Thursday, 12th December 2024

ಅಂಕಣ ಬರೆಯುವುದಕ್ಕೆ ವಿಷಯ ಎಲ್ಲಿಂದ ಸಿಗುತ್ತದೆ ?

ತಿಳಿರು ತೋರಣ

srivathsajoshi@yahoo.com

ಅದೇ ಪ್ರಶ್ನೆ ನನಗೆ ಆಗಾಗ ಎದುರಾಗುತ್ತಿರುತ್ತದೆ. ಕೆಲವರು ಕುತೂಹಲದಿಂದ, ಕೆಲವರು ಆಶ್ಚರ್ಯದಿಂದ, ಇನ್ನು ಕೆಲವರು ಒಂದೆರಡು ಮಿಲಿಗ್ರಾಂ ಗಳಷ್ಟು ಸಾತ್ತ್ವಿಕ ಅಸೂಯೆಯಿಂದಲೂ ಕೇಳುತ್ತಾರೆ. ಕೆಲವೊಮ್ಮೆ ನನಗೆ ನಾನೇ ಕೇಳಿಕೊಳ್ಳಬೇಕಾಗುತ್ತದೆ, ಈ ವಾರ ಯಾವ ವಿಷಯದ ಬಗ್ಗೆ ಬರೆಯಲಿ ಎಂದು ಯೋಚಿಸುವಾಗ. ನಿರ್ದಿಷ್ಟವಾಗಿ ಇಂಥದೇ ಉತ್ತರ ಇಲ್ಲ ಈ ಪ್ರಶ್ನೆಗೆ. ಏಕೆಂದರೆ ಒಂದೊಂದು ವಾರದ ವಿಷಯ ಒಂದೊಂದು ರೀತಿಯಲ್ಲಿ ಹೊಳೆದದ್ದಿರುತ್ತದೆ, ಅದರಲ್ಲಿನ ಸರಕು ಒಂದೊಂದು ರೀತಿಯಲ್ಲಿ ವಿಸ್ತಾರಗೊಂಡಿದ್ದಿರುತ್ತದೆ.

ಕೆಲವೊಮ್ಮೆ ಈ ವಿಷಯದ ಬಗ್ಗೆಯೂ ಲೇಖನ ಬರೆಯಬಹುದಾ ಎಂದು ಓದುಗರು ಹುಬ್ಬೇರಿಸುವ ಹಾಗೆ, ಮೂಗು ಮುರಿಯುವ ಹಾಗೆ ಇರುವುದೂ ಇದೆ. ಎಲ್ಲವೂ ಎಲ್ಲರಿಗೂ ಇಷ್ಟವಾಗುತ್ತದೆಂದೇನಿಲ್ಲ, ಆಗಬೇಕಂತನೂ ಇಲ್ಲ. ಆದರೆ, ಅಂಕಣಕ್ಕೆ ವಿಷಯ ಎಲ್ಲಿಂದ ಮತ್ತು ಹೇಗೆ ಸಿಗುತ್ತದೆ ಎಂಬುದಕ್ಕೆ ಉತ್ತರಕ್ಕಿಂತ ಉದಾಹರಣೆಯಾಗಿಯೇ ಒಂದು ಅಂಕಣ ಬರೆಯಬಹುದಲ್ಲ!? ಈ ವಾರ ಅದನ್ನೇ ಮಾಡುತ್ತಿದ್ದೇನೆ. ಕುತೂಹಲವುಳ್ಳವರಿಗೆ ಸ್ವಲ್ಪ ಮಟ್ಟಿನ ಅಂದಾಜು ಸಿಗಬಹುದು ಎಂದುಕೊಂಡಿದ್ದೇನೆ.

ಕಳೆದ ವಾರ ಕೆಮ್ಮುಪುರಾಣ ಬರೆದಿದ್ದೆನಷ್ಟೆ? ಯಥಾಪ್ರಕಾರ ಓದುಗರಿಂದ ವರ್ಣರಂಜಿತ ಪ್ರತಿಕ್ರಿಯೆಗಳು- ಕೆಮ್ಮೋ ಹಾಗಿಲ್ಲ ಎಂಬಂಥವು, ಹುಸಿ ಕೆಮ್ಮು ತರಿಸುವಂಥವು- ಎಲ್ಲ ಥರದವೂ ಬಂದವು. ಅವುಗಳಲ್ಲೊಂದು, ಶಿರಸಿಯ ವೀಣಾ ಹೆಗಡೆಯವರ ಪ್ರತಿಕ್ರಿಯೆ. ಅದರ ಒಕ್ಕಣೆ ಹೀಗಿತ್ತು: ‘ಕೆಮ್ಮು ಪುರಾಣವು ನಗಿಸಿ ನಗಿಸಿ ಕೆಮ್ಮು ಬರಿಸಿತು. ಕೆಮ್ಮು ಮನುಷ್ಯ ಮಾತ್ರರಿಗಲ್ಲದೇ ದೇವರಿಗೂ ಬರುತ್ತದೆ ಎಂದು ನಂಬಿಯಣ್ಣನ ಕಥೆಯಿಂದ ತಿಳಿಯಿತು. ಒಟ್ಟಿನಲ್ಲಿ ಖುಷಿ ನೀಡಿದ ಲೇಖನ. ನಿಜಜೀವನದಲ್ಲಿ ನಗುವಿಗೂ ಕೆಮ್ಮಿಗೂ ನಂಟು; ಸಿನಿಮಾಗಳಲ್ಲಿ ದುಃಖಕ್ಕೂ ಕೆಮ್ಮಿಗೂ ನಂಟು. ಎಸ್ಪಿಬಿಯವರು ಕೆಮ್ಮುತ್ತ ಹಾಡುವುದರಲ್ಲಿ ನಿಸ್ಸೀಮರು. ಲೇಖನ ಓದುವಾಗ ಕೆಮ್ಮಿನ ಹಾಡುಗಳೆಲ್ಲ ನನಗೆ ನೆನಪಾದವು.

ಹಾಗೆಯೇ ಒಂದು ತಮಾಷೆ ಸಂಗತಿಯನ್ನೂ ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ನನ್ನ ಮಗಳು ಐದಾರು ವರ್ಷದವಳಿದ್ದಾಗ ವಿಪರೀತ ಕೆಮ್ಮು ಬಾಧಿಸುತ್ತಿತ್ತು. ಕೆಮ್ಮು ಜೋರಾದರೆ ಶಿರಸಿ ಪೇಟೆಯಲ್ಲಿ ವೈದ್ಯರ ಬಳಿಗೆ ನಾನು ಮತ್ತು ನನ್ನ ತಂಗಿ ಅವಳನ್ನು ಕರೆದುಕೊಂಡು ಹೋಗುತ್ತಿದ್ದೆವು. ಅವಳಿಗೆ ಒಂದು ನಿಮಿಷವೂ ತೆರಪಿಲ್ಲದ ರೀತಿ ಕೆಮ್ಮು. ನಮ್ಮ ಫ್ಯಾಮಿಲಿ ಡಾಕ್ಟರ್ ಇದ್ದುದು ಶಿರಸಿಯ ನಟರಾಜ ಟಾಕೀಸ್ ಬಳಿ. ಒಮ್ಮೆ ನಾವು ಅಲ್ಲಿ ಹೋಗು
ವಾಗ ಟಾಕೀಸಲ್ಲಿ ‘ಹಾಲುಂಡ ತವರು’ ಸಿನಿಮಾ ನಡೆಯುತ್ತಿತ್ತು. ಇವಳು ಕೆಮ್ಮುತ್ತಲೇ ‘ವೈದ್ಯರ ಬಳಿ ಬೇಡ, ಹಾಲುಂಡ ತವರು ಸಿನಿಮಾಕ್ಕೆ ಹೋಗೋಣ’ ಅಂತ ಒಂದೇ ಹಟ. ಅಲ್ಲೇ ನಿಂತು ಬಿಟ್ಟಿದ್ದಾಳೆ. ಎಲ್ಲರೂ ನಮ್ಮನ್ನೇ ನೋಡುವಾಗ ಮುಜುಗರ.

ಅಂತೂ ಇಂತೂ ಡಾಕ್ಟರ್ ಬಳಿ ಒಯ್ದು ತರಲಾಯಿತು. ಆಮೇಲೆ ನಿದ್ದೆಗಣ್ಣಲ್ಲೂ ಹಾಲುಂಡ ತವರು ಎನ್ನುತ್ತಲೇ ಕೆಮ್ಮುತ್ತಿದ್ದಳು. ಅವಳಿಗೆ ಈಗ ಸ್ವಲ್ಪ ಕೆಮ್ಮು ಬಂದರೂ ನಾವೆಲ್ಲ ಹಾಲುಂಡ ತವರು ಎನ್ನುತ್ತ ನಗುತ್ತೇವೆ’. ಇನ್ನೂ ಮುಂದುವರಿಸಿ ವೀಣಾ ಹೆಗಡೆಯವರು, ‘ಹಾಗೆಯೇ ಕೆಮ್ಮಾಖ್ಯಾನ ಓದುತ್ತಿರುವಾಗ, ವರ್ಷಗಳ ಹಿಂದೆ ಟಿವಿಯಲ್ಲಿ ಬರುತ್ತಿದ್ದ ಗ್ಲೈಕೋಡಿನ್ ಕ- ಸಿರಪ್‌ನ ಜಾಹೀರಾತು ನೆನಪಾಗಿ ನಗು ಉಕ್ಕಿಬಂತು. ಒಡನೆಯೇ ಯುಟ್ಯೂಬ್‌ನಲ್ಲಿ ಅದನ್ನು ಹುಡುಕಿತೆಗೆದು ನಿಮಗೆ ಲಿಂಕ್ ಕಳುಹಿಸುತ್ತಿದ್ದೇನೆ. ನಿಮ್ಮ ಲೇಖನಕ್ಕೆ ಸರಿಯಾಗಿ ಕೂಡುವಂತಿದೆ’ ಎಂದು ಬರೆದಿದ್ದರು. ಜತೆಗೆ
ಗ್ಲೈಕೋಡಿನ್ ಜಾಹೀರಾತಿನ ಯುಟ್ಯೂಬ್ ಲಿಂಕ್ ಕಳುಹಿಸಿದ್ದರು.

ಅದನ್ನು ಪ್ಲೇ ಮಾಡಿದೆ. ಅವಾರ್ಡ್ ವಿನ್ನಿಂಗ್ ಅಡ್ವರ್ಟೈಸ್ ಮೆಂಟ್ ಎಂದು ಬರೆದದ್ದಿದೆ. ಯುಟ್ಯೂಬ್‌ಗೆ ಅಪ್‌ಲೋಡ್ ಆಗಿಯೇ ೧೫ ವರ್ಷಗಳಾದ ಆ ವಿಡಿಯೋ ಮೂಲದಲ್ಲಿ ಮತ್ತೂ ಹಳೆಯದು. ೯ ಜೂನ್ ೨೦೦೪ರ ದಿನಾಂಕವೂ ಕಾಣಿಸಿಕೊಳ್ಳುತ್ತದೆ. ಒಂದು ನಿಮಿಷ ಅವಧಿಯ ಆ ಜಾಹೀರಾತಿನ ಸ್ಕ್ರೀನ್‌ಪ್ಲೇ ಹೀಗಿದೆ: ಮಣ್ಣಿನ ಕಚ್ಚಾ ರಸ್ತೆಯಲ್ಲಿ ದಾರಿಗೆ ಅಡ್ಡವಾಗಿ ಸಾಗಿದ ಬಾತು ಕೋಳಿಗಳ ಗುಂಪೊಂದನ್ನು ಹಾದುಕೊಂಡು ಅಂಬಾಸಿಡರ್ ಕಾರು ಬಂದುನಿಲ್ಲುತ್ತದೆ. ಇತ್ತ, ಗೂರಲು ಕೆಮ್ಮುತ್ತಿರುವ ಬಾಬಾನೊಬ್ಬನ ಧ್ವನಿ ಕೇಳಿಸುತ್ತದೆ- ‘ಈ ದಿನ ಸತ್ಸಂಗದ ವಿಷಯ ವಾಣಿ ಅಥವಾ ಮಾತು’ ಎಂದು.

ಹಾಗೆ ಹೇಳುವಾಗಲೂ ಬಾಬಾ ಒಂದೆರಡು ಸಲ ಕೆಮ್ಮುತ್ತಾನೆ. ಕಾರಿನಿಂದಿಳಿದ ದಂಪತಿ ಆಗತಾನೆ ತಂದೆ-ತಾಯಿ ಆದವರು. ನವಜಾತ ಶಿಶುವನ್ನೂ ಕರೆದುಕೊಂಡು ಬಂದಿದ್ದಾರೆ. ಲಗುಬಗೆಯಿಂದ ಸಾಗಿ ಬಾಬಾನ ಬಳಿಗೆ ಹೋಗುತ್ತಾರೆ. ಮಗುವಿಗೆ ಬಾಬಾನೇ ಒಂದು ಹೆಸರು ಸೂಚಿಸಬೇಕು ಮತ್ತು
ಆಶೀರ್ವದಿಸಬೇಕು ಎಂದು ಆ ತಂದೆ-ತಾಯಿಯ ಇಚ್ಛೆ. ಬಾಬಾ ಬಾಯ್ತೆರೆದು ‘ಬಚ್ಚೇ ಕಾ ನಾಮ್…’ ಎಂದೊಡನೆ ಮತ್ತೊಮ್ಮೆ ‘ಉಹ್ಹು ಉಹ್ಹು’ ಎಂದು ಕೆಮ್ಮುತ್ತಾನೆ. ಬಾಬಾನ ಸಹಾಯಕ ‘ವಾಹ್ ಕ್ಯಾ ನಾಮ್ ಹೈ ಬಾಬಾ!’ ಎಂದು ಹರ್ಷೋದ್ಗಾರ ತೆಗೆಯುತ್ತಾನೆ. ‘ಹೋ ಗಯಾ ಹೋ ಗಯಾ ಅಬ್ ಜಾವೋ’
ಎನ್ನುತ್ತ ತಂದೆ-ತಾಯಿ ಮತ್ತು ಮಗುವನ್ನು ಅಲ್ಲಿಂದ ಸಾಗಹಾಕುತ್ತಾನೆ. ಮಗುವಿನ ಹೆಸರು ‘ಉಹ್ಹು ಉಹ್ಹು’ ಎಂದೇ ದಾಖಲಾಗುತ್ತದೆ.

ಅಜ್ಜಿ-ತಾತ ಹಾಗೇ ಕರೆದು ಮುದ್ದಿಸುತ್ತಾರೆ. ಮಗು ಬೆಳೆದು ಶಾಲೆಗೆ ಸೇರಿದಾಗ ಒಂದು ದಿನ ತರಗತಿಯಲ್ಲಿ ಟೀಚರ್ ಕಪ್ಪುಹಲಗೆಯ ಮೇಲೆ ಬರೆಯುತ್ತ ಚಾಕ್‌ಪೀಸ್ ಧೂಳಿನಿಂದಾಗಿ ಕೆಮ್ಮಿದಾಗ ಈ ಹುಡುಗ ಬಹುಶಃ ಟೀಚರ್ ತನ್ನ ಹೆಸರುಹೇಳಿ ಕರೆದರು ಎಂದುಕೊಂಡು ‘ಯಸ್ ಮಿಸ್!’ ಎಂದು ಕೈಯೆತ್ತು
ತ್ತಾನೆ. ಹಾಕಿ ಪಂದ್ಯದಲ್ಲಿ ಪ್ರೇಕ್ಷಕರು ಗ್ಯಾಲರಿಯಲ್ಲಿ ಉಹ್ಹು ಉಹ್ಹು ಎಂದು ಉನ್ಮಾದದಿಂದ ಕೇಕೆ ಹಾಕಿದ್ದು ತನಗೇ ಟೀಸ್ ಮಾಡಿದ್ದು ಎಂದು ತಪ್ಪಾಗಿ ತಿಳಿದುಕೊಳ್ಳುತ್ತಾನೆ. ಕೊನೆಗೆ ಮದುವೆ ಮಂಟಪದಲ್ಲಿ ಪಕ್ಕದಲ್ಲಿ ಕುಳಿತ ನವವಧು ಅಕಸ್ಮಾತ್ತಾಗಿ ಕೆಮ್ಮಿದಾಗ ತನ್ನನ್ನೇ ಕರೆದಳೇನೋ ಎಂದು ಆಕೆಯತ್ತ ನೋಡುತ್ತಾನೆ. ಅಂಥ ಉಹ್ಹು ಉಹ್ಹು ಮಹಾಶಯನಿಗೆ ಮಗು ಹುಟ್ಟುತ್ತದೆ.

ಅವನ ತಂದೆ-ತಾಯಿ ಮೊಮ್ಮಗುವನ್ನು ಕರೆದುಕೊಂಡು ಮತ್ತೆ ಅದೇ ಬಾಬಾನ ಬಳಿಗೆ ಹೋಗುತ್ತಾರೆ. ಹೆಸರು ಸೂಚಿಸಿ ಆಶೀರ್ವಾದ ಪಡೆಯಲಿಕ್ಕೆ. ಬಾಬಾ ಈಗ ಮತ್ತಷ್ಟು ಮುದುಕನಾಗಿರುತ್ತಾನೆ. ವಯಸ್ಸಹಜ ಕೆಮ್ಮು. ‘ಪೋತಾ ಹೈ? ಇಸ್ಕಾ ನಾಮ್ ಹೋಗಾ…’ ಎನ್ನುವಾಗ ಬಾಬಾಗೆ ತಡೆಯಲಸಾಧ್ಯ ಕೆಮ್ಮು. ಮಗುವಿನ ತಾತ ಕಿಸೆಯಿಂದ ಗ್ಲೈಕೋಡಿನ್ ಬಾಟ್ಲಿ ತೆಗೆದು ಬಾಬಾಗೆ ಕೊಡುತ್ತಾನೆ. ಬಾಬಾ ಅದರಿಂದ ಒಂದು ಗುಟುಕಿನಷ್ಟು ಸೇವಿಸಿ ‘ಗ್ಲೈ
ಕೋಡಿನ್…’ ಎಂದು ನಿಟ್ಟುಸಿರು ಬಿಡುತ್ತಾನೆ. ‘ಉತ್ತಮ್ ನಾಮ್!’ ಎಂದು ಬಾಬಾನ ಶಿಷ್ಯವರ್ಗ ಅನುಮೋದಿಸುತ್ತದೆ. ‘ಖಾಂಸೀ ಕೀ ಛುಟ್ಟೀ’ ಎಂಬ ಬಾಬಾನ ಮಾತಿನೊಡನೆ ಜಾಹೀರಾತು ಮುಗಿಯುತ್ತದೆ.

ಈ ಜಾಹೀರಾತನ್ನು ೮೦-೯೦ರ ದಶಕದಲ್ಲಿ ಟಿವಿಯಲ್ಲಿ ನಾನೂ ನೋಡಿ ಆನಂದಿಸಿದ್ದೆ. ಆಮೇಲೆ ಮರೆತೇಹೋಗಿತ್ತು. ನೆನಪಾಗಿದ್ದರೆ ಖಂಡಿತವಾಗಿಯೂ ಕಳೆದವಾರದ ಕೆಮ್ಮುಪುರಾಣದಲ್ಲಿ ಅದರ ಉಲ್ಲೇಖ ಇದ್ದೇಇರುತ್ತಿತ್ತು. ವೀಣಾ ಹೆಗಡೆಯವರು ಆಮೇಲಾದರೂ ನೆನಪಿಸಿದ್ದು ಒಳ್ಳೆಯದೇ ಆಯ್ತು. ಅದರಲ್ಲಿ ಕೆಮ್ಮುಪುರಾಣ ಬಿಟ್ಟು ನನಗೆ ಬೇರೆಯೇ ಒಂದು ವಿಷಯ ಸಿಕ್ಕಿತು! ಅದೇನೆಂದರೆ, ನವಜಾತ ಶಿಶುವಿಗೆ ಸಂತರಿಂದ, ಶ್ರೇಷ್ಠಪುರುಷರಿಂದ ನಾಮಕರಣ ಮತ್ತು ಆಶೀರ್ವಾದ ಮಾಡಿಸುವುದು. ಇದು ಸನಾತನ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಬಂದಿರುವ ಒಂದು ಸಂಪ್ರದಾಯ.

ತ್ರೇತಾಯುಗದಲ್ಲಿ ದಶರಥ ಮಹಾರಾಜನು ಪುತ್ರಕಾಮೇಷ್ಟಿಯಾಗ ಮಾಡಿ, ಯಜ್ಞಪುರುಷನು ದಯಪಾಲಿಸಿದ ಪಾಯಸ ವನ್ನು ತನ್ನ ಮೂವರು ರಾಣಿ ಯರಿಗೆ ಹಂಚಿ, ಕೌಸಲ್ಯೆ ಮತ್ತು ಕೈಕೇಯಿಗೆ ಒಂದೊಂದು ಗಂಡು ಮಗು ಮತ್ತು ಸುಮಿತ್ರೆಗೆ ಅವಳಿ ಗಂಡುಮಕ್ಕಳು ಹುಟ್ಟಿದವು. ಆ ಮಕ್ಕಳಿಗೆ ತಂದೆ-ತಾಯಿಯರೇ ನಾಮಕರಣ ಮಾಡಿದ್ದೇ? ಅಲ್ಲ! ಕುಲಗುರು ವಸಿಷ್ಠರು. ‘ಶಬ್ದ ಪ್ರಪಂಚದಲ್ಲಿ ಅತಿಮಧುರವೂ ಸರಳವೂ ಆಹ್ಲಾದಕರವೂ ಆದ ರಾಮ ಎಂಬ ನಾಮಧೇಯವನ್ನು ಮನಸಾ ಆಲೋಚಿಸಿ ವಸಿಷ್ಠರು ರಾಮ ಎಂಬ ನಾಮಕರಣ ಮಾಡಿದರು…’ ಎಂಬ ವಿವರಣೆ ಬರುತ್ತದೆ. ರಾಮನದು ಮಾತ್ರವಲ್ಲ, ಭರತ, ಶತ್ರುಘ್ನ, ಮತ್ತು ಲಕ್ಷ್ಮಣ ಎಂಬ ಹೆಸರನ್ನೂ ವಸಿಷ್ಠರೇ ಸೂಚಿಸಿದ್ದಿರಬಹುದು.

ತಂದೆ-ತಾಯಿಯೇ ಮಗುವಿಗೆ ಹೆಸರು ಇಡಬಾರದೆಂದೇನಲ್ಲ. ಆದರೆ ಸಂತಶ್ರೇಷ್ಠರು, ಮಹಾಮಹಿಮರು, ಜ್ಞಾನಿಗಳು ಹೆಸರನ್ನಿಟ್ಟರೆ ಅದರಲ್ಲಿ ಮಗುವಿನ ಉತ್ತರೋತ್ತರ ಕಲ್ಯಾಣವಿರುತ್ತದೆ. ಮಗು ಬೆಳೆದು ಸತ್ಪುರುಷನಾಗುತ್ತಾನೆ ಅಥವಾ ಸೌಂದರ್ಯ- ಸದ್ಗುಣಗಳ ಗಣಿಯೆನಿಸಿದ ಸುಕನ್ಯೆಯಾಗುತ್ತಾಳೆ ಎಂದು ಆ ಮಹಾಮಹಿಮರ ದೂರದೃಷ್ಟಿಗೆ ಗೊತ್ತಿರುತ್ತದೆ. ಮಹೋನ್ನತ ಆಶಯದಿಂದಲೇ ಆ ಸಂಪ್ರದಾಯ ಇರುವುದು. ತ್ರೇತಾಯುಗದಿಂದ ಈಗ ಕಲಿಯುಗಕ್ಕೆ, ಕ್ರಿಸ್ತಶಕ ೨೦೧೬ರ ಇಸವಿಗೆ ಬರೋಣ. ಅದರಲ್ಲೂ ಆಗಸ್ಟ್ ತಿಂಗಳ ೧೩ನೆಯ ತಾರೀಕು. ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯ ಭರತ್ ಸಿಂಗ್ ಮತ್ತು ವಿಭಾ ಸಿಂಗ್ ದಂಪತಿಗೆ ಹೆಣ್ಣು ಮಗು ಹುಟ್ಟಿತು.

ಯಾವ ದಿವ್ಯಪುರುಷನಿಂದ ನಾಮಕರಣ ಮಾಡಿಸಬೇಕು ಎಂದು ಆಚೀಚೆ ನೋಡದೆ ವಿಭಾ ಸಿಂಗ್ ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಳಾಸಕ್ಕೊಂದು ಪತ್ರ ಬರೆದಳು. ಗಂಡ ಭರತ್ ಸಿಂಗ್ ಅದನ್ನು ಸ್ಪೀಡ್‌ಪೋಸ್ಟ್‌ನಲ್ಲಿ ಕಳುಹಿಸಿಬಿಟ್ಟನು. ಉತ್ತರ ಬರುತ್ತದೆಂದು ಅವರೇನೂ ಕನಸಲ್ಲೂ ನಿರೀಕ್ಷಿಸಿರಲಿಲ್ಲ. ಒಂದು ದಿನ ಪ್ರಧಾನಿ ಕಚೇರಿಯಿಂದ ದೂರವಾಣಿ ಕರೆ ಬಂತು! ‘ಮೈ ನರೇಂದ್ರ ಮೋದಿ ಬೋಲ್ ರಹಾ ಹೂಂ…’ ಎಂದು ಕೇಳಿಬಂದಾಗ ಆ ದಂಪತಿಗೆ ಹೇಗಾಗಿರಬೇಡ! ‘ನಿಮ್ಮ ಪತ್ರ ತಲುಪಿತು. ನಿಮಗೆ ಹಾರ್ದಿಕ ಅಭಿನಂದನೆಗಳು. ನಿಮ್ಮನೆಯಲ್ಲಿ ಹೆಣ್ಣು ಮಗುವಿನ ಜನನವಾಗಿದೆ. ಮುದ್ದಾದ ಈ ಬಾಲೆಯ ಹೆಸರು ವೈಭವಿ ಎಂದು ಇರಲಿ. ಇದರಲ್ಲಿ ನಿಮ್ಮಿಬ್ಬರ ಹೆಸರುಗಳ ಅಕ್ಷರಗಳೂ ಇವೆ’ ಎಂದು ಮೋದಿಜೀ ಹೇಳಿ ಆಶೀರ್ವದಿಸಿದರು.

ನಂಬಲಿಕ್ಕೇ ಆಗದಿದ್ದರೂ ಸತ್ಯವಾಗಿ ನಡೆದ ಘಟನೆ. ಹರ್ಷಾ ಘಾತದಿಂದ ಸಾವರಿಸಿ ನೆರೆಕೆರೆಯವರಿಗೆ ಆ ವಿಷಯ ತಿಳಿಸಿದಾಗ ಅವರಂತೂ ನಂಬಲೇ ಇಲ್ಲ. ನಿರಾಶನಾದ ಭರತ್ ಸಿಂಗ್ ಮತ್ತೆ ಪ್ರಧಾನಿ ಕಚೇರಿಗೆ ಪತ್ರ ಬರೆದು ತನ್ನ ಮಗಳ ಹೆಸರನ್ನು ದಯವಿಟ್ಟು ಪತ್ರಮುಖೇನ ತಿಳಿಸಬೇಕೆಂದು ಕೋರಿ ಕೊಂಡನು. ಕೆಲದಿನ ಗಳಲ್ಲಿ ಪ್ರಧಾನಿ ಕಚೇರಿಯಿಂದ ಪತ್ರ ಬಂದೇಬಂತು! ‘ನಿಮ್ಮ ಮನೆಗೆ ಹೆಣ್ಣುಮಗುವಿನ ಆಗಮನವಾಗಿದೆ. ಅಭಿನಂದನೆಗಳು.
ವೈಭವಿಯ ಕನಸುಗಳನ್ನು ನೀವು ಸಾಕಾರಗೊಳಿಸುವಿರಿ ಮತ್ತು ವೈಭವಿ ನಿಮ್ಮೆಲ್ಲರ ಶಕ್ತಿಯಾಗುವಳು. ಇದು ನಮ್ಮ ಹಾರೈಕೆ’ ಎಂದು ಪತ್ರದ ಒಕ್ಕಣೆ. ದೇಶದ ಪ್ರಧಾನಿಯಿಂದ ನಾಮಕರಣ ಮಾಡಿಸಿಕೊಂಡ ವೈಭವಿ ಎಂಥ ಅದೃಷ್ಟವಂತೆ! ಈಗ ಬಹುಶಃ ಶಾಲೆಗೆ ಸೇರಿ ಮೂರನೆಯ ಇಯತ್ತೆಯಲ್ಲಿ ಓದುತ್ತಿದ್ದಾಳೇನೊ. ಹೇಗಿರಬಹುದು ಶಾಲೆಯಲ್ಲಿ ಸಹಪಾಠಿಗಳೆದುರು ಆಕೆಯ ಹೆಸರಿನ ಪ್ರಭೆ!

ಬಂಗಾಲಿಗಳ ಹೆಸರುಗಳು ಬಂಗಾಲಿ ಸ್ವೀಟ್‌ಗಳಂತೆಯೇ ಮಧುರವಾಗಿ ಇರುತ್ತವೆ ಅಂತೊಂದು ಪ್ರತೀತಿ. ಅದು ನಿಜ ಕೂಡ. ಬಂಗಾಲಿಗಳಿಗೆ ‘ವ’ ಉಚ್ಚಾರ ಬಾರದೆ ‘ಬ’ ಎಂದಾಗುವುದರಿಂದ, ಸಮುದ್ರ ಎಂಬರ್ಥದ ಅರ್ಣವ ‘ಅರ್ನೊಬ್’ ಆಗುತ್ತಾನೆ, ಸುವ್ರತ ‘ಸುಬ್ರತೊ’ ಆಗುತ್ತಾನೆ, ವಿಮಲಾ ‘ಬಿಮಲಾ’ ಆಗುತ್ತಾಳೆ ಎನ್ನುವುದನ್ನು ಬಿಟ್ಟರೆ ಮೂಲದಲ್ಲಿ ಬಂಗಾಲಿ ಹೆಸರುಗಳು ಅತಿಮಧುರವಾಗಿರುವುದು ಹೌದು. ಅದಕ್ಕೆ ಎರಡು ಕಾರಣಗಳಿವೆ. ಪ್ರತಿಯೊಬ್ಬ ಬಂಗಾಲಿಗೆ ಎರಡೆರಡು ಹೆಸರುಗಳಿರುತ್ತವೆಯಂತೆ. ಒಂದು ಭೋಲಾ-ನಾಮ್ ಅಥವಾ ಶುಭನಾಮಧೇಯ. ಅದು ದಾಖಲಾತಿ ಪತ್ರಗಳಲ್ಲಿ ಮಾತ್ರ. ಇನ್ನೊಂದು ಡಾಕ್-ನಾಮ್. ಅದು ಮನೆಮಂದಿ ಮತ್ತು ಮಿತ್ರವರ್ಗದಲ್ಲಿ ಬಳಕೆಗೆ ಮಾತ್ರ. ಭೋಲಾ ನಾಮ್ ಅನ್ನು ಸಾಮಾನ್ಯವಾಗಿ ಸಂತಶ್ರೇಷ್ಠರಿಂದ, ಕವಿ ಗಳಿಂದ, ಸಾಹಿತಿಗಳಿಂದ ಕೇಳಿ ಇಟ್ಟುಕೊಳ್ಳುತ್ತಾರೆ. ರವೀಂದ್ರನಾಥ ಟಾಗೋರರ ಜೀವಿತಕಾಲದಲ್ಲಿ ಅವರು ನೂರಾರು ಸಾವಿರಾರು ಬಂಗಾಲಿಗಳಿಗೆ ಭೋಲಾ-ನಾಮ್ ಸೂಚಿಸಿದ್ದಾರಂತೆ.

೧೯೯೮ರಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಅಮರ್ತ್ಯ ಸೇನ್ ಅವರಿಗೂ ಚಿಕ್ಕಂದಿನಲ್ಲಿ ಹೆಸರು ಸೂಚಿಸಿದವರು ರವೀಂದ್ರ ನಾಥ ಟಾಗೋರರೇ! ಇದನ್ನು ನೊಬೆಲ್ ಪ್ರಶಸ್ತಿ ಪ್ರತಿಷ್ಠಾನವೇ ಒಂದು ಪ್ರಕಟಣೆಯಲ್ಲಿ ಹೆಮ್ಮೆಯಿಂದ ಹೇಳಿ ಕೊಂಡಿದೆ. ರವೀಂದ್ರನಾಥ ಟಾಗೋರರಿಗೆ ೧೯೧೩ರಲ್ಲಿ ನೊಬೆಲ್ ಪುರಸ್ಕಾರ ಸಿಕ್ಕಿತ್ತು. ೮೫ ವರ್ಷಗಳ ತರುವಾಯ ಅಮರ್ತ್ಯ ಸೇನ್ ಆ ಪುರಸ್ಕಾರಕ್ಕೆ ಭಾಜನರಾದರು. ಒಬ್ಬ ನೊಬೆಲ್ ಪುರಸ್ಕೃತ ನಿಂದ ಹೆಸರು ಇಡಲ್ಪಟ್ಟ ಇನ್ನೊಬ್ಬ ವ್ಯಕ್ತಿ ಮುಂದೆ ನೊಬೆಲ್ ಪುರಸ್ಕೃತನಾಗಿದ್ದು ಅಪರೂಪದಲ್ಲಿ ಅಪರೂಪದ ಘಟನೆ.

ಅದಿರಲಿ, ರವೀಂದ್ರನಾಥ ಟಾಗೋರರು ಲೋಕದ ಮಕ್ಕಳಿಗೆಲ್ಲ ಹೆಸರು ಸೂಚಿಸಿದರು, ತಮ್ಮದೇ ಮಕ್ಕಳಿಗೆ ಏನೆಂದು ಹೆಸರಿಟ್ಟಿದ್ದರು? ಅಂದಹಾಗೆ ರವೀಂದ್ರನಾಥ ಟಾಗೋರರಿಗೆ ಎಷ್ಟು ಜನ ಮಕ್ಕಳು? ಒಟ್ಟು ಐದು. ಹಿರಿಯವಳು ಮಧುರಿಲತಾ; ಎರಡನೆಯವನು ರತೀಂದ್ರನಾಥ; ಮೂರನೆಯವಳು ರೇಣುಕಾ; ನಾಲ್ಕನೆಯವಳು ಮೀರಾ; ಐದನೆಯವನು ಶಮೀಂದ್ರನಾಥ. ಈ ಹೆಸರುಗಳನ್ನು ರವೀಂದ್ರನಾಥರೇ ಇಟ್ಟಿರಬಹುದಾದರೂ ಭಾರಿ ವಿಶೇಷದವು ಎಂದಾಗಲೀ ಅನನ್ಯವಾದಂಥವು ಎಂದಾಗಲೀ ಅನಿಸುವುದಿಲ್ಲ. ಅಲ್ಲದೇ ಮೂವರ ಪೈಕಿ ಇಬ್ಬರು ಹೆಣ್ಣುಮಕ್ಕಳು ಬಹಳ ಕಾಲ ಬಾಳಲಿಲ್ಲ.

ರವೀಂದ್ರನಾಥ ಟಾಗೋರರ ಪತ್ನಿಯ ಹೆಸರು ‘ಮೃಣಾಲಿನಿ’ ಎಂದು. ಮದುವೆಯಾಗಿ ಗಂಡನ ಮನೆಗೆ ಬಂದಮೇಲಿನ ಹೆಸರದು, ರವೀಂದ್ರನಾಥ ಟಾಗೋರರೇ ಇಟ್ಟದ್ದು. ತವರಿನಲ್ಲಿ ಆಕೆಯ ಹೆಸರು ಭವತಾರಿಣಿ ರಾಯ್ ಚೌಧುರಿ ಎಂದು ಇತ್ತು. ಆಕೆ ವೇಣಿಮಾಧವ ರಾಯ್ ಚೌಧುರಿ ಮತ್ತು ದಾಕ್ಷಾಯಿಣಿ ಚೌಧುರಿ ದಂಪತಿಯ ಮಗಳು. ಬಂಗಾಲಿಗಳ ಉಚ್ಚಾರದಲ್ಲಿ ಅನುಕ್ರಮವಾಗಿ ಭಬತಾರಿಣಿ, ಬೇಣಿಮಾಧೋಬ್, ದಾಕ್ಷಾಯೊನಿ. ಭವ ತಾರಿಣಿಯನ್ನು ಮದುವೆಯಾದ ಮೇಲೆ ರವೀಂದ್ರನಾಥ ಟಾಗೋರರು ಆಕೆಗೆ ‘ಮೃಣಾಲಿನಿ’ ಎಂಬ ಹೆಸರನ್ನೇಕೆ ಇಟ್ಟರು? ಅದಕ್ಕೊಂದು ವೆರಿ ವೆರಿ ಇಂಟರೆಸ್ಟಿಂಗ್ ಕಥೆ ಇದೆ!

೧೭ ವರ್ಷದ ಪ್ರಾಯದಲ್ಲಿ, ಆಗಿನ್ನೂ ಮದುವೆಯಾಗಿರದ ರವೀಂದ್ರನಾಥ ಟಾಗೋರರಿಗೆ ಒಂದು ಗಾಢವಾದ ಲವ್ ಅಫರ್ ಇತ್ತಂತೆ. ಹುಡುಗಿಯ ಹೆಸರು ಅನ್ನಪೂರ್ಣಾ. ಆತ್ಮಾರಾಮ ಪಾಂಡುರಂಗ ತುರ್ಖಡ್ ಎಂಬ ಹೆಸರಿನ ಮುಂಬೈಯ ಶ್ರೀಮಂತನೊಬ್ಬನ ಮಗಳು. ಮುಂಬೈ ಇರುವುದು ಪಶ್ಚಿಮ ತೀರ ದಲ್ಲಿ, ಬಂಗಾಳ ಇರುವುದು ಪೂರ್ವತೀರದಲ್ಲಿ. ನಾನೊಂದು ತೀರ ನೀನೊಂದು ತೀರ ಆಗಿರುವಾಗ ಲವ್ ಅಫರ್ ಹೇಗೆ ಸಾಧ್ಯ ಅಂತೀರಾ? ಅದು ಹೀಗೆ: ರವೀಂದ್ರನಾಥರ ಅಣ್ಣ ಸತ್ಯೇಂದ್ರನಾಥ ಟಾಗೋರ್ ಮತ್ತು ಆತ್ಮಾರಾಮ ತುರ್ಖಡ್ ಸ್ನೇಹಿತರು.

ಸಮಾಜಸುಧಾರಣೆ ಚಳವಳಿಯಲ್ಲಿ ಸಮಾನಾಸಕ್ತರು. ಆತ್ಮಾರಾಮ ತುರ್ಖಡ್ ಕುಟುಂಬ ಕೆಲಕಾಲ ಬ್ರಿಟನ್‌ನಲ್ಲಿದ್ದು ಮುಂಬೈಗೆ ಹಿಂದಿರುಗಿದ್ದವ ರಾದ್ದರಿಂದ ಚಟಪಟನೆ ಇಂಗ್ಲಿಷ್ ಮಾತಾಡ ಬಲ್ಲವರು. ರವೀಂದ್ರನಾಥ ಉನ್ನತ ವಿದ್ಯಾಭ್ಯಾಸಕ್ಕೆ ಬ್ರಿಟನ್‌ಗೆ ಹೋಗುವ ಮೊದಲು ಕೆಲ ಕಾಲ ಮುಂಬೈ ಯಲ್ಲಿ ಆತ್ಮಾರಾಮರ ಮನೆಯಲ್ಲಿರಲಿ, ಅಷ್ಟಿಷ್ಟು ಇಂಗ್ಲಿಷ್ ಕಲಿತುಕೊಳ್ಳಲಿ ಎಂದು ಸತ್ಯೇಂದ್ರನಾಥರ ಇಚ್ಛೆ. ಆ ಪ್ರಕಾರ ಮುಂಬೈಯಲ್ಲಿ ರವೀಂದ್ರ ನಾಥ ಟಾಗೋರರಿಗೆ ಅನ್ನಪೂರ್ಣಾ ಇಂಗ್ಲಿಷ್ ಟೀಚರ್ ಆದಳು. ವಯಸ್ಸಿನಲ್ಲಿ ಅವರಿಗಿಂತ ಮೂರು ವರ್ಷ ದೊಡ್ಡವಳು. ಇಂಗ್ಲಿಷ್ ಕಲಿಕೆ ಎಷ್ಟು ಸಫಲ ವಾಯಿತೋ ಗೊತ್ತಿಲ್ಲ ಅವರಿಬ್ಬರ ನಡುವೆ ಪ್ರೇಮ ಅಂಕುರಿಸಿತು. ಕವಿಹೃದಯದ ರವೀಂದ್ರನಾಥ ತನ್ನ ಮನದನ್ನೆಗೆ ಪ್ರೀತಿಯಿಂದ ನಲಿನೀ ಎಂದು ಹೆಸರಿಟ್ಟರು. ಅವಳನ್ನು ದ್ದೇಶಿಸಿಯೋ ಎಂಬಂತೆ ರೋಮ್ಯಾಂಟಿಕ್ ಕವಿತೆಗಳನ್ನು ಬರೆದರು.

ಆದರೆ ಪ್ರೀತಿ ಬಹುಕಾಲ ನಿಲ್ಲಲಿಲ್ಲ. ಅವರಿಬ್ಬರ ಮದುವೆ ಸಾಧ್ಯವಿಲ್ಲ ಎಂದು ಎರಡೂ ಕಡೆಯ ಹಿರಿಯರು ಕಡ್ಡಿಮುರಿದಂತೆ ಖಡಾಖಂಡಿತ ಹೇಳಿ ಬಿಟ್ಟರು. ರವೀಂದ್ರನಾಥರು ಶಿಕ್ಷಣಕ್ಕಾಗಿ ಬ್ರಿಟನ್‌ಗೆ ತೆರಳಿದರು. ನಲಿನೀ ಬರೀ ಕನಸಿನ ರಾಣಿಯಷ್ಟೇ ಆದಳು. ಮುಂದೆ ಭವತಾರಿಣಿಯನ್ನು ಮದುವೆ ಯಾದ ರವೀಂದ್ರ ನಾಥರು ‘ನಲಿನೀ’ಯ ನೆನಪಿಗೋಸ್ಕರವೇ ಅದೇ ಅರ್ಥ ಮತ್ತು ಧ್ವನಿಯ ‘ಮೃಣಾಲಿನೀ’ ಎಂಬ ಹೆಸರನ್ನು ಹೆಂಡತಿಗೆ ಇಟ್ಟರು.
ಆದರೆ ವಿಧಿಯ ಲೀಲೆ. ಮೃಣಾಲಿನಿ ಬರೀ ೨೮ ವರ್ಷಗಳ ಕಾಲವಷ್ಟೇ ಬದುಕಿ ಕಾಲವಾದಳು. ಕವಿಗಳ ಬದುಕೇ ಹಾಗೆ ಅಲ್ಲವೇ? ಸ್ವತಃ ನೋವುಗಳನ್ನು ನುಂಗಿ ಲೋಕಕ್ಕೆ ಸುಖ-ಶಾಂತಿ- ಸಮೃದ್ಧಿ ಬಯಸುತ್ತಾರೆ. ರವೀಂದ್ರನಾಥ ಟಾಗೋರರಂಥವರು ‘ಗೀತಾಂಜಲಿ’ ಅರ್ಪಿಸುತ್ತಾರೆ; ಜನಗಳ ಮನದಲ್ಲಿ
‘ಜನಗಣಮನ’ ಆಗುತ್ತಾರೆ.