Sunday, 15th December 2024

ಮಾನ್ಸೂನ್‌, ವಿಂಟರ್‌ ಟೂರಿಸಂನಂತೆ ಸಮ್ಮರ್‌ ಟೂರಿಸಂ ಏಕಿಲ್ಲ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ನಮ್ಮ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಗಮನ ಸೆಳೆಯಲು ಮತ್ತು ಅವರಿಗೊಂದು ಕ್ರೇಜಿ ಐಡಿಯಾ ಕೊಡಲು ಬಯಸುತ್ತೇನೆ. ಅದನ್ನು ಸ್ವೀಕರಿಸುವುದು ಅಥವಾ ಬಿಡುವುದು ಅವರಿಗೆ ಬಿಟ್ಟಿದ್ದು.

ಮೂಲ ವಿಷಯಕ್ಕೆ ಬರುವ ಮುನ್ನ ಹಿನ್ನೆಲೆಯನ್ನು ಹೇಳಬೇಕು. ನಮ್ಮ ದೇಶದಲ್ಲಿ ಕೇರಳ ಪ್ರವಾಸೋದ್ಯಮ ಹತ್ತು- ಹಲವು ಹೊಸ ಪ್ರಯೋಗಗಳನ್ನು ಮಾಡಿ ಜಗತ್ತಿನ ಗಮನ ಸೆಳೆಯಿತು. ಪ್ರವಾಸೋದ್ಯಮದಲ್ಲಿ ಭಾರತದಲ್ಲಿ ಕೇರಳ ಮೊದಲ ಸ್ಥಾನ ಗಳಿಸಿತು. ಕೇರಳಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇದ್ದಕ್ಕಿದ್ದಂತೆ ಜಾಸ್ತಿಯಾ ಯಿತು. ಪ್ರವಾಸಿಗರ ಪಾಲಿಗೆ ಕೇರಳ God’s own country ಆಯಿತು.

ಎಲ್ಲರೂ ಕೇರಳದೆಡೆ ಮುಖ ಮಾಡಲಾರಂಭಿಸಿದರು. ಆಗ ಆ ರಾಜ್ಯದಲ್ಲಿ ಹೆಚ್ಚು ಹೋಟೆಲುಗಳು, ರೆಸಾರ್ಟುಗಳು, ಹೌಸ್ ಬೋಟ್ ಗಳು ತಲೆಯೆತ್ತಿದವು. ರಸ್ತೆಗಳು ಉತ್ತಮಗೊಂಡವು. ಆರೋಗ್ಯ ಪ್ರವಾಸೋದ್ಯಮ ಎಂಬ ಹೊಸ ಪ್ರಕಾರ ಹುಟ್ಟಿ ಕೊಂಡಿತು. ವರ್ಷದ ಎಂಟು ತಿಂಗಳ ಕಾಲ ಕೇರಳ, ಪ್ರವಾಸಿಗರ ಪಾಲಿಗೆ ಅತ್ಯಂತ ಕ್ರಿಯಾಶೀಲ ರಾಜ್ಯವೆಂದು ಅನಿಸಿಕೊಂಡಿತು. ಆದರೆ, ಮಳೆಗಾಲ ಬಂತೆಂದರೆ, ಈ ಎಲ್ಲ ಚಟುವಟಿಕೆಗಳು ಸ್ತಬ್ದವಾಗುತ್ತಿದ್ದವು. ನಾಲ್ಕು ತಿಂಗಳ ಕಾಲ ಪ್ರವಾಸೋದ್ಯಮ ಬಂದ್! ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡವ ರೆಲ್ಲ ಕೆಲಸವಿಲ್ಲದೇ ಸುಮ್ಮನಾಗು ತ್ತಿದ್ದರು, ನಿರುದ್ಯೋಗಿಗಳಾಗುತ್ತಿದ್ದರು. ಆಗ ಯಾರೋ ಒಬ್ಬರ ತಲೆಯಲ್ಲಿ ಒಂದು ಹೊಸ ಐಡಿಯಾ ಮೂಡಿ ಬಂದಿತು. ಅದು ಮಾನ್ಸೂನ್ ಟೂರಿಸಂ!

ಕೇರಳ ಪ್ರವಾಸೋದ್ಯಮ ಇಲಾಖೆ ‘ಮಳೆಯ ರೋಮಾಂಚನವನ್ನು ಸವಿಯಲು ಕೇರಳಕ್ಕೆ ಬನ್ನಿ’ ಎಂಬ ಅಭಿಯಾನವನ್ನು ಮಾಡಿತು. ಅಲ್ಲಿ ತನಕ ಬಂದ್ ಆಗಿದ್ದ ಪ್ರವಾಸೋದ್ಯಮ ಚಟುವಟಿಕೆಗಳೆಲ್ಲ ಗರಿಗೆದರಿದವು. ಮಳೆಗಾಲದ ನಾಲ್ಕು ತಿಂಗಳುಗಳ ಕಾಲ ನಿಂತು ಹೋಗುತ್ತಿದ್ದ ಕ್ಷೇತ್ರಗಳು ಹೊಸ ಭರವಸೆಗಳೊಂದಿಗೆ ತೆರೆದುಕೊಂಡವು. ಮಳೆಗಾಲವೆಂದರೆ ಮೂಗುಮುರಿಯುತ್ತಿದ್ದ ಪ್ರವಾಸಿಗರೆಲ್ಲ ಕೇರಳದ ಕಡೆಗೆ ಮುಖಮಾಡಲಾರಂಭಿಸಿದರು. ಒಂದೆರಡು ವರ್ಷಗಳಲ್ಲಿ ‘ಮಾನ್ಸೂನ್ ಟೂರಿಸಂ’ ಜನಪ್ರಿಯವಾಯಿತು. ಈಗಂತೂ
ಕೇರಳ ವರ್ಷವಿಡೀ ಪ್ರವಾಸೋದ್ಯಮ ಚಟುವಟಿಕೆಯ ಕೇಂದ್ರವಾಗಿದೆ.

ಇದನ್ನೇ ಹಿಮಾಚಲ ಟೂರಿಸಂ ಕೂಡ ಕಾಪಿ ಮಾಡಿತು. ಚಳಿಗಾಲದ ರೋಮಾಂಚನ ಅನುಭವಿಸಲು ಹಿಮಾಚಲ ಪ್ರದೇಶಕ್ಕೆ ಬನ್ನಿ ಎಂಬ ಅಭಿಯಾನವನ್ನು ಆರಂಭಿಸಿತು. ಇದರಿಂದ ಹಿಮಧಾರೆಯನ್ನು ನೋಡಲು ದೇಶದೆಡೆಗಳಿಂದ ಪ್ರವಾಸಿಗರು ಬರುವಂತಾಯಿತು. ಚಳಿಗಾಲದಲ್ಲಿ ಹಿಮಾಚಲಕ್ಕೆ ಬರುವುದುಂಟಾ ಎಂದು ವ್ಯಂಗ್ಯವಾಡುತ್ತಿದ್ದವರು ತಮ್ಮ ಅಭಿಪ್ರಾಯ ಬದಲಿಸಿಕೊಂಡರು. ಈಗಂತೂ ಚಳಿಗಾಲ ಬಂದರೆ, ಇಡೀ ದೇಶ ಹಿಮಾಚಲದೆಡೆಗೆ ಮುಖ ಮಾಡುತ್ತದೆ. ಈಗ ನಾನು ನಮ್ಮ ಪ್ರವಾಸೋದ್ಯಮ ಇಲಾಖೆಗೆ ಹೇಳಬೇಕು
ಅಂದುಕೊಂಡ ಸಂಗತಿಯನ್ನು ಹೇಳುತ್ತೇನೆ. ಅದೇನೆಂದರೆ ಸಮ್ಮರ್ ಟೂರಿಸಂ!

ಮಳೆಗಾಲ, ಚಳಿಗಾಲದ ರೋಮಾಂಚನವನ್ನು ಅನುಭವಿಸಿ ಎಂದು ಕೇರಳ ಮತ್ತು ಹಿಮಾಚಲ ಪ್ರವಾಸೋದ್ಯಮ ಇಲಾಖೆ ಅಭಿಯಾನ ಆರಂಭಿಸಿದಂತೆ, ಕರ್ನಾಟಕ ಪ್ರವಾಸೋದ್ಯಮ ‘ಬೇಸಿಗೆ ಪ್ರವಾಸೋದ್ಯಮ’ವನ್ನೇಕೆ ಆರಂಭಿಸಬಾರದು? ಮಳೆಗಾಲ ಮತ್ತು ಚಳಿಗಾಲ ದಂತೆ ಬೇಸಿಗೆಯೂ ಒಂದು ಅನುಭವವೇ. ನಮ್ಮ ರಾಜ್ಯದ ಮಂಗಳೂರು, ಕಾರವಾರ, ಕಲಬುರ್ಗಿ, ಬಳ್ಳಾರಿಯಲ್ಲಿ ಈ ಪ್ರವಾಸೋದ್ಯಮ ಚಟುವಟಿಕೆಗಳನ್ನೇಕೆ ಆರಂಭಿಸಬಾರದು? ಶಾಲೆ-ಕಾಲೇಜುಗಳಿಗೆ ರಜಾ ಇರುವುದು ಬೇಸಿಗೆಯ ಆಗಿದ್ದರಿಂದ, ಹೆಚ್ಚಿನ ಸಂಖ್ಯೆಯಲ್ಲಿ
ಜನರನ್ನು ಆಕರ್ಷಿಸಬಹುದು. ನಮ್ಮ ಪ್ರವಾಸೋದ್ಯಮ ಸಚಿವರು ಮತ್ತು ಅಽಕಾರಿಗಳು ಯೋಚಿಸಲಿ.

ಪಾಟೀಲ ಪುಟ್ಟಪ್ಪನವರ ಭಾಷಣ
ನಾನು ಧಾರವಾಡದಲ್ಲಿ ಓದುವಾಗ, ಅಲ್ಲಿನ ಸಾಂಸ್ಕೃತಿಕ ವೇದಿಕೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ವಿದ್ಯಾ ವರ್ಧಕ ಸಂಘದಲ್ಲಿ ಹೆಚ್ಚು-ಕಮ್ಮಿ ದಿನವೂ ಒಂದಲ್ಲ ಒಂದು ಒಂದು ಕಾರ್ಯಕ್ರಮ ಇರುತ್ತಿತ್ತು. ಆ ಕಾರ್ಯಕ್ರಮಗಳಲ್ಲಿ ತಿಂಗಳಿಗೆ ಒಮ್ಮೆ ಯಾದರೂ ಪಾಟೀಲ ಪುಟ್ಟಪ್ಪನವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದರು. ನಾನು ಆ ಏಳು ವರ್ಷಗಳ ಕಾಲ ಧಾರಾವಾಡ ದಲ್ಲಿದ್ದ ಸಮಯದಲ್ಲಿ ಪಾಟೀಲ ಪುಟ್ಟಪ್ಪನವರ ನೂರಾರು ಭಾಷಣಗಳನ್ನು ಕೇಳಿದ್ದಿರಬಹುದು.

ಒಂದು ವೇಳೆ ಪಾಟೀಲ ಪುಟ್ಟಪ್ಪನವರಿಗೆ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದಿದ್ದರೆ, ‘ವಿಶ್ವೇಶ್ವರ ಭಟ್ಟನಿಗೆ ಹೇಳ್ರಿ … ಪಾಪು ಭಾಷಣ ವನ್ನು ಯಥಾವತ್ತು ಒಪ್ಪಿಸುತ್ತಾನೆ’ ಎಂದು ಸ್ನೇಹಿತರು ತಮಾಷೆ ಮಾಡುತ್ತಿದ್ದರು. ಅವರ ಭಾಷಣವನ್ನು ಅಷ್ಟೊಂದು ಸಲ ಕೇಳಿದ್ದೇ ಮತ್ತು ಅವರನ್ನು ಅಷ್ಟು ತನ್ಮಯವಾಗಿ ಅನುಸರಿಸಿದ್ದೆ. ಪಾಟೀಲ ಪುಟ್ಟಪ್ಪನವರು ಹೀಗೆಯೇ ಭಾಷಣ ಆರಂಭಿಸುತ್ತಾರೆ, ಅವರ ಮುಂದಿನ ಮಾತೇನು ಎಂದು ಪ್ರೇಕ್ಷಕರ ಸಾಲಿನಲ್ಲಿ ಕುಳಿತ ನಾವು ಕೆಲವು ಸ್ನೇಹಿತರು ಮೊದಲೇ ಹೇಳುತ್ತಿದ್ದೆವು.

ಅಷ್ಟರಮಟ್ಟಿಗೆ ನಮಗೆ ಅವರ ಮಾತು-ವಿಚಾರ ಬಾಯಿಪಾಠವಾಗಿದ್ದವು. ಪಾಟೀಲ ಪುಟ್ಟಪ್ಪನವರ ಕೆಲವು ಭಾಷಣಗಳು, ಅದರಲ್ಲೂ ವಿಶೇಷವಾಗಿ, ಅವರು ಗಡಿಪ್ರದೇಶಗಳಲ್ಲಿ ಕನ್ನಡ ಶಾಲೆಗಳ ದುಃಸ್ಥಿತಿ, ಕನ್ನಡ-ಮರಾಠಿ ಬಾಂಧವ್ಯ ಮುಂತಾದ ವಿಷಯಗಳ ಬಗ್ಗೆ ಮಾತಾಡಿದರೆ, ನೆರಳು ಪ್ರತಿಗಳಂತೆ ಪುನರಾವರ್ತಿತವಾಗುತ್ತಿದ್ದವು.

ಉದಾಹರಣೆಗೆ, ಪಾಟೀಲ ಪುಟ್ಟಪ್ಪನವರು ಮೆಡೋಜ ಟೇಲರ್ ಹೆಸರನ್ನು ಉಖಿಸುತ್ತಿದ್ದರು. ಮೆಡೋಜ ಟೇಲರ್ ಎಂಬ ಬ್ರಿಟಿಷ್ ಅಧಿಕಾರಿ ಕುದುರೆಯೇರಿ ಕರ್ನಾಟಕದೆಡೆ ಸಂಚಾರಿಸಿದ್ದಾನೆ. ಕನ್ನಡ ಮಾತಾಡುವ ಜನರ ಪ್ರದೇಶದ ವ್ಯಾಪ್ತಿಯನ್ನು ಕುರಿತು ಆತ ವಿವರಣೆ ನೀಡಿ ದ್ದಾನೆ. ರತ್ನಗಿರಿಯ ಕೆಳಗೆ ವಿಜಯದುರ್ಗ ಎಂಬ ಪುಟ್ಟ ಬಂದರು ಇದೆ. ಅದು ಕನ್ನಡ ಮಾತಾಡುವ ಜನರ ಕೊನೆಯ ಸೀಮೆ. ನೀವು ನಿಮ್ಮೆದುರು ಭಾರತದ ನಕಾಶೆ ಈರಿಸಿಕೊಂಡು ಪೆನ್ಸಿಲನ್ನು ವಿಜಯದುರ್ಗದ ಮೇಲಿಡಿ. ಅದು ಮುಂದೆ ಹಾಗೆ ಕೊಪುರದ ಮೇಲೆ ಹೋಗಲಿ, ಅದು ಅಲ್ಲಿಂದ ಉಸ್ಮಾನಾಬಾದ್ ಮೇಲೆ, ಬೀದರದ ಮೇಲೆ ಹೋಗಿ, ನಂತರ ಪೂರ್ವ ಸಹ್ಯಾದ್ರಿಗುಂಟ ಕೆಳಗೆ ಇಳಿದು, ನೀಲಗಿರಿ ಬೆಟ್ಟ ಏರಿ, ವೈನಾಡಿನ ಮೂಲಕ ಕೆಳಗೆ ಇಳಿದು ಚಂದ್ರಗಿರಿ ನದಿಯ ಮೂಲಕ ಅರಬ್ಬೀ ಸಮುದ್ರ ಸೇರಿದರೆ ಅದನ್ನು ಕನ್ನಡ ಮಾತಾಡುವ ಪ್ರದೇಶ ಎಂದು ಹೇಳಬಹುದಿತ್ತು.

ನೂರಾ ಐವತ್ತು ವರ್ಷಗಳ ಹಿಂದೆ ಮೆಡೋಜ ಟೇಲರ್ ಹೇಳಿದ್ದನ್ನು ಅವನ ನಂತರ ಬಂದ ರೈಸ್ ಎಂಬ ಅಧಿಕಾರಿಯ ವಿವರಣೆಯಲ್ಲಿದೆ. ಕಡಪಾ, ಗುಂತಕಲ್ಲು, ಅನಂತಪುರ, ಗುತ್ತಿ, ಕಲ್ಯಾಣದುರ್ಗ, ಹಿಂದೂಪುರ, ಧರ್ಮಾವರ, ಸೇಲಂ, ಕೊಯಮತ್ತೂರು, ಗೋಪಿಚೆಟ್ಟಿಪಾಳ್ಯ, ಈರೋಡು, ಉದಕಮಂಡಲ ಇವೆಲ್ಲ ಕನ್ನಡ ಮಾತಾಡುವ ಪ್ರದೇಶಗಳಾಗಿದ್ದವು. ನೀವು ಬೆಳಗಾವಿಯ ಗಡಿಭಾಗವಾದ ಕಾಗವಾಡಕ್ಕೆ ಬಂದರೆ, ತುರೈವಸ್ತಿ, ಮೈಸಾಳ್, ಮಾಳವಾಡ, ಕಾನವಾಡ, ಕುತವಾಡ, ಧಾವಳಿ, ಗೌರವಾಡ, ಚಿಂಚವಾಡ, ಅರ್ಜುನವಾಡ, ಉಮಾಳ ವಾಡ… ಕನ್ನಡ ಮಾತಾಡುವ ಊರುಗಳಾಗಿದ್ದವು.

ಅನಂತರ ಪಾಟೀಲ ಪುಟ್ಟಪ್ಪನವರು ಮಹಾರಾಷ್ಟ್ರದ ಬಾರ್ಸಿ, ಜತ್ತ, ಅಕ್ಕಲಕೋಟೆ ಎಂದು ಆರಂಭಿಸಿದರೆ, ನಾನು ಅಕ್ಕಪಕ್ಕ ಕುಳಿತವರಿಗೆ ಕೇಳುವ ಹಾಗೆ, ಮುಂದಿನ ಊರುಗಳಾದ ಗಡೆಗಾಂವ್, ದೇವಗಾಂವ್, ಕಂದಲಗಾಂವ್, ಪಿಂಪಲಗಾಂವ್, ಕಂಗಳಗಾಂವ್, ಭಾಂಡಗಾಂವ್, ಮಂಡೆಗಾಂವ್, ಶೇಲಗಾಂವ್, ಗಡೆಗಾಂವ್, ಜಾಮಗಾಂವ್, ಬ್ರಹ್ಮಗಾಂವ್, ಹಿಂಗಂಗಾಂವ್… ಎಂದು ಹೇಳುತ್ತಾ, ನಂತರ ಗತಾಚಿವಾಡಿ, ಪಫಲವಾಡಿ, ಕಾಸರವಾಡಿ, ನಾಗೋಬಾಚಿವಾಡಿ, ವಾಂಗರವಾಡಿ, ಸಾರಂಗವಾಡಿ, ಐನಪುರವಾಡಿ, ಸಾವಂದರ ವಾಡಿ, ತಾವಡಿ, ಗೊಡಸೇವಾಡಿ.. ಇವೆಲ್ಲ ಒಂದು ಕಾಲಕ್ಕೆ ಕನ್ನಡ ಮಾತಾಡುವ ಪ್ರದೇಶಗಳೇ ಆಗಿದ್ದವು ಎಂದು ದನಿಗೂಡಿಸುತ್ತಿದ್ದೆವು.

ಪಾಟೀಲ ಪುಟಪ್ಪನವರ ಬಾಯಿಯಲ್ಲಿ ಈ ಊರುಗಳ ಹೆಸರುಗಳನ್ನು ಕೇಳಿ ಕೇಳಿ ನಮಗೆ ಬಾಯಿಪಾಠವಾಗಿದ್ದವು. ಅಷ್ಟರಮಟ್ಟಿಗೆ ಆ ಎಲ್ಲ
ಹೆಸರುಗಳು ನಮ್ಮ ಮನಸ್ಸಿನ ಉಳಿದುಬಿಟ್ಟಿವೆ. ಹಾಗೆ ಮುಂದುವರಿದು ಪಾಟೀಲ ಪುಟ್ಟಪ್ಪನವರು ಈಗ ಆಂಧ್ರದ ಭಾಗವಾಗಿರುವ ಆದವಾನಿ, ಆಲೂರು, ರಾಯದುರ್ಗ ಇವೆಲ್ಲ ಬೇರೆ ಆಧಿಪತ್ಯಗಳಿಗೆ ಸೇರಿದ್ದರೂ ಕನ್ನಡವಾಗಿಯೇ ಇದ್ದವು ಎಂದು ಹೇಳುತ್ತಿದ್ದರು. ಕರ್ನೂಲ್ ಜಿಲ್ಲೆಗೆ ಸೇರಿರುವ ಆಲೂರು ತಾಲೂಕಿನ ಅನೇಕ ಊರುಗಳು ಕನ್ನಡವೇ ಆಗಿದೆ ಎಂದು ಹೇಳಲಾರಂಭಿಸಿದರೆ, ಹರಿವಾಣ, ಹಾಲಾ ಹರವಿ, ಬದನೇಹಾಳು, ಬೊಮ್ಮನಹಾಳು, ಬೀರಕಲ್ಲು, ಬೆಣ್ಣೆಕಲ್ಲು, ಕರಡಿಗುಡ್ಡ, ಕಲ್ಲುಕುಂಟೆ, ದಿಬ್ಬನದೊಡ್ಡಿ, ತಲ್ಲೂರು,
ಊಳೂರು, ಹುಳೇಬೀಡು, ಮರಕಟ್ಟು, … ಎಂದು ಮುಂದುವರಿಸುತ್ತಿದ್ದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೇನೆಂದರೆ, ಪಾಟೀಲ ಪುಟ್ಟಪ್ಪನವರು ಕನ್ನಡದ ವಿಷಯ ಬಂದಾಗ, ಯಾವ ಊರಿಗೆ ಹೋದರೂ ಈ ಎಲ್ಲ ವಿಷಯಗಳನ್ನು ಸವಿಸ್ತಾರವಾಗಿ ಹೇಳುತ್ತಿದ್ದರು. ಒಮ್ಮೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಪಾಟೀಲ ಪುಟ್ಟಪನವರು ಮಾತಾ ಡುವಾಗ, ಒಬ್ಬ ವ್ಯಕ್ತಿ ಎದ್ದು ನಿಂತು, ‘ಪುಟ್ಟಪ್ಪನವರೇ, ಈ ಊರುಗಳ ಹೆಸರುಗಳನ್ನು ನೀವು ಅನೇಕ ಸಲ ಹೇಳಿದ್ದೀರಿ’ ಎಂದು ಹೇಳಿದಾಗ, ‘ಸ್ವಾಮೀ, ನೀವು ಪಿ.ಬಿ.ಶ್ರೀನಿವಾಸ್ ಅಥವಾ ಲತಾ ಮಂಗೇಶ್ಕರ್ ಹಾಡಿದ ಒಂದು ಹಾಡನ್ನು ಹತ್ತಾರು ಸಲ ಕೇಳಿಲ್ಲವೇ? ನಾನು ಕನ್ನಡದ ಬಗ್ಗೆ ಹೇಳಿದ್ದನ್ನೇ ನೂರು ಸಲ ಹೇಳುತ್ತೇನೆ. ನೀವು ಕೇಳಬೇಕು’ ಎಂದು ಖಡಾಖಡಿ ಹೇಳಿದ್ದರು.

ಪ್ರಯಾಣಕ್ಕೊಂದು ಡಿಜಿಟಲ್ ಕಾರ್ಡ್

ಮುಂಬಯಿ ನಗರ ಸಾರಿಗೆ ನಿಗಮದ ಎಲ್ಲ ಬಸ್ಸುಗಳಲ್ಲಿ ಟೈಪ್ -ಇನ್ ಮತ್ತು ಟೈಪ್-ಔಟ್ ಎಂಬ ಟಿಕೆಟಿಂಗ್ ವ್ಯವಸ್ಥೆ ಶುರುವಾಗಿದೆ. ಬಸ್ಸಿನ ಮುಂಭಾಗದ ಬಾಗಿಲಿನಲ್ಲಿ ಹತ್ತುವವರನ್ನು ಚಾಲಕ ಗಮನಿಸುತ್ತಿರುತ್ತಾನೆ. ಅಲ್ಲಿ ಪ್ರಯಾಣಿಕರು ಡಿಜಿಟಲ್ ಕಾರ್ಡನ್ನು ಸ್ಪರ್ಶಿಸಿ ಬಸ್ಸಿನೊಳಕ್ಕೆ ಹತ್ತಬೇಕು. ಹಾಗೆಯೇ ಬಸ್ಸಿನಿಂದ ಇಳಿಯುವಾಗಲೂ ಡಿಜಿಟಲ್ ಕಾರ್ಡ್ ರೀಡರನ್ನು ಸ್ಪರ್ಶಿಸಿ ಇಳಿಯಬೇಕು. ‘ಚಲೋ’ ಎಂಬ ಹೆಸರಿನ ಆಪ್‌ನಲ್ಲಿ ಇವೆಲ್ಲವೂ ದಾಖಲಾಗುತ್ತದೆ.

ಒಂದು ವೇಳೆ ಇಳಿಯುವಾಗ ಪ್ರಯಾಣಿಕ ಡಿಜಿಟಲ್ ರೀಡರ್ ಸ್ಪರ್ಶಿಸುವುದನ್ನು ಮರೆತಲ್ಲಿ ಆ ಬಸ್ ಪ್ರಯಾಣದ ಅತ್ಯಧಿಕ ಬಸ್ ದರ ಆ ಪ್ರಯಾಣಿಕನ ಕಾರ್ಡಿನಲ್ಲಿ ಕಡಿತಗೊಳ್ಳುತ್ತದೆ. ಹೀಗಾಗಿ ಬಸ್ಸು ಹತ್ತುವಾಗ ಮತ್ತು ಇಳಿಯುವಾಗ ಮುಂಬೈ ಪ್ರಯಾಣಿಕರಿಗೆ  ಸಂಪೂರ್ಣ ವಾಗಿ ಡಿಜಿಟಲ್ ವ್ಯವಹಾರದ ಅನುಭವವಾಗುತ್ತದೆ. ಇತ್ತೀಚೆಗಷ್ಟೆ ಈ ವ್ಯವಸ್ಥೆ ಹತ್ತು ಬಸ್ ಮಾರ್ಗಗಳಲ್ಲಿ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಎಲ್ಲ ನಾನೂರ ಐವತ್ತಕ್ಕೂ ಹೆಚ್ಚು ಮಾರ್ಗಗಳಿಗೆ ವಿಸ್ತರಣೆಯಾಗಲಿದೆ. ಇದು ಮುಂದುವರಿದು ಕಂಡಕ್ಟರನ ಉದ್ಯೋಗ ವನ್ನು ಸಂಪೂರ್ಣವಾಗಿ ತೆಗೆದುಹಾಕಲಿದೆ. ಅನೇಕ ರಾಜ್ಯಗಳಲ್ಲಿ ಕಂಡಕ್ಟರ್-ರಹಿತ ಬಸ್ ಸೇವೆ ಕುರಿತಾಗಿ ಸುದೀರ್ಘ ಸಮಯದಿಂದ ಚಿಂತನೆ ನಡೆಯುತ್ತಲೇ ಇದೆ. ಎಲ್ಲ ಬಸ್ಸುಗಳಲ್ಲಿ ಅಲ್ಲದಿದ್ದರೂ ತಡೆರಹಿತ ಬಸ್ಸುಗಳಲ್ಲಿ ಮತ್ತು ಪಾಯಿಂಟು ಟು ಪಾಯಿಂಟ್ ಬಸ್ಸುಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬಹುದು. ತುರ್ತು ಸಂದರ್ಭ ಬಂದರೆ ಪ್ರಯಾಣಿಕ ಬಸ್ಸಿನ ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿರುವ ಇರುವ ಗಂಟೆ ಹೊಡೆದು ಬಸ್ಸನ್ನು ನಿಲ್ಲಿಸಬಹುದು.

ಆಧುನಿಕ ತಂತ್ರಜ್ಞಾನ ಏನೇ ಇರಲಿ, ಒಂದೊಮ್ಮೆ ವಾತಾವರಣದ ವೈಪರೀತ್ಯಗಳಿಂದಾಗಿ ಕಾರ್ಡ್ ರೀಡರ್ ಕೆಲಸ ಮಾಡದೇ ಹೋದರೆ ಏನಾದೀತು? ಅಂಥ ಸಂದರ್ಭ ಬಂದರೆ ಬಸ್ ಸೇವೆ ನಿಂತು ಬಿಡುವುದೇ, ಅಥವಾ ಕಂಡಕ್ಟರ್ ಸೇವೆ ಮತ್ತೆ ಜಾರಿಗೆ ಬಂದೀತೇ? ಅಥವಾ ಡ್ರೈವರನೇ ಬಸ್ಸನ್ನು ಒಂದೆಡೆ ನಿಲ್ಲಿಸಿ ಎಲ್ಲರಿಂದ ಹಣ ಸಂಗ್ರಹ ಮಾಡಿ ನಂತರ ಬಸ್ ಓಡಿಸುವ ಅನಿವಾರ್ಯ ಎದುರಾಗಬಹುದೇ? ಗೊತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಆ ಆಪ್‌ನಲ್ಲಿ ಪರಿಹಾರವಿದ್ದೀತು.

ಕಂಪ್ಯೂಟರ್ ಆಯ್ಕೆ ಪ್ರಕ್ರಿಯೆ
ಇತ್ತೀಚೆಗೆ ‘ದೈನಿಕ್ ಭಾಸ್ಕರ್’ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಂಶದೆಡೆಗೆ ನಿಮ್ಮ ಗಮನವನ್ನು ಸೆಳೆಯುತ್ತೇನೆ. ಹಾಗೆ ಸುಮ್ಮನೆ
ಕಲ್ಪನೆ ಮಾಡಿಕೊಳ್ಳಿ. ಶ್ರೀಮಂತರು ತಮ್ಮ ಮಕ್ಕಳನ್ನು ಭಾರೀ ಶುಲ್ಕ ತೆತ್ತು ಅಮೆರಿಕದ ಪ್ರತಿಷ್ಠಿತ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಆ
ಮಕ್ಕಳು ಕೆಟ್ಟ ಚಟಕ್ಕೆ ಬಿದ್ದು ಪರೀಕ್ಷೆಯಲ್ಲಿ ‘ಬಿ’ ಗ್ರೇಡ್ ಪಡೆಯುತ್ತಾರೆ. ಅದೇ ವೇಳೆ ಸಿರಿಯಾ ಅಥವಾ ಉಕ್ರೇನಿನ ಒಂದು ಸಾಧಾರಣ ಪಬ್ಲಿಕ್ ಶಾಲೆಯಲ್ಲಿ ಮಧ್ಯಮವರ್ಗದ ಅಥವಾ ಬಡವನ ಮಗನೊಬ್ಬ ದಾಖಲಾಗಿ ಓದು ಮುಂದುವರಿಸುತ್ತಾನೆ.

ಗ್ರಾಜುಯೇಶನ್ ತನಕದ ಓದಿನ ಖರ್ಚಿಗೆ ದುಡ್ಡು ಹೊಂದಿಸಲು ಅಲ್ಲಿ ಇಲ್ಲಿ ದುಡಿಮೆ ಮಾಡುತ್ತಾನೆ. ಆತನಿಗೂ ‘ಬಿ’ ಗ್ರೇಡ್ ಸಿಗುತ್ತದೆ. ನಂತರ ಆ ಶ್ರೀಮಂತನ ಮಗ ಮತ್ತು ಈ ಬಡವನ ಮಗ ಇಬ್ಬರೂ ಯಾವುದೋ ಒಂದು ಹೆಸರಾಂತ ಕಂಪನಿಗೆ ಸೇರಿಕೊಳ್ಳಲು ಅರ್ಜಿ ಹಾಕುತ್ತಾರೆ. ಡೆಲಾಯ್ಟ, ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಅಥವಾ ಮಾರ್ಗನ್ ಸ್ಟಾನ್ಲಿಯಲ್ಲಿ ನೌಕರಿಗೆ ಅರ್ಜಿ ಗುಜರಾಯಿಸಿ ಸಂದರ್ಶನಕ್ಕೆ ಹಾಜರಾಗುತ್ತಾರೆ.

ಈ ಕಂಪನಿಗಳಲ್ಲಿ ಸ್ಥಾಪಿತವಾಗಿರುವ ವಿಶೇಷ ಸಾಫ್ಟ್ ವೇರ್ ಶ್ರೀಮಂತನ ಮಗನ ಬದಲು ಬಡವನ ಮಗನನ್ನು ಕೆಲಸಕ್ಕೆ ಕರೆಯುತ್ತದೆ. ಏಕೆಂದರೆ ಶ್ರೀಮಂತನ ಮಗನ ಫಲಿತಾಂಶದ ರಿಪೋರ್ಟಿಗಿಂತ ಬಡವನ ಮಗನ ರಿಪೋರ್ಟಿಗೆ ಹೆಚ್ಚಿನ ಮಹತ್ವವಿರುತ್ತದೆ. ಜಾಗತಿಕ ಕಂಪನಿಗಳು ತಮ್ಮ ಕಂಪನಿಯ ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡಿಕೊಳ್ಳಲು ಅತ್ಯಾಧುನಿಕವಾದ ರಿಕ್ರುಟ್‌ಮೆಂಟ್ ಅಲ್ಗಾರಿದಂಗಳನ್ನು ಅಳವಡಿಸಿಕೊಂಡಿವೆ. ಅತ್ಯುತ್ತಮ ಅಭ್ಯರ್ಥಿಗಳ ಆಯ್ಕೆಯಲ್ಲಿ ಈ ಪ್ರಯೋಗ ಯಶಸ್ವಿ ಎನಿಸಿದೆ ಕೂಡ.

ಯಾವುದೋ ಖ್ಯಾತವಲ್ಲದ ಯುನಿವರ್ಸಿಟಿಯಲ್ಲಿ ‘ಬಿ’ ಗ್ರೇಡ್ ತೆಗೆದುಕೊಳ್ಳುವುದಕ್ಕಿಂತ ಸುಲಭವಾಗಿ ಖ್ಯಾತನಾಮ ಯುನಿವರ್ಸಿಟಿಗಳಲ್ಲಿ ‘ಎ’ ಗ್ರೇಡ್ ಪಡೆಯಬಹುದು ಎಂಬುದು ಸಾಬೀತಾಗಿದೆ. ಸಂಶೋಧನೆಗಳ ಪ್ರಕಾರ, ಸಣ್ಣ ಯುನಿವರ್ಸಿಟಿಗಳಲ್ಲಿ ಓದಿರುವವರು ಅನೇಕ ಪ್ರತಿಕೂಲ ಸಮಸ್ಯೆಗಳನ್ನು ಎದುರಿಸಿಯೂ ಪರೀಕ್ಷೆಯಲ್ಲಿ ಉತ್ತಮ ಪ್ರದರ್ಶನ ಕೊಟ್ಟಿರುತ್ತಾರೆ. ಇದು ಸಣ್ಣಮಾತಲ್ಲ. ಈಚೆಗೆ ರಿಕ್ರುಟ್ಮೆಂಟ್ ಗಳಲ್ಲಿ ಸಾಫ್ಟವೇರ್ ಬಳಕೆ ಸಾಮಾನ್ಯವಾಗಿಬಿಟ್ಟಿದೆ.

ವಿಶೇಷವಾಗಿ ಅಮೆರಿಕದಲ್ಲಿ ಈ ತರಹದ ಸಾಫ್ಟ್ ವೇರ್ ಎಲ್ಲ ಕಡೆಗಳಲ್ಲಿ ಬಳಕೆಯಲ್ಲಿದೆ. ಒಂದು ಅಧ್ಯಯನದ ಪ್ರಕಾರ ಫಾರ್ಚೂನ್-೫೦೦ ಕಂಪನಿಗಳ ಪೈಕಿ ಶೇ.೯೯ ಕಂಪನಿಗಳು ಪ್ರತಿಭೆ ಇರುವವರನ್ನೇ ಆಯ್ಕೆ ಮಾಡುತ್ತವೆ ಮತ್ತು ಆ ಪ್ರಕ್ರಿಯೆಯಲ್ಲಿ
ಬಳಸಲಾಗುವ ಸಾಫ್ಟ್ ವೇರ್ ಮೇಲೆ ಆ ಕಂಪನಿಗಳಿಗೆ ಸಂಪೂರ್ಣ ವಿಶ್ವಾಸವಿದೆ. ಅಮೆರಿಕದ ಕಂಪನಿಗಳಲ್ಲಿ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಎಚ್. ಆರ್. ಇಲಾಖೆ ಪ್ರಿಡಿಕ್ಟಿವ್ ಅಲ್ಗಾರಿದಂ ಎಂಬ ಸಾಫ್ಟ್ ವೇರನ್ನು ಬಳಕೆ ಮಾಡುತ್ತಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನೀವು ಯಾವುದೋ ಸಣ್ಣ ಯುನಿವರ್ಸಿಟಿಯಲ್ಲಿ ಓದಿದ್ದೀರಿ ಅಥವಾ ಯಾವುದೋ ಎನ್.ಜಿ.ಒ. ಕೃಪೆಯಲ್ಲಿ ನಡೆಯುವ ನಿರಾಶ್ರಿತರ ಕ್ಯಾಂಪಿನಲ್ಲಿ ಓದಿದ್ದೀರಿ ಅಥವಾ ಸರಕಾರದ ಪಡಿತರ ಧಾನ್ಯದ ಫಲಾನುಭವಿಯಾಗಿದ್ದೀರಿ ಎಂದು ಕೀಳರಿಮೆ ಪಡುವುದಲ್ಲ. ನೀವು ಹೊಚ್ಚ ಹೊಸ ಕಾರುಗಳ ಬ್ರಾಂಡ್ ಅಥವಾ ಬಟ್ಟೆಗಳ ಬ್ರಾಂಡ್ ತಿಳಿದಿಲ್ಲದ ವ್ಯಕ್ತಿಯಾಗಿರಬಹುದು. ದೊಡ್ಡ
ಕಂಪನಿಯ ಆಯಕಟ್ಟಿನ ಜಾಗದಲ್ಲಿ ಉದ್ಯೋಗ ಗಿಟ್ಟಿಸುವುದಕ್ಕೆ ಅವ್ಯಾವವೂ ಅಡೆತಡೆಯಾಗುವುದಿಲ್ಲ.

ನೀವು ಅತ್ಯಂತ ಬಡತನದಲ್ಲಿದ್ದು, ಪ್ರತಿಕೂಲ ಸನ್ನಿವೇಶದಲ್ಲಿ ಓದಿ, ನಿಮ್ಮ ಪರಿಶ್ರಮ ಮತ್ತು ಬುದ್ಧಿವಂತಿಕೆಯನ್ನು ಪೂರ್ಣಪ್ರಮಾಣದಲ್ಲಿ ಬಳಸಿ ‘ಬಿ’ ಗ್ರೇಡ್ ಪಡೆದಿದ್ದೀರಲ್ಲ, ಅದು ನಿಮ್ಮ ದೊಡ್ಡ ಸಾಧನೆ. ಹಾಗಿದ್ದರೂ ನೀವೆದರೂ ‘ಎ’ ಗ್ರೇಡ್ ಪಡೆದಿದ್ದರೆ ಅದು ಅತ್ಯುತ್ತಮ. ಇವೆಲ್ಲವನ್ನೂ ಹೊಸ ಕಂಪ್ಯೂಟರ್ ಸಾಫ್ಟ್ ವೇರ್ ಅಲ್ಗಾರಿದಂ ಕಂಡುಹಿಡಿಯುತ್ತದೆ ಮತ್ತು ಅದನ್ನು ಮೋಸಗೊಳಿಸುವುದು ಸಾಧ್ಯವಾ ಗದು. ಅಲ್ಲಿ ಉದ್ಯೋಗಾರ್ಥಿಗಳ ಕ್ಷಮತೆಯ ಮೌಲ್ಯಮಾಪನ ವಿಶೇಷ ರೀತಿಯಲ್ಲಿ ಮಾಡಲಾಗುತ್ತದೆ. ಈ ಅಭ್ಯರ್ಥಿ ತುಂಬಾ
ಪರಿಶ್ರಮಿ, ಪ್ರತಿಭಾವಂತ ಎಂದು ಯಾರಾದರೂ ದೊಡ್ಡ ವ್ಯಕ್ತಿಯಿಂದ ಶಿಫಾರಸು ತಂದರೆ ಕಂಪ್ಯೂಟರ್ ಅದನ್ನು ಒಪ್ಪಿಕೊಳ್ಳುವುದಿಲ್ಲ. ಯಾವುದೇ ಶಿಫಾರಸು ಇಲ್ಲದೇ ಬಂದವರಿಗೆ ಹೆಚ್ಚಿನ ಸ್ಕೋರ್ ನೀಡುತ್ತದೆ.

ಪರಿಶ್ರಮಕ್ಕೆ ಪರ್ಯಾಯ ಇನ್ನೊಂದಿಲ್ಲ. ನೀವು ಪುಟ್ಟ ಹುಡುಗನಾಗಿರಿ ಅಥವಾ ವಯಸ್ಕರೇ ಆಗಿರಿ, ನೀವು ಬದುಕಿನಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸಿ ಸಮರ್ಥವಾಗಿ ಸೆಟೆದು ನಿಂತು ಗುರಿ ತಲುಪಿದ್ದೀರಿ ಎಂದರೆ ಸಂದರ್ಶನಗಳಲ್ಲಿ ನಿಮಗೆ ಬೇರೆಯವರಿಗಿಂತ ಹೆಚ್ಚಿನ ಮೌಲ್ಯ ಪ್ರಾಪ್ತವಾಗುತ್ತದೆ.