Sunday, 24th November 2024

Surendra Pai Column: ಬಾಲರಾಮನಿಗಷ್ಟೇ ಚಳಿಯೇ ? !

ಅಭಿಮತ

ಸುರೇಂದ್ರ ಪೈ, ಭಟ್ಕಳ

ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನನ್ನು ಬೆಚ್ಚಗಿಡಲು ನಿರ್ಧರಿಸಲಾಗಿದೆಯಂತೆ. ಇದಕ್ಕಾಗಿ ಆ ಮೂರ್ತಿಗೆ ಚಾದರ, ಪಶ್ಮಿನಾ ಶಾಲು, ಡಿಸೈನರ್ ವಸ್ತ್ರ, ಬೆಚ್ಚಗಿನ ನೀರಿನಲ್ಲಿ ಅಭಿಷೇಕ, ಗರ್ಭಗುಡಿಯನ್ನು ಬೆಚ್ಚಗಿರಿಸಲು ಹೀಟರ್, ಬಿಸಿಗಾಳಿ ಸೂಸುವ ಬ್ಲೋವರ್, ನೈವೇದ್ಯಕ್ಕೆ ಮೊಸರಿನ ಬದಲು ರಬ್ಡಿ ಖೀರ್, ಒಣಹಣ್ಣು ಸಮರ್ಪಿಸಲಾಗುವುದು ಎಂದು ವರದಿಯಾಗಿದೆ. ಇದನ್ನು ಓದಿದಾಗ, ಇದೆಂಥಾ ಮೌಢ್ಯ ಎನಿಸಿತು.

ಸರ್ವಶಕ್ತನೂ ಸರ್ವಾಂತರ್ಯಾಮಿಯೂ ಆದ ಭಗವಂತನಿಗೆ ಗಾಳಿ, ಚಳಿ, ಮಳೆ, ಬಿಸಿಲು, ಹಸಿವು, ನಿದ್ರೆಯಂಥ ‘ಮಾನುಷ ಮಿತಿ’ಯಲ್ಲಿರುವ, ಲೌಕಿಕ ಪ್ರಪಂಚದ ಸ್ಥಿತಿಗತಿಗಳು ಇವೆಯೇ ಎಂಬುದು ಮೊದಲ ಪ್ರಶ್ನೆ. ಒಂದೊಮ್ಮೆ ಇದೆ ಎಂದಾದರೆ, ಬಾಲರಾಮನಿಗೆ ಮಾತ್ರವೇ ಇಂಥ
ವ್ಯವಸ್ಥೆ ಏಕೆ? ಉತ್ತರ ಭಾರತ ದಲ್ಲಿರುವ ಬದರಿನಾಥ, ಕೇದಾರ ನಾಥ, ಅಮರನಾಥ, ವೈಷ್ಣೋ ದೇವಿ ಮಂದಿರಗಳಲ್ಲಿ, ಶಿವನ
ಆವಾಸಸ್ಥಾನವಾದ ಕೈಲಾಸ ಪರ್ವತದಲ್ಲೂ ಚಳಿಗಾಲದ ವಾತಾವರಣವಿರುತ್ತದೆ.

ಇನ್ನು ರಾಮನ ದೇವಾಲಯಗಳನ್ನು ಮಾತ್ರ ಪರಿಗಣಿಸುವು ದಾದರೆ, ಭಾರತದಾದ್ಯಂತ ಇಂಥ ಗಣನೀಯ ದೇವಾಲಯ ಗಳಿವೆ,
ಯಾತ್ರಾಸ್ಥಳಗಳಿವೆ. ಹೀಗಿರುವಾಗ, ಬಾಲರಾಮನಿಗೆ ಮಾಡಲಾಗುವ ವಿಶೇಷ ವ್ಯವಸ್ಥೆಗಳನ್ನು ಇಲ್ಲೆಲ್ಲಾ ಈ ಮೊದಲು ಏಕೆ ಮಾಡಿಲ್ಲ ಮತ್ತು ಈಗ ಮಾಡುತ್ತಿಲ್ಲ? ತನಗೆ ಚಳಿಯಾಗುತ್ತಿರುವುದರಿಂದ ಬೆಚ್ಚಗಿನ ಶಾಲು, ಬಿಸಿಬಿಸಿ ಹಾಲು ಬೇಕೆಂದು ಅಥವಾ ಬೇಸಗೆಯಲ್ಲಿ ಹವಾನಿಯಂತ್ರಿತ ಕೊಠಡಿ, ತಣ್ಣನೆಯ ಪಾನೀಯದ ನೈವೇದ್ಯ ಬೇಕೆಂದು ದೇವರೇನಾದರೂ ಯಾರದ್ದಾದರೂ ಕನಸಿನಲ್ಲಿ ಬಂದು ಹೇಳಿದ್ದಾನೆಯೇ? ಅಥವಾ ಕಾಲಕಾಲಕ್ಕೆ ಭಗವಂತನಿಗೆ ಇಂಥ ವಿಶೇಷ ಸೇವೆ ಮಾಡಬೇಕೆಂದು ಯಾವುದಾದರೂ ಧರ್ಮಗ್ರಂಥಗಳಲ್ಲೋ, ಶಾಸ್ತ್ರ- ಪುರಾಣಗಳಲ್ಲೋ ಉಲ್ಲೇಖವಿದೆಯೇ? ಇವೆಲ್ಲವೂ ಶುದ್ಧ ಮೌಢ್ಯವಷ್ಟೇ.

ಇಂಥ ಆಚರಣೆಗಳು ಸನಾತನ ಹಿಂದೂ ಧರ್ಮಕ್ಕೆ ವಿರುದ್ಧವಾಗಿದ್ದು, ನಿಜಭಕ್ತರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂಥವಾಗಿವೆ. ಈ ಮೊದಲು ಐಐಟಿ-ರೂರ್ಕಿ ವಿಜ್ಞಾನಿಗಳ ಸಹಾಯದಿಂದ ಕೃತಕ ತಂತ್ರಜ್ಞಾನ ಬಳಸಿ, ಅಯೋಧ್ಯೆ ಯಲ್ಲಿ ಬಾಲರಾಮನ ಹಣೆಯ ಮೇಲೆ ೩ ನಿಮಿಷಗಳ ಕಾಲ ಸೂರ್ಯರಶ್ಮಿ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ರಾಮನ ಹೆಸರಿನಲ್ಲಿ ಪ್ರತಿ ಬಾರಿಯೂ ಇಂಥ ಹೊಸ ಆಚರಣೆ/ಪ್ರಯೋಗ ಗಳನ್ನು ಮಾಡುವುದು ಖಂಡನೀಯ. ಇದಕ್ಕಾಗಿ ಖರ್ಚು ಮಾಡುವ ಗಣನೀಯ ಮೊತ್ತದ ಹಣವನ್ನು ಜನಸೇವೆಗೋ, ದೇಶದ ಅಭಿವೃದ್ಧಿಗೆ ಬಳಸಿದರೆ ದೇವರು ಸಂಪ್ರೀತನಾಗುವು ದಿಲ್ಲವೇ? ಪಿತೃವಾಕ್ಯ ಪರಿಪಾಲನೆಗಾಗಿ ಸುಖ-ಸಂಪತ್ತು- ಸಿಂಹಾಸನ ವನ್ನು, ಅರಮನೆಯನ್ನು ತ್ಯಜಿಸಿ, ಸರಳ ಜೀವನ ನಡೆಸಿ, ಆದರ್ಶದ ಬದುಕಿಗೊಂದು ಸಂದೇಶವನ್ನು ನೀಡಿದವನು ಶ್ರೀರಾಮ; ಬಾಲರಾಮನನ್ನು ಬೆಚ್ಚಗಿರಿಸಲು ವಿವಿಧ ಉಪಕ್ರಮಗಳಿಗೆ ಮುಂದಾಗುವಂಥ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ರಾಮನ ಜೀವನದ ಈ ಸತ್ಯವನ್ನು ಅರಿಯಬೇಕಿತ್ತು.

ಆಗ ಇಂಥ ಆಚರಣೆಗಳಿಂದ ತಪ್ಪು ಸಂದೇಶ ರವಾನೆಯಾಗ ವುದಾ ದರೂ ನಿಲ್ಲುತ್ತಿತ್ತು. ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ನಲ್ಲಿರುವ ಸಂತ-ಮಹಾಂತರು ಇಂಥ ವಿಲಕ್ಷಣ ಬೆಳವಣಿಗೆಗೆ ಅನುಮತಿಸಿದ್ದು ನೋಡಿ ಆಶ್ಚರ್ಯವಾಗುತ್ತಿದೆ. ಇಂಥ ಆಚರಣೆಗಳು ಜನರ ದಿಕ್ಕು ತಪ್ಪಿಸುವುದರ ಜತೆಗೆ, ಅನ್ಯಧರ್ಮೀಯರು ಸನಾತನ ಹಿಂದೂ ಧರ್ಮದವರನ್ನು ನೋಡಿ ನಗುವುದಕ್ಕೆ ಅವಕಾಶ ಕಲ್ಪಿಸಿಕೊಡುತ್ತವೆಯಷ್ಟೇ. ರಾಜಕೀಯ ಹಿತಾಸಕ್ತಿ ಇಟ್ಟುಕೊಂಡು ಭಗವಂತನ ವಿಷಯದಲ್ಲಿ ಪ್ರಯೋಗಕ್ಕಿಳಿಯುವ, ತನ್ಮೂಲಕ ಜನರನ್ನು ಭಾವನಾತ್ಮಕವಾಗಿ ಮರುಳುಮಾಡುವ ಅಥವಾ ತಪ್ಪುದಾರಿಗೆ ಎಳೆಯುವ ಪ್ರಯತ್ನಗಳು ನಡೆಯಕೂಡದು.

(ಲೇಖಕರು ಶಿಕ್ಷಕರು)