ಅಭಿಮತ
ಸುರೇಂದ್ರ ಪೈ
ಉದ್ಯೋಗಂ ಪುರುಷ ಲಕ್ಷಣಂ’ ಎಂಬ ಮಾತೊಂದಿತ್ತು. ಈಗ ಹಾಗಿಲ್ಲ ಕಾಲ ಬದಲಾಗಿದ್ದು ‘ಉದ್ಯೋಗಂ ಮನುಷ್ಯ ಲಕ್ಷಣಂ’ ಎಂದಾಗಿದೆ. ಮನುಷ್ಯ ಮಾತ್ರವಲ್ಲ ಬದಲಾಗಿ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗಳು ಸಹ ನಿರಂತರ ವಾಗಿ ಅವರವರ ಕೆಲಸವನ್ನು ಮಾಡುತ್ತಲೇ ಇರುತ್ತವೆ. ಕೆಲಸ ಮಾಡುವುದರಿಂದ ಕೇವಲ ಹೊಟ್ಟೆಪಾಡು ಮಾತ್ರ ತುಂಬುವುದಿಲ್ಲ ಬದಲಾಗಿ ವ್ಯಕ್ತಿಯಲ್ಲಿರುವ ಕ್ರೀಯಾಶೀಲತೆ, ಆಲೋಚನಾ ಸಾಮರ್ಥ್ಯ, ನಾವೀನ್ಯತೆ, ಚಲನ ಶೀಲತೆಗೂ ಇಂಬು ಕೊಡುವ ಕಾರ್ಯವಾಗುತ್ತದೆ.
ಆದರೆ ಒಬ್ಬ ವ್ಯಕ್ತಿಯು ಕೆಲಸಕ್ಕೆ ಎಷ್ಟು ಸಮಯವನ್ನು ವಿನಿಯೋಗಿಸಬೇಕು? ದೀರ್ಘಾವಧಿಯ ಕೆಲಸದ ಅವಧಿ ಯು ಹೆಚ್ಚು ಉತ್ಪಾದಕತೆಯನ್ನು ಅರ್ಥೈಸುತ್ತದೆಯೇ? ಸೃಜನಶೀಲತೆಯನ್ನು ಬೆಳೆಸುವಲ್ಲಿ ಕೆಲಸ-ಜೀವನದ ಸಮತೋಲನ ಎಷ್ಟು ಮುಖ್ಯ? ಎಂಬಿತ್ಯಾದಿ ಪ್ರಶ್ನೆಗಳು ಸದಾ ಚರ್ಚೆಯಲ್ಲಿರುತ್ತವೆ. ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಭಿನ್ನಾಭಿಪ್ರಾಯಗಳು ಇವೆ.
ಕಳೆದ ವರ್ಷ ಅಕ್ಟೋಬರ್ 2023ರಂದು ಇನ್ಫೋಸಿಸ್‌ನ ಮಾಜಿ ಸಿಎಫ್ ಒ ಮೋಹನ್‌ದಾಸ್ ಪೈ ಅವರೊಂದಿಗೆ
ಇನೋಸಿಸ್ ಸಹ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ‘ದಿ ರೆಕಾರ್ಡ್’ ಪಾಡ್‌ಕಾಸ್ಟ್‌ಗಾಗಿ ಮಾತನಾಡುವಾಗ ನಮ್ಮ ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಿದರೇ ವೇಗವಾಗಿ ಅಭಿವೃದ್ಧಿ ಹೊಂದ ಬಹುದು, ಇದರಿಂದ ಉತ್ಪಾದಕತೆ ಹೆಚ್ಚುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಮರ್ಥನೀಯವಾಗಿ ದ್ವಿತೀಯ ಮಹಾಯುದ್ಧದ ಬಳಿಕ ಜರ್ಮನ್ ಮತ್ತು ಜಪಾನ್ ದೇಶಗಳು ಸಂಪೂರ್ಣ ನೆಲಕಚ್ಚಿದ್ದವು, ಅವು ಮತ್ತೆ ತಲೆ ಎತ್ತಿ ನಿಲ್ಲುವಂತಾಗಲೂ ಅಲ್ಲಿಯ ಜನರು ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡ ರೀತಿಯೇ, ಇಂದು ಅವರು ಅಭಿವೃದ್ಧಿಶೀಲರಾಗಲು ಕಾರಣವಾಗಿದೆ ಎಂದು ಹೇಳಿದ್ದರು.
ಅವರ ಈ ಹೇಳಿಕೆಗೆ ಕೆಲವು ಕಾರ್ಪೊರೇಟ್ ನಾಯಕರು ನಾವು ರಾಷ್ಟ್ರ ನಿರ್ಮಾಣದ ಹಂತದಲ್ಲಿ ಇದ್ದೇವೆ ಎಂಬ ಸಮಯದಲ್ಲಿ ಮೂರ್ತಿಯವರ ವಿವೇಕಯುತ ಸಲಹೆಯನ್ನು ಅನುಮೋದಿಸಿದರೆ, ಇತರರು ಉತ್ಪಾದಕತೆ ಹೆಚ್ಚಳಕ್ಕೂ ಉದ್ಯೋಗಿಗಳು 70 ಗಂಟೆ ದುಡಿಯುವುದಕ್ಕೂ ಸಂಬಂಧವಿಲ್ಲ, ಅಷ್ಟೊಂದು ಹೊತ್ತು ದುಡಿದರೆ ಉದ್ಯೋಗಿಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀಳುತ್ತದೆ ಎಂಬ ಪರ-ವಿರೋಧಗಳು ಮಾತು ಕೇಳಿಬಂದವು.
ಅಲ್ಲಿಗೆ ಆ ವಿಷಯವು ಹಿನ್ನೆಲೆಗೆ ಸರಿದಿತ್ತು.
ಹಿನ್ನೆಲೆಗೆ ಸರಿದಿದ್ದ ಆ ವಿಷಯಕ್ಕೆ ಮೊನ್ನೆ ನಾರಾಯಣಮೂರ್ತಿ ಅವರು ವಾರದಲ್ಲಿ 70 ತಾಸು ಕೆಲಸ ಮಾಡಬೇಕು ಎಂಬ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಮೋದಿಯವರು ವಾರದಲ್ಲಿ 100 ಗಂಟೆ ಕೆಲಸ ಮಾಡುತ್ತಾರೆ ಎಂಬ ನಿದರ್ಶನ ನೀಡಿ, ಬರೋಬ್ಬರಿ ಒಂದು ವರ್ಷದ ಬಳಿಕ ಅದೇ ವಿಷಯಕ್ಕೆ ಜೀವ ತುಂಬಿ ಮುನ್ನಲೆಗೆ ಬರುವಂತೆ ಮಾಡಿ ಬಿಟ್ಟರು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಅನಿಸಿಕೆ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ಅಭಿಪ್ರಾಯ ವ್ಯಕ್ತಪಡಿಸಿದರೆ ಅದನ್ನು ಯಾರೂ ಅಷ್ಟಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ, ಅದೇ ಸಮಾಜದಲ್ಲಿ ಈಗಾಗಲೇ ಸಾಕಷ್ಟು ಹೆಸರು ಸಾಧನೆ ಮಾಡಿ, ಎಲ್ಲರ ಮನ್ನಣೆಗೆ ಪಾತ್ರರಾಗಿರುವ ವ್ಯಕ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದರೆ ಅದು ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಕೆಲವರು ಅದನ್ನು ಅನುಸರಿಸಿದರೆ, ಇನ್ನೂ ಕೆಲವರು ವಿರೋಧಿಸಿ, ಟೀಕಿಸುತ್ತಾರೆ.
ಇಲ್ಲೂ ಆಗಿದಿಷ್ಟೇ, ಐಟಿ ಕ್ಷೇತ್ರದ ದಿಗ್ಗಜ ಕಂಪೆನಿಯಂದಾದ ಇನ್ಫೋಸಿಸ್ ಬೆಳವಣಿಗೆಗೆ ನಿರಂತರವಾಗಿ ದುಡಿದು ವಿಶ್ವ ಮನ್ನಣೆಗೆ ಪಾತ್ರರಾದ ನಾರಾಯಣಮೂರ್ತಿ ಅವರ ಬಾಯಿಂದ ಐಟಿ ಕಂಪನಿಯಲ್ಲಿನ ಕೆಲಸದ ಸಮಯದ ಕುರಿತಾಗಿ ಪದೇ ಪದೇ ಬಂದ ಮಾತುಗಳನ್ನು ಬಹುತೇಕರು ಅರಗಿಸಿಕೊಳ್ಳಲು ಸಿದ್ಧರಿಲ್ಲ. ಒಬ್ಬ ಸಾಧಕನೆನಿಸಕೊಂಡ ವ್ಯಕ್ತಿ ಹೇಳಿದ್ದೇಲ್ಲವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬೇಕೆಂಬ ಯಾವ ನಿಯಮವೂ ಇಲ್ಲ.
ಯಾರು ಹಾಗೆಲ್ಲ ಸುಲಭವಾಗಿಲ್ಲ ಒಪ್ಪಿಕೊಳ್ಳುವುದು ಇಲ್ಲವೆಂದು ಈ ಘಟನೆಯಿಂದ ತಿಳಿಯಬಹುದು. ಅಂದ ಹಾಗೇ ವಾರಕ್ಕೆ 70 ಗಂಟೆ ಎಂದರೆ ವಾರದ ಏಳು ದಿನವೂ ಸಮಾನಾಗಿ ಕೆಲಸ ಮಾಡಿದರೆ ಪ್ರತಿನಿತ್ಯವೂ 10 ಗಂಟೆ, ಇಲ್ಲ ಕೇವಲ ಐದು ದಿನವೆಂದರೆ ಪ್ರತಿನಿತ್ಯವೂ 14 ಗಂಟೆ ಕೆಲಸ ಮಾಡಬೇಕಾಗುತ್ತದೆ. ಈ ಲೆಕ್ಕಾಚಾರ ಎಲ್ಲರಿಗೂ ಗೊತ್ತು. ಹೀಗೆ ನಿರಂತರವಾಗಿ ಐಟಿ ಉದ್ಯೋಗಿ ಕೆಲಸ ಮಾಡಿದರೆ ದೈಹಿಕವಾಗಿ ಸ್ಟ್ರೋಕ್, ರಕ್ತದೊತ್ತಡ ಹೆಚ್ಚಾಗಿ ಹೃದ್ರೋಗದಿಂದ ಸಾಯುವ ಅಪಾಯ, ಅಧಿಕ ತೂಕ, ಪ್ರಿಡಿಯಾಬಿಟಿಸ್ ಮತ್ತು ಟೈಪ್ ೨ ಮಧುಮೇಹದ ಅಪಾಯ,
ನರರೋಗ ಸಮಸ್ಯೆ, ದೃಷ್ಠಿ ಸಮಸ್ಯೆ, ಸಂತಾನೋತ್ಪತ್ತಿ ಸಮಸ್ಯೆಯ ಜೊತೆಯಲ್ಲಿ ಮಾನಸಿಕ ಒತ್ತಡದಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ವೈದ್ಯಕೀಯ ವಲಯದಿಂದ ನುರಿತ ವೈದ್ಯರು ಎಚ್ಚರಿಸಿದ್ದಾರೆ.
ಪರಿಶ್ರಮಕ್ಕೆ ಪರ್ಯಾಯ ಎಂಬುದಿಲ್ಲ ಮಾತು ನಿಜವಾದರೂ, ನಾವು 70 ಗಂಟೆಗಳ ದುಡಿಮೆಯನ್ನು ಯಾರಿಗಾಗಿ
ಮಾಡುತ್ತಿದ್ದೇವೆ ಎಂಬುದು ಮುಖ್ಯವಾಗುತ್ತದೆ. ನಾವೇನಾದರೂ ಯೋಧರ ಹಾಗೆ ದೇಶದ ಗಡಿ ಕಾಯುತ್ತಾ ದೇಶ ಸೇವೆಗಾಗಿ ಅಷ್ಟು ಸಮಯ ಮೀಸಲಿಡುತ್ತಿದ್ದೇವೆಯೇ ಇಲ್ಲವಲ್ಲ. ನಾವು ಬಹುರಾಷ್ಟ್ರೀಯ ಕಂಪನಿಯಲ್ಲಿ, ಅನ್ಯ ದೇಶದವರಿಗಾಗಿ 70 ಗಂಟೆ ದುಡಿದು ಬೇರೆ ದೇಶವನ್ನು ಸದೃಢ ಮಾಡುವುದು ಎಷ್ಟು ಸರಿ. ಒಂದು ಐಟಿ ಕಂಪನಿ ಯಲ್ಲಿ ವಿವಿಧ ಕ್ರಮಾಂಕದ ಅಥವಾ ಶ್ರೇಣಿಯ ಹುದ್ದೆಗಳಿರುತ್ತವೆ.
ಎಲ್ಲ ಉದ್ಯೋಗಿಗಳಿಗೂ ಅಲ್ಲಿ ಒಂದೇ ತೆರನಾದ ಕೆಲಸದ ಸ್ವಾತಂತ್ರ್ಯ ಇರುವುದಿಲ್ಲ. ಒಬ್ಬ ಉನ್ನತ ಹುದ್ದೆಯ ಅಧಿಕಾರಿಯು ತನ್ನೆಲ್ಲ ಕೆಲಸವನ್ನು ತನ್ನ ಕೆಳಗಿನ ಉದ್ಯೋಗಿಯಿಂದ ಮಾಡಿಸಬಹುದು. ಆತನಿಗೆ ಅತನಿಗಿಂತಲೂ
ಮೇಲಾಧಿಕಾರಿಗಳು ಕೆಲಸ ಮುಗಿಸುವ ಒಂದು ಟಾರ್ಗೆಟ್ ನೀಡಿರುತ್ತಾರೆ. ಮೇಲಾಧಿಕಾರಿಗೆ ಇರುವ ಸೌಲಭ್ಯ ಎಲ್ಲ ಹಂತದ ಅಧಿಕಾರಿಗಳಿಗೆ ನೀಡಿದ್ದಿರಾ? ಅಥವಾ ನೀಡಲು ಸಾಧ್ಯವೇ? ಮನುಷ್ಯ ಯಂತ್ರವಲ್ಲ ಆತನಿಗೂ ಭಾವನೆ ಗಳಿವೆ ಎಂಬುದನ್ನು ನಾವೇಕೆ ಮರೆತಿದ್ದೇವೆ.
ನಿಮಗೆಲ್ಲ ಗೂಗಲ್ ಎಂಬ ತಂತ್ರಜ್ಞಾನ ಲೋಕದ ದೈತ್ಯ ಸರ್ಚ್ ಎಂಜಿನ್ ಬಗ್ಗೆ ಗೊತ್ತಿದೆ. ಅದರ ಪ್ರಧಾನ ಕಚೇರಿ ಯನ್ನು ಗೂಗಲ್‌ಪ್ಲೆಕ್ಸ್ ಎಂದೂ ಕರೆಯುತ್ತಾರೆ. ಇದು ಕ್ಯಾಲಿಫೋರ್ನಿಯಾ ಯಾದ ಮೌಂಟೇನ್ ವ್ಯೂನಲ್ಲಿರುವ ಆಂಫಿಥಿಯೇಟರ್ ಪಾಕ್ ವೇನಲ್ಲಿದೆ.
ಇದು ವಿಶ್ವದಾದ್ಯಂತ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 70ಕ್ಕೂ ಹೆಚ್ಚು ಮುಖ್ಯ ಕಚೇರಿಯನ್ನು ಒಳಗೊಂಡಿದೆ. ಅದು ತನ್ನ ಉದ್ಯೋಗಿಗಳಲ್ಲಿ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸಲು ತನ್ನ ಕಚೇರಿಯ ಒಳಗಡೆ ವ್ಯಾಯಾಮ ಮಾಡಲು ಜೀಮ, ರಿಫ್ರೆಶ್ ಮೆಂಟ್ ರೂಮ, ಆರೋಗ್ಯ ಕೇಂದ್ರ, ವಿಶ್ರಾಂತಿ ಕೊಠಡಿ, ಹೂ ದೋಟ, ಬೇಸರವಾದಾಗ ನೋಡಲು ಟಿವಿ, ತಮ್ಮ ಮಕ್ಕಳಿಗೆ ಆಟವಾಡಲು ಚಿಕ್ಕ ಪಾರ್ಕ್ ಅಷ್ಟೇ ಅಲ್ಲದೇ ತಮ್ಮ ಮನೆಯ ಸಾಕು ನಾಯಿ ಹಾಗೂ ಬೆಕ್ಕು ಗಳನ್ನು ಸಹ ಆಫೀಸ್ ನೊಳಗೆ ಕರೆದುಕೊಂಡು ಬರಲು ಅನುಮತಿ ಇದೆ. ಇಷ್ಟೆಲ್ಲ ವ್ಯವಸ್ಥೆ ನೀಡಿದ ಬಳಿಕವು ವಾರದಲ್ಲಿ ಸರಾಸರಿ 40 ಗಂಟೆ ಮಾತ್ರ ಕೆಲಸ ಅವಧಿ ನಿಗದಿಪಡಿಸಲಾಗಿದೆ.
ಇದು ಅಮೆರಿಕದ ಕಥೆ ಮಾತ್ರವಲ್ಲ. ಕಳೆದ ಅಗನಲ್ಲಿ ಆಸ್ಟ್ರೇಲಿಯಾ ಸರಕಾರವು ಲಕ್ಷಾಂತರ ಕಾರ್ಮಿಕರಿಗೆ ಸಂಪರ್ಕ
ಕಡಿತಗೊಳಿಸಲು ಕಾನೂನುಬದ್ಧ ಹಕ್ಕನ್ನು ನೀಡಿದೆ. ಇದರರ್ಥ ಉದ್ಯೋಗಿಗಳು ರಜೆಯಲ್ಲಿ ಇದ್ದಾಗ ಉದ್ಯೋಗ ದಾತರಿಂದ ಬರುವ ಕರೆಗಳು, ಮೇಸೆಜ್‌ಗಳನ್ನು ನಿರ್ಲಕ್ಷಿಸಲು ಅನುವು ಮಾಡಿಕೊಡುತ್ತದೆ. ಇವುಗಳ ಆಧಾರದ ಮೇಲೆ ಯಾವುದೇ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಲಿ, ನೋಟಿಸ್ ನೀಡುವುದಾಗಲಿ ಮಾಡಲು ಸಾಧ್ಯವಿಲ್ಲ. ಇದು ಒಂದು ಸರಕಾರ ಮಾಡಬೇಕಾದ ಪ್ರಮುಖವಾದ ಕೆಲಸ. ಇದರಿಂದ ಉದ್ಯೋಗಿಗಳು ತಮ್ಮ ರಜೆಯನ್ನು ನೆಮ್ಮದಿಯಿಂದ, ಕೆಲಸದ ಒತ್ತಡವಿಲ್ಲದೆ ಕಳೆಯಲು ಸಾಧ್ಯ.ಇದರಿಂದ ಕೆಲಸದ ಉತ್ಪಾದಕತೆಯು ಹೆಚ್ಚುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ.
ಅಷ್ಟೇ ಏಕೆ ಯೂರೋಪಿನ್ ಯುನಿಯನ್ ದೇಶಗಳಲ್ಲಿ ಹೆಚ್ಚುವರಿ ಕೆಲಸ ವೇಳೆ ಸೇರಿಸಿ ವಾರಕ್ಕೆ 48 ಗಂಟೆಗಳನ್ನು ನಿಗದಿಗೊಳಿಸಲಾಗಿದೆ. ನಾರಾಯಣ ಮೂರ್ತಿ ಪ್ರಸ್ತಾಪಿಸಿರುವ ಜರ್ಮನ್ ಹಾಗೂ ಜಪಾನ್‌ನಲ್ಲೂ ಸಹ 36-40 ಗಂಟೆ ನಿಗದಿಯಾಗಿದೆ. ಇನ್ನು ಎಕ್ಸಪಟ ಮಾರ್ಟ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯವರು ವಿಶ್ವ ಡೇಟಾ ಬ್ಯಾಂಕ್ ನೆರವಿ ನೊಂದಿಗೆ ಪ್ರತಿ ದೇಶದ ವಾರ್ಷಿಕ ಜಿಡಿಪಿಯನ್ನು ಆ ದೇಶದ ವಾರ್ಷಿಕ ಕೆಲಸ ಸಮಯದಿಂದ ಭಾಗಿಸಿ ಟಾಪ್ 30 ಹೆಚ್ಚು ಉತ್ಪಾದಕತೆ ಹೊಂದಿರುವ ದೇಶಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ಇದರಲ್ಲಿ ಲಕ್ಸೆಂಬರ್ಗ್ ಮೊದಲ ಸ್ಥಾನದಲ್ಲಿದೆ. ಈ ಹೆಚ್ಚಿನ ಉತ್ಪಾದಕತೆಗೆ ಕೊಡುಗೆ ನೀಡುವ ಕೆಲವು ಅಂಶ ಗಳೆಂದರೆ ದೇಶದ ಪ್ರಮಾಣಿತ 40 ಗಂಟೆಗಳ ಕೆಲಸದ ಅವಧಿ, ಪ್ರತಿ ಉದ್ಯೋಗಿಗೆ ಕನಿಷ್ಠ ಐದು ವಾರಗಳ ವೇತನ ಸಹಿತ ವಾರ್ಷಿಕ ರಜೆ ಇತ್ಯಾದಿ. ಇದರ ಬೆನ್ನಲೇ ಐರ್ಲೆಂಡ್, ನಾರ್ವೆ, ಡೆನ್ಮಾರ್ಕ್, ನೆದರ್ಲ್ಯಾಂಡ್ಸ್ ದೇಶಗಳು ಅಗ್ರ ಸ್ಥಾನದಲ್ಲಿದೆ.
ಇನ್ನು ಈ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಕಡಿಮೆ ಉತ್ಪಾದಕ ದೇಶಗಳ ಸಾಲಿನಲ್ಲಿ ಮೆಕ್ಸಿಕೋ, ಗ್ರೀಸ್, ಚಿಲಿ, ಕೋಸ್ಟ ರಿಕಾ, ದಕ್ಷಿಣ ಕೋರಿಯಾ ದೇಶಗಳಿವೆ. ಈ ದೇಶಗಳಲ್ಲಿ ಜನರು ಅತ್ಯಧಿಕ ಕೆಲಸದ ಅವಧಿಯನ್ನು ಹೊಂದಿರುತ್ತಾರೆ. ಇದು ಅವರ ಉತ್ಪಾದಕತೆಯ ಮೇಲೆ ಪ್ರಭಾವ ಬೀರಿದೆ ಎಂದು ವರದಿ ನೀಡಿದೆ.
ಹಾಗಾದರೆ ಕೆಲಸದ ಅವಧಿಯ ಹೆಚ್ಚಳಕ್ಕೂ ಹೆಚ್ಚಿನ ಉತ್ಪಾದಕತೆಗೂ ಸಂಬಂಧವಿಲ್ಲವೆಂದು ಸಾಬೀತಾಯಿತು.
ಕಳೆದ 20-25 ವರ್ಷದ ಹಿಂದೆ ನಾನು ಕೂಡ ದಿನಕ್ಕೆ 16 ಗಂಟೆ ಕೆಲಸ ಮಾಡಿದ್ದೇನೆ ಎಂದು ಹೇಳುವ ನಾರಾಯಣ
ಮೂರ್ತಿಯವರು, ಹಿಂದಿನ ಕಾಲದ ಆಹಾರ ಕ್ರಮ, ಮಾಲಿನ್ಯದ ಮಟ್ಟದಲ್ಲಿದ ಸ್ಥಿರತೆ, ಟ್ರಾಫಿಕ್, ಅವಿಭಕ್ತ ಕುಟುಂಬ ವ್ಯವಸ್ಥೆ ಮುಂತಾದ ಪ್ರಮುಖ ಅಂಶಗಳು ಇಂದಿನ ಜಗತ್ತಿನಲ್ಲಿ ಕಣ್ಮರೆಯಾಗಿವೆ ಎಂಬುದನ್ನು ಗಮನಿಸಬೇಕಿದೆ. ಇಂದು ಒಂದನೇ ತರಗತಿಯ ಮಕ್ಕಳು ಆಟವಾಡುವಾಗ ಬಿದ್ದರೆ ಸಾಕು ಮೂಳೆಯೇ ಮುರಿದು ಹೋಗುತ್ತಿವೆ ಎಕೆಂದರೆ ಅಪೌಷ್ಟಿಕತೆ ಹಾಗೂ ಇಂದಿನ ಕಲುಷಿತ ವಾತಾವರಣ.
ಅದೇ 25 ವರ್ಷದ ಮಕ್ಕಳು ಹೀಗಿದ್ದರೆ ಇಲ್ಲ ತಾನೇ. ವರ್ಷಪೂರ್ತಿ ಹವಾನಿಯಂತ್ರಿತ ಕೊಠಡಿಯ ಕೆಲಸ ಮಾಡುತ್ತಾ, ಆನ್‌ಲೈನ್ ಊಟ ಸವಿಯುತ್ತಾ, ಒತ್ತಡ ಮರೆಯಲು ಧೂಮಪಾನ, ಮದ್ಯಪಾನಕ್ಕೆ ಶರಣಾಗುವ ಜನರು ಹೇಗೆ ತಾನೇ ನಮ್ಮ ಕನಸಿನ ಭಾರತದ ಅಭಿವೃದ್ಧಿಗೆ ಹೆಚ್ಚು ಉತ್ಪಾದಕತೆ ನೀಡಲು ಸಾಧ್ಯ. ಅದರ ಬದಲಾಗಿ 70 ಗಂಟೆ ಕೆಲಸವನ್ನು 35-35 ಗಂಟೆಗೆ ಎರಡು ಉದ್ಯೋಗಿಗಳಿಗೆ ಹಂಚಿಕೊಟ್ಟರೆ, ನಿರುದ್ಯೋಗ ಸಮಸ್ಯೆಗೆ ಮುಕ್ತಿ ನೀಡಿ ದಂತಾಗುತ್ತದೆ ಎಂಬುದನ್ನು ಅವರೇಕೆ ಯೋಚಿಸುತ್ತಿಲ್ಲ.
ಇನ್ನು ಮೋದಿಯವರ ಕಾರ್ಯವ್ಯಾಪ್ತಿಯೇ ಬೇರೆ. ಅವರು ದೇಶಕ್ಕಾಗಿ ಹಾಗೂ ತಮ್ಮ ಪಕ್ಷದ ಸಂಘಟನೆಗಾಗಿ ಅಷ್ಟು ಸಮಯ ತೊಡಗಿಸಿಕೊಳ್ಳುತ್ತಾರೆ. ಮುಖ್ಯವಾಗಿ ಅವರಿಗಿರುವ ವಿಶೇಷ ಸೌಲಭ್ಯಗಳಾದ ಆಹಾರ, ರಕ್ಷಣೆ, ಪ್ರಯಾಣ ದಂತಹ ಸೌಕರ್ಯ ಎಲ್ಲರಿಗೂ ಒದಗಿಸುವ ಬದ್ಧತೆ ಕಂಪನಿಗಳಿಗೆ ಇದ್ದರೆ, ನಾವು ಮಾಡುವ ಕೆಲಸ ನಮ್ಮ ದೇಶದ ಏಳ್ಗೆಗೆ ಮಾತ್ರ ಸಿಮೀತವಾಗಿದ್ದರೆ ಅಷ್ಟು ಗಂಟೆ ಕೆಲಸ ಮಾಡಲು ಎಲ್ಲರೂ ಸಿದ್ಧ. ಹಾಗಾಗಿ 70 ಗಂಟೆ ಯಾರಿಗಾಗಿ ಮೀಸಲು ಹಾಗೂ ಅಷ್ಟು ಗಂಟೆಗಳ ಕಾಲ ನಾವೇನು ಕೆಲಸ ಮಾಡುತ್ತೇವೆ ಎಂಬುದನ್ನು ಮೊದಲು ನಿರ್ಧರಿಸು ವುದು ಹೆಚ್ಚು ಸೂಕ್ತ. ಹೆಚ್ಚು ಉತ್ಪಾದಕ ಕೆಲಸ ಮಾಡಲು ಮೊದಲು ಮನಸ್ಸು ದೇಹ ಉಲ್ಲಾಸಭರಿತವಾಗಿರಬೇಕು ಹಾಗೂ ಉತ್ಕೃಷ್ಟ ದೇಶಾಭಿಮಾನವು ಇರಬೇಕು.
ನಾವೆಷ್ಟು ಊಟಮಾಡುತ್ತೇವೋ ಅಥವಾ ಪರೀಕ್ಷೆಯಲ್ಲಿ ಎಷ್ಟು ಪುಟಗಳ ಉತ್ತರ ಬರೆಯುತ್ತೇವೋ ಮುಖ್ಯವಲ್ಲ. ಊಟದಲ್ಲಿ ಎಷ್ಟು ಪೌಷ್ಟಿಕಾಂಶವಿದೆ, ಉತ್ತರವು ಎಷ್ಟು ವಸ್ತುನಿಷ್ಠವಾಗಿದೆ ಎಂಬುದೇಮುಖ್ಯವಲ್ಲವೇ? ದೇಶದ ಅಭಿವೃದ್ಧಿಗೆ ಹೆಚ್ಚು ಕೆಲಸ ಸಮಯಕ್ಕಿಂತಲೂ ಮಾಲಿನ್ಯ ಮುಕ್ತ ಪರಿಸರಕ್ಕೆ, ಮೌಲ್ಯಯುತ ಜೀವನಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಕೊನೆಯದಾಗಿ ನಾರಾಯಣಮೂರ್ತಿ ಹೆಚ್ಚು ಉತ್ಪಾದಕತೆ ಗಾಗಿ ಕೇವಲ 70 ಗಂಟೆಗಳ ಕೆಲಸ ಮಾಡಬೇಕೆಂಬ ಸಲಹೆ ಮಾತ್ರ ನೀಡಿರಲಿಲ್ಲ, ಅದರೊಂದಿಗೆ ಪ್ರಸ್ತುತ ದೇಶದಲ್ಲಿರುವ ಭ್ರಷ್ಟಾಚಾರ ತೊಲಗಬೇಕು ಹಾಗೂ ಸರಕಾರವು ಅಭಿವೃದ್ಧಿಗೆ ಸಂಬಂಧಿಸಿದ ವಿಷಯದಲ್ಲಿ ನಿರ್ಣಯವನ್ನು ಕೂಡಲೇ ತೆಗೆದುಕೊಳ್ಳುವುದು
ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದನ್ನು ನಾವು ಮರೆತ್ತಿದ್ದೇವೆ.
ಹಾಗೂ ಅದರ ಬಗ್ಗೆ ನಾವ್ಯಾರು ಚರ್ಚಿಸಲು ಸಿದ್ಧರಿಲ್ಲ. ಅವು ಸಹ ವಾಸ್ತವವಲ್ಲವೇ? ನಮ್ಮ ಹೆಚ್ಚಿನ ಅವಧಿಯ
ಕೆಲಸದ ವಿಷಯದ ಕುರಿತಾಗಿ ಕಿರುಚಾಡುವ ನಾವು, ಇನ್ನುಳಿದ ಎರಡು ಅಂಶಗಳು ಸಹ ನಮ್ಮಿಂದಲೇ ಆಗಬೇಕಿ ರುವ ಬದಲಾವಣೆ ಎಂದು ನಾವೇಕೆ ಚಿಂತಿಸುತ್ತಿಲ್ಲ? ಕೆಲಸದ ಅವಧಿ ಹೆಚ್ಚಳದ ಬದಲಾಗಿ ಯುವಕರಲ್ಲಿ ಕಣ್ಮರೆ ಯಾಗುತ್ತಿರುವ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದರೆ ಎಲ್ಲವೂ ಸರಿಯಾಗುತ್ತದೆ.
(ಲೇಖಕರು: ಶಿಕ್ಷಕರು, ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Surendra Pai Column: ಬಾಲರಾಮನಿಗಷ್ಟೇ ಚಳಿಯೇ ? !