Sunday, 15th December 2024

ಸಿಡಿ ಇರೋ ಶಾಸಕರಿಗೆ ಸಬ್ಸಿಡಿ ಕೊಡ್ತೀರಾ

ತುಂಟರಗಾಳಿ

ಹರಿ ಪರಾಕ್

ಲೂಸ್ ಟಾಕ್
ಯಡಿಯೂರಪ್ಪ
ಏನ್ ಸಾರ್ ನಿಮ್ಮ ಕೆಲವು ಸಿಡಿದೆದ್ದ ಶಾಸಕರು ಬಹಳ ಕಾಟ ಕೊಡ್ತಾ ಇದ್ದಾರೆ ನಿಮಗೆ?
ಬರೀ ಪ್ರಪಂಚ ಅಷ್ಟೇ ಅಲ್ಲ, ಸಿಡಿನೂ ಗುಂಡಗೆ ಇದೆ. ಸಿಡಿ ಚಕ್ರ ಸುತ್ತುತ್ತಾನೆ ಇರುತ್ತೆ, ಇವತ್ತು
ನಂಗಾಗ್ತಿರೋದು ನಾಳೆ ಅವರಿಗೂ ಆಗುತ್ತೆ.
ಸಿಡಿ ಇರೋ ಶಾಸಕರಿಗೆ ಸಬ್ಸಿಡಿ ಕೊಡ್ತೀರಾ ಅನ್ನೋ ಮಾತು ಕೇಳಿಬರ್ತಾ ಇದೆಯಲ್ಲ
ಅಯ್ಯೋ ಅದದೆಲ್ಲ ಏನಿಲ್ಲ. ಸ್ಲಿಪ್ ಡಿಸ್ಕ್ ಆಗೋ ವಯಸ್ಸಲ್ಲಿ ಕಾಂಪಾಕ್ಟ್ ಡಿಸ್ಕ್ ತೋರಿಸಿ
ಹೆದರಿಸೋಕೆ ಬಂದ್ರೆ ಕೇಳ್ತೀನಾ
ಆದ್ರೂ ನಿಮ್ಮ ಟೈಮ್ ಯಾಕೋ ಸರಿ ಇಲ್ಲ ಅನ್ಸುತ್ತೆ ಅಲ್ವಾ
ರೀ, ಸಿಡಿ ಅಷ್ಟೇ ಅಲ್ಲ ಹಣೆಬರಹ ಕೂಡಾ ರೀ ರೈಟಬಲ್‌, ಅವರಿಗೂ ಒಂದು ಟೈಮ್ ಬರುತ್ತೆ.
ಇದರಿಂದ ಅವರಿಗೆ ಏನಾದ್ರೂ ಉಪಯೋಗ ಆಗುತ್ತಾ ಸರ್?
ಏನೂ ಆಗಲ್ಲ. ಸುಮ್ನೆ ಸುಳ್ಳು ಸಿಡಿ ಬರ್ನ್ ಮಾಡಿ ಇಟ್ಕೊಂಡು ನನ್ನ ಹೊಟ್ಟೆ ಉರಿಸ್ತಾ ಇದ್ದಾರೆ.
ಬಾಂಬ್ ಹಾಕೋ ಕಾಲದಲ್ಲಿ ಸಿಡಿ ಮದ್ದು ಹಾಕ್ತಾ ಇದ್ದಾರೆ ಅಷ್ಟೇ.
ಆದ್ರೂ ಒಂಥರಾ ಈ ಹಳ್ಳಿ ಕಡೆ ಸಿಡಿ ಆಡೋರ್ ಥರ ನಿಮ್ಮ ಬೆನ್ನಿಗೆ ಕೊಕ್ಕೆ ಹಾಕೋಕೆ
ನೋಡ್ತಿದ್ದಾರೆ ಅನ್ನಿ
ಗೂಗಲ್ ಡ್ರೈವ್ ಕಾಲದಲ್ಲಿ ಸಿಡಿ ಡ್ರೈವ್ ಬಗ್ಗೆ ಮಾತಾಡ್ತಾರೆ. ಈ ಸಿಡಿ ಬಗ್ಗೆ ಸಿಐಡಿ ತನಿಖೆ
ಮಾಡಿಸ್ತೀನಿ.
ಮೀಮಾಂಸೆ
ಸರಳ ಜೀವನ
ಲೈನ್ ಮನ್
ಮೋದಿಗೆ ಕಾಂಗ್ರೆಸ್‌ನವರ ಸಂಕ್ರಾಂತಿ ವಿಶ್
-ಎಳ್ಳು ಬೆಲ್ಲ ತಿಂದು, ಸುಳ್ಳು ಹೇಳೋದ್ ಕಡಿಮೆ ಮಾಡಿ
ಲೀಕ್ ಆಗುವ ಮಾಸ್ಟರ್ ಚಿತ್ರದ ಒಳ್ಳೆ ಪ್ರಿಂಟ್
Master print
ಜೀವನದ ಸತ್ಯ
– ಬದುಕಿರುವವರೆಗೂ ಮಾತ್ರ VIP
ಸತ್ತ ಮೇಲೆ ಬರೀ RIP
ಕರೋನಾ ಲಾಕ್ ಡೌನ್ ನಂತರದ ಎರಡು ಬಗೆಯ ವ್ಯಾಪಾರಸ್ಥರು
-ಬಂದಷ್ಟು ಬರಲಿ ಅನ್ನೋರು
-ಬಂದಷ್ಟೂ ಬರಲಿ ಅನ್ನೋರು
ಕನ್ನಡ ಸಿನಿಮಾಗಳನ್ನ ನಮ್ಮೋರು ಬಿಡುಗಡೆ ಮಾಡ್ತಾ ಇಲ್ಲ. ಇದನ್ನೇ ಉಪಯೋಗಿಸಿಕೊಂಡು
ಬೇರೆ ಭಾಷೆಯವರು ಮಜಾ ಮಾಡ್ತಾ ಇದ್ಧಾರೆ.
-ಏನ್ ಮಾಡಕಾಗಲ್ಲ, ನಿಮ್ ಸೈಟ್‌ನ ಜಾಸ್ತಿ ದಿನ ಖಾಲಿ ಬಿಟ್ರೆ ಬೇರೆ ಯಾವನೋ ಬಂದು,
ಅಲ್ಲಿ ಮನೆ ಕಟ್ಟಿಸ್ತಾನೆ ಅಷ್ಟೇ.
ಸದ್ಯದ ರಾಜ್ಯ ರಾಜಕೀಯದಲ್ಲಿ ಆಗ್ತಿರೋದು
-ಕಾಂಪಾಕ್ಟ್ ಡಿಸ್ಕ್ ಬಗ್ಗೆ ‘ಡಿಸ್ಕ’ಶನ್
ಒಬ್ಬರ ಮೇಲೊಬ್ಬರು ಕೆಸರೆರೆಚಾಟ ಮಾಡೋ ರಾಜಕಾರಣದಲ್ಲಿ ಸದ್ಯಕ್ಕೆ ನಡೆಯುತ್ತಿರೋ
ಸಿಡಿ ಎರಚಾಟ
-‘ಡಿಸ್ಕ’ಸ್ ಥ್ರೋ
ಮೊನ್ನೆ ಶುಭಾಶಯಗಳ ಮಹಪೂರದಲ್ಲಿ ವಿಶ್ವವಾಣಿ ಏನಾಗಿತ್ತು?
-‘ವಿಷ್’ವವಾಣಿ
ಹಳ್ಳಿ ಜನಗಳ ಭಾಷೆಯಲ್ಲಿ ಗಮನ ಸೆಳೆಯೋದು ಅವರ
-‘ಗ್ರಾಮ’ರ್
ವಾಟ್ಸಾಪ್ ಅಡಿಕ್ಟ್
-‘ಚಾಟ್’ಗಳಿಗೆ ದಾಸನಾದವನು

ನೆಟ್ ಪಿಕ್ಸ್
ಖೇಮು ಕಟಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಗೆ ಪ್ರತಿನಿತ್ಯ ಒಬ್ಬ ಹುಡುಗ ಬರ್ತಾ ಇದ್ದ. ಅವನು ಎಷ್ಟು ದಡ್ಡ ಗೊತ್ತಾ ಅಂತ ಖೇಮು ತನ್ನ ಎಲ್ಲ ಕಸ್ಟಮರ್ಸ್ ಹತ್ರ ಹೇಳ್ತಾ ಇದ್ದ. ಅವತ್ತೂ ಕೂಡ ಒಬ್ಬ ಕಸ್ಟಮರ್ ಹೇರ್ ಕಟ್ ಮಾಡ್ತಾ ಇದ್ದ ಖೇಮು. ಅದೇ ಸಮಯಕ್ಕೆ  ಆ ಹುಡುಗ ಬಂದ. ಅವನನ್ನ ನೋಡಿದ ಖೇಮು ಕಸ್ಟಮರ್ ಕಿವಿಯಲ್ಲಿ ಹೇಳಿದ ಈ ಹುಡುಗ ಎಷ್ಟು ದಡ್ಡ ಗೊತ್ತ ಸಾರ್, ಇವನಿಗೆ 100 ರುಪಾಯಿ ಮತ್ತು ಹತ್ತು ರುಪಾಯಿಯಲ್ಲಿ ಯಾವುದು ದೊಡ್ಡದು ಅಂತಾನೇ ಗೊತ್ತಿಲ್ಲ ಅಂದ. ಹೌದಾ ಅಂತ ಕಸ್ಟಮ್ ಕೇಳಿದ್ದಕ್ಕೆ ನೋಡ್ತಾ ಇರಿ ಅಂತ ಆ ಹುಡುಗನನ್ನು ಕರೆದು 100 ಮತ್ತು ಹತ್ತರ ನೋಟು ತೋರಿಸಿ ಇವರಡರಲ್ಲಿ ನಿಂಗೆ ಯಾವುದು ಬೇಕು ಮರಿ ಅಂತ ಕೇಳಿದ.

ಆ ಹುಡುಗ ಹತ್ತರ ನೋಟು ತಗೊಂಡು ಹೊರಟು ಹೋದ. ಆಗ ಖೇಮು ನೋಡಿದ್ರಾ ನಾನ್ ಹೇಳಲಿಲ್ವಾ ಅವನು ದಡ್ಡ ಅಂತ
ಎಂದು ಜಂಬ ಕೊಚ್ಚಿಕೊಂಡ. ಆ ನಂತರ ಕಸ್ಟಮರ್ ಕಟಿಂಗ್ ಮುಗಿಸಿ ಹೊರಬಂದಾಗ, ಆ ಹುಡುಗನನ್ನು ನೋಡಿದ. ಅವನನ್ನು ಕರೆದು ನೀನು ಯಾಕೆ ನೂರರ ನೋಟು ತಗೊಳ್ಳಲಿಲ್ಲ ಅಂತ ಕೇಳಿದ. ಅದಕ್ಕೆ ಆ ಹುಡುಗ ಹೇಳಿದ ಖೇಮು, ಅಂಗಡಿಗೆ ಬರೋ ಎಲ್ಲ ಕಸ್ಟಮರ್ ಮುಂದೆ ಹೀಗೇ ಮಾಡಿ ಖುಷಿ ಪಡ್ತಾನೆ. ನಾನು ಒಂದು ದಿನ 100 ರುಪಾಯಿ ತಗೊಂಡ್ರೆ ಅವತ್ತಿಗೆ
ಈ ಆಟ ಮುಗಿದು ಹೋಗುತ್ತೆ ಅದಕ್ಕೇ.

ಸಿನಿಗನ್ನಡ
ಕನ್ನಡ ಚಿತ್ರರಂಗದಲ್ಲಿ ಈಗ ದೊಡ್ಡ ದೊಡ್ಡ ಮಾತುಗಳು ಕೇಳಿಬರುತ್ತಿವೆ. ದೊಡ್ಡ ದೊಡ್ಡ ಸಿನಿಮಾಗಳು ಸಟ್ಟೇರಿವೆ. ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಆದರೆ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆ ಆಗುವ ಮಾತು ಮಾತ್ರ ಆಡುತ್ತಿಲ್ಲ. ಅದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಸರಕಾರದ ನೀತಿಗಳು, ಜನರ ಕರೋನಾ ಭೀತಿಗಳೂ, ಬದಲಾಗಿರುವ ಲೈಫ್‌
ಸ್ಟೆ ಲ್ ರೀತಿಗಳೂ ಇವೆ. ಹಾಗಾಗಿ ಸದ್ಯದ ಸಮಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ರೂ ಬಿಡುಗಡೆ ಮಾಡೋಕೆ ಮಾತ್ರ ಪ್ಲ್ಯಾನ್ ಇಂಡಿಯಾ ಲೆವೆಲ್ಲಿಗೆ ಯೋಚನೆ ಮಾಡಬೇಕಿದೆ.

ಈ ಪರಿಸ್ಥಿತಿಯ ವಿಶೇಷ ಮತ್ತು ಅಚ್ಚರಿ ಅಂದ್ರೆ ಕನ್ನಡದ ಸ್ಟಾರ್‌ಗಳು ಮಾತ್ರ ತಮ್ಮ ಚಿತ್ರ ಬಿಡುಗಡೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ಧಾರೆ. ಆದರೆ ಪರಭಾಷಾ ಚಿತ್ರಗಳು ಕರೋನಾ ಭೀತಿಗೆ ಯಾವ ಮುಲಾಜೂ ನೋಡದೆ, ಧೈರ್ಯ ಮಾಡುವುದೇ ಈ ಭೀತಿಗೆ ಇಲಾಜು ಎಂದುಕೊಂಡು ತಮ್ಮ ಚಿತ್ರಗಳನ್ನು ತೆರೆಗೆ ತರುತ್ತಿದ್ಧಾರೆ. ಅವುಗಳಲ್ಲಿ ಕೆಲವರು ಓಟಿಟಿಗಳಲ್ಲಿ ತಮ್ಮ ಚಿತ್ರ ಬಿಡುಗಡೆ ಮಾಡಿದರೆ, ಇನ್ನು ಕೆಲವರು ನೇರವಾಗಿ ಚಿತ್ರಮಂದಿರಕ್ಕೇ ಅಡಿ ಇಟ್ಟಿದ್ಧಾರೆ.

ಕಳೆದ ವಾರ ಬಿಡುಗಡೆಯಾದ ತಮಿಳಿನ ಮಾಸ್ಟರ್ ಚಿತ್ರ ಇದಕ್ಕೆ ತಾಜಾ ಉದಾಹರಣೆ. ಇಲ್ಲಿ ಖುಷಿ ಮತ್ತು ಅಚ್ಚರಿ ಮೂಡಿಸುವ ವಿಷಯ ಅಂದ್ರೆ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಚಿತ್ರತಂಡ ಕೂಡ ಧೈರ್ಯ ಮಾಡಿದ್ದಕ್ಕೆ ತಕ್ಕ ಫಲಿ ತಾಂಶ ಸಿಕ್ಕಿದೆ ಎಂಬ ಖುಷಿಯಲ್ಲಿದೆ. ಬರೀ ಬೆಂಗಳೂರಿನ ಸುಮಾರು 608 ಪ್ರದರ್ಶನ ಕಂಡಿದೆ ಮಾಸ್ಟರ್ ಚಿತ್ರ. ಅಲ್ಲದೆ ಎಲ್ಲಾ ಶೋಗಳೂ ಹೌಸ್ ಫುಲ್ ಆಗಿರೋದು ತಂಡದ ಮಾಸ್ಟರ್ ಪ್ಲ್ಯಾನ್ ವರ್ಕ್ ಆಗಿದೆ ಎನ್ನುವುದಕ್ಕೆ ಉದಾಹರಣೆ.

ಅದೇನೋ, ಇಲ್ಲಿನವರಿಗೆ ತಮ್ಮ ಚಿತ್ರವನ್ನು ಈಗ ಬಿಡುಗಡೆ ಮಾಡಿದರೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಅನ್ನೋ ನಂಬಿಕೆ ಇಲ್ಲ ಅನ್ಸುತ್ತೆ. ಹಾಗಾಗಿ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರ ಮಾಸ್ಟರ್ ಈಗ ಬ್ಲಾಕ್ ಬಸ್ಟರ್ ಎನಿಸಿ ಕೊಳ್ಳುವ ಲಕ್ಷಣ ತೋರಿಸುತ್ತಿದೆ. ಈ ಚಿತ್ರದ ನಿರ್ಮಾಪಕರು ತಮ್ಮ ಚಿತ್ರದಲ್ಲಿ ಇಬ್ಬಿಬ್ಬರು ವಿಜಯ್‌ಗಳಿದ್ಧಾರೆ ಎಂಬ ನಂಬಿಕೆ ಯಲ್ಲಿ ಬೆಂಗಳೂರಿ ನಲ್ಲಿ ಮಾಸ್ಟರ್ ಪ್ಲ್ಯಾನ್ ಮಾಡಿ ಚಿತ್ರವನ್ನು ಬಿಡುಗಡೆ ಮಾಡಿ ವಿಜಯದ ನಗೆ ಬೀರಿದ್ಧಾರೆ.

ಹಾಗಾಗಿ ಕನ್ನಡ ಸಿನಿಮಾ ರಿಲೀಸ್ ಆಗ್ತಿಲ್ಲ ಅನ್ನೋ ವಾಸ್ತವದ ಮಧ್ಯೆ ಪರಭಾಷೆಯವರು ಇಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ಧಾರೆ. ನಮ್ಮ ಕನ್ನಡಿಗರೇ ಮುಗಿಬಿದ್ದು ಈ ಪರಭಾಷಾ ಚಿತ್ರಗಳನ್ನು ನೋಡುತ್ತಿದ್ಧಾರೆ. ಸೋ ಬೇರೆ ಭಾಷೆ ಸಿನಿಮಾಗಳು ಕರ್ನಾಟಕದಲ್ಲಿ ದರ್ಬಾರ್ ಮಾಡುತ್ತಿವೆ. ಕನಿಷ್ಠ ಪಕ್ಷ ಇದನ್ನು ನೋಡಿಯಾದರೂ ಕನ್ನಡ ಚಿತ್ರರಂಗ ನಿದ್ದೆಯಿಂದ ಮೇಲೇಳುತ್ತದಾ ಎಂಬುದನ್ನು ಕಾದು ನೋಡಬೇಕಾಗಿದೆ. ಈಗಾಗಲೇ, ನಿಮ್ಮ ಸೈಟ್ ಅನ್ನು ಜಾಸ್ತಿ ದಿನ ಖಾಲಿ ಬಿಟ್ರೆ, ಅಲ್ಲಿ ಬೇರೆ ಯಾರೋ ಬಂದು ಮನೆ ಕಟ್ಟಿಸಿಕೊಳ್ತಾರೆ ಎನ್ನುವ ಮಾತು ನಮ್ಮ ಚಿತ್ರರಂಗದ ಮಂದಿಗೆ ಅರ್ಥವಾಗಿರಬೇಕು.