Sunday, 15th December 2024

ಇನ್ನು ಕೆಲ ದಿನ ಸುಧಾಮೂರ್ತಿಯವರು ಎಚ್ಚರಿಕೆಯಿಂದಿರಬೇಕು. ಏಕೆ ಗೊತ್ತಾ ?

ಇದೇ ಅಂತರಂಗ ಸುದ್ದಿ

vbhat@me.com

ಬ್ರಿಟಿಷ್ ಪತ್ರಿಕೆಗಳಿಗೆ ಸಣ್ಣ ಸಣ್ಣ ಸಂಗತಿಯೂ ದೊಡ್ಡ ಸುದ್ದಿಯೇ. ಕಳೆದ ವಾರ, ಬ್ರಿಟನ್‌ನ ಮಾಜಿ ಹಣಕಾಸು ಸಚಿವ ಮತ್ತು ಪ್ರಧಾನಿ ಹುದ್ದೆ ಆಕಾಂಕ್ಷಿ ರಿಷಿ ಸುನಕ್ ಪತ್ನಿ ಅಕ್ಷತಾಮೂರ್ತಿ ಅವರು, ತಮ್ಮ ಪತಿಯನ್ನು ಭೇಟಿ ಮಾಡಲು ಕಾಯುತ್ತಿದ್ದ ಕೆಲವು ಪತ್ರಕರ್ತರಿಗೆ ಮೂರೂವರೆ ಸಾವಿರ ರುಪಾಯಿ ಬೆಲೆಯ ಕಪ್‌ನಲ್ಲಿ ಚಹ ಕೊಟ್ಟಿದ್ದನ್ನೇ ಅಲ್ಲಿನ ಪತ್ರಿಕೆಗಳು ಏನೋ ಪ್ರಮಾದ ವೆಂಬಂತೆ ರಾದ್ಧಾಂತ ಮಾಡಿದರು. ರಿಷಿ ಸುನಕ್ ಬೆಲೆಬಾಳುವ ಕಪ್‌ನಲ್ಲಿ ಚಹ ಕೊಡುತ್ತಾರೆ ಎಂದು ಸುದ್ದಿ ಮಾಡಿದವು.

ಶತಕೋಟಿ ಡಾಲರ್ ಆಸ್ತಿವಂತೆಯಾದ ಅಕ್ಷತಾಮೂರ್ತಿ (ಹಾಗೆಂದು ವರದಿ ಮಾಡಿದವರೂ ಬ್ರಿಟಿಷ್ ಪತ್ರಕರ್ತರೇ. ಇಂಗ್ಲೆಂಡಿನ ರಾಣಿಗಿಂತ ಅಕ್ಷತಾ ಮೂರ್ತಿ ಶ್ರೀಮಂತೆ ಎಂದು ವಿವಾದ ಮಾಡಿದವರೂ ಅವರೇ.) ಮನಸ್ಸು ಮಾಡಿದ್ದರೆ ಬೆಳ್ಳಿಯ ಅಥವಾ ಬಂಗಾರದ ಲೋಟದಲ್ಲಿ ಆ ಪತ್ರಕರ್ತರಿಗೆ ಚಹ ಕೊಡಬಹುದಿತ್ತು. ಅವರಿಗೆ ಮೂರೂವರೆ ಸಾವಿರ ರುಪಾಯಿ ಮೌಲ್ಯದ ಕಪ್ ಯಾವ ಲೆಕ್ಕ? ಆದರೂ ಅದನ್ನೇ ದೊಡ್ಡ ಸುದ್ದಿಯನ್ನಾಗಿ ಮಾಡಿದರು.

ಇಂದು ಅದೇ ಬ್ರಿಟಿಷ್ ಮಾಧ್ಯಮ ಮೊಸರನ್ನದಲ್ಲಿ ಕಲ್ಲನ್ನು ಹುಡುಕುವ ಮತ್ತೊಂದು ಪ್ರಯತ್ನ ಮಾಡಿದೆ. ಪ್ರಧಾನಿ ಹುದ್ದೆ ಪೈಪೋಟಿಯಲ್ಲಿ ಎಲ್ಲರಿ ಗಿಂತ ಮುಂದಿರುವ ರಿಷಿ ಸುನಕ್, ತಮ್ಮ ಕ್ಯಾಂಪೇನ್ ಪೋಸ್ಟರಿನಲ್ಲಿ campaign ಎಂದು ಬರೆಯುವ ಬದಲು ತಪ್ಪಾಗಿ, campiagn’ ಎಂದು ಮುದ್ರಿಸಿದ್ದೇ ಮತ್ತೊಂದು ರಾದ್ಧಾಂತಕ್ಕೆ ಕಾರಣವಾಗಿದೆ.

ಇಂಗ್ಲಿಷ್ ಸರಿಯಾಗಿ ಗೊತ್ತಿರದ, ಸರಳ ಪದದ ಕಾಗುಣಿತ (ಸ್ಪೆಲ್ಲಿಂಗ್) ಗೊತ್ತಿಲದ ವ್ಯಕ್ತಿ ಆಂಗ್ಲ ದೇಶದ ಪ್ರಧಾನಿ ಆಗಬಹುದೇ ಎಂದೆಲ್ಲ ಚರ್ಚೆ ಮಾಡುತ್ತಿವೆ. ಅವರ ಭಾಷೆಯ ಹೇಳಬೇಕೆಂದರೆ, ಸುನಕ್ ಅವರನ್ನು ‘ರೋಸ್ಟ್’ (ಹುರಿಯೋದು) ಮಾಡುತ್ತಿವೆ.
ಏಕಾಏಕಿ ಈ ರಾದ್ಧಾಂತ ಭುಗಿಲೇಳುತ್ತಿದ್ದಂತೆ, ತುಸು ವಿಚಲಿತರಾದ ಸುನಕ್, ‘ Ready for spellcheck’ ಎಂಬ ಸ್ಪಷ್ಟಿಕರಣ ನೀಡಬೇಕಾಯಿತು.

ಇಷ್ಟಾದರೂ ನೆಟ್ಟಿಗರೂ ಬಿಡಬೇಕಲ್ಲ? ಟ್ವಿಟರ್ ಸೇರಿದಂತೆ ಉಳಿದ ಸಾಮಾಜಿಕ ಜಾಲತಾಣಗಳಲ್ಲಿ ಇದೇ ಟ್ರೆಂಡ್
ಆಗಿ ಹೋಯಿತು. ಇದರ ಬಗ್ಗೆ ಮನಸ್ಸಿಗೆ ಬಂದಂತೆ ಜನ ತಮ್ಮ ಅನಿಸಿಕೆಗಳನ್ನು ಹರಿಯಬಿಡಲಾರಂಭಿಸಿದರು. ಹಾಗಂತ ಈ
ಬಗ್ಗೆ ಟ್ವೀಟ್ ಮಾಡಿದ ಅನೇಕರು ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ್ದು ಬೇರೆ ಮಾತು. ಅಷ್ಟಕ್ಕೂ ಇದು ರಿಷಿ ಅವರೇ ಮಾಡಿದ
ಪ್ರಮಾದವಾ ಅಥವಾ ಅವರ ಸಹಾಯಕರು ಮಾಡಿದ್ದೇ ಗೊತ್ತಿಲ್ಲ. ಆದರೆ ಅದನ್ನು ರಿಷಿಯವರ ತಲೆಗೆ ಕಟ್ಟಿಬಿಟ್ಟಿದ್ದಾರೆ.

ಇಂಥ ಘಟನೆಗಳು ಸಿಕ್ಕರೆ, ಬ್ರಿಟಿಷ್ ಟ್ಯಾಬ್ಲಾಯಿಡ್‌ಗಳಿಗೆ ಸುಗ್ಗಿ. ಇದನ್ನೇ ಪುಟಗಟ್ಟಲೆ ಸುದ್ದಿ ಮಾಡಿ ಸಂಭ್ರಮಿಸುತ್ತವೆ. ಇದರ ಅರ್ಥ ಇಷ್ಟೇ, ರಿಷಿ ಅಥವಾ ಅಕ್ಷತಾ ಇನ್ನು ಕೆಲವು ದಿನ, ಅಂದರೆ ಅವರು ಪ್ರಧಾನಿ ಆಗುವ ತನಕ ಬಹಳ ಎಚ್ಚರಿಕೆಯಿಂದ
ಇರಬೇಕು. ಸಣ್ಣ ಪುಟ್ಟ ವಿಷಯಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಬ್ರಿಟಿಷ್ ಪತ್ರಕರ್ತರು ಹುಳುಕು ಹುಡುಕಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ರಿಷಿ ಏನೇ ಮಾಡಲಿ, ಮಾಡದಿರಲಿ ಅದು ಸುದ್ದಿಯಾಗುತ್ತಿದೆ.

ಸುಧಾಮೂರ್ತಿ ಮತ್ತು ನಾರಾಯಣಮೂರ್ತಿ ಏನೇ ಮಾಡಿದರೂ, ಅದು ಸಹ ಬ್ರಿಟಿಷ್ ಪತ್ರಕರ್ತರಿಗೆ ಸುದ್ದಿಯಾಗಬಹುದು. ಸುಧಾಮೂರ್ತಿಯವರೇನಾದರೂ ಮನೆಯಲ್ಲಿ ಜಿರಲೆಯನ್ನೋ, ಇರುವೆಯನ್ನೋ ಸಾಯಿಸಿದರೆನ್ನಿ, ಅದೇನಾದರೂ ಬ್ರಿಟಿಷ್ ಪತ್ರಕರ್ತರಿಗೆ ಗೊತ್ತಾದರೆ, ‘ಬ್ರಿಟಿಷ್ ಭಾವಿ ಪ್ರಧಾನಿಯ ಅತ್ತೆ ಪ್ರಾಣಿ ವಿರೋಧಿ’ ಎಂಬ ಮುಖಪುಟದ ಹೆಡ್ ಲೈನ್ ಬರೆದು, ಎರಡು ದಿನ ಇದನ್ನೇ ರಾಷ್ಟ್ರವ್ಯಾಪಿ ಸುದ್ದಿ ಮಾಡಿಬಿಡುತ್ತಾರೆ! ಬಹಳ ಕಷ್ಟ, ಈ ಬ್ರಿಟಿಷ್ ಪತ್ರಕರ್ತರಿಂದ ಪಾರಾಗೋದು.

ಭಾರತದಲ್ಲಿ ಇಂಥವೆಲ್ಲ ಪತ್ರಕರ್ತರ ಸುದ್ದಿಯ ಕಕ್ಷೆಯೊಳಗೆ ಬರುವುದಿಲ್ಲ. ಬಂದಿದ್ದರೆ ದಿನಕ್ಕೆ ಹತ್ತು ಮಂದಿ ಸುದ್ದಿ ಯಾಗುತ್ತಿದ್ದರು. ಅದಕ್ಕೆ ಅದು ಸುದ್ದಿಯಲ್ಲ.

ಭಿಕ್ಷುಕ ಉದ್ಯಮಿಯಾದದ್ದು

ಕೆಲವು ದಿನಗಳ ಹಿಂದೆ, ‘ದೈನಿಕ್ ಭಾಸ್ಕರ್’ ಪತ್ರಿಕೆ ಯಲ್ಲಿ ಓದಿದ ಸಂಗತಿಯಿದು. ಒಬ್ಬ ಭಿಕ್ಷುಕ ಪ್ರತಿನಿತ್ಯ ಟ್ರೇನಿನಲ್ಲಿ ಒಂದು ಸ್ಟೇಶನ್ ನಿಂದ ಇನ್ನೊಂದು ಸ್ಟೇಶನ್ ತನಕ ಹೋಗಿ ಭಿಕ್ಷೆ ಬೇಡುತ್ತಿದ್ದ ಮತ್ತು ಅದೇ ಟ್ರೇನಿನಲ್ಲಿ ಮರಳಿ ಬರುತ್ತಿದ್ದ. ಒಂದು ದಿನ ಆತನಿಗೆ ಟ್ರೇನಿನಲ್ಲಿ ಸೂಟುಧಾರಿ ಉದ್ಯಮಿಯೊಬ್ಬ ಸಿಕ್ಕ.

ಆತನಲ್ಲೂ ಭಿಕ್ಷೆ ಬೇಡಿದ. ಆಗ ಆ ಉದ್ಯಮಿ, ‘ನಾನು ಯಾರಿಗೂ ಪುಕ್ಕಟೆ ಏನನ್ನೂ ಕೊಡುವುದಿಲ್ಲ, ನಾನೊಬ್ಬ ವ್ಯಾಪಾರಿ, ನಾನು ಕೊಟ್ಟಿದ್ದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆದೇ ಪಡೆಯುತ್ತೇನೆ’ ಎಂದ. ಆಗ ಭಿಕ್ಷುಕ ಪೆಚ್ಚುಮೋರೆ ಹಾಕಿ, ‘ನಾನು ಏನು ಕೊಡಲಿ ಸಾರ್? ನಾನೇ ಅನ್ಯರಲ್ಲಿ ಭಿಕ್ಷೆ ಬೇಡುವವನು’ ಎಂದ ದೀನನಾಗಿ. ಆಗ ಉದ್ಯಮಿ ಆತನನ್ನು ತಿರಸ್ಕಾರ ದೃಷ್ಟಿಯಿಂದ ನೋಡಿ ಮುಂದಕ್ಕೆ ನಡೆದ.

ಈ ಮಾತುಕತೆಯಿಂದಾಗಿ ಭಿಕ್ಷುಕ ಆಲೋಚನೆಗೆ ಬಿದ್ದ, ರಾತ್ರಿಯೆಲ್ಲ ನಿದ್ದೆಗೆಟ್ಟು ಯೋಚಿಸಲಾರಂಭಿಸಿದ. ಮರುದಿನ ಆತ ರೈಲ್ವೇ ಸ್ಟೇಶನ್‌ನಲ್ಲಿ ಒಂದಷ್ಟು ಹೂಗಳನ್ನು ಖರೀದಿಸಿದ ಮತ್ತು ತನಗೆ ಭಿಕ್ಷೆ ಇಲ್ಲವೇ ಭೋಜನ ಕೊಡುವವರಿಗೆಲ್ಲ ಒಂದೊಂದು ಹೂ ಕೊಡಲು ಆರಂಭಿಸಿದ. ಅವನು ಬೇರೆ ಭಿಕ್ಷುಕರಿಗಿಂತ ಭಿನ್ನವಾಗಿ ಕಾಣಿಸಲಾರಂಭಿಸಿದ. ಹೂ ಕೊಡುವ ಭಿಕ್ಷುಕ ಎಂಬ ಹೆಸರೂ ಆತನಿಗೆ ಬಂತು. ಬಹಳ ದಿನಗಳ ನಂತರ ಮತ್ತೆ ಅದೇ ಉದ್ಯಮಿ ಭಿಕ್ಷುಕನಿಗೆ ಎದುರಾದ. ಭಿಕ್ಷುಕ ಆತನಿಗೆ ಹೂ ಕೊಟ್ಟ.

ಉದ್ಯಮಿ ಚಕಿತನಾಗಿ, ‘ಈಗ ನೀನೂ ನನ್ನಂತೆ ವ್ಯವಹಾರಸ್ಥನಾಗಿಬಿಟ್ಟೆ, ನಿನ್ನ ವರ್ತನೆ ನನಗೆ ಹಿಡಿಸಿತು’ ಎಂದ. ಏನನಿಸಿತೋ ಏನೋ, ಭಿಕ್ಷುಕ ಟ್ರೆನಿನಿಂದ ಕೆಳಗಿಳಿದು, ಇಂದಿನಿಂದ ನಾನು ಭಿಕ್ಷುಕನಲ್ಲ, ನಾನೊಬ್ಬ ವ್ಯವಹಾರಸ್ಥ ಎಂದು ಜೋರಾಗಿ ಬಡಬಡಿಸುತ್ತ ಪ್ಲಾಟ್ ಫಾರಂ ಮೇಲೆ ಓಡುತ್ತ ಹೋದ. ಅವನ ಮಾತನ್ನು ಕೇಳಿದವರು ಎಲ್ಲಾ ಇವನಿಗೆ ಹುಚ್ಚು ಹಿಡಿದಿರಬೇಕು ಎಂದು ಭಾವಿಸಿದರು.

ಅದಾದ ನಂತರ ಭಿಕ್ಷುಕ ಎಲ್ಲಿಗೆ ಹೋದನೋ, ಯಾರಿಗೂ ಕಾಣಿಸಿಕೊಳ್ಳಲಿಲ್ಲ. ನಾಲ್ಕು ವರ್ಷಗಳ ನಂತರ ಅದೇ
ಕಂಪಾರ್ಟ ಮೆಂಟಿನಲ್ಲಿ ಇಬ್ಬರು ಸೂಟುಧಾರಿ ವ್ಯಾಪಾರಸ್ಥರು ಪ್ರಯಾಣ ಮಾಡುತ್ತಿದ್ದರು. ಅದರಲ್ಲಿ ಒಬ್ಬ ಅದೇ ಉದ್ಯಮಿ.
ಇನ್ನೊಬ್ಬ ಹೊಸಬ. ಹೊಸ ಉದ್ಯಮಿ ಹಳಬನ ಕೈಕುಲುಕಿ, ‘ನನ್ನ ಪರಿಚಯವಾಯಿತೇ? ಎಂದು ಪ್ರಶ್ನಿಸಿದ. ‘ಇಲ್ಲ, ಪ್ರಾಯಶಃ
ಮೊದಲ ಬಾರಿ ನಿಮ್ಮನ್ನು ಭೇಟಿಯಾಗುತ್ತಿದ್ದೇನೆ’ ಎಂಬ ಉತ್ತರ ಬಂತು.

ಆಗ ಈ ಹೊಸ ಉದ್ಯಮಿ, ಇಲ್ಲ ಸಾರ್, ನಾವು ಇದಕ್ಕೂ ಮೊದಲು ಎರಡು ಭಾರಿ ಭೇಟಿಯಾಗಿದ್ದೇವೆ, ನಾನೊಬ್ಬ ಹೂವಿನ ವ್ಯಾಪಾರಿ. ಬಿಜಿನೆಸ್ ಡೀಲ್ ಗಳಿಗಾಗಿ ನಾನು ನಗರದಿಂದ ಹೊರಗೆ ಹೋಗುತ್ತಿರುತ್ತೇನೆ. ನನ್ನ ಈ ಅಭಿವೃದ್ಧಿಯ ಶ್ರೇಯಸ್ಸು ನಿಮಗೆ ಸಲ್ಲುತ್ತದೆ. ಮೊದಲ ಬಾರಿ ಭೇಟಿಯಾದಾಗ ಜೀವನದಲ್ಲಿ ಏನು ಮಾಡಬೇಕು, ಹೇಗಿರಬೇಕು ಎಂಬುದನ್ನು ನೀವು ಕಲಿಸಿದಿರಿ. ಎರಡನೇ ಭೇಟಿಯಲ್ಲಿ ನಾನು ಯಾರೆಂಬುದನ್ನು ತೋರಿಸಿಕೊಟ್ಟಿರಿ’ ಎಂದು ಹೊಸ ಉದ್ಯಮಿ ಹೇಳಿದ.

‘ಈ ಎರಡೂ ಭೇಟಿಗಳಾದ ಮೇಲೆ ನನ್ನ ಆಲೋಚನಾ ವಿಧಾನವೇ ಬದಲಾಯಿತು. ನಾನು ನನ್ನನ್ನು ಭಿಕ್ಷುಕ ಎಂದು ಭಾವಿಸಿ ದ್ದಾಗ ಭಿಕ್ಷುಕ ಬದುಕನ್ನು ಬಾಳುತ್ತಿದ್ದೆ. ನೀವು ನನ್ನನ್ನು ಉದ್ಯಮಿ ಎಂದು ಸಂಬೋಧಿಸಿದ ನಂತರದಲ್ಲಿ ನಾನು
ಉದ್ಯಮಿಯೇ ಆಗಿಬಿಟ್ಟೆ. ಅದಾಗಬೇಕೆಂದರೆ ಕೆಲವು ವರ್ಷಗಳ ಸಮಯ ಹಿಡಿಯಿತು ಅಷ್ಟೆ’ ಎಂದು ಹೇಳಿದ.

ಹನ್ನೊಂದು ವರ್ಷದ ಪ್ರಥಮೇಶ ಸಿನ್ಹ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮುಂದೆ ತನ್ನನ್ನು ಥಿಂಕರಬೆಲ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಪರಿಚಯಿಸಿಕೊಂಡಾಗ ಮತ್ತು ತನ್ನ ಗ್ಯಾಜೆಟ್ ಅನ್ನು ಪ್ರದರ್ಶಿಸಿದ ಘಟನೆ ನೆನಪಿರಬಹುದು. ಒಂದು ಅಮೂಲ್ಯವಾದ ಸೆಲ್ಫ್ ಲರ್ನಿಂಗ್ ಡಿವೈಸನ್ನು ಥಿಂಕರಬೆಲ್ ರೂಪಿಸಿದೆ. ಪ್ರಥಮೇಶ್ ‘ಶಾರ್ಕ್ ಟ್ಯಾಂಕ್ ಇಂಡಿಯಾ ಶೋ’ನಲ್ಲಿಯೂ ಭಾಗವಹಿಸಿದ್ದ.

ಗಾಂಧಿನಗರದಲ್ಲಿ ನಡೆಯುತ್ತಿರುವ ಡಿಜಿಟಲ್ ಇಂಡಿಯಾ ವೀಕ್ 2022ರಲ್ಲಿ ಆತ ಪ್ರಧಾನಮಂತ್ರಿಗಳೊಂದಿಗೆ  ಮುಖಾಮುಖಿಯಾಗುವುದು ಸಾಧ್ಯವಾಯಿತು. ಆತನ ಗ್ಯಾಜೆಟ್ ಮೋದಿಯವರನ್ನೂ ಪ್ರಭಾವಿತಗೊಳಿಸಿತು. ನಂತರ
ಭಾಷಣದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಗಳು, ಪ್ರಥಮೇಶನಂಥ ಯುವಕರ ಆತ್ಮವಿಶ್ವಾಸ ಕಂಡಾಗ ಯುವಸಮೂಹದ ಮೇಲಿರುವ ಭರವಸೆ ಇನ್ನಷ್ಟು ಹೆಚ್ಚಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ಜೀವನದ ಪ್ರತಿಯೊಂದು ಏಳುಬೀಳು ಅನುಭವವನ್ನು ಕೊಡುತ್ತದೆ. ನಾವು ನಮ್ಮಲ್ಲಿರುವ ಬುದ್ಧಿಮತ್ತೆಯನ್ನು ಸರಿಯಾಗಿ
ಉಪಯೋಗ ಮಾಡಿಕೊಂಡು ಮೇಲಕ್ಕೇರುತ್ತಾ ಸಾಗಬೇಕು. ಮಗುವೊಂದು ಹೊಸ ಆಟಿಕೆ ಕೈಗೆ ಬರುತ್ತಲೇ ಹಳೆಯದನ್ನು
ಮರೆಯುವಂತೆ ಬದುಕಿನಲ್ಲಿ ಕೂಡ ಒಂದೊಂದು ಹೊಸ ಮೆಟ್ಟಿಲು ಏರುವಾಗಲೂ ಹಳೆಯ ಕಹಿ ನೆನಪುಗಳನ್ನು ಮರೆಯುತ್ತ ಸಾಗಬೇಕು. ಬದುಕಿನಲ್ಲಿ ನೀವು ಒಂದು ಹಂತಕ್ಕೆ ತಲುಪಿದ ನಂತರ, ನಿಮ್ಮ ಬಗ್ಗೆ ಯೋಚನೆ ಮಾಡುವಾಗಲೆಲ್ಲ ದೊಡ್ಡ ಗುರಿಯತ್ತಲೇ ಯೋಚಿಸಿ.

ನಿಮಗೆ ಏನನ್ನು ಸಾಧಿಸಬಹುದು ಎಂಬ ಆತ್ಮವಿಶ್ವಾಸವಿದೆಯೋ, ಅಂಥ ಉನ್ನತ ಗುರಿಯನ್ನು ಹಾಕಿಕೊಳ್ಳಬೇಕು. ಅದಕ್ಕೆ ತಕ್ಕ ಶ್ರಮವನ್ನೂ ಹಾಕಿದರೆ ಸಾಧನೆ ಕೈಗೂಡುತ್ತದೆ.

ಗೃಹಿಣಿಯರಿಗೊಂದು ಅವಕಾಶ
ಮ್ಯಾನೇಜಮೆಂಟ್ ಗುರು ಎನ್. ರಘುರಾಮನ್ ಹೇಳಿದ ಒಂದು ಸಂಗತಿ ನನ್ನನ್ನು ತುಸು ಯೋಚಿಸುವಂತೆ ಮಾಡಿತು.
ಬಹಳ ಕಾಲದ ನಂತರ ಇತ್ತೀಚಿನ ಒಂದು ರಾತ್ರಿ ಹೊರಗಿಂದ ಫುಡ್ ಆರ್ಡರ್ ಮಾಡಲು ರಘುರಾಮನ್ ಯೋಚಿಸಿದರು.
ಅವರಿಗೆ ಹೊರಗಿನ ಆಹಾರ ಇಷ್ಟವೆಂದಲ್ಲ. ಆದರೆ ಅಂದು ಮುಂಬೈನಲ್ಲಿ ಭಾರೀ ಮಳೆ ಬೀಳುತ್ತಿತ್ತು ಮತ್ತು ಅವರಿಗೆ ಆರಾಮಾಗಿ ಕುಳಿತು ಹೊರಗಿನಿಂದ ತರಿಸಿದ ಆಹಾರ ತಿನ್ನುವ ಮನಸ್ಸಾಯಿತು. ಅವರು ಒಂದಷ್ಟು ಹೋಟೆಲ್‌ಗಳಿಗೆ ಫೋನ್
ಮಾಡಿದರು. ಆದರೆ ಡೆಲಿವರಿ ಬಾಯ್ಸ ಇಲ್ಲ ಎನ್ನುವ ಉತ್ತರ ಬಂತು.

ಡೆಲಿವರಿ ಆಪ್‌ಗಳಿಗೆ ಫೋನಾಯಿಸಿದಾಗ ಡೆಲಿವರಿ ಶುಲ್ಕ ಮುನ್ನೂರು ರುಪಾಯಿ ಆಗುತ್ತದೆ ಎಂಬ ಉತ್ತರ ಬಂತು. ಆರ್ಡರು ಮಾಡಿದ ಫುಡ್ ಬೆಲೆಯೇ ಸಾವಿರ ರುಪಾಯಿ ಆಗಿರುವಾಗ ಅದಕ್ಕೆ ಇಷ್ಟೊಂದು ದುಬಾರಿ ಡೆಲಿವರಿ ಚಾರ್ಜು ಪೀಕುವುದು ಯಾಕೋ ಸರಿ ಕಾಣಲಿಲ್ಲ. ಅದಕ್ಕೆ ಅವರು ಕಾರಣ ಕೇಳಿದರು. ಡೆಲಿವರಿ ಹುಡುಗರ ಕೊರತೆ ಮತ್ತು ಭಾರೀ ಮಳೆಯ ಅಡಚಣೆಯೇ ಕಾರಣ ಎಂಬ ಉತ್ತರ ಬಂತು.

ಮುನ್ನೂರು ರುಪಾಯಿ ಚಾರ್ಜು ಮಾಡಿದರೆ ಡೆಲಿವರಿ ಹುಡುಗರ ಕೊರತೆ ಹೇಗೆ ನಿವಾರಣೆಯಾಗುತ್ತದೆ ಎಂಬುದು ಅವರ ಮನಸ್ಸಿನಲ್ಲಿ ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ಅನಂತರ ಅವರೇ ಅಡುಗೆ ಮಾಡುವ ಯೋಚನೆ ಮಾಡಿದರು. ಅಂದು ಅವರು ಮನೆಯ ಸಿದ್ಧವಾದ ಊಟ ಮಾಡುತ್ತಿರುವಾಗ ಟಿವಿಯಲ್ಲಿ ಸುದ್ದಿಯೊಂದು ಬಿತ್ತರವಾಗುತ್ತಿತ್ತು. ಈ ವಾರದಿಂದ ದೇಶವ್ಯಾಪಿ ಯಾಗಿ ಹೋಟೆಲ್, ರೆಸ್ಟುರಾಂಟುಗಳು ಸರ್ವಿಸ್ ಚಾರ್ಜು ಪೀಕುವುದಕ್ಕೆ ತಡೆ ಹಾಕುವ ಆದೇಶವೊಂದು ಹೊರಬಿದ್ದ ಸುದ್ದಿ ಅದಾಗಿತ್ತು.

ಇದರ ಉಲ್ಲಂಘನೆಯಾದರೆ ದೂರು ಸಲ್ಲಿಸುವುದಕ್ಕೂ ಅವಕಾಶವಿರುವುದಾಗಿ ಬಿತ್ತರವಾಗುತ್ತಿತ್ತು. ಹೋಟೆಲಿಗರು  ಬೇರಾವುದೇ ಹೆಸರಿನಲ್ಲಿ ಶುಲ್ಕ ವಸೂಲು ಮಾಡಿದರೂ ಅದರ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂಬುದು ಆದೇಶದ
ಅಂಶದಲ್ಲಿದ್ದ ಪ್ರಮುಖ ಅಂಶ. ಹೋಟೆಲಿನಲ್ಲಿ ಕುಳಿತಿದ್ದಂತೆ ರಾಷ್ಟ್ರೀಯ ಸಹಾಯವಾಣಿ ೧೯೧೫ ಕ್ಕೆ ದೂರು ಮಾಡುವುದಕ್ಕೂ
ಅವಕಾಶವಿದೆ. ರೆಸ್ಟೋರೆಂಟುಗಳೊಂದಿಗೆ ಸಂಬಂಧವಿರುವ ಜನರು ಇದರ ಪರಿಣಾಮವನ್ನು ಗ್ರಹಿಸಬಲ್ಲರು.

ಹೋಟೆಲಿನವರು ಗ್ರಾಹಕರ ಸಹಮತ ಇಲ್ಲದೇ ಯಾವುದೇ ಸರ್ವಿಸ್ ಚಾರ್ಜ್ ವಿಧಿಸುವಂತಿಲ್ಲ ಎಂದು ಕೇಂದ್ರ ವಾಣಿಜ್ಯ ಮಂತ್ರಿ ಪೀಯೂಷ್ ಗೋಯಲ್ ಕಳೆದ ತಿಂಗಳು ಸ್ಪಷ್ಟವಾಗಿ ಹೇಳಿದ್ದರು. ಇದು ಜಾರಿಗೆ ಬಂದರೂ ಹೋಟೆಲಿನವರು ತಮ್ಮ ದರಪಟ್ಟಿಯಲ್ಲಿ ಶೇ.10 ರಷ್ಟು ಹೆಚ್ಚಿಸದೇ ಬೇರೆ ದಾರಿ ಇಲ್ಲ ಎಂದು ತೀರ್ಮಾನಕ್ಕೆ ಬಂದಂತಿತ್ತು. ನಮ್ಮಲ್ಲಿ ಹೋಟೆಲಿನಲ್ಲಿ ಟಿಪ್ಸ್ ಕೊಟ್ಟರೂ ಅದು ಎಲ್ಲ ಕರ್ಮಚಾರಿಗಳಿಗೂ ಹಂಚಿಕೆಯಾಗುವುದಿಲ್ಲ. ಅದು ಡೆಲಿವರಿ ಬಾಯ್, ಅಡುಗೆಭಟ್ಟ, ಪಾತ್ರೆ ತೊಳೆಯು ವವರಿಗೆ ಸಿಗುವುದಿಲ್ಲ. ಇದಕ್ಕೆಲ್ಲ ಪರಿಹಾರವೆಂದರೆ ಹೋಟೆಲಿನ ತಿಂಡಿಗಳ ದರಪಟ್ಟಿಯನ್ನು ಏರಿಸುವುದು. ಅಗತ್ಯವಿರುವವರು ಗತ್ಯಂತರವಿಲ್ಲದೇ ತಿನ್ನುತ್ತಾರೆ.

ಇದರಿಂದ ರಘುರಾಮನ್ ಮನಸ್ಸಿಗೆ ತೋಚಿದ ಸಂಗತಿಯೆಂದರೆ, ಗ್ರಾಹಕರು ಹೋಟೆಲಿನ ದುಬಾರಿ ಬಿಲ್ಲನ್ನು ತೆರುವುದನ್ನು ತಪ್ಪಿಸಲು ಮಹಿಳಾ ಶಕ್ತಿಯನ್ನು ಏಕೆ ಬಳಸಬಾರದು ಎಂಬುದು. ಮಹಿಳೆಯರು ಕುಕಿಂಗ್ ಬ್ಯುಸಿನೆಸ್ ನಲ್ಲಿ ಇಲ್ಲ ಎಂದು ಇದರರ್ಥವಲ್ಲ, ಇದ್ದಾರೆ. ಆದರೆ ಅದು ಒಂದು ಸಂಘಟಿತ ಉದ್ಯಮವಾಗಿ ಬೆಳೆದಿಲ್ಲ. ಅಲ್ಲಲ್ಲಿ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಮೆಸ್ ಆರಂಭಿಸಿರಬಹುದು. ಆದರೆ ಒಟ್ಟಾಗಿ ಉದ್ಯಮ ನಡೆಸುತ್ತಿಲ್ಲ.

ಚೀನೀಯರು ಗಾರ್ಮೆಂಟ್ ಕ್ಷೇತ್ರದ ಮೇಲೆ ಆದ್ಯತೆ ಕಡಿಮೆ ಮಾಡಿದಾಗ ಬಾಂಗ್ಲಾದೇಶ, ವಿಯೆಟ್ನಾಂನವರು ಯುರೋಪ್
-ಅಮೆರಿಕಗಳಿಗೆ ಬಟ್ಟೆಬೆರೆ ಹೊಲಿದು ಮಾರಾಟ ಮಾಡಲು ಶುರುವಿಟ್ಟರು. ಅಲ್ಲಿ ಅದೊಂದು ದೊಡ್ಡ ವ್ಯಾಪಾರವಾಗಿದೆ. ಆ
ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ಮಹಿಳೆಯರು. ಹೀಗಾಗಿ ಈಗ ಮಹಿಳೆಯರು ಇಲ್ಲಿ ಮುಂದೆ ಬರಬೇಕು.

ಮಾರ್ಕೆಟಿಂಗ್ ಮತ್ತು ಸ್ಥಳೀಯ ಸ್ಪರ್ಧೆಗಳನ್ನು ನಿಭಾಯಿಸುವ ಪರಿಣತಿಯನ್ನು ಮಹಿಳೆಯರು ಪಡೆದುಕೊಂಡರೆ ಆಕರ್ಷಕ ಪ್ಯಾಕೇಜಿಂಗ್ ನೊಂದಿಗೆ ನ್ಯಾಯವಾದ ಬೆಲೆಗೆ ಆಹಾರೋತ್ಪನ್ನ ಮಾರಾಟ ಮಾಡಬಹುದು. ಅವರಿಗೆ ಪ್ರಚಾರ ಮಾಧ್ಯಮ ವಾಗಿ ಸೋಷಿಯಲ್ ಮೀಡಿಯಾ ಸಹಾಯಕವಾಗಬಲ್ಲದು. ಆಡುಗೆ ಮಾಡುವುದು ಒಂದು ಕಲೆ, ಅದು ಮಹಿಳೆಯರಿಗೆ ಸಿದ್ಧಿಸಿದೆ. ಪ್ರಗತಿ ಹೊಂದಿದ ರಾಷ್ಟ್ರಗಳ ಮಹಿಳೆಯರ ತುಲನೆಯಲ್ಲಿ ನಮ್ಮ ದೇಶದ ಮಹಿಳೆಯರು ಅಡುಗೆಕಲೆಯಲ್ಲಿ
ಸದಾ ಮುಂದಿದ್ದಾರೆ. ಈ ಕಲೆಯನ್ನು ವ್ಯಾಪಾರವಾಗಿ ಪರಿವರ್ತಿಸಿದರೆ ಮಹಿಳಾ ಸಬಲೀಕರಣ ಖಂಡಿತವಾಗಿ ಆಗುತ್ತದೆ.

ಈ ಐಡಿಯಾಕ್ಕೆ ಯಾರಾದರೂ ರೆಕ್ಕೆ-ಪುಕ್ಕ ಹಚ್ಚಬೇಕಷ್ಟೆ.

ಗಾಂಧಿ ಕುಟುಂಬವೇ ಗತಿ
ಕಳೆದ ಇಪ್ಪತ್ತೈದು ವರ್ಷಗಳ ಅವಽಯಲ್ಲಿ ಬಿಜೆಪಿಯಲ್ಲಿ ಸಂಘಟನಾತ್ಮಕವಾಗಿ ಸಾಕಷ್ಟು ಬದಲಾವಣೆಗಳಾಗಿವೆ. ಕುಶಾಭಾವು ಠಾಕ್ರೆ, ಬಂಗಾರು ಲಕ್ಷ್ಮಣ, ಜ.ನಾ.ಕೃಷ್ಣಮೂರ್ತಿ, ವೆಂಕಯ್ಯ ನಾಯ್ಡು, ಎಲ.ಕೆ.ಆಡ್ವಾಣಿ, ರಾಜನಾಥ ಸಿಂಗ್, ನಿತಿನ್ ಗಡ್ಕರಿ, ಅಮಿತ್ ಶಾ, ಜೆ.ಪಿ.ನಡ್ಡಾ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅಂದರೆ ಈ ಕಾಲು ಶತಮಾನದ ಅವಧಿಯಲ್ಲಿ ಒಂಬತ್ತು ಮಂದಿ ಅಧ್ಯಕ್ಷರಾಗಿದ್ದಾರೆ.

ಆದರೆ ಕಾಂಗ್ರೆಸಿನಲ್ಲಿ ಈ ಅವಧಿಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಇರುವವರು ಬರೀ ಮೂವರು! ಒಬ್ಬರು ಸೋನಿಯಾ ಗಾಂಧಿ, ಎರಡನೆಯವರು ಅವರ ಪುತ್ರ ರಾಹುಲ್ ಗಾಂಧಿ ಮತ್ತು ಮೂರನೆಯವರು ಅವರ ತಾಯಿ ಸೋನಿಯಾ ಗಾಂಧಿ!! ಅಂದರೆ ಪಕ್ಷದಲ್ಲಿ ಹೊಸ ಚಿಂತನೆ, ಆಲೋಚನೆ, ಪ್ರಯೋಗ, ಸೃಜನಶೀಲತೆ, ಹೊಸ ಅವಕಾಶ, ಬದಲಾವಣೆ ಮುಂತಾದ ಉದಾತ್ತ ಆಶಯಗಳಿಗೆ ಆಸ್ಪದವೇ ಇಲ್ಲ. ಕಾಂಗ್ರೆಸ್ ಅಧ್ಯಕ್ಷ ಗಾದಿ ಅಂದರೆ ನಾನು, ಮಾಣಿ ಮತ್ತು ನಾನು ಎನ್ನುವಂತಾಗಿದೆ.

ಪ್ರಜಾಪ್ರಭುತ್ವ ಆಳ್ವಿಕೆ ಇರುವ ಬಹುತೇಕ ಎಲ್ಲ ದೇಶಗಳಲ್ಲೂ ಬದಲಾವಣೆ ಗಾಳಿ ಬೀಸಿದೆ, ಬೀಸುತ್ತಿದೆ. ಅಂಥ ದೇಶಗಳಲ್ಲಿ ಜನವಂಶ ಪಾರಂಪರ್ಯ ಆಳ್ವಿಕೆಯನ್ನು ಕಿತ್ತೆಸೆದಿದ್ದಾರೆ. ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ ಎಂಬ ಭಾವನೆ ಜನರಲ್ಲಿ ಬೇರೂರುತ್ತಿದೆ. ಆದರೆ ಈ ಸಂಗತಿಯನ್ನು ಕಾಂಗ್ರೆಸ್ ನಾಯಕರು ಅರಿಯದಿರುವುದು ಆಶ್ಚರ್ಯವೇ ಸರಿ. ಅವರಿಗೆ
ಇನ್ನೂ ಗಾಂಽ ಕುಟುಂಬವೇ ಸರ್ವಸ್ವ. ಅದರಾಚೆ ಯೋಚನೆ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಎರಡು
ಲೋಕ ಸಭಾ ಚುನಾವಣೆಗಳಲ್ಲಿ ಸತತವಾಗಿ ಸೋತು ನೆಲ ಕಚ್ಚಿದೆ.

ಸೋನಿಯಾ ಗಾಂಧಿ ಅವರಿಗೆ 75 ವರ್ಷ ವಯಸ್ಸು. ದೇಶಾದ್ಯಂತ ಸಂಚರಿಸುವ ಚೈತನ್ಯ ಅವರಲ್ಲಿ ಇಲ್ಲ. ಈ ಮಧ್ಯೆ
ಅನಾರೋಗ್ಯ ಬೇರೆ. ಅವರ ಪುತ್ರಾಣಿ ವಯಸ್ಸಾಗಿಲ್ಲ. ಆದರೆ ಈಗಲೇ ಅವರು ಸೋತು ಬಸವಳಿದಿದ್ದಾರೆ. ಪ್ರಿಯಾಂಕಾ
ಗಾಂಽಗೆ ಉತ್ತರಪ್ರದೇಶದ ಮಕಾಡೆ ಮಲಗಿದ ಪಕ್ಷವನ್ನು ನಿಲ್ಲಿಸಲೂ ಆಗಿಲ್ಲ. ಆದರೆ ಆ ಪಕ್ಷಕ್ಕೆ ಗಾಂಧಿ ಕುಟುಂಬವೇ
ಬೇಕು.