Thursday, 12th December 2024

ಮತ್ತಷ್ಟು ವೈದ್ಯಕೀಯ ಕೌತುಕಗಳು

ವೈದ್ಯ ವೈವಿಧ್ಯ

drhsmohan@gmail.com

ವಿಪರೀತವಾಗಿ ಕುಡಿಯುವ ಕೋಲಾವು ಕರುಳಿನ ಭಾಗಕ್ಕೆ ಬಹಳಷ್ಟು ನೀರು ಬರುವಂತೆ ಮಾಡುತ್ತದೆ. ಪರಿಣಾಮ ವಿಪರೀತ ಬೇಽ ಆಗುತ್ತದೆ. ಕೋಲಾದಲ್ಲಿರುವ ಅಽಕ ಪ್ರಮಾಣದ ಕೆಫೀನ್, ಪೊಟ್ಯಾಶಿಯಂನ ಹೀರುವಿಕೆಯನ್ನು ವ್ಯತ್ಯಾಸ ಮಾಡುತ್ತದೆ. ರಕ್ತದಲ್ಲಿ ಪೊಟ್ಯಾಶಿಯಂ ಮಟ್ಟ ಕಡಿಮೆಯಾದಾಗ ಹೃದಯದ ಬಡಿತದಲ್ಲಿ ಏರುಪೇರಾಗುತ್ತದೆ. 

ಕಳೆದ ೨ ವಾರಗಳ ಮೊದಲು ‘ಕೆಲವು ಅಪರೂಪದ ವೈದ್ಯಕೀಯ ಕೌತುಕಗಳು’ ಈ ವಿಷಯವಾಗಿ ಈ ಅಂಕಣದಲ್ಲಿ ಬರೆದಿದ್ದೆ. ಈ ಬಾರಿ ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ಕೌತುಕಗಳ ಬಗ್ಗೆ ದೃಷ್ಟಿ ಹಾಯಿಸೋಣ.

೧. ಸೋಯಾ ಸಾಸ್‌ನ ವಿಪರೀತ ಸೇವನೆ: ಅಮೆರಿಕದ ವರ್ಜಿನಿಯಾದ ೧೯ ವರ್ಷದ ಈ ಯುವಕ ಒಮ್ಮೆಲೇ ಅತಿಹೆಚ್ಚು ಪ್ರಮಾಣದ ಸೋಯಾ ಸಾಸ್ ಅನ್ನು ಸೇವಿಸಿದ. ಕೆಲವು ಸಮಯದ ನಂತರ ಆತನಿಗೆ ಒಂದು ರೀತಿಯ ನಡುಕ ಬರಲು ಆರಂಭವಾಯಿತು. ಆಮೇಲೆ ಫಿಟ್ಸ್ ಬರುವ ರೀತಿ ಆಯಿತು. ನಂತರ ಆಸ್ಪತ್ರೆಯಲ್ಲಿ ದಾಖಲಾದ ಈತ ೩ ದಿನಗಳ ಕಾಲ ಕೋಮಾದಲ್ಲಿದ್ದ. ವೈದ್ಯರು ಈತನಿಗೆ ಹೈಪರ್ ನಟ್ರೀಮಿಯ ಅಂದರೆ ರಕ್ತದಲ್ಲಿ ಸೋಡಿಯಂ ಅಂಶ ವಿಪರೀತ ಹೆಚ್ಚಿದೆ ಎಂದು ಕಾಯಿಲೆಯನ್ನು ಗುರುತಿಸಿದರು. ಈತ ಸೇವಿಸಿದ ಸೋಯಾ ಸಾಸ್‌ನಲ್ಲಿ ೧೫೦ ಗ್ರಾಂ.ನಷ್ಟು ಸೋಡಿಯಂ ಇರುವುದನ್ನು ದೃಢೀಕರಿಸ ಲಾಯಿತು.

ರಕ್ತದಲ್ಲಿನ ಹೆಚ್ಚಿನ ಪ್ರಮಾಣದ ಸೋಡಿಯಂ, ಆಸ್ಮಾಸಿಸ್ ಎಂಬ ಕ್ರಿಯೆಯಿಂದ ಹತ್ತಿರದ ಅಂಗಾಂಶಗಳಿಂದ ನೀರನ್ನು ಎಳೆದುಕೊಳ್ಳುತ್ತದೆ. ಹಾಗೆ ಮಾಡುವುದರಿಂದ ಲವಣಾಂಶದ ಪ್ರಮಾಣವನ್ನು ಸಮವಾಗಿರಿಸಲು ಪ್ರಯತ್ನಿಸುತ್ತದೆ. ಈ ರೀತಿಯ ವಿಪರೀತ ಪ್ರಮಾಣದ ಸೋಡಿಯಂ ಅಂಶ ಮಿದುಳಿನಿಂದ ಅಗಾಧ ಪ್ರಮಾಣದ ನೀರನ್ನು ಹೀರಿಕೊಂಡು ಮಿದುಳು ಒಂದು ರೀತಿಯಲ್ಲಿ ಕುಸಿಯತೊಡಗುತ್ತದೆ. ಹಾಗೆಯೇ ಅದರಲ್ಲಿ ರಕ್ತಸ್ರಾವ ಆಗಲಾರಂಭಿಸುತ್ತದೆ. ವೈದ್ಯರು ೧.೫ ಗ್ಯಾಲನ್ (೫.೭ ಲೀಟರ್) ಅಷ್ಟು ಸಕ್ಕರೆಯುಕ್ತ ನೀರನ್ನು ಆತನ ದೇಹಕ್ಕೆ ಪಂಪ್ ಮಾಡಿ ಸೋಡಿಯಂ ಮಟ್ಟವನ್ನು ಸರಿದೂಗಿಸಿದರು. ಅದಕ್ಕೆ ಅವರಿಗೆ ೫ ತಾಸು ಸಮಯ ಹಿಡಿಯಿತು. ಈ ಬಗೆಗೆ ಎಮರ್ಜೆನ್ಸಿ ಮೆಡಿಸಿನ್ ಜರ್ನಲ್‌ನಲ್ಲಿ ವರದಿ ಪ್ರಕಟ ವಾಗಿದೆ. ಬಹಳಷ್ಟು ನರಗಳಿಗೆ ನಷ್ಟವಾಗದೆ ಆತ ಬದುಕುಳಿದದ್ದು ತುಂಬಾ ಆಶ್ಚರ್ಯಕರ ವಿಚಾರ ಎಂಬುದು ವೈದ್ಯರ ಅಂಬೋಣ.

೨. ಅನ್ನನಾಳ ತಿರುಚಿಕೊಂಡಾಗ: ಸ್ವಿಜಲೆಂಡ್‌ನ ೮೭ ವರ್ಷದ ಮಹಿಳೆ ತಾನು ಆಹಾರ ನುಂಗಿದಾಗ ಒಂದು ರೀತಿಯ ಸ್ನಾಯುಸೆಳೆತ ಉಂಟಾಗಿ ವಿಪರೀತ ನೋವಾಗುತ್ತದೆ ಎಂಬ ತೊಂದರೆಯಿಂದ ವೈದ್ಯರಲ್ಲಿಗೆ ಬಂದಳು. ಎಕ್ಸ್ ರೇ ಮತ್ತು ಸ್ಕ್ಯಾನ್ ಪರೀಕ್ಷೆ ಮಾಡಿದಾಗ ಪ್ರತಿಬಾರಿ ಆಕೆ ಆಹಾರ ನುಂಗಿದಾಗ ಅನ್ನನಾಳ (Oesophagus) ಕಾರ್ಕ್ ಸ್ಕ್ರ್ಯೂ ರೀತಿ ತಿರುಚಿ ಕೊಳ್ಳತೊಡಗಿತು. ಈ ರೀತಿ ಆಗಿದ್ದರಿಂದ ಆಕೆಯ ಆಹಾರ ಸೇವನೆ ಕಡಿಮೆಯಾಗಿ ದೇಹತೂಕ ೫ ಕೆ.ಜಿ.ಯಷ್ಟು ಕಡಿಮೆಯಾಯಿತು. ಈ ಬಗೆಗಿನ ವರದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ. ಈ ರೀತಿ ಆಗಲು ಮಾಂಸ ಖಂಡಗಳಲ್ಲಿ ಉಂಟಾಗುವ ಸೆಳೆತ (Spasms) ಕಾರಣ ಎನ್ನಲಾಗಿದೆ.

ಬಾಯಿಯಿಂದ ಆಹಾರ ಜಠರಕ್ಕೆ ತೆರಳುವಾಗ ಅನ್ನನಾಳದ ಭಾಗದಲ್ಲಿ ಮಾಂಸಖಂಡಗಳು ಬಿಗಿಯಾಗಿ ನಂತರ ಸಡಿಲಗೊಳ್ಳುವ ಪ್ರಕ್ರಿಯೆಯ ಬದಲು ಮಾಂಸಖಂಡಗಳು ಸತತವಾಗಿ ಬಿಗಿಯಾಗುತ್ತಾ ಹೋಗುವುದೇ ಹೀಗಾಗಲು ಕಾರಣ ಎಂದು ಷಿಕಾಗೋದ ನಾರ್ತ್ ವೆಸ್ಟರ್ನ್ ಮೆಮೋರಿ ಯಲ್ ಆಸ್ಪತ್ರೆಯ ಡಾ. ಜಾನ್ ಪಂಡಾಲಿನೋ ಅಭಿಪ್ರಾಯಪಡುತ್ತಾರೆ. ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ.

೩. ಕಣ್ಣಿನಲ್ಲಿ ನಕ್ಷತ್ರ!
ಕೆಲವೊಮ್ಮೆ ಏನೋ ಅನಿರೀಕ್ಷಿತ ಘಟನೆ ಜರುಗಿದಾಗ ಅನಿರೀಕ್ಷಿತವಾದ ಫಲಿತಾಂಶ ಘಟಿಸುತ್ತದೆ. ಈತನಿಗೆ ತಲೆಗೆ ಒಂದು ರೀತಿಯ ಹೊಡೆತ ಬಿದ್ದಾಗ ಕಣ್ಣಿನಲ್ಲಿ ನಕ್ಷತ್ರದ ಆಕೃತಿ ಉಂಟಾಯಿತು. ಮುಖದ ಮೇಲಿನ ಯಾವುದೇ ಚೆಂಡಿನ ಪ್ರಬಲ ಹೊಡೆತ, ತಿವಿತ ಇವು ಒಂದು ರೀತಿಯ ಶಾಕ್ ತರಂಗಗಳನ್ನು ಉಂಟುಮಾಡಿ ವ್ಯಕ್ತಿಯ ಕಣ್ಣಿನ ಪಾರದರ್ಶಕ ಲೆನ್ಸ್‌ಗೆ ಹಾನಿಮಾಡಿ ಕಣ್ಣಿಗೆ ಪೊರೆ ಉಂಟುಮಾಡಬಲ್ಲದು. ಈ ವ್ಯಕ್ತಿಗೆ ಉಂಟಾದ ಕಣ್ಣಿನ ಪೊರೆ ನಕ್ಷತ್ರದ ಆಕಾರದಲ್ಲಿ ಕೆತ್ತನೆ ಮಾಡಿದ ರೀತಿ ಕಾಣುತ್ತಿತ್ತು. ನ್ಯೂಯಾರ್ಕ್‌ನ ಲಿನಾಕ್ಸ್ ಹಿಲ್ ಆಸ್ಪತ್ರೆಯ ಕಣ್ಣಿನ ತಜ್ಞವೈದ್ಯ ಡಾ.ಮಾರ್ಕ್ -ಮರ್, ಪ್ರಕೃತಿ ಉಂಟುಮಾಡಿದ ಈ ಸುಂದರ, ಅಪರೂಪದ ಕಣ್ಣಿನ ಪೊರೆಯನ್ನು ನೋಡಿ ಎನ್ನುತ್ತಾರೆ. ಸಾಮಾನ್ಯವಾಗಿ ಕಣ್ಣಿನ ಲೆನ್ಸ್ ಭಾಗಕ್ಕೆ ಹೊಡೆತ ಬಿದ್ದಾಗ ಬಿಳಿಯ ಬಣ್ಣದ ಪೊರೆ ಉಂಟಾಗಿ ವ್ಯಕ್ತಿಯ ದೃಷ್ಟಿ ಸಂಪೂರ್ಣ ಇಲ್ಲದಂತಾಗುತ್ತದೆ. ಮೇಲಿನ ವ್ಯಕ್ತಿಯಲ್ಲಿ ಕಣ್ಣಿನ ಪೊರೆ ತೆಗೆಯುವ ಶಸಕ್ರಿಯೆ ಮಾಡಿ ದೃಷ್ಟಿಯನ್ನು ಮರುಸ್ಥಾಪಿಸಲಾಯಿತು.

೪. ಕಣ್ಣುಗುಡ್ಡೆಯಲ್ಲಿ ಕೂದಲಿನ ಬೆಳವಣಿಗೆ: ದೇಹದ ಬೇಡದ ಭಾಗದಲ್ಲಿ ಕೂದಲು ಬೆಳೆಯುವುದನ್ನು ಯಾರೂ ಇಚ್ಛಿಸುವುದಿಲ್ಲ. ಅದರಲ್ಲಿಯೂ ಕಣ್ಣುಗುಡ್ಡೆಯಲ್ಲಿ ಕೂದಲು ಬೆಳೆದರೆ? ಇರಾನಿನ ಈ ಯುವಕನಿಗೆ ಕಣ್ಣುಗುಡ್ಡೆಯಲ್ಲಿ ಪಾಪೆಯ ಕೆಳಗೆ ಕೂದಲು ಒಳಗೊಂಡ ಒಂದು ಗೆಡ್ಡೆ ಹುಟ್ಟಿ ನಿಂದಲೇ ಇತ್ತು. ಆತನಿಗೆ ೧೯ ವರ್ಷವಾಗುವಾಗ ಅದು ೦.೬೪ ಸೆ.ಮೀ.ನಷ್ಟು ದಪ್ಪ ಆಯಿತು. ಅದರಿಂದ ಹಲವಾರು ಕೂದಲುಗಳು ಹೊರ ಸೂಸುತ್ತಿದ್ದವು.

ಇದನ್ನು ಲಿಂಬಲ್ ಡರ್ಮಾಯ್ಡ್ ಎಂದು ಕರೆಯುತ್ತೇವೆ. ಇದು ಕ್ಯಾನ್ಸರ್ ಗೆಡ್ಡೆ ಅಲ್ಲ. ಆದರೆ ಅದರಲ್ಲಿ ಕಾರ್ಟಿಲೇಜ್, ಕೂದಲು ಹಾಗೂ ವಿವಿಧ
ಅಂಗಾಂಶಗಳು ಬೆಳೆಯಬಹುದು. ಈ ಗೆಡ್ಡೆಯನ್ನು ಆತನ ಇಚ್ಛೆಯ ಮೇರೆಗೆ ಶಸ್ತ್ರಕ್ರಿಯೆ ಮಾಡಿ ತೆಗೆಯಲಾಯಿತು. ಈ ಬಗೆಗಿನ ವರದಿ ನ್ಯೂ
ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ.

೫. ಅತಿಯಾದ ಸೋಡಾ ಕುಡಿಯುವ ಹವ್ಯಾಸ: ಬರೀ ಸೋಡಾ ಕುಡಿಯುವ ಹವ್ಯಾಸದ ಬಗ್ಗೆ ಕೇಳಿದ್ದೀರಾ? ಮೊನಾಕೊದ ಈ ೩೧ ವರ್ಷದ ಮಹಿಳೆ ೧೫ ವರ್ಷಗಳಿಂದ ಬರೀ ಸೋಡಾ ಕುಡಿಯುತ್ತಾ ಇದ್ದಳು. ಆಕೆ ಒಮ್ಮೆಲೇ ಪ್ರಜ್ಞೆ ತಪ್ಪಿ ಬಿದ್ದಾಗ ಆಸ್ಪತ್ರೆಗೆ ಕರೆತರಲಾಯಿತು. ಆಕೆಗೆ ೧೫ ವರ್ಷ ಆದಾಗಿನಿಂದ ಪ್ರತಿದಿನ ಎರಡು ಲೀಟರಿ ನಷ್ಟು ಕೋಲಾ ಪಾನೀಯ ಕುಡಿಯಲು ಆರಂಭಿಸಿದಳು. ನೀರಿನ ಅಂಶವಿರುವ ಬೇರೆ ಯಾವ ಪಾನೀಯ ವನ್ನೂ ಕುಡಿಯುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿ ಈಕೆಯಲ್ಲಿ ತೀರಾ ಕಡಿಮೆ ಮಟ್ಟದ ಪೊಟ್ಯಾಶಿಯಂ ರಕ್ತದಲ್ಲಿರುವುದು ಗೊತ್ತಾಯಿತು.
ಈಕೆಯ ಹೃದಯದ ಬಡಿತದ ಗತಿ ಅನಿಯಮಿತ ವಾಗತೊಡಗಿತು. ಹಾರ್ಮೋನಿನ ತೊಂದರೆಯಾಗಲೀ, ಕುಟುಂಬದ ಬೇರೆಯವರಿಗೆ ಹೃದಯದ
ತೊಂದರೆಯಾಗಲೀ ಇರಲಿಲ್ಲ. ಈಕೆ ವಿಪರೀತವಾಗಿ ಕುಡಿಯುತ್ತಿದ್ದ ಕೋಲಾವು ಕರುಳಿನ ಭಾಗಕ್ಕೆ ಬಹಳಷ್ಟು ನೀರು ಬರುವಂತೆ ಮಾಡುತ್ತದೆ.

ಪರಿಣಾಮ ವಿಪರೀತವಾದ ಬೇಽ ಆಗುತ್ತದೆ. ಕೋಲಾದಲ್ಲಿರುವ ಹೆಚ್ಚಿನ ಪ್ರಮಾಣದ ಕೆಫೀನ್, ಪೊಟ್ಯಾಶಿಯಂನ ಹೀರುವಿಕೆಯನ್ನು ವ್ಯತ್ಯಾಸ ಮಾಡುತ್ತದೆ. ರಕ್ತದಲ್ಲಿ ಪೊಟ್ಯಾಶಿಯಂ ಮಟ್ಟ ಕಡಿಮೆಯಾದಾಗ ಹೃದಯದ ಬಡಿತದಲ್ಲಿ ಏರುಪೇರಾಗುತ್ತದೆ. ಈ ಕೋಲಾ ಕುಡಿಯುವುದನ್ನು ನಿಲ್ಲಿಸಿದ ಒಂದು ವಾರದಲ್ಲಿಯೇ ಆಕೆಯ ಪೊಟ್ಯಾಶಿಯಂ ಮಟ್ಟ ಸಹಜಕ್ಕೆ ಹಿಂತಿರುಗಿ ಹೃದಯದ ಬಡಿತ ಸಹಜ ಗತಿಗೆ ಮರಳಿತು.

೬. ಲಿವರ್ ನಲ್ಲಿ ಟೂತ್‌ಪ್ರಿಕ್: ಈಕೆ ೪೫ ವರ್ಷದ ಮಹಿಳೆ. ಕೆಲವು ತಿಂಗಳುಗಳಿಂದ ನಿಧಾನವಾಗಿ ಆಕೆ ಕೃಶಳಾಗುತ್ತಾ ಬಂದಳು. ವಾಂತಿಯಾಗ ತೊಡಗಿತು ಮತ್ತು ಬಿ.ಪಿ . ಬಹಳ ಕಡಿಮೆಯಾಯಿತು ಎಂದು ಆಕೆ ಆಸ್ಪತ್ರೆಗೆ ದಾಖಲಾದಳು. ವೈದ್ಯರು ಇದು ಒಂದು ರೀತಿಯ ಸೋಂಕು ಎಂದು ಭಾವಿಸಿದರು. ಆದರೆ ವಿವಿಧ ಪರೀಕ್ಷೆಗಳನ್ನು ಮಾಡಿದಾಗ ಆಕೆಯ ಲಿವರ್‌ನಲ್ಲಿ ಒಂದು ಇಂಚಿನಷ್ಟು ಕೀವು ತುಂಬಿದ ಭಾಗ ಕಂಡುಬಂದಿತು. ಶಸಕ್ರಿಯೆ ಮಾಡಿ ಹೊರತೆಗೆದಾಗ ಅದೊಂದು ಹಲ್ಲು ಸ್ವಚ್ಛಮಾಡಲು ಉಪಯೋಗಿಸುವ ಟೂತ್‌ಪ್ರಿಕ್ ಎಂದು ಕಂಡುಬಂದಿತು.

ಅನಿರೀಕ್ಷಿತವಾಗಿ ಈಕೆ ನುಂಗಿದ ಈ ಟೂತ್‌ಪ್ರಿಕ್ ಜೀಣಾಂಗ ವ್ಯೂಹದಿಂದ ಲಿವರ್‌ಗೆ ಬಂದು ಬಿಟ್ಟಿದೆ. ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಈ ಬಗೆಗೆ ಕೇಸ್ ಹಿಸ್ಟರಿ ದಾಖಲಾಗಿದೆ. ಈವರೆಗೆ ಈ  ತಿಯಲ್ಲಿ ಲಿವರ್‌ನಲ್ಲಿ ಸಿಕ್ಕಿಬಿದ್ದ ೧೭ ಉದಾಹರಣೆಗಳು ದಾಖಲಾಗಿವೆ.

೭. ಕಣ್ಣಿನ ಕಾಯಿಲೆ ಎಂಬ ಭ್ರಮೆ: ಕೆಂಟುಕಿಯ ೬೭ ವರ್ಷದ ಈ ಮಹಿಳೆಗೆ ಉದ್ದುದ್ದ ಹಲ್ಲಿರುವ ವಿಚಿತ್ರ ಆಕಾರದ ಮುಖಗಳು, ಕಣ್ಣು ಕಿವಿ ಎಲ್ಲೆಲ್ಲೋ ಇರುವಂತೆ ಕಾಣತೊಡಗಿತು. ವೈದ್ಯರು ಪರೀಕ್ಷಿಸಿ ಆಕೆ ಯಾವುದೇ ಡ್ರಗ್ಸ್ ತೆಗೆದುಕೊಳ್ಳುತ್ತಿಲ್ಲ, ಹಾಗೆಯೇ ಮಾನಸಿಕ ತೊಂದರೆಯೂ ಇಲ್ಲ ಎಂದು
ದೃಢೀಕರಿಸಿದರು. ವಿವರವಾಗಿ ಕಣ್ಣಿನ ಪರೀಕ್ಷೆ ಮಾಡಿದಾಗ ಅಕ್ಷಿಪಟಲದ ಮಧ್ಯಭಾಗ ಮ್ಯಾಕ್ಯುಲದಲ್ಲಿ ಆದ ಒಂದು ಡಿಜನರೇಶನ್ ಪ್ರಕ್ರಿಯೆಯಿಂದ
ಆಕೆಗೆ ಚಾರ್ಲಸ್ ಬಾನೆಟ್ ಸಿಂಡ್ರೋಮ್ ಎಂಬ ಕಾಯಿಲೆಯಿದೆಯೆಂದು ವೈದ್ಯರು ಪತ್ತೆಹಚ್ಚಿದರು.

ಹೀಗಾದಾಗ ಅಂಥ ವ್ಯಕ್ತಿಗೆ ವಿಚಿತ್ರವಾದ ಪ್ರಾಣಿಗಳು, ವಿಚಿತ್ರ ಆಕಾರದ ಮನುಷ್ಯರು ಇವೆಲ್ಲ ಕಾಣಲು ಆರಂಭವಾಗುತ್ತವೆ. ಮಿದುಳಿಗೆ ಸಿಗಬೇಕಾದ ನರಗಳ ಸಂವೇದನೆ ಸಿಗದಿದ್ದಾಗ ಅದು ತನ್ನದೇ ರೂಪ, ಆಕಾರವನ್ನು ಹುಟ್ಟುಹಾಕುತ್ತಾ ಹೋಗುತ್ತದೆ ಎಂದು ಈಕೆಗೆ ಚಿಕಿತ್ಸೆ ನೀಡಿದ ಕಣ್ಣಿನ ವೈದ್ಯ ಡಾ. ಭರತ್ ಕುಮಾರ್ ಅಭಿಪ್ರಾಯಪಡುತ್ತಾರೆ. ಒಮ್ಮೆ ಮಿದುಳಿಗೆ ಸಿಗಬೇಕಾದ ನರಗಳ ಸಂವೇದನೆಯ ಮಟ್ಟ ಇಷ್ಟೇ ಸರಿ ಎಂದು ಗೊತ್ತಾದಾಗ ಈ ರೀತಿಯ ವಿಚಿತ್ರ ಸಂವೇದನೆ ರೋಗಿಯ ಗಮನಕ್ಕೆ ಬರುವುದಿಲ್ಲ. ಈ ಬಗ್ಗೆ ಜರ್ನಲ್ ಆಫ್ ಏಜ್ ಮತ್ತು ಏಜಿಯಿಂಗ್‌ನಲ್ಲಿ ಪ್ರಕಟವಾಗಿದೆ.

೮. ಬೆಕ್ಕಿನ ಮರಿ ಉಂಟುಮಾಡಿದ ಗಾಯ: ಬೆಕ್ಕಿನ ಮರಿಯನ್ನು ಉಳಿಸಲು ಹೋಗಿ ನೆದರ್ಲೆಂಡ್‌ನ ಹದಿಹರೆಯದ ಯುವತಿ ದೊಡ್ಡ ಕಪ್ಪಗಿನ ಗಾಯವನ್ನು ಮಾಡಿಕೊಂಡಳು. ಇದರ ಸರಿಯಾದ ಕಾರಣ ಕಂಡುಹಿಡಿಯಲು, ಚಿಕಿತ್ಸೆ ಮಾಡಲು ಅನೇಕ ವೈದ್ಯರು ಹಲವಾರು ದಿನಗಳನ್ನು ತೆಗೆದುಕೊಂಡರು. ಒಂದು ಗುಂಡಿ ಯಲ್ಲಿ ಮುಳುಗಿಹೋಗುತ್ತಿದ್ದ ಬೆಕ್ಕಿನ ಮರಿಯನ್ನ ಈ ಹುಡುಗಿ ಉಳಿಸಿದಳು. ನಂತರ ಆ ಬೆಕ್ಕಿನಮರಿ
ಬಹಳ ಖಾಯಿಲೆಗೆ ತುತ್ತಾಗಿ ಸತ್ತುಹೋಯಿತು. ಕೆಲವು ದಿನಗಳಾದ ನಂತರ ಈ ಹುಡುಗಿಯ ಮುಂಗೈ ಮೇಲೆ ಕೆಂಪಾದ ಗಾಯ ಉಂಟಾಯಿತು.
ಅದು ನಂತರ ಬದಲಾಗಿ ಕಪ್ಪುಬಣ್ಣಕ್ಕೆ ತಿರುಗಿತು. ಹಾಗೆಯೇ ಆಕೆಯ ಕೈಮೇಲೆ ಕೆಂಪಾದ ಬರೆ ರೀತಿಯ ಮಾರ್ಕ್ ಆಯಿತು. ಅದು ವಿಪರೀತ
ನೋವು ಕೊಡಲಾರಂಬಿಸಿತು. ಆ ನೋವು ಆಕೆಯ ಕಂಕುಳಿನವರೆಗೂ ಹಬ್ಬ ತೊಡಗಿತು. ವೈದ್ಯರು ಆಂಟಿ ಬಯೋಟಿಕ್ಸ್ ಕೊಟ್ಟರೂ ಗುಣ ಕಾಣದಿ
ದ್ದಾಗ ಅದು ಕೌಫಾಕ್ಸ್ ವೈರಸ್ ಇರಬಹುದು ಎಂದು ಸಂದೇಹಿಸಿದರು. ಅಷ್ಟರಲ್ಲಿ ಆಕೆಗೆ ವಿವಿಧ ವೈದ್ಯರು ೧೩ ದಿನ ಚಿಕಿತ್ಸೆ ನಡೆಸಿದ್ದರು. ಕೊನೆಯಲ್ಲಿ
ನೆದರ್ಲೆಂಡ್‌ನ ನಿಯುವೆಗಿನ್ ದ ಸೇಂಟ್ ಅಂಟೋನಿಯನ್ ಜಕುವಹುಯಿಸ್ ಆಸ್ಪತ್ರೆಯ ಮಕ್ಕಳ ಸೋಂಕು ರೋಗದ ತಜ್ಞವೈದ್ಯ ಡಾ.
ಬೊಜನ್ನೆಕೆ ಹಿಡಿಮಾ ಅವರು ಕಾಯಿಲೆ ಪತ್ತೆಹಚ್ಚಿ ಚಿಕಿತ್ಸೆ ಕೊಟ್ಟರು. ಒಂದು ವಾರದ ನಂತರ ಆಕೆಯ ಕಾಯಿಲೆ ಗುಣವಾಗಲಾರಂಭಿಸಿತು. ೨ ತಿಂಗಳಲ್ಲಿ ಗಾಯ ಒಣಗಿತು. ಒಂದು ಕಲೆ ಕೊನೆಯಲ್ಲಿ ಉಳಿಯಿತು. ವ್ಯಕ್ತಿಯ ದೇಹದ ಪ್ರತಿರೋಧ ವ್ಯವಸ್ಥೆ ಸಹಜ ಸ್ಥಿತಿಯಲ್ಲಿದ್ದರೆ ಈ ಕೌಫಾಕ್ಸ್
ಕಾಯಿಲೆ ತನ್ನಿಂದ ತಾನೇ ವಾಸಿಯಾಗುತ್ತದೆ. ವಿಶೇಷ ಚಿಕಿತ್ಸೆಯ ಅವಶ್ಯಕತೆ ಇಲ್ಲ. ಈ ಕೇಸ್ ಹಿಸ್ಟರಿ ಬ್ರಿಟಿಷ್ ಮೆಡಿಕಲ್ ಜರ್ನಲ್ ಕೇಸ್
ರಿಪೋರ್ಟ್ಸ್‌ನಲ್ಲಿ ದಾಖಲಾಗಿದೆ.