ಅಭಿಮತ
ಸುರೇಂದ್ರ ಪೈ
ಶಿಕ್ಷಣ ಎನ್ನುವುದು ಮನುಷ್ಯನ ವ್ಯಕ್ತಿತ್ವ ರೂಪಿಸುವ ಒಂದು ಸಾಧನ. ಅದು ಜ್ಞಾನ ಸಂಪಾದನೆಯ ಒಂದು ಮಾರ್ಗವು ಹೌದು. ಆದರೆ ಜ್ಞಾನ ಸಂಪಾ ದನೆಗೆ ಶಾಲೆಗೆ ಹೋಗಿ ಕಲಿಯುವುದೇ ಅಂತಿಮ ಮಾರ್ಗವಲ್ಲ, ಆದಾಗ್ಯೂ ಶಾಲೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಕಲಿಸಿಕೊಟ್ಟರೆ ಅಲ್ಲಿಗೆ ಪರಿಪೂರ್ಣ ಶಿಕ್ಷಣ ದೊರಕಿತು ಎನ್ನಲಾಗದು.
ಕಲಿತ ಶಿಕ್ಷಣ ನಿತ್ಯ ಜೀವನದಲ್ಲಿ ಎಷ್ಟರ ಮಟ್ಟಿಗೆ ಧನಾತ್ಮಕವಾಗಿ ಅಳವಡಿಸಿಕೊಂಡಿzರೆ ಎಂಬುದನ್ನು ನೋಡ ಬೇಕಲ್ಲವೇ? ಉದಾಹರಣೆಗೆ ನೂರಕ್ಕೆ ನೂರು ಅಂಕ ತೆಗೆದ ಮಗು ಮನೆಯಲ್ಲಿ ಹಿರಿಯರಿಗೆ ಗೌರವ ನೀಡದಿದ್ದರೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರೆ ಪಡೆದ ಶಿಕ್ಷಣಕ್ಕೆ ಎಲ್ಲಿಯ ಮೌಲ್ಯ ಹೇಳಿ. ಹಾಗಾಗಿ ಎಳವೆಯಲ್ಲಿ ನೈತಿಕತೆಯ ಪಾಠ ಹಾಗೂ ಹದಿಹರೆಯದಲ್ಲಿ ಲೈಂಗಿಕ ಶಿಕ್ಷಣದ ಪಾಠ ಎರಡು ಬಹಳ ಮುಖ್ಯ.
ಭಾರತದಲ್ಲಿ ಇಂದಿಗೂ ಸಹ ಲೈಂಗಿಕ ಶಿಕ್ಷಣವು ಶಿಕ್ಷಣದ ಒಂದು ಭಾಗವಾಗಿ ಕಲಿಸಲ್ಪಡಬೇಕೇ ಬೇಡವೇ ಎಂಬ
ಚರ್ಚೆಗಳು ಬಹಳ ಹಿಂದಿನಿಂದಲೂ ನಡೆಯುತ್ತಿವೆ. ಅದಕ್ಕೊಂದು ತಾರ್ಕಿಕ ಅಂತ್ಯ ಇದುವರೆಗೂ ಸಿಕ್ಕಿಲ್ಲ.
ಅದಕ್ಕೂ ಮೊದಲು ಲೈಂಗಿಕ ಶಿಕ್ಷಣ ಎಂದರೇನು ಎಂದು ನೋಡುವುದಾದರೆ; ವ್ಯಕ್ತಿಯ ಶರೀರ ರಚನೆ, ಸಂಭೋಗ
ಕ್ರಿಯೆ, ಗರ್ಭಧಾರಣೆ, ಸುರಕ್ಷಿತ ಲೈಂಗಿಕ ಕ್ರಿಯೆ, ಜನನ ನಿಯಂತ್ರಣ ವಿಧಾನಗಳು, ಸಾಂಕ್ರಾಮಿಕ ಲೈಂಗಿಕ ರೋಗಗಳು, ಆರೋಗ್ಯ ಮುಂತಾದವುಗಳ ಬಗ್ಗೆ ಅವಶ್ಯವಿರುವ ಸಂಗತಿಗಳ ಬಗ್ಗೆ ಶಿಕ್ಷಣ ನೀಡುವುದನ್ನು ಲೈಂಗಿಕ
ಶಿಕ್ಷಣ ಎಂದು ಕರೆಯಲಾಗುತ್ತದೆ. ಇದನ್ನು ಲೈಂಗಿಕ ಆರೋಗ್ಯ ಶಿಕ್ಷಣವೆಂದು ಕರೆದರು ತಪ್ಪಿಲ್ಲ.
ಮೊಟ್ಟ ಮೊದಲು ‘ಲೈಂಗಿಕ ಶಿಕ್ಷಣ’ ಎನ್ನುವ ಕಿವಿಗೆ ಬೀಳುತ್ತಿದ್ದ ಹಾಗೇ, ಅದರಲ್ಲಿರುವ ‘ಲೈಂಗಿಕ’ ಎಂಬ ಒಂದು ಶಬ್ದವು ಹೇಳುಗರ ಮುಖದ ಮೇಲೆ ತಿರಸ್ಕಾರದ ಛಾಯೆ ಮೂಡಿಸುತ್ತಾ, ‘ಅದು ಬೇಡವೇ ಬೇಡ’ ಎಂಬ ಉಕ್ತಿಯು ನಾಲಗೆಯ ಮೇಲೆ ಹೊರಳಿಸಿ ಬಿಡುತ್ತದೆ. ಅಲ್ಲಿ ‘ಶಿಕ್ಷಣ’ಎಂಬ eನವ್ಯಾಪಿ ಶಬ್ದವು ಗೌಣ್ಯವಾಗುತ್ತದೆ.
ಇದರ ಕುರಿತಂತೆ ಕೆಲವು ನಿದರ್ಶನಗಳನ್ನು ನೋಡುವುದಾದರೆ; ಸಾಮಾನ್ಯವಾಗಿ ಹತ್ತನೇ ತರಗತಿಯ ಜೀವಶಾಸ
ಪಾಠ ಮಾಡುವ ಬಹುತೇಕ ಶಿಕ್ಷಕರಿಗೆ ಅಲ್ಲಿ ಬರುವ ಜೀವಿಗಳಲ್ಲಿ ಸಂತಾನೋತ್ಪತ್ತಿ ಎಂಬ ಪಾಠವು ದೊಡ್ಡ ತಲೆ
ನೋವಾಗಿ ಪರಿಣಮಿಸುತ್ತದೆ. ಏಕೆಂದರೆ ಹದಿಹರೆಯದ 15-16ನೇ ವಯಸ್ಸಿನ ಮಕ್ಕಳಿಗೆ ಜನನೇಂದ್ರಿಯ, ಹೆಣ್ಣು
ಮತ್ತು ಗಂಡಿನ ಸಂತಾನೋತ್ಪತ್ತಿಯ ರಚನಾ ವಿಧಾನ ಮತ್ತು ಕಾರ್ಯ, ಗರ್ಭಧಾರಣೆಯ, ಮುಟ್ಟು (ಪಿರಿಯಡ್ಸ್-ಋತುಕಾಲ, ರಜಸ್ಸು) ಇತ್ಯಾದಿ ಪದಗಳನ್ನು ಮುಕ್ತವಾಗಿ ಎಲ್ಲರ ಮುಂದೆ ಹೇಳಲು ಅಳಕುತ್ತಾರೆ.
ಏಕೆಂದರೆ ಅದನ್ನು ಹೇಳಲು ನಾಚಿಕೆ ಸ್ವಭಾವ ಹಾಗೂ ಮಕ್ಕಳು ಎಲ್ಲಿ ಅದನ್ನು ತಪ್ಪಾಗಿ ಅರ್ಥೈಸಿಕೊಂಡು
ದಿನಪೂರ್ತಿ ಅದೇ ಚರ್ಚೆಯಲ್ಲಿ ತೊಡಗಿಕೊಳ್ಳುತ್ತಾರೆಂಬ ಭಯ. ಅಷ್ಟೇ ಅಲ್ಲದೇ ನಾಳೆ ಮಕ್ಕಳು ಏನಾದರೂ ತಪ್ಪು
ಮಾಡಿದರೆ ಪಾಲಕರು ಶಾಲೆ ಹಾಗೂ ಶಿಕ್ಷಕರೇ ಇದಕ್ಕೆಲ್ಲ ಕಾರಣವೆಂಬಂತೆ ದೂಷಿಸುತ್ತಾರೆಂಬ ಮನೋಭಾವ.
ಅಷ್ಟೇ ಅಲ್ಲ ಬಹಳಷ್ಟು ಪಾಲಕರು ತಮ್ಮ ಹೆಣ್ಣು ಮಕ್ಕಳು ಮೈನೆರೆದಾಗ(ದೊಡ್ಡವಳಾದಾಗ) ಎರಡು ವಾರ ರಜೆ
ಬೇಕೆಂದು ತರಗತಿ ಶಿಕ್ಷಕನ ಬಳಿ ಬಂದು ಮುಕ್ತವಾಗಿ ಹೇಳುವುದಿಲ್ಲ.
ಅದರ ಬದಲಾಗಿ ಬೇರೊಂದು ಮಹಿಳಾ ಶಿಕ್ಷಕಿಯ ಬಳಿಯೋ ಅಥವಾ ಇನ್ನೇನೋ ಆರೋಗ್ಯದ ಕಾರಣಕ್ಕಾಗಿ ರಜೆ ಬೇಕೆಂದು ಹೇಳಿ ಸುಮ್ಮನಾಗುತ್ತಾರೆ. ಶಾಲೆಯ ಶಿಕ್ಷಕರೊಂದಿಗೆ ಈ ರೀತಿಯಾಗಿ ನಡೆದುಕೊಳ್ಳುವ ಪಾಲಕರು ತಮ್ಮ ಮನೆಯಲ್ಲಿ ಮಕ್ಕಳು ಲೈಂಗಿಕತೆಯ ಬಗ್ಗೆ ಏನಾದರೂ ಪ್ರಶ್ನೆಗಳನ್ನು ಎತ್ತಿದರೆ ತಕ್ಷಣ ಅಂತಹ ಪ್ರಶ್ನೆಗಳನ್ನು ಮರೆಮಾಚಲು ಯತ್ನಿಸುವುದೇ ಹೆಚ್ಚು. ಅದಕ್ಕೆ ಉತ್ತರಿಸುವ ಬದಲಾಗಿ ‘ಅದೆ ಈಗೇಕೆ?’ ಎನ್ನುವ ಮರುಪ್ರಶ್ನೆಯನ್ನು ಮಕ್ಕಳೆದುರು ಇಡುತ್ತಾ, ‘ಇಂತಹ ದುರ್ಬುದ್ಧಿಯನ್ನು ಎಲ್ಲಿಂದ ಕಲಿತೆ, ಇದನ್ನೆ ಯಾರು ಕಲಿಸಿಕೊಟ್ಟರು?’ ಎಂಬಿತ್ಯಾದಿ ಗದರಿಸುವಿಕೆಯ ಧ್ವನಿ ಕೇಳಿಬರುತ್ತದೆ.
ಇತ್ತ ಪಾಲಕರಿಂದಲೂ, ಅತ್ತ ಶಾಲೆಯ ಶಿಕ್ಷಕರಿಂದಲೂ ಪ್ರಶ್ನೆಗಳಿಗೆ ಉತ್ತರ ಸಿಗದ ಹದಿಹರೆಯದ ಮಕ್ಕಳು
‘ಇದರನೋ ಗುಟ್ಟಿದೆ’ ಎಂಬ ಕೌತುಕ ಹೊಂದಿ ಅದಕ್ಕೆ ಸಹಪಾಠಿಗಳಿಂದ ಅವೈeನಿಕವಾದ ಉತ್ತರವನ್ನು
ಕಂಡುಕೊಳ್ಳುತ್ತದೆ. ಆ ಸಮಯದ ಬಹುತೇಕ ಹದಿಹರೆಯದ ಮಕ್ಕಳು ಎಡವುವುದು. ಇನ್ನೂ ಇದರ ಅಗತ್ಯವಿದೆಯೇ ಇಲ್ಲವೇ ಎಂಬ ಜಟಾಪಟಿಯ ನಡುವೆ, ನಿತ್ಯವೂ ಹದಿಹರೆಯದವರ ಅಜ್ಞಾನದ ಫಲಶ್ರುತಿಯಾಗಿ ನೂರಾರು ಅವಘಡಗಳು ಸಂಭವಿಸಿ ಹೋಗುತ್ತವೆ.
ಇಂದಿಗೂ ನಮ್ಮಲ್ಲಿ ಲೈಂಗಿಕ ಶಿಕ್ಷಣ ಅಳವಡಿಕೆ ಆಗದಿರಲು ಅನೇಕ ಬಗೆಯ ಪೂರ್ವಗ್ರಹ ಪೀಡಿತ ಮನೋಭಾವವೇ ಕಾರಣ. ಲೈಂಗಿಕ ಶಿಕ್ಷಣದಿಂದ ಮತ್ತಷ್ಟು ವ್ಯವಸ್ಥಿತ ಲೈಂಗಿಕ ಅವಘಡಗಳು ಹೆಚ್ಚಾಗುತ್ತವೆ. ಎಲ್ಲ ಬಗೆಯ ತಿಳಿವಳಿಕೆ ಯನ್ನೂ ನೀಡಿದರೆ ಮಕ್ಕಳು ಆ ವಿಷಯದಲ್ಲಿ ಇನ್ನಷ್ಟು ಸ್ವೇಚ್ಛೆಯಿಂದ ವರ್ತಿಸುತ್ತಾರೆ. ಮೌಲ್ಯಗಳು ಕುಸಿಯುತ್ತವೆ. ಮುಕ್ತ ಲೈಂಗಿಕ ವಾತಾವರಣ ಆರಂಭವಾಗಿ, ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಅದು ಅನೈತಿಕ ಅಥವಾ ಮುಜುಗರದ ಸಂಗತಿ ಎಂಬುದು ಸಂಪ್ರದಾಯವಾದಿಗಳ ಅಭಿಪ್ರಾಯ. ಲೈಂಗಿಕ ಆರೋಗ್ಯ ಮತ್ತು ಗರ್ಭನಿರೋಧಕ ಗಳ ಬಗ್ಗೆ ಮಾಹಿತಿ ನೀಡುವುದರಿಂದ ಹದಿಹರೆಯದವರಲ್ಲಿ ಹೆಚ್ಚಿನ ಲೈಂಗಿಕ ಚಟುವಟಿಕೆಗೆ ಕಾರಣವಾಗುತ್ತದೆ ಎಂದು ಕೆಲ ವಿಮರ್ಶಕರ ವಾದ.
ಇನ್ನು ಲೈಂಗಿಕ ಶಿಕ್ಷಣವು ಸಾಂಪ್ರದಾಯಿಕ ಭಾರತೀಯ ಮೌಲ್ಯಗಳೊಂದಿಗೆ ವಿರುದ್ಧವಾದ ಪಾಶ್ಚಿಮಾತ್ಯ ಪರಿಕಲ್ಪನೆ
ಎಂಬ ಅಭಿಪ್ರಾಯ ಹಲವರಲ್ಲಿದೆ. ಈ ಬಗೆಯ ಶಿಕ್ಷಣದಿಂದ ತಮ್ಮ ಮಕ್ಕಳು ಇನ್ನಷ್ಟು ಹೆಚ್ಚೆಚ್ಚು ಲೈಂಗಿಕ ವಿಷಯ ಗಳಲ್ಲಿ ಆಸಕ್ತರಾಗುವ ಅಪಾಯ ಇದೆ ಎನ್ನುವುದು ಪಾಲಕರ ಹೆದರಿಕೆ. ಇನ್ನು ಶಾಲಾ ವಾತಾವರಣದಲ್ಲಿ ಅಶ್ಲೀಲ ಎನ್ನಬಹುದಾದ ಸಂಗತಿಗಳು ಘಟಿಸುವ ಅಪಾಯವನ್ನು ನೆನೆದು, ಅದರ ಅಳವಡಿಕೆಗೆ ಶಾಲಾ ಆಡಳಿತ ಮಂಡಳಿ ಗಳು ಹಿಂದೇಟು ಹಾಕುತ್ತವೆ. ಹಾಗಾಗಿ ಹದಿಯರೆಯದವರಿಗೆ ಲೈಂಗಿಕ ಶಿಕ್ಷಣ ನೀಡಬೇಕೇ ಬೇಡವೇ
ಎಂಬುದೇ ಗೊಂದಲ. ಈ ಎಲ್ಲ ದೃಷ್ಟಿಕೋನದಿಂದಾಗಿ ಬಹುತೇಕ ರಾಜ್ಯಗಳ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಮೇಲೆ
ನಿಷೇಧ ಹೇರಲಾಗಿದೆ.
ಈ ರೀತಿಯ ವಿರೋಧಗಳಿಂದ ಸಮಗ್ರ ಮತ್ತು ಪರಿಣಾಮಕಾರಿ ಲೈಂಗಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಡ್ಡಿಯಾಗಿ ಹದಿಹರೆಯದವರಿಗೆ ನಿಖರವಾದ ಮಾಹಿತಿಯಿಲ್ಲ ಲಭಿಸುತ್ತಿಲ್ಲ. ಹಾಗಾಗಿಯೇ ಹದಿಹರೆಯದವರು
ಮತ್ತು ವಯಸ್ಕರು ಸಾಮಾಜಿಕ ಜಾಲತಾಣದತ್ತ ಮುಖಮಾಡಿ, ಅಸ್ಪಷ್ಟ, ನಿಖರವಲ್ಲದ ಅಪೂರ್ಣ ಮಾಹಿತಿಯನ್ನ
ಷ್ಟೇ ಪಡೆಯುತ್ತಾರೆ. ಇದು ಸಾಮಾನ್ಯವಾಗಿ ಹದಿಹರೆಯದವರನ್ನು ತಪ್ಪುದಾರಿಗೆಳೆಯುತ್ತದೆ. ಮತ್ತು ಅನಾರೋಗ್ಯ ಕರ ಲೈಂಗಿಕ ನಡವಳಿಕೆಗೆ ಕಾರಣವಾಗುತ್ತದೆ.
ಮೊದಲೆಲ್ಲ ಅವಿಭಕ್ತ ಕುಟುಂಬದ ಇರುತ್ತಿದ್ದವು, ಇಂತಹ ಸಮಸ್ಯೆಗಳು ಅಷ್ಟಾಗಿ ಕಂಡುಬರುತ್ತಿರಲಿಲ್ಲ. ಈಗ ನಿತ್ಯ
ಜೀವನದ ಜಂಜಾಟದಲ್ಲಿ ತೊಡಗಿರುವ ಪಾಲಕರು, ಸೂಕ್ತ ಸಮಯದಲ್ಲಿ ಸರಿಯಾದ ಪೋಷಣೆ, ಪ್ರೀತಿ ನೀಡಲು
ಸಾಧ್ಯವಾಗದೇ ಮಕ್ಕಳನ್ನು ಒಂಟಿಯಾಗಿ ಬಿಟ್ಟು ಬಿಡುವ ಸನ್ನಿವೇಶಗಳೇ ಹೆಚ್ಚಾಗಿದೆ. ಇಂತಹ ಸಮಯದಲ್ಲಿ ಬಾಹ್ಯ ಜಗತ್ತಿನ ಕಡೆಗೆ ಸಹಜವಾಗಿ ಆಕರ್ಷಿತವಾಗುವ ಮಕ್ಕಳು ಅವೈಜ್ಞಾನಿಕ, ತಪ್ಪುಮಾಹಿತಿಗೆ ಬಲಿಯಾಗುತ್ತಾರೆ. ತಾನು ಕೇಳಿದ್ದು, ನೋಡಿದ್ದು ಮಾತ್ರ ಸತ್ಯ ಎಂಬ ತೀರ್ಮಾನಕ್ಕೆ ಮಕ್ಕಳು ಬಂದಿರುತ್ತಾರೆ.
ಲೈಂಗಿಕ ಆರೋಗ್ಯದ ಬಗ್ಗೆ ಬಹಿರಂಗವಾಗಿ ಮಾತನಾಡದಿರುವುದರಿಂದ ಹದಿಹರೆಯದವರಲ್ಲಿ ಗಮನಾರ್ಹ
ಪ್ರಮಾಣದ eನದ ಕೊರತೆಗೆ ಇದು ಕಾರಣವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ 12-19 ವರ್ಷ
ವಯೋಮಾನದ ಸುಮಾರು ಶೇ.34ರಷ್ಟು ಮಕ್ಕಳು ಎಚ್ ಐವಿ ಸೋಂಕು ಪೀಡಿತರು. ಇದಕ್ಕೆ ಕಾರಣ ಲೈಂಗಿಕ
ಶಿಕ್ಷಣದ ಕೊರತೆ ಎಂಬುದನ್ನು ವರದಿ ಎತ್ತಿ ಹಿಡಿದಿದೆ.
ಒಂದು ವೇಳೆ ಎಲ್ಲ ಸವಾಲುಗಳನ್ನು ಮೀರಿ ಲೈಂಗಿಕ ಶಿಕ್ಷಣ ನೀಡಬೇಕೆಂದರೂ ಯಾರು ನೀಡಬೇಕು, ಹೇಗೆ
ನೀಡಬೇಕೆಂಬ ಪ್ರಶ್ನೆ ಎದುರಾಗುತ್ತವೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಪ್ರಾಥಮಿಕ ಜವಬ್ದಾರಿ ಮನೆಯಲ್ಲಿ ಪಾಲಕ ರಿಂದ ತೊಡಗಿ, ನಂತರ ಶಾಲೆಯಿಂದ ಸಮಾಜದೆಡೆಗೆ ಸಾಗಬೇಕು. ಮಕ್ಕಳಿಗೆ ಪಾಲಕರಿಗಿಂತಲೂ ಶಿಕ್ಷಕರ ಮಾತೇ ವೇದ ವಾಕ್ಯವಾದ್ದರಿಂದ ಶಿಕ್ಷಕರು ನೀಡುವ ಮಾಹಿತಿ ವಸ್ತುನಿಷ್ಠ ಆಗಿರಬೇಕು. ಶಾಲೆಗಳಲ್ಲಿ ಸರಳವಾಗಿ
ಒಂದರಿಂದ ನಾಲ್ಕನೇ ತರಗತಿ ವರೆಗೆ ಗುಡ್ ಟಚ್ -ಬ್ಯಾಡ್ ಟಚ್ ಎಂಬ ಪರಿಕಲ್ಪನೆಯನ್ನು ಮಕ್ಕಳಲ್ಲಿ
ಮೂಡಿಸಬಹುದು. ಇದರ ನಂತರ ಪ್ರೌಢಾವಸ್ಥೆಯಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಅರಿವು ನೀಡುವ ಮೊದಲು
ಸಂಬಂಽಸಿದ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಇದರ ಕುರಿತಾದ ಒಂದು ಕಾರ್ಯಗಾರ ನಡೆಸುವುದು ಒಳಿತು.
1976 ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ ದೇಶಗಳು ಸಂತಾನೋತ್ಪತ್ತಿ, ಲೈಂಗಿಕತೆ ಮತ್ತು ಲೈಂಗಿಕ ಆರೋಗ್ಯದ
ವಿಷಯಗಳನ್ನು ಒಳಗೊಂಡ ಲೈಂಗಿಕ ಶಿಕ್ಷಣವನ್ನು 11ನೇ ವಯಸ್ಸಿನಿಂದಲೇ ನೀಡುವಂತೆ ಕಾನೂನು ರೂಪಿಸಿದೆ.
ಇನ್ನು ಯಾವ ಹಂತದಲ್ಲಿ ನೀಡಬೇಕು ಎಂಬ ಪ್ರಶ್ನೆಯು ಎದುರಾಗುತ್ತದೆ. ಕೆಲ ರಾಷ್ಟ್ರಗಳಲ್ಲಿ ಪ್ರಾಥಮಿಕ
ಹಂತದ ಲೈಂಗಿಕ ಶಿಕ್ಷಣವನ್ನು ನೀಡಲಾಗುತ್ತದೆ. ಅದು ತುಸು ಬೇಗ ಎನಿಸುತ್ತದೆ. ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ
ಇದನ್ನು ಪರಿಚಯಿಸುವುದು ಸೂಕ್ತ.
ಏಕೆಂದರೆ, ಸಾಮಾನ್ಯವಾಗಿ ಇಲ್ಲೇ ಮಕ್ಕಳ ಶಾರೀರಿಕ ರಚನೆಯಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳ ತೊಡಗುವುದು. ತನ್ನದೇ ಶರೀರದಲ್ಲಿ ಉಂಟಾಗುವ ಬದಲಾವಣೆಗೆ ಕಾರಣಗಳು, ಹಿನ್ನೆಲೆಗಳು ಆ ಮಗುವಿಗೆ ತಿಳಿದಿರುವುದಿಲ್ಲ. ತಿಳಿದುಕೊಳ್ಳುವ ಯತ್ನದಲ್ಲಿ ತಪ್ಪು ಮಾಹಿತಿಗಳೇ ಹೇರಳವಾಗಿ ದಕ್ಕಿರುತ್ತವೆ. ಆ ಕಾರಣದಿಂದ ಲೈಂಗಿಕ ವಿಷಯಗಳ ಬಗೆಗಿನ ಅಜ್ಞಾನದ ಒಂದು ಭಾಗ ಆ ಮಗುವಿನ ಮೆದುಳಿನಲ್ಲಿ ಹಾಗೇ ಉಳಿದು ಬಿಡುತ್ತದೆ. ಲೈಂಗಿಕ ಶಿಕ್ಷಣವನ್ನು ನೀಡುವುದರಿಂದ ನಮ್ಮ ಯಾವ ಸಾಂಪ್ರದಾಯಿಕ ಮೌಲ್ಯಗಳಿಗೂ ಧಕ್ಕೆ ಆಗುವುದಿಲ್ಲ ಬದಲಾಗಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಪ್ರಕರಣ ಗಳು ಕಡಿಮೆಯಾಗುತ್ತವೆ
ಎಂಬುದನ್ನು ಮನದಟ್ಟು ಮಾಡಬೇಕು. ಎಲ್ಲದಕ್ಕೂ ಅಮೇರಿಕಾ ಅಥವಾ ಇತರ ಪಾಶ್ಚಾತ್ಯ ದೇಶಗಳ ಪಠ್ಯಕ್ರಮ ವನ್ನೇ ನಾವು ಅಳವಡಿಸಿಕೊಳ್ಳುವ ಬದಲಾಗಿ ನಮ್ಮ ಭಾರತೀಯ ಸಾಂಸ್ಕೃತಿಕ ಸಂವೇದನಾಶೀಲತೆ ಮತ್ತು ಮೌಲ್ಯ ಗಳಿಗೆ ಅನುಗುಣ ವಾಗಿ, ಸಮುಯದ ಒಳಗೊಳ್ಳುವಿಕೆಯ ಜೊತೆಗೆ ಸಾಮಾಜಿಕ ಪರಿಸರಕ್ಕೆ ಧಕ್ಕೆ ಬಾರದಂತೆ ರಾಜ್ಯ, ರಾಷ್ಟ್ರ ಮತ್ತು ಸಮಾಜಕ್ಕೆ ಹಿತಕರ ಅನುಗುಣವಾದ ಸರಳ ಪಠ್ಯಕ್ರಮವನ್ನು ಸಿದ್ಧಪಡಿಸಿ ಅದನ್ನು ನಿತ್ಯ ಶಿಕ್ಷಣದ ಜೊತೆ ಅಳವಡಿಸುವುದು ಹೆಚ್ಚು ಸೂಕ್ತ.
ಮಕ್ಕಳಿಗೆ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ಬೇಡವೇ ಬೇಡ ಎನ್ನುವ ವಿತಂಡವಾದಕ್ಕಿಂತಲೂ ಇದು ಒಳ್ಳೆಯದು. ಇದಕ್ಕೆ ಪೂರಕವಾಗಿ ಮೊನ್ನೆ ಸುಪ್ರೀಂ ಕೋರ್ಟ್ ಲೈಂಗಿಕ ಶಿಕ್ಷಣ ಕುರಿತಾದ ಅಂಶದ ಮೇಲೆ ಒತ್ತು ನೀಡುವಂತೆ ಸಲಹೆ ನೀಡಿದ್ದು, ಇದರ ಅವಶ್ಯಕತೆಗೆ ಸಾಕ್ಷಿ. ಸರಿಯಾದ ಸಮಯದಲ್ಲಿ ಹದಿಹರೆಯದವರಿಗೆ ಪರಿಪೂರ್ಣ ಶಿಕ್ಷಣ ದೊರಕುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸರಿ ತಪ್ಪುಗಳ ನಡುವಿನ ಅಂತರ ತಿಳಿದು ಸಹ ತಪ್ಪು ದಾರಿ ಹಿಡಿಯುತ್ತಾರೆಂದು, ಜ್ಞಾನಹೀನರನ್ನಾಗಿಸುವುದು ಯಾವ ನ್ಯಾಯ? ಯಾರಾದರೊಬ್ಬರೂ eನ ನೀಡುವ ಹೊಣೆ
ಹೊರಬೇಕಲ್ಲವೇ.
(ಲೇಖಕ: ಶಿಕ್ಷಕರು, ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Surendra Pai Column: ಪುರುಷತ್ವ ಸಾಬೀತುಪಡಿಸಲು ಅತ್ಯಾಚಾರ ಮಾರ್ಗವಲ್ಲ!