Friday, 22nd November 2024

ಸುರ್ಜೇವಾಲಾ ಎದೆ ನಡುಗಿಸಿದ ಇಬ್ರಾಹಿಂ ಭವಿಷ್ಯ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಕೆಲ ದಿನಗಳ ಹಿಂದೆ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು.

ಪಕ್ಷ ತೊರೆಯಲು ನಿರ್ಧರಿಸಿರುವ ಸಿ.ಎಂ.ಇಬ್ರಾಹಿಂ ಅವರನ್ನು ಹೇಗಾದರೂ ಮಾಡಿ ಕೈ ಪಾಳೆಯದ ಉಳಿಸಿಕೊಳ್ಳಬೇಕು ಎಂಬುದು ಸುರ್ಜೇವಾಲಾ ಅವರ ಯೋಚನೆ. ಹಾಗಂತಲೇ ಇಬ್ರಾಹಿಂ ಅವರ ಜತೆಗಿನ ಮಾತುಕತೆಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಸುರ್ಜೇವಾಲಾ ‘೨೦೧೩ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾದವರಲ್ಲಿ ನೀವೂ ಒಬ್ಬರು. ನಿಮ್ಮಂಥವರು ಪಕ್ಷ ಬಿಟ್ಟು ಹೋಗಬಾರದು.

ನಿಜ, ನಿಮಗೆ ಪಕ್ಷದಲ್ಲಿ ಮುಜುಗರವಾಗಿದೆ ಅನ್ನುವುದು ನನಗೆ ಗೊತ್ತು. ಆದರೆ ಕೋಮುವಾದಿ ಶಕ್ತಿಗಳು ವಿಜೃಂಭಿಸುತ್ತಿರುವ ಈ ಕಾಲದಲ್ಲಿ ನಿಮ್ಮಂಥ ನಾಯಕರು ಜಾತ್ಯತೀತ ಶಕ್ತಿಗಳ ಜತೆ ಗಟ್ಟಿಯಾಗಿ ನಿಲ್ಲಬೇಕು’ ಎಂದು ಮನವಿ ಮಾಡಿದರು. ಸುರ್ಜೇವಾಲಾ ಅವರ ಮಾತು ಕೇಳಿದ ಇಬ್ರಾಹಿಂ ನಾನೇನು ಕೋಮುವಾದಿ ಶಕ್ತಿಗಳ ಜತೆ ಹೋಗಲು ನಿರ್ಧರಿಸಿಲ್ಲ. ಬದಲಿಗೆ ಜಾತ್ಯತೀತ ಶಕ್ತಿ ಅನ್ನಿಸಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜೆಡಿಎಸ್‌ಗೆ ಹೋಗಲು ಬಯಸಿದ್ದೇನೆ.

ಹೇಗಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಗಳೂ ಸ್ವಂತ ಶಕ್ತಿಯ ಮೇಲೆ ಅಧಿಕಾರ ಹಿಡಿಯುವುದಿಲ್ಲ. ಆಗ ಮತ್ತೆ ಕಾಂಗ್ರೆಸ್ – ಜೆಡಿಎಸ್ ಕೈಗೂಡಿಸಲು ಅವಕಾಶವಿದೆ. ಆ ರೀತಿಯಿಂದಲಾದರೂ ನಾನು ನಿಮ್ಮ ಜತೆಗಿರುತ್ತೇನೆ ಎಂದರು.
ಇಬ್ರಾಹಿಂ ಅವರ ಮಾತು ಕೇಳಿ ಅಚ್ಚರಿಗೊಂಡ ರಣದೀಪ್ ಸಿಂಗ್ ಸುರ್ಜೇವಾಲಾ; ದೇಶದ ಜನ ಬಿಜೆಪಿ ಆಡಳಿತದಿಂದ ರೋಸಿ
ಹೋಗಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಶ್ಚಿತವಾಗಿ ಕಾಂಗ್ರೆಸ್ ಪಕ್ಷವೇ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬರುತ್ತದೆ.

ಇದು ಹೇಗೆ ಸಾಧ್ಯ? ಅನ್ನುವುದನ್ನು ನನ್ನ ಕೈಲಿರುವ ಫೀಡ್ ಬ್ಯಾಕ್ ಹೇಳುತ್ತಿದೆ ಎಂದರು. ಸುರ್ಜೇವಾಲಾ ಮಾತು ಕೇಳಿ ನಕ್ಕ ಸಿ.ಎಂ.ಇಬ್ರಾಹಿಂ ಬಿಜೆಪಿಯ ಕೆಟ್ಟ ಆಡಳಿತದಿಂದ ರೊಚ್ಚಿಗೆದ್ದು ಜನ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆ ಎಂಬುದು ಭ್ರಮೆ. ಅದು ನಿಜವೇ ಆಗಿದ್ದರೆ ಕಳೆದ ಲೋಕಸಭಾ ಚುನಾವಣೆಯ ಬಿಜೆಪಿ ನೆಲ ಕಚ್ಚಿ ಕಾಂಗ್ರೆಸ್ ಪಕ್ಷ ದಿಲ್ಲಿ ಗದ್ದುಗೆ ಹಿಡಿಯಬೇಕಿತ್ತು. ಆದರೆ ರಾಜಕಾರಣದ ವಾಸ್ತವವೇ ಬೇರೆ ಎಂದರು.

ಇದರಿಂದ ಮತ್ತಷ್ಟು ಅಚ್ಚರಿಗೊಂಡ ಸುರ್ಜೇವಾಲಾ ‘ಹಾಗಿದ್ದರೆ ಕರ್ನಾಟಕದ ಮುಂದಿನ ರಾಜಕೀಯ ಚಿತ್ರ ಹೇಗಿರುತ್ತದೆ ಅಂತ
ಹೇಳುತ್ತೀರಿ?’ ಅಂತ ಕೇಳಿzರೆ. ಕರ್ನಾಟಕದ ರಾಜಕಾರಣವನ್ನು ಕಳೆದ ಐವತ್ತು ವರ್ಷಗಳಿಂದ ನೋಡುತ್ತಿರುವ ಇಬ್ರಾಹಿಂ
ವಿವರಿಸತೊಡಗಿzರೆ. ನೋಡಿ ರಣದೀಪ್ ಜೀ, ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಹೇಳಬೇಕೆಂದರೆ ಅದು ೨೦೦೪ರ ಚುನಾವಣೆಯ ಫಲಿತಾಂಶಕ್ಕೆ ಹೋಲಿಕೆಯಾಗಲಿದೆ.

ಆ ಸಂದರ್ಭದಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಎಪ್ಪತ್ತೊಂಭತ್ತು ಸೀಟು ಗಳಿಸಿತ್ತು. ಅದೇ ಕಾಲಕ್ಕೆ ಕಾಂಗ್ರೆಸ್ ಪಕ್ಷ ಅರವತ್ತೈದು ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ದೇವೇಗೌಡರ ನೇತೃತ್ವದ ಜನತಾ ದಳ ಐವತ್ತೆಂಟು ಕ್ಷೇತ್ರಗಳಲ್ಲಿ ಗೆಲುವು ಗಳಿಸಿತ್ತು. ಅವತ್ತು ಬಿಜೆಪಿಗೆ ಸರಕಾರ ರಚಿಸುವ ಆಸೆ ಇತ್ತು. ಮತ್ತು ಈ ಸಂಬಂಧ ದೇವೇಗೌಡರ ಪುತ್ರ ಕುಮಾರಸ್ವಾಮಿ ಅವರ ಜತೆ ಮಾತುಕತೆ ಯನ್ನೂ ನಡೆಸಿ ಸಮ್ಮಿಶ್ರ ಸರಕಾರ ರಚಿಸುವ ಕುರಿತು ತನ್ನ ಉತ್ಸುಕತೆ ತೋರಿಸಿತು. ಆದರೆ ಆ ಸಂದರ್ಭದಲ್ಲಿ ಬಿಜೆಪಿಯ ಜತೆ ಕೈ
ಜೋಡಿಸಲು ದೇವೇಗೌಡರು ಒಪ್ಪಲಿಲ್ಲ.

ಬದಲಿಗೆ ಜಾತ್ಯಾತೀತ ಶಕ್ತಿ ಅನ್ನಿಸಿಕೊಂಡ ಕಾಂಗ್ರೆಸ್ ಜತೆ ಸೇರಿ ಸರಕಾರ ರಚಿಸಲು ಮುಂದಾದರು. ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ ಸರಕಾರ ಅಸ್ತಿತ್ವಕ್ಕೆ ಬಂದಿದ್ದು ಹೀಗೆ. ಆದರೆ ಅಧಿಕಾರ ಹಿಡಿದ ನಂತರ ಕಾಂಗ್ರೆಸ್‌ನ ಕೆಲ ನಾಯಕರು ಜೆಡಿಎಸ್ ಪಕ್ಷವನ್ನು ನುಂಗಲು ಹವಣಿಸಿದರು. ಆದರೆ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರಕಾರವನ್ನು ಬೀಳಿಸಿ ಬಿಜೆಪಿಯ ಜತೆ ಕೈ ಜೋಡಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಕು ದೆಸೆಯನ್ನು ನೋಡಿದರೆ ೨೦೦೪ರ ಫಲಿತಾಂಶವೇ ಗ್ಯಾರಂಟಿ ಎನ್ನಿಸುತ್ತದೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು. ಹಾಗಿದ್ದರೆ ಸಿದ್ಧರಾಮಯ್ಯ ಫ್ಯಾಕ್ಟರ್ ಕಾಂಗ್ರೆಸ್‌ಗೆ ಲಾಭ ತಂದುಕೊಡುವುದಿಲ್ಲವಾ? ಅದೇ ಕಾಲಕ್ಕೆ ಬಿಜೆಪಿಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್‌ನಿಂದ ರಾಜ್ಯ ರಾಜಕಾರಣದ ಮೇಲೆ ಆಗುವ ಪ್ರಭಾವ ಏನು? ಅಂತ ಸುರ್ಜೇವಾಲಾ ಕೇಳಿದ್ದಾರೆ.

ಯಥಾ ಪ್ರಕಾರ ಇಬ್ರಾಹಿಂ ಅವರ ಮಾತುಗಳು ಓತಪ್ರೋತವಾಗಿ ಸುರ್ಜೇವಾಲಾ ಅವರ ಕಿವಿಗಪ್ಪಳಿಸಿವೆ. ನೋಡಿ ಸುರ್ಜೇವಾಲಾ ಜೀ,೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಫ್ಯಾಕ್ಟರ್ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟಿದ್ದು ನಿಜ. ಮುಸ್ಲಿಮರ ಬೆಂಬಲವೂ ಇದ್ದುದರಿಂದ ೨೦೧೮ರಲ್ಲೂ ಸಿದ್ದರಾಮಯ್ಯ ಫ್ಯಾಕ್ಟರ್ ರಾಜ್ಯ ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಅವತ್ತು ಸಿದ್ದರಾಮಯ್ಯ ಅವರಿಗಿದ್ದ ಶಕ್ತಿ ಇವತ್ತಿಲ್ಲ.

ಯಾಕೆಂದರೆ ಸಿದ್ದರಾಮಯ್ಯ ಅವರ ಮೂಲ ಶಕ್ತಿ ಅನ್ನಿಸಿಕೊಂಡ ಕುರುಬ ಸಮುದಾಯ ಈ ಹಿಂದಿದ್ದಂತೆ ಅವರ ಜತೆಗಿಲ್ಲ. ಇವತ್ತಿಗೂ ಸಿದ್ದರಾಮಯ್ಯ ಅವರೇ ಕುರುಬ ಸಮುದಾಯದ ನಂಬರ್ ಒನ್ ನಾಯಕ ಎಂಬುದು ನಿಜ. ಆದರೆ ಕುರುಬರಿಗೆ ಎಸ್.ಟಿ.ಮೀಸಲಾತಿ ಸಿಗಬೇಕು ಎಂಬ ಹೋರಾಟ ಆರಂಭವಾದಂದಿನಿಂದ ಕುರುಬರ ವೋಟ್ ಬ್ಯಾಂಕಿನಲ್ಲಿ ಸಿದ್ದರಾಮಯ್ಯ ಅವರ ಹೆಸರಿಗಿದ್ದ ಷೇರು ಮೌಲ್ಯ ಕಡಿಮೆಯಾಗಿದೆ.

ಇದೇ ರೀತಿ ಕಾಂಗ್ರೆಸ್ ಅನ್ನು ಹಿಂದಿನಿಂದಲೂ ಪವರ್ ಫುಲ್ ಆಗಿ ಬೆಂಬಲಿಸುತ್ತಾ ಬಂದ ಕರ್ನಾಟಕದ ಮುಸ್ಲಿಂ ಮತ
ಬ್ಯಾಂಕಿನಲ್ಲೂ ಅವರಿಂದಾಗಿ ಕಾಂಗ್ರೆಸ್‌ನ ಷೇರ್ ವ್ಯಾಲ್ಯೂ ಕಡಿಮೆಯಾಗಿದೆ. ಉದಾಹರಣೆಗೆ ನೋಡಿ. ಹಿಂದಿನಿಂದಲೂ ಕರ್ನಾಟಕದ ಮುಸ್ಲಿಂ ನಾಯಕರು ಅನ್ನಿಸಿಕೊಂಡವರು ಯಾರಿದ್ದಾರೆ? ಇವರೆಲ್ಲ ಹಿಂದೂಗಳ ವಿಶ್ವಾಸವನ್ನೂ ಗಳಿಸಿದ್ದವರು. ಹಿಂದೂಗಳ ವಿಶ್ವಾಸ ಗಳಿಸಿದವರು ಮುಸ್ಲಿಮರ ನಿಜ ನಾಯಕರಾಗಿದ್ದಾರೆ.

ನನ್ನ ಬಗ್ಗೆ ನಾನೇ ಹೇಳಿಕೊಳ್ಳುವುದು ಸರಿಯಲ್ಲ. ಆದರೆ ಏಕಕಾಲಕ್ಕೆ ಹಿಂದೂ – ಮುಸ್ಲಿಮರ ವಿಶ್ವಾಸ ಗಳಿಸಿದ ನನಗೆ ಸಿದ್ದರಾಮಯ್ಯ ಅವರ ಕಾಲದಲ್ಲಿ ಅನ್ಯಾಯವಾಯಿತು. ಸದಾ ಕಾಲ ನನ್ನ ಬಳಿ ಚೆನ್ನಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅದೇ ಕಾಲಕ್ಕೆ ಕರ್ನಾಟಕದ ಮುಸ್ಲಿಂ ನಾಯಕ ಅಂತ ಜಮೀರ್ ಅಹ್ಮದ್ ಅವರನ್ನು ಎಮರ್ಜ್ ಮಾಡಲು ನಿರಂತರ ಪ್ರಯತ್ನ ಮಾಡತೊಡಗಿದರು.

ಇದೇ ಕಾರಣಕ್ಕಾಗಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಾ ಬಂದರು. ಇನ್ನು ರೋಷನ್ ಬೇಗ್ ಅವರನ್ನು ತೆಗೆದುಕೊಳ್ಳಿ. ಅವರೂ ಹಿಂದೂಗಳ ವಿಶ್ವಾಸ ಗಳಿಸಿದ್ದ ಮುಸ್ಲಿಂ ನಾಯಕ. ಆದರೆ ಅವರನ್ನೂ ವ್ಯವಸ್ಥಿತವಾಗಿ ಸಿದ್ದರಾಮಯ್ಯ ಬಡಿದು ಹಾಕಿದರು.
ಇನ್ನು ನಮ್ಮ ಅಜೀಜ್ ಸೇಠ್ ಅವರ ಮಗ ತನ್ವೀರ್ ಸೇಠ್ ಕತೆ ಏನಾಯಿತು? ಮೈಸೂರಿಗೆ ಹೋಗಿ ನೋಡಿ. ಇವತ್ತಿಗೂ ತನ್ನ ಕ್ಷೇತ್ರದ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳ ವಿಶ್ವಾಸವನ್ನೂ ಗಳಿಸಿದ ನಾಯಕ ಅವರು. ಈ ಜಮೀರ್ ಅಹ್ಮದ್ ಅವರನ್ನು ಮೇಲೆತ್ತುವ ಸಲುವಾಗಿ ತನ್ವೀರ್ ಸೇಠ್ ಅವರನ್ನೂ ತುಳಿಯಲಾಯಿತು.

ಇನ್ನು ಎನ್.ಎ.ಹ್ಯಾರಿಸ್ ಕತೆಯೂ ಅದೇ. ಕರಾವಳಿ ಕರ್ನಾಟಕದಲ್ಲಿ ತಮ್ಮ ಸಜ್ಜನಿಕೆಯಿಂದಲೇ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿದ ಯು.ಟಿ. ಖಾದರ್ ಕತೆ ಕೂಡಾ ಇದೇ. ಒಟ್ಟಿನಲ್ಲಿ ಜಮೀರ್ ಅಹ್ಮದ್ ನೆತ್ತಿಯ ಮೇಲೆ ಮುಸ್ಲಿಂ ನಾಯಕ ಎಂದು ಕಿರೀಟ ಕೂರಿಸಲು ಹೋಗಿ ಸಿದ್ದರಾಮಯ್ಯ ಸಾಬರ ವೋಟ್ ಬ್ಯಾಂಕ್ ಒಡೆದು ಹೋಗುವಂತೆ ಮಾಡಿದ್ದಾರೆ.

ಈಗ ಆ ವೋಟ್ ಬ್ಯಾಂಕ್ ಹಾಳಾಗಲು ಬಿಡಬಾರದಲ್ಲ? ಕಾಂಗ್ರೆಸ್ ನಲ್ಲಿ ಉಳಿದುಕೊಂಡರೆ ಅದು ಹಾಳಾಗುವುದನ್ನು ತಡೆಯಲು
ಸಾಧ್ಯವಿಲ್ಲ. ಹೀಗಾಗಿ ನಾನು ಜೆಡಿಎಸ್ ಕಡೆ ಹೋಗುತ್ತಿದ್ದೇನೆ. ನಿಮಗೆ ಅನುಮಾನ ಬೇಡ. ಒಕ್ಕಲಿಗರು ಮತ್ತು ಮುಸ್ಲಿಮರ ಮತ
ಕ್ರೋಡೀಕರಣಗೊಂಡರೆ ಜೆಡಿಎಸ್ ಕನಿಷ್ಠ ಐವತ್ತರಿಂದ ಅರವತ್ತು ಸೀಟುಗಳನ್ನು ಗೆಲ್ಲುತ್ತದೆ. ಹೀಗಿರುವಾಗ ಕಾಂಗ್ರೆಸ್ ಜತೆ ಗಟ್ಟಿಯಾಗಿ ಉಳಿಯುವ ವೋಟ್ ಬ್ಯಾಂಕ್‌ಗಳು ಯಾವುವು ರಣದೀಪ್ ಜೀ? ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಯಾಗಬೇಕು ಅಂತ ಒಕ್ಕಲಿಗರಲ್ಲಿ ಕನಸಿರಬಹುದು.

ಆದರೆ ಕಾಂಗ್ರೆಸ್ ಮೇಲೇಳುವ ಕುರುಹು ಕಾಣದೇ ಇರುವಾಗ ಅವರೇಕೆ ಹೋಲ್‌ಸೇಲಾಗಿ ನಿಮ್ಮನ್ನು ಬೆಂಬಲಿಸಿ ಮತ ವೇಸ್ಟು ಮಾಡಿಕೊಳ್ಳುತ್ತಾರೆ?  ಯಾವುದೇ ಜಾತಿ ಇರಲಿ, ತಮ್ಮ ಹಿತ ಕಾಯುವ ಕ್ಯಾಂಡಿಡೇಟ್ ಇಂಥವರು ಎಂದು ಯೋಚಿಸುವುದು ಬೇರೆ. ಆದರೆ ತಮ್ಮ ಎಣಿಕೆ ಸುಳ್ಳಾಗುತ್ತಿದೆ ಅನ್ನಿಸಿದರೆ ಅವರು ಪರ್ಯಾಯ ಶಕ್ತಿಯ ಕಡೆ ನೋಡುತ್ತಾರೆ. ೧೯೮೯ರ ಅಸೆಂಬ್ಲಿ ಎಲೆಕ್ಷ ನ್ ವೇಳೆಗೆ ದೇವೇಗೌಡರೇ ಒಕ್ಕಲಿಗ ಸಮುದಾಯದ ನಂಬರ್ ಒನ್ ನಾಯಕ.

ಆದರೆ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯುತ್ತದೆ ಎಂಬ ಸುಳಿವು ಸಿಕ್ಕಾಗ
ಒಕ್ಕಲಿಗರು ತಮ್ಮ ಪರಮೋಚ್ಚ ನಾಯಕ ದೇವೇಗೌಡರ ಕೈ ಬಿಟ್ಟು ಕಾಂಗ್ರೆಸ್ ಕೈ ಹಿಡಿದರು. ಇದನ್ನೆಲ್ಲ ನಿಮಗೇಕೆ ಹೇಳಿದೆ ಎಂದರೆ ಡಿ.ಕೆ.ಶಿವಕುಮಾರ್ ಫ್ಯಾಕ್ಟರು ಏನಾಗಬಹುದು? ಎಂಬ ಕಾರಣಕ್ಕಾಗಿ.

ಉಳಿದಂತೆ ಕಾಂಗ್ರೆಸ್ ಪಕ್ಷಕ್ಕೆ ಹಿಂದಿನಂತೆ ಹಿಂದುಳಿದ ವರ್ಗಗಳ ವೋಟು ದಕ್ಕುವುದಿಲ್ಲ, ಇನ್ನು ದಲಿತ ನಾಯಕರು ಅಂತ ನೀವೇನು ಅಂದುಕೊಂಡಿದ್ದೀರಿ? ಇವರೆಲ್ಲ ತಮ್ಮ ಜಿಗಳಲ್ಲಿ ಪ್ರಭಾವಿಗಳೇ ಹೊರತು ಇಡೀ ರಾಜ್ಯದಲ್ಲಲ್ಲ. ಹಾಗೆಯೇ ದಲಿತರಲ್ಲಿ ಎಡಗೈ ಸಮುದಾಯದವರು ನಿಮ್ಮ ಜತೆಗಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷ ಅರವತ್ತರಿಂದ ಎಪ್ಪತ್ತು ಸೀಟು ಗೆದ್ದರೆ ಅದೇ ಪುಣ್ಯ.
ಹೀಗೆ ಸಿ.ಎಂ.ಇಬ್ರಾಹಿಂ ಅವರು ಒಂದೇ ಸಮನೆ ಹೇಳುತ್ತಿದ್ದುದನ್ನು ಕೇಳಿದ ಸುರ್ಜೇವಾಲಾ ಮತ್ತೆ ಕುತೂಹಲದಿಂದ ‘ನೀವು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಿದಿರಿ.ಅಂದ ಮೇಲೆ ಬಿಜೆಪಿಯಲ್ಲಿ ಯಡಿಯೂರಪ್ಪ ಫ್ಯಾಕ್ಟರ್ ಏನಾಗಬಹುದು?’ ಎಂದು ಪ್ರಶ್ನಿಸಿದರು.

ರಣದೀಪ್ ಜೀ, ಸದ್ಯದ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಪದಚ್ಯುತಗೊಳಿಸಲಿದೆ. ಒಂದು ವೇಳೆ ಪದಚ್ಯುತ
ಗೊಳಿಸದೆ ಮುಂದುವರಿಸಿತು ಎಂದಿಟ್ಟುಕೊಳ್ಳಿ. ಆದರೂ ಈಗ ಶುರುವಾಗಿರುವ ಬಿಜೆಪಿಯ ಡೌನ್ ಫಾಲ್ ಅನ್ನು ತಡೆಗಟ್ಟಲು ಖುದ್ದು ರೇಂದ್ರಮೋದಿ – ಅಮಿತ್ ಷಾ ಅವರಿಗೂ ಸಾಧ್ಯವಿಲ್ಲ ಎಂದರು ಇಬ್ರಾಹಿಂ.

ಈಗ ನನಗಿರುವ ಮಾಹಿತಿಯ ಪ್ರಕಾರ ಮೇ ತಿಂಗಳಲ್ಲಿ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸುವ ಪ್ರೊಸೆಸ್ ಆರಂಭ ವಾಗಲಿದೆ. ಅವರನ್ನು ಪದಚ್ಯುತಗೊಳಿಸಿದರೆ ಬಿಜೆಪಿಗೆ ಮತ್ತಷ್ಟು ಹಾನಿಯಾಗುವುದು ನಿಶ್ಚಿತ. ಯಾಕೆಂದರೆ ಯಾರೇನೇ ಹೇಳಿ ದರೂ ಯಡಿಯೂರಪ್ಪ ಅವರಿಗೆ ಪರ್ಯಾಯ ಅನ್ನಿಸಿಕೊಂಡ ಒಬ್ಬ ನಾಯಕನನ್ನು ಹುಡುಕಲು ಬಿಜೆಪಿ ವರಿಷ್ಠರಿಗೆ ಸಾಧ್ಯ ವಾಗಿಲ್ಲ. ಆದರೆ ಕರ್ನಾಟಕದ ನೆಲೆಯಲ್ಲಿ ತಾವು ಹೇಳಿದಂತೆ ಕೇಳುವ ಒಬ್ಬ ನಾಯಕ ಬೇಕು ಎಂಬ ಬಯಕೆ ಬಿಜೆಪಿ ವರಿಷ್ಠ ರಲ್ಲಿದೆ. ಹೀಗಾಗಿ ಅವರು ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಲು ಕಾಯುತ್ತಿದ್ದಾರೆ.

ಅಂದ ಹಾಗೆ ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಸರ್ವೋಚ್ಚ ನಾಯಕ ಎಂಬುದು ನಿಜ. ಆದರೆ ಕಳೆದ
ಚುನಾವಣೆಯವರೆಗೆ ಇದ್ದ ಈ ಭಾವನೆ ಈಗ ಕುಸಿದಿದೆ. ಲಿಂಗಾಯತರ ಹಲವು ಒಳಪಂಗಡಗಳು ಯಡಿಯೂರಪ್ಪ ಅವರ
ವಿರುದ್ಧ ತಿರುಗಿಬಿದ್ದಿವೆ. ಪಂಚಮಸಾಲಿ ಲಿಂಗಾಯತರ ಹೋರಾಟ ಇದಕ್ಕೊಂದು ಉದಾಹರಣೆ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರು ಪಂಚಮಸಾಲಿ ಲಿಂಗಾಯತರಲ್ಲಿರುವ ಅಸಮಾಧಾನವನ್ನು ತೂಗಿಸಿಕೊಂಡು ಹೋಗಬಹುದು. ಆದರೆ ಬಹುಕಾಲ ಅದು ಸಾಧ್ಯವಿಲ್ಲ.

ಹೀಗಾಗಿ ಯಡಿಯೂರಪ್ಪ ಅವರಿದ್ದರೂ, ಮುಂದಿನ ಚುನಾವಣೆಗೆ ಅವರದೇ ನೇತೃತ್ವ ಎಂದರೂ ಲಿಂಗಾಯತ ಸಮುದಾಯದ ಸಾಲಿಡ್ ಬೆಂಬಲ ಅವರ ಜತೆಗಿರುವುದಿಲ್ಲ. ಇದು ಬಿಜೆಪಿ ಹೈಕಮಾಂಡ್‌ಗೂ ಗೊತ್ತಿದೆ. ಹೀಗಾಗಿ ಚುನಾವಣೆ ಯಾವ ಸಂದರ್ಭದ ಎದುರಾಗಲಿ. ಆದರೆ ಬಿಜೆಪಿ ಎಪ್ಪತ್ತೈದರಿಂದ ಎಂಭತ್ತು ಸೀಟುಗಳನ್ನು ಗಳಿಸುವಷ್ಟಕ್ಕೆ ಸುಸ್ತಾಗುತ್ತದೆ. ಯಡಿಯೂರಪ್ಪ ಅವರನ್ನು ತೆಗೆದು ಹಾಕಿದರೂ ಅದು ಕರ್ನಾಟಕದಲ್ಲಿ ನಂಬರ್ ಒನ್ ಪಾರ್ಟಿಯಾಗಿ ಮೇಲೆದ್ದು ನಿಲ್ಲುವುದು ಖಚಿತ. ಯಾಕೆಂದರೆ ಬಿಜೆಪಿಗೆ ಯಡಿಯೂರಪ್ಪ ಅವರಿಲ್ಲದಿದ್ದರೂ ನರೇಂದ್ರಮೋದಿ ಹಾಗೂ ಅಮಿತ್ ಷಾ ಶಕ್ತಿ ಇರುವುದರಿಂದ ಇದು
ಸಾಧ್ಯವಾಗಲಿದೆ.

ಹೀಗೆ ಯಾವ ಪಕ್ಷವೂ ಸ್ವಯಂ ಬಲದ ಮೇಲೆ ಅಧಿಕಾರ ಹಿಡಿಯುವುದಿಲ್ಲ ಎಂದಾದಾಗ ಸಮ್ಮಿಶ್ರ ಸರಕಾರ ರಚಿಸುವುದು
ಅನಿವಾರ್ಯವಾಗುತ್ತದೆ. ಇಂತಹ ಕಾಲದಲ್ಲಿ ನೀವು ಜಾತ್ಯತೀತ ದಳದ ಜತೆ ಕೈ ಜೋಡಿಸುವುದು ಅನಿವಾರ್ಯವಾಗಲಿದೆ.
ಒಂದು ವೇಳೆ ಆಗಲೂ ಸಿದ್ದರಾಮಯ್ಯ ಫ್ಯಾಕ್ಟರ್‌ಗೆ ಕಾಂಗ್ರೆಸ್ ವರಿಷ್ಠರು ಹೆಚ್ಚು ಬೆಲೆ ನೀಡಿದರೆ ಅನುಮಾನ ಬೇಡ. ದೇವೇಗೌಡರ
ಮಗ ಕುಮಾರಸ್ವಾಮಿ ಬಿಜೆಪಿ ಜತೆ ಕೈ ಜೋಡಿಸಿ ಸಮ್ಮಿಶ್ರ ಸರಕಾರ ರಚಿಸುವ ಸ್ಥಿತಿ ಬರಬಹುದು. ಹಾಗಾಗಬಾರದು ಎಂದರೆ ಜೆಡಿಎಸ್ ವಿರೋಧಿ ಭಾವನೆಯಿಂದ ವರ್ತಿಸುವುದನ್ನು ಸಿದ್ದರಾಮಯ್ಯ ಕೈ ಬಿಡಲೇಬೇಕು.

ಈ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ. ನನಗೆ ಗೊತ್ತಿರುವ ಪ್ರಕಾರ ಮಾಜಿ ಪ್ರಧಾನಿ ದೇವೇಗೌಡರಿಗೆ ಕೋಮುವಾದಿ ಬಿಜೆಪಿಯ ಜತೆ ಹೋಗಲು ಇಷ್ಟವಿಲ್ಲ. ಆದರೆ ಕಾಂಗ್ರೆಸ್ ಏನಾದರೂ ಆಟ ಆಡಿದರೆ, ಪಕ್ಷದ ಶಾಸಕರ ಅನಿವಾರ್ಯತೆಗಾಗಿ ಕುಮಾರಸ್ವಾಮಿ ಅವರು ಕೈಗೊಳ್ಳುವ ಯಾವುದೇ ನಿರ್ಧಾರವನ್ನು ತಡೆಗಟ್ಟಲು ದೇವೇಗೌಡರ ಕೈಲೂ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ರೂಪುಗೊಳ್ಳಲಿರುವ ಕರ್ನಾಟಕದ ಚಿತ್ರಣ ಇದೇ ರಣದೀಪ್ ಜೀ. ನಿಮ್ಮ ಫೀಡ್ ಬ್ಯಾಕ್ ಏನಿದೆಯೋ? ನನಗೆ ಗೊತ್ತಿಲ್ಲ. ಆದರೆ ಕಳೆದ ಐವತ್ತು ವರ್ಷಗಳಿಂದ ಕರ್ನಾಟಕದ ರಾಜಕಾರಣವನ್ನು ಹತ್ತಿರದಿಂದ ನೋಡಿದವನು ನಾನು.

ಇದನ್ನೂ ನಿಮ್ಮ ಬ್ಯಾಗಿನಲ್ಲಿಟ್ಟುಕೊಳ್ಳಿ ಎಂದು ಮಾತಿಗೆ ವಿರಾಮ ನೀಡಿದ್ದಾರೆ ಸಿ.ಎಂ.ಇಬ್ರಾಹಿಂ. ಇಷ್ಟಾದ ನಂತರವೂ ಸುರ್ಜೇವಾಲಾ ‘ಅದೇನೇ ಇರಲಿ ಇಬ್ರಾಹಿಂ ಅವರೇ, ನಿಮ್ಮನ್ನು ಕಳೆದುಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಇಷ್ಟವಿಲ್ಲ. ಫಲಿತಾಂ
ಶಗಳೇನಾಗುತ್ತವೋ? ಅದು ಮುಂದಿನ ಮಾತು. ದಯವಿಟ್ಟು ನಿಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ ಎಂದಿದ್ದಾರೆ.

ಆಗ ಸಿ.ಎಂ.ಇಬ್ರಾಹಿಂ ‘ಒಂದು ಕೆಲಸ ಮಾಡುತ್ತೀರಾ? ನೀವು ಹೇಳಿದ್ದೀರಿ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನೀವು ನನ್ನ
ಮಾತೊಂದನ್ನು ನಡೆಸಿಕೊಡುತ್ತೀರಾ? ಎಂದಿzರೆ. ಅದೇನು ಹೇಳಿ ಇಬ್ರಾಹಿಂ ಅವರೇ ಎಂದಿದ್ದಾರೆ ಸುರ್ಜೇವಾಲಾ. ಆಗ ಇಬ್ರಾಹಿಂ ‘ಮುಂದಿನ ಚುನಾವಣೆಯಲ್ಲಿ ನಾನು ಹೇಳಿದ ನಲವತ್ತು ಮಂದಿಗೆ ಟಿಕೇಟು ಕೊಡಿ. ಇವರೆಲ್ಲ ಗೆಲ್ಲುವ ಕ್ಯಾಂಡಿಡೇಟು ಗಳೇ. ಇದನ್ನು ಮಾಡಲು ನಿಮಗೆ ಸಾಧ್ಯವೇ? ಎಂದು ಪ್ರಶ್ನಿಸಿದಾಗ ಸುರ್ಜೇವಾಲಾ ಮುಖ ಸಪ್ಪಗಾಗಿದೆ. ಹಾಗಂತಲೇ; ಈ ವಿಷಯದಲ್ಲಿ ನಾನು ಹೇಗೆ ಭರವಸೆ ಕೊಡಲು ಸಾಧ್ಯ?ಅಂತ ಕೇಳಿದ್ದಾರೆ.

ಆಗ ನಗುತ್ತಾ ಮೇಲೆದ್ದ ಇಬ್ರಾಹಿಂ ‘ಕಾಂಗ್ರೆಸ್ ಪಕ್ಷದಲ್ಲಿ ಉಳಿಯಬೇಕು ಅಂದರೆ ನನಗೆ ನೆರಳು ಕೊಡುವ ಯಾವ ಮರವೂ ಇಲ್ಲ
ಅನ್ನುವುದನ್ನು ತೋರಿಸುವ ಸಲುವಾಗಿಯೇ ನಾನಿದನ್ನು ನಿಮಗೆ ಹೇಳಿದೆ ರಣದೀಪ್ ಜಿ. ನಿಮ್ಮ ಪಕ್ಷಕ್ಕೆ ಒಳ್ಳೆಯದಾಗಲಿ’ ಎಂದು ಹೇಳಿದವರೇ ಅಲ್ಲಿಂದ ಹೊರನಡೆದರು.