Friday, 18th October 2024

ಪ್ಯಾನ್’ಗಾಂಗ್ ತ್ಸೋ ಸುತ್ತ

ಪ್ರಸ್ತುತ
ಶಿವಪ್ರಸಾದ್ ಎ.

ಚೀನಾದ ಪಿಎಲ್‌ಎ, ಕಾರ್ಯಾಚರಣೆ ಮಾಡಿ ಭಾರತದ ಭೂಭಾಗದ ಗಣನೀಯ ಅಂಶವನ್ನು ಆಕ್ರಮಿಸಿಕೊಂಡಿರುವುದೀಗ ಹಳೆಯ ಸುದ್ದಿ. ಭಾರತ ಸರ್ಕಾರದ ಅಧಿಕೃತ ಮೂಲಗಳ ಪ್ರಕಾರ ಪಿಎಲ್‌ಎ ಭಾರತದ ನೆಲದಲ್ಲಿ ಬೀಡು ಬಿಟ್ಟಿಲ್ಲ. ಇಲ್ಲಿ ಒಂದು
ಸೂಕ್ಷ್ಮ ವಿಷಯವನ್ನು ಗಮನಿಸಬೇಕು. ಅದೇನೆಂದರೆ, ಭಾರತ ಸರಕಾರದ ಅಧಿಕೃತ ಮೂಲಗಳು ಚೀನಾದ ಪಿಎಲ್‌ಎ ಭಾರತದ ಭೂಭಾಗವನ್ನು ಹೊಕ್ಕಿದ್ದುದನ್ನು ಅಲ್ಲಗಳೆಯುತ್ತಿಲ್ಲ, ಹಾಗಾಗಿ ಭಾರತೀಯ ಸೇನೆಯು ಅವರನ್ನು ಯಥಾ ಸ್ಥಾನಕ್ಕೆ ಹಿಮ್ಮೆಟ್ಟಿಸಿ ರುವ ಸಾಧ್ಯತೆಯನ್ನು ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆದರೆ ಇದೇ ವಿಷಯವನ್ನು ವಿರೋಧ ಪಕ್ಷಗಳು ತಮ್ಮ ಅನು ಕೂಲಕ್ಕೆ ಬಳಸಿಕೊಳ್ಳುತ್ತಿವೆ.

ಭಾರತ ಸರಕಾರವು ಭಾರತೀಯ ನಾಗರಿಕರನ್ನು ವಂಚಿಸಿ, ಚೀನಾದ ಅತಿಕ್ರಮ ಪ್ರವೇಶ ಮತ್ತು ಆಕ್ರಮ ಹಣವನ್ನು ಭಾರತೀಯ ರಿಂದ ಮುಚ್ಚಿಡುತ್ತಿದೆಯೆಂದು ಪ್ರತಿಪಕ್ಷಗಳು ಹೇಳುತ್ತಿವೆ. ಮೋದಿ ಸರಕಾರವು ಪಾಕಿಸ್ತಾನಕ್ಕೊಂದು ನೀತಿ ಮತ್ತು ಚೀನಾಕ್ಕೆ ಮತ್ತೊಂದು ನೀತಿಯನ್ನು ಅನ್ವಯಿಸುತ್ತಿದೆಯೆಂದೂ ಆರೋಪಿಸಲು ಪ್ರತಿಪಕ್ಷಗಳಿಗೆ ಇದರಿಂದ ಆಸ್ಪದ ದೊರೆತಿದೆ.

ಆದರೆ ವಿಷಯ ಈಗ ಚೀನಾದ ಯುದ್ಧೋನ್ಮಾದದ ನಡೆಯ ಹಿಂದಿನ ಕಾರಣಗಳ ಬಗ್ಗೆ ಮತ್ತು ಇವೇ ಕಾರಣಗಳಿಂದಾಗಿ ಭಾರತ ಚೀನಾ ಯುದ್ಧದ ಅನಿವಾರ್ಯ ಸನ್ನಿವೇಶದ ವಿಶ್ಲೇಷಣೆಯದ್ದಾಗಿದೆ. ಚೀನಾದ ಸರ್ವಾಧಿಕಾರಿ ಕ್ಸಿ ಜಿನ್‌ಪಿಂಗ್ ತಮ್ಮ ದೇಶದ
ಆಡಳಿತಯಂತ್ರ, ಪಿಎಲ್‌ಎ ಮತ್ತು ಚೀನಾ ಕಮ್ಯುನಿಸ್ಟ್‌ ಪಕ್ಷದ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಬಿಗಿಯಾಗಿಸಿಕೊಳ್ಳುವ ಸಲುವಾಗಿ ತಮ್ಮದೇ ಆದ ಕೆಲವು ನಿರ್ಧಾರಗಳನ್ನು ತೆಗೆದುಕೊಂಡು, ಅವುಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದ ನೆಲೆಗಟ್ಟಿ ನಲ್ಲಿ ಈ ಎಲ್ಲ ವಿದ್ಯಮಾನಗಳನ್ನು ನಾವು ಭಾರತೀಯರು ಅರ್ಥಮಾಡಿಕೊಳ್ಳಬೇಕು. ಚೀನಾದ ಸುನ್ ತ್ಸು ಎಂಬ ಪ್ರಾಚೀನ ಗುರುವೊಬ್ಬನು ಯುದ್ಧಕ್ಕಿಳಿಯದೆ ಎದುರಾಳಿುನ್ನು ಪರಾಭವಗೊಳಿಸುವ ಕೆಲವು ತಂತ್ರಗಳನ್ನು ತನ್ನ ಯುದ್ಧನೀತಿಯ ಅಂಗವಾಗಿ ಬೋಧಿಸಿರುವುದನ್ನು ನಾವು ಇಲ್ಲಿ ಮನಗಾಣಬೇಕು. ಇಂತಹ ರಣನೀತಿಯನ್ನು ಪಾಲಿಸುತ್ತ ಬಂದಿರುವ ಪಿಎಲ್‌ಎ
ಸೇನೆಯವರ ಒಂದು ತಂತ್ರವೇ ‘ಸಲಾಮಿ ಸ್ಲೈಸಿಂಗ್’.

ಎದುರಾಳಿ ರಾಷ್ಟ್ರದವರು ತಮ್ಮ ಗಡಿಯ ಯಾವುದಾದರೊಂದು ಭಾಗವನ್ನು ಅತಿ ಸೂಕ್ಷ್ಮವಾಗಿ ನಿಗಾವಹಿಸದಿರುವ ಕ್ಷಣಕ್ಕಾಗಿ ಕಾದಿದ್ದು, ಆ ಸಂದರ್ಭ ಬಂದೊಡನೆಯೇ ಅವರ ಭೂಮಿಯ ಕೆಲವು ಮುಖ್ಯ ಭಾಗಗಳನ್ನು ಕಪಟದಿಂದ ಆಕ್ರಮಿಸಿಕೊಂಡು, ಹಿಮ್ಮೆಟ್ಟಲು ನಿರಾಕರಿಸುತ್ತ, ಎದುರಾಳಿ ಸೇನೆ ತನ್ನ ಭೂಭಾಗವನ್ನು ಹಿಂದಕ್ಕೆ ಪಡೆಯುವ ಸಲುವಾಗಿ ನಡೆಸುವ ಕಾರ್ಯಾ ಚರಣೆಯನ್ನು ದುರುದ್ದೇಶಪೂರ್ವಕವಾದ ದಾಳಿಯೆಂದು ಬಿಂಬಿಸುತ್ತ ತನ್ನ ಆಕ್ರಮಣವನ್ನು ಸ್ಥಿರಗೊಳಿಸಿಕೊಳ್ಳುವುದೇ ಈ ‘ಸಲಾಮಿ ಸ್ಲೈಸಿಂಗ್’.

ಇದು ಚೀನಾದ ಅತಿ ಹಳೆಯ ಚಾಳಿ. ಇದೇ ಕಪಟ ನೀತಿಯನ್ನು ಒಂದು ರಾಜತಾಂತ್ರಿಕ ಕಲೆಯ ಮಟ್ಟಕ್ಕೆ ಏರಿಸಿಕೊಂಡಿರುವ ಚೀನಾ ತನ್ನ ಸುತ್ತಲಿನ ಹಲವು ರಾಷ್ಟ್ರಗಳ ಮೇಲೆ ಈ ನೀತಿಯನ್ನು ಪ್ರಯೋಗಿಸುತ್ತ ಅವಕಾಶ ದೊರೆತಾಗಲೆಲ್ಲ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಆದರೆ ಈ ದುರುಳ ರಾಷ್ಟ್ರದ ನಾಯಕರು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿರುವ ಪ್ರಾದೇಶಿಕ
ಮಾಧ್ಯಮಗಳ ಮೂಲಕ ಈ ಕಪಟ ನೀತಿಯನ್ನು ರಾಷ್ಟ್ರಾಭಿಮಾನದ ನಡೆಯೆಂಬಂತೆ ತಮ್ಮ ಪ್ರಜೆಗಳಿಗೆ ಬಿಂಬಿಸುತ್ತ, ಇದನ್ನು ರಾಷ್ಟ್ರರಕ್ಷಣೆಯ ಬಣ್ಣದ ಕುಂಚದಲ್ಲಿ ಚಿತ್ರೀಕರಿಸಿ ತಮ್ಮನ್ನು ತಾವು ಮಹಾನ್ ನಾಯಕರಂತೆ ಬಿಂಬಿಸಿಕೊಳ್ಳುವ ಹುನ್ನಾರ ಮಾಡಿದ್ದಾರೆ.

ಇಲ್ಲಿ ಚೀನಾದ ಕಮ್ಯುನಿಸ್ಟ್‌ ಪಕ್ಷದ ಆಂತರಿಕ ಹಗ್ಗಜಗ್ಗಾಟಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕ್ಸಿ ಜಿನ್‌ಪಿಂಗ್, ತಮ್ಮ ರಾಜಕೀಯ ಜೀವನದ ಮೊದಲ ಹಲವು ವರ್ಷಗಳನ್ನು ಬೀಜಿಂಗ್‌ನಿಂದ ದೂರದ ಯನ್ಚುವಾನ್ ಎಂಬ ಗ್ರಾಮೀಣ ಪ್ರಾಂತ್ಯದಲ್ಲಿ ಆರಂಭಿಸಿ, ಕಮ್ಯುನಿಸ್ಟ್‌ ಪಕ್ಷದ ಮೆಟ್ಟಿಲುಗಳನ್ನು ನಿಧಾನವಾಗಿ ಏರುತ್ತ, ತಮ್ಮ ಸಮಯಕ್ಕಾಗಿ ಕಾದಿದ್ದರು. ಬೀಜಿಂಗ್‌ನ ರಾಜಕೀಯ ರಂಗದಲ್ಲಿ ನಿಧಾನವಾಗಿಆದರೆ ನಿಖರವಾಗಿ ತಮ್ಮದೇ ಛಾಪನ್ನು ಮೂಡಿಸುತ್ತ ಬೆಳೆದುನಿಂತ ನಾಯಕ ಈ ಕ್ಸಿ ಜಿನ್
ಪಿಂಗ್. ಹೀಗಾಗಿ, ಅವರು ಇಂದು ಆ ದೇಶದ ಸರ್ವಾಧಿಕಾರಿಯಾಗಿ ರಾರಾಜಿಸುತ್ತಿರುವುದು ಸರ್ವವಿದಿತ ವಿಷಯವೇ ಆಗಿದ್ದರೂ, ಕಮ್ಯುನಿಸ್ಟ್‌ ಪಕ್ಷದ ಆಂತರಿಕ ಸಮೀಕರಣಗಳಲ್ಲಿ ಸರ್ವೋನ್ನತ ನಾಯಕನ ಸ್ಥಾನ ಆ ನಾಯಕನ ಇತ್ತೀಚಿನ ಗೆಲುವನ್ನಾಧರಿ ಸಿರುತ್ತದೆ ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ.

ಹೀಗಾಗಿ ಅಲ್ಲಿನ ಸರ್ವಾಧಿಕಾರಿಯೂ ಸತತವಾಗಿ ಒಂದರ ಮೇಲೊಂದರಂತೆ ಗೆಲುವುಗಳನ್ನು ಸಾಧಿಸುತ್ತ ಸಾಗದೆ ಹೋದರೆ, ಆತನ ಮಕುಟಕ್ಕೂ ಚ್ಯುತಿ ಬಂದೊದಗುವ ಪರಿಸ್ಥಿತಿ ಬರಲಾರದೆಂದು ಹೇಳಲಾಗುವುದಿಲ್ಲ. ಇದೇ ಹಿನ್ನೆಲೆಯಲ್ಲಿ ನಾವು ಪಿಎಲ್‌ಎನ ಉದ್ಧಟತನವನ್ನು ಅರ್ಥಮಾಡಿಕೊಳ್ಳಬೇಕು. ಕರೋನ ವೈರಸ್‌ನ ಕಬಂಧ ಬಾಹುಗಳ ಆಲಿಂಗನವನ್ನು ಇಡೀ ವಿಶ್ವದ ಅರ್ಥ ವ್ಯವಸ್ಥೆಯ ಮೇಲೆ ವ್ಯಾಪಿಸುವಂತೆ ಚೀನಾ ದೇಶವು ವುಹಾನ್‌ನ ಪ್ರಯೋಗಾಲಯದ ಮೂಲಕ ಮಾಡಿದೆ. ಅಮೆರಿಕ, ಯೂರೋಪ್ ಮತ್ತು ಹತ್ತು ಹಲವು ಇತರ ರಾಷ್ಟ್ರಗಳು ತಮ್ಮ ಆಮದು ರಫ್ತು ನೀತಿಯು ಹೇಗೆ ಚೀನಾ ದೇಶಕ್ಕೇ ಲಾಭದಾಯಕವೆಂಬುದನ್ನು ಮನಗಂಡು, ಅಲ್ಲಿಂದ ಆಮದಾಗುತ್ತಿದ್ದ ಪದಾರ್ಥಗಳ ಮೇಲೆ ಹಲವು ಬಗೆಯ ನಿರ್ಬಂಧಗಳನ್ನು ಹೇರಿ, ವಿಶ್ವಕ್ಕೇ ಕಾರ್ಖಾನೆ ಎಂದು ಹೆಸರು ಪಡೆದಿದ್ದ ಚೀನಾದ ಅರ್ಥವ್ಯವಸ್ಥೆ ಮಕಾಡೆ ಮಲಗುವಂತೆ ಮಾಡುವಲ್ಲಿ ಯಶಸ್ವಿ ಯಾಗಿವೆ.

ಇದರ ಪರಿಣಾಮವಾಗಿ, ಅಲ್ಲಿನ ಕಂಪನಿಗಳು ಕಾರ್ಖಾನೆಗಳಿಗೆ ಬೀಗ ಜಡಿದು, ಕಾರ್ಮಿಕರಿಗೆ ವೇತನ ನೀಡದೆ, ಬ್ಯಾಂಕ್ ಸಾಲಗಳ ಕಂತುಗಳನ್ನು ಕಟ್ಟದೆ, ಅಲ್ಲಿನ ಅರ್ಥ ವ್ಯವಸ್ಥೆ ಕುಸಿತದ ಅಂಚಿಗೆ ಬಂದು ನಿಂತಿದೆ. ಹಲವಾರು ಬ್ಯಾಂಕ್‌ಗಳು ಕುಸಿತದ ಅಂಚಿ ನಲ್ಲಿ ತೊಳಲಾಡುತ್ತಿವೆ. ಈ ಸಂದರ್ಭದಲ್ಲಿ ಕ್ಸಿ ಜಿನ್‌ಪಿಂಗ್, ಭಾರತದ ಮೇಲೆ ದಾಳಿ ಮಾಡಿಸುವ ದುಸ್ಸಾಹಸಕ್ಕೆ ಕೈಹಾಕಿ, ತಮ್ಮ ಆಂತರಿಕ ಹಿನ್ನಡೆಗಳಿಂದ ಜನರ ದೃಷ್ಟಿಯನ್ನು ಬೇರೆಡೆಗೆ ತಿರುಗಿಸಬೇಕೆಂಬ ಉದ್ದೇಶದೊಂದಿಗೆ ರಾಷ್ಟ್ರವಾದದ ನಡೆಯನ್ನು ಅವಲಂಬಿಸಿದ್ದಾರೆ.

ಆದರೆ ಕೊರೋನಾದ ಈ ವಿಷಮ ಘಳಿಗೆಯಲ್ಲಿಭಾರತದೊಡನೆ ಚೀನಾ ಯುದ್ಧೋನ್ಮಾದದ ನಡೆಯನ್ನು ಏಕೆ ಅನುಸರಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರವಾಗಿ ಹಲವು ಕಾರಣಗಳನ್ನು ನೀಡಬಹುದು. ಭಾರತವು ಇತ್ತೀಚಿನ ದಿನಗಳಲ್ಲಿ ಅಮೆರಿಕ ದೇಶದೊಂದಿಗೆ ತನ್ನ ರಕ್ಷಣಾನೀತಿಯನ್ನು ಹಿಂದೆಂದಿಗಿಂತಲೂ ನಿಕಟವಾಗಿ ಸಮ್ಮಿಳಿತಗೊಳಿಸುತ್ತಿರುವುದು, ಕ್ವಾಡ್(ಭಾರತ, ಜಪಾನ್, ಆಸ್ಟ್ರೇಲಿಯ ಮತ್ತು ಅಮೆರಿಕ, ಈ ನಾಲ್ಕು ದೇಶಗಳನ್ನೊಳಗೊಂಡ) ರಕ್ಷಣಾ ವ್ಯವಸ್ಥೆಯ ಸಬಲೀಕರಣ, ಬಿಆರ್‌ಐನಲ್ಲಿ
(ಬೆಲ್ಟ್‌ ರೋಡ್ ಇನಿಷಿಯೇಟಿವ್) ಭಾಗವಹಿಸಲು ಭಾರತವು ಒಪ್ಪದಿದ್ದುದು, ಜಮ್ಮ ಕಾಶ್ಮೀರ ರಾಜ್ಯವನ್ನು ಮೂರು ಕೇಂದ್ರಾ ಡಳಿತ ಪ್ರದೇಶಗಳಾಗಿ ಇತ್ತೀಚೆಗೆ ಭಾರತವು ವಿಂಗಡಿಸಿರುವುದರಿಂದಾಗಿ ಆ ಪ್ರದೇಶದ ಸಂಪೂರ್ಣ ಉಸ್ತುವಾರಿ ಈಗ ಕೇಂದ್ರಗೃಹ ಸಚಿವಾಲಯದ ಸುಪರ್ದಿಗೆ ಬಂದಿರುವುದು, ಭಾರತವು ಇತ್ತೀಚಿನ ದಿನಗಳಲ್ಲಿ ಗಡಿ ಪ್ರದೇಶದ ದುರ್ಗಮ ಸ್ಥಳಗಳಲ್ಲಿ ರಸ್ತೆಗಳನ್ನು ನಿರ್ಮಿಸಿ ಸುಲಭವಾಗಿ ತನ್ನ ಸೇನೆಯನ್ನು ಗಡಿ ಭಾಗಗಳಿಗೆ ಯುದ್ಧದ ಸಂದರ್ಭದಲ್ಲಿ ತಲುಪಿಸುವ ಶಕ್ತಿಯನ್ನು ಪಡೆದುಕೊಂಡಿ ರುವುದು ಮತ್ತು ಚೀನಾ ಪಾಕ್ ಎಕನಾಮಿಕ್ ಕಾರಿಡಾರ್‌ನ(ಸಿಪಿಇಸಿ) ರಸ್ತೆಗೆ ಅತಿ ಹತ್ತಿರದಲ್ಲಿ ಭಾರತೀಯ ಸೇನೆಯ ನಿಯೋಜನೆ (ಲಡಾಖ್ ಗಡಿಯ ಬಳಿ) ಈ ಎಲ್ಲ ಕಾರಣಗಳಿಂದಾಗಿ ಭಾರತಕ್ಕೆ ಪಾಠ ಕಲಿಸಬೇಕೆಂಬ ನಿರ್ಧಾರ ತೆಗೆದುಕೊಂಡು ಚೀನಾವು ಈ ದುಸ್ಸಾಹಸಕ್ಕೆ ಕೈಹಾಕಿದೆ. ಇದಲ್ಲದೆ, ಅಮೆರಿಕದಷ್ಟೇ ದೊಡ್ಡ ವಿಶ್ವ ಶಕ್ತಿ ತಾನೆಂಬ ಭ್ರಮೆಯಲ್ಲಿ ರುವ ಚೀನಾವು ಭವಿಷ್ಯದಲ್ಲಿ ವಿಶ್ವದ ಎಲ್ಲ ದೇಶಗಳೂ ಈ ವಿಷಯವನ್ನು ಅರ್ಥಮಾಡಿಕೊಂಡು ಅದರಂತೆ ನಡೆಯುವಂತೆ ಮಾಡಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿರುವಂತಿದೆ.

ಅಮೆರಿಕದಲ್ಲಿ ಇನ್ನು ಮೂರು ತಿಂಗಳಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿರುವುದರಿಂದ, ಡೊನಾಲ್ಡ್ ಟ್ರಂಪ್ ಮತ್ತು ಅಲ್ಲಿನ ಅಧಿಕಾರ ವರ್ಗ ಚುನಾವಣೆಯ ತಯಾರಿಯಲ್ಲಿ ತೊಡಗಿರುವ ಸಂದರ್ಭವನ್ನು ಉಪಯೋಗಿಸಿಕೊಂಡು ತನ್ನ ಶಕ್ತಿ
ಯನ್ನು ವಿಸ್ತರಿಸಿಕೊಳ್ಳಬೇಕೆಂಬುದೇ ಚೀನಾದ ದುರುದ್ದೇಶ. ಹಲವು ಸುತ್ತಿನ ಮಾತುಕತೆಗಳ ನಂತರವೂ ಕ್ಲಿಷ್ಟವಾಗುತ್ತ ಮುಂದು ವರೆದು, ಕಳೆದ ಮೂರು ತಿಂಗಳ ಅವಧಿಯಲ್ಲಿ ಎರಡೂ ಸೇನೆಗಳು ಮುಖಕ್ಕೆ ಮುಖಕೊಟ್ಟು ನಿಂತು ಯುದ್ಧದ ಕಾರ್ಮೋಡ ಗಳನ್ನು ಲಡಾಖ್‌ನ ಶೀತಲ ಮರುಭೂಮಿಯ ಮೇಲೆ ಆವರಿಸಿರುವಂತೆ ಮಾಡಿರುವ ಈ ಸಮಸ್ಯೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ.

ಆದರೆ, ಮೊದಲಿಗೆ ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡ ಚೀನಾ, ಭಾರತದ ದಿಟ್ಟ ಪ್ರತ್ಯುತ್ತರವನ್ನು ನಿರೀಕ್ಷಿಸಿರಲಿಲ್ಲ. ನಮ್ಮ ಸೇನೆಯು ಪ್ಯಾನಗಾಂಗ್ ತ್ಸೋನ ದಕ್ಷಿಣ ಭಾಗದಲ್ಲಿ ಚೀನಾದ ಸುಪರ್ದಿನಲ್ಲಿದ್ದ ಕೆಲವು ಪರ್ವತಗಳ ಶಿಖರಗಳ ಮೇಲೆ ಕಳೆದ ಕೆಲವು ದಿನಗಳಲ್ಲಿ ತನ್ನ ಹಿಡಿತ ಸಾಧಿಸಿ, ಮುಂದಿನ ಮಾತುಕತೆಗಳಲ್ಲಿ ಚೀನಾವು ಅನಿವಾರ್ಯವಾಗಿ ಕೊಟ್ಟು ತೆಗೆದು ಕೊಳ್ಳುವ ಮನೋಭಾವ ತೋರುವ ಹಾಗೆ ಮಾಡುವಲ್ಲಿ ಭಾರತವು ಸಫಲವಾಗಿದೆ. ಚೀನಾದ ಮಾಧ್ಯಮಗಳು ಮತ್ತು ಅಲ್ಲಿನ ಸರ್ಕಾರ ತಪ್ಪಾಗಿ ಗ್ರಹಿಸಿರುವಂತೆ, 1962ರಲ್ಲಿ ಚೀನಾ ಎದುರಿಸಿದ ದೇಶವಾಗಿ ಭಾರತ ಈಗ ಉಳಿದಿಲ್ಲ.

ಚೀನಾದ ಕಪಟ ನಡೆಗೆ ದಿಟ್ಟ ಪ್ರತ್ಯುತ್ತರ ನೀಡಬಲ್ಲ ಆತ್ಮನಿರ್ಭರ್ ದೇಶ ಇಂದಿನ 2020 ಸಂದರ್ಭದ ಭಾರತ ಎಂಬುದನ್ನು ಅಲ್ಲಿನ ದುರುಳ ನಾಯಕರು ಬೇಗ ಅರಿತುಕೊಂಡರೆ ಅವರಿಗೇ ಒಳ್ಳೆಯದು.