Wednesday, 18th September 2024

ಕುಟುಂಬದ ಕೀರ್ತಿ ಬೆಳಗುತ್ತಿರುವ ’ಸೂರಜ್, ಪ್ರಜ್ವಲ್’

ತುಂಟರಗಾಳಿ

ಸಿನಿಗನ್ನಡ

ನಟ ದರ್ಶನ್ ಪೊಲೀಸರಿಂದ ಅರೆ ಆಗಿ, ಜೈಲು ಸೇರಿದ ಬಳಿಕ ಅವರ ಅಭಿಮಾನಿಗಳನ್ನು ಬಿಟ್ಟರೆ ಸ್ಯಾಂಡಲ್‌ವುಡ್‌ನ ಬಳಗ ಮಾತ್ರ ಇದರ ಬಗ್ಗೆ ಹೆಚ್ಚು ಮಾತಿರಲಿಲ್ಲ. ಅದರಲ್ಲೂ ಅವರ ಆಪ್ತ ಸ್ನೇಹ ಬಳಗ ಎಂಬಂತೆ, ಒಂದೇ ಗೂಡಿನ ಹಕ್ಕಿಗಳು ಎಂಬಂತಿದ್ದವರೂ ಕೂಡಾ ದರ್ಶನ್ ಜೈಲು ಹಕ್ಕಿ ಆದಮೇಲೆ ಮಾತಾಡಿರಲಿಲ್ಲ. ಅದು ಅವರು ಹಕ್ಕಿನ ವಿಷಯ ಬಿಡಿ. ಆದ್ರೆ ಇದರ ಬಗ್ಗೆ ಸಾಕಷ್ಟು ಅಸಮಾಧಾನ ದರ್ಶನ್ ಅಭಿಮಾನಿಗಳಿಗೆ ಇತ್ತು.

ದರ್ಶನ್ ಮಾತಿನ ಅವತಾರಗಳನ್ನು, ದುರಹಂಕಾರವನ್ನು ಅವರ ಅಭಿಮಾನಿ ಮತ್ತು ಗ್ಯಾಂಗ್‌ನ ಬಳಗ ವನ್ನು ಬಿಟ್ಟರೆ ಚೆನ್ನಾಗಿ ನೋಡಿದವರು ಎಂದರೆ ಅದು ಸಿನಿಮಾ ಪತ್ರಕರ್ತರು ಎನ್ನಬಹುದು. ಅದೆಷ್ಟೋ ಪತ್ರಿಕಾಗೋಷ್ಠಿಗಳಲ್ಲಿ ದರ್ಶನ್ ಮಾತನಾಡುತ್ತಾ ತಮ್ಮ ತಲೆಯ ಮೇಲಿನ ಕೂದಲನ್ನು ತೋರಿಸಿ, ಕೂದಲನ್ನು ಕಿತ್ತು ಹಾಕಿ ಯಾರು ನಂದ್ ಒಂದು ಇದೂ ಕಿತ್ತುಕೊಳ್ಳಕ್ಕಾಗಲ್ಲ ಅಂತ ಸಾವಿರಾರು ಬಾರಿ ಟಾಮ್ ಟಾಮ್ ಹೊಡೆದು ಕೊಂಡಿ ದ್ದರು. ಅವರ ಅದೃಷ್ಟ ಕೂಡ  ಬಹಳ ಸಲ ಚೆನ್ನಾಗಿಯೇ ಇತ್ತು.

ಏನ ಕಿರಿಕ್ ಕೆಲಸ ಮಾಡಿದರೂ ಅದರಿಂದ ದರ್ಶನ್ ಸುಲಭವಾಗಿ ಪಾರಾಗುತ್ತಿದ್ದರು. ಆದರೆ ಈಗ ಕ್ರಾಂತಿ ಬಿಟ್ರು, ಕರ್ಮ ಕ್ರಾಂತಿನ ಬಿಡ್ಲಿಲ್ಲ ಅನ್ನೋ ಥರ
ಪೊಲೀಸರು ಅವರ ವಿಗ್ ತೆಗೆಸಿ ಅದರೊಳಗಿರುವ ತಲೆಯ ಮೇಲಿನ ಕೂದಲುಗಳನ್ನು ಮೆಡಿಕಲ್ ಟೆಸ್ಟ್‌ಗೆ ಅನ್ನೋ ಕಾರಣಕೊಟ್ಟು ಕಿತ್ತುಕೊಂಡಿದ್ದರು. ಇದನ್ನೆಲ್ಲ ನೋಡಿ ಇತರ ಸೆಲೆಬ್ರಿಟಿಗಳು ಕಾನೂನಿನ ವಿಷಯ ಅಂತ ಸುಮ್ಮನೇ ಆಗಿದ್ದರೇನೋ.

ಆಪ್ತಮಿತ್ರ ಎನಿಸಿಕೊಂಡಿದ್ದ ವಿನೋದ್ ಪ್ರಭಾಕರ್ ಅವರು ಡೀಸೆಂಟ್ ಆಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದು ಎರಡೇ ಮಾತಾಡಿದೆ ಅಂತ ಸಂಯಮ ತೋರಿಸಿದ್ದಾರೆ. ಆದರೆ ಈಗೀಗ ನಟಿ ಭಾವನಾ ಅವರಂಥವರು ದರ್ಶನ್ ಕೊಲೆ ಮಾಡಿದ್ರೂ ನಾನು ಅರಿಗೆ ಸಪೋರ್ಟ್ ಮಾಡ್ತೀನಿ ಅಂತೆಲ್ಲ ಯಡವಟ್ಟಿನ ಮಾತಾಡಲು ಶುರು ಮಾಡಿದ್ದಾರೆ. ಇದರಿಂದ ದರ್ಶನ್‌ಗೆ ಇನ್ನಷ್ಟು ತೊಂದರೆ ಆಗದಿದ್ರೆ ಸಾಕು.

ಲೂಸ್ ಟಾಕ್

ನಿಮ್ಮನ್ನ ಸ್ಟ್ರೈಟ್ ಆಗಿ ಒಂದು ಪ್ರಶ್ನೆ ಕೇಳ್ತೀನಿ. ಉತ್ರ ಹೇಳ್ಬೇಕು..
– ಅಯ್ಯೋ, ಬೇಡ. ಬಿಡಿ. ನಮಗೆ ‘ಸ್ಟ್ರೈಟ’ ಆಗಿರೋದೆಲ್ಲ ಆಗಿಬರೋದಿಲ್ಲ

ಥೋ, ಅದಲ್ಲ ಗುರೂ. ಏನ್ ಕರ್ಮನೋ. ಅದಕ್ಕೇ ಎಲ್ಲರೂ ನಿನ್ನ ಕ್ಯಾರೆಕ್ಟರ್ ‘ನೆಟ್ಟಗಿಲ್ಲ’ ಅಂತ ಹೇಳ್ತಾ ಇರೋದು.
– ಖುಷಿ ಇರೋದು ಅಡ್ಡದಾರಿಯ ಗುರೂ.

ಹಾಳಾಗಿ ಹೋಗ್ಲಿ, ಅಣ್ಣ ತಮ್ಮ ಇಬ್ರೂ ಜೈಲಲ್ಲಿ ಇದ್ಕೊಂಡು ನಿಮ್ಮ ಕುಟುಂಬಕ್ಕೆ ಎಷ್ಟು ಕಷ್ಟ ಕೊಡ್ತಾ ಇದ್ದೀರಲ್ಲ, ಸರೀನಾ?

– ನೋಡ್ರೀ, ನಮಗೆ ಅಪ್ಪ ಅಮ್ಮ ಸೂರಜ, ಪ್ರಜ್ವಲ್ ಅಂತ ಬೆಳಕಿನ ಹೆಸರುಗಳನ್ನು ಇಟ್ಟಿದ್ದಾರೆ. ಅದಕ್ಕೇ ನಾವು ಕುಟುಂಬದ ಕೀರ್ತಿಯನ್ನ ಬೆಳಗ್ತಾ ಇದ್ದೀವಿ.

ಇದೊಂದ್ ಬಾಕಿ ಇತ್ತು ನೋಡಪ್ಪಾ. ಹೋಗ್ಲಿ, ಈ ವಯಸ್ಸಲ್ಲಿ ಹುಡುಗೀರ ಹಿಂದೆ ಬೀಳೋದು ಎಲ್ಲರ ಗೋಲು. ಅದನ್ನ ಬಿಟ್ಟು, ಇದೇನಪ್ಪಾ ನಿಂದು ಗೋಳು?
– ನೋಡಿ ನಂಗೆ ಹುಡುಗ, ಹುಡುಗಿ ಅಂತ ಭೇದಭಾವ ಇಲ್ಲ. ನಂಗೆ ಕಂಠ ಮುಖ್ಯ ಅಲ್ಲ, ಸೊಂಟ ಮುಖ್ಯ.

ಆದ್ರೂ ನೀನ್ ಮಾಡಿದ್ದು ಸರಿ ಅಂತ ನಿನಗೆ ಅನ್ನಿಸುತ್ತಾ?
– ನಿಮ್ಮಂಥ ಹುಲು ಮಾನವರಿಗೆ ಇದೆ ಅರ್ಥ ಆಗಲ್ಲ. ಇತಿಹಾಸದಿಂದ ಹಿಡಿದು ಇಲ್ಲೇ ಪಕ್ಕದಲ್ಲಿರೋ ದರ್ಶನ್ ವರೆಗೂ, ಹೆಣ್ಣಿನ ಮೋಹದಲ್ಲಿ ಬಿದ್ದು ಅದೆಷ್ಟೋ ಜನ ಹಾಳಾದ್ರು. ಅದಕ್ಕೇ ಡಿಫರೆಂಟ್ ಆಗಿರೋ ನಾನು ಸ್ಟ್ರೈಟ್ ಅಲ್ಲದಿದ್ರೂ ಗ್ರೇಟ್.

(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ತನ್ನ ಆಡಳಿತದಲ್ಲಿ ಪ್ರಜೆಗಳನ್ನ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿ ಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳು ತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವ ಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು. ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಖೇಮು ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ ಶುರು ಮಾಡಿದ. ಮೊದಲು ಕೆಟ್ಟ ರಾಜನ ಸರದಿ ಬಂತು.

ಕಾವಲುಗಾರ ಖೇಮು ಅವನ ಹಿಸ್ಟರಿ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು, ಬನ್ನಿ ಸ್ವಾಮಿ ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ. ಇದನ್ನೆಲ್ಲ ನೋಡುತ್ತಿದ್ದ ಒಳ್ಳೆಯ ರಾಜ, ಅಂಥ ಕೆಟ್ಟವನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ ಎಂದುಕೊಂಡು ಖುಷಿಯಿಂದ ಮುಂದೆ ಹೋದ. ಇವನನ್ನು ತಡೆದು ನಿಲ್ಲಿಸಿದ ಖೇಮು ಇವನ ಹಿಸ್ಟರಿ ತೆಗೆದು ನೋಡಿದ. ನಂತರ ತಲೆ ಎತ್ತಿ ಇವನ ಮುಖ ನೋಡಿದವನೇ, ತನ್ನ ಮುಖ ಸಿಂಡರಿಸಿಕೊಂಡು, ನಿನಗೆ ಇಲ್ಲಿ ಜಾಗವಿಲ್ಲ, ನೀನು ನರಕಕ್ಕೆ ಹೋಗಬಹುದು ಅಂದ.

ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೇ ಬಂತು. ಅದೇ ಸಿಟ್ಟಿನಲ್ಲಿ, ಇದ್ಯಾವ ನ್ಯಾಯ? ಅವನು ಪ್ರಜೆಗಳಿಗೆ ಎಷ್ಟೆ ಕಿರುಕುಳ ಕೊಟ್ಟವನು, ಅವನಿಗೆ ನೋಡಿದರೆ ಅಷ್ಟೊಂದು ಮರ್ಯಾದೆ, ಗೌರವ, ನಾನು ನನ್ನ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವನು. ನನಗೆ ಯಾಕೆ ಇಂಥಾ ಅನ್ಯಾಯ? ದೇವ ಲೋಕದಲ್ಲೂ ಈ ರೀತಿ ಮೋಸವೇ? ಅಂತ ಕಾವಲುಗಾರ ಖೇಮುನನ್ನು ಕೇಳಿದ. ಅದಕ್ಕೆ ಖೇಮು ಹೇಳಿದ, ನೋಡಪ್ಪಾ, ಇದರಲ್ಲಿ ಮೋಸ ಏನಿಲ್ಲ, ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ ಅದೇ ಅವನ ಆಡಳಿತದಲ್ಲಿ ಪ್ರತಿ ಕ್ಷಣವೂ ದೇವರೇ ನಮ್ಮನ್ನ ಕಾಪಾಡು ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಪ್ರಯತ್ನ ಮುಖ್ಯ ಅಲ್ಲ, ರಿಸಲ್ಟ ಮುಖ್ಯ ಗೊತ್ತಾಯ್ತಾ?

ಲೈನ್ ಮ್ಯಾನ್

ಇಷ್ಟು ವರ್ಷ ಆಡಂಬರದ, ಧೀಮಾಕಿನ ಜೀವನ ಜೀವಿಸಿದ ದರ್ಶನ್ ಈಗ ಜೈಲಿನಲ್ಲಿರೊ ದನ್ನ ಕಾವ್ಯಮಯವಾಗಿ ಹೇಳೋದು ಹೇಗೆ?
-ಒಂದಾನೊಂದು ಕಾಲದಲ್ಲಿ ಏಸೊಂದು ‘ಮದ’ವಿತ್ತ

ನಟಿ ಭಾವನಾ ಅವ್ರು, ಕಲಾವಿದರೆಲ್ಲ ನಮ್ಮವರು, ದರ್ಶನ್ ಅಪರಾಧಿ ಆದ್ರೂ ನಾನು ಅವರಿಗೆ ಬಂಬಲ ಕೊಡ್ತೀನಿ ಅಂದಿದ್ದಾರೆ
-ನೀವೇನೋ ಭಾವನಾ ಜೀವಿ ಬಿಡಿ. ಆದ್ರೆ ದರ್ಶನ್ ಏನು ಮಹಾನು‘ಭಾವ’ನಾ?

‘RAM’ ಮಂದಿರ ಸೋರ್ತಾ ಇದೆಯಂತೆ ಅನ್ನೋದಕ್ಕೆ ವಿವಿಧ ಮೂಲಗಳ ಪ್ರತಿಕ್ರಿಯೆ ಐಟಿ ಉದ್ಯೋಗಿ-16 GB ಅಂತ ಹೇಳಿ, 2 GBದು ಕಟ್ಟಿದ್ದಾರೆ
ಅನ್ಸುತ್ತೆ

ಬಿಜೆಪಿ ಸಮರ್ಥಕರು– ಅಯ್ಯೋ, ಪಂಚವಟಿಯ ಗುಡಿಸಲಿನಲ್ಲಿ ಸೋರ್ತಾ ಇರ್ಲಿಲ್ವಾ? ರಾಮನಿಗೆ ಅಭ್ಯಾಸ ಇರುತ್ತೆ ಬಿಡಿ.

ಶಿಶುನಾಳ ಷರೀಫ್- ಸೋರುತಿಹುದು ಮಂದಿರದ ಮಾಳಿಗೆ

ಲಂಕೇಶ್- ರಾಮಮಂದಿರದ ಕಲ್ಲು ಕರಗುವ ಸಮಯ

ಕುಮಾರಸ್ವಾಮಿ- ನನ್ನ ದೇವಸ್ಥಾನ ಕಂಪ್ಲೀಟ್ ಮಾಡಿಲ್ಲ ಅಂತ ರಾಮ ಕಣ್ಣೀರು ಹಾಕ್ತಾ ಇರಬೇಕು ಬಿಡಿ.

ಬಿಜೆಪಿ ವಿರೋಧಿಗಳು– ಬಿಜೆಪಿಗೆ ಬಕೆಟ್ ಹಿಡಿಯೋರೆಲ್ಲ ಹೋಗಿ, ಅಲ್ಲಿ ದೇವಸ್ಥಾನದಲ್ಲಿ ಸೋರ್ತಾ ಇರೋ ಕಡ ಬಕೆಟ್ ಹಿಡೀರಿ.

ದುಬಾರಿ ಪೆನ್ ತಗೊಳ್ಳೋದರ ಉಪಯೋಗ
– ಅನ್ನಿಸಿದ್ದನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದು

‘ಸುಪ್ರೀಂ ಕೋರ್ಟ್’ ಜಡ್ಜ್ ಗಳೇ ರೆಬೆಲ್ ಆದ್ರೆ
– so..now..the ball is in whose ‘court’..?

ಸೌಂಡ್ ಪಾರ್ಟಿ ಸ್ವಗತ

ಸೈರನ್ ಹಾಕಿಲ್ಲ ಅಂದ್ರೆ ambulanceಗೇ ಬೆಲೆ ಸಿಗಲ್ಲ..

ಹಂಗೇನೆ…ಸೌಂಡ್ ಮಾಡದೇ ಇದ್ರೆ ಮನುಷ್ಯರಿಗೆ ಬೆಲೆ ಸಿಗಲ್ಲ..

ಮೈಸೂರಲ್ಲಿ ಸೈಟು ಸುಲಭವಾಗಿ, ಕಮ್ಮಿ ರೇಟಿಗೆ ಸಿಗುತ್ತೆ ಅನ್ನೋದು
– MUDA ನಂಬಿಕೆ

ಆಕಾಶ ನೋಡಿ ಮಳೆ ಬರುತ್ತಾ ಇಲ್ವಾ ಅಂತ ಹೇಳೋದು
– ಮೋಡನಂಬಿಕೆ.

Leave a Reply

Your email address will not be published. Required fields are marked *