Friday, 15th November 2024

ಭ್ರಷ್ಟರನ್ನು ಬೆಂಬಲಿಸಿದರೆ ಭ್ರಷ್ಟಾಚಾರವನ್ನು ಪೋಷಿಸಿದಂತೆ

ಅವಲೋಕನ

ಚಂದ್ರಶೇಖರ ಬೇರಿಕೆ

ಅದು ಫೆಬ್ರವರಿ 8, 2021ರ ಬೆಳಗ್ಗಿನ ಸಮಯ. ದೇವನಹಳ್ಳಿಯ ಪ್ರೆಸ್ಟಿಜ್ ಗಾಲ ಶೈರ್ ಕ್ಲಬ್ ಎಂಬ ಹೆಸರಿನ ರೆಸಾರ್ಟ್ ಎದುರು ಸುಮಾರು 200ಕ್ಕೂ ಹೆಚ್ಚಿನ ಕಾರುಗಳೊಂದಿಗೆ ಮುಖಂಡರು ಮತ್ತು ದೊಡ್ಡ ಸಂಖ್ಯೆಯ ಜನರು ತಮ್ಮ ನೆಚ್ಚಿನ ನಾಯಕಿಯ ಬರುವಿಕೆಗಾಗಿ ಬಹಳ ಕಾತರದಿಂದ ಮತ್ತು ಕುತೂಹಲದಿಂದ ಕಣ್ಣು, ಬಾಯಿ ಬಿಟ್ಟುಕೊಂಡು ಕಾಯುತ್ತಿರುತ್ತಾರೆ.

ಅಷ್ಟರ ಒಬ್ಬಳು ಮಹಿಳೆ ಆ ಹೋಟೆಲ್‌ನಿಂದ ಹೊರಬರುತ್ತಾಳೆ. ದೊಡ್ಡ ಮಟ್ಟದ ಜಯಘೋಷ ಮೊಳಗುತ್ತದೆ. ಹರ್ಷೋದ್ಗಾರ  ಗಳು ಮುಗಿಲು ಮುಟ್ಟುತ್ತದೆ. ಕುಂಬಳಕಾಯಿ ಹೊಡೆಯುತ್ತಾರೆ. ಆ ಮಹಿಳೆ ಅಲ್ಲಿ ಸೇರಿದ್ದ ಗುಂಪಿನತ್ತ ಕೈಬೀಸಿ, ನಮಸ್ಕರಿಸಿ ಖಾಸಗಿ ಎಸ್ಕಾರ್ಟ್ ನೊಂದಿಗಿನ ಐಷಾರಾಮಿ ಕಾರು ಏರಿ ಕುಳಿತುಕೊಳ್ಳುತ್ತಾಳೆ. ಆ ಕಾರಿನ ಮುಂದೆ ಒಂದು ರಾಜಕೀಯ ಪಕ್ಷದ ಬಾವುಟ ಹಾರಾಡುತ್ತಿರುತ್ತದೆ. ಪರಿಸ್ಥಿತಿ ನಿಯಂತ್ರಿಸಲು ಒಂದಷ್ಟು ಪೊಲೀಸರು ನಿಯೋಜಿತರಾಗಿರುತ್ತಾರೆ.

ನೋಡ ನೋಡುತ್ತಿದ್ದಂತೆ ಆ ಕಾರು ಮುಂದಕ್ಕೆ ಚಲಿಸುತ್ತದೆ. ಆ ಕಾರಿನ ಹಿಂದೆ ಮುಂದೆ ನೂರಾರು ವಾಹನಗಳು ಜತೆಯಾಗಿ
ಸಾಗುತ್ತವೆ. ಕಾರಿನ ಮೇಲೆ ಹೂವಿನ ಸುರಿಮಳೆಯಾಗುತ್ತದೆ. ಆ ಮಹಿಳೆಯನ್ನೊಳಗೊಂಡ ಕಾರು ಅಪಾರ ಅಭಿಮಾ ನಿಗಳು
ಮತ್ತು ಬೆಂಬಲಿಗರ ಕಾರುಗಳೊಂದಿಗೆ ದೇವನಹಳ್ಳಿಯಿಂದ ಹೊರಟು ಯಲಹಂಕ, ಹೆಬ್ಬಾಳ, ಟಿನ್ ಫ್ಯಾಕ್ಟರಿ, ಸಿಲ್ಕ್ ಬೋರ್ಡ್ ಜಂಕ್ಷನ್, ಹೊಸೂರು ರಸ್ತೆ, ಅತ್ತಿಬೆಲೆ ಮಾರ್ಗವಾಗಿ ಮೆರವಣಿಗೆ ರೂಪದಲ್ಲಿ ತಮಿಳುನಾಡು ಕಡೆಗೆ ಪ್ರಯಾಣ ಬೆಳೆಸುತ್ತದೆ. ಆ ಕಾರು ತಮಿಳುನಾಡು ಗಡಿ ದಾಟುತ್ತಿದ್ದಂತೆ ಆ ಕಾರಿಗೆ ಭದ್ರತೆ ಒದಗಿಸಿದ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪೊಲೀಸರು ನಿಟ್ಟುಸಿರು ಬಿಟ್ಟು ವಾಪಾಸಾಗುತ್ತಾರೆ.

ಇದು ದೇಶದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ ಸಾಧಕನಿಗೆ ಅಭಿನಂದನಾ ಮೆರವಣಿಗೆ ಯಾಗಿರಲಿಲ್ಲ.
ಯಾವುದೋ ಪ್ರಕೃತಿ ವಿಕೋಪಕ್ಕೆ ಒಳಗಾದ ವ್ಯಕ್ತಿಗಳನ್ನು ರಕ್ಷಿಸಿ ಸಾಹಸ ಮೆರೆದ ವ್ಯಕ್ತಿಗೆ ಕೃತಜ್ಞತೆ ಸಮರ್ಪಣಾ ಮೆರವಣಿಗೆ ಯೂ ಆಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರನ ಅಂತಿಮ ಯಾತ್ರೆಯಾಗಿರಲಿಲ್ಲ. ಯುದ್ಧ ಭೂಮಿಯಲ್ಲಿ ಹೋರಾಡಿ ದೇಶಕ್ಕಾಗಿ ಮಡಿದ ಹುತಾತ್ಮ ಸೈನಿಕನ ಯಾತ್ರೆಯೂ ಆಗಿರಲಿಲ್ಲ.

ಅಥವಾ ಯಾವುದೋ ಸಿನಿಮಾ ಚಿತ್ರೀಕರಣವಂತೂ ಅಲ್ಲವೇ ಅಲ್ಲ. ಇದ್ಯಾವುದೂ ಅಲ್ಲವೆಂದ ಮೇಲೆ ಇನ್ನೇನಾಗಿರಬಹುದು?. ಹೌದು, ಇದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ 4 ವರ್ಷಗಳ ಜೈಲುವಾಸ ಅನುಭವಿಸಿ ಅಲ್ಲಿಂದ ಬಿಡುಗಡೆ ಹೊಂದಿ ಹೊರ ಹೋದ ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿತಗೊಂಡಿರುವ ತಮಿಳು ನಾಡಿನ ಚಿನ್ನಮ್ಮ ವಿ.ಕೆ.ಶಶಿಕಲಾ ನಟರಾಜನ್ ಅವರನ್ನು ತಮಿಳುನಾಡಿಗೆ ಬರಮಾಡಿಕೊಂಡ ಅದ್ಧೂರಿ ಸ್ವಾಗತ ಕಾರ್ಯಕ್ರಮ!

ಜೈಲಿಗೆ ಹೋದವರಿಗೇಕೆ ಈ ಆಡಂಬರದ ಸ್ವಾಗತ. ನಮ್ಮ ಸಮಾಜದಲ್ಲಿ ತಪ್ಪು ಬದಲಾವಣೆಗಳಾಗಿವೆ. ಇವತ್ತು ನಾವಿರುವ
ಸಮಾಜ ಬರೀ ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವಂಥ ಸಮಾಜ. ಈ ಸಮಾಜವನ್ನು ಬದಲಾಯಿಸಿ ಪ್ರಾಮಾಣಿಕರಿಗೆ ಬೆಲೆ ಕೊಡುವಂಥ ಮತ್ತು ತಪ್ಪು ಮಾಡಿದವರನ್ನು ದೂರ ಇಡುವಂಥ ಸಮಾಜವನ್ನು ಕಟ್ಟಬೇಕು. ತಪ್ಪು ಮಾಡಿದಂತವರು ಜೈಲಿನಿಂದ ಬರುವಾಗ ಇಂತಹ ಸಂಭ್ರಮದ ಸ್ವಾಗತ ಕೊಟ್ಟು ನಮ್ಮ ಸಮಾಜಕ್ಕೆ ಮತ್ತು ಯುವಕರಿಗೆ ಯಾವ ಸಂದೇಶವನ್ನು ನಾವು ಕೊಡುತ್ತಾ ಇದ್ದೇವೆ? ಸಮಾಜದಲ್ಲಿ ಕೆಲವು ಮೌಲ್ಯ ಗಳಿರಬೇಕು.

ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ತಿಳಿದುಕೊಳ್ಳುವಂಥ ಸಮಾಜವನ್ನು ನಾವು ನಿರ್ಮಿಸಬೇಕು. ಆವಾಗ ಸಮಾಜದಲ್ಲಿ ಮೌಲ್ಯಕ್ಕೆ ಬೆಲೆ ಇರುತ್ತದೆ. ಇಲ್ಲದಿದ್ದಲ್ಲಿ ಶ್ರೀಮಂತಿಕೆ ಮತ್ತು ಅಽಕಾರಕ್ಕೆ ಮಾತ್ರ ಬೆಲೆ ಇರುತ್ತದೆ. ಅದನ್ನು ಬದಲಾಯಿಸುವ ಪ್ರಯತ್ನವಾಗಬೇಕು. ಯಾರಿಗೆ ಗೌರವ ಕೊಡಬೇಕು ಅವರಿಗೆ ಗೌರವ ಕೊಡಬೇಕು. ಯಾರಿಗೆ ಗೌರವ ಸಲ್ಲಬಾರದು ಅಂತವರನ್ನು ಗೌರವದಿಂದ ದೂರವಿಡಬೇಕು’. ಇದು ಅಕ್ರಮ ಸಂಪತ್ತು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ್ದ ಅದ್ಧೂರಿಯ ಸ್ವಾಗತದ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರ ಬೇಸರದ ನುಡಿಗಳು.

ನಮ್ಮಲ್ಲಿ ಪ್ರಾಮಾಣಿಕ ಜೀವನ ನಡೆಸುವವರಿಗೆ ಮನ್ನಣೆ ದೊರೆಯುವುದಕ್ಕಿಂತಲೂ ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದವರು ಸಮಾಜದಲ್ಲಿ ಇನ್ನಷ್ಟು ಗಟ್ಟಿಯಾಗಿ ನೆಲೆಯೂರುತ್ತಾರೆ. ಅವರ ಬಗ್ಗೆ ಮೊದಲಿಗಿಂತಲೂ ಹೆಚ್ಚಿನ ಅನು ಕಂಪ ಮೂಡುತ್ತದೆ. ನಮ್ಮ ಸಮಾಜದಲ್ಲಿ ಜೈಲಿಗೆ ಹೋಗುವ ಸಂದರ್ಭದಲ್ಲಿ ಆತ ಹೊಂದಿರುವ ಜನ ಬೆಂಬಲಕ್ಕಿಂತಲೂ ಹೆಚ್ಚಾಗಿ ಆತ ಹೊರಬರುವ ಸಂದರ್ಭದಲ್ಲಿ ಜನ ಬೆಂಬಲ ವ್ಯಕ್ತವಾಗುತ್ತದೆ. ಜೈಲು ಶಿಕ್ಷೆ ಅನುಭವಿಸಿದವರು ಇನ್ನಷ್ಟು ಪ್ರಬಲ ವಾಗಿ ಬೆಳೆದು, ಗಟ್ಟಿಯಾಗಿ ನೆಲೆಯೂರಿ ಉನ್ನತ ಸ್ಥಾನಮಾನವನ್ನು ಅಲಂಕರಿಸಿ ಅಧಿಕಾರವನ್ನು ಅನುಭವಿಸುತ್ತಾರೆ ಎನ್ನುವು ದಕ್ಕೆ ಬಿ.ಎಸ್. ಯಡಿಯೂರಪ್ಪ, ಡಿ.ಕೆ. ಶಿವಕುಮಾರ್, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಮುಂತಾದವರು ಉದಾಹರಣೆಯಷ್ಟೇ.

ಅದಕ್ಕೆ ಕಾರಣ ನಮ್ಮ ಸಮಾಜದಲ್ಲಿ ಭ್ರಷ್ಟಾಚಾರಿಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ. ಇದಕ್ಕೂ ಮಿಗಿಲಾಗಿ ಭ್ರಷ್ಟಾಚಾರ
ಪ್ರಕರಣದಲ್ಲಿ ಜೈಲು ಸೇರಿರುವ ವ್ಯಕ್ತಿ ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸುತ್ತಾನೆ ಎಂದರೆ ಪ್ರಜಾಪ್ರಭುತ್ವದ ವ್ಯವಸ್ಥೆಗಳು ಮತ್ತು ಸಾಮಾಜಿಕ ಮೌಲ್ಯಗಳು ಎಷ್ಟು ಅಧೋಗತಿಗೆ ಸಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು.
ಕೆಲವರಿಗೆ ಜೈಲಿನಿಂದ ಬಿಡುಗಡೆ ಎಂದರೆ ಪೊಲಿಟಿಕಲ್ ಸ್ಟಂಟ್ ತೋರಿಸುವ ಒಂದು ವೇದಿಕೆಯಾಗಿಯೇ ಮಾರ್ಪಾಡಾಗುತ್ತದೆ.

ಅಂತವರು ಸಾಗುವ ದಾರಿಯುದ್ದಕ್ಕೂ ಅಪಾರ ಜನಸ್ತೋಮ, ಸ್ವಾಗತ ಕೋರುವ ಬ್ಯಾನರ್‌ಗಳು, ಫ್ಯಾಕ್ಸ್ ಗಳು ಮತ್ತು ಕಟೌಟ್ ‌ಗಳು, ಶುಭ ಕೋರಿಕೆಯ ಪತ್ರಿಕಾ ಜಾಹೀರಾತುಗಳು ಕಂಡು ಬರುತ್ತವೆ. ವಿಶೇಷ ರೀತಿಯಲ್ಲಿ ಸ್ವಾಗತಿಸಲು ಕ್ವಿಂಟಾಲ್ ತೂಕದ ಸೇಬಿನ ಹಾರಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ಹಾಕಿದ್ದ ಉದಾಹರಣೆಯೂ ಉಂಟು. ವ್ಯಕ್ತಿಗೆ ಮತ್ತು ವಾಹನಗಳಿಗೆ ಪುಷ್ಪವೃಷ್ಠಿ, ವೈಭವೀಕರಣದ ಜಯಘೋಷಗಳೊಂದಿಗೆ ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಸಂಭ್ರಮಿಸುವುದನ್ನು ನೋಡಿದಾಗ ನಮ್ಮ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ ಹಾಗೂ ನಾವು ನಿಜವಾಗಿಯೂ ಪ್ರಬುದ್ಧ ನಾಗರಿಕ ಸಮಾಜದಲ್ಲಿದ್ದೇವೆಯೇ ಎಂಬ ಬಗ್ಗೆ
ಅನುಮಾನ ಮೂಡುತ್ತದೆ.

ಭ್ರಷ್ಟಾಚಾರಿ ನಾಯಕರನ್ನು ಸ್ವಾಗತಿಸುವುದಕ್ಕಾಗಿ ಕೆಳಹಂತದ ರಾಜಕೀಯ ನಾಯಕರಿಗೆ ಕೆಲವೊಂದು ಟಾಸ್ಕ್‌ಗಳನ್ನು ಕೊಡಲಾಗುತ್ತದೆ. ಅವರು ಯಾವ ರೀತಿಯದರೂ ದೊಡ್ಡ ಸಂಖ್ಯೆಯ ಜನ ಸೇರಿಸಿ ಜನಬಲವನ್ನು ಪ್ರದರ್ಶಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಅಲ್ಲಿ ಸೇರಿದವರ ತಲೆಗಿಷ್ಟು ಹಣ, ಊಟದ ವ್ಯವಸ್ಥೆ, ವಾಹನ ಸೌಕರ್ಯಗಳ ವ್ಯವಸ್ಥೆ ಯಾಗುತ್ತದೆ. ಈ ಕೆಲಸವನ್ನು ನಿಷ್ಠೆಯಿಂದ ಮಾಡಿದವರಿಗೆ ಪಕ್ಷದಲ್ಲಿ ಒಳ್ಳೆಯ ಅವಕಾಶಗಳು ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವರನ್ನು ಮೆಚ್ಚಿಸಿ ಒಲಿಸಿಕೊಳ್ಳಲು ಕೆಳಹಂತದ ನಾಯಕರು ತನಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.

ಮೊದಲೆ ಶಿಕ್ಷೆಗೆ ಒಳಗಾದವರನ್ನು ಸಮಾಜ ಗೌರವದಿಂದ ನೋಡುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ತದ್ವಿರುದ್ಧವಾಗಿದೆ’ ಎನ್ನುತ್ತಾರೆ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು. ಶಿಕ್ಷೆಗೆ ಒಳಗಾದ ಯಾವುದೇ ವ್ಯಕ್ತಿ ಬಿಡುಗಡೆಯಾಗಿ ಹೊರಗೆ ಬರುವ ಸಂದರ್ಭದಲ್ಲಿ ಅವರಿಗೆ ಈ ರಿಯ ಅದ್ಧೂರಿಯ ಸ್ವಾಗತ ಕೋರಿದರೆ ನಾವು ಈ ನೆಲದ ಕಾನೂನಿಗೆ ಅಗೌರವ ಸೂಚಿಸಿದಂತೆಯೇ. ಜೈಲು ಶಿಕ್ಷೆ ಮುಗಿಸಿ ಹೊರಬರುವ ಸಂದರ್ಭದಲ್ಲಿ ಆಯೋಜಿಸುವ ಸ್ವಾಗತ ಕಾರ್ಯಕ್ರಮ ಗಳಿಂದ ಸಾರ್ವಜನಿಕರಿಗೆ ಆಗುವ ತೊಂದರೆಗಳ ಬಗ್ಗೆ ಯಾರೂ ಯೋಚಿಸುವುದಿಲ್ಲ.

ತುರ್ತು ಸೇವೆಗಳಿಗೆ ಆಗುವ ಸಮಸ್ಯೆಗಳ ಬಗ್ಗೆ ಎಂದೂ ಚಿಂತಿಸುವುದಿಲ್ಲ. ಅವರು ಸಾಗಿ ಬಂದ ಮಾರ್ಗದಲ್ಲಿ ಕಿಲೋ ಮೀಟರ್ ದೂರ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತು ಸಾರ್ವಜನಿಕರು ಪರಿತಪಿಸಿದರೂ ಕ್ಯಾರೇ ಮಾಡುವುದಿಲ್ಲ. ಬೆಂಗಳೂರು-ಚೆನ್ನೆ ನಡುವೆ ಅಲ್ಲಲ್ಲಿ ಸಂಭ್ರಮದ ಸ್ವಾಗತ ಕಾರ್ಯಕ್ರಮದೊಂದಿಗಿನ ವಿ.ಕೆ. ಶಶಿಕಲಾ ಅವರ ಪ್ರಯಾಣಕ್ಕೆ 23 ಗಂಟೆಗಳನ್ನು ತೆಗೆದುಕೊಂಡಿದ್ದು, ಖರ್ಚಾದ ಅಂದಾಜು ವೆಚ್ಚ ಬರೋಬ್ಬರಿ 200 ಕೋಟಿ ರುಪಾಯಿಗಳು!
ಭ್ರಷ್ಟಾಚಾರಿಗಳಲ್ಲಿ ತಾನು ಮಾಡಿದ ತಪ್ಪು, ಕಾನೂನು ವಿರೋಧಿ ಚಟುವಟಿಕೆಗಳ ಬಗ್ಗೆ ಪಶ್ಚಾತ್ತಾಪ ಕಂಡು ಬರಲು ಸಾಧ್ಯವಿಲ್ಲ.

ಹಾಗಾಗಿ ಭ್ರಷ್ಟಾಚಾರಿಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರೆಸುವುದೂ ಒಂದೇ. ಶ್ವಾನವನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡುವುದೂ ಒಂದೇ. ಇವೆರಡರಲ್ಲೂ ತನ್ನ ಸಾಂದರ್ಭಿಕ ನೈಜ ರೂಪ ಮರೆ ಯಾಗಲು ಸಾಧ್ಯವಿಲ್ಲ. ಕೊಳಕು ಕಂಡಾಗ ಪಲ್ಲಕ್ಕಿಯಿಂದ ಜಿಗಿಯದಿರುತ್ತದೆಯೇ? ಒಂದು ಕಡೆ ನಮ್ಮ ನೆಲದ ಕಾನೂನುಗಳು ಲೋಪದೋಷಗಳಿಂದ ಕೂಡಿ ತುಂಬಾ ದುರ್ಬಲವಾಗಿದ್ದು, ಭ್ರಷ್ಟಾಚಾರಿಗಳಿಗೆ ಕಠಿಣ ಶಿಕ್ಷೆಯಾಗುತ್ತಿಲ್ಲ. ನಮ್ಮ ದೇಶದ ಕಾನೂನುಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡುತ್ತದೆಯೇ ಹೊರತು ತಪ್ಪಿತಸ್ಥರಿಗೆ ಶಿಕ್ಷೆಯಾಗುವ ರೀತಿಯ ಕಾನೂನುಗಳಲ್ಲ ಎಂಬ ವಾದಗಳಿದ್ದು, ಹೀಗಾಗಿ
ಕಾನೂನುಗಳನ್ನು ಬಲಿಷ್ಠಗೊಳಿಸಬೇಕು ಎಂಬ ಒತ್ತಾಯ ಗಳು ಕೇಳಿ ಬರುತ್ತಿದೆ.

ಇನ್ನೊಂದು ಕಡೆ ಲಭ್ಯವಿರುವ ಕಾನೂನುಗಳಡಿ ಸಂಬಂಧಪಟ್ಟವರಿಗೆ ಶಿಕ್ಷೆಯಾದರೆ ಅದಕ್ಕೂ ತಕರಾರು ತೆಗೆಯುವ ಪ್ರಸಂಗಗಳು ಕಂಡು ಬರುತ್ತದೆ. ತಪ್ಪಿತಸ್ಥರೆಂದು ಸಾಬೀತಾದ ಪ್ರಕರಣಗಳಲ್ಲಿ ಶಿಕ್ಷೆ ಪ್ರಕಟ ವಾಗಿರುವುದನ್ನು ಪಕ್ಷಾತೀತವಾಗಿ ಸ್ವಾಗತಿಸಿದ ನಿದರ್ಶನ ಗಳಿವೆಯೇ ಎಂದು ಕೇಳಿದರೆ ಬಹುಶಃ ಉತ್ತರ ಸಿಗಲಿಕ್ಕಿಲ್ಲ. ಭ್ರಷ್ಟಾಚಾರಿಯು ಪ್ರತಿನಿಧಿಸುವ ರಾಜಕೀಯ ಪಕ್ಷದ ನಾಯಕರು ಘನತೆ, ಗೌರವ ಬಿಟ್ಟು ಆ ವ್ಯಕ್ತಿಯ ರಕ್ಷಣೆಗೆ, ಸಮರ್ಥನೆಗೆ ಧಾವಿಸುವುದು ನಮ್ಮ ರಾಜಕೀಯ ನಾಯಕರ ಬೌದ್ಧಿಕ ದಿವಾಳಿತನ ಮತ್ತು ಗೋಸುಂಬೆತನವನ್ನು ಎತ್ತಿ ತೋರಿಸುತ್ತದೆ.

ದೇಶದ ಸಾಂವಿಧಾನಿಕ ತನಿಖಾ ಸಂಸ್ಥೆಗಳು ಯಾವುದೇ ಪ್ರಕರಣದಡಿ ಯಾರ ವಿರುದ್ಧವಾದರೂ ತನಿಖೆ ಕೈಗೊಂಡರೆ ವಿರೋಧ ಗಳು, ಖಂಡನೆಗಳು, ರಾಜಕೀಯ ಷಡ್ಯಂತ್ರಗಳು ಎಂಬ ಟೀಕೆಗಳು ವ್ಯಕ್ತವಾಗುತ್ತವೆ. ಆರೋಪಿಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿ ಆತ ನಿರಪರಾಽ ಎಂದು ಬಿಂಬಿಸುವ ಪ್ರಯತ್ನಗಳು ಸಾಗುತ್ತವೆ. ಜೈಲು ಶಿಕ್ಷೆಗೆ ಒಳಗಾದವರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಪೂಜೆಗಳು, ಅವರ ಬಿಡುಗಡೆಗೆ ಪ್ರಾರ್ಥನೆಗಳ ಮೂಲಕ ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿ ವಹಿಸುವುದನ್ನು ಕಾಣುತ್ತೇವೆ. ತನಿಖಾ ಸಂಸ್ಥೆಗಳ ವಿರುದ್ಧ ತರಹೇವಾರಿ ಆರೋಪಗಳು, ಮನಸೋ ಇಚ್ಛೆ ಅಣಕಗಳು, ಜೈಲು ಶಿಕ್ಷೆಗೆ ಒಳಗಾದ ನಾಯಕರ ಬಿಡುಗಡೆಗೆ ಒತ್ತಾಯಗಳು ಹೆಚ್ಚಾಗುತ್ತದೆ.

ತನಿಖಾ ಸಂಸ್ಥೆಗಳು ಆಡಳಿತ ಪಕ್ಷದ ಬಾಗಿಲು ಕಾಯುವ ನಾಯಿಗಳು ಎಂಬ ಅವಹೇಳನಗಳು ಕೇಳಿ ಬರುತ್ತದೆ. ಮುಂದುವರೆದು ಪ್ರತಿಭಟನೆಗಳು ಆರಂಭವಾಗಿ ಕೆಲವರ ಪ್ರತಿಕೃತಿ ದಹನ, ರಸ್ತೆ ಬಂದ್, ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಹಚ್ಚುವ ಘಟನೆಗಳು ನಡೆಯುತ್ತವೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ ಎಂಬ ಪ್ರಲಾಪ ಹಾಗೂ ಕಾನೂನಿಗೆ ಅಡ್ಡಿಪಡಿಸುವ ಕೃತ್ಯಗಳು ಇಬ್ಬಗೆಯ ನೀತಿಯನ್ನು ಸೂಚಿಸುತ್ತದೆ. ಇವೆಲ್ಲವೂ ಪ್ರಜಾಪ್ರಭುತ್ವ ಸರಕಾರದ ವ್ಯವಸ್ಥೆಯಡಿ ನಡೆಯುವ ಸ್ವೀಕಾರಾರ್ಹವಲ್ಲದ
ಬೆಳವಣಿಗೆಗಳು.

ಯಾವುದೇ ತನಿಖಾ ಸಂಸ್ಥೆಗಳು ಯಾವುದೇ ಪ್ರಕರಣದಡಿ ಕೇಸು ದಾಖಲಿಸಿಕೊಂಡರೂ ಶಿಕ್ಷೆ ನಿರ್ಧಾರವಾಗುವುದು ಸಂಬಂಧ ಪಟ್ಟ ಕಾನೂನುಗಳು ಮತ್ತು ನ್ಯಾಯಾಲಯ ಪ್ರಕ್ರಿಯೆಗಳ ಮೂಲಕವೇ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆರೋಪಿಗೆ ತಾನು ನಿರಪರಾಧಿ ಎಂದು ನಿರೂಪಿಸಿ ಸಾಬೀತು ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗುತ್ತದೆ. ಯಾಕೆಂದರೆ ನೂರು ಜನ ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬುದೇ ನಮ್ಮ ಕಾನೂನಿನ ಮೂಲ ಆಶಯ.

ಹಾಗಿರುವಾಗ ದೀರ್ಘ ಕಾನೂನಾತ್ಮಕ ಪ್ರಕ್ರಿಯೆ ಗಳ ಮೂಲಕ ನಿರ್ಧಾರವಾಗುವ ತೀರ್ಪಿನ ವಿರುದ್ಧ ಯಾಕೀ ಅಪಸ್ವರ?. ಯಾಕೆ ಎಲ್ಲವನ್ನೂ ರಾಜಕೀಯ ದೃಷ್ಟಿಯಲ್ಲಿಯೇ ನೋಡಿ ಅನುಮಾನಿಸುವುದು? ನ್ಯಾಯಾಲಯಗಳ ವಿರುದ್ಧವೂ ಆರೋಪಗಳು, ನ್ಯಾಯಾಂಗ ವ್ಯವಸ್ಥೆಯ ವಿರುದ್ಧವೂ ಅಪಚಾರಗಳನ್ನು ಎಸಗುವ ಕೆಲವರ ಮನಸ್ಥಿತಿಯೇ ವಿಚಿತ್ರ ಎನಿಸುತ್ತದೆ. ಹಾಗಾಗಿ ಭ್ರಷ್ಟಾಚಾರಿಗಳ ಪೋಷಕರೂ ಭ್ರಷ್ಟಾಚಾರಿಗಳೇ ಎಂದು ಕರೆದರೆ ತಪ್ಪಾಗಲಾರದು.

ಪ್ರಜಾಪ್ರಭುತ್ವ, ಸಮಾಜದ ಭದ್ರತೆ, ನೈತಿಕ ಮೌಲ್ಯ, ನ್ಯಾಯ ಸಂಸ್ಥೆಯ ಮೌಲ್ಯಗಳನ್ನು ಭ್ರಷ್ಟಾಚಾರ ಎಂಬ ಪಿಡುಗು ದುರ್ಬಲ ಗೊಳಿಸುತ್ತಿದೆ. ಅಽಕಾರ ಅಥವಾ ನಂಬಿಕೆಯ ಸ್ಥಾನವನ್ನು ಅಪ್ರಾಮಾಣಿಕ ಲಾಭಕ್ಕಾಗಿ ಬಳಸು ವವರನ್ನು ಇದು ಸೂಚಿಸುತ್ತದೆ. ನಮ್ಮಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕೆಂಬ ಇಂಗಿತ ಇದೆ. ಆದರೆ ಬದಲಾವಣೆ ಮಾಡಲೇ ಬೇಕೆಂಬ ದೃಢ ನಿರ್ಧಾರದ ಇಚ್ಛಾಶಕ್ತಿ ಇಲ್ಲ’ ಎಂದು ಸದ್ಗುರು ಜಗ್ಗಿ ವಾಸುದೇವ್ ಅಭಿಪ್ರಾಯಪಡುತ್ತಾರೆ.

ಕಾನೂನಿನಡಿ ಶಿಕ್ಷೆಗೆ ಒಳಗಾದವ ರನ್ನು ಸಮಾಜದಿಂದ, ಗೌರವಾಧಾರಗಳಿಂದ, ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನ ಗಳಿಂದ ದೂರವಿಟ್ಟು ಅವರನ್ನು ಪ್ರತ್ಯೇಕವಾಗಿ ಗುರುತಿಸುವಂಥ ಪ್ರಜ್ಞೆಯನ್ನು ಬೆಳೆಸಿಕೊಳ್ಳುವಂತಾಗಬೇಕು. ನಾಗರಿಕ ಸಮಾಜದ ಮನಸ್ಥಿತಿ ಬದಲಾಗಿ ಭ್ರಷ್ಟ ವ್ಯವಸ್ಥೆ ವಿರುದ್ಧ ನಿರಂತರ ಸಂಘಟಿತ ಹೋರಾಟಕ್ಕೆ ಚಿಂತಿಸಬೇಕಾಗಿದೆ. ಅದರಲ್ಲೂ ಯುವ ಜನತೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ವ್ಯಕ್ತಿ ಬಿಡುಗಡೆಯಾಗಿ ಹೊರ ಬರುವ ಸಂದರ್ಭದಲ್ಲಿ ಆ ವ್ಯಕ್ತಿಗೆ ಯಾವುದೇ ರೀತಿಯ ಸಾರ್ವಜನಿಕ ಸ್ವಾಗತ ಕಾರ್ಯಕ್ರಮಗಳನ್ನು ಆಯೋಜಿಸದಂತೆ
ನ್ಯಾಯಾಲಯದ ತೀರ್ಪಿನ ಉಖವಾದರೆ ಇಂತಹ ಮೌಲ್ಯವಿಲ್ಲದ ಅನಿಷ್ಟ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಬಹುದು.

ಅಂದ ಹಾಗೆ ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆಯು 2020ನೇ ಸಾಲಿನ ಭ್ರಷ್ಟಾಚಾರ ಸೂಚ್ಯಂಕವನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಮೊದಲನೇ ಸ್ಥಾನ ಪಡೆದ ದೇಶಗಳಲ್ಲಿ ಭ್ರಷ್ಟಾಚಾರ ಅತಿ ಕಡಿಮೆ ಮತ್ತು ಕೊನೆಯ ಸ್ಥಾನ ಪಡೆದ ದೇಶದಲ್ಲಿ ಅತಿ ಹೆಚ್ಚಿದೆ ಎಂದರ್ಥ. ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್ 88 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಭಾರತ 180 ದೇಶಗಳ ಪೈಕಿ 86ನೇ ಸ್ಥಾನ ಪಡೆದಿದೆ!