Sunday, 15th December 2024

ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ ಕಟಪಯ ಸೂತ್ರಕೆ ಬೆರಗಾಗಿ

ತಿಳಿರು ತೋರಣ

srivathsajoshi!@yahoo.com

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಸಂಭ್ರಮ ಜಗದಗಲ ಹರಡಿರುವಾಗ ಈ ಲೇಖನ ಅಯೋಧ್ಯೆಗಾಗಲೀ ರಾಮಲಲ್ಲಾಗಾಗಲೀ ಸಂಬಂಧಿಸಿದ್ದಲ್ಲವಾದರೂ ರಾಮನಾಮ ಸ್ಮರಣೆಯಿಂದಲೇ ಆರಂಭಿಸುವುದು ಸಮಂಜಸ. ಅದರಲ್ಲೂ ರಾಮನಾಮವು ಲೇಖನದ ವಿಚಾರಕ್ಕೆ
ಸಂಬಂಧವಿರುವ ಹಾಗೆ ನೋಡಿಕೊಳ್ಳಬೇಕಾದರೆ ವಿಷ್ಣುಸಹಸ್ರನಾಮ ಸ್ತೋತ್ರದಲ್ಲಿ ಕೊನೆಗೆ ಬರುವ ಈ ಶ್ಲೋಕವನ್ನು ನೆನಪಿಸಿಕೊಳ್ಳಬೇಕು.

ಪಾರ್ವತಿಯು ಪರಮೇಶ್ವರನನ್ನು ಕೇಳುತ್ತಾಳೆ- ‘ಸಹಸ್ರ ನಾಮಾವಳಿಯನ್ನು ಅತ್ಯಂತ ಸರಳವಾಗಿ ಚುಟುಕಾಗಿ ಹೇಳುವ ಉಪಾಯವೇನಾದರೂ ಇದೆ ಯೇ?’ ಅದಕ್ಕೆ ಪರಮೇಶ್ವರನೆನ್ನುತ್ತಾನೆ- ‘ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ| ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ|’ ಅಂದರೆ, ರಾಮ ರಾಮ ರಾಮ ಎಂದು ಮೂರು ಸಲ ಹೇಳಿದರೆ ಅದು ವಿಷ್ಣುವಿನ ಸಹಸ್ರನಾಮಗಳನ್ನು ಉಚ್ಚರಿಸಿದಂತೆಯೇ ಲೆಕ್ಕ ಎಂದು.
ಪರಮೇಶ್ವರನೇ ಹೇಳಿದ್ದಾನೆಂಬ ಕಾರಣಕ್ಕೆ ಒಪ್ಪಿಕೊಳ್ಳೋಣ; ಆದರೆ ರಾಮ ಎಂದು ಮೂರು ಸಲ ಜಪಿಸಿದರೆ ಅದರ ಬೆಲೆ ಒಂದು ಸಾವಿರಕ್ಕೆ ಸಮ ಆಗುವುದು ಹೇಗೆ? ‘ಕಟಪಯ’ ಸೂತ್ರ ಅನ್ವಯಿಸಿದರೆ ಪರಮೇಶ್ವರನು ಹೇಳಿದ ಲೆಕ್ಕವನ್ನು ಸಾಧಿಸಿ ತೋರಿಸಬಹುದು!

ಕಟಪಯ ಸೂತ್ರದಲ್ಲಿ ‘ರ’ ವ್ಯಂಜನದ ಬೆಲೆ ೨. ‘ಮ’ ವ್ಯಂಜನದ ಬೆಲೆ ೫. ಇವೆರಡನ್ನೂ ಗುಣಿಸಿದರೆ ೧೦. ರಾಮ ಎಂದು ಮೂರು ಸಲ ಹೇಳಬೇಕಾದ್ದ ರಿಂದ ಹತ್ತು ಗುಣಿಸು ಹತ್ತು ಗುಣಿಸು ಹತ್ತು = ಒಂದು ಸಾವಿರ! ಬೇಡ, ಗುಣಿಸುವ ಗಣಿತ ನಿಮ್ಮ ತಲೆಗೆ ಕಷ್ಟವಾದರೆ ಕೂಡಿಸುವುದನ್ನು ಮಾಡಿ. ರ = ೨, ಮ = ೫ ಅಂತಾದರೆ ೨ + ೫ = ೭. ಶ್ರೀರಾಮನು ಮಹಾವಿಷ್ಣುವಿನ ಏಳನೆಯ ಅವತಾರ!

ರಾಮರಾಮಾ ಎಂದು ತಲೆಚಚ್ಚಿಕೊಳ್ಳದಿರಿ ಪ್ಲೀಸ್. ಈಗ ಮಹಾ ಭಾರತಕ್ಕೆ ಸಂಬಂಽಸಿದ ಒಂದು ಶ್ಲೋಕವನ್ನು ನೋಡೋಣ. ‘ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್| ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್||’ ಮಹಾ ಭಾರತಕ್ಕೆ ‘ಜಯ’ ಎಂದು ಕೂಡ ಹೆಸರಿದೆಯಷ್ಟೆ? ಕಟಪಯ ಸೂತ್ರದಲ್ಲಿ ‘ಜ’ ವ್ಯಂಜನದ ಬೆಲೆ ೮. ‘ಯ’ ವ್ಯಂಜನದ ಬೆಲೆ ೧. ‘ಜಯ’ ಎಂದು ನಾವು ಎಡದಿಂದ ಬಲಕ್ಕೆ ಬರೆದು ಓದುತ್ತೇ ವಾದರೂ ಕಟಪಯ ಸೂತ್ರದ ಸಂಖ್ಯೆಗಳನ್ನು ಬಲದಿಂದ ಎಡಕ್ಕೆ ಪರಿಗಣಿಸುವುದು ರೂಢಿ. ‘ಅಂಕಾನಾಂ ವಾಮತೋ ಗತಿಃ’ ಎಂದು ಹೇಳಲಾಗಿದೆ ಕೂಡ.

ಹಾಗಾಗಿ ಜಯ ಎಂದರೆ ೧೮. ಮಹಾಭಾರತದಲ್ಲಿ ೧೮ ಪರ್ವಗಳಿರುವುದು, ೧೮ ದಿನ ಯುದ್ಧ ನಡೆದದ್ದು, ೧೮ ಅಕ್ಷೌಹಿಣೀ ಸೈನ್ಯಗಳಿದ್ದದ್ದು, ಮಹಾ ಭಾರತದಲ್ಲೇ ಬರುವ ಭಗವದ್ಗೀತೆಯಲ್ಲಿ ೧೮ ಅಧ್ಯಾಯಗಳಿರುವುದು ಇತ್ಯಾದಿ ನಮಗೆಲ್ಲ ಗೊತ್ತೇ ಇರುವ ವಿಚಾರ. ಅದೆಲ್ಲ ಸರಿ, ಕಟಪಯ ಸೂತ್ರ ಎಂದರೇನು? ನಿಮಗೆ ಆಶ್ಚರ್ಯ ವಾಗಬಹುದು, ಈಗ ನನಗದು ನೆನಪಾಗಲಿಕ್ಕೂ ರಾಮನೇ ಕಾರಣ! ಅಯೋಧ್ಯೆಯ ರಾಮನಲ್ಲ, ರಾಮಕುಮಾರ್ ಕೊಡ್ಲೆಕೆರೆ ಎಂಬೊಬ್ಬ ಹಿರಿಯ ಓದುಗಮಿತ್ರ. ಸ್ಟೇಟ್‌ಬ್ಯಾಂಕ್‌ನಿಂದ ನಿವೃತ್ತರಾಗಿ ಈಗ ಗೋಕರ್ಣದಲ್ಲಿ ನೆಲೆಸಿರುವವರು.

ತುಂಬ ಹಿಂದೆ ‘ವಿಜಯ ಕರ್ನಾಟಕ’ ಪತ್ರಿಕೆಯ ‘ಪರಾಗಸ್ಪರ್ಶ’ ಅಂಕಣದಲ್ಲಿ ನಾನೊಮ್ಮೆ ಕಟಪಯ ಸೂತ್ರದ ಬಗ್ಗೆ ಬರೆದಿದ್ದೆ. ಅದಾಗಿ ಸರಿ ಸುಮಾರು ೧೪ ವರ್ಷಗಳಾದ ಮೇಲೆ (ಅಂದರೆ ರಾಮ-ಸೀತೆ- ಲಕ್ಷ್ಮಣರ ವನವಾಸದ ಅವಧಿಯಷ್ಟು ಕಾಲ ಸಂದ ಬಳಿಕ) ರಾಮಕುಮಾರ್ ಮೊನ್ನೆ ಒಂದು ದಿನ ನನಗೆ ವಾಟ್ಸ್ಯಾಪ್ ಕರೆ ಮಾಡಿ ಆ ಕಟಪಯ ಸೂತ್ರದ ಲೇಖನವನ್ನು ನೆನಪಿಸಿದರು. ವಿಜಯ ಕರ್ನಾಟಕದಲ್ಲಿ ಆ ಲೇಖನ ಪ್ರಕಟವಾಗಿದ್ದಾಗ ರಾಮ ಕುಮಾರ್‌ರ ತಂದೆಯವರು ಬದುಕಿದ್ದರಂತೆ. ಲೇಖನವನ್ನು ಓದಿ ಮೆಚ್ಚಿ ‘ಇದನ್ನು ಎತ್ತಿಟ್ಟುಕೋ. ಒಳ್ಳೆಯ ಸ್ವಾರಸ್ಯಕರ ವಿಚಾರಗಳಿವೆ!’ ಎಂದಿದ್ದರಂತೆ.

ರಾಮಕುಮಾರ್ ಮೊನ್ನೆ ನನಗೆ ಕರೆ ಮಾಡಿದ್ದು ಕೇಶವ ಮೆಹೆಂದಳೆಯವರ ಭಾರತೀಯ ಪಂಚಾಂಗ ಕ್ಯಾಲೆಂಡರ್ ತರಿಸಿಕೊಳ್ಳುವುದು ಹೇಗೆ ಎಂದು ಕೇಳಲಿಕ್ಕೆ. ಆದರೆ ಕರೆಯ ಆರಂಭದಲ್ಲಿ ಪರಿಚಯ ಮಾಡಿಕೊಂಡಿದ್ದು ಕಟಪಯ ಸೂತ್ರದ ಲೇಖನವನ್ನು ಮತ್ತು ತನ್ನ ತಂದೆಯವರನ್ನು ನೆನಪಿಸಿ ಕೊಳ್ಳುವುದರ ಮೂಲಕ. ಅವರೇ ಅಷ್ಟು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರೆಂದ ಮೇಲೆ ನಾನೂ ಅದನ್ನೊಮ್ಮೆ ಓದಬೇಕು ಎಂದು ತೆಗೆದು ನೋಡಿದೆ. ಆ ಥರದ ವಿಚಾರಗಳನ್ನು ಆಗೊಮ್ಮೆ ಈಗೊಮ್ಮೆ ಮನನ ಮಾಡುವುದು ಒಳ್ಳೆಯದೆಂದುಕೊಂಡೆ. ಲೇಖನವನ್ನೊಂದಿಷ್ಟು ಪರಿಷ್ಕರಿಸಿದೆ.

ಪೂರಕವಾಗಿ ಇನ್ನೊಂದಿಷ್ಟು ಅಂಶಗಳನ್ನು ಸೇರಿಸಿದೆ. ಹಾಗೆ ಇಂದಿನ ತೋರಣವಾಗಿಸಿದೆ. ಪ್ರಾಚೀನ ಭಾರತದಲ್ಲಿ ಗಣಿತಜ್ಞರು, ವ್ಯಾಕರಣಕಾರರು,
ಖಗೋಳಶಾಸ್ತ್ರಜ್ಞರು, ಜ್ಯೋತಿಷಿಗಳು ದೊಡ್ಡದೊಡ್ಡ ಸಂಖ್ಯೆಗಳನ್ನು (ಲಕ್ಷ-ಕೋಟಿಗಿಂತಲೂ ಹೆಚ್ಚಿನ ಬೆಲೆಯ ಅಥವಾ ಅಪರಿಮಿತ ದಶಾಂಶ ಸ್ಥಾನ ಗಳಿರುವವನ್ನು) ಅಕ್ಷರಗಳ ಗುಂಪಾಗಿ, ಅಂದರೆ ಪದಗಳಾಗಿ ಅಥವಾ ಶ್ಲೋಕರೂಪದಲ್ಲಿ ನಮೂದಿಸುತ್ತಿದ್ದರು. ಯಾವ ಅಂಕಿಗೆ ಯಾವ ಅಕ್ಷರ ಎಂಬುದಕ್ಕೆ ಕಟಪಯ ಸೂತ್ರ ಬಳಸುತ್ತಿದ್ದರು. ‘ಕಾದಿನವ ಟಾದಿನವ ಪಾದಿಪಂಚ ಯಾದ್ಯಷ್ಟ’ ಎಂದು ಅದಕ್ಕೂ ಒಂದು ಸಂಸ್ಕೃತ ಸೂತ್ರ. ಅಂದರೆ, ಕ-ದಿಂದ ಒಂಬತ್ತು ಟ-ದಿಂದ ಒಂಬತ್ತು ಪ-ದಿಂದ ಐದು ಯ-ದಿಂದ ಎಂಟು ಅಂತ.

ವರ್ಣಮಾಲೆಯ ಅಕ್ಷರಗಳಿಗೆ ಒಂದು ನಿರ್ದಿಷ್ಟ ರೀತಿಯಲ್ಲಿ ಆರೋಹಣ ಕ್ರಮದಲ್ಲಿ ೧ ರಿಂದ ೯ರವರೆಗೆ ಅಂಕಿಗಳ ಹೊಂದಾಣಿಕೆ. ಸ್ವರಾಕ್ಷರಗಳಿಗೆ ಮತ್ತು ಞ, ನ ವ್ಯಂಜನಗಳಿಗೆ ೦. ಅನುಸ್ವಾರ ವಿಸರ್ಗಗಳಿಗೂ ೦. ಸಂಯುಕ್ತಾಕ್ಷರವಿದ್ದರೆ ಅದರಲ್ಲಿ ಮೊದಲ ವ್ಯಂಜನವನ್ನಲ್ಲ ಎರಡನೆಯದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಕಾಗುಣಿತ ಬದಲಾದರೂ ಆಯಾ ವ್ಯಂಜನಗಳಿಗೆ ಒಂದೇ ಬೆಲೆ. ‘ನಞಾವಚಶ್ಚ ಶೂನ್ಯಾನಿ ಸಂಖ್ಯಾಃ ಕಟಪಯಾದಯಃ| ಮಿಶ್ರೇ ತೂಪಾನ್ತ್ಯಹಲ್ ಸಂಖ್ಯಾ ನ ಚ ಚಿನ್ತ್ಯೋ ಹಲಸ್ವರಃ’ ಎಂದು ಅದಕ್ಕೊಂದು ಸಂಸ್ಕೃತ ಶ್ಲೋಕ. ಉದಾಹರಣೆಗೆ ‘ನರೇಂದ್ರ ಮೋದಿ’ಯನ್ನು ಕಟಪಯ ಸೂತ್ರದಂತೆ ಹೇಳುವುದಾದರೆ, ಇದರಲ್ಲಿನ ವ್ಯಂಜನಗಳ ಅಂಕಿಗಳು ಚಿತ್ರದಲ್ಲಿರುವ ಕೋಷ್ಟಕದಂತೆ ಕ್ರಮವಾಗಿ ೦, ೨, ೨, ೫, ೮. ಇವನ್ನು ಹಿಂದು ಮುಂದಾಗಿ ಬರೆದಾಗ ೮೫೨೨೦ ಎಂಬ ಸಂಖ್ಯೆಯಾಗುತ್ತದೆ. ಇಲ್ಲಿ ನರೇಂದ್ರಮೋದಿಗೂ ಈ ಸಂಖ್ಯೆಗೂ ಏನೇನೂ ಸಂಬಂಧವಿಲ್ಲ, ನಿದರ್ಶನಕ್ಕಾಗಿ ಹೇಳಿದ್ದಷ್ಟೇ.

ಅದಕ್ಕಿಂತ, ವ್ಯಾವಹಾರಿಕವಾದ ಒಂದು ಉದಾಹರಣೆ ಕೊಡುವುದಾದರೆ ನಿಮ್ಮ ಎಟಿಎಮ್ ಕಾರ್ಡ್‌ನ ಪಿನ್ ಅಥವಾ ನಾಲ್ಕಂಕಿಯ ಬೇರಾವುದೋ ಗೂಢಸಂಖ್ಯೆಯನ್ನು ನೀವು ನನಗೆ ಕಟಪಯ ಸೂತ್ರದಂತೆ ತಿಳಿಸಬಯಸುತ್ತೀರಿ ಅಂದ್ಕೊಳ್ಳಿ (ಚಿಂತಿಸಬೇಡಿ, ನಾನದನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ). ‘ಗೂಢಸಂಖ್ಯೆ’ ಎಂದಷ್ಟೇ ನೀವು ನನಗೆ ಬರೆದುಕೊಟ್ಟರೆ ಸಾಕು. ಅದು ೧೭೪೩ ಎಂದು ನನಗೆ ತತ್‌ಕ್ಷಣವೇ ಗೊತ್ತಾಗುತ್ತದೆ! ಹೇಗೆ ಅಂತೀರಾ? ಕೋಷ್ಟಕದ ಪ್ರಕಾರ ಮತ್ತು ಕಟಪಯ ಸೂತ್ರದ ನಿಯಮಗಳ ಪ್ರಕಾರ ಗೂ=೩; ಢ=೪; ಸಂ=೭, ಖ್ಯೆ=೧. ಜೋಡಿಸಿದರೆ ೩೪೭೧.

ಉಲ್ಟಾ ಮಾಡಿದರೆ ೧೭೪೩. ಯುರೇಕಾ!! ಇನ್ನೊಂದು ಉದಾಹರಣೆಯಾಗಿ ನಿಮ್ಮ ಜಂಗಮವಾಣಿ ಸಂಖ್ಯೆಯನ್ನು ಕಟಪಯ ಸೂತ್ರದಂತೆ ಹೇಳುತ್ತ ‘ದಶರಥನ ಮಗ ಭರತ’ ಎನ್ನುತ್ತೀರಿ. ಆ ಸಂಖ್ಯೆ ೬೨೪೩೫ ೦೭೨೫೮ ಎಂದು ನಾನು ಡಿಕೋಡ್ ಮಾಡುತ್ತೇನೆ. ಹೇಗೆ? ಕೋಷ್ಟಕದಲ್ಲಿ ಅಕ್ಷರಗಳನ್ನು ಮತ್ತು ಅಂಕಿಗಳನ್ನು ನೋಡುತ್ತ ಬರೆದದ್ದು ೮೫೨೭೦ ೫೩೪೨೬ ಎಂದಾಗುತ್ತದಾದರೂ, ಅಂಕಾನಾಂ ವಾಮತೋ ಗತಿಃ ಆದ್ದರಿಂದ ಉಲ್ಟಾ ಮಾಡಿದಾಗ ೬೨೪೩೫ ೦೭೨೫೮ ಆಗುತ್ತದೆ. ಸಂಖ್ಯೆಗಳು ದೊಡ್ಡದಾದಂತೆಲ್ಲ ಅವುಗಳನ್ನು ಅಂಕಿಗಳ ಮೂಲಕ ಬರೆಯುವುದಕ್ಕಿಂತ, ಸಂಬಂಧಿಸಿದ ಅಕ್ಷರಗಳ ಗುಂಪಾಗಿ ಅರ್ಥಪೂರ್ಣ ಪದಪುಂಜಗಳಾಗಿ ಬರೆಯುವುಕ್ಕೆ, ಅದರಲ್ಲೂ ರಹಸ್ಯ ಸಂದೇಶಗಳಲ್ಲಿ ನೆನೆಗುಬ್ಬಿಗಳಾಗಿಸಿ ರವಾನಿಸುವುದಕ್ಕೆ ಕಟಪಯ ಸೂತ್ರದ ಬಳಕೆಯಾಗುತ್ತಿತ್ತು; ಸುಮಾರು ಕ್ರಿ.ಶ. ೩ ಅಥವಾ ೪ನೆಯ ಶತಮಾನದಷ್ಟು ಹಿಂದಿನ ಕಾಲದಲ್ಲೇ!

ಭಾರತದ ಪ್ರಾಚೀನ ಗಣಿತಜ್ಞರು ‘ಪೈ’ ಬೆಲೆಯನ್ನು ಅಪರಿಮಿತ ದಶಾಂಶ ಅಂಕಿಗಳಾಗಿ ಬರೆಯುವುದಕ್ಕಿಂದ ನಿರ್ದಿಷ್ಟ ಸ್ಥಾನದವರೆಗಷ್ಟೇ ಪರಿಗಣಿಸಿ ಶ್ಲೋಕದ ಮೂಲಕ ಹೇಳಿರುವುದನ್ನು ನೋಡಿದರೆ ಕಟಪಯ ಸೂತ್ರ ಬಳಸುವುದರಲ್ಲಿ ನಮ್ಮ ಹಿರಿಯರಿಗಿದ್ದ ಜಾಣ್ಮೆಗೆ ತಲೆದೂಗಲೇಬೇಕು. ಕೇರಳದ ಗಣಿತಜ್ಞ- ಖಗೋಲಶಾಸ್ತ್ರಜ್ಞ ಶಂಕರವರ್ಮನ್ ರಚಿಸಿದ ಸದ್ರತ್ನಮಾಲಾ ಗ್ರಂಥದಲ್ಲಿರುವ ‘ಭದ್ರಾಮ್ಬುದ್ಧಿಸಿದ್ಧಜನ್ಮಗಣಿತಶ್ರದ್ಧಾ ಸ್ಮ ಯದ್ ಭೂಪಗೀಃ’ ಅಂಥದೊಂದು ಸಾಲು. ಇದರ ಅಕ್ಷರಗಳಿಗೆ ಕಟಪಯ ಸೂತ್ರದ ಕೋಷ್ಟಕದಂತೆ ಅಂಕಿಗಳನ್ನು ಲಗತ್ತಿಸಿ ಬಲದಿಂದ ಎಡಕ್ಕೆ ಓದಿಕೊಂಡರೆ ೩.೧೪೧೫೯೨೬೫೩೫೮೯೭೯೩೨೪ ಆಗುತ್ತದೆ, ಮತ್ತು ಅದು ೧೭ ದಶಾಂಶ ಸ್ಥಾನಗಳಿಗೆ ಸರಿಯಾಗಿ ಪೈಯ ಬೆಲೆ ಆಗುತ್ತದೆ!

‘ಅನೂನನೂನ್ನಾನನನುನ್ನನಿತ್ಯೈ| ಸ್ಸಮಾಹತಾಶ್ಚಕ್ರಕಲಾವಿಭಕ್ತಾಃ| ಚಂಡಾಂಶುಚಂದ್ರಾಧಮ ಕುಂಭಿಪಾಲೈರ್| ವ್ಯಾಸಸ್ತದರ್ಧಂ ತ್ರಿಭಮೌರ್ವಿಕಸ್ಯಾತ್||’ ಅಂತ ಕರಣಪದ್ಧತಿ ಗ್ರಂಥದ್ದೊಂದು ಶ್ಲೋಕ. ಅನೂನ ನೂನ್ನಾನನನುನ್ನನಿತ್ಯೈಃ (೧೦,೦೦,೦೦,೦೦,೦೦೦) ವ್ಯಾಸವಿರುವ ವೃತ್ತದ ಸುತ್ತಳತೆಯು ಚಂಡಾಂಶು ಚಂದ್ರಾಧಮ ಕುಂಭಿಪಾಲೈರ್ (೩೧,೪೧,೫೯, ೨೬,೫೩೬) ನಷ್ಟಿರುತ್ತದೆ ಎಂದು ಇದು ತಿಳಿಸುತ್ತದೆ. ಅಂದರೆ ಪೈಯ ಬೆಲೆಯನ್ನು ೧೦ ದಶಾಂಶ ಸ್ಥಾನಗಳಿಗೆ ಸರಿಯಾಗಿ ಅಂದಾಜಿಸುತ್ತದೆ. ಇನ್ನೂ ಒಂದು ಪ್ರಖ್ಯಾತ ಶ್ಲೋಕ ಕೃಷ್ಣಸ್ತುತಿಯಂತೆ ಕಾಣುವುದು  ‘ಗೋಪೀ ಭಾಗ್ಯಮಧುವ್ರಾತ ಶೃಂಗಿಶೋದಽಸಂಽಗ| ಖಲಜೀವಿತಖಾತಾವ ಗಲಹಾಲಾರ ಸಂಧರ||’ ಅಂದರೆ ‘ಗೋಪಿಯರ ಸಮೂಹಕ್ಕೆ ಸಿಹಿಯನ್ನೊದಗಿ
ಸುವವನೇ, ಪರ್ವತ ದಿಂದ ಸಮುದ್ರದವರೆಗೂ ವ್ಯಾಪಿಸಿರುವ ವನೇ, ದುಷ್ಟಜೀವಿಗಳನ್ನು ಸಂಹರಿಸುವವನೇ, ದಯ ಮಾಡಿ ನನ್ನನ್ನು ರಕ್ಷಿಸು’.

ಇದರ ಅಕ್ಷರಗಳಿಗೆ ಕಟಪಯ ಅಂಕಿಗಳನ್ನು ಲಗತ್ತಿಸಿದರೆ ೩.೧೪೧೫೯೨೬೫೩೫೮೯೭೯೩೨೩೮೪೬೨೬೪೩೩೮೩೨೭೯೨. ಮೂವತ್ತು ದಶಾಂಶ ಸ್ಥಾನ ಗಳಷ್ಟು ನಿಖರವಾದ ಪೈ ಬೆಲೆ! ಇಲ್ಲಿ ಕಟಪಯ ಸೂತ್ರವನ್ನು ಬಳಸಿರುವುದು ಹೌದಾದರೂ ಸಾಮಾನ್ಯವಾಗಿ ಅಂಕಿಗಳ ಜೋಡಣೆ ಬಲದಿಂದ ಎಡಕ್ಕೆ ಇರುತ್ತದೆ. ಇಲ್ಲಿ ಅನುಕೂಲಕ್ಕಾಗಿ ಶ್ಲೋಕದ ಒಂದೊಂದೇ ಅಕ್ಷರ ಮುಂದುವರಿದಂತೆಲ್ಲ ಎಡದಿಂದ ಬಲಕ್ಕೆ ಅಂಕಿಗಳ ಜೋಡಣೆ ಯಾಗಿದೆ.
ಶ್ಲೋಕದಲ್ಲಿ ೩೨ ಅಕ್ಷರಗಳು (ಅನುಷ್ಟುಪ್ ಛಂದಸ್ಸು) ಇವೆ.

ಮೊದಲ ಅಕ್ಷರ ಪೈ ಬೆಲೆಯ ಪೂರ್ಣಾಂಕಕ್ಕೆ ಬಳಕೆಯಾಗಿದೆ. ಆಮೇಲಿನ ೩೧ ಅಕ್ಷರಗಳು ದಶಾಂಶ ಸ್ಥಾನಗಳಿಗೆ. ಆದರೆ ೩೦ ಸ್ಥಾನಗಳವರೆಗೆ ಮಾತ್ರ ಇದು ಪೈ ಬೆಲೆಯೊಂದಿಗೆ ತಾಳೆಯಾಗುತ್ತದೆ. ಕೊನೆಯ ಅಕ್ಷರವು ‘ರ’ (ಬೆಲೆ ೨) ಇದೆ, ಆದರೆ ಪೈ ಬೆಲೆಯಲ್ಲಿ ಆ ಸ್ಥಾನದ ಅಂಕಿ ೫ ಆಗಿರುತ್ತದೆ. ಇವೆಲ್ಲದಕ್ಕೂ ಮುಕುಟಪ್ರಾಯವಾದುದೆಂದರೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ೭೨ ಮೇಳಕರ್ತ ರಾಗಗಳ ಸಂರಚನೆ ಮತ್ತು ಅದಕ್ಕೆ ತಕ್ಕಂತೆ ಅವುಗಳ ನಾಮ ಕರಣ. ಬಹುಶಃ ಕಟಪಯ ಸೂತ್ರದ ಅತ್ಯಂತ ಸಮರ್ಥ ರೀತಿಯ ಬಳಕೆಯಾಗಿರುವುದು ಇದರಲ್ಲಿಯೇ. ಸಂಗೀತದಲ್ಲಿ ಇಷ್ಟೊಂದು ಕ್ರಮಬದ್ಧವಾಗಿ
ಗಣಿತವು ತಳುಕು ಹಾಕಿಕೊಂಡಿರುವ ಪರಿ ನಿಜಕ್ಕೂ ಬೆರಗುಗೊಳಿಸು ವಂಥದು. ಈಗ ಅದರ ಬಗೆಗೊಂದಿಷ್ಟು ನೋಡೋಣ: ಏಳು ಸ್ವರವು ಸೇರಿ ಸಂಗೀತ ವಾಯಿತು ಎಂದು ನಾವೆಲ್ಲ ಬಲ್ಲೆವು.

ಸ(ಷಡ್ಜ), ರಿ(ಋಷಭ), ಗ(ಗಾಂಧಾರ), ಮ(ಮಧ್ಯಮ), ಪ(ಪಂಚಮ), ಧ(ಧೈವತ) ಮತ್ತು ನಿ(ನಿಷಾದ) ಇವೇ ಆ ಏಳು ಸ್ವರಗಳು ಎಂದು ಕೂಡ ಬಲ್ಲೆವು. ಅದಕ್ಕಿಂತ ಹೆಚ್ಚಿನ ಅರಿವು ಬಹುಶಃ ಸಂಗೀತ ಕಲಿತವರಿಗೆ ಮತ್ತು ಕಲಿಯುತ್ತಿರುವವರಿಗೆ ಮಾತ್ರ ಇರುತ್ತದೆ, ನನ್ನಂಥವರಿಗಲ್ಲ. ಆದರೂ ಈ ಲೇಖನದ ಮಟ್ಟಿಗೆ ಇನ್ನೂ ಸ್ವಲ್ಪ ತಿಳಿದುಕೊಳ್ಳುವುದಾದರೆ, ೧೨ ಸ್ವರಸ್ಥಾನಗಳು ಸೇರಿ ಒಂದು ‘ಸ್ಥಾಯಿ’ ಆಗುತ್ತದಂತೆ. ಈ ೧೨ ಸ್ವರಸ್ಥಾನಗಳು ಏಳು ಸ್ವರಗಳ ಮತ್ತು ಅವುಗಳ ರೂಪಾಂತರದಿಂದ ಆಗಿರುತ್ತವೆ.

ಪಟ್ಟಿ ಮಾಡಿದರೆ ಅವು ಕ್ರಮವಾಗಿ ಷಡ್ಜ(ಸ), ಶುದ್ಧ ಋಷಭ(ರಿ೧), ಚತುಶ್ರುತಿ ಋಷಭ(ರಿ೨) ಅಥವಾ ಶುದ್ಧ ಗಾಂಧಾರ(ಗ೧), ಷಟ್ ಶ್ರುತಿ ಋಷಭ(ರಿ೩) ಅಥವಾ ಸಾಧಾರಣ ಗಾಂಧಾರ(ಗ೨), ಅಂತರ ಗಾಂಧಾರ(ಗ೩), ಶುದ್ಧ ಮಧ್ಯಮ(ಮ೧), ಪ್ರತಿ ಮಧ್ಯಮ (ಮ೨), ಪಂಚಮ(ಪ), ಶುದ್ಧ ಧೈವತ(ಧ೧),
ಚತುಶ್ರುತಿ ಧೈವತ(ಧ೨) ಅಥವಾ ಶುದ್ಧ ನಿಷಾದ(ನಿ೧), ಷಟ್ ಶ್ರುತಿ ಧೈವತ(ಧ೩) ಅಥವಾ ಕೈಷಿಕ ನಿಷಾದ(ನಿ೨), ಮತ್ತು ಕಾಕಲಿ ನಿಷಾದ(ನಿ೩). ಇವು ನಿರ್ದಿಷ್ಟ ಕ್ರಮದಲ್ಲಿ ಹೊಂದಿಕೊಂಡು ಒಂದು ರಾಗದ ರಚನೆಯಾಗುತ್ತದೆ. ಮೇಳಕರ್ತ ರಾಗವೆನಿಸಿಕೊಳ್ಳಬೇಕಾದರೆ ಸ್ಥಾಯಿಯಲ್ಲಿನ ಏಳೂ ಸ್ವರಗಳು ಒಂದಾವರ್ತಿ ಬರಬೇಕು. ಸ್ವರಸ್ಥಾನಗಳು ಆರೋಹಣ ಕ್ರಮದಲ್ಲಿ ಇರಬೇಕು, ಅಡ್ಡಾದಿಡ್ಡಿಯಾಗಿರಕೂಡದು.

ಉದಾಹರಣೆಗೆ ಸ, ರಿ೩, ಗ೧… ಎಂದು ಇರುವಂತಿಲ್ಲ. ಏಕೆಂದರೆ ರಿ೩ ಸ್ವರಸ್ಥಾನವು ಗ೧ಕ್ಕಿಂತ ದೊಡ್ಡದು. ಆರೋಹಣದಂತೆಯೇ ಅವರೋಹಣ, ಅದೇ ಸ್ವರಸ್ಥಾನಗಳು ರಿವರ್ಸ್ ಆರ್ಡರ್‌ನಲ್ಲಿ. ಇವೆಲ್ಲ ನಿಯಮಗಳನ್ನು ಗಮನಿಸಿದಾಗ ಕಂಡುಬರುವ ಅಂಶಗಳೆಂದರೆ- ಸ ಮತ್ತು ಪ ಸ್ವರಗಳು ಯಾವಾಗಲೂ ಸ್ಥಿರವಾಗಿ ಇರುತ್ತವೆ. ರಿ ಮತ್ತು ಗ, ಹಾಗೆಯೇ ಧ ಮತ್ತು ನಿ ಸ್ವರಯುಗ್ಮಗಳ ತಲಾ ಆರು ಸಂಯೋಜನೆಗಳು ಸಾಧ್ಯ. ‘ಮ’ ಸ್ವರದ ಎರಡು ರೂಪಗಳು ಸಾಧ್ಯ. ಹಾಗಾಗಿಯೇ ಒಟ್ಟು ಆರು ಗುಣಿಸು ಆರು ಗುಣಿಸು ಎರಡು = ಎಪ್ಪತ್ತೆರಡು ವಿಧಗಳು. ಈ ೭೨ ರಾಗಗಳನ್ನು ಅವುಗಳ ಸ್ವರಸ್ಥಾನ ಸಂರಚನೆಯ ಆಧಾರ ದಲ್ಲಿ ಪಟ್ಟಿ ಮಾಡಿದರೆ, ಆ ಪಟ್ಟಿಯಲ್ಲಿ ಯಾವುದೇ ರಾಗದ ಕ್ರಮ ಸಂಖ್ಯೆಯಿಂದಲೇ ಅದರ ಸ್ವರಪ್ರಸ್ತಾರವನ್ನು ಕಂಡು ಕೊಳ್ಳಬಹುದಂತೆ. ಆ ಕ್ರಮ ಸಂಖ್ಯೆಗೆ ಸರಿಯಾಗಿ ರಾಗದ ಹೆಸರು ಸಹ ಇದ್ದರೆ ನೆನಪಿಡಲಿಕ್ಕೆ ಮತ್ತೂ ಸುಲಭ!

ಹದಿನೆಂಟನೆಯ ಶತಮಾನದಲ್ಲಿ ಬಾಳಿದ್ದ ಸಂಗೀತಜ್ಞ ವೆಂಕಟ ಮಖಿ (ಮೂಲತಃ ಕನ್ನಡಿಗರು, ಆದರೆ ಬಹುಕಾಲ ತಂಜಾವೂರಿನಲ್ಲಿ ನೆಲೆಸಿದ್ದವರು) ಅದನ್ನೇ ಮಾಡಿದರು. ಅವರು ೭೨ ಮೇಳಕರ್ತ ರಾಗಗಳ ಕ್ರಮಸಂಖ್ಯೆಗೆ ಅನುಸಾರವಾಗಿ ಅವುಗಳಿಗೆ ಹೆಸರುಗಳ ನ್ನಿಟ್ಟರು; ಹಾಗೆ ಮಾಡುವಾಗ ಕಟಪಯ ಸೂತ್ರವನ್ನು ಬಳಸಿ ಕೊಂಡರು. ಕೆಲವು ರಾಗಗಳಿಗೆ ಚಾಲ್ತಿಯಲ್ಲಿ ಬೇರೆ ಹೆಸರಿದ್ದರೂ ಅದನ್ನು ಕೊಂಚವೇ ಬದಲಾಯಿಸಿ ಕಟಪಯ ಸೂತ್ರ ಪಾಲಿಸು ವಂತೆ ಮಾಡಿದರು.

‘ಕಲ್ಯಾಣಿ’ ರಾಗದ ಹೆಸರು ‘ಮೇಚ ಕಲ್ಯಾಣಿ’ ಅಂತಲೂ, ‘ಶಂಕರಾಭರಣ’ ರಾಗದ ಹೆಸರು ‘ಧೀರ ಶಂಕರಾಭರಣ’ ಅಂತಲೂ, ‘ಮಾಳವಗೌಳ’ದ ಹೆಸರು ‘ಮಾಯಾ ಮಾಳವಗೌಳ’ ಅಂತಲೂ ಆದದ್ದು ಅದೇ ಕಾರಣಕ್ಕೆ. ರಾಗಗಳ ನಾಮಕರಣ ಈ ರೀತಿ ಇದ್ದಾಗ, ಅವುಗಳ ಹೆಸರಿನ ಮೊದಲ ಎರಡು ಅಕ್ಷರ ಗಳನ್ನು ತೆಗೆದುಕೊಂಡು ಕಟಪಯ ಸೂತ್ರದಂತೆ ಅದರ ಸಂಖ್ಯೆಯನ್ನು ಕಂಡುಕೊಳ್ಳಬೇಕು. ೭೨ರ ಪಟ್ಟಿಯಲ್ಲಿ ಅದು ಆ ರಾಗದ ಕ್ರಮಸಂಖ್ಯೆ ಯಾಗುತ್ತದೆ. ಉದಾಹರಣೆಗೆ ‘ಷಣ್ಮುಖ ಪ್ರಿಯ’ ಅಂತ ಒಂದು ರಾಗದ ಹೆಸರು. ಷ = ೬; ಮ = ೫; ಇವೆರಡನ್ನೂ ಜೋಡಿಸಿ ರಿವರ್ಸ್ ಆರ್ಡರ್‌ನಲ್ಲಿ ಬರೆದಾಗ ೫೬. ಷಣ್ಮುಖಪ್ರಿಯ ರಾಗದ ಕ್ರಮಸಂಖ್ಯೆ ೫೬. ಅದೇರೀತಿ, ‘ಖರಹರಪ್ರಿಯ’ ರಾಗ (ಬಬ್ರುವಾಹನ ಚಿತ್ರದ ‘ಆರಾಧಿಸುವೆ ಮದನಾರಿ…’ ಚಿತ್ರಗೀತೆ ಇದೇ ರಾಗವನ್ನಾಧರಿಸಿದ್ದಂತೆ). ಖ = ೨; ರ = ೨; ಇವೆರಡನ್ನೂ ಜೋಡಿಸಿ ರಿವರ್ಸ್ ಆರ್ಡರ್‌ನಲ್ಲಿ ಬರೆದಾಗ ೨೨. ಖರಹರಪ್ರಿಯ ರಾಗದ ಕ್ರಮಸಂಖ್ಯೆ ೨೨. ಅಂತೆಯೇ ಕೀರವಾಣಿ ೨೧ನೆಯದು. ಶುಭ ಪಂತುವರಾಳಿ ೪೫ನೆಯದು.

ಬರೀ ಕ್ರಮಸಂಖ್ಯೆ ಕಂಡುಕೊಳ್ಳುವುದಕ್ಕಷ್ಟೇ ಅಲ್ಲ ಈ ಲೆಕ್ಕಾಚಾರ. ಮತ್ತೆ ಆ ಕ್ರಮಸಂಖ್ಯೆಯನ್ನು ಸಂಕಲನ ವ್ಯವಕಲನ ಭಾಗಾಕಾರ ಇತ್ಯಾದಿ
ಗಣಿತಕ್ರಿಯೆಗೆ ಒಳಪಡಿಸಿ ಮೇಳಕರ್ತ ರಾಗದಲ್ಲಿನ ಸ್ವರಸ್ಥಾನಗಳ ಸಂರಚನೆಯನ್ನು ಕಂಡುಕೊಳ್ಳುವುದಕ್ಕೂ ಆಗು ತ್ತದೆ. ಅದಕ್ಕೆ ಪಕ್ಕಾ ಕಂಪ್ಯೂಟರ್ ಆಲ್ಗೋರಿ ದಂನಂತೆ ನಿರ್ದಿಷ್ಟವಾದೊಂದು ರೀತಿಯೂ ಇದೆ. ಆದರೆ ಶಾಸ್ತ್ರೀಯ ಸಂಗೀತದ ಸರಿಗಮ ಅರಿಯದ ನನ್ನಂಥ ಪಾಮರರು ಅದನ್ನು ಇಲ್ಲಿ ವಿವರಿಸಲಿಕ್ಕೆ ಹೋದರೆ ಹಾಸ್ಯಾಸ್ಪದವಾಗುತ್ತದೆ ಮತ್ತು ಅದು ಈ ಲೇಖನದ ವ್ಯಾಪ್ತಿಯನ್ನು ಮೀರುತ್ತದೆ. ಆದ್ದರಿಂದ ನಾನದಕ್ಕೆ ಕೈಹಾಕುತ್ತಿಲ್ಲ.

ಅದು ಬಿಡಿ, ಈ ಇಷ್ಟು ಮಾಹಿತಿಯನ್ನೇ ನಾನು ಯಥಾಪ್ರಕಾರ ‘ಮಧುಕರ ವೃತ್ತಿ ಎನ್ನದು…’ ಎಂಬಂತೆ ಬೇರೆಬೇರೆ ಆಕರಗಳಿಂದ ಮಾಹಿತಿ ಸಂಗ್ರಹಿಸಿ ಇಲ್ಲಿ ಪ್ರಸ್ತುತಪಡಿಸಿದ್ದು. ಓದಿದ ಮೇಲೆ ನೀವು ನಿಬ್ಬೆರಗಾಗಿದ್ದರೆ ಅದರ ಶ್ರೇಯ ಖಂಡಿತ ನನಗಲ್ಲ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಮೃದ್ಧವಾಗಿ ರುವ ಇಂಥ ಶ್ರೀಮಂತ ವಿಚಾರಗಳನ್ನು, ಸ್ವಾರಸ್ಯಗಳನ್ನು ಮನಸಾರೆ ಆಸ್ವಾದಿಸಬೇಕು. ಸ್ವಲ್ಪ ಜಟಿಲವಾದರೂ ಸರಿ, ಇಂಥವನ್ನು ನಾವೆಲ್ಲ ಅರಿತಿರಬೇಕು ಎಂಬುದಷ್ಟೇ ನನ್ನ ನಿಲುವು. ಆದ್ದರಿಂದಲೇ ಈ ರೀತಿಯ ವಿಸ್ಮಯಗಳನ್ನು ಕಂಡುಕೊಂಡಾಗೆಲ್ಲ ನನಗೆ ರೋಮಾಂಚನ ವಾಗುತ್ತದೆ. ‘ಎಂದರೋ ಮಹಾನುಭಾವುಲು ಅಂದರಿಕಿ ವಂದನಮು’ ಎಂದು ಮನಸ್ಸು ತನ್ನಿಂತಾನೇ ಆ ಮಹಾನುಭಾವ ರನ್ನೆಲ್ಲ ವಂದಿಸುತ್ತದೆ. ಅದೆಷ್ಟು ಮೇಧಾವಿಗಳು, ಕುಶಾಗ್ರಮತಿಗಳು ಭಾರತಾಂಬೆಯ ಮಡಿಲಲ್ಲಿ ಬೆಳೆದು ಈ ಬುವಿಯನ್ನು ಬೆಳಗಿದ್ದಾರೆ ಎಂದು ಎಣಿಸಿದರೆ ಹೆಮ್ಮೆಯೆನಿಸುತ್ತದೆ.