Wednesday, 18th September 2024

ಸರಕಾರದ ಲೆಕ್ಕಾಚಾರ ತಪ್ಪಿಸಿದ ಕಬ್ಬು ಉತ್ಪಾದನೆ

ಕೃಷಿ ರಂಗ

ಬಸವರಾಜ ಶಿವಪ್ಪ ಗಿರಗಾಂವಿ

ಭೂಮಿಯು ಒಣಗಿ ಬೆಳೆಯು ಸ್ವಲ್ಪ ಬಾಡಿದಾಗ ನೀರು ದೊರೆತಲ್ಲಿ ಬೆಳೆಗಳಿಗೆ ಹಿತಕರ, ಮಣ್ಣಿಗೆ ಆರೋಗ್ಯಕರ. ಬೇಸಿಗೆಯಲ್ಲಿ ಮಾತ್ರ ನಿರಂತರ ತೇವಾಂಶವಿರಬೇಕು. ಸದ್ಯದ ಬರಗಾಲದಲ್ಲಿ ನಿರಂತರ ನೀರು ಮತ್ತು ತೇವಾಂಶವು ಕಡಿಮೆಯಾಗಿರುವುದರಿಂದ ಕಬ್ಬು ಉತ್ಪಾದನೆ ಯು ಹೆಚ್ಚಳಗೊಂಡಿದೆ.

ವಿಶ್ವದ ಕಬ್ಬು ಉತ್ಪಾದನೆಯಲ್ಲಿ ಭಾರತವು ಬ್ರೆಜಿಲ್ ನಂತರದ ಸ್ಥಾನವನ್ನು ಪಡೆದಿದೆ. ದೇಶದ ಹಲವು ಭಾಗಗಳಲ್ಲಿ ಕಬ್ಬು ಬೆಳೆಗೆ ಪೂರಕವಾದ ಹವಾ ಮಾನವು ಲಭ್ಯವಿದ್ದ ಪರಿಣಾಮ ಹಾಗೂ ಕಬ್ಬು ಬೆಳೆಯು ರೈತರಿಗೆ ನಿಶ್ಚಿತವಾಗಿ ಲಾಭದಾಯಕವೆನಿಸಿದ ಪ್ರಯುಕ್ತ ಕಬ್ಬು ಕೃಷಿಯ ವ್ಯಾಪ್ತಿಯು ಪ್ರತಿವರ್ಷ ವಿಸ್ತರಿಸತ್ತಿರುವುದು ಸುಳ್ಳೇನಲ್ಲ.

ಇದರೊಂದಿಗೆ ಪ್ರತಿ ಮೂರ‍್ನಾಲ್ಕು ವರ್ಷಕ್ಕೊಮ್ಮೆ ದೇಶದಲ್ಲಿ ತಲೆದೋರುವ ಬರಗಾಲದಿಂದ ಕಬ್ಬಿನ ಉತ್ಪಾದನೆಯು ಕುಂಠಿತಗೊಂಡು ರೈತರಿಗೆ ಹಾಗೂ
ಸಕ್ಕರೆ ಕಾರ್ಖಾನೆಗಳಿಗೆ ಹಾನಿಯಾಗುತ್ತಲೇ ಇದೆ. ೨೦೨೩-೨೪ನೇ ಸಕ್ಕರೆ ವರ್ಷದಲ್ಲಿ ಕಬ್ಬು ಉತ್ಪಾದನೆಯು ತೀರಾ ಕಡಿಮೆಯಾಗುವ ನಿರೀಕ್ಷೆಯಿತ್ತು. ಕಾರಣ ಪ್ರಮುಖ ಕಬ್ಬು ಉತ್ಪಾದಕ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಳೆದ ಜೂನ್‌ನಿಂದ ಅಕ್ಟೋಬರ್‌ವರೆಗೆ ಮಳೆಯ ತೀವ್ರ ಕೊರತೆಯಾಗಿತ್ತು. ಈ ಸಂದಿಗ್ಧ ಪರಿಸ್ಥಿತಿಯಿಂದಾಗಿ ರೈತರು, ಸಕ್ಕರೆ ಉದ್ಯಮ ಹಾಗೂ ಕೇಂದ್ರ ಸರಕಾರ ಚಿಂತೆಗೆ ಒಳಗಾಗಿದ್ದುಂಟು. ವಿಶೇಷವಾಗಿ ವಿದೇಶಿ ವಿನಿಮಯದ ಅತಿಹೆಚ್ಚು ಖರ್ಚಿನ ಬಾಬತ್ತು ಆಗಿರುವ ಪೆಟ್ರೋಲಿಯಂ ಉತ್ಪನ್ನಗಳ ಖರೀದಿಯ ಉಳಿತಾಯದಲ್ಲಿ ಕಬ್ಬಿನಿಂದ ಉತ್ಪಾದನೆಯಾಗುವ ಎಥೆನಾಲ್‌ನ ಪಾತ್ರವು ಬಹಳ ಪ್ರಮುಖ ವಾಗಿದೆ.

ಈ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಎಥೆನಾಲ್‌ನ ಮಿಶ್ರಣ ಮಾಡುವುದರಿಂದ ಕಳೆದ ಒಂದೇ ವರ್ಷದಲ್ಲಿ ಅಂದಾಜು ೨೦,೦೦೦ ಕೋಟಿಯಷ್ಟು ಹಣದ ಉಳಿತಾಯ ವಾಗಿದೆ. ಹೀಗೆ ಸರಕಾರಕ್ಕೂ ಕಬ್ಬು ಬೆಳೆಯಿಂದಾಗಿ ವಿವಿಧ ಮೂಲಗಳಿಂದ ರಾಜಸ್ವ ಸಂಗ್ರಹಣೆಯಾಗುತ್ತದೆ. ಬರಗಾಲದ ಪ್ರಯುಕ್ತ ದೇಶದಲ್ಲಿ ಕಳೆದ ವರ್ಷಕ್ಕಿಂತ ಕಬ್ಬು ಬೆಳೆಯ ಕ್ಷೇತ್ರವು ಶೇ.೩೦ರಷ್ಟು ಕಡಿಮೆ ಲಭ್ಯವಿದೆ ಎಂಬ ಹಲವು ವಿಶ್ವಾಸಾರ್ಹ ಕೃಷಿ ಎಜೆನ್ಸಿಗಳ ಸಮೀಕ್ಷೆ ಗಳಿಂದಾಗಿ, ಪ್ರಸಕ್ತ ವರ್ಷ ಸಕ್ಕರೆಯ ಉತ್ಪಾದನೆಯು ಕಡಿಮೆಯಾಗಿ ಸಕ್ಕರೆಯ ದರವು ಗಗನಕ್ಕೇರುತ್ತದೆ ಎಂದು ಅಂದಾಜಿಸಲಾಗಿತ್ತು.

ಇದರಿಂದ ಆತಂಕಗೊಂಡ ಸರಕಾರವು, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಕ್ಕರೆಯು ಲಭಿಸದಿದ್ದಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆ ಯಲ್ಲಿ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆಂದು ಅರಿಯಿತು. ಕಳೆದ ವರ್ಷ ದೇಶದಲ್ಲಿನ ಬಹುತೇಕ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯಲೆಂದು ಹಾಗೂ ಸಕ್ಕರೆ ಕಾರ್ಖಾನೆಗಳ ಮೇಲಿರುವ ರೈತರ ಬಾಕಿ ಮತ್ತು ಸಾಲದ ಹೊರೆಯ ಪ್ರಮಾಣವು ಕಡಿಮೆಯಾಗಲೆಂಬ ಸದುದ್ದೇಶ ದಿಂದ ಕಬ್ಬು ಬೆಳೆಯಿಂದ ಸಕ್ಕರೆಯ ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದನೆ ಮಾಡಿದ್ದವು. ಇದರಿಂದಾಗಿ ದೇಶದಲ್ಲಿಂದು ಸಕ್ಕರೆಯ ದಾಸ್ತಾನು ಕಡಿಮೆಯಾಗಿ, ಸರಕಾರವು ತೀವ್ರ ಅಡಚಣೆಗೆ ಒಳಗಾಯಿತು.

ಈ ಪ್ರಮುಖ ಸಮಸ್ಯೆಗಳಿಂದ ಹೊರಬರಲು ಕೇಂದ್ರ ಸರಕಾರವು ತಕ್ಷಣವೇ ಎಚ್ಚೆತ್ತುಕೊಂಡು ಕಳೆದ ಡಿಸೆಂಬರ್ ನಲ್ಲಿ, ಕಬ್ಬಿನಿಂದ ನೇರವಾಗಿ ಎಥೆನಾಲ್ ಉತ್ಪಾದಿಸದೇ ಸಕ್ಕರೆ ಯನ್ನು ಉತ್ಪಾದಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಕಟ್ಟು ನಿಟ್ಟಾದ ಹಾಗೂ ತೀವ್ರವಾದ ನಿಗಾದೊಂದಿಗೆ ಆದೇಶಿಸಿತು. ಕಾರಣ ಗಗನಕ್ಕೇರುತ್ತಿರುವ ಸಕ್ಕರೆ ಬೆಲೆಯನ್ನು ನಿಯಂತ್ರಿಸಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಅದು ಲಭ್ಯವಾಗಲೆಂಬುದು ಸರಕಾರದ ಆಶಯವಾಗಿತ್ತು.
ಆದರೆ ಅಕ್ಟೋಬರ್‌ನಲ್ಲಿ ಸರಕಾರಕ್ಕೆ ಲಭ್ಯವಾದ ಕಬ್ಬು ಸಮೀಕ್ಷಾ ವರದಿಯಿಂದಾಗಿ ಸರಕಾರವು ನಿರ್ಧರಿಸಿದ ಲೆಕ್ಕಾಚಾರವು ಇಂದು ಸಂಪೂರ್ಣ ಬುಡಮೇಲಾಗಿದೆ.

ಕಾರಣ ಅಂದು ಸರಕಾರಕ್ಕೆ ಬಂದ ಮಾಹಿತಿಯ ಪ್ರಕಾರ ಕಬ್ಬು ಬೆಳೆಯ ಉತ್ಪಾದನೆಯು ಇಂದು ಅಷ್ಟೊಂದು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಮಳೆಯ ಕೊರತೆಯಿಂದ ಕೇವಲ ಕಬ್ಬಿನ ಗುಣಮಟ್ಟದಲ್ಲಿ ವ್ಯತ್ಯಾಸವಾಗಿರುವುದು ನಿಜ, ಆದರೆ ಕಬ್ಬು ಉತ್ಪಾದನೆಯಲ್ಲಿ ಬಹಳ ವ್ಯತ್ಯಾಸವಾಗಿಲ್ಲ. ನವೆಂಬರ್‌ನಿಂದ ಸಂಭವಿಸಿದ ಹಲವು ನೈಸರ್ಗಿಕ ಬದಲಾವಣೆಗಳಿಂದ ದೇಶಾದ್ಯಂತದ ಕಬ್ಬು ಮತ್ತು ಸಕ್ಕರೆಯ ಉತ್ಪಾದನೆಯು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅಂದರೆ ಜನವರಿ ೩೧, ೨೦೨೪ರ ವರೆಗೆ ಲಭ್ಯವಿರುವ ಅಂಕಿ-ಅಂಶಗಳನ್ವಯ ಶೇ.೩ರಷ್ಟು ಮಾತ್ರ ಕಡಿಮೆಯಿದೆ ಎಂಬುದು ಸ್ಪಷ್ಟವಾಗಿದೆ.

ಅಂದರೆ ಕಬ್ಬು ಕ್ಷೇತ್ರವು ಕಳೆದ ೨೦೨೨-೨೩ನೇ ಸಾಲಿನಲ್ಲಿ ೫೯ ಲಕ್ಷ ಹೆಕ್ಟೇರ್ ಇದ್ದದ್ದು ಸದ್ಯ ೨೦೨೩-೨೪ನೇ ಸಾಲಿನಲ್ಲಿ ೫೭ ಲಕ್ಷ ಹೆಕ್ಟೇರ್ ಇದೆ.
ಕಬ್ಬು ಉತ್ಪಾದನೆಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳು ಹೀಗಿವೆ: ? ನವೆಂಬರ್ ತಿಂಗಳಿನಲ್ಲಿ ದೇಶದ ಹಲವು ಭಾಗದಲ್ಲಿ ಬಿದ್ದ ಮಳೆ.

? ದೇಶದಲ್ಲಿಯೇ ಅತಿಹೆಚ್ಚು ಸಕ್ಕರೆ ಇಳುವರಿ ಹೊಂದಿರುವ ಭಾಗವಾಗಿರುವ ಪಶ್ಚಿಮ ಮಹಾರಾಷ್ಟ್ರದಲ್ಲಿ ಕಬ್ಬು ದರಕ್ಕಾಗಿ ಡಿಸೆಂಬರ್‌ವರೆಗೆ ನಡೆದ ಕಬ್ಬು ಬೆಳೆಗಾರರ ಮುಷ್ಕರ.

? ಕರ್ನಾಟಕದಲ್ಲಿ ನವೆಂಬರ್‌ವರೆಗೆ ಕಾರ್ಖಾನೆಗಳನ್ನು ಪ್ರಾರಂಭಿಸದಂತೆ ಸರಕಾರ ನೀಡಿದ ಕಟ್ಟುನಿಟ್ಟಾದ ಆದೇಶ.

? ನಿರಂತರ ನೀರು ಮತ್ತು ತೇವಾಂಶವು ಯಾವುದೇ ಭೂಮಿಗೆ ಮತ್ತು ಬೆಳೆಗೆ ಹಿತಕರವಲ್ಲ. ಸದ್ಯದ ಬರಗಾಲದಲ್ಲಿ ನೀರಿನ ಕೊರತೆಯಿಂದಾಗಿ ಮಣ್ಣಿನಲ್ಲಿ
ತೇವಾಂಶವು ಕಡಿಮೆಯಾಗಿ ಮಣ್ಣಿಗೆ ಒಂದು ರೀತಿಯಲ್ಲಿ ವಿಶ್ರಾಂತಿಯು ಲಭಿಸಿತು. ಮನುಷ್ಯರಿಗೆ ಹಸಿವಾದಾಗ ಊಟ, ಬಾಯಾರಿಕೆಯಾದಾಗ ನೀರು ದೊರೆತಲ್ಲಿ ಹಿತ ವೆನಿಸುತ್ತದೆ. ಅದೇ ರೀತಿ ಭೂಮಿಯು ಒಣಗಿ ಬೆಳೆಯು ಸ್ವಲ್ಪ ಬಾಡಿದಾಗ ನೀರು ದೊರೆತಲ್ಲಿ ಬೆಳೆಗಳಿಗೆ ಹಿತಕರ, ಮಣ್ಣಿಗೆ ಆರೋಗ್ಯಕರ.

ಬೇಸಿಗೆಯಲ್ಲಿ ಮಾತ್ರ ನಿರಂತರ ತೇವಾಂಶವಿರಬೇಕು. ಸದ್ಯದ ಬರಗಾಲದಲ್ಲಿ ನಿರಂತರ ನೀರು ಮತ್ತು ತೇವಾಂಶವು ಕಡಿಮೆಯಾಗಿರುವುದರಿಂದ
ಕಬ್ಬು ಉತ್ಪಾದನೆಯು ಹೆಚ್ಚಳಗೊಂಡಿದೆ.

? ಕಬ್ಬು ಬೆಳೆಯು ಅತಿಹೆಚ್ಚು ಸೂರ್ಯ ಪ್ರಕಾಶವನ್ನು ಹೀರಿಕೊಳ್ಳುವ ಏಕೈಕ ಬೆಳೆಯಾಗಿದೆ. ಸದ್ಯದ ಬರಗಾಲದಲ್ಲಿ ಸಮರ್ಪಕ ನೀರಾವರಿ ಸೌಕರ್ಯದೊಂದಿಗೆ ಕಬ್ಬಿಗೆ ಹೆಚ್ಚು ಬಿಸಿಲು ಲಭ್ಯವಾದ ಪ್ರಯುಕ್ತ ಇಳುವರಿಯಲ್ಲಿ ಹೆಚ್ಚಳವಾಗಿದೆ.

? ರೈತರು ಬರಗಾಲದ ಪ್ರಯುಕ್ತ ಕಡಿಮೆ ಕ್ಷೇತ್ರದಲ್ಲಿ ಕಬ್ಬನ್ನು ಕಾಯ್ದುಕೊಂಡಿದ್ದರು. ಇದರಿಂದ ಕಡಿಮೆ ನೀರಿನಲ್ಲಿ ಲಭ್ಯವಿರುವ ಕಬ್ಬು ಕ್ಷೇತ್ರವನ್ನು ಕಾಳಜಿದಾಯಕವಾಗಿ ನಿರ್ವಹಣೆ ಮಾಡಿದ್ದರಿಂದ ಇಳುವರಿಯು ಹೆಚ್ಚಾಗಿದೆ.

? ಪ್ರತಿವರ್ಷ, ಭಾಗಶಃ ಸವುಳು-ಜವುಳು ಕ್ಷೇತ್ರವಿರುವ ಮಣ್ಣಿನಲ್ಲಿ ನಿರಂತರ ತೇವಾಂಶವಿರುವುದರಿಂದ ಕಬ್ಬು ಇಳುವರಿಯು ಕಡಿಮೆಯಾಗುತ್ತಿತ್ತು. ಆದರೆ ಈ ವರ್ಷ ಬರಗಾಲದ ಪ್ರಯುಕ್ತ ಆ ಮಣ್ಣಿನಲ್ಲಿ ಸದರಿ ತೇವಾಂಶವು ಕಡಿಮೆಯಾಗಿರುವುದರಿಂದ ಕಬ್ಬಿನ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ.

? ಕಬ್ಬು ಸೇರಿದಂತೆ ಯಾವುದೇ ಬೆಳೆಗಳು ಚಳಿಗಾಲದ ಅವಧಿಯಲ್ಲಿ ಅಂದರೆ ನವೆಂಬರ್ ತಿಂಗಳಿನ ಮಧ್ಯಭಾಗದಿಂದ ಫೆಬ್ರುವರಿ ತಿಂಗಳಿನವರೆಗೆ ಬೆಳವಣಿಗೆಯನ್ನು ಹೊಂದುವುದಿಲ್ಲ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುತ್ತವೆ. ಆದರೆ ಈ ವರ್ಷ ಚಳಿಯ ಪ್ರಮಾಣವು ಕಡಿಮೆಯಿರುವ ಕಾರಣದಿಂದ ಕಬ್ಬಿನ ಬೆಳವಣಿಗೆಯಲ್ಲಿ ಪ್ರಗತಿಯಾಗಿದೆ.

ಹೀಗೆ ಕಳೆದ ಜೂನ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಮಳೆಯ ಕೊರತೆಯಿಂದಾಗಿ, ಸರಕಾರವು ನಿರ್ಧರಿಸಿದ ಕಬ್ಬು ಬೆಳೆಯ ಲೆಕ್ಕಾಚಾರವು ಸಂಪೂರ್ಣ ಬುಡಮೇಲಾಗಿದೆ. ಸರಕಾರವು ಅಂದು ಹೊರಡಿಸಿದ ಆದೇಶವು ಇಂದು ಕಬ್ಬು ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ತೀವ್ರವಾದ
ಹಾನಿಯನ್ನುಂಟುಮಾಡಿದೆ. ನಿಸರ್ಗದ ಮುಂದೆ ಯಾವುದೇ ಲೆಕ್ಕಾಚಾರಗಳು ಶಾಶ್ವತವಲ್ಲ ಎಂಬುದು ಈ ಕಬ್ಬಿನ ಉತ್ಪಾದನೆಯ ವಿಷಯದಲ್ಲಿ ಸಾಬೀತಾಗಿದೆ. ಪ್ರಸಕ್ತ ಕಬ್ಬು ನುರಿಸುವ ಹಂಗಾಮು ಇನ್ನೂ ಮುಂದುವರಿದಿದ್ದು, ಈ ಹಿಂದೆ ಜಾರಿಮಾಡಲಾದ ಎಥೆನಾಲ್ ಮತ್ತು ಮೊಲ್ಯಾಸಸ್
ಕುರಿತಾದ ಆದೇಶಗಳನ್ನು ಸರಕಾರವು ತಕ್ಷಣದಲ್ಲೇ ಹಿಂಪಡೆಯಬೇಕೆಂಬುದು ರೈತರ ಆಗ್ರಹವಾಗಿದೆ.

(ಲೇಖಕರು ಕೃಷಿತಜ್ಞರು ಹಾಗೂ
ಸಹಾಯಕ ಮಹಾ ಪ್ರಬಂಧಕರು)

Leave a Reply

Your email address will not be published. Required fields are marked *