Thursday, 12th December 2024

ವರ್ಷದಿಂದ ವರ್ಷಕ್ಕೆ ಭದ್ರವಾಗುತ್ತಿರುವ ಸುವರ್ಣ ಸೇತುವೆ

ವಿದೇಶವಾಸಿ

ಕಿರಣ್ ಉಪಾಧ್ಯಾಯ ಬಹ್ರೈನ್

dhyapaa@gmail.com

ಕೊಲ್ಲಿರಾಷ್ಟ್ರಗಳಲ್ಲಿ ಮುತ್ತಿನ ದ್ವೀಪದ ರಾಷ್ಟ್ರ ಎಂದೇ ಹೆಸರಾಗಿರುವ ಪುಟ್ಟ ದೇಶ ಬಹ್ರೈನ್. ಒಂದು ಕಾಲದಲ್ಲಿ ಈ ದೇಶದಲ್ಲಿ, ಕಡಲ ಒಡಲಿನಲ್ಲಿರುವ ಅತ್ಯಮೂಲ್ಯ
ವಾದ, ಬೆಲೆ ಬಾಳುವ ಮುತ್ತುಗಳು ಹೇರಳವಾಗಿ ಸಿಗುತ್ತಿದ್ದುದರಿಂದ ಇದಕ್ಕೆ ಮುತ್ತಿನ ದ್ವೀಪ ಎಂಬ ಹೆಸರು ಬಂದಿದೆ. ಈ ದೇಶದೊಂದಿಗೆ ಭೂಸಂಪರ್ಕ ಇರುವ ಒಂದೇ ಒಂದು ದೇಶವೆಂದರೆ ಸೌದಿ ಅರೇಬಿಯಾ. ಆ ಸಂಪರ್ಕ ಏನಾದರೂ ಏರ್ಪಟ್ಟಿದ್ದಿದ್ದರೆ ಮೂವತ್ತೈದು ವರ್ಷದ ಹಿಂದೆ ನಿರ್ಮಿಸಿದ ಸೇತುವೆಯಿಂದ.

ಇಪ್ಪತ್ತೈದು ಕಿಲೋ ಮೀಟರ್ ಉದ್ದದ ಕಿಂಗ್ ಫಹಾದ್ ಏರುದಾರಿ (causeway) ನಿರ್ಮಾಣಗೊಳ್ಳದೇ ಇದ್ದಿದ್ದರೆ ಈ ದೇಶಕ್ಕೆ ಇಂದಿಗೂ ಭೂಸಂಪರ್ಕ ಇರುತ್ತಿರ ಲಿಲ್ಲ. ಉಭಯ ದೇಶಗಳ ಭೂಮಿಯನ್ನು ಸ್ಪರ್ಶಿಸುವ ಸೇತುವೆ ನಿರ್ಮಾಣಗೊಳ್ಳುವ ಮೊದಲು ಈ ದೇಶಕ್ಕೆ ಬರಬೇಕೆಂದರೆ ವಿಮಾನದಲ್ಲಿ ಅಥವಾ ಹಡಗಿನಲ್ಲಿ ಬರಬೇಕಿತ್ತು. ಹಾಗಂತ ಈ ದೇಶದಲ್ಲಿರುವುದು ಇದೊಂದೇ ಸೇತುವೆಯಲ್ಲ.

ಐವತ್ತು ನೈಸರ್ಗಿಕ ದ್ವೀಪಗಳೊಂದಿಗೆ, ಮೂವತ್ತ ಮೂರು ಕೃತಕ ದ್ವೀಪಗಳನ್ನೂ ತನ್ನ ಮಡಿಲಲ್ಲಿ ಸೇರಿಸಿಕೊಂಡು ತಲೆಎತ್ತಿ ನಿಂತ ದೇಶ ಬಹ್ರೈನ್. ಹಾಗಿರುವಾಗ ದ್ವೀಪಗಳನ್ನು ಸೇರಿಸುವ ರಸ್ತೆಗಳಿಗೆ, ಸೇತುವೆಗಳಿಗೆ ಏನೂ ಕಮ್ಮಿ ಇಲ್ಲ. ಆದರೆ ಈಗ ಹೇಳಲು ಹೊರಟಿರುವ ಸೇತುವೆ ಇವೆಲ್ಲಕ್ಕಿಂತ ವಿಶೇಷವಾದದ್ದು, ವಿಭಿನ್ನವಾದದ್ದು, ವೈಶಿಷ್ಟ್ಯ ವಾದದ್ದು. ಅದು ಬರಿಕಣ್ಣಿಗೆ ಭೌತಿಕವಾಗಿ ಕಾಣದ, ಬಹ್ರೈನ್ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧದ ಸೇತುವೆ. ಆ ಸುಭದ್ರ ಸೇತುವೆಗೆ ಈಗ ಭರ್ತಿ ಐವತ್ತು ವರ್ಷ ತುಂಬಿದ ಹರ್ಷ.

ಏಷ್ಯಾಖಂಡದ ಅತಿ ಸಣ್ಣ ದೇಶಗಳ ಪಟ್ಟಿ ಮಾಡಿದರೆ, ಮಾಲ್ಡೀವ್ಸ್ ಮತ್ತು ಸಿಂಗಾಪುರ್ ನಂತರ ಮೂರನೆಯ ಸ್ಥಾನದಲ್ಲಿರುವ ದೇಶ ಎಂದರೆ ಬಹ್ರೈನ್. ಕೊಲ್ಲಿ ರಾಷ್ಟ್ರಗಳಲ್ಲೇ ಅತ್ಯಂತ ಚಿಕ್ಕ ದೇಶ ಇದು. ಸುಲಭವಾಗಿ, ಸಣ್ಣಲೆಕ್ಕ ಹೇಳುವುದಾದರೆ, ಉದ್ದದಲ್ಲಿ, ಉತ್ತರದ ತುದಿಯಿಂದ ದಕ್ಷಿಣದ ತುದಿಗೆ ಹೋದರೆ ಐವತ್ತೆಂಟು ಕಿಲೋ ಮೀಟರ್, ಅಗಲದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಇಪ್ಪತ್ತು ಕಿಲೋಮೀಟರ್, ಒಟ್ಟೂ ವಿಸ್ತೀರ್ಣ ಸುಮಾರು ಏಳುನೂರ ಅರವತ್ತು ಚದರ ಕಿಲೋ ಮೀಟರ್. ಒಟ್ಟೂ ಜನಸಂಖ್ಯೆ ಸುಮಾರು ಹದಿನೈದುಲಕ್ಷ. ಅದರಲ್ಲೂ ಸ್ವದೇಶಿಗರಿಗಿಂತ ವಿದೇಶಿಯರೇ ಹೆಚ್ಚು.

ವಿದೇಶಿಯರಲ್ಲಿ ಭಾರತೀಯರ ಸಂಖ್ಯೆಯೇ ಸುಮಾರು ನಾಲ್ಕು ಲಕ್ಷ. ಅಂದರೆ ಜನಸಂಖ್ಯೆಯ ಕಾಲುಭಾಗ ಭಾರತೀಯರು ಎಂದು ಪ್ರತ್ಯೇಕ ಹೇಳಬೇಕಿಲ್ಲ ತಾನೆ? ಶೇ.ನಲವತ್ತೇ ಳರಷ್ಟು ಸ್ಥಳೀಯರು, ನಲವತ್ಮೂರರಷ್ಟು ಏಷ್ಯಾ ಖಂಡದ ಉಳಿದ ದೇಶದವರು. ಬಾಕಿ ಉಳಿದ ಹತ್ತು ಪ್ರತಿಶತ ಆಫ್ರಿಕಾ, ಅಮೆರಿಕ, ಯುರೋಪ್, ಆಸ್ಟೇಲಿಯಾ ಇತ್ಯಾದಿ ಖಂಡಗಳ ನಿವಾಸಿಗಳು. ಈ ದೇಶದಲ್ಲಿ ನೂರಕ್ಕೆ ಎಪ್ಪತ್ತಮೂರರಷ್ಟು ಇಸ್ಲಾಂ, ಹನ್ನೆರಡರಷ್ಟು ಕ್ರಿಶ್ಚಿಯನ್, ಹತ್ತರಷ್ಟು ಹಿಂದೂ, ಬಾಕಿ
ಉಳಿದ ಐದರಷ್ಟು ಇನ್ನಿತರ ಧರ್ಮವನ್ನು ಪಾಲಿಸುವವರು. ಈ ದೇಶದಲ್ಲಿ ಮಸೀದಿಗಳೊಂದಿಗೆ, ಚರ್ಚು ಗಳಿವೆ, ದೇವಾಲಯಗಳೂ ಇವೆ.

ಮುಸ್ಲಿಂ ಧರ್ಮದ ಈದ್ ಅಲ್ ಫಿತರ್, ಈದ್ ಅಲ್ ಅಧಾ, ಮೊಹರಮ್ ಹಬ್ಬದೊಂದಿಗೆ ಕ್ರಿಶ್ಚಿಯನ್ನರ ಕ್ರಿಸ್ಮಸ್, ಈಸ್ಟರ್ ಹಬ್ಬಗಳನ್ನೂ ಆಚರಿಸಲು ಅವಕಾಶ ವಿದೆ. ಹಿಂದೂಗಳ ಹಬ್ಬವಾದ ಗಣೇಶ ಚತುರ್ಥಿ, ಹೋಳಿ, ದೀಪಾವಳಿಯಿಂದ ಹಿಡಿದು, ನವರಾತ್ರಿಯ ದಾಂಡಿಯಾ, ಕೃಷ್ಣಾಷ್ಟಮಿಯ ದಹಿ ಹಂಡಿಯವರೆಗಿನ ಆಚರಣೆಗೆ ಇಲ್ಲಿ ಮುಕ್ತ ಅವಕಾಶವಿದೆ. ಇಂದು ವಿಶ್ವದಾದ್ಯಂತ ಇರುವ ಸುಮಾರು ಐವತ್ತು ಮುಸ್ಲಿಂ ರಾಷ್ಟ್ರಗಳ ಪೈಕಿ, ತಮ್ಮ ತಮ್ಮ ಧರ್ಮದ ಆಚರಣೆಗೆ ಈ ಪ್ರಮಾಣದ ಸ್ವಾತಂತ್ರ್ಯ ಇರುವುದು ಮಲೇಷಿಯಾ ಬಿಟ್ಟರೆ, ಬಹುಶಃ ಬಹ್ರೈನ್‌ನಲ್ಲಿ ಮಾತ್ರ. ಇನ್ನು ಕೆಲವು ದೇಶಗಳು ಆಚರಣೆಗೆ ಅಡ್ಡಿ ಪಡಿಸುವುದಿಲ್ಲವಾದರೂ, ಭಾರತೀಯರ ಸಂಖ್ಯೆಯೇ ಆ ಪ್ರಮಾಣದಲ್ಲಿ ಇಲ್ಲ ಎನ್ನುವುದೂ ಸತ್ಯ.

ಯಾರಾದರೂ ಸುಮಾರು ಎರಡು ನೂರು ವರ್ಷಗಳಿಗಿಂತ ಹಳೆಯ ದೇವಾಲಯಗಳ ಪಟ್ಟಿ ಮಾಡುವವರಿದ್ದರೆ, ಬಹ್ರೈನ್ನ್ ಮನಾಮಾದಲ್ಲಿರುವ ಶ್ರೀನಾಥ್‌ಜಿ ಮಂದಿರ ಅಥವಾ ಶ್ರೀ ಕೃಷ್ಣನ ದೇವಸ್ಥಾನವನ್ನೂಸೇರಿಸಿಕೊಳ್ಳಬೇಕು. ನಿಜ ಈ ಮಂದಿರಕ್ಕೆ ಎರಡು ನೂರು ವರ್ಷಗಳ ಇತಿಹಾಸವಿದ್ದು, ಸದ್ಯದಲ್ಲೇ ಮೂವತ್ತೊಂದು ಕೋಟಿ ರುಪಾಯಿ ವೆಚ್ಚದಲ್ಲಿ ಈ ಮಂದಿರ ಪುನರ್‌ನಿರ್ಮಾಣಗೊಳ್ಳುತ್ತಿದೆ. ಇದರ ಹೊರತಾಗಿ ಬಹ್ರೈನ್‌ನಲ್ಲಿ ದೇವಿಯ ದೇವಸ್ಥಾನ, ಶಿವಮಂದಿರ, ಇಸ್ಕಾನ್ ಕೃಷ್ಣಮಂದಿರ, ಗುರುವಾಯೂರಪ್ಪನ್ ದೇವಾಲಯ ಮತ್ತು ನಾಲ್ಕು ಅಯ್ಯಪ್ಪ ಮಂದಿರಗಳೂ, ನಾಲ್ಕು ಗುರುದ್ವಾರಗಳೂ, ಐದು ಚರ್ಚ್‌ಗಳೂ ಇವೆ.

ಭಾರತದ ಹಿಂದಿ, ತಮಿಳು, ಮಳಯಾಳಂ, ತೆಲುಗು ಚಿತ್ರಗಳು ಬಹ್ರೈನ್‌ನಲ್ಲಿ ಪ್ರದರ್ಶನಗೊಳ್ಳುತ್ತವೆ. ಬಾಲಿವುಡ್‌ನ ಅನೇಕತಾರೆಯರು ಬಹ್ರೈನ್ ಸಾಮ್ರಾಜ್ಯ ದಲ್ಲೂ ಜನಪ್ರಿಯರು. ಬಹುತೇಕ ಹಿಂದಿ ಚಿತ್ರ ಗಳು ಗುರುವಾರವೇ ಇಲ್ಲೂ ತೆರೆಗೆ ಬರುತ್ತವೆ. ಗುರುವಾರ ಬಿಡುಗಡೆಯಾದ ಹಿಂದಿ ಚಿತ್ರಕ್ಕೆ ನೀವೇನಾದರೂ ಶನಿವಾರ ಹೋದಾಗ, ಚಿತ್ರದಲ್ಲಿ ಬರುವ ಪ್ರಮುಖ ಸಂಭಾಷಣೆ ಸನ್ನಿವೇಶಕ್ಕೆ ಮೊದಲೇ ನಿಮ್ಮ ಹಿಂದಿನಿಂದಲೋ ಮುಂದಿನಿಂದಲೋ ಕೇಳಿ ಬಂದರೆ, ಅದನ್ನು ಹೇಳುವವರು ಬಹ್ರೈನ್ ದೇಶದ ಮೂಲ ನಿವಾಸಿಗಳೇ ಆಗಿದ್ದರೆ ಆಶ್ಚರ್ಯ ಪಡಬೇಕಾಗಿಲ್ಲ.

ಹಿಂದಿ ಸಿನಿಮಾ, ಭಾಷೆ ಅವರಲ್ಲಿ ಅಷ್ಟು ಹಾಸು ಹೊಕ್ಕಾಗಿದೆ. ಮಳಯಾಳಂ ಭಾಷೆ ಮಾತನಾಡುವ ಬಹ್ರೈನಿಗಳೂ ಇದ್ದಾರೆ! ಭಾರತದ ಉಡುಗೆಯೊಂದಿಗೆ
ಆಹಾರ ಪದ್ಧತಿಯೂ ಇಲ್ಲಿಯ ಜನರಿಗೆ ಇಷ್ಟ. ದಾಲ್ ರೋಟಿ, ಸಮೋಸಾ ತಿನ್ನದ, ಫಾಲೂದಾ ಚಪ್ಪರಿಸದ ಬಹ್ರೈನಿ ಜನ ಹುಡುಕಿದರೂ ಸಿಗಲಾರರು. ಬಹ್ರೈನ್
ದೇಶ ಭಾರತದ, ಭಾರತೀಯರ ಹೃದಯಕ್ಕೆ ಹತ್ತಿರವಾಗುವುದು ಇದೊಂದೇ ಕಾರಣಕ್ಕಲ್ಲ. ಅದಕ್ಕೆ ಇನ್ನೂಹಲವಾರು ಕಾರಣಗಳಿವೆ.

ಒಂದು ವರದಿಯ ಪ್ರಕಾರ, ಭಾರತ ಮತ್ತು ಬಹ್ರೈನ್ ಸಂಬಂಧ ಸುಮಾರು ಐದು ಸಾವಿರ ವರ್ಷ ಹಳೆಯದು. ಬಹ್ರೈನ್‌ನಲ್ಲಿ ದಿಲ್ಮನ್ ನಾಗರಿಕತೆ ಮತ್ತು
ಭಾರತದಲ್ಲಿ ಸಿಂಧೂ ಕಣಿವೆ ನಾಗರಿಕತೆ ಇರುವ ಕಾಲದಿಂದಲೂ ಇರುವ ಬಾಂಧವ್ಯ ಅದು. ಆ ಕಾಲದಲ್ಲಿ ಭಾರತದ ಸಂಬಾರ ಪದಾರ್ಥಗಳನ್ನು ಹಡಗಿನಲ್ಲಿ
ಹೇರಿಕೊಂಡು ಮಧ್ಯಪೂರ್ವಭಾಗಕ್ಕೆ ವ್ಯಾಪಾರಕ್ಕೆಂದು ಬರುತ್ತಿದ್ದರಂತೆ. ಆಗ ಭಾರತ ಕೊಲ್ಲಿ ರಾಷ್ಟ್ರಗಳಿಗಿಂತಲೂ ಶ್ರೀಮಂತರಾಷ್ಟ್ರ. ಅವಿಭಾಜ್ಯ ಅಖಂಡ
ಭಾರತದಿಂದ ಜಲಮಾರ್ಗವಾಗಿ ಹೊರಟರೆ, ಅರಬ್ ದೇಶಗಳ ಪೈಕಿ ಮೊದಲು ಸಿಗುತ್ತಿದ್ದ ಸ್ಥಳ ಈಗಿನ ಬಹ್ರೈನ್.

ಈಗ ಮುಂಬೈನಲ್ಲಿ ಗೇಟ್ ವೇ ಆಫ್ ಇಂಡಿಯಾ ಇದೆಯಲ್ಲ, ಹಾಗೆಯೇ ಬಹ್ರೈನ್‌ನಲ್ಲಿ ಬಾಬ್ ಅಲ್ ಬಹ್ರೈನ್ ಇದೆ. ಅರಬ್ಬಿ ಭಾಷೆಯಲ್ಲಿ ಬಾಬ್ ಅಂದರೆ ಬಾಗಿಲು, ದ್ವಾರ ಎಂಬ ಅರ್ಥ. ಅಲ್ಲಿಗೆ ಹಡಗುಗಳ ಮುಖೇನ ಬಂದ ಸರಕು ಗಳನ್ನು ಪಕ್ಕದಲ್ಲೇ ಇರುವ ಸೂಕ್ (ಮಾರುಕಟ್ಟೆ) ಗೆ ಸರಬರಾಜು ಮಾಡಲಾಗುತ್ತಿತ್ತು. ಐದು ದಶಕಗಳ ಹಿಂದಿನವರೆಗೂ ಬಹ್ರೈನ್‌ನಲ್ಲಿ ಭಾರತದ ಹಣ ಚಲಾವಣೆಯಲ್ಲಿತ್ತು. ಈಗ ಇಲ್ಲಿಯ ಹಣ ದಿನಾರ್ ಮತ್ತು ಫಿಲ್ಸ್. ಸಾವಿರ ಫಿಲ್ಸ್‌ಗೆ ಒಂದು ದಿನಾರ್. ಇಲ್ಲಿ
ನೂರು ಫಿಲ್ಸ್ ನಾಣ್ಯಕ್ಕೆ ಈಗಲೂ ಒಂದು ರುಪಾಯಿ ಎಂದು ಹೇಳುವುದಿದೆ. ಈ ರುಪಾಯಿಯ ಲೆಕ್ಕ ಇಲ್ಲಿರುವ ಎಲ್ಲರಿಗೂ ಗೊತ್ತಿದೆ. ಇಲ್ಲಿರುವ ತೀರಾ ಹಳೆಯ ತಲೆಗಳಂತೂ ಫಿಲ್ಸ್‌ಗಿಂತ ರುಪಾಯಿ ಪದ ಬಳಸುವುದೇ ಹೆಚ್ಚು.

ಅಂದಿನಿಂದ ಆರಂಭವಾದ ವ್ಯಾಪಾರ ಇಂದಿಗೂ ನಿರಂತರ ಸಾಗಿದೆ. ಇತ್ತೀಚಿನ ದಿನಗಳಲ್ಲಂತೂ ಭಾರತ ದಿಂದ ಮಸಾಲೆ ಪದಾರ್ಥಗಳು, ಹಣ್ಣು, ತರಕಾರಿ,
ಧಾನ್ಯಗಳಿಂದ ಹಿಡಿದು ಯಂತ್ರೋಪಕರಣ, ಬಿಡಿಭಾಗಗಳು, ರಾಸಾಯನಿಕ ಗೊಬ್ಬರ ಬಟ್ಟೆಯ ವರೆಗೆ ಬಹುತೇಕ ಎಲ್ಲ ವಸ್ತುಗಳನ್ನೂ ಬಹ್ರೈನ್ ಆಮದು ಮಾಡಿಕೊಳ್ಳುತ್ತದೆ. ಭಾರತ ಬಹ್ರೈನ್ ನಿಂದ ಖರ್ಜೂರ, ಅಲ್ಯೂಮಿನಿಯಂ, ಅದಿರು, ಸುಣ್ಣ ಇತ್ಯಾದಿ ವಸ್ತುಗಳು ಮತ್ತು ತೈಲೋತ್ಪನ್ನಗಳೂ ಸೇರಿದಂತೆ ಪ್ರತಿ ವರ್ಷ ಸುಮಾರು ಎರಡೂವರೆ ಸಾವಿರ ಕೋಟಿ ರು. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ತೈಲೋತ್ಪನ್ನಸರಕಿನ ಮೌಲ್ಯವೇ ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿಗಳು.

2014ರಲ್ಲಿ ಬಹ್ರೈನ್ ದೊರೆ ಕಿಂಗ್ ಹಮದ್ ಬಿನ್ ಇಸಾ ಅಲ್ ಖಲೀಫ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ನಾಲ್ಕು ನೂರ
ಐವತ್ತು ಮಿಲಿಯನ್ ಡಾಲರ್‌ಗಳ ದ್ವಿಪಕ್ಷೀಯ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಯ ಒಪ್ಪಂದಕ್ಕೆ ಸಹಿಹಾಕಿದವು. 2019ರಲ್ಲಿ ಪ್ರಧಾನಿ ನರೇಂದ್ರ
ಮೋದಿಯವರ ಭೇಟಿಯ ಸಂದರ್ಭದಲ್ಲಿ, ಅಂತಾರಾಷ್ಟೀಯ ಸೌರ ಒಕ್ಕೂಟ, ಬಾಹ್ಯಾಕಾಶದ ವಿಷಯಗಳಲ್ಲಿ ಪರಸ್ಪರ ಸಹಕಾರ ಮತ್ತು ಬಹ್ರೈನ್‌ನಲ್ಲಿ
ಭಾರತದ ರುಪೇ ಕಾರ್ಡ್ ಬಳಕೆಯ ಒಪ್ಪಂದಕ್ಕೂ ಸಹಿ ಹಾಕಲಾಯಿತು. ಜೈಲಿನಲ್ಲಿದ್ದ ಇನ್ನೂರ ಐವತ್ತು ಭಾರತೀಯ ಕೈದಿಗಳನ್ನೂ ಬಹ್ರೈನ್ ಬಿಡುಗಡೆ ಮಾಡಿ
ತು. 2009ರ ವಿಕೀ ಲೀಕ್ ಪ್ರಕಾರ, ಅಫ್ಘಾನಿಸ್ತಾನದ ಬಿಕ್ಕಟ್ಟು ಬಗೆ ಹರಿಸಲು ಭಾರತದ ಸಹಾಯ ಪಡೆಯುವಂತೆ ಅಮೆರಿಕಕ್ಕೆ ಬಹ್ರೈನ್ ಸಲಹೆ ನೀಡಿತ್ತು ಎಂಬ
ಮಾಹಿತಿ ಇದೆ.

2007ರಲ್ಲಿ ಅಂದಿನ ಸ್ಪೀಕರ್ ಖಲೀಫಾ ಅಲ್ ಧಹ್ರಾನಿ ನೇತೃತ್ವದ ಬಹ್ರೈನ್ ಪಾರ್ಲಿಮೆಂಟ್ ನಿಯೋಗವೊಂದು ಭಾರತದ ರಾಷ್ಟ್ರಪತಿ ಮತ್ತು ಇತರ ನಾಯಕ ರನ್ನು ಭೇಟಿ ಮಾಡಿ, ರಾಜಕೀಯ ಮತ್ತು ಮಾಧ್ಯಮದ ಕುರಿತು ಸಲಹೆ, ತರಬೇತಿ ಪಡೆಯಿತು. ಅಮೆರಿಕ ಮತ್ತು ಇತರ ಯುರೋಪ್ ದೇಶಗಳಿಗಿಂತಲೂ ಭಾರತ ದಿಂದ ತರಬೇತಿ ಪಡೆಯುವುದು ಸುಲಭ ಎಂಬುದು ಬಹ್ರೈನ್ ರಾಜಕಾರಣಿಗಳ ನಿಲುವಾಗಿತ್ತು. ಅದೇ ವರ್ಷ ರಾಜಧಾನಿ ಮನಾಮಾದಲ್ಲಿ ಉಭಯ ದೇಶಗಳ ಸಂಬಂಧವನ್ನು ಉತ್ತೇಜಿಸಲು ಬಹ್ರೈನ್ ಇಂಡಿಯಾ ಸೊಸೈಟಿ ನಿರ್ಮಿಸಲಾಯಿತು.

ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿರದೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಭಾಗಗಳಲ್ಲಿಯೂ ಪ್ರೋತ್ಸಾಹ ನೀಡುವಲ್ಲಿ ಇಂದಿಗೂ ಈ ಸಂಸ್ಥೆ ಪ್ರಮುಖ ಪಾತ್ರವಹಿಸುತ್ತಿದೆ. ಎರಡು ವರ್ಷದ ಹಿಂದೆ ಬಹ್ರೈನ್‌ನ ಕಾರ್ಮಿಕ ಮತ್ತು ಸಾಮಾಜಿಕ ಸಚಿವಾಲಯ ಮೂರು ದಿನದ, ವಿವಿಧ
ರಾಷ್ಟ್ರಗಳ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿತ್ತು. ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲಾ ದೇಶದ ಸಂಘಗಳಿಗೆ ಒಂದೊಂದು ಕಾರ್ಯಕ್ರಮವ
ನ್ನೂ, ಭಾರತದ ಸಂಘ ಸಂಸ್ಥೆಗಳಿಗೆ ಐದು ಕಾರ್ಯಕ್ರಮ ವನ್ನೂ ಕೊಡುವಂತೆ ಕೇಳಿಕೊಂಡಿತ್ತು. ಅಷ್ಟೇ ಅಲ್ಲದೆ, ಆ ಕಾರ್ಯಕ್ರಮದ ನಿರ್ವಹಣೆಯ ಹೆಚ್ಚಿನ ಜವಾಬ್ದಾರಿಯನ್ನೂ ಭಾರತೀಯರಿಗೆ ನೀಡಿತ್ತು ಎನ್ನುವುದು ವಿಶೇಷ.

ಇದು ಕೇವಲ ಸಂಸ್ಕೃತಿಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಲ್ಲ. ಬಹ್ರೈನ್ ದೇಶ ಕಟ್ಟುವಲ್ಲಿ ಭಾರತೀಯರ ಕೊಡುಗೆ ಅಗಾಧವಾದದ್ದು. ಅದಕ್ಕಾಗಿಯೇ
ಬಹ್ರೈನ್ ದೇಶದ ಪ್ರಜೆಗಳಿಗೂ ಭಾರತೀಯರ ಮೇಲೆ ವಿಶೇಷ ಪ್ರೀತಿ, ಅಭಿಮಾನ. ಇಂದು ಭಾರತ ಮತ್ತು ಬಹ್ರೈನ್ ನಡುವೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜತಾಂತ್ರಿಕ ಮತ್ತು ಮಿಲಿಟರಿ ಸಂಬಂಧಗಳು ಅಸ್ತಿತ್ವದಲ್ಲಿವೆ. ಬಹ್ರೈನ್‌ನ ಆಪ್ತಮಿತ್ರ ದೇಶಗಳ ಪಟ್ಟಿಯಲ್ಲಿ ಭಾರತವೂ ಸೇರಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಕ್ಕಾಗಿ ಭಾರತದ ಉಮೇದುವಾರಿಕೆಗೆ ಪ್ರಮುಖ ಬೆಂಬಲಿಗರ ಪಟ್ಟಿಯಲ್ಲಿ, ಇತರ ಕೊಲ್ಲಿರಾಷ್ಟ್ರಗಳೊಂದಿಗೆ ಬಹ್ರೈನ್ ಸಾಮ್ರಾಜ್ಯ ಕೂಡ ಸೇರಿದೆ.

ಭಾರತವೂ ಬಹ್ರೈನ್ ಬೆಂಬಲಕ್ಕೆ ನಿಂತ ಅನೇಕ ಉದಾಹರಣೆಗಳಿವೆ. ಅದರಲ್ಲಿ ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಇತರ ಬಿಕ್ಕಟ್ಟನ್ನು ಬಗೆಹರಿಸಲು ಬಹ್ರೈನ್ ಭಾರತವನ್ನು ವಿನಂತಿಸಿಕೊಂಡದ್ದು ಒಂದು. 2026-27ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತವಲ್ಲದ ಸ್ಥಾನಕ್ಕೆ ಬಹ್ರೈನ್‌ನ ಉಮೇದು ವಾರಿಕೆಗೆ ಭಾರತ ಬೆಂಬಲ ನೀಡುತ್ತಿರುವುದು ಇನ್ನೊಂದು. ೨೦೦೧ರ ಗುಜರಾತ್ ಭೂಕಂಪ ಯಾರಿಗೆ ನೆನಪಿಲ್ಲ ಹೇಳಿ, ಆ ಸಂದರ್ಭದಲ್ಲಿ ಭಾರತಕ್ಕೆ ಸಹಾಯ ಹಸ್ತ ಚಾಚಿದ ಮೊದಲ ದೇಶ ಬಹ್ರೈನ್. ದೇಶ ಚಿಕ್ಕದಾದರೂ ಬಹ್ರೈನ್‌ನ ಮನಸು ದೊಡ್ದದು ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಅದಕ್ಕೆ ತಕ್ಕಂತೆ ಭಾರತವೂ ಬಹ್ರೈನ್‌ಗೆ ಸಹಾಯ ಮಾಡುತ್ತಲೇ ಬಂದಿದೆ.

ಇತ್ತೀಚೆಗೆ ಕೋವಿಡ್ ಮಹಾಮಾರಿಗೆ ಲಸಿಕೆ ಕಂಡು ಹಿಡಿದಾಗ, ಬಹ್ರೈನ್‌ಗೆ ಒಂದು ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಭಾರತ ಮೊದಲ ಕಂತಾಗಿ ನೀಡಿತು. ಆ ಸಂದರ್ಭದಲ್ಲಿ, ಅತ್ತ ಭಾರತದಲ್ಲಿ ಲಸಿಕೆಯ ಕುರಿತು ರಾಜಕೀಯ ಪ್ರೇರೇಪಿತ ಚರ್ಚೆನಡೆಯುತ್ತಿದ್ದರೆ ಇತ್ತ ಬಹ್ರೈನ್ ನಿವಾಸಿಗಳು ಉಚಿತವಾಗಿ ಬಂದ ಲಸಿಕೆ
ಪಡೆದು ಕೃತಾರ್ಥರಾಗಿದ್ದರು. ಇಂದಿಗೂ ಭಾರತ ಬಹ್ರೈನ್‌ಗೆ ಲಸಿಕೆ ಪೂರೈಸುತ್ತಿದೆ. 1971ರ ಅಕ್ಟೋಬರ್ ತಿಂಗಳಿನಲ್ಲಿ ಉಭಯ ದೇಶಗಳ ನಡುವೆ ಸ್ಥಾಪಿತವಾದ ರಾಜತಾಂತ್ರಿಕ ಸಂಬಂಧಕ್ಕೆ ಈಗ ಸುವರ್ಣ ಸಂಭ್ರಮ. ಈ ನಿಟ್ಟಿನಲ್ಲಿ ಬಹ್ರೈನ್‌ನ ಜನನಿಬಿಡ ಪ್ರದೇಶದಲ್ಲಿ ಲಿಟಲ್ ಇಂಡಿಯಾ ನಿರ್ಮಾಣ ಗೊಂಡಿದ್ದು, ಅಲ್ಲಿ ಸಾಂಸ್ಕೃತಿಕ ಸಪ್ತಾಹ ನಡೆಯುತ್ತಿದೆ. ಬಾಬ್ ಅಲ್ ಬಹ್ರೈನ್ ಎಂದು ಹೇಳಿದ್ದೆನಲ್ಲ, ಆ ಕಟ್ಟಡದ ಮೇಲೆ ಭಾರತದ ಧ್ವಜದ ಮೂರು ಬಣ್ಣ ಬೆಳಕಿನಿಂದ ಕಂಗೊಳಿಸು ತ್ತಿದೆ. ಭಾರತ ದಲ್ಲೂ ಕುತುಬ್ ಮಿನಾರ್ ಮೇಲೆ ಬಹ್ರೈನ್ ಧ್ವಜದಲ್ಲಿ ರುವ ಬಿಳಿ ಮತ್ತು ಕೆಂಪು ಬಣ್ಣದ ಬೆಳಕು ಬೀರಿದೆ.

ಇವೆಲ್ಲ ಸಾಂಕೇತಿಕ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಇದೆಲ್ಲಕ್ಕಿಂತ ಮಿಗಿಲಾದದ್ದು ಉಭಯ ದೇಶದ ನಡುವಿನ ಭ್ರಾತೃತ್ವ, ಮಾನವೀಯ ಸಂಬಂಧ ಮತ್ತು ಮೌಲ್ಯಗಳು. ಆ ನಿಟ್ಟಿನಲ್ಲಿ ಎರಡೂ ದೇಶಗಳು ಕಾರ್ಯನಿರ್ವಹಿಸುತ್ತಿರುವುದೂ ಸತ್ಯ. ಮುಂದಿನ ದಿನಗಳಲ್ಲಿ ಈ ಸಂಬಂಧದ ಸೇತುವೆ ಇನ್ನಷ್ಟು ಭದ್ರವಾಗಲಿ.