Wednesday, 11th December 2024

ದುರ್ಬಲ ಮನಸ್ಥಿತಿಯೇ ಆತ್ಮಹತ್ಯೆಗೆ ಪ್ರೇರಣೆ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಆತ್ಮಹತ್ಯೆ ಎಂಬುದು ಸಾಮಾಜಿಕ ಪಿಡುಗಿನ ಜತೆ ಮಹಾಪರಾಧವೂ ಹೌದು. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ, ಸಾಲಭಾದೆ ತಾಳಲಾರದೆ ಯುವಕ ಆತ್ಮಹತ್ಯೆ, ವ್ಯವಹಾರದಲ್ಲಿ ನಷ್ಟ ಉಂಟಾದಾಗ ಉದ್ಯಮಿ ಆತ್ಮಹತ್ಯೆ, ರೈತ ತಾನು ಬೆಳೆದ ಬೆಳೆ ನಷ್ಟವಾದಾಗ ಆತ್ಮಹತ್ಯೆಗೆ ಶರಣಾಗುವ, ಅತ್ತೆ, ಮಾವ, ಗಂಡನ ಕಿರುಕುಳಕ್ಕೆ ನೇಣಿಗೆ ಶರಣಾಗುವ ಸೊಸೆ, ಕೌಟುಂಬಿಕ ಕಲಹಗಳಿಗೆ ಸೀಮೆಎಣ್ಣೆ ಸುರಿದುಕೊಂಡು ಸಾಯುವ ವಿದ್ಯಮಾನಗಳು ದಿನಂಪ್ರತಿ ಕಂಡುಬರುತ್ತಿವೆ.

ಇವೆಲ್ಲದರ ಮಧ್ಯೆ ಈ ಆತ್ಮಹತ್ಯೆಗೆ ಕೊರಳೊಡ್ಡುವವರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವವರು ಯುವಕರು. ಮನುಷ್ಯನ ಜೀವನದಲ್ಲಿ ಕಷ್ಟ-ಸುಖ, ಐಶ್ವರ್ಯ, ಸಂಪತ್ತು ಮಾನವನ ಗುಣ ಮತ್ತು ವರ್ತನೆಯನ್ನು ಬದಲಿಸಿ ಬಿಡಬಲ್ಲದು. ಸರಕಾರಿ ಶಾಲೆಯಲ್ಲಿ ಓದಿದ ಹಳ್ಳಿಹೈದನೊಬ್ಬ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಾನೆ. ಕೃಷಿ ಚಟುವಟಿಕೆಗಳಲ್ಲಿ ಸಾಧನೆ ತೋರುತ್ತಾನೆ. ಶೈಕ್ಷಣಿಕ ಬದುಕಿನಲ್ಲಿ ಓದಿನಲ್ಲಿ ಹಿಂದುಳಿದವನು ಕೂಡ ಸಮಾಜದಲ್ಲಿ ನಾನಾ ಕ್ಷೇತ್ರದಲ್ಲಿ ಇಂದು ಸಾಧನೆಗೈದಿದ್ದಾನೆ. ಆದರೆ ಶೇ.98,97 ಅಂಕ ಪಡೆದ ಪ್ರತಿಭಾ ನ್ವಿತ ವಿದ್ಯಾರ್ಥಿಗಳು ಅಂಕ ಕಡಿಮೆ ಬಂತೆಂದು ಆತ್ಮಹತ್ಯೆಗೆ ಶರಣಾದ ನೂರಾರು ನಿದರ್ಶನಗಳು ನಮ್ಮ ಮುಂದಿವೆ.

ಹುಟ್ಟಿನಿಂದಲೇ ಶ್ರೀಮಂತಿಕೆ, ಮನೆಬಾಗಿಲಿಗೆ ಬಂದು ಮಕ್ಕಳನ್ನು ಹೊತ್ತೊಯ್ಯುವ ಶಾಲಾ ವಾಹನ ಇವೆಲ್ಲವೂ ಯಾಂತ್ರಿಕ ಬದುಕಿನ ಶೈಲಿಯಾಗಿದೆ. ಕೇವಲ ಪುಸ್ತಕದ ಬದನೆಕಾಯಿಗಳಾಗಿ ನಾಲ್ಕು ಜನರ ಮಧ್ಯೆ ಬೆರೆಯದೆ, ಸಾಮಾನ್ಯ ಜ್ಞಾನ, ಸಾಮಾಜಿಕ ಸವಾಲುಗಳು, ಸೋಲನ್ನು ಎದುರಿಸುವ ಎದೆಗಾರಿಕೆ ತೋರದೇ ಇದ್ದಾಗ ಮನಸ್ಸು ಖಿನ್ನತೆಗೆ ಒಯ್ಯುತ್ತದೆ. ಈ ವಿದ್ಯಮಾನಗಳು ಸರಕಾರಿ ಮತ್ತು ಖಾಸಗಿ ಎರಡು ಶಾಲೆಗಳ ಪೈಕಿ ಅತಿ ಹೆಚ್ಚು ಕಂಡು ಬರುವುದು ಐಷಾರಾಮಿ ಶಾಲಾ-ಕಾಲೇಜು ಗಳು, ಟ್ಯೂಷನ್ ಹೀಗೆ ತನ್ನ ಮಗ, ಮಗಳನ್ನು ಕೇವಲ ಅಂಕಗಳಿಕೆಯ ಸರಕಾಗಿ ಬಳಸುವ ಪೋಷಕರು ಇದಕ್ಕೆ ನೇರ ಹೊಣೆಗಾರರು ಎನ್ನಬಹುದು.

ಸಾಮೂಹಿಕ ಆತ್ಮಹತ್ಯೆ ಅಂದರೆ ಮಕ್ಕಳನ್ನು ಬಾವಿಗೆ ದೂಡಿ ಪೋಷಕರು ಆತ್ಮಹತ್ಯೆಗೈಯ್ಯುವ, ತಿನ್ನುವ ಆಹಾರಕ್ಕೆ ವಿಷ ಬೆರೆಸಿ ಪತಿ-ಪತ್ನಿ ಮಕ್ಕಳು ಆತ್ಮಹತ್ಯೆ ಗೈಯ್ಯುವ ಸಂದರ್ಭ ಏನೂ ಅರಿಯದ ಪುಟ್ಟ ಮಕ್ಕಳು ಗಂಭೀರ ಗಾಯಗೊಂಡು ಬದುಕುಳಿದು ಹೆತ್ತವರನ್ನು ಕಳೆದುಕೊಂಡು ಅನಾಥರಾಗುವ ಜತೆಗೆ, ಮಕ್ಕಳು ಮಾತ್ರ ಸಾವು ಕಂಡು ಪೋಷಕರು ಬದುಕುಳಿಯುವ ದಾರುಣ ಘಟನೆಗಳು ಮನಕಲಕುವಂತಿರುತ್ತದೆ. ಪ್ರೀತಿಸಿದ ಜೋಡಿಗಳು ಹೆತ್ತವರ ವಿರೋಧಕ್ಕೆ ರೈಲು ಹಳಿಗೆ ತಲೆ ಒಡ್ಡುವ, ನೇಣಿಗೆ ಶರಣಾಗುವ, ವಿಷ ಸೇವಿಸುವ, ಸ್ವಯಂ ವಿಡಿಯೊದೊಂದಿಗೆ ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಇತ್ತೀಚೆಗೆ ಹೆಚ್ಚೆಚ್ಚು ಮರು ಕಳಿಸುತ್ತಿದೆ.

ತೀರಾ ಇತ್ತೀಚೆಗೆ ಮಂಗಳೂರು ಸಮೀಪದ ಸುರತ್ಕಲ್‌ನ ಉದ್ಯಮಿಯಾಗಿದ್ದ ಸುಶಿಕ್ಷಿತ ಕುಟುಂಬದ ದಂಪತಿಗಳು ಕರೋನಾ ಬಾಧಿಸಿದೆಯೆಂದು ಡೆತ್‌ನೋಟ್ ಬರೆದಿಟ್ಟು ತಮ್ಮ ಫ್ಲ್ಯಾಟ್ ನಲ್ಲೇ ಆತ್ಮಹತ್ಯೆ ಶರಣಾದ ಘಟನೆ ನಡೆದಿದೆ. ಈ ಕರೋನಾಗೆ ಬೆದರಿ ಪ್ರಾಣ ತೆತ್ತ ಹಲವಾರು ಪ್ರಕರಣಗಳು ಮರುಕಳಿಸುವ ಮುನ್ನ ಕರೋನಾ ಎಂಬ ಸಾಂಕ್ರಾಮಿಕ ರೋಗವು ದೇಶದಲ್ಲಿ ಲಕ್ಷಾಂತರ ಮಂದಿಗೆ ಬಾಧಿಸಿದೆ. ಆದರೆ ಪ್ರಾಣವನ್ನು ಬಲಿಪಡೆಯುವ ಮಟ್ಟಕ್ಕೆ ಮಾರಕವಾದ ರೋಗವಲ್ಲ ಎಂಬುವುದನ್ನು ನಾವು ಮನಗಾಣಬೇಕು. ಆತ್ಮಹತ್ಯೆಯಂತಹ ಯೋಚನೆಗಳಿಗೆ ಕಾರಣ ಒಂದು ಇರಬಹುದು ಆದರೆ ಇದರಿಂದ ಪಾರಾಗಲು ನೂರು ದಾರಿಗಳಿವೆ ಎಂಬ ಆತ್ಮಸ್ಥೈರ್ಯ ನಮ್ಮಲ್ಲಿ ಮೂಡಬೇಕು.