಳು ನಿಜಾರ್ಥದಲ್ಲಿ ಸ್ಥಗಿತಗೊಂಡಿವೆ, ನಮ್ಮ ಜಾರಿ ಸಂಸ್ಥೆ ಗಳು ಅವುಗಳ ಗುಲಾಮರಾಗಿಬಿಟ್ಟಿವೆ. ನಮ್ಮ ವಿಪಕ್ಷಗಳನ್ನು ಹತ್ತಿಕ್ಕಲು, ಅವುಗಳ ದನಿಯಡಗಿಸಲು ಯತ್ನಿಸಲಾಗುತ್ತಿದೆ ಮತ್ತು ಇಂಥ ಯತ್ನಗಳು ಘಟಿಸಿದಾಗೆಲ್ಲ ಸರ್ವೋಚ್ಚ ನ್ಯಾಯಾಲಯವು ತನ್ನ ಬಾಗಿಲುಗಳನ್ನು ಮುಚ್ಚಿರುತ್ತದೆ. ಇಷ್ಟಾಗಿಯೂ ನಮ್ಮ ವ್ಯವಸ್ಥೆಯನ್ನು ‘ಪ್ರಜಾಪ್ರಭುತ್ವಗಳ ತಾಯಿ’ ಎಂದು ಹೇಳಿಕೊಳ್ಳುತ್ತೇವೆ. ಎಂಥಾ ವಿಚಿತ್ರ ಅಲ್ಲವೇ?!
(ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)
(ಲೇಖಕರು ಹಿರಿಯ ವಕೀಲರು ಮತ್ತು
ರಾಜ್ಯಸಭಾ ಸದಸ್ಯರು)