Saturday, 5th October 2024

ಸುಖಮೀವ ಸುರಾಪಾನಮಿದೇ ಸ್ವರ್ಗ ಸಮಾನಂ !

ಹಿಂತಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

naasomeswara@gmail.com

ಅಲ್ಕೋಹಾಲ್, ಮನುಕುಲದ ಅತ್ಯಂತ ಪ್ರಾಚೀನವಾದ ಹಾಗೂ ವಿಶ್ವದಾದ್ಯಂತ ಇಂದಿಗೂ ಯಥೇಚ್ಛವಾಗಿ ಬಳಕೆಯಾಗುತ್ತಿರುವ ಔಷಧ. ಅಲ್ಕೋಹಾಲ್ ಎನ್ನುವ ಶಬ್ದವು ಅರೆಬಿಕ್ ಭಾಷೆಯ ಅಲ್ -ಕುಹುಲ್ ಅಥವ ಅಲ್ ಕೋಹ್ಲ್ ಎನ್ನುವ ಶಬ್ದದಿಂದ ರೂಪುಗೊಂಡಿದೆ. ಅರಾಬಿಕ್ ಉಚ್ಚಾರಣೆಯ ಅನ್ವಯ ಇದು ಅಲ್ಕೋಹಾಲ್ ಎಂದಾಗಿದ್ದರೂ ಸಹ, ಜನಸಾಮಾನ್ಯರಲ್ಲಿ ಆಲ್ಕೋಹಾಲ್ ಎಂದೇ ಪರಿಚಿತವಾಗಿದೆ.

ಕನ್ನಡದಲ್ಲಿ ಆಲ್ಕೋಹಾಲ್ ಎನ್ನುವ ಪದಕ್ಕೆ ನಿಖರ ಸಮಪದವಿಲ್ಲ. ವಿವಿಧ ಮದ್ಯಗಳಲ್ಲಿ ಪ್ರಧಾನ ವಸ್ತುವಾಗಿ ರುವ ಆಲ್ಕೋಹಾಲನ್ನು ಮದ್ಯ ಪಾನೀಯಗಳ ಸಾರ ಎನ್ನುವ ಅರ್ಥದಲ್ಲಿ ಮದ್ಯಸಾರ ಎಂದು ಕರೆದರು. ಆಲ್ಕೋಹಾಲ್ ಎಂದೇ ಕನ್ನಡದಲ್ಲಿ ಕರೆಯುವ ಪ್ರಯತ್ನಗಳೂ ನಡೆದಿವೆ. ನಮ್ಮ ಪೂರ್ವಜರು ಮದ್ಯಸಾರವನ್ನು ತಯಾರಿಸುವ ಕಲೆಯನ್ನು ಹೇಗೆ ಕಲಿತರು ಎನ್ನುವುದು ಇಂದಿಗೂ ನಮಗೆ ನಿಖರವಾಗಿ ತಿಳಿಯದ ವಿಷಯ. ಬಹುಶಃ ಪ್ರಾಣಿಗಳನ್ನು ನೋಡಿಯೇ ಕಲಿತಿದ್ದಿರಬಹುದು. ಮರದ ಹಣ್ಣುಗಳು ನೀರಿನಲ್ಲಿ ಬಿದ್ದಾಗ ಕೊಳೆಯುತ್ತವೆ.

ಹಣ್ಣುಗಳ ಸಿಹಿಗೆ ಕಾರಣವಾಗಿರುವ ಗ್ಲೂಕೋಸ್, ಫುಕ್ಟೋಸ್ ಮುಂತಾದ ರಾಸಾಯನಿಕಗಳನ್ನು, ಗಿಡಮರ ಗಳಲ್ಲಿ ನೈಜವಾಗಿ ವಾಸಿಸುವ ಯೀಸ್ಟ್ ಎನ್ನುವ ಶಿಲೀಂಧ್ರವು ಹುಳಿಯಿಸಿದಾಗ (ಫರ್ಮೇಂಟೇಶನ್), ಆಲ್ಕೋ ಹಾಲ್ ರೂಪುಗೊಳ್ಳುತ್ತದೆ. ಇದರ ವಿಶಿಷ್ಟ ವಾಸನೆಗೆ ಆನೆಯಂತಹ ಪ್ರಾಣಿಗಳು ಆಕರ್ಷಿತವಾಗಿರ ಬಹುದು. (ಆಫ್ರಿಕದಲ್ಲಿ ಸ್ಕ್ಲೀರೋಕಾರ್ಯ ಬಿರಿಯ ಎನ್ನುವ ಮರವಿದೆ. ಇದಕ್ಕೆ ಸ್ಥಳೀಯವಾಗಿ ಅಮರುಳ ಅಥವ ಮರುಳ ಎಂಬ ಹೆಸರಿದೆ. ಈ ಮರದ ಹಣ್ಣುಗಳಲ್ಲಿ ಸುಮಾರು ಶೇ.15 ಆಲ್ಕೋಹಾಲ್ ಸಹಜವಾಗಿರುತ್ತದೆ. ಈ ಹಣ್ಣುಗಳನ್ನು ಆಫ್ರಿಕದ ಆನೆಗಳು, ಮಂಗಗಳು, ಹೇಸರುಗತ್ತೆಗಳು ಹಾಗೂ ಇತರ ಸಸ್ಯಾಹಾರಿ ಪ್ರಾಣಿಗಳು ತಿಂದು ತೂರಾಡುತ್ತವೆ. ಈಗ ಮರುಳ ಪಾನೀಯವು ಜನಪ್ರಿಯವಾಗಿವೆ.

ಕರ್ನಾಟಕವನ್ನು ಒಳಗೊಂಡಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಮಧುಕಾ ಲಾಂಜಿಫೋಲಿಯ ಎನ್ನುವ ವೈಜ್ಞಾನಿಕ ನಾಮಧೇಯವನ್ನು ಪಡೆದ ಹಿಪ್ಪೇಮರವು
ಅಪಾರವಾಗಿ ಬೆಳೆಯುತ್ತದೆ. ಹಿಪ್ಪೆಮರದ ಹೂವಿನಲ್ಲಿ ಮಕರಂದವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ನಮ್ಮ ಭಾರತದ ವಿವಿಧ ಬುಡಕಟ್ಟಿನ ಜನರು ಈ ಹೂವನ್ನು ಬಳಸಿ ಮದ್ಯವನ್ನು ತಯಾರಿಸುತ್ತಾರೆ. ಮಹಾನಿರ್ವಾಣ ತಂತ್ರಶಾಸ್ತ್ರದಲ್ಲಿ, ಹಿಪ್ಪೇಹೂವಿನ ಮದ್ಯವನ್ನು ಕುಡಿದು ನರ್ತಿಸುವ ಮಹಾಕಾಲನನ್ನು ಪ್ರೀತಿಯಿಂದ ನೋಡುವ ಕಾಳಿಯ ವರ್ಣನೆಯು ದೊರೆಯುತ್ತದೆ.

ಹಿಪ್ಪೆಹೂವುಗಳನ್ನು ಒಣಗಿಸಿ ಹಿಟ್ಟನ್ನು ಮಾಡಿ ರೊಟ್ಟಿಯನ್ನು ತಯಾರಿಸುವಂತೆ ಜಾಮ್ ಸಹಾ ತಯಾರಿಸುವರು) ಆ ಕೊಳೆತ ಹಣ್ಣುಗಳ ದ್ರವವನ್ನು ಕುಡಿದು ಮತ್ತಿನಿಂದ ತೂರಾಡುವುದನ್ನು ನಮ್ಮ ಪೂರ್ವಜರು ಗಮನಿಸಿರಬೇಕು. ಅದರ ಅನುಕರಣೆಯನ್ನು ತಾವೂ ಮಾಡಿರಬೇಕು. ತಮ್ಮ ಗುಹೆಯಲ್ಲಿ ಹಣ್ಣುಗಳನ್ನು
ಹುಳಿಯಿಳಿಸಿ ಮದ್ಯಸಾರವನ್ನು ತಯಾರಿಸಿ ತಾವೂ ಕುಡಿದಿರಬೇಕು. ತಮ್ಮವರಿಗೂ ಕುಡಿಸಿರಬೇಕು. ಆನಂದದಲ್ಲಿ ತೇಲಾಡಿರಬೇಕು. ಮುಂದಿನ ದಿನಗಳಲ್ಲಿ ಹಣ್ಣುಗಳ ಬದಲು ಅಕ್ಕಿ, ಬಾರ್ಲಿ, ಗೋಧಿ ಮುಂತಾದ ಧಾನ್ಯಗಳನ್ನು ಹುಳಿಯಿಸಿ ಮದ್ಯವನ್ನು ತಯಾರಿಸುವ ಪ್ರಯತ್ನಗಳು ನಡೆದವು.

ಹುಳಿಯುತ್ತಿರುವ ದ್ರಾವಣದಲ್ಲಿ ಅಲ್ಕೋಹಾಲ್ ಪ್ರಮಾಣವು ಶೇ.15 ತಲುಪುತ್ತಿರುವಂತೆಯೇ, ಹುಳಿಯಿಸುತ್ತಿರುವ ಯೀಸ್ಟ್ ಜೀವಿಯು ಸತ್ತುಹೋಗುತ್ತದೆ. ಹಾಗಾಗಿ ನೈಜವಾಗಿ ಶೇ.೧೫ಗಿಂತಲೂ ಶಕ್ತಿಶಾಲಿಯಾದ ಮದ್ಯವನ್ನು ತಯಾರಿಸುವುದು ಅಸಾಧ್ಯ. ಆದರೆ ನಮ್ಮ ಪೂರ್ವಜರು ಮಹಾನ್ ಬುದ್ಧಿವಂತರಲ್ಲವೆ! ಮದ್ಯವನ್ನು ಬಟ್ಟಿಯಿಳಿಸುವುದರ (ಡಿಸ್ಟಿಲೇಶನ್) ಮೂಲಕ ಅದರಲ್ಲಿರುವ ಮದ್ಯ ಸಾರದ ಬಲವರ್ಧನೆಯನ್ನು ಮಾಡಬಹುದೆಂದು ಕಂಡುಕೊಂಡರು. ಆ ಕ್ಷಣವೇ ಮದ್ಯ ತಯಾರಿಕೆಯು ಒಂದು ಕಲೆಯಾಗಿ, ವಿಜ್ಞಾನವಾಗಿ ಬೆಳೆದು, ಇಂದು ಬೃಹತ್ ಉದ್ಯಮವಾಗಿದೆ.

ರಾಕ್ಷಸ ಸ್ವರೂಪದಲ್ಲಿ ಆಲ್ಕೋಹಾಲ್, ಮನುಕುಲವನ್ನು ಬೆಳಗುತ್ತಿದೆ ಹಾಗೂ ನಲುಗಿಸುತ್ತಿದೆ. ಇಂದಿನ ಇಸ್ರೇಲ್ ದೇಶದ ಹೈ- ಪ್ರದೇಶದ ಗುಹೆಯಲ್ಲಿರುವ ಸಮಾಧಿ ಸ್ಥಳದಲ್ಲಿ ಗೋಧಿ ಮತ್ತು ಬಾರ್ಲಿಯಿಂದ ತಯಾರಾದ ಮದ್ಯವು ದೊರೆತಿದೆ. ಈ ಸಮಾಧಿ ಸ್ಥಳವು ಸುಮಾರು ಕ್ರಿ.ಪೂ.13000 ವರ್ಷಗಳಷ್ಟು ಹಿಂದಿನದು. ಮನುಷ್ಯನು ಮದ್ಯವನ್ನು ತಯಾರಿಸುತ್ತಿದ್ದ ಬಗ್ಗೆ ನಮಗೆ ದೊರೆತ ಅತ್ಯಂತ ಪ್ರಾಚೀನ ದಾಖಲೆಯಿದು.

ಕ್ರಿ.ಪೂ.7000 ವರ್ಷಗಳಷ್ಟು ಹಿಂದಿನ ಚೀನಾ ದೇಶದ ಹೆನಾನ್ ಪ್ರಾಂತದ ಜಿಯಾಹು ಎನ್ನುವ ಹಳ್ಳಿಯಲ್ಲಿ ನಡೆದ ಉತ್ಖನನದಲ್ಲಿ ಮದ್ಯವು ದೊರೆತಿದೆ. ಇದನ್ನು ತಯಾರಿಸಲು ಅಕ್ಕಿ, ಜೇನು ಮತ್ತು ದ್ರಾಕ್ಷಿಯನ್ನು ಬಳಸಿರುವರಂತೆ. ಕ್ರಿ.ಶ.6000ದ ಹೊತ್ತಿಗೆ ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಯ ದಡದಲ್ಲಿ ಬೆಳೆದ
ಮೆಸೊಪೊಟೋಮಿಯನ್ ಸಂಸ್ಕೃತಿಗೆ, ನೈಲ್ ನದಿಯ ದಡದಲ್ಲಿ ಅರಳಿದ ಇಜಿಪ್ಷಿಯನ್ ಸಂಸ್ಕೃತಿಗೆ ಹಾಗೂ ಸಿಂಧು-ಸರಸ್ವತಿ ನದಿಗಳ ದಂಡೆಗಳಲ್ಲಿ ಬೆಳೆದ ಸಿಂಧು-ಸರಸ್ವತಿ ಸಂಸ್ಕೃತಿಯ ಜನರಿಗೆ ಮದ್ಯವನ್ನು ತಯಾರಿಸುವ ಕಲೆಯು ಕರಗತವಾಯಿತು.

ಹರಪ್ಪ ಪ್ರದೇಶದಲ್ಲಿದ್ದ (ಕ್ರಿ.ಪೂ.3200-ಕ್ರಿ.ಪೂ.1200) ಜನರು ಮದ್ಯವನ್ನು ತಯಾರಿಸುವುದರ ಜತೆಯಲ್ಲಿ ಮದ್ಯವನ್ನು ಬಟ್ಟಿಯಿಳಿಸಿ ಮದ್ಯಸಾರವನ್ನು
ಸಾಂದ್ರೀಕರಿಸುವ ಕಲೆಯನ್ನು ಕಲಿತಿದ್ದರು ಎನ್ನುವುದಕ್ಕೆ ಪುರಾವೆಯಾಗಿ ಬಟ್ಟಿಯಿಳಿಸುವ ಉಪಕರಣಗಳು ದೊರೆತಿವೆ. ಋಗ್ವೇದದಲ್ಲಿ ಸೋಮರಸದ ತಯಾರಿಕೆ, ಸೇವನೆ ಹಾಗೂ ಪರಿಣಾಮವನ್ನು ವಿವರಿಸುವ ಸುಮಾರು 120 ಮಂತ್ರಗಳಿವೆ.

ಸೋಮವು ಒಂದು ಬಳ್ಳಿ. ಪರ್ವತ ಪ್ರದೇಶಗಳಲ್ಲಿ ಬೆಳೆಯುವಂತಹದ್ದು. ವೇದಕಾಲದ ಸೋಮ ಹಾಗೂ ಜ಼ೆಂಡಾ ಅವೆಸ್ತಾದಲ್ಲಿ ವರ್ಣಿತವಾಗಿರುವ ಹೋಮಗಳೂ ಸಹ ಬಹುಶಃ ಒಂದೇ ಆಗಿರಬೇಕು. ಋಗ್ವೇದದ RV.IX.68.4, RVX27.2, RVVIII ೪೮:೩ ಮಂತ್ರಗಳು ಬಾರ್ಲಿ ಹಿಟ್ಟಿನ ಜತೆಯಲ್ಲಿ ಮಂದವಾದ ಸೋಮರಸ ವನ್ನು ಬೆರೆಸುವ ಬಗ್ಗೆ, ಹದಿನೈದನೆಯ ದಿನದಂದು ಮಹಾಶಕ್ತಿಶಾಲಿಯಾದ ಸೋಮರಸವು ರೂಪುಗೊಳ್ಳುವ ಬಗ್ಗೆ, ಸೋಮರಸವನ್ನು ಕುಡಿದು ಅಮರರಾಗುವ ಬಗ್ಗೆ ವಿವರಣೆಗಳು ದೊರೆಯುತ್ತವೆ.

ಋಗ್ವೇದದ 9ನೆಯ ಮಂಡಲವು ಸೋಮಮಂಡಲ ಎಂದೇ ಹೆಸರಾಗಿದೆ. ಬಹುಶಃ ಸೋಮರಸವೇ ನಮ್ಮ ದೇಶದ ಪ್ರಥಮ ಮದ್ಯಪಾನವಾಗಿರಬೇಕು. (ಸೋಮರಸದಲ್ಲಿ ಮದ್ಯಸಾರ ಇರಲಾರದು ಎಂದೂ ವಾದಿಸಬಹುದು. ಮದ್ಯಸಾರವು ಇಲ್ಲ ಎನ್ನುವುದಾದರೆ ಮನಸ್ಸನ್ನು ಪ್ರಶಾಂತವಾಗಿಸುವ, ನೆಮ್ಮದಿ
ಹಾಗೂ ಸುಖವನ್ನು ನೀಡುವ ಇತರ ರಾಸಾಯನಿಕ ವಿರಬಹುದು. ಸೋಮರಸವು ಇಂಕಾ ಸಂಸ್ಕೃತಿಯಲ್ಲಿ ಬಳಸುವ ಜನಪ್ರಿಯ ಪಾನೀಯ ಅಯಾಹೌಸ್ಕವನ್ನು
ಹೋಲುತ್ತದೆ ಎಂದು ಕಾಣುತ್ತದೆ. ಬ್ಯಾನಿಸ್ಟೀರಿಯಾಪ್ಸಿಸ್ ಕ್ಯಾಪಿ ಎನ್ನುವ ಬಳ್ಳಿಯಲ್ಲಿ ಡೈಮೀಥೈಲ್ ಟ್ರಿಪ್ಟಮಿನ್ (ಡಿಎಂಟಿ) ಎನ್ನುವ ರಾಸಾಯನಿಕವಿದ್ದು, ಅದು
ಸೋಮರಸವು ನೀಡುವಂತಹ ಅಲೌಕಿಕ ಆನಂದವನ್ನು ನೀಡುತ್ತದೆ.) ಋಗ್ವೇದದ ಇಂದ್ರನು ಪಾನಪ್ರಿಯ.

ಸುರಾಪಾನವನ್ನು ಮಾಡಿ ಮಾಡಿ ಬೊಜ್ಜನ್ನು ಬೆಳೆಸಿಕೊಂಡಿದ್ದ ಇಂದ್ರನನ್ನು ನೋಡಿ, ನೀನು ಕುಡಿಯುವುದನ್ನು ನಿಲ್ಲಿಸದಿದ್ದರೆ ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಶಚಿಯು ಹೆದರಿಸುವುದನ್ನು ನಾವು ಕಾಣಬಹುದು. ಶುಕ್ಲ ಯಜುರ್ವೇದವು ಸುರಾ ಮತ್ತು ಪರಿಶೃತ್ ಎನ್ನುವ ಎರಡು ಮದ್ಯಗಳ ಬಗ್ಗೆ ಪ್ರಸ್ತಾಪಿಸುತ್ತದೆ. ಕಾತ್ಯಾಯನ ಶ್ರೌತ ಸೂತ್ರವು ಸುರಾ ತಯಾರಿಕೆಯ ಪೂರ್ಣ ಮಾಹಿತಿಯನ್ನು ನೀಡುತ್ತದೆ. ರಾಮಾಯಣ, ಮಹಾಭಾರತ ಮತ್ತು ಗೀತೆಯಲ್ಲೂ ಮದ್ಯದ ಪ್ರಸ್ತಾಪವಿದೆ. ಸಿಂಧು-ಸರಸ್ವತಿ ಸಂಸ್ಕೃತಿಯ ಸುರೆಯು, ಪರ್ಷಿಯ ದೇಶದಲ್ಲಿ ಸಿರಾಹ್ ಅಥವ ಶಿರಾಜ್ ಎನ್ನುವ ಹೆಸರಿನಲ್ಲಿ ಪ್ರಖ್ಯಾತವಾಗಿದೆ. ನಾರ್ಸ್ ಜನಾಂಗ ದವರ ನೆಚ್ಚಿನ ಪಾನೀಯ ಮೀಡ್. ಇದು ಭಾರತೀಯರ ಜೇನಿನಿಂದ ತಯಾರಿಸುವ ಮಧುಪಾನವೇ ಆಗಿದೆ. ಹಿಪ್ಪೇ ಹೂವಿನ ಪಾನೀಯವೇ ಮದಿರಾ ಅಥವ ಮಹುವಾ ಎನ್ನುವ ಹೆಸರಿನಲ್ಲಿ ಮೊಘಲ್ ಸಾಮ್ರಾಜ್ಯದಲ್ಲಿ ಜನಪ್ರಿಯವಾಗಿತ್ತು.

ಮದ್ಯಸಾರವನ್ನು ಬಟ್ಟಿಯಿಳಿಸುವ ತಂತ್ರವನ್ನು ಭಾರತೀಯರು ಕಂಡುಕೊಂಡರೂ, ಅದು ಅರಬ್ಬರ ಮೂಲಕ ಯೂರೋಪನ್ನು ಪ್ರವೇಶಿಸಿತು ಎನ್ನಲಾಗಿದೆ. 12ನೆಯ ಶತಮಾನದ ಯೂರೋಪಿನ ರಸವಾದಿಗಳು (ಆಲ್ಕೆಮಿಸ್ಟ್) ಬಟ್ಟಿಯಿಳಿಸುವ ತಂತ್ರಕ್ಕೆ ಒಂದು ವೈಜ್ಞಾನಿಕ ಆಯಾಮವನ್ನು ನೀಡಿದರು. ವಿವಿಧ ಮದ್ಯಸಾರ ಪ್ರಮಾಣವನ್ನು ಒಳಗೊಂಡ ಬ್ರಾಂಡಿ, ವಿಸ್ಕಿ, ರಮ್, ಜಿನ್, ವೋಡ್ಕ ಮುಂತಾದ ಪೇಯಗಳನ್ನು ಜನಪ್ರಿಯಗೊಳಿಸಿದರು.

ನಮ್ಮ ಪೂರ್ವಜರು ಸೋಮರಸ ಹಾಗೂ ಸುರೆಯನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ಬಳಸುತ್ತಿದ್ದರು ಎನ್ನಲಾಗಿದೆ. ಯಜ್ಞಯಾಗಾದಿಗಳಲ್ಲಿ ಸೋಮರಸ ವನ್ನು ತಯಾರಿಸುವ ವಿಽವಿಧಾನವನ್ನು ನಿಖರಗೊಳಿಸಿದ್ದರು. ಸೋಮರಸವನ್ನು ಪ್ರಧಾನವಾಗಿ ಅಗ್ನಿಷ್ಟೋಮ, ಅತ್ಯಾಗ್ನಿಸ್ಟೋಮ, ಷೋಡಶೀ, ಅತಿರಾತ್ರಾ, ಆಪ್ರೋರ್ಯಾಮ, ವಾಜಪೇಯ ಮುಂತಾದ ಸೋಮಯಾಗಗಳಲ್ಲಿ ಬಳಸುತ್ತಿದ್ದರು. ಚರಕ ಸುಶ್ರುತರ ಕಾಲದಲ್ಲಿ ಗಂಭೀರ ಸ್ವರೂಪದ ಶಸ್ತ್ರಚಿಕಿತ್ಸೆ ಗಳನ್ನು ಮಾಡುವ ಮೊದಲು ರೋಗಿಗೆ ಮದ್ಯಸಾರವನ್ನು ಚೆನ್ನಾಗಿ ಕುಡಿಸುತ್ತಿದ್ದರು.

ಮದ್ಯಸಾರವು ನೋವು ನಿವಾರಕವಾಗಿ ಕೆಲಸವನ್ನು ಮಾಡುತ್ತಿತ್ತು. ಅದಾದ ನಂತರ ಮದ್ಯಸಾರವನ್ನು ಪೂತಿನಾಶಕವಾಗಿ (ಆಂಟಿಸೆಪ್ಟಿಕ್) ಬಳಸಲಾ ರಂಭಿಸಿದರು. ಮದ್ಯಸಾರವನ್ನು ಚರ್ಮದ ಮೇಲೆ ಲೇಪಿಸಿ ಕ್ರಿಮಿರಹಿತವಾಗಿಸಿ, ಶಸ್ತ್ರಚಿಕಿತ್ಸೆಯನ್ನು ನಡೆಸುವ ತಂತ್ರವು ಇಂದಿಗೂ ಅಸ್ತಿತ್ವದಲ್ಲಿದೆ. (ನಮ್ಮ ಸ್ಯಾನಿಟೈಜರ್‌ಗಳಲ್ಲಿ ಶೇ.70 ಆಲ್ಕೋಹಾಲನ್ನು ಬಳಸುತ್ತೇವೆ) ಗಾಯಗಳನ್ನು ಸ್ವಚ್ಛಗೊಳಿಸಲೂ ಮದ್ಯಸಾರವನ್ನು ಬಳಸುವ ವಿಧಾನವು ಸರ್ವ ಸಾಮಾನ್ಯ ವಾಗಿದೆ. ನಂತರದ ದಿನಗಳಲ್ಲಿ, ಹಸಿವನ್ನು ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುವ ಟಾನಿಕ್ಕುಗಳನ್ನು ಮದ್ಯಸಾರ ಮಾಧ್ಯಮದಲ್ಲಿ ತಯಾರಿಸುವ ಪದ್ಧತಿಯು ಜನಪ್ರಿಯವಾಯಿತು.

ಮಾರುಕಟ್ಟೆಯಲ್ಲಿ ದೊರೆಯುವ ಕೆಮ್ಮಿನ ಔಷಽಗಳಲ್ಲಿ ಮದ್ಯಸಾರವು ಸಂರಕ್ಷಕವಾಗಿ (ಪ್ರಿಸರ್ವೇಟಿವ್) ಆಗಿ ಬಳಕೆಯಲ್ಲಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಮದ್ಯಸಾರದ ಉಪಯೋಗವು ಸೀಮಿತ ಪ್ರಮಾಣದಲ್ಲಿದೆ. ಆದರೆ ಅದು ಸಾಮಾಜಿಕ ಪಾನೀಯವಾಗಿ, ಮನರಂಜನಾ ಪಾನೀಯವಾಗಿ ವಿಶ್ವವ್ಯಾಪಿ ಬಳಕೆ ಯಲ್ಲಿದೆ. ಮದ್ಯಪಾನದಿಂದ ಸಂಭವಿಸುವ ಅನಾರೋಗ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ತಡೆಗಟ್ಟಬಹುದಾದ ಕಾರಣಗಳಿಂದ ಸಂಭವಿಸುವ ಸಾವುಗಳ
ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದೆ. ಕುಡಿದ ಮತ್ತಿನಲ್ಲಿ ಸಂಭವಿಸುವ ಅಪಘಾತಗಳು ಇಂದಿಗೂ ತಡೆಗಟ್ಟಲಾಗದ ಒಂದು ಬೃಹತ್ ಸಮಸ್ಯೆಯಾಗಿದೆ.

ಇಂದಿನ ದಿನಗಳಲ್ಲಿ ಆಲ್ಕೋಹಾಲ್ ಸೇವಿಸದವರು ಹಿಂದುಳಿದವರು ಅನಾಗರಿಕರು ಪುರಾತನರು ಎಂಬ ಎಲ್ಲ ಹಂಗಿಸುವಿಕೆಗೆ ತುತ್ತಾಗುತ್ತಿರುವುದನ್ನು ನಾವು ನೋಡಬಹುದು. ಕಾಲೇಜು ವಿದ್ಯಾರ್ಥಿಗಳಲ್ಲಿ ಧೂಮಪಾನ ಮತ್ತು ಮದ್ಯಪಾನವು ಸಾಮಾನ್ಯವಾಗಿದೆ. ಇದುವರೆಗು ಕದ್ದು ಮುಚ್ಚಿ ಮದ್ಯಪಾನವನ್ನು ಮಾಡುತ್ತಿದ್ದ
ಹೆಣ್ಣು ಮಕ್ಕಳು ಈಗ ಬಹಿರಂಗವನ್ನು ಮದ್ಯಪಾನವನ್ನು ಮಾಡುತ್ತಿರುವುದು ಹುಬ್ಬೇರಿಸುವ ವಿಷಯವಾಗಿ ಉಳಿದಿಲ್ಲ. ಮದ್ಯಪಾನದ ಸಮಸ್ಯೆಯು ದಿನೇ ದಿನೇ ಉಲ್ಬಣವಾಗುತ್ತಿದೆ. ದೇವತೆಗಳಿಂದ ಹಿಡಿದು ಜನಸಾಮಾನ್ಯರವರೆಗೆ ಜನಪ್ರಿಯವಾಗಿರುವ ಮದ್ಯಪಾನ ಚಟವನ್ನು ನಿಯಂತ್ರಿಸಲು, ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಣವೊಂದರಿಂದ ಮಾತ್ರ ಸಾಧ್ಯವಾಗುತ್ತದೆ.