Sunday, 15th December 2024

ಎಲ್ಲರ ಸಲಹೆಗಳನ್ನು ಒಳಗೊಳ್ಳುವುದು ಜಾಣತನ

ಇದೇ ಅಂತರಂಗ ಸುದ್ದಿ

ಕೆಲವರಿಗೆ ತಮ್ಮ ಕೆಲಸದಲ್ಲಿ ಬೇರೆಯವರು ಒಂದು ಸಣ್ಣ ಸಲಹೆ, ಸೂಚನೆ ವ್ಯಕ್ತಪಡಿಸುವುದು ಸಹ ಇಷ್ಟಪಡುವುದಿಲ್ಲ. ಅದರಲ್ಲೂ ಬೇರೆಯವರು ತಮ್ಮ ಕೆಲಸ ವನ್ನು ತಿದ್ದಿದರೆ ಅದನ್ನು ಸುತರಾಂ ತಳ್ಳಿ ಹಾಕುತ್ತಾರೆ. ಅವರಿಗೆ ತಾವು ಹೇಳಿದ್ದೇ ವೇದ ವಾಕ್ಯ. ತಾವು ಮಾಡಿದ್ದೇ ಸರ್ವಶ್ರೇಷ್ಠ. ನನಗೆ ಹೇಳಲು ಅವನಾರು? ನನ್ನ ಸ್ಥಾನಮಾನವೇನು, ಅವನದ್ದೇನು? ನನಗೆ ಸಲಹೆ ಕೊಡುವಷ್ಟು ಅವನಿಗೆ ಧೀಮಾಕಾ? ಎಂಬ ಅಹಂಕಾರದ ಮಾತುಗಳನ್ನು ಹೇಳಿ ಬೇರೆಯವರ ಅಭಿಪ್ರಾಯಗಳನ್ನು ಹೊಸಕಿ ಹಾಕುತ್ತಾರೆ.

ಇಂಥವರು ಬೇರೆಯವರ ಅನಿಸಿಕೆ, ಸಲಹೆಗಳನ್ನು ಪಡೆಯುವುದೆಂದರೆ ಅದು ತಮಗೆ ಅವಮಾನ ಎಂದು ಭಾವಿಸುತ್ತಾರೆ. ಬೇರೆಯವರ ಅನಿಸಿಕೆಗಳನ್ನು ಕೇಳಿ ಅವನ್ನು ಅಳವಡಿಸಿಕೊಂಡರೆ, ತಾವು ಮಾಡುವ ಕೆಲಸದಲ್ಲಿ ಇನ್ನಷ್ಟು ಸುಧಾರಣೆ ತರಬಹುದು ಎಂಬುದನ್ನು ಒಪ್ಪುವುದಿಲ್ಲ. ಅವರಿಗೆ ತನಗಿಂತ ಹಿರಿಯರಿಲ್ಲ ಎಂಬ ಅಹಂ. ಒಬ್ಬರು ಹಿರಿಯ ಪತ್ರಕರ್ತರಿದ್ದರು. ಅವರ ಕಾಪಿಯನ್ನು ಯಾರೂ ತಿದ್ದುವಂತಿರಲಿಲ್ಲ. ಅವರಿಗೆ ಸಮಾಜದಲ್ಲಿ ತಕ್ಕಮಟ್ಟಿಗಿನ ಗೌರವವೂ ಇತ್ತು. ಮಂತ್ರಿ ಗಳು, ರಾಜಕಾರಣಿಗಳ ಜತೆ ಸಖ್ಯವಿತ್ತು. ದಿನ ಬೆಳಗಾದರೆ ಮಂತ್ರಿ, ಮುಖ್ಯಮಂತ್ರಿ ಯವರನ್ನು ಭೇಟಿ ಮಾಡ್ತೇನೆ, ಅವರು ತನ್ನ ವರದಿಯನ್ನು  ಪ್ರಶಂಸೆ ಮಾಡ್ತಾರೆ. ಹೀಗಿರುವಾಗ ಡೆಸ್ಕ್‌ನಲ್ಲಿರುವ ಉಪಸಂಪಾದಕರು ತನ್ನ ಕಾಪಿಯನ್ನು ತಿದ್ದುತ್ತಾರೆ. ಅವರಿಗೆ ಆ ಯೋಗ್ಯತೆ ಇದೆಯಾ? ಎಂದು ಜಂಭದಿಂದ ಪ್ರಶ್ನಿಸುತ್ತಿದ್ದರು.

ತಮ್ಮದೇ ಉತ್ಕೃಷ್ಟ, ಸರ್ವಶ್ರೇಷ್ಠ ಎಂದು ಭಾವಿಸುವುದು ತಪ್ಪಲ್ಲ, ಅದು ಉತ್ಕೃಷ್ಟ ಅಥವಾ ಸರ್ವಶ್ರೇಷ್ಠವಾಗಿದ್ದಾಗ. ಆದರೆ ಬೇರೆಯವರು ನಮ್ಮ ಕೃತಿಯನ್ನು ನೋಡಿ ಸಲಹೆ ಸೂಚನೆ ನೀಡಿದಾಗ, ಅದನ್ನು ಸ್ವೀಕರಿಸುವುದು ಅಥವಾ ಅಳವಡಿಸಿಕೊಳ್ಳುವುದು ಜಾಣತನ. ನನಗೆ ಸಲಹೆ, ಸೂಚನೆ ನೀಡಲು ಇವನ್ಯಾರು?
ನನಗೆ ಬುದ್ಧಿ ಹೇಳುವಷ್ಟು ಬೆಳೆದು ಬಿಟ್ಟನಾ? ಎಂದು ಯೋಚಿಸುವುದು ನಮ್ಮ ಸಣ್ಣತನವಾದೀತು. ಬೇರೆಯವರಿಗೂ ಬುದ್ಧಿಯಿದೆ, ಅವರಿಗೂ ಜೀವನ ಅನುಭವವಿದೆ, ಅವರಲ್ಲೂ ಒಳ್ಳೆಯ ಐಡಿಯಾಗಳಿರಬಹುದು. ಅದನ್ನೂ ಸ್ವೀಕರಿಸೋಣ ಎಂದು ಭಾವಿಸುವುದರಿಂದ ನಮಗೇ ಒಳ್ಳೆಯದಾಗುತ್ತದೆ.

ಅಷ್ಟಕ್ಕೂ ಉತ್ತಮ ಸಲಹೆಗಳೆಂದರೆ ಜೀವನಾನುಭಗಳ ಫಲ, ಸಾರ ತಾನೆ? ಅದನ್ನು ಬಿಟ್ಟು ನಾನೇಕೆ ಬೇರೆಯವರ ಸಲಹೆ ಪಡೆಯಬೇಕು, ಅಂಥ ಬೌದ್ಧಿಕ ದಾರಿದ್ರ್ಯ ನನಗೇಕೆ ಎಂದು ಭಾವಿಸುವುದು ನಮ್ಮ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ. ಉತ್ತಮ ಬರಹಗಾರನಾದವನು, ಕಾದಂಬರಿಕಾರನಾದವನು ಮುದ್ರಣಕ್ಕೆ ಕಳಿಸುವ ಮುನ್ನ, ತಾನು ಬರೆದಿದ್ದನ್ನು ನಾಲ್ಕಾರು ಮಂದಿಗೆ ತೋರಿಸಿ ಅವರ ಸಲಹೆ ಪಡೆಯುತ್ತಾನೆ. ಆ ಸಲಹೆಯನ್ನು ಜಾರಿಗೊಳಿಸುತ್ತಾನೆ. ಇದರಿಂದ ಆ ಕೃತಿಯ ಮೆರುಗು ಹೆಚ್ಚಾಗುತ್ತದೆ. ಪ್ರಸಿದ್ಧ ಪತ್ರಕರ್ತರು, ಸಂಪಾದಕರು ತಾವು ಬರೆದಿದ್ದನ್ನು ನೇರವಾಗಿ ಪ್ರಿಂಟ್‌ಗೆ ಕಳಿಸುವುದಿಲ್ಲ. ತಮ್ಮ
ಸಹೋ ದ್ಯೋಗಿಗಳಿಗೆ ತೋರಿಸಿ ಅವರ ಸಲಹೆ ಪಡೆಯುತ್ತಾರೆ.

ಅವರಿಗೆ ತಮ್ಮ ಕಾಪಿಯನ್ನು ಎಡಿಟ್ ಮಾಡುವಂತೆ ಸೂಚಿಸುತ್ತಾರೆ. ತಾನು ಬರೆದಿದ್ದನ್ನು ಎಡಿಟ್ ಮಾಡಲು ಅವನ್ಯಾರು ಎಂದು ಭಾವಿಸುವುದಿಲ್ಲ. ಇಂಥವರು “Anything can cut including daimond.’  ಎಂದು ತಿಳಿದಿರುತ್ತಾರೆ. ಅಷ್ಟಕ್ಕೂ ಐಡಿಯಾಗಳು ನಮ್ಮದೊಂದೇ ಸ್ವತ್ತಲ್ಲ. ಅದು ಎಲ್ಲಿಂದ ಬೇಕಾದರೂ ಬರಬಹುದು.

ಜಾಕಿಚಾನ್ ಸರ್ವಸ್ವ ದಾನ
ಇತ್ತೀಚೆಗೆ ಖ್ಯಾತ ನಟ, ಕರಾಟೆ, ಕುಂಗ್- ಪಟು ಜಾಕಿಚಾನ್ ನ ಸಂದರ್ಶನವನ್ನು ಓದುತ್ತಿದ್ದೆ. ಆತ ತನ್ನ ನಿಧನದ ನಂತರ ತಾನು ಗಳಿಸಿದ ಹಣ, ಆಸ್ತಿಪಾಸ್ತಿ ಹಾಗೂ ಸರ್ವಸ್ವವನ್ನೂ ಚಾರಿಟಿಗೆ ದಾನ ಮಾಡಲು ನಿರ್ಧಾರ ಮಾಡಿದ್ದ. ಅದೇನು ಚಿಕ್ಕದಲ್ಲ. ಹಲವು ನೂರು ಕೋಟಿಗಳ ಒಡೆಯ ಆತ. ಹಾಗಂತ ಜಾಕಿ ಚಾನ್‌ಗೆ
ಮಕ್ಕಳಿಲ್ಲ ಅಂತಲ್ಲ, ಇದ್ದಾರೆ ಆದರೂ ಆತ ತನ್ನ ಗಳಿಕೆ ಹಾಗೂ ಆಸ್ತಿಯನ್ನೆಲ್ಲ ದಾನ ಮಾಡಲು ನಿರ್ಧರಿಸಿದ್ದಾನೆ. ಅಲ್ಲದೇ ಆತ ತನ್ನ ಮಗನಿಗಾಗಿ ಏನನ್ನೂ ಉಳಿಸಬಾರದೆಂದು ತೀರ್ಮಾನಿಸಿದ್ದಾನೆ.

ನಿಜಕ್ಕೂ ದಿಟ್ಟ ನಿರ್ಧಾರ, ಈಗಿನ ಕಾಲದಲ್ಲಿ ಯಾರೂ ಹೀಗೆ ಮಾಡುವುದಿಲ್ಲ. ತಮಗಾಗಿ ಗಳಿಸಿದ್ದು ಸಾಲದು ಎಂಬಂತೆ ತಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹೀಗೆ ಏಳೇಳು ಜನ್ಮಕ್ಕೆಂದು ಗಳಿಸಿ ಒಬ್ಬಜ್ಜಿ ಮಾಡಿ ಇಡುತ್ತಾರೆ. ಆದರೆ ಜಾಕಿಚಾನ್ ಹಾಗಲ್ಲ. ತನ್ನ ಮಗನಿಗೆ ಏನನ್ನೂ ಬಿಟ್ಟು ಹೋಗಬಾರ ದೆಂದು ತೀರ್ಮಾನಿಸಿದ್ದಾನೆ. ಈ ನಿರ್ಧಾರದ ಹಿಂದಿನ ಸ್ಪೂರ್ತಿ ಅಥವಾ ಕಾರಣವೇನು ಎಂದು ಸಂದರ್ಶಕ ಕೇಳಿದ್ದಕ್ಕೆ ಜಾಕಿ ಚಾನ್ ನೀಡಿದ ಉತ್ತರ ತುಂಬಾ ಮನೋಜ್ಞವಾಗಿದೆ.

‘ನನ್ನ ಮಗನಿಗೆ ಸಾಮರ್ಥ್ಯವಿದ್ದರೆ, ಆತ ತನ್ನ ಸ್ವಂತ ದುಡಿಮೆಯಿಂದ ಹಣ ಗಳಿಸುತ್ತಾನೆ. ಒಂದು ವೇಳೆ ಅವನಿಗೆ ಸಾಮರ್ಥ್ಯವಿಲ್ಲದಿದ್ದರೆ ಆತ ನಾನು ಗಳಿಸಿದ ಹಣ ಆಸ್ತಿಯನ್ನು ಉಳಿಸುವುದಿಲ್ಲ. ಮಕ್ಕಳಿಗಾಗಿ ಹಣ ಗಳಿಸುವುದೆಂದರೆ, ಅವರಿಗೆ ಉಪಕಾರ ಮಾಡುವುದಲ್ಲ, ಅವರಿಗೆ ಅನ್ಯಾಯ ಮಾಡಿದಂತೆ. ಮಕ್ಕಳಿಗಾಗಿ ಹಣ ಮಾಡಿದರೆ, ಅವರು ನಿಮ್ಮನ್ನಲ್ಲ, ನಿಮ್ಮ ಹಣವನ್ನು ಪ್ರೀತಿಸುತ್ತಾರೆ. ಅದರ ಬದಲು ಅಂದರೆ ಹಣದ ಬದಲು ನಿಮ್ಮ ಪ್ರೀತಿ ಹಾಗೂ ಕ್ವಾಲಿಟಿ ಟೈಮ್ ಕೊಡಿ. ಅವರಿಗೆ ನೀವು ಕೊಡಬಹುದಾದ ದೊಡ್ಡ ಆಸ್ತಿ ಅಂದ್ರೆ ಅದೇ’. ಜಾಕಿ ಚಾನ್‌ನ ಮಾತನ್ನು ಕೇಳಿಸಿಕೊಂಡರೆ ಮಕ್ಕಳು ಉದ್ಧಾರವಾಗುತ್ತಾರೆ ಹಾಗೂ ಸಮಾಜವೂ. ಆದರೆ ಈ ವಿಷಯದಲ್ಲಿ ಆತ ಒಬ್ಬನೇ. ಕಾರಣ ಆತನ ಮಾತುಗಳನ್ನು ಒಪ್ಪುವವರು, ಅವುಗಳನ್ನು ಕಾರ್ಯರೂಪಕ್ಕೆ ತರಲು ಹಿಂದೇಟು ಹಾಕಬಹುದು.

 ನನಗೆ ಹೇಮಿನ್ ಸುನಿಮ್ ಅವರ ಬಗ್ಗೆ ಮೊದಲ ಸಲ ಹೇಳಿದವರು ಯೋಗಿ ದುರ್ಲಭಜೀ. ಅಲ್ಲಿಯವರೆಗೆ ನಾನು ಅವರ ಬಗ್ಗೆ ಕೇಳಿಯೇ ಇರಲಿಲ್ಲ. ಒಂದು ದಿನ ಯೋಗಿಯವರು ‘ ನೀವು ಹೇಮಿನ್ ಸುನಿಮ್ ಕೃತಿಗಳನ್ನು ಓದಿದ್ದೀರಾ ?’ ಎಂದು ಕೇಳಿದರು. ಅವರ ಕೃತಿಗಳನ್ನೂ ಓದಿಲ್ಲ. ಅವರ ಹೆಸರನ್ನೂ ಕೇಳಿಲ್ಲ’ ಎಂದೆ. ‘ನನಗೆ ಆಶ್ಚರ್ಯವಾಗುತ್ತಿದೆ’ ಎಂದರು ಯೋಗಿಜೀ. ನನಗೆ ಒಂಥರಾ ಮುಜುಗರವಾಯಿತು.

ಒಂದು ದಿನದ ನಂತರ, ಕೋರಿಯರ್‌ನಲ್ಲಿ ಪುಸ್ತಕ ಬಂತು. ಯೋಗಿಜೀಯವರು ಹೇಮಿನ್ ಸುನಿಮ್ ಬರೆದ The Things You Can See Only When You Slow Down ಎಂಬ ಪುಸ್ತಕ ಕೊಟ್ಟಿದ್ದರು. ಅಂದ ಹಾಗೆ ಈ ಕೃತಿಯ ಸುಮಾರು ಮೂವತ್ತು ಲಕ್ಷ ಪ್ರತಿಗಳು ಮಾರಾಟವಾಗಿವೆ. ನಾನು ಎರಡು ರಾತ್ರಿ ಕುಳಿತು ಈ ಪುಸ್ತಕವನ್ನು ಓದಿ ಮುಗಿಸಿದೆ. ಇದು ಎಷ್ಟು ಸೊಗಸಾದ ಕೃತಿಯೆಂದರೆ, ಯೋಗಿಜೀ ಅವರಿಗೆ ದುಂಬಾಲು ಬಿದ್ದು ಮೂಲಪ್ರಕಾಶಕರನ್ನು ಸಂಪರ್ಕಿಸಿ ಅನುವಾದದ ಹಕ್ಕನ್ನು ಪಡೆದೆ.

ಈ ಪುಸ್ತಕದ ಸಾರಾಂಶವನ್ನು ಒಂದೇ ಸಾಲಿನಲ್ಲಿ ಹೇಳುವುದಾದರೆ, ಈ ಜಂಜಡದ, ಒತ್ತಡದ, ತಾಪತ್ರಯದ ಜಗತ್ತಿನಲ್ಲಿ ಶಾಂತವಾಗಿ ಯೋಚಿಸುವುದು ಹೇಗೆ, ನೆಮ್ಮದಿಯಿಂದ ಬದುಕುವುದು ಹೇಗೆ ಎಂಬುದನ್ನು ಸುನಿಮ್ ಅತ್ಯಂತ ಸ್ವಾರಸ್ಯವಾಗಿ ಹೇಳಿದ್ದಾರೆ. ಒಂಥರ ಕತೆಯಂತೆ ಓದಿಸಿಕೊಂಡು ಹೋಗುತ್ತದೆ. ಅಂದ ಹಾಗೆ ಹೇಮಿನ್ ಸುನಿಮ್ ಅವರು ಮೂಲತಃ ದಕ್ಷಿಣ ಕೋರಿಯಾದವರು. ಇವರನ್ನು ಆ ದೇಶದಲ್ಲಿ ಅತ್ಯಂತ ಪ್ರಭಾವಿ ‘ಝೆನ್ ಬುದ್ಧಿಸ್ಟ್’ ಎಂದು ಪರಿಗಣಿಸಲಾಗಿದೆ.
ಸುನಿಮ್ ಅವರು ಸಿನಿಮಾ ಅಧ್ಯಯನಕ್ಕೆಂದು ಅಮೆರಿಕಕ್ಕೆ ತೆರಳಿದರು. ಆದರೆ ಹಿಂದಿರುಗುವಾಗ ಝೆನ್ ಧರ್ಮಗುರುವಾಗಿದ್ದರು. ಅಲ್ಲಿ ಇವರು ಯುಸಿ ಬರ್ಕ್‌ಲಿ, ಹಾರ್ವರ್ಡ್ ಹಾಗೂ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ, ನಂತರ ಮೆಸಾಚುಸೆಟ್ಸ್‌ನ ಹ್ಯಾಂಪ್‌ಷೈರ್ ಕಾಲೇಜಿನಲ್ಲಿ ಬೌದ್ಧಧರ್ಮ ಪ್ರಾಧ್ಯಾಪಕ ರಾಗಿ ಕೆಲಸಕ್ಕೆ ಸೇರಿಕೊಂಡರು.

ಈಗ ಸಿಯೋಲ್‌ನಲ್ಲಿ ವಾಸವಾಗಿರುವ ಸುನಿಮ್, ಜಗತ್ತಿನಾದ್ಯಂತ ಸಂಚರಿಸುತ್ತಾ ‘ನೆಮ್ಮದಿಯ ಬದುಕು ಸಾಗಿಸುವ ವಿಧಾನ’ದ ಬಗ್ಗೆ ಉಪನ್ಯಾಸ ಮಾಡುತ್ತಾರೆ.
ಫೇಸ್‌ಬುಕ್ ಹಾಗೂ ಟ್ವಿಟರ್ ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಫಾಲೋವರ‍್ಸ್‌ಗಳನ್ನು ಹೊಂದಿರುವ ಇವರನ್ನು ‘ದಕ್ಷಿಣ ಏಷಿಯಾದ ಪ್ರಭಾವಿ ವ್ಯಕ್ತಿ’ ಎಂದು ಪರಿಗಣಿಸಲಾಗಿದೆ. ‘ನಾವು ನಮ್ಮ ಮನಸ್ಸಿನ ಕಿಟಕಿಯ ಮೂಲಕ ಜಗತ್ತನ್ನು ನೋಡುತ್ತೇವೆ. ನಮ್ಮ ಮನಸ್ಸು ಗಲಿಬಿಲಿಯಾಗಿದ್ದರೆ, ಜಗತ್ತೂ ಹಾಗೇ ಕಾಣುತ್ತದೆ. ನಮ್ಮ ಮನಸ್ಸು ಶಾಂತವಾಗಿದ್ದರೆ, ಜಗತ್ತೂ ಶಾಂತವಾಗಿಯೇ ತೋರುತ್ತದೆ. ಈ ಜಗತ್ತನ್ನು ಬದಲಾಯಿಸುವ ಮುನ್ನ ನಮ್ಮ ಮನಸ್ಸನ್ನು ಅರ್ಥಮಾ ಡಿಕೊಳ್ಳುವುದು ಸಹ ಅಷ್ಟೇ ಮುಖ್ಯ’ ಎಂದು ಹೇಮಿನ್ ಸುನಿಮ್ ಹೇಳುತ್ತಾನೆ.

‘ದೊಡ್ಡ ನಗರದ ಲೋಕಲ್ ಅಥವಾ ಮೆಟ್ರೋ ಟ್ರೇನಿನಲ್ಲಿ ನಾನು ಹೇಗೋ ತೂರಿಕೊಂಡು ಆ ಜನಜಂಗುಳಿಯಲ್ಲಿ ನಿಂತುಕೊಳ್ಳಲು ಹೇಗೋ ಜಾಗ ಸಂಪಾದಿಸಿಕೊಳ್ಳುತ್ತೇನೆ. ನನ್ನ ಸುತ್ತ ಜನರೂ ನನ್ನ ಹಾಗೇ ನಿಂತಿರುತ್ತಾರೆ. ಒಂದೋ ನಾನು ಆ ಸ್ಥಿತಿಯನ್ನು ಆನಂದಿಸಬೇಕು, ಇಲ್ಲವೇ ಸಿಡಿಮಿಡಿಗೊಳ್ಳಬೇಕು.
ನನ್ನ ಸುತ್ತಮುತ್ತ ನಿಂತಿರುವವರಿಗೂ ಇದೇ ಆಯ್ಕೆ. ಆದರೆ ಸನ್ನಿವೇಶ ಒಂದೇ ಆದರೂ, ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸುತ್ತಾರೆ. ಈ ಸನ್ನಿವೇ ಶವನ್ನು ಇನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ಗೊತ್ತಾಗುವುದೇನೆಂದರೆ, ನಮಗೆ ತೊಂದರೆ ಕೊಡುತ್ತಿರುವುದು ಆ ಪರಿಸ್ಥಿತಿ ಅಲ್ಲ, ನಾವು ಅದನ್ನು ಹೇಗೆ
ನೋಡುತ್ತಿದ್ದೇವೆಂಬ ನಮ್ಮ ದೃಷ್ಟಿಕೋನ.’ ಅಂತಾರೆ ಸುನಿಮ್.

‘ಯಾರೂ ಮೂಲತಃ ಒಳ್ಳೆಯವರೂ ಅಲ್ಲ, ಕೆಟ್ಟವರೂ ಅಲ್ಲ. ನಾವು ಯಾವ ಪರಿಸ್ಥಿತಿಯಲ್ಲಿ ಸಿಲುಕಿ ಹೇಗೆ ವರ್ತಿಸುತ್ತೇವೆ ಎಂಬುದನ್ನು ಆಧರಿಸಿ ನಮ್ಮ ಒಳ್ಳೆಯತನ ಹಾಗೂ ಕೆಟ್ಟತನ ನಿರ್ಧಾರವಾಗುತ್ತದೆ. ನನ್ನ ಮೇಲೆ ಕಾರು ಹತ್ತಿಸಿದವನು ಕಳ್ಳನೇ ಆಗಿರಬಹುದು, ಆದರೆ ಆತ ಕಾರು ನಿಲ್ಲಿಸಿ ಆಸ್ಪತ್ರೆಗೆ ಸೇರಿಸಿದರೆ
ಆತ ಪುಣ್ಯಾತ್ಮನೇ. ಅದೇ ನನ್ನ ಮೇಲೆ ಕಾರು ಹತ್ತಿಸಿದವನು ನೊಬೆಲ್ ಪ್ರಶಸ್ತಿ ಪುರಸ್ಕೃತನೇ ಆಗಿರಬಹುದು, ಆತ ಹಾಗೇ ಓಡಿ ಹೋದರೆ ಆತ ದುರಾತ್ಮನೇ.’ ಅಂತಾರೆ ಸುನಿಮ್.

ಇತ್ತೀಚೆಗೆ ಯೋಗಿ ದುರ್ಲಭಜೀ ಬೆಳಗ್ಗೆ ಒಂದು ಸಂದೇಶ ಕಳಿಸಿದ್ದರು. ‘ನಮ್ಮನ್ನು ಯಾರಾದರೂ ಇಷ್ಟಪಡದಿದ್ದರೆ, ಅದು ನಮ್ಮ ಸಮಸ್ಯೆ ಅಲ್ಲ, ಅದು ಅವರ ಸಮಸ್ಯೆ. ಅದಕ್ಕೆ ನಾವು ತಲೆಕೆಡಿಸಿಕೊಳ್ಳಬಾರದು. ಗೊತ್ತಿರಲಿ, ಎಲ್ಲರೂ ನಮ್ಮನ್ನು ಇಷ್ಟಪಡುವುದಿಲ್ಲ. ಈ ಸಂಗತಿ ನಮ್ಮನ್ನು ವಿಪರೀತ ಕಾಡಿದರೆ ಅದೇ ನಮ್ಮ ಸಮಸ್ಯೆ’ ಎಂದು ಬರೆದಿದ್ದರು. ‘ಈ ಸಂದೇಶ ಹೇಮಿನ್ ಸುನಿಮ್ ಅವರದು’ ಎಂದು ಯೋಗಿ ಅಂದಿನ ಸಂದೇಶವನ್ನು ಕೊನೆಗೊಳಿಸಿದರು. ನಮ್ಮ ದೈನಂದಿನ ಬದುಕಿನ ಪ್ರಸಂಗಗಳನ್ನೇ, ಉದಾಹರಣೆಗಳನ್ನೇ ಹೇಳುತ್ತಾ ಮನಸ್ಸಿಗೆ ಒಂದಷ್ಟು ಸಾಂತ್ವನ ನೀಡುವ ಸುನಿಮ್ ಅವರ ಮಾತುಗಳು ಚೇತೋಹಾರಿ.

ಸಣ್ಣ ಕತೆಗಳೆಂದರೆ… !?
ಈ ಜಗತ್ತಿನ ಕುತೂಹಲ ಹಿಡಿದಿಟ್ಟಿದ್ದು, ಕಾಪಾಡಿದ್ದು ಸಣ್ಣಕತೆಗಳಂತೆ. ಕತೆಗಳಿರದಿದ್ದರೆ ಕಾರಣಗಳೇ ಇರುತ್ತಿರಲಿಲ್ಲವಂತೆ. ಕತೆಗಳಿರದಿದ್ದರೆ ಜೀವನದಲ್ಲಿ ಸ್ವಾರಸ್ಯವೂ ಇರುತ್ತಿರಲಿಲ್ಲವಂತೆ. ಜೀವನವೇ ಸಣ್ಣ ಕತೆಗಳ ಸಂಕಲನ. ಕೆಲವರು ಅದನ್ನು ಕಾದಂಬರಿ ಮಾಡುತ್ತಾರೆ. ಅಂಥವರು ಬದುಕನ್ನು ಸುದೀರ್ಘ ಗೊಳಿಸುತ್ತಾರೆ. ‘ಸಣ್ಣ ಕತೆಗಳೆಂದರೆ ವೇದಾಂತಕ್ಕೆ, ಅಧ್ಯಾತ್ಮಕ್ಕೆ ಸಮ’ ಎಂದು ಹೇಳಿದವರು ಝೆನ್ ಗುರುಗಳು. ‘ಕತೆಗಳೆಂದರೆ ಎಲ್ಲ ಉಂಟು, ಏನೂ ಇಲ್ಲ’ ಎಂದು ಹೇಳಿದವರು ಆಸ್ಕರ್‌ವೈಲ್ಡ್. ಹಾಗಾದರೆ ಕತೆಗಳೆಂದರೆ ಏನು ? ಇಲ್ಲಿನ ಕೆಲವು ಕತೆಗಳನ್ನು ನೋಡಿ. ಟ್ಯಾಕ್ಸಿಯಲ್ಲಿ ನನ್ನ ಪಕ್ಕ ಕುಳಿತ ಅಪರಿಚಿತ ತನ್ನಷ್ಟಕ್ಕೆ ತಾನು ಅಳುತ್ತಿದ್ದ. ಈ ಜಗತ್ತಿನಲ್ಲಿ ನಾನು ಒಂಟಿ ಅಲ್ಲಎಂದೆನಿಸಿತು. ಆತ್ಮಹತ್ಯೆ ಮಾಡಿಕೊಂಡವನ ಜೇಬಿನಲ್ಲಿ ಒಂದು ಪತ್ರ ಸಿಕ್ಕಿತು. ಅದರಲ್ಲಿ ಬರೆದಿತ್ತು: ‘ನನಗೆ ಕಾಗಣಿತ ಬರೊಲ್ಲ ಅಂತ ಸಂಪಾದಕರು ಹಯಾಳಿಸಿದರು.’

ಒಂದು ದಿನ, ಆತ ಎಲ್ಲರಿಂದ ದೂರವಾಗಿ ದೊಡ್ಡ ಬಂಗಲೆ ನಿರ್ಮಿಸಿ ಸುತ್ತಲೂ ಕೋಟೆಯಂಥ ಗೋಡೆ ಕಟ್ಟಿಕೊಂಡ ಆಕೆ ಮಳೆಯಾಗಿ ಅವನ ಮೇಲೆ ಹುಯ್ದಳು.
ಬ್ರೈಲ್‌ಲಿಪಿ ಬೋರ್ಡ್ ಮೇಲೆ ಅವರಿಬ್ಬರ ಬೆರಳುಗಳು ಸ್ಪರ್ಶಿಸಿದವು. ಅದು ಮೊದಲ ‘ನೋಟ’ದ ಪ್ರೇಮಾಂಕುರ. ನಗರದ ಯಾಂತ್ರಿಕತೆಯಿಂದ ದೂರವಾಗಲು ಅವರು ಇಬ್ಬರು ಮಕ್ಕಳೊಂದಿಗೆ ಸಮುದ್ರದಲ್ಲಿ ದೋಣಿವಿಹಾರಕ್ಕೆ ಹೊರಟರು. ಆದರೆ ದೋಣಿ ಚಿಕ್ಕದು ಎಂದೆನಿಸಿತು. ವಾಪಸ್ ಬರುವಾಗ ದೋಣಿ ಗಾತ್ರ ಸರಿಯಾಗಿದೆ ಎಂದೆನಿಸಿತು. ‘ನನ್ನನ್ನು ಪ್ರೀತಿಸುತ್ತೀಯಾ ?’ ಎಂದು ಕೇಳಿದೆ. ಎರಡು ನಿಮಿಷಗಳ ಮೌನದ ಬಳಿಕ ‘ಇಲ್ಲ’ ಎಂದಳು. ಆ ಎರಡು ನಿಮಿಷಗಳ ಮೌನವೇ ಎಷ್ಟು ಚೆನ್ನಾಗಿತ್ತು ಎನಿಸಿತು.

ಸುನಿಮ್ ವಿಚಾರಧಾರೆ 
ನೂರಾರು ಓದುಗರು ದಕ್ಷಿಣ ಕೋರಿಯಾದ ಜೆನ್ ಧರ್ಮಗುರು ಹೆಮಿನ್ ಸುನಿಮ್ ಅವರ ಚುಟುಕು ವಿಚಾರಧಾರೆ, ದಾರಿದೀಪೋಕ್ತಿಯಂಥ ಅನುಭವದ ನುಡಿಗಳನ್ನು ಪ್ರಸ್ತಾಪಿಸಿ ಎಂದು ಒತ್ತಾಯಿಸಿ ಬರೆದಿರುವುದರಿಂದ ಕೆಲವು ಪುಟ್ಟ ಪುಟ್ಟ ಅಂಶಗಳನ್ನು ಇಲ್ಲಿ ನೀಡುತ್ತೇನೆ.

ಚುನಾವಣೆಯಲ್ಲಿ ಗೆದ್ದ ನಂತರ ರಾಜಕಾರಣಿಯೊಬ್ಬ ಹೇಗೆ ವರ್ತಿಸಬಹುದು ಎಂದು ಊಹಿಸುವುದರ ಬದಲು, ಈಗ ಆತ ಹೇಗಿದ್ದಾನೆ, ಹಿಂದೆ ಯಾವ ರೀತಿ ಇದ್ದ ಎಂಬುದನ್ನು ತಿಳಿದುಕೊಳ್ಳಿ. ಗೆದ್ದ ನಂತರ ನಾನು ಬದಲಾಗಲಿದ್ದೇನೆಂಬ ವ್ಯಕ್ತಿ  ಬದಲಾಗುವುದಿಲ್ಲ. ಇಷ್ಟು ವರ್ಷ ಹೇಗೆ ಬದುಕಿದ್ದನೋ ಅದೇ ರೀತಿ ಮುಂದೆಯೂ ಆತ ಬದುಕುತ್ತಾನೆ. ಗೆದ್ದನಂತರ ಬದಲಾಗುವೆ ಎಂಬ ಮಾತುಗಳಿಗೆ ಮರುಳಾಗಬಾರದು.

ಯಾರನ್ನೇ ಆಗಲಿ, ಮೊದಲ ಸಲ ಭೇಟಿಯಾದಾಗ ಅತೀವ ಒಳ್ಳೆಯವನಂತೆ, ದಯಾಳುವಿನಂತೆ ವರ್ತಿಸುತ್ತಾನೆ. ಪ್ರಶ್ನೆಯೆಂದರೆ ಅವರ ಒಳ್ಳೆಯತನ, ದಯಾಪರತೆ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು. ಮೊದಲ ಸಲ ಬಹಳ ಚೆನ್ನಾಗಿ ವರ್ತಿಸಿದವರು ಯಾವತ್ತೂ ಹಾಗೆಯೇ ಇರುತ್ತಾರೆ ಎಂದು ತಿಳಿದು ಮೋಸ ಹೋಗಬಾರದು.

ನಮಗೆ ಏನೋ ಲಾಭವಾಗುತ್ತದೆ ಅಥವಾ ಏನೋ ಸಿಗುತ್ತದೆಂದು ತಿಳಿದು ಉಪಕಾರ ಮಾಡುವುದೆಂದರೆ ಅದು ಉಪಕಾರವಲ್ಲ, ವ್ಯವಹಾರ. ಏನೂ ಅಪೇಕ್ಷಿಸದೇ ಸಹಾಯ ಮಾಡುವುದು ನಿಜವಾದ ಉಪಕಾರ. ಕೊಟ್ಟದ್ದನ್ನು ಮರೆಯುವುದು ನಿಜವಾದ ದಾನ. ಉಳಿದವುಗಳೆಲ್ಲ ಪಕ್ಕಾ ದಂಧೆ.

ಆತ ಆಕೆಯ ಹಿಂದೆ ಏನೇನೋ ದೂರು ಹೇಳುತ್ತಾನೆ. ಆದರೆ ಆಕೆಗೆ ಇದೇನೂ ಗೊತ್ತಿಲ್ಲ. ಅವನ ಬಳಿ ಒಳ್ಳೆಯ ಮಾತುಗಳನ್ನೇ ಹೇಳುತ್ತಾಳೆ. ಬಹಳ ಒಳ್ಳೆಯ ಪ್ರತೀಕಾರ ಎಂದರೆ ಪ್ರೀತಿ.

ನಾನು ಒಳಗೆ ತೆಗೆದುಕೊಳ್ಳುವ ಗಾಳಿ ನನ್ನ ದೇಹವನ್ನು ಹೊಕ್ಕು ನನ್ನ ದೇಹದ ಭಾಗವೇ ಆಗುತ್ತದೆ. ನಾನು ಹೊರಗೆ ಬಿಡುವ ಗಾಳಿ ಬೇರೆಯವರ ದೇಹದೊಳಗೆ ಹೊಕ್ಕು ಅವರ ದೇಹದ ಭಾಗವಾಗುತ್ತದೆ. ಗಾಳಿಯ ಈ ಚಲನೆಯನ್ನೇ ಗಮನಿಸಿದರೆ ನಾವೆಲ್ಲ ಒಬ್ಬರಿಗೊಬ್ಬರು ಕನೆಕ್ಟ್ ಆಗಿದ್ದೇವೆಂಬುದು ಗೊತ್ತಾಗುತ್ತದೆ. ಕೇವಲ ಸಾಂಕೇತಿಕವಾಗಷ್ಟೇ ಅಲ್ಲ, ಅಕ್ಷರಶಃ !

ಲಂಚ್ ಬಾಕ್ಸಿನಲ್ಲಿಟ್ಟ ಸೇಬು ಹಣ್ಣನ್ನು ನೋಡಿದೆ. ಅದು ಅಲ್ಲಿಗೆ ಬಂದು ಕುಳಿತಿದ್ದಾದರೂ ಹೇಗೆ? ಆಗ ನನ್ನ ಕಣ್ಣೆದುರಿಗೆ, ಸೇಬಿನ ಮರ, ಸೂರ್ಯನ ಕಿರಣ, ಮೋಡ, ಮಳೆ, ಭೂಮಿ,ಗಾಳಿ, ರೈತನ ಬೆವರು .. ಇವೆಲ್ಲ ಬಂದವು. ಇವೆಲ್ಲ ಆ ಸೇಬಿನಲ್ಲಿದೆಯೆಂದು ಅನಿಸಿತು.ಡೆಲಿವರಿ ಟ್ರಕ್, ಪೆಟ್ರೋಲ್, ಮಾರ್ಕೆಟ್, ಹಣ, ಕ್ಯಾಶಿಯರ್‌ ನ ನಗು ಎಲ್ಲವೂ ಸೇಬು ಹಣ್ಣಿನೊಳಗಿದೆಯೆಂದು ಅನಿಸಿತು. ರೆಫ್ರಿಜರೇಟರ್, ಚಾಕು, ಕಟಿಂಗ್ ಬೋರ್ಡ್, ತಾಯಿಯ ಪ್ರೀತಿ ಎಲ್ಲವೂ ಅದರೊಳಗಿದೆ ಯೆಂದು ಅನಿಸಿತು. ಈ ಪ್ರಪಂಚದಲ್ಲಿರುವ ಪ್ರತಿವಸ್ತುವೂ ಮತ್ತೊಂದನ್ನು ಅವಲಂಬಿಸಿದೆ. ನಮ್ಮೊಳಗೆ ಏನಿದೆ ಎಂಬುದನ್ನು ಒಂದು ಕ್ಷಣ ಯೋಚಿಸಿ. ನನಗನಿಸುತ್ತದೆ ನಮ್ಮೊಳಗೆ ಇಡೀ ಬ್ರಹ್ಮಾಂಡವೇ ಅಡಗಿದೆ.

ಜೀವನವೆಂಬುದು ಪಿಜ್ಜಾದ ಒಂದು ತುಂಡು ಇದ್ದಂತೆ. ಜಾಹೀರಾತಿನಲ್ಲಿ ಪಿಜ್ಜಾವನ್ನು ನೋಡಿದರೆ, ಬಾಯಲ್ಲಿ ನೀರು ಬರುತ್ತದೆ. ಆದರೆ ಅದನ್ನು ತಿನ್ನುವಾಗ ನಾವು ಊಹಿಸಿದಷ್ಟು ಅದು ರುಚಿಯಾಗಿರುವುದಿಲ್ಲ. ಬೇರೆಯವರ ಜೀವನ ನೋಡಿ ಕರುಬುವಾಗ, ಜಾಹೀರಾತಿನಲ್ಲಿರುವ ಪಿಜ್ಜಾವನ್ನು ಕಲ್ಪಿಸಿಕೊಳ್ಳಿ. ಅದು ಇರುವುದಕ್ಕಿಂತ ಚೆನ್ನಾಗಿ ಕಾಣುತ್ತದೆ.

ಹೇಗೆ ಅನುವಾದಿಸುವುದು ?

ಕೆಲವು ವಾಕ್ಯಗಳನ್ನು ಅನುವಾದಿಸಲಾಗುವುದಿಲ್ಲ. ಅನುವಾದಿಸಲೂಬಾರದು. ಮೂಲದ ಸೊಗಡು ಹೋಗಿಬಿಡುತ್ತದೆ. ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಕಳಿಸಿದ
ಪುಟ್ಟ ಇಮೇಲ್ ಇದು. ಓದಿ ಜೋರಾಗಿ ನಕ್ಕೆ. ಅದನ್ನು ಹೇಗೆ ಅನುವಾದಿಸುವುದು ಎಂದು ಚಡಪಡಿಸಿದೆ. ಮೂಲದಲ್ಲಿ ಓದಿಕೊಂಡರೇ ಒಳ್ಳೆಯದು. ಐ ಚ್ಟಿಟhಛಿ ಞqs ಜ್ಞಿಜಛ್ಟಿ Zoಠಿ ಡಿಛಿಛಿh. u ಠಿeಛಿ ಟಠಿeಛ್ಟಿ eZb, ಐ Zಞ ಜ್ಞಿಛಿ