Tuesday, 17th September 2024

ಆಹಾರ ಕೊರತೆ ನೀಗಿಸಿದ್ದ ಸ್ವಾಮಿನಾಥನ್

ವೀಕೆಂಡ್ ವಿತ್ ಮೋಹನ್

camohanbn@gmail.com

ಸ್ವಾಮಿನಾಥನ್ ಅಂದು ತೆಗೆದುಕೊಂಡಂಥ ಕಾಂತಿಕಾರಕ ನಿರ್ಧಾರಗಳು ಭಾರತದ ಹಸಿವನ್ನು ನೀಗಿಸಿ, ಹಸಿರು ಕಾಂತಿಗೆ ಮುನ್ನುಡಿ ಬರೆದಿದ್ದವು. ‘ವಿದೇಶಗಳಿಂದ ಆಹಾರವನ್ನು ಬೇಡುವ ರಾಷ್ಟ್ರ’ ಎಂದು ಭಾರತವನ್ನು ಕರೆಯು ತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದ್ದು ಸ್ವಾಮಿನಾಥನ್.

ಭಾರತದಲ್ಲಿ ೧೯೬೦ರ ದಶಕದಲ್ಲಿ ದೊಡ್ಡ ಮಟ್ಟದ ಆಹಾರದ ಕೊರತೆಯಿತ್ತು. ವಿದೇಶದಿಂದ ಗೋಧಿಯನ್ನು ಆಮದು ಮಾಡಿ ಕೊಳ್ಳಬೇಕಾದ ಪರಿಸ್ಥಿತಿಯಿತ್ತು. ೧೯೬೫ರಲ್ಲಿ ಭಾರತದ ಜನಸಂಖ್ಯೆ ಸುಮಾರು ೫೦ ಕೋಟಿ ಯಷ್ಟಿತ್ತು, ಆದರೆ ದೇಶದಲ್ಲಿ ಬೆಳೆಯುತ್ತಿದ್ದಂಥ ಗೋಧಿಯ ಪ್ರಮಾಣ ೧೨ ಮಿಲಿಯನ್ ಟನ್ ಮಾತ್ರ. ಆಹಾರದ ಕೊರತೆ ನೀಗಿಸಲು ಅಮೆರಿಕದಿಂದ ಗೋಧಿ ಯನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಆಗ ದೇಶವನ್ನಾಳುತ್ತಿದ್ದ ನೆಹರು ಕುಟುಂಬದವರಿಗೆ ದೂರದೃಷ್ಟಿಯ ಕೊರತೆಯಿದ್ದ ಕಾರಣ, ಆಹಾರದ ಕೊರತೆ ನೀಗಿಸುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಲಿಲ್ಲ. ಆದರೆ ಭಾರತದಲ್ಲಿದ್ದ ಆಹಾರದ ಕೊರತೆಯನ್ನರಿತ ಲಾಲ್ ಬಹಾದುರ್ ಶಾಸಿ ‘ಜೈ ಜವಾನ್, ಜೈ ಕಿಸಾನ್’ ಘೋಷವಾಕ್ಯ ದೊಂದಿಗೆ ಕೃಷಿಯನ್ನು ಉತ್ತೇಜಿಸಿದರು.

ದೇಶದ ಗಡಿಕಾಯಲು ಸೈನಿಕರು ಎಷ್ಟು ಮುಖ್ಯವೋ, ಜನರ ದಿನನಿತ್ಯದ ಆಹಾರ ಪೂರೈಸುವ ರೈತರೂ ಅಷ್ಟೇ ಮುಖ್ಯ ಎಂಬು ದನ್ನು ಮನದಟ್ಟು ಮಾಡಿಕೊಡುವ ಘೋಷಣೆ ಇದಾಗಿತ್ತು. ಇಂಥ ಸಂದರ್ಭದಲ್ಲಿ ದೇಶದಲ್ಲಿನ ಆಹಾರದ ಕೊರತೆಯನ್ನು ನಿವಾರಿಸಲು ಟೊಂಕಕಟ್ಟಿ ನಿಂತವರು ಡಾ.ಸ್ವಾಮಿನಾಥನ್. ರೈತರ ವಿಷಯದಲ್ಲಿ ದೇಶದ ಯಾವುದೇ ಮೂಲೆಯಲ್ಲಿ ಪ್ರತಿಭಟನೆ ಗಳು ನಡೆದರೂ ಅಲ್ಲಿ ಅಥವಾ ರೈತರಾ ಧಾರಿತ ಚರ್ಚೆಗಳಲ್ಲಿ ಮೊದಲು ಕೇಳಿಬರುವ ಹೆಸರಿದು. ಡಾ.ಸ್ವಾಮಿನಾಥನ್ ವರದಿ ಅನುಷ್ಠಾನ ಮಾಡಬೇಕೆಂಬ ಕೂಗು ರೈತರಿಂದ ಆಗಾಗ ಕೇಳಿಬರುತ್ತಲೇ ಇರುತ್ತದೆ.

ಸ್ವಾಮಿನಾಥನ್ ಅಂದು ತೆಗೆದುಕೊಂಡಂಥ ಕ್ರಾಂತಿಕಾರಕ ನಿರ್ಧಾರಗಳು ಭಾರತದ ಹಸಿವನ್ನು ನೀಗಿಸಿ, ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿದ್ದವು. ‘ವಿದೇಶಗಳಿಂದ ಆಹಾರವನ್ನು ಬೇಡುವ ರಾಷ್ಟ್ರ’ ಎಂದು ಭಾರತವನ್ನು ಕರೆಯುತ್ತಿದ್ದವರ ಬಾಯಿ ಮುಚ್ಚುವಂತೆ ಮಾಡಿದ್ದು ಸ್ವಾಮಿನಾಥನ್. ಕೃಷಿ ಆಧಾರಿತ ವಿಷಯದಲ್ಲಿ ಪದವಿ ಪಡೆದಿದ್ದ ಅವರು ೧೯೪೯ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಅವರು ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ಯಾಗಬಹುದಿತ್ತು; ಆದರೆ ನಾಗರಿಕ ಸೇವೆಗೆ ಸೇರದೆ ಕೃಷಿಯ ವಿಚಾರದಲ್ಲಿ ದೊಡ್ಡ ಕ್ರಾಂತಿ ಮಾಡಬೇಕೆಂಬ ಹಂಬಲ ಅವರಿಗಿತ್ತು. ಅನುವಂಶೀಯತೆಯ ಸಂಶೋಧನೆ ಯಲ್ಲಿ ಪದವಿ ಪಡೆಯಲು ನೆದರ್ಲೆಂಡ್‌ಗೆ ತೆರಳಿದ ಸ್ವಾಮಿನಾಥನ್, ನಂತರ ಅಮೆರಿಕದ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದರು.

ಕೇಂಬ್ರಿಜ್ ವಿವಿಯಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಅವರಿಗೆ ಮೆಕ್ಸಿಕೋ ದೇಶದ ಡಾ.ನಾರ್ಮನ್ ಬಾರ್ಲಾಗ್ ಎಂಬ ವಿಜ್ಞಾನಿ ಗೆಳೆಯರಾದರು. ಗೋಧಿ ಬೆಳೆಯ ವಿಷಯದಲ್ಲಿ ಅಪಾರ ಸಂಶೋಧನೆ ನಡೆಸಿದ್ದ ನಾರ್ಮನ್ ನೂತನ ಗೋಧಿ ತಳಿಯನ್ನು ಅಭಿವೃದ್ಧಿಪಡಿಸಿದ್ದರ ಜತೆಗೆ, ಗೋಧಿ ಬೆಳೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ತುಕ್ಕುರೋಗದ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದರು. ಸಂಶೋಧನೆ ಮುಗಿಸಿ ೧೯೫೯ರಲ್ಲಿ ಭಾರತಕ್ಕೆ ಮರಳಿದ ನಂತರ ಸ್ವಾಮಿನಾಥನ್, ನಾರ್ಮನ್ ಜತೆಗಿನ ಸಂಬಂಧ ವನ್ನು ಭಾರತಕ್ಕೆ ಪರಿಚಯಿಸುವ ಯತ್ನಕ್ಕೆ ಕೈಹಾಕಿದ್ದರು.

ಭಾರತದಲ್ಲಿ ಅದೇ ವೇಳೆ ಉಂಟಾಗಿದ್ದ ಆಹಾರದ ಕೊರತೆ ನೀಗಿಸಲು ತುರ್ತಾಗಿ ಕೃಷಿ ಕ್ರಾಂತಿಯೊಂದು ನಡೆಯಬೇಕಿತ್ತು. ನಾರ್ಮನ್ ೧೯೫೯ರಲ್ಲಿ ಜಪಾನಿನ ‘ನೋರಿನ್-೧೦’ ಎಂಬ ಆನುವಂಶಿಕ ತಳಿ ಬಳಸಿ ಹೆಚ್ಚಿನ ಇಳುವರಿ ನೀಡುವ ಗೋಧಿ ಗಿಡವನ್ನು ಸಂಶೋಧಿಸಿದ್ದರು. ಈ ತಳಿಯ ಮಹತ್ವ ತಿಳಿದಿದ್ದ ಸ್ವಾಮಿನಾಥನ್, ಅದನ್ನು ಭಾರತಕ್ಕೆ ತಂದು ಆಹಾರದ ಕೊರತೆ ಯನ್ನೇಕೆ ನೀಗಿಸಬಾರದು ಎಂದು ಆಲೋಚಿಸಿದರು. ಆ ಸಮಯದಲ್ಲಿ ಭಾರತದಲ್ಲಿದ್ದಂಥ ಗೋಧಿ ತಳಿಗಳು ಅತ್ಯುತ್ತಮ ನೈಸರ್ಗಿಕ ಪ್ರದೇಶದಲ್ಲಿ, ಉತ್ತಮ ಗೊಬ್ಬರ ನೀಡಿದರೆ, ಅಬ್ಬಬ್ಬಾ ಎಂದರೆ ವರ್ಷಕ್ಕೆ ಶೇ.೧೦ರಷ್ಟು ಮಾತ್ರವೇ ಹೆಚ್ಚು ಇಳುವರಿ ನೀಡುತ್ತಿದ್ದವು. ಈ ಮಾದರಿಯ ತಳಿಯಿಂದ ಗೋಧಿಯ ಕೊರತೆ ನೀಗಲು ಸಾಧ್ಯವಿಲ್ಲವೆಂದು ಅವರಿಗೆ ತಿಳಿದಿತ್ತು.

ರಾಸಾಯನಿಕ ಗೊಬ್ಬರವನ್ನು ಸಿಂಪಡಿಸಲು ಸಾಧ್ಯವಾಗುತ್ತಿರಲಿಲ್ಲ, ಗಿಡದ ಎಳೆಗಳು ಗೋಧಿಯ ದೊಡ್ಡ ಕಾಳುಗಳ ಭಾರ ಹೊರುವುದು ಕಷ್ಟಸಾಧ್ಯವಾಗಿತ್ತು. ಪರಿಸ್ಥಿತಿಯ ಸಂಪೂರ್ಣ ಅರಿವಿದ್ದ ಸ್ವಾಮಿನಾಥನ್, ಮೆಕ್ಸಿಕನ್ ವಿಜ್ಞಾನಿ ನಾರ್ಮನ್ ಅಭಿವೃದ್ಧಿಪಡಿಸಿದ್ದ ಗೋಧಿ ತಳಿಯ ವಿಷಯವನ್ನು ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಿಗೆ ಪತ್ರಮುಖೇನ ತಿಳಿಸಿ, ಭಾರತಕ್ಕೆ ಅವರನ್ನು ಕರೆಸುವಂತೆ ಕೋರಿದ್ದರು. ಆ ತಳಿಯನ್ನು ಭಾರತದಲ್ಲಿ ಬೆಳೆದರೆ ಗೋಧಿಯ ಕೊರತೆಯನ್ನು ನೀಗಿಸ ಬಹುದೆಂದು ತಿಳಿಸಿದ್ದರು.

ಭಾರತದಲ್ಲಿನ ಆಹಾರದ ಕೊರತೆ ನೀಗಿಸಲೆಂದು ದೊಡ್ಡ ಮಟ್ಟದ ಕ್ರಾಂತಿಗೆ ಸಜ್ಜಾಗಿದ್ದ ಲಾಲ್ ಬಹಾದುರ್ ಶಾಸ್ತ್ರೀಯ ವರು ರಾಕ್ ಮುಲ್ಲರ್ ಸಂಸ್ಥೆಗೆ ಪತ್ರಬರೆದು ನಾರ್ಮನ್‌ರನ್ನು ಕಳುಹಿಸಿಕೊಡುವಂತೆ ಕೋರಿದರು. ಅದರನ್ವಯ ೧೯೬೩ರ ಮಾರ್ಚ್‌ ನಲ್ಲಿ ಭಾರತಕ್ಕೆ ಬಂದ ನಾರ್ಮನ್ ತಾವು ಅಭಿವೃದ್ಧಿ ಪಡಿಸಿದ್ದ ಗೋಧಿ ತಳಿಯನ್ನಿಟ್ಟುಕೊಂಡು ಸಣ್ಣಮಟ್ಟದಲ್ಲಿ ಸಂಶೋಧನೆ ನಡೆಸಿದರು. ನಂತರ ೧೦೦ ಕೆ.ಜಿ. ಗೋಧಿ ಬೀಜಗಳನ್ನು ಭಾರತಕ್ಕೆ ಕಳುಹಿಸಿ ಕೃಷಿಕಾರ್ಯಕ್ಕೆ ನೆರವಾದರು. ನಾರ್ಮನ್ ಅಭಿವೃದ್ಧಿ ಪಡಿಸಿದ್ದ ಬೀಜಗಳನ್ನು ಪಂಜಾಬಿನ ರೈತರ ಜಮೀನುಗಳಲ್ಲಿ ಮೊದಲ ಬಾರಿಗೆ ನೆಡಲಾಯಿತು. ಅವು ಉತ್ತಮ ಇಳುವರಿ ನೀಡಿ ದರೂ ಮೊದಮೊದಲು ಧಾನ್ಯದ ಬಣ್ಣ ಕೆಂಪಗಿತ್ತು. ನಂತರ ಭಾರತೀಯ ಕೃಷಿವಿಜ್ಞಾನಿಗಳು ಸ್ಥಳೀಕ ಗೋಧಿಬೀಜ ಗಳೊಂದಿಗೆ ನಾರ್ಮನ್ ಅಭಿವೃದ್ಧಿಪಡಿಸಿದ್ದ ಬೀಜಗಳ ಅಡ್ಡತಳಿ ಪ್ರಕ್ರಿಯೆ ನಡೆಸಿ, ಕಂದುಬಣ್ಣದ ಗೋಧಿ ಇಳುವರಿ ಬರುವಂತೆ ಮಾಡಿದರು.

ಹೀಗೆ, ಇಂದು ಭಾರತದಲ್ಲಿ ಬೆಳೆಯುವ ಗೋಧಿಯ ಮೂಲತಳಿಯು, ಡಾ. ಸ್ವಾಮಿ ನಾಥನ್ ತಮ್ಮ ಮೆಕ್ಸಿಕನ್ ಸ್ನೇಹಿತರಿಂದ ತಂದು ಕೃಷಿ ಮಾಡಿಸಿದ್ದಂಥದ್ದಾಗಿದೆ. ಇದಾದ ಕೇವಲ ೧೦ ವರ್ಷಗಳಲ್ಲಿ ಭಾರತದಲ್ಲಿನ ಗೋಧಿಯ ಇಳುವರಿ ಪ್ರಮಾಣ ೧೦ ಪಟ್ಟು ಹೆಚ್ಚಾಯಿತು. ಅಂದರೆ, ೧೨ ಮಿಲಿಯನ್ ಟನ್ ಇದ್ದುದು, ೧೨೦ ಮಿಲಿಯನ್ ಟನ್‌ಗೆ ತಲುಪಿತು. ಭಾರತದಲ್ಲಿ ನಡೆದ ಇಂಥ ಹಸಿರುಕ್ರಾಂತಿಯ ಯಶಸ್ಸು ಡಾ. ಸ್ವಾಮಿನಾಥನ್‌ರಿಗೆ ಸಲ್ಲಬೇಕು. ಅಮೆರಿಕದ ವಿಜ್ಞಾನಿಗಳು ೧೯೭೫ರಲ್ಲಿ, ‘ಭಾರತ ದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆಹಾರಧಾನ್ಯದ ರಫ್ತನ್ನು ನಿಲ್ಲಿಸಬೇಕು’ ಎಂದಿದ್ದರು.

ಆದರೆ ಸ್ವಾಮಿನಾಥನ್ ನಡೆಸಿದ ಕ್ರಾಂತಿಯ ಫಲವಾಗಿ ಭಾರತವಿಂದು ಗೋಧಿಯ ರಫ್ತನ್ನು ನಿಲ್ಲಿಸಿದರೆ ಪಾಶ್ಚಿಮಾತ್ಯ ದೇಶಗಳು ಕೈ ಕೈ ಹಿಸುಕಿ ಕೊಳ್ಳುವಂಥ ಪರಿಸ್ಥಿತಿ ಎದುರಾಗಿದೆ. ಸ್ವಾಮಿನಾಥನ್ ಕೈಗೊಂಡ ನಿರ್ಧಾರವನ್ನು ಟೀಕಿಸಿದವರೂ ಇದ್ದಾರೆ. ಅವರ ಪ್ರಯತ್ನದಿಂದಾಗಿ ಮತ್ತು ಮೆಕ್ಸಿಕೋ ದೇಶದ ಒಂದು ತಳಿಯ ಸಲುವಾಗಿ ಭಾರತದಲ್ಲಿನ ನೂರಾರು ಸ್ವದೇಶಿ ತಳಿಗಳು ನಾಶವಾಗು ತ್ತವೆ ಎಂದು ಕೆಲವರು ಹೇಳಿ ದ್ದರು. ಆದರೆ ಸಾಮಾನ್ಯ ಜನರು ಸ್ವಾಮಿನಾಥನ್‌ರ ಪರವಾಗಿ ನಿಂತರು. ಆಹಾರಕ್ಕಾಗಿ ವಿದೇಶಿಗ ರನ್ನು ಅವಲಂಬಿಸಿದ್ದ ಭಾರತದ ಬುಟ್ಟಿ, ಇಲ್ಲಿಯೇ ಬೆಳೆದ ಆಹಾರದಿಂದ ತುಂಬಿತೆಂಬ ತೃಪ್ತಿ ಅವರಲ್ಲಿತ್ತು. ಸ್ವಾಮಿನಾಥನ್‌ರ ದೂರ ದೃಷ್ಟಿಯ ಫಲವಾಗಿ ಭಾರತವಿಂದು ವಿದೇಶಗಳಿಗೆ ಹೆಚ್ಚುವರಿ ಬೆಳೆಯನ್ನು ರಫ್ತು ಮಾಡುವಷ್ಟರ ಮಟ್ಟಕ್ಕೆ ಬೆಳೆದಿದೆ.

ಭಾರತದ ಮತ್ತು ರೈತರ ಬಹುದೊಡ್ಡ ಸಮಸ್ಯೆಯನ್ನು ಬಗೆಹರಿಸಿದ್ದ ಸ್ವಾಮಿನಾಥನ್, ರೈತರು ಬೆಳೆದಿದ್ದ ಬೆಳೆಗಳಿಗೆ ಸಿಗಬೇಕಿದ್ದ ನ್ಯಾಯಯುತವಾದ ಬೆಲೆಯ ಸೂತ್ರವನ್ನು ಕಂಡುಹಿಡಿದಿದ್ದರು. ಕೇಂದ್ರ ಸರಕಾರ ತಮಗೆ ನೀಡಿದ್ದ ಜವಾಬ್ದಾರಿಯನ್ನು ನಿಭಾಯಿಸಿದ್ದ ಸ್ವಾಮಿನಾಥನ್ ೨೦೦೬ರಲ್ಲಿ ರೈತರ ವಿಚಾರದಲ್ಲಿ ತಾವು ಸಿದ್ಧಪಡಿಸಿದ್ದ ವರದಿಯನ್ನು ಮಂಡಿಸಿದ್ದರು. ರೈತರು ಬೆಳೆದ ಬೆಳೆಗೆ ಕನಿಷ್ಠವೆಂದರೂ ಒಟ್ಟಾರೆ ಖರ್ಚಿನ ಮೇಲೆ ಶೇ.೫೦ರಷ್ಟು ಲಾಭವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ  ನಿಗದಿ ಮಾಡ ಬೇಕೆಂದು ಅವರ ವರದಿ ಹೇಳಿತ್ತು. ರೈತರ ವ್ಯವಸಾಯದ ನಿಯತ ಖರ್ಚಿನ ಜತೆಗೆ, ಹೊಲದ ಮೇಲಿನ ಬಾಡಿಗೆ, ಬಂಡವಾಳದ ಮೇಲಿನ ಬಡ್ಡಿಯನ್ನು ಸೇರಿಸಿ ರೈತ ಬೆಳೆದ ಬೆಳೆಯ ಒಟ್ಟಾರೆ ಖರ್ಚನ್ನು ನಿರ್ಧರಿಸಬೇಕೆಂದು ಹೇಳಿದ್ದರು. ದೇಶದ ಮೂಲೆಮೂಲೆ ಯಲ್ಲಿರುವ ರೈತರನ್ನು ಕೇಳಿದರೆ ಇಂದಿಗೂ ಸ್ವಾಮಿನಾಥನ್ ಅವರ ‘ಇ೨ + ೫೦%’ ಸೂತ್ರ ತಿಳಿದಿರುತ್ತದೆ.

೨೦೧೭ರಲ್ಲಿ ಡಾ.ಸ್ವಾಮಿನಾಥನ್ ತಮ್ಮ ಟ್ವಿಟರ್ ಖಾತೆ ಯಲ್ಲಿ, ವಿಶೇಷವಾಗಿ ಬಿತ್ತನೆ ಬೀಜಗಳ ವಿಷಯದಲ್ಲಿ ತಮ್ಮ ಆಯೋಗ ನೀಡಿದ್ದ ವರದಿಯ ಹಲವು ಅಂಶಗಳನ್ನು ಜಾರಿಗೆ ತರುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆಂದು ಹೇಳಿದ್ದರು. ರೈತರ ಆದಾಯ ಹೆಚ್ಚಾಗಬೇಕಾದರೆ, ಅವರ ಬೆಳೆಗಳಿಗೆ ಸಿಗುವ ಬೆಲೆ ಹೆಚ್ಚಾಗಬೇಕು ಅಥವಾ ವ್ಯವಸಾಯದ ಖರ್ಚು ಕಡಿಮೆಯಾಗ ಬೇಕು. ಮೋದಿಯವರು ಅಧಿಕಾರಕ್ಕೆ ಬಂದ ನಂತರ, ರೈತರ ಬೆಳೆಗೆ ತಗುಲುವ ಖರ್ಚನ್ನು ತಗ್ಗಿಸುವ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರೈತರಿಗೆ ಕೇಂದ್ರ ಸರಕಾರದಿಂದ ನೇರವಾಗಿ ಧನಸಹಾಯ ಮಾಡುವ ಮೂಲಕ, ಬ್ಯಾಂಕುಗಳಿಂದ ರೈತ
ಪಡೆಯುತ್ತಿದ್ದಂಥ ಸಾಲದ ಪ್ರಮಾಣವನ್ನು ತಗ್ಗಿಸಿ ಬೆಳೆಯ ಮೇಲಿನ ಬಡ್ಡಿಯ ಖರ್ಚು ಕಡಿಮೆಯಾಗುವಂತೆ ಮಾಡಿದ್ದಾರೆ.

ಬೇವುಲೇಪಿತ ಯೂರಿಯಾದ ಮೂಲಕ, ಭೂಮಿ ಯಿಂದ ಆವಿಯಾಗುತ್ತಿದ್ದಂಥ ರಸಗೊಬ್ಬರದ ಪ್ರಮಾಣವನ್ನು ಕಡಿಮೆ ಮಾಡಿ ಹೆಚ್ಚಿನ ಇಳುವರಿ ಪಡೆ ಯುವ ಪ್ರಯತ್ನ ನಡೆದಿದೆ. ಬೇವುಲೇಪಿತವಾದ ಕಾರಣಕ್ಕೆ, ಕಾಳಸಂತೆ ಯಲ್ಲಿ ಮಾರಾಟವಾಗುತ್ತಿದ್ದಂಥ ರಸಗೊಬ್ಬರದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ರೈತರಿಗೆ ನೀಡುತ್ತಿರುವ ರಸಗೊಬ್ಬರದ ಮೇಲಿನ ಸಬ್ಸಿಡಿ ಪ್ರಮಾಣ ಹೆಚ್ಚಳವಾಗಿದ್ದು, ಮಾರುಕಟ್ಟೆಯಲ್ಲಿ ರಸಗೊಬ್ಬರದ ಬೆಲೆ ಯೇರಿಕೆಯಾಗಿದ್ದರೂ ರೈತರ ಖರ್ಚು ಹೆಚ್ಚಾಗದಂತೆ ನೋಡಿ ಕೊಳ್ಳಲಾಗಿದೆ.

ರೈತರ ಹಲವು ಬೆಳೆಗಳಿಗೆ ಇತಿಹಾಸದಲ್ಲಿಯೇ ಅತ್ಯಧಿಕ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಲಾಗಿದೆ. ಮೋದಿಯವರ ಹಲವು ಯೋಜನೆಗಳು ಡಾ. ಸ್ವಾಮಿನಾಥನ್ ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳೇ ಆಗಿವೆ. ಕೇರಳದ ಕುಟ್ಟನಾಡು ಪ್ರಾಂತ್ಯದ ರೈತರು ಸ್ವಾಮಿನಾಥನ್ ಅವರನ್ನು ಎಂದಿಗೂ ಮರೆಯುವುದಿಲ್ಲ. ಸಮುದ್ರ ಮಟ್ಟಕ್ಕಿಂತಲೂ ಕೆಳಗಿರುವ ಕುಟ್ಟನಾಡು ಪ್ರದೇಶದಲ್ಲಿ ಕೃಷಿಕಾರ್ಯ ಸುಲಭವಲ್ಲ. ಪ್ರವಾಹ ಬಂದಾಗ ನೀರು ಸರಾಗವಾಗಿ ಹರಿದುಹೋಗಲಿಲ್ಲವೆಂದರೆ, ಕೃಷಿಜಮೀನುಗಳು ನೀರಿನಿಂದ ತುಂಬಿಹೋಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚುತ್ತದೆ.

ಉಪ್ಪುಮಿಶ್ರಿತ ಮಣ್ಣಿನಲ್ಲಿ ಬೆಳೆ ಬೆಳೆಯುವುದು ಸುಲಭದ ಮಾತಲ್ಲ. ನೂರಾರು ವರ್ಷಗಳಿಂದ ಅಲ್ಲಿನ ರೈತರು ನಡೆಸಿಕೊಂಡು ಬಂದಂಥ ವಿಶೇಷ ಕೃಷಿ ಪದ್ಧತಿಯನ್ನು ಉಳಿಸಿಕೊಂಡು ಹೋಗಲು ನೆರವಾಗಿದ್ದ ಸ್ವಾಮಿನಾಥನ್, ಅಲ್ಲಿನ ರೈತರಿಗೆ ವಿಶೇಷ ಪ್ಯಾಕೇಜ್ ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ನಿರಂತರ ಪರಿಶ್ರಮದಿಂದಾಗಿ ಅಲ್ಲಿ ರೈತರ ‘ಸಮುದ್ರಮಟ್ಟದಿಂದ ಕೆಳಗಿನ ತೇವಾಂಶ ಮಣ್ಣಿನ ಕೃಷಿ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ೨೦೧೩ರಲ್ಲಿ ಕೃಷಿ ಪರಂಪರೆಯಲ್ಲಿ ಗುರುತಿಸಿಕೊಂಡಿತ್ತು.

ಭಾರತದ ಕೃಷಿಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿ ಹಸಿರುಕ್ರಾಂತಿಯ ರೂವಾರಿಯಾಗಿದ್ದ ಡಾ.ಸ್ವಾಮಿನಾಥನ್ ನಮ್ಮನ್ನು ಅಗಲಿ ದ್ದಾರೆ. ಅವರ ಕೃಷಿ ಆಧರಿತ ಸಂಶೋಧನೆ, ಸಲಹೆ, ಕೊಡುಗೆಗಳನ್ನು ಮುಂದಿನ ೧೦೦ ವರ್ಷಗಳ ಕಾಲ ಭಾರತೀಯರು ನೆನಪಿಸಿ ಕೊಳ್ಳಬೇಕು.

Leave a Reply

Your email address will not be published. Required fields are marked *