Saturday, 14th December 2024

ಸಂಕಷ್ಟಗಳಿಗೆ ಕೊನೆಯಿಲ್ಲವೇ ?

ಅಭಿಮತ

ಆದರ್ಶ್ ಶೆಟ್ಟಿ

ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಜನರ ಮುಂದಿಟ್ಟ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ‘ದೇಶವು ಬಯಲುಶೌಚ ಮುಕ್ತವಾಗಿದೆ’ ಎಂದು ಘೋಷಿಸಿ ಸಾಕಷ್ಟು ವರ್ಷಗಳಾಗಿವೆ. ಆದರೆ ವಸ್ತುಸ್ಥಿತಿಯು ಈ ಘೋಷಣೆಗೆ ಅನುಸಾರವಾಗಿದೆಯೇ? ಏಕೆಂದರೆ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿಯಂಥ ಜಿಲ್ಲೆಗಳ ಕೆಲ ಭಾಗಗಳಲ್ಲಿ ಶೌಚಕ್ಕೆಂದು ಇಂದಿಗೂ ಬಯಲನ್ನೇ ಅವಲಂಬಿಸಿರುವ ಅದೆಷ್ಟೋ ಕುಟುಂಬಗಳಿರುವುದನ್ನು ಕಾಣಬಹುದು. ಮಹಿಳೆಯರು ಸೀರೆಯನ್ನು ಪರದೆಯಂತೆ ಕಟ್ಟಿಕೊಂಡು ಬಹಿರ್ದೆಸೆಗೆ ತೆರಳಬೇಕಾದ ಪರಿಸ್ಥಿತಿ ಈಗಲೂ ಇದೆ ಎಂದರೆ ನಾವು ನಂಬಲೇಬೇಕು. ಇಂಥ ಗ್ರಾಮಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಗಳು ಕೂಡ ನಡೆದುಹೋಗಿವೆ.

ಮೋದಿ ಸರಕಾರ ಘೋಷಿಸಿದ ‘ಸ್ವಚ್ಛ ಭಾರತ’ ಪರಿಕಲ್ಪನೆ ಸಾಕಾರಗೊಳ್ಳಬೇಕೆಂದರೆ, ಅದರಲ್ಲಿ ಪ್ರಜೆಗಳಾದ ನಮ್ಮ ಪಾತ್ರವೂ ದೊಡ್ಡಮಟ್ಟದಲ್ಲಿ ಇರುತ್ತದೆ ಎಂಬು ದನ್ನು ಮರೆಯಬಾರದು. ಜತೆಗೆ, ಕೇಂದ್ರದಿಂದ ಮೊದಲ್ಗೊಂಡು ಕೆಳಸ್ತರದವರೆಗಿನ ಆಡಳಿತ ವ್ಯವಸ್ಥೆಗಳ ಎಲ್ಲಾ ಜನಪ್ರತಿನಿಧಿಗಳ ಸಹಕಾರ ಇಲ್ಲಿ ಅತ್ಯಗತ್ಯ. ಇಂದಿಗೂ, ಪಾನ್ ಬೀಡಾ ತಿಂದು ಕಂಡಕಂಡಲ್ಲಿ ಉಗುಳುವ, ಮನೆಯ ಕಸ-ಕಡ್ಡಿಗಳನ್ನು ತಂದು ರಸ್ತೆಗಳಿಗೆ, ನದಿಗಳಿಗೆ ಸುರಿಯುವ ಕೆಲಸಗಳು ನಡೆಯುತ್ತಲೇ ಇವೆ.

ಮೊಬೈಲ್, ಫೇಸ್‌ಬುಕ್, ವಾಟ್ಸ್ಯಾಪ್, ಎಕ್ಸ್, ಇನ್‌ಸ್ಟಾಗ್ರಾಂ ಯುಗದಲ್ಲಿ ಕಾಲ ಕಳೆಯುತ್ತಿರು ವವರು, ಪ್ರಪಂಚವು ಬಹಳ ಸುಂದರವಾಗಿದೆ ಎಂದೇ ಭಾವಿಸುವು ದುಂಟು. ಆದರೆ ಸಮಾಜ ಮತ್ತು ಜನಜೀವನ ಅಂದುಕೊಂಡಷ್ಟು ಸಲೀಸಾಗಿಲ್ಲ. ಅದೆಷ್ಟೋ ಕಡೆ ಗಳಲ್ಲಿ ಸರಿಯಾದ ರಸ್ತೆಗಳೇ ಇಲ್ಲದೆ, ರೈತರು ತಾವು ಬೆಳೆದ ಹಣ್ಣು- ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಕಿಲೋಮೀಟರ್‌ಗಟ್ಟಲೆ ತಲೆಯ ಮೇಲೆ ಹೊತ್ತು ಸಾಗಬೇಕಾದ ಅನಿವಾರ್ಯತೆ ಯಿದೆ.

ಅಸಮರ್ಪಕ ರಸ್ತೆಯಿಂದಾಗಿ ಶಾಲಾ ಮಕ್ಕಳು ಜಾರಿ ಬಿದ್ದು ಪೆಟ್ಟು ಮಾಡಿಕೊಂಡು ಇಲ್ಲವೇ ಕೆಸರುರಾಡಿ ಮೆತ್ತಿ ಕೊಂಡು ಕಣ್ಣೀರಿಡುತ್ತಲೇ ಶಾಲೆಗೆ ಹೋಗುವ ದೃಶ್ಯವನ್ನು ಈಗಲೂ ಬಹಳಷ್ಟು ಕಡೆ ಕಾಣಬಹುದು. ಅಷ್ಟೇಕೆ, ದೇಶಕ್ಕೆ ಸ್ವಾತಂತ್ರ್ಯ ದೊರೆತು ದಶಕಗಳೇ ಆಗಿದ್ದರೂ ಸಮರ್ಪಕವಾದ ಸೇತುವೆಗಳಿಲ್ಲದೆ, ಹೊಳೆ ದಾಟಲೆಂದು ಮರದ ಹಲಗೆಯಲ್ಲಿ ರೂಪಿಸಿದ ಕಿರುಗಾತ್ರದ ಸಂಕದ ಮೇಲೆ ಮಕ್ಕಳು-ಮಹಿಳೆಯರು ಜೀವ ಕೈಯಲ್ಲಿ ಹಿಡಿದು ಕೊಂಡು ಸಾಗುವ ನಿದರ್ಶನಗಳು ಸಾಕಷ್ಟಿವೆ. ಶವಗಳನ್ನು ಸ್ಮಶಾನಕ್ಕೆ ಒಯ್ಯಲು ವ್ಯವಸ್ಥೆಯಿಲ್ಲದೆ ಸಾಕಷ್ಟು ದೂರದವರೆಗೆ ಶವವನ್ನು ಹೆಗಲ ಮೇಲೇ
ಹೊತ್ತೊಯ್ದವರ ಪಡಿಪಾಟಲನ್ನೂ ನಾವು ಕಂಡಿದ್ದೇವೆ.

‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬ ಮಾತಿನಂತೆ, ಜನರ ದಿನನಿತ್ಯದ ಬದುಕು ಮೇಲ್ನೋಟಕ್ಕೆ ಸರಿಯಿರುವಂತೆ ಕಂಡರೂ, ಬಡತನ, ಅಸಮಾನತೆ ಸೇರಿದಂತೆ ಅನೇಕ ಸಾಮಾಜಿಕ ಅನಿಷ್ಟಗಳು ಇಂದಿಗೂ ಜೀವಂತವಾಗಿವೆ. ನಿರುದ್ಯೋಗ ಸಮಸ್ಯೆ, ಸಾಲಬಾಧೆ, ಅನಾರೋಗ್ಯ ಸೇರಿದಂತೆ ಅನೇಕ ಸಂಕಷ್ಟ-ಸಮಸ್ಯೆಗಳಿಂದ ಸಾಕಷ್ಟು ಕುಟುಂಬಗಳು ಹೈರಾಣಾಗಿವೆ. ಮಕ್ಕಳು ಕುಡಿಯುವ ನೀರಿಗಾಗಿ ಹರಸಾಹಸ ಪಡಬೇಕಾದ ಮತ್ತು ಶೌಚಾಲಯ ಗಳಿಲ್ಲದೆ ಹಿಂಸೆ ಅನುಭವಿಸಬೇಕಾದ ಸ್ಥಿತಿ ರಾಜ್ಯಾದ್ಯಂತದ ಸಾಕಷ್ಟು ಶಾಲೆಗಳಲ್ಲಿದೆ.

ಮಿಕ್ಕಂತೆ, ಸೋರುತ್ತಿರುವ ಶಾಲಾ-ಕಾಲೇಜುಗಳಲ್ಲಿ ಛತ್ರಿ ಹಿಡಿದು ಪಾಠ ಕೇಳುವ ವಿದ್ಯಾರ್ಥಿ ಸಮೂಹ, ಮನೆ ನಿರ್ಮಾಣಕ್ಕಾಗಿ ಸರಕಾರದ ಸಹಾಯ ಧನವನ್ನು ಬಿಡುಗಡೆ ಮಾಡಲು ಬಡಜನರಿಂದ ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳಿಂದಾಗಿ ಗುಡಿಸಲಿನಲ್ಲೇ ವಾಸಿಸುವಂತಾಗಿರುವ ಕುಟುಂಬಗಳು, ಮೀಟರ್ ಬಡ್ಡಿಗೆ ಹಣ ತೆಗೆದು ಕೊಂಡವರನ್ನು ಮಾನವೀಯತೆ ಮರೆತು ಪೀಡಿಸುವ ಬಡ್ಡಿ ವ್ಯವಹಾರಸ್ಥರು ಹೀಗೆ ನಾನಾ ಅವ್ಯವಸ್ಥೆಗಳು ಮತ್ತು ದೌರ್ಜನ್ಯಗಳ ಕೂಪವಾಗಿ ಬಿಟ್ಟಿದೆ ನಮ್ಮ ಸಮಾಜ. ಇಂಥ ದುಸ್ಥಿತಿಗಳಿಗೆ ಮದ್ದು ಅರೆಯ ಬೇಕಾದವರು ಏನು ಮಾಡುತ್ತಿದ್ದಾರೆ? ಜನರನ್ನು ಮರುಳು ಗೊಳಿಸುವ ಮಾತನ್ನಾಡಿ ಚುನಾವಣೆಗಳಲ್ಲಿ ಮತ ಹಾಕಿಸಿಕೊಂಡು ಗೆದ್ದು ವಿಧಾನಸಭೆ ಮತ್ತು ಲೋಕಸಭೆ ಸೇರಿಕೊಂಡವರು ತಮ್ಮ ಹೊಣೆ ಗಾರಿಕೆಗಳು ಮತ್ತು ಉತ್ತರದಾಯಿತ್ವವನ್ನು ಮರೆಯುವುದೇಕೆ? ಎಂಬ ಪ್ರಶ್ನೆಗಳು ಆಗಾಗ ಕಾಡುವುದುಂಟು. ಜನಪ್ರತಿನಿಧಿಗಳೆನಿಸಿ ಕೊಂಡವರು ಇನ್ನಾದರೂ
ಮೈಕೊಡವಿಕೊಂಡು ಏಳಲಿ.

(ಲೇಖಕರು ಹವ್ಯಾಸಿ ಬರಹಗಾರರು)