ಶಶಾಂಕಣ
shashidhara.halady@gmail.com
ನಾಲ್ಕಕ್ಷರ ಕಲಿತು, ಕೆಲಸ ಹುಡುಕಿಕೊಂಡು ‘ಘಟ್ಟದ ಮೇಲೆ’ ಹೋಗುವುದು ಕರಾವಳಿಯ ಜಿಲ್ಲೆಗಳಲ್ಲಿ ಕಳೆದ ಆರೆಂಟು ದಶಕಗಳಲ್ಲಿ ಕಂಡುಬರುತ್ತಿರುವ ವಿದ್ಯಮಾನ. ಸ್ವಾತಂತ್ರ್ಯಪೂರ್ವದಲ್ಲಿ, ಕುಂದಾಪುರ ಸರಹದ್ದಿನ ಜನರು ಹೋಟೆಲ್‌ನಲ್ಲಿ ಕೆಲಸ ಮಾಡಲು ‘ಘಟ್ಟ’ ಹತ್ತುತ್ತಿದ್ದರು. ನಮ್ಮ ರಾಜ್ಯದೆಲ್ಲೆಡೆ, ಅಷ್ಟೇಕೆ ಹೊರರಾಜ್ಯಗಳ ಹಲವು ಹಳ್ಳಿಗಳಲ್ಲಿ, ಕುಂದಾಪುರ, ಉಡುಪಿ ಕಡೆಯವರು ಹತ್ತೈವತ್ತು ವರ್ಷಗಳಿಂದ ಹೊಟೇಲ್ ನಡೆಸುತ್ತಿರುವುದನ್ನು ನೀವೂ ನೋಡಿರಬಹುದು. ಸ್ವಾತಂತ್ರ್ಯ ದೊರೆತು ಒಂದೆರಡು ದಶಕಗಳ ಸಮಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ದೊರೆತು, ಹಲವರು ಅಕ್ಷರ ಕಲಿತರು; ೧೯೮೦ರ ದಶಕದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರಾವಳಿಯ ಸಾಕಷ್ಟು ಜನ ಉದ್ಯೋಗ ಪಡೆದರು.
ಸ್ವಾತಂತ್ರ್ಯಾನಂತರದ ನಮ್ಮ ದೇಶದ ಅಭಿವೃದ್ಧಿಯ ಫಲವನ್ನು ಹಲವರು ಉಂಡಿದ್ದಂತೂ ನಿಜ. ೨೦೦೦ದ ನಂತರ, ಕರಾವಳಿಯ ಸಾಕಷ್ಟು ಯುವಜನರು ಸಾಫ್ಟ್ ವೇರ್ ಕ್ಷೇತ್ರದಲ್ಲಿ ಪರಿಣತರಾಗಿ ಬೆಂಗಳೂರಿನತ್ತ ಧಾವಿಸಿ, ಹೊಸ ಬದುಕನ್ನು ಕಟ್ಟಿಕೊಂಡಿದ್ದನ್ನು ಕಾಣುತ್ತಿದ್ದೇವೆ. ೧೯೮೦ರ ದಶಕದಲ್ಲಿ ‘ಘಟ್ಟ ಹತ್ತಿದ’ ನಾನು, ವೃತ್ತಿನಿಮಿತ್ತ ಸುಮಾರು ಮೂರುವರೆ ದಶಕಗಳ ಕಾಲ ಊರಿಂದ ಹೊರಗಿದ್ದೆ; ಮತ್ತೊಮ್ಮೆ, ಸುಮಾರು ೬ ತಿಂಗಳ ಕಾಲ ನಮ್ಮ ಹಳ್ಳಿಯಲ್ಲಿ ವಾಸಿಸುವ ಅವಕಾಶ ದೊರಕಿತು. ಹಲವು ವರ್ಷಗಳ ನಂತರ ಹಳ್ಳಿಯಲ್ಲಿ ನೆಲೆಸಿದಾಗ, ಬಹಳಷ್ಟು ಬದಲಾವಣೆಗಳನ್ನು ಕಂಡೆ.
ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಕಳೆದ ೩ ದಶಕಗಳಲ್ಲಿ ನಮ್ಮ ಹಳ್ಳಿ ಮತ್ತು ತಾಲೂಕು ಬಹಳಷ್ಟು ಬದಲಾವಣೆ ಕಂಡಿದೆ.
೧೯೭೦-೮೦ರ ದಶಕಗಳಲ್ಲಿ ಗದ್ದೆಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದವರ ಸಂತತಿ ಇಂದು ಮೋಟರ್ ಬೈಕ್ ಚಲಾಯಿಸಿಕೊಂಡು, ತಾಲೂಕಿನಾದ್ಯಂತ ಕೆಲಸ ಮಾಡಲು ಬೆಳಗ್ಗೆ ಹೋಗಿ, ಸಂಜೆ ಮನೆಗೆ ವಾಪಸಾಗುವ ಯುವ ತಲೆಮಾರು ಆಗಿ ಪರಿವರ್ತನೆಗೊಂಡಿದೆ. ಕೂಲಿ ಕೆಲಸವೇ ಆದರೂ, ಪ್ರತಿದಿನ ಅಥವಾ ಪ್ರತಿವಾರ ಸಂಬಳ ಎಣಿಸುವ ಈ ಶ್ರಮಜೀವಿ ವರ್ಗವು, ಸಾಕಷ್ಟು ನೆಮ್ಮದಿಯನ್ನು ಕಂಡುಕೊಂಡಿದೆ. ೧೯೭೦ರ ದಶಕದಲ್ಲಿ ಬತ್ತದ ಕೃಷಿಯಲ್ಲಿ ತೊಡಗಿದ್ದ ಕೆಲವರು, ಇಂದು ಬತ್ತದ ಬೇಸಾಯದ ಕೆಲಸ ದುಬಾರಿ ಎಂದು ನಿರ್ಧರಿಸಿ ಬೇರೆ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಜಮೀನು ಮಾಲೀಕರ ಮಕ್ಕಳು ದೂರದೂರಿನಲ್ಲಿ ನೆಲೆಗೊಂಡು ಹಳ್ಳಿಯ ಜಮೀನನ್ನು ಮಾರಿದ್ದೂ ಉಂಟು. ಕಳೆದ ೩-೪ ದಶಕಗಳಲ್ಲಿ ನಮ್ಮ ತಾಲೂಕಿನ
ಹಳ್ಳಿಗಳಲ್ಲಿ ಕಂಡ ಬದಲಾವಣೆಯನ್ನು ದಾಖಲಿಸಲು ಪ್ರತ್ಯೇಕ ಅಧ್ಯಯನ ಅಗತ್ಯ. ಇಲ್ಲಿ ನಾನು ಹೇಳಲು ಬಯಸುತ್ತಿರುವುದು ನಮ್ಮ ಗ್ರಾಮೀಣರಲ್ಲಿ ಈಚೆಗೆ
ಕಂಡುಬಂದ ಆರೋಗ್ಯದ ಏರುಪೇರು. ಹಳ್ಳಿಗೆ ವಾಪಸಾದಾಗ ಥಟ್ಟನೆ ಗೋಚರವಾದದ್ದು ನಮ್ಮ ಬಂಧುಗಳಲ್ಲಿ, ಪರಿಚಿತರ ಮನೆಗಳಲ್ಲಿ ವ್ಯಾಪಕವಾಗಿರುವ ‘ಸಕ್ಕರೆ ಕಾಯಿಲೆ’. ಸುತ್ತಮುತ್ತಲಿನ ಹಲವರನ್ನು ಮಾತನಾಡಿಸಿದೆ. ಪ್ರತಿ ಮನೆಯಲ್ಲಿಯೂ ಒಬ್ಬರಾದರೂ ‘ಸಕ್ಕರೆ ಕಾಯಿಲೆ’ ಯವರು ಇದ್ದರು!
ಅವರಲ್ಲಿ ಕೆಲವರು ತೀವ್ರ ಸ್ಥಿತಿ ತಲುಪಿ, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವ ಸ್ಥಿತಿಯಲ್ಲಿ ದ್ದಾರೆ. ಇನ್ನೂ ಕೆಲವರು ಪ್ರತಿದಿನ ತಪ್ಪದೇ ಸಮಯಕ್ಕೆ ಸರಿಯಾಗಿ ಮಾತ್ರೆ ತಿನ್ನುತ್ತಾ ಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಕೆಲವರು ಕಾಯಿಲೆಯ ತುರೀಯಾವಸ್ಥೆಯಲ್ಲಿದ್ದರು. ನಾನು ಊರಿಗೆ ವಾಪಾಸಾಗಿ ಒಂದೆರಡು ತಿಂಗಳಲ್ಲಿ ದುರ್ದೈವವಶಾತ್ ಈ ರೀತಿ ಕಾಯಿಲೆ ಯಲ್ಲಿದ್ದ ವ್ಯಕ್ತಿಯೊಬ್ಬರು, ಕೊಮಾರ್ಬಿಡಿಟೀಸ್ ನಿಂದಲೋ ಏನೋ ಪರಲೋಕವಾಸಿ ಯಾದರು. ಈ ಬದಲಾವಣೆಯನ್ನು ‘ಮೂರುವರೆ ದಶಕಗಳ ನಂತರ’ ಎಂದು ನಾನು ಒತ್ತಿಹೇಳಲು ಯತ್ನಿಸುತ್ತೇನೆ.
ಮುಂಚೆ ಈ ರೀತಿ ಇರಲಿಲ್ಲ. ನಮ್ಮ ಪುಟ್ಟ ಹಳ್ಳಿಯಲ್ಲೂ ಈಗ ‘ಮಧುಮೇಹ’ ಹೀಗೆ ಸಂಕಷ್ಟ ತಂದಿಟ್ಟದ್ದನ್ನು ಕಂಡು ನನಗಂತೂ ಅಚ್ಚರಿ. ಬೆಂಗಳೂರು, ಶಿವಮೊಗ್ಗದಂಥ ದೊಡ್ಡ ಊರುಗಳಲ್ಲಿ ಮನೆಮನೆಯಲ್ಲಿಯೂ ‘ಶುಗರ್ ಪೇಶೆಂಟ್’ಗಳನ್ನು ಕಂಡಿದ್ದೆ. ಮಲೆನಾಡಿನ ಅಂಚಿನಲ್ಲಿರುವ ನಮ್ಮ ಹಳ್ಳಿಯಲ್ಲೂ ಸಕ್ಕರೆ ಕಾಯಿಲೆಯ ಹಾವಳಿ ಕಂಡು, ಆ ‘ರೋಗ’ ಅಥವಾ ದೇಹಸ್ಥಿತಿಯ ಕುರಿತು ನನ್ನಲ್ಲಿದ್ದ ತಿಳಿವಳಿಕೆಯೇ ಬುಡಮೇಲಾಯಿತು. ನಮ್ಮೂರಿನ ಪ್ರತಿ ಮನೆಯಲ್ಲಿಯೂ ಒಬ್ಬರಾದರೂ ‘ಶುಗರ್ ಪೇಷೆಂಟ್’ ಇರುವ ವಿಚಾರ ಸಹ ಅಚ್ಚರಿ ಮೂಡಿಸಿತು. ಇಲ್ಲಿನ ಚಿಕಿತ್ಸಾಲಯದಲ್ಲಿ ಪರಿಚಿತ ವೈದ್ಯರಿದ್ದಾರೆ; ಅಲ್ಲಿದ್ದಾಗಲೆಲ್ಲಾ, ಕುಟುಂಬ
ದವರ ಆರೋಗ್ಯ ತಪಾಸಣೆಗಾಗಿ, ಪ್ರತಿವಾರ ಅವರ ಭೇಟಿ ನಡೆಯುತ್ತಿತ್ತು.
ವೈದ್ಯರೊಡನೆ ಗೆಳೆತನ, ವಿಶ್ವಾಸ ಬೆಳೆಯಿತು. ಮಾತಿನ ಮಧ್ಯೆ, ನಮ್ಮೂರಿನಲ್ಲಿ ಮನೆಗೊಬ್ಬರಂತೆ ಶುಗರ್ ಪೇಶೆಂಟ್ ಇರುವ ವಿಚಾರದ ಕುರುತು ಪ್ರಸ್ತಾಪಿಸಿದೆ. ‘ನಿಜ, ಈಗ ಇಲ್ಲಿ ಸಕ್ಕರೆ ಕಾಯಿಲೆ ವ್ಯಾಪಕ ವಾಗಿದೆ. ಎಲ್ಲ ಜನಾಂಗಗಳ ಮನೆಗಳಲ್ಲೂ ಇದು ಹರಡಿದೆ. ಪ್ರತಿದಿನ ಕೆಲಸ ಮಾಡುವ ಶ್ರಮಜೀವಿಗಳ
ಮನೆಗಳಲ್ಲೂ ಮಧುಮೇಹ ರೋಗಿಗಳಿರುವುದು ಈಗ ಸಾಮಾನ್ಯ’ ಎಂದು ಅವರು ಹೇಳಿದಾಗ ಅಚ್ಚರಿ ಎನಿಸಿತು. ಸಂದರ್ಭ ಸಿಕ್ಕಾಗಲೆಲ್ಲಾ, ಹಳ್ಳಿಯ ಜನ
ರಲ್ಲೂ ವ್ಯಾಪಕವಾದ ಮಧುಮೇಹದ ಕುರಿತು ಚರ್ಚಿಸುತ್ತಿದ್ದೆ. ಅವರು ಆ ಕುರಿತು ಸಾಕಷ್ಟು ವಿವರ ನೀಡಿದ್ದರ ಜತೆ, ಏಕೆ ಅದು ಹಳ್ಳಿಯಲ್ಲೂ ಹೆಚ್ಚಳಗೊಂಡಿರ ಬಹುದು ಎಂಬುದರ ಕುರಿತು ಒಳನೋಟ ಗಳುಳ್ಳ ಅಭಿಪ್ರಾಯ ವ್ಯಕ್ತಪಡಿಸಿದರು.
೧೯೭೦ರ ದಶಕದಲ್ಲಿ, ನಮ್ಮ ಹಳ್ಳಿಯಲ್ಲಿ ಹೆಸರೇ ಕೇಳದಿದ್ದ, ಅಂದಿನ ಶ್ರೀಮಂತರ ಮತ್ತು ನಗರ ವಾಸಿಗಳ ಸಕ್ಕರೆ ಕಾಯಿಲೆ, ಈಗ ಮನೆಮನೆಗೂ ಹರಡಿರುವುದೇಕೆ? ಮುಖ್ಯ ಕಾರಣಗಳನ್ನು ಸ್ಥೂಲವಾಗಿ ಹೀಗೆ ಪಟ್ಟಿ ಮಾಡಬಹುದು:
೧. ಹಳ್ಳಿಗರಲ್ಲೂ ಕಡಿಮೆಯಾದ ದೈಹಿಕ ಚಟುವಟಿಕೆ (ಎಲ್ಲರೂ ಬೈಕ್ ಸವಾರರು!).
೨. ಸಕ್ಕರೆ ಹಾಕಿದ ಚಹಾ, ಕಾಫಿ ಪದೇ ಪದೆ ಸೇವನೆ.
೩. ವಿಶೇಷದ ಊಟಗಳಲ್ಲಿ ಸಿಹಿತಿನಿಸುಗಳನ್ನು ಸೇರಿಸಿ, ಹೊಟ್ಟೆ ಬಿರಿಯುವಂತೆ ತಿನ್ನುವುದು.
೪. ಬಾಯಿರುಚಿಗೆ ಪದೇ ಪದೆ ಎಣ್ಣೆ ತಿಂಡಿಗಳ ಸೇವನೆ
೫. ನಾರುರಹಿತ ಆಹಾರ ಸೇವನೆ, ಮುಖ್ಯವಾಗಿ ಪಾಲಿಶ್ ಮಾಡಿದ ಅಕ್ಕಿಯ ಊಟ ನಾನು ವಿದ್ಯಾರ್ಥಿಯಾಗಿದ್ದಾಗ, ಪ್ರತಿದಿನ ಕನಿಷ್ಠ ೬-೮ ಕಿ.ಮೀ ನಡೆಯುತ್ತಿದ್ದೆ. ನನ್ನ ಸಹಪಾಠಿಗಳು, ನಮ್ಮ ಮನೆಯವರು ಎಲ್ಲರೂ ಪೇಟೆಗೆ ಬರಬೇಕೆಂದರೆ ನಡೆಂi. ಜತೆಗೆ ಗಂಟಿಮೇಯಿಸುವ ಕೆಲಸ, ಗದ್ದೆ ಕೆಲಸ, ಬಟ್ಟೆ ಒಗೆಯುವುದು, ಬಾವಿಯಿಂದ ನೀರನ್ನು ಎತ್ತಿ ತರುವುದು ಇವೆಲ್ಲವೂ ಅಂದಿನ ದಿನಚರಿಯ ಭಾಗಗಳಾಗಿದ್ದವು. ಇಂದಿನಂತೆ ಮನೆಗೊಂದರಂತೆ ಸ್ಕೂಟರ್/ಬೈಕ್ ಅಂದು
ಎಲ್ಲಿತ್ತು? ಆಟೋರಿಕ್ಷಾ, ಕಾರು ಎಲ್ಲಿತ್ತು? ಅಸಲು ರಸ್ತೆಗಳೇ ಎಲ್ಲಿದ್ದವು? ಇಂದು ಈ ಎಲ್ಲಾ ಸೌಕರ್ಯ ದಿಂದಾಗಿ, ನಡೆಯುವ ವ್ಯಾಯಾಮ ಕಡಿಮೆಯಾಗಿದೆ.
ಜಗತ್ತಿನಲ್ಲಿಯೇ ‘ಅತ್ಯುತ್ತಮ ವ್ಯಾಯಾಮ’ ಎನಿಸಿರುವ ನಡಿಗೆ ನಮ್ಮ ಜನರ ಕೈತಪ್ಪಿ ಹೋಗಿದೆ. ಹಳ್ಳಿಯ ಜನರು ಗದ್ದೆ-ತೋಟಗಳಲ್ಲಿ ಹೆಚ್ಚು ಶ್ರಮವಹಿಸಿ ಕೆಲಸ ಮಾಡುವ ಪದ್ಧತಿಯೂ ಕಡಿಮೆಯಾಗಿದೆ. ಗದ್ದೆ ಉಳುಮೆ, ನಾಟಿ, ಕೊಯ್ಲು ಮಾಡಲು ಯಂತ್ರಗಳು ಬಂದಿವೆ. ಮನೆ ಮನೆ ಯಲ್ಲೂ ಸಕ್ಕರೆ ಕಾಯಿಲೆ ಹೆಚ್ಚಲು ಇದೂ ಒಂದು ಕಾರಣ. ೪ ದಶಕಗಳ ಹಿಂದೆ ಸಕ್ಕರೆ ಹಾಕಿದ ಚಹಾ/ ಕಾಫಿ ಕುಡಿಯುವುದು ಕಷ್ಟವಿತ್ತು! ಏಕೆಂದರೆ, ಆಗ ಸಕ್ಕರೆ ಸುಲಭವಾಗಿ ನಮ್ಮ ಹಳ್ಳಿಯಲ್ಲಿ ಸಿಗುತ್ತಿರಲಿಲ್ಲ.
೧೯೭೦ರ ದಶಕದಲ್ಲಿ ಪಡಿತರ ಚೀಟಿಯ ಮೂಲಕ ನಮಗೆ ಸಿಗುತ್ತಿದ್ದುದು ಅರ್ಧ ಅಥವಾ ಒಂದು ಕೆ.ಜಿ. ಸಕ್ಕರೆ! ಒಂದು ತಿಂಗಳ ಕಾಲ ಅದನ್ನೇ ಮಿತವಾಗಿ ಬಳಸುವ ಅನಿವಾರ್ಯತೆ. ಕ್ರಮೇಣ ಮುಕ್ತ ಮಾರುಕಟ್ಟೆಯಲ್ಲಿ ಮಾಮೂಲಿ ದರದಲ್ಲಿ ಸಕ್ಕರೆ ದೊರೆಯಲು ಆರಂಭವಾಯಿತು. ಸಕ್ಕರೆಯ ಬೆಲೆಯೂ ಕಡಿಮೆ ಆಯಿತು. ಬೆಳಗ್ಗೆ ಎದ್ದ ಕೂಡಲೆ ಕಾಫಿ, ತಿಂಡಿ ಜತೆ ಕಾಫಿ, ೧೧ ಗಂಟೆಗೆ ಒಂದು ಚಹಾ, ೫ ಗಂಟೆಗೆ ಕಾಫಿ, ೭ ಗಂಟೆಗೆ ಕಾಫಿ! ಈ ರೀತಿ ಪದೇ ಪದೆ ಸಿಹಿ ಬೆರೆಸಿದ ಪಾನೀಯ ಸೇವನೆ ಮನೆಮನೆ ಗಳಲ್ಲಿ ಆರಂಭವಾಯಿತು. ಇದರ ಜತೆ, ಮನೆಗೆ ಯಾರಾದರೂ ಬಂದಾಗ, ಹೊರಗೆ ಹೋದಾಗ ಕಾಫಿ-ಟೀ ಸೇವನೆ.
ನಮ್ಮ ದೇಹಕ್ಕೆ ಬೇಡವಾದ, ನಿಧಾನ ವಿಷವೆನಿಸಿದ, ನಮ್ಮ ಜೀರ್ಣಾಂಗವ್ಯೂಹಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವೆನಿಸಿದ, ರಕ್ತದಲ್ಲಿನ ನೈಸರ್ಗಿಕ ಇನ್ಸುಲಿನ್‌ನ ಸಮತೋಲನವನ್ನು ವ್ಯತ್ಯಯಮಾಡುವ ‘ಸಕ್ಕರೆ’ ಯು ಈ ರೀತಿ ದೇಹವನ್ನು ಆಗಾಗ ಪ್ರವೇಶಿಸುವ ಪ್ರಕ್ರಿಯೆಯು ಕ್ರಮೇಣ ಮಧು ಮೇಹಕ್ಕೆ ನಾಂದಿ ಹಾಡಿತು. ಮಿಗಿಲಾಗಿ ನಡಿಗೆ ಎಂಬ ಸಹಜ ವ್ಯಾಯಾಮವೂ ಹಲವರಿಂದ ದೂರಾಗಿ ಬಿಟ್ಟಿದೆ. ನಮ್ಮ ದೇಹವು ಆಹಾರವನ್ನು ನುರಿದು, ಜೀರ್ಣಿಸಿ ತನಗೆ ಅಗತ್ಯವಾದ ಗ್ಲೂಕೋಸ್(ಸಕ್ಕರೆಯ ಶಕ್ತಿ)ನ್ನು ತಯಾರಿಸಿಕೊಳ್ಳುತ್ತದೆ. ಅದು ಸಹಜ ಕ್ರಿಯೆ. ಆದರೆ ಈ ರೀತಿ, ಗಂಟೆಗೊಮ್ಮೆಯೋ, ೨ ಗಂಟೆಗೊಮ್ಮೆಯೋ, ಕಾಫಿ ಮೂಲಕ, ರಾಸಾಯ ನಿಕ ಬಳಸಿ ತಯಾರಿಸಿದ ಸಕ್ಕರೆ ನೇರವಾಗಿ ದೇಹ ವನ್ನು ಸೇರಿದಾಗ, ಅಲ್ಲಿನ ಸಮತೋಲನ ತಪ್ಪುವುದೇ ಸಕ್ಕರೆ ಕಾಯಿಲೆ ಹಬ್ಬಲು ಮತ್ತೊಂದು ಮುಖ್ಯ ಕಾರಣ.
ನಮ್ಮ ಹಳ್ಳಿಗಳಲ್ಲಿ ಈಚೆಗೆ ಹೆಚ್ಚು ಹೆಚ್ಚು ಬಳಕೆ ಯಾಗುತ್ತಿರುವ ಪಡಿತರ ಚೀಟಿಯ ಅಕ್ಕಿ ಸಹ ಮಧುಮೇಹ ಹರಡಲು ತನ್ನದೇ ಕೊಡುಗೆ ನೀಡುತ್ತಿದೆ ಎಂದರೆ ನಿಮಗೆ ಅಚ್ಚರಿ ಆಗಬಹುದು! ಹಲವರಿಗೆ ಪಡಿತರ ಚೀಟಿಯ ಮೂಲಕ ತಿಂಗಳಿಗೆ ಹತ್ತಿಪ್ಪತ್ತು ಕೆ.ಜಿ. ಅಕ್ಕಿ ಸಿಗುತ್ತದೆ; ಆದರೆ ಅದು ಪೂರ್ತಿ ಪಾಲಿಶ್ ಆದದ್ದು, ಅದರಲ್ಲಿ ನಾರಿನ ಅಂಶ, ವಿಟಮಿನ್ ಇಲ್ಲ. ಆದ್ದರಿಂದ ಆ ಬಿಳಿ ಅನ್ನವು ಬಹುಬೇಗನೆ ಜೀರ್ಣವಾಗಿ, ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಗ್ಲೂಕೋಸ್ ಕಡಿಮೆ ಅವಧಿಯಲ್ಲಿ ಸರಬ ರಾಜಾಗಿ, ರಕ್ತದಲ್ಲಿನ ಸಕ್ಕರೆಯ ಸಮತೋಲನವನ್ನು ಏರುಪೇರು ಮಾಡುತ್ತದೆ!
ಇದರ ಬದಲು, ಕರಾವಳಿಯವರಿಗೆ ವಿಶಿಷ್ಟ ಎನಿಸಿರುವ ಗುಣಮಟ್ಟದ ಕುಚ್ಚಿಗೆ ಅಕ್ಕಿಯನ್ನು ಸೇವಿಸಿದರೂ ಸ್ವಲ್ಪ ಮಟ್ಟಿನ ಪರಿಹಾರ ದೊರಕೀತು. ನಮ್ಮ ಹಳ್ಳಿಯಲ್ಲಿ ಕುಚ್ಚಿಗೆ ಅನ್ನ ದೂರಮಾಡಿ, ಪಾಲಿಶ್ ಮಾಡಿದ ಬಿಳಿ ಅಕ್ಕಿಯನ್ನು ಸೇವಿಸುವ ಪರಿಪಾಠ ಬೆಳೆಸಿಕೊಂಡವರ ಮನೆಗಳಲ್ಲಿ ಸಕ್ಕರೆ ಕಾಯಿಲೆ ಜಾಸ್ತಿ!
ಮೂರುವರೆ ದಶಕಗಳ ನಂತರ ಹಳ್ಳಿಯ ಜೀವನವನ್ನು ೬ ತಿಂಗಳ ಕಾಲ ಹತ್ತಿರದಿಂದ ನೋಡಿದ ಅನುಭವದ ಮೇಲೆ, ಜನಜೀವನದಲ್ಲಿ ಕಂಡುಬಂದ ಬದಲಾವಣೆಗಳ ಹಿನ್ನೆಲೆಯಲ್ಲಿ ಕೆಳಗಿನ ಒಂದಷ್ಟು ಉಚಿತ ‘ಟಿಪ್ಸ್’ ಹೇಳಬಹುದು (ಇವು ಅನುಭವ ಜನ್ಯವೇ ಹೊರತು ವೈದ್ಯಕೀಯ ಸಲಹೆ ಅಲ್ಲ. ಮಧುಮೇಹಿಗಳು ಸೂಕ್ತ ವೈದ್ಯರಿಂದ ಸಲಹೆ ಪಡೆಯುವುದು ಅತ್ಯಗತ್ಯ).
೧. ಪ್ರತಿದಿನ ೩೦-೪೦ ನಿಮಿಷಗಳ ಕಾಲ ನಡಿಗೆ. ಅವಕಾಶ ಇದ್ದವರು ದಿನಕ್ಕೆ ೨ ಬಾರಿ ನಡೆಯಬಹುದು. ೨. ಬೆಳಗ್ಗೆ ಬೇಗನೇ ನಡೆಯುವುದು ಸೂಕ್ತ. ಅದಾಗದಿದ್ದರೆ ದಿನದ ಯಾವುದೇ ಸಮಯ ದಲ್ಲೂ (ಊಟವಾದ ನಂತರ ಹೊರತುಪಡಿಸಿ) ನಡೆಯಬಹುದು. ದೇಹಸ್ಥಿತಿ ಕುರಿತು ಅನುಮಾನ ಇರುವವರು ವೈದ್ಯರ ಸಲಹೆ ನಂತರ ನಡಿಗೆ ಆರಂಭಿಸಬೇಕು.
೩. ಸಕ್ಕರೆ ಬೆರೆಸಿದ ಯಾವುದೇ ಪಾನೀಯ, ತಿನಿಸು ತಿನ್ನಬಾರದು. ತಿಂದರೂ ಕನಿಷ್ಠ ಮಟ್ಟದಲ್ಲಿರಬೇಕು. ಬೆಳಗ್ಗೆ ಮತ್ತು ಸಂಜೆ ಒಂದೊಂದು ಕಾಫಿ ಅಥವಾ ಟೀ ಪರವಾಗಿಲ್ಲ. ಸಕ್ಕರೆ ಬದಲು ಬೆಲ್ಲ ಉತ್ತಮ ಎನ್ನುವಂತಿಲ್ಲ. ಏಕೆಂದರೆ, ಇಂದು ಅಂಗಡಿಗಳಲ್ಲಿ ದೊರಕುವ ಬಹುಪಾಲು ಬೆಲ್ಲವು ಸಕ್ಕರೆ ಮಿಶ್ರಿತ! (ಅದು ಹೇಗೆ ಎಂಬುದನ್ನು ವಿವರಿಸಲು ಇನ್ನೊಂದು ಲೇಖನ ಅಗತ್ಯ!).
೪. ಪಾಲಿಶ್ ಮಾಡಿದ ಬಿಳಿ ಅಕ್ಕಿಯ ಬದಲು, ಕೆಂಪು ಅಕ್ಕಿ, ಕುಚ್ಚಿಗೆ ಅಕ್ಕಿ ಉತ್ತಮ. ಅವಕಾಶ, ಅನುಕೂಲ ಇರುವವರು ಸಿರಿಧಾನ್ಯದ ಅನ್ನ ಸೇವಿಸ
ಬಹುದು. ಆಹಾರ ಮಿತವಾಗಿರಬೇಕು. ವಿಶೇಷದ ಊಟಕ್ಕೆ ಹೋದಾಗ, ದಿನಕ್ಕಿಂತ ಕಡಿಮೆ ತಿನ್ನಬೇಕು. ಅದರಲ್ಲೂ ಮುಖ್ಯವಾಗಿ ಪಾಯಸ, ಲಾಡು, ಬೋಂಡ ಮೊದಲಾದವನ್ನು ಕನಿಷ್ಠ ಪ್ರಮಾಣದಲ್ಲಿ ಸ್ವೀಕರಿಸಬೇಕು. ಅಂದ ಹಾಗೆ, ನಗರ, ಪಟ್ಟಣ ಗಳಲ್ಲಿರುವ ಹಲವು ಜನರೂ ಇಂದು ಮಧು ಮೇಹದ ಸಮಸ್ಯೆಗೆ ಒಳಗಾಗಿರುವುದು ಸಾಮಾನ್ಯ ಎನಿಸಿದೆ! ಸೂಕ್ತ ದೈಹಿಕ ಚಟುವಟಿಕೆ, ನಡಿಗೆ, ಮಿತ ಆಹಾರ ಪದ್ಧತಿಯು ಉತ್ತಮ ಎಂಬುದನ್ನು ಮನಗಂಡು ಅನುಸರಿಸುವುದು ಇದಕ್ಕೆ ಒಂದು ಪರಿಹಾರ ಎನ್ನಬಹುದು.