Saturday, 14th December 2024

ನಾಡಿನ ಈ ಸ್ವಾಮೀಜಿ ಭಾಜಪದ ಅಭ್ಯರ್ಥಿ ?

ವಿಶ್ಲೇಷಣೆ

ಪವನ್ ವಶಿಷ್ಠ

ಬಹುಶಃ ಮಾದಾರ ಚನ್ನಯ್ಯ ಸ್ವಾಮೀಜಿಗೆ ಈ ಚುನಾವಣೆಯಲ್ಲಿ ಟಿಕೆಟ್ ಲಭಿಸಿದ್ದೇ ಆದಲ್ಲಿ ಅದು ದಕ್ಷಿಣ ಭಾರತದ ರಾಜಕೀಯ ಇತಿಹಾಸದ ಮಹತ್ವದ ಮೈಲಿಗಲ್ಲಾ ಗಲಿದೆ. ದಲಿತ ಸಮುದಾಯದ ಅದರಲ್ಲೂ ಕಾವಿಧಾರಿ ಸ್ವಾಮೀಜಿಯೊಬ್ಬರು ಬಿಜೆಪಿಯ ರಾಜಕೀಯ ಅಖಾಡಕ್ಕೆ ಧುಮುಕಿದ ಮೊದಲಿಗರು ಎನಿಸುತ್ತಾರೆ.

ಹೌದು. ಇಂತಹುದೊಂದು ಚರ್ಚೆ ಈಗ ರಾಜ್ಯ ಮಟ್ಟದಲ್ಲಿ ಆರಂಭವಾಗಿದ್ದು ದಿಲ್ಲಿಯವರೆಗೂ ಹಬ್ಬಿದೆ. ಲೋಕಸಭಾ ಚುನಾವಣೆಗೆ ಇನ್ನೇನು ೧೦೦ ದಿನಗಳಷ್ಟೇ ಬಾಕಿ ಇರುವಾಗ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭಾಜಪದಿಂದ ಅಚ್ಚರಿಯ ಅಭ್ಯರ್ಥಿಯಾಗಿ ಸ್ಥಳೀಯ ಮಾದಾರ ಚನ್ನಯ್ಯ ಗುರು
ಪೀಠದ ಪೀಠಾಧಿಪತಿ, ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಕಣಕ್ಕಿಳಿಸುವ ಮುನ್ಸೂಚನೆ ಕಂಡು ಬರುತ್ತಿದೆ. ಒಂದು ವೇಳೆ ಪಕ್ಷ ಇವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ, ಮುಂದಿನ ೧೦ ವರ್ಷಗಳಲ್ಲಿ ಬಿಜೆಪಿಯ ರಾಜ್ಯ ಘಟಕದ ಪ್ರಮುಖ ನಾಯಕರಾಗಿ ಇವರು ಹೊರ ಹೊಮ್ಮಲಿದ್ದಾರೆ.

ಅದಕ್ಕಾಗಿ ಈಗಿನಿಂದಲೇ ಬಿಂಬಿಸಲು ಬಿಜೆಪಿಯ ಹೈಕಮಾಂಡ್ ಅಥವಾ ಸಂಘ ಪರಿವಾರ ನಿರ್ಧರಿಸಿದಂತಿದೆ. ವಿಪರ್ಯಾಸವೆಂದರೆ ರಾಜಕೀಯ ವೈರಾಗ್ಯದ ಮಾತು ಗಳನ್ನಾಡಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಎ.ನಾರಾಯಣ ಸ್ವಾಮಿ ಮಠವು ಜಾತ್ಯಾತೀತವಾಗಿರಬೇಕು ಮತ್ತು ರಾಜಕೀಯ ವಾಗಿ ಮಠ ಬಳಸಿಕೊಳ್ಳಬಾರದು ಎಂದು ಮಠಕ್ಕೆ ಬೋಧನೆ ಮಾಡಲು ಆರಂಭಿಸಿದ್ದಾರೆ.

ಹಾಗೆ ನೋಡಿದರೆ ಕಳೆದ ಭಾರಿ ಚುನಾವಣೆಯಲ್ಲಿ ನಾರಾಯಣಸ್ವಾಮಿ ಗೆಲ್ಲಲು ಮಾದರ ಚೆನ್ನಯ್ಯ ಮಠ ಪ್ರಮುಖ ಪಾತ್ರವಹಿಸಿದ್ದು, ದುರ್ಗದಲ್ಲಿರುವ ಪ್ರತೀ ಕಲ್ಲಿಗೂ ತಿಳಿದಿರುವ ಸತ್ಯ! ಈ ಸತ್ಯವನ್ನ ಹಾಲಿ ಕೇಂದ್ರ ಮಂತ್ರಿ ಮರೆಯಬಾರದು. ಮಂತ್ರಿಗಳಾಡಿದ ಮಾತು ಗಳನ್ನ ಗಮನಿಸಿದರೆ ಹೈಕಮಾಂಡ್ ಮಟ್ಟದಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ಸ್ವಾಮೀಜಿ ಅವರನ್ನೇ ಅಭ್ಯರ್ಥಿ ಮಾಡುವ ವಿಚಾರಕ್ಕೆ ಅಂತಿಮ ಮುದ್ರೆ ಬೀಳುವ ಸಾಧ್ಯತೆ ಹೆಚ್ಚಿದ್ದಿರ ಬಹುದು.
ಇನ್ನೆಲ್ಲಿ ತಮಗೆ ಟಿಕೆಟ್ ಕೈತಪ್ಪುವುದೋ ಎಂಬ ಭೀತಿಯಲ್ಲಿ ಮಾದರ ಚೆನ್ನಯ್ಯ ಸ್ವಾಮೀಜಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿ ದಂತಿದೆ.

ಹಾಲಿ ಮಂತ್ರಿಗಳಾದ ನಾರಾಯಣಸ್ವಾಮಿ ಅವರಿಗೆ ಕೇಂದ್ರದ ನಾಯಕರು ನೀಡಿದ್ದ ಅವಕಾಶ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೇ ತಮ್ಮ ವೈಫಲ್ಯ ಗಳನ್ನ ಮರೆಮಾಚಿಕೊಳ್ಳಲು ರಾಜಕೀಯದ ಸಹವಾಸವೇ ಬೇಡ ಎಂಬ ಮಾತುಗಳನ್ನಾಡಿದ್ದರು. ಅದೇನೇ ಇರಲಿ, ಬಿ.ಎಸ್.ಯಡಿಯೂರಪ್ಪ ಅವರ ನಂತರ ರಾಜ್ಯದಲ್ಲಿ ಸಮರ್ಥ ನಾಯಕರೇ ಇಲ್ಲವೇನೋ ಎಂಬಂತಾಗಿ ದಿಕ್ಕೆಟ್ಟಿದ್ದ ರಾಜ್ಯ ಬಿಜೆಪಿ ಘಟಕಕ್ಕೆ ಬಿ.ವೈ. ವಿಜಯೇಂದ್ರ ಈಗ ಅಗ್ರೇಸರ. ಆದರೆ, ಪಕ್ಷದಲ್ಲಿ ಭವಿಷ್ಯದ ಲಿಂಗಾಯತೇತರ ಮತ್ತು ಪ್ರಮುಖ ದಲಿತ ನಾಯಕರ ಅವಶ್ಯಕತೆಯೂ ಇದೆ. ಇಂತಹ ಸನ್ನಿವೇಶದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ ಹೆಸರನ್ನು ಮುನ್ನೆಲೆಗೆ ತರುವ ಪ್ರಯತ್ನ ಸಾಗಿದಂತಿದೆ.

ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಸ್ವಾಮೀಜಿ ಈಗಲ್ಲದೇ ಇದ್ದರೂ ಮುಂದಿನ ೫-೧೦ ವರ್ಷ ಗಳ ಒಳಗೆ ಪಕ್ಷಕ್ಕೆ ಹೊಸ ಹುರುಪು ತಂದುಕೊಡವಂತಹ ನಾಯಕರನ್ನಾಗಿ ತಯಾರು ಮಾಡುವಂತಹ ಚಿಂತನೆ ಪಕ್ಷ ಮತ್ತು ಪರಿವಾರ ಮಾಡಿದಂತಿದೆ. ಬಹುಶಃ ಮಾದಾರ ಚನ್ನಯ್ಯ ಸ್ವಾಮೀಜಿಗೆ ಈ ಚುನಾವಣೆ ಯಲ್ಲಿ ಟಿಕೆಟ್ ಲಭಿಸಿದ್ದೇ ಆದಲ್ಲಿ ಅದು ದಕ್ಷಿಣ ಭಾರತದ ರಾಜಕೀಯ ಇತಿಹಾಸದ ಮಹತ್ವದ ಮೈಲಿಗಗಲಿದೆ. ದಲಿತ ಸಮುದಾಯದ ಅದರಲ್ಲೂ ಕಾವಿಧಾರಿ ಸ್ವಾಮೀಜಿಯೊಬ್ಬರು ಬಿಜೆಪಿಯ ರಾಜಕೀಯ ಅಖಾಡಕ್ಕೆ ಧುಮುಕಿದ ಮೊದಲಿಗರು ಎನಿಸುತ್ತಾರೆ. ಯೋಗಿ ಆದಿತ್ಯನಾಥ್ ಅವರು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದಾಗ ಸಂಸತ್ತಿನ ಕಣ್ಣೀರು ಹಾಕಿದ್ದನ್ನು ಇಡೀ ದೇಶವೇ ಗಮನಿಸಿತ್ತು.

ಆದರೆ, ಇಂದು ಅಂತಹ ಕಣ್ಣೀರು ಹಾಕುವ ಪರಿಸ್ಥಿತಿ ಯಾವ ಸ್ವಾಮೀಜಿಗಳಿಗೂ ಇಲ್ಲ! ಮೊದಲು ಇವರನ್ನು ಸಂಸತ್ತಿಗೆಕರೆಸಿಕೊಂಡು ದಿಲ್ಲಿಯ
ಗರಡಿಯಲ್ಲಿ ಪಳಗಿಸಿ ನಂತರ ರಾಜ್ಯಕ್ಕೆ ಕಳುಹಿಸಬೇಕು ಎಂಬ ಚಿಂತನೆ ಪಕ್ಷಕ್ಕಿದ್ದಂತಿದೆ. ಇದನ್ನು ಪಕ್ಷದ ಚಿಂತನೆ ಎನ್ನುವುದಕ್ಕಿಂತಲೂ ಭಾಜಪದ ಮೋಡಸ್ ಆಫ್ ಒಪರೆಂಡಿ (ಕಾರ್ಯಾಚರಣೆ ವಿಧಾನ) ಎಂದರೂ ತಪ್ಪಿಲ್ಲ. ಉತ್ತರ ಪ್ರದೇಶದ ಈಗಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಇದೇ ರೀತಿ ದಿಲ್ಲಿಯ ಗರಡಿ ಯಲ್ಲಿ ಪಳಗಿಸಿ ನಂತರ ಉತ್ತರಕ್ಕೆ ಉತ್ತರಾಧಿಕಾರಿ ಎಂದು ಘೋಷಿಸಿದ ಇತಿಹಾಸ ನಮ್ಮ ಕಣ್ಣ ಮುಂದಿದೆ.

ಹಾಗೆ ನೋಡಿದರೆ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ರಾಜಕೀಯ ಕ್ಷೇತ್ರ ಹೊಸದೇನೂ ಅಲ್ಲ! ಅಪರಿಚಿತವೂ ಅಲ್ಲ!! ಕಳೆದ ಬಾರಿಯ ಲೋಕ ಸಭಾ ಚುನಾವಣೆಯ ಇವರಿಗೆ ಅಖಾಡಕ್ಕೆ ಧುಮುಕುವ ಒತ್ತಡ ಹೇರಲಾಗಿತ್ತು. ಆದರೆ ಸ್ವತಃ ಸ್ವಾಮೀಜಿಯೇ ಒ ಎಂದಿದ್ದರು. ಈಗ ಒ ಎನ್ನುವಂತಹ ವಾತಾವರಣ ಇಲ್ಲವೇ ಇಲ್ಲವಾಗಿದೆ. ವಿಶೇಷವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಯಾವಾಗಲೂ ಹೊರಗಿನ ಅಭ್ಯರ್ಥಿಗಳದ್ದೇ ಕಾಟ. ಸಂಪನ್ಮೂಲ ಉಳ್ಳವರೆ ಇಲ್ಲಿಗೆ ದಾಂಗುಡಿಯಿಟ್ಟು ಗೆದ್ದು ಬಂದ ನಂತರ ಯಾವ ಅಭಿವೃದ್ಧಿ ಕಾರ್ಯವನ್ನೂ ಸಾಽಸದೆ ಹೋಗಿರುವ ನಿದರ್ಶನಗಳು ಇಲ್ಲಿ ಬೆಟ್ಟದ ಷ್ಟಿವೆ. ನಿವೃತ್ತ ಪೊಲೀಸ್ ಅಧಿಕಾರಿ ಪಿ.ಕೋದಂಡರಾಮಯ್ಯ, ಚಿತ್ರನಟ ಶಶಿಕುಮಾರ್, ಮೂಡಿಗೆರೆಯ ಬಿ.ಎನ್. ಚಂದ್ರಪ್ಪ… ಹೀಗೆ ಸಾಕಷ್ಟು ಪರಪುಟ್ಟರು ಬಂದು ಮೊಟ್ಟೆ ಇಟ್ಟ ಗೂಡಿದು. ಈ ಪರಂಪರೆಗೆ ಮಾದಾರ ಚನ್ನಯ್ಯ ಸ್ವಾಮೀಜಿ ಈ ಬಾರಿ ಎಳ್ಳುನೀರು ಬಿಡುವ ದಿನಗಳು ಹತ್ತಿರ ಬಂದಂತಿವೆ.

ಪರಿಶಿಷ್ಟ ಜಾತಿಯ ಮಾದಿಗ ಸಮುದಾಯದ ಎಡಗೈ ಪಂಗಡದ ಕಲ್ಯಾಣಕ್ಕಾಗಿ ಸ್ಥಾಪಿಸಲಾದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಮೊದಲ ಪೀಠಾಧಿಪತಿ ಯಾಗಿ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ೨೦೦೧ರ ಜೂನ್ ೨೪ರಂದು ಪಟ್ಟಕ್ಕೇರಿದರು. ಇಂತಹುದೊಂದು ಮುಳ್ಳು ಗದ್ದುಗೆ
ಅಲಂಕರಿಸಿದ ದಿನದಿಂದಲೂ ಅವರು ಸಮು ದಾಯಕ್ಕೆ ಹೊಸ ಹುರುಪು ತುಂಬಿzರೆ. ಈಗ ಅವರನ್ನು ಗುರುಪೀಠದಿಂದ ರಾಜಕೀಯದ ಅಖಾಡಕ್ಕೆ ಕರೆತರು ವುದೂ ಅಷ್ಟೇನು ಕಷ್ಟವಾಗಲಿಕ್ಕಿಲ್ಲ ಎನಿಸುತ್ತದೆ. ಕಾರಣ ೨೦೧೯ರ ಚುನಾವಣೆಯಲ್ಲಿ ಆನೇಕಲ್ ನಾರಾಯಣ ಸ್ವಾಮಿಯವರ ಗೆಲುವಿನ ರೂವಾರಿ ಇವರೇ ಆಗಿದ್ದರು.

ಮಾದಾರ ಚನ್ನಯ್ಯ ಸ್ವಾಮೀಜಿ ಏನಾದರೂ ಈ ಹಿಂದೆಯೇ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದರೆ ಪಕ್ಷದ ಹಿರಿಯ ಮುಖಂಡರೇ ಮಠದ ಬಾಗಿಲಿಗೆ ಧಾವಿಸಿ ‘ಬಿ’ ಫಾರಂ ತಲುಪಿಸಿ ಹೋಗುತ್ತಿದ್ದರು. ಕಾರಣ ಅಂದು ಅವರಿಗೆ ಬೆನ್ನಲುಬಾಗಿ ನಿಂತಿದ್ದವರು ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಪಾದಂಗಳವರು. ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿ ೨೦೦೯ರಲ್ಲಿ ಸಾಮರಸ್ಯದ ನಡಿಗೆಯಲ್ಲಿ ಪೇಜಾವರ ಶ್ರೀಗಳ ಜೊತೆ
ಮಾದಾರ ಚನ್ನಯ್ಯ ಸ್ವಾ ಮೀಜಿ ಮೊದಲ ಬಾರಿಗೆ ಹೆಜ್ಜೆ ಹಾಕಿದರು. ಜಾತಿಯ ಅಸಮಾನತೆ ಹೋಗಲಾಡಿಸುವ ಘೋಷಣೆಯ ಈ ನಡಿಗೆ ಶ್ರೀಗಳ ಸಾಮಾಜಿಕ ಕ್ರಾಂತಿಯ ಕೊಡುಗೆಗೆ ಮುನ್ನುಡಿ ಬರೆಯಿತು.

ಅಂದು ಪೇಜಾವರ ಶ್ರೀಗಳ ಸಂಪರ್ಕದಿಂದ ಮೊದಲ್ಗೊಂಡ ಹೆಜ್ಜೆಗಳು ಮತ್ತು ಅಗ್ರಹಾರದ ಸಾಂಗತ್ಯ ಅವರನ್ನು ಸಂಘ ಪರಿವಾರದ ಗರ್ಭಗುಡಿಗೆ ಹತ್ತಿರವಾಗಿಸಿತು. ಅಂದಿನಿಂದ ಇಂದಿನ ವರೆಗೆ ಸ್ವಾಮೀಜಿ ಹಿಂತಿರುಗಿ ನೋಡಿದ್ದೇ ಇಲ್ಲ. ತೀರಾ ಇತ್ತೀಚಿಗೆ ಸರಸಂಘ ಚಾಲಕ ಮೋಹನ್ ಭಾಗವತರು ಇವರ ಮಠಕ್ಕೆ ಭೇಟಿ ನೀಡಿ ಎರಡು ದಿನಗಳ ಕಾಲ ತಂಗಿ ದ್ದರು. ಅಷ್ಟೇ ಅಲ್ಲ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಕೂಡಾ ಭೇಟಿ ನೀಡಿದ್ದರು. ಸ್ವಾಮೀಜಿ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಬಿಂಬಿಸುವುದರಿಂದ ದಲಿತರನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯಲೂ ಸಹಾಯಕವಾಗಲಿದೆ.

ಸ್ವಾಮೀಜಿಯ ವೈಯಕ್ತಿಕ ವರ್ಚಸ್ಸು ಮತ್ತು ಪ್ರಭಾವದಿಂದಾಗಿ ಶೇಕಡ ೩ ರಿಂದ ೫ರಷ್ಟು ವೋಟ್ ಬ್ಯಾಂಕ್ ಪಕ್ಷಕ್ಕೆ ಆಸರೆಯಾಗಲಿದೆ. ಜೊತೆಗೆ
ಹೆಚ್ಚುವರಿ ೩-೪ ಸ್ಥಾನ ಗೆಲ್ಲಿಸಿಕೊಳ್ಳಲೂ ಇದು ಪ್ರಯೋಜನ ಕಾರಿ. ಸ್ವಾಮೀಜಿ ಅವರ ರಾಜಕೀಯ ಪ್ರವೇಶ ಬಿಜೆಪಿ ಪಕ್ಷಕ್ಕೆ ಅನಿವಾರ್ಯವೇ ಹೊರೆತು ಸ್ವಾಮೀಜಿ ಅವರಿಗಲ್ಲ ಎಂಬುದು ಅಷ್ಟೇ ಸತ್ಯ! ರಾಜ್ಯದಲ್ಲಿ ಮುಂದೊಂದು ದಿನ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬಂದಾಗ ಬಿಜೆಪಿಯ ಮೊದಲ ಆಯ್ಕೆ ಮಾದಾರ ಚನ್ನಯ್ಯ ಸ್ವಾಮೀಜಿಯೇ ಆಗಿರುತ್ತಾರೆ ಎಂಬು ದರಲ್ಲಿ ಸಂಶಯವಿಲ್ಲ! ಈ ನಿಟ್ಟಿನಲ್ಲಿ ಭಾಜಪ ಮತ್ತು ಸಂಘ ಪರಿವಾರ ಹೇಗೆ ಯೋಚಿಸುತ್ತದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.