Thursday, 12th December 2024

ಮರುವಲಸೆಯ ಭಾರಕ್ಕೆ ಸೋಲುತ್ತಿವೆ ಹಳ್ಳಿಗಳ ರಟ್ಟೆ !

ಸುಪ್ತ ಸಾಗರ

ರಾಧಾಕೃಷ್ನ ಎಸ್.ಭಡ್ತಿ

rkbhadti@gmail.com

ಇದೀಗ ನಾವು ನಗರಗಳಿಂದ ಮರಳಿ ಹಳ್ಳಿಗಳಿಗೆ ಪಲಾಯನ ಮಾಡುವ ಮೂಲಕ ನಿಸರ್ಗದ ಮೇಲಾಗುತ್ತಿರುವ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ವಿಲ್ಲ. ಬದಲಾಗಿ ಹಳ್ಳಿಗಳೂ ಕುಲಗೆಡುತ್ತವೆ. ಮೊದಲು ನಮ್ಮ ಪರಿಸರವನ್ನು ವ್ಯಾಖ್ಯಾನಿಸುವ ಜಾಗತಿಕ ಪ್ರಕ್ರಿಯೆಗಳನ್ನು, ನಮ್ಮ ಮನಸ್ಸುಗಳನ್ನು, ಅದು ರೂಢಿಸಿ ಕೊಂಡ ಜೀವನಶೈಲಿಯನ್ನು ನಿಜವಾಗಿ ಬದಲಿಸಿಕೊಳ್ಳಬೇಕಿದೆ.

ವಿಚಿತ್ರವಾದೊಂದು ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ನಗರಗಳಲ್ಲಿ, ಬೇರೇ ಬೇರೆ ನೌಕರಿಗಳಲ್ಲಿ ಇದ್ದ ಬಹಳಷ್ಟು ಮಂದಿ ಅದನ್ನು ತೊರೆದು ಹಳ್ಳಿಗಳಿಗೆ, ಕೃಷಿಗೆ ಮರುವಲಸೆ ಆರಂಭಿಸಿದ್ದಾರೆ. ನಗರದ ಯಾಂತ್ರಿಕ ಜೀವನದಿಂದ ಬೇಸತ್ತು ನೆಮ್ಮದಿ ಅರಸಿ, ಪುನಃ ನಾವು ಹುಟ್ಟಿ ಬೆಳೆದ ಹಳ್ಳಿಗಳನ್ನು ಸೇರುತ್ತಿರುವ ಸ್ಪಷ್ಟನೆ ಅವರಿಂದ ದೊರೆಯುತ್ತಿದೆ. ಎಲ್ಲ ಉದ್ಯೋಗಗಳಲ್ಲಿ ಕೃಷಿಯೇ ಹೆಚ್ಚು ಶ್ರೇಷ್ಠವೆಂಬ ಸತ್ಯದ ಮನವರಿಕೆಯಾಗಿ, ಮಹತ್ತರ ಸಾಧನೆಯ ಕನಸು ಹೊತ್ತು ಹೀಗೆ ಅವರೆಲ್ಲ ಹೋಗುತ್ತಿದ್ದಾರೆ.

ಯೋಚನೆಗಳು ಒಳ್ಳೆಯದೇ. ಆದರೆ ಇದರಿಂದ ಎಂಥಾ ಅಪಾಯ ಕಾದಿದೆ ಗೊತ್ತಾ? ಹವಾಮಾನ ಬದಲಾವಣೆಯ ಅಭಿಯಾನವನ್ನು ಪರಿಚಯಿಸಿದವರಲ್ಲಿ ಒಬ್ಬರಾದ ಪ್ರಮುಖ ಬರಹಗಾರ, ಪರಿಸರ ಕಾರ್ಯಕರ್ತ, ಶಿಕ್ಷಣತಜ್ಞ ಬಿಲ್ ಮೆಕಿಬ್ಬನ್ ಇಂಥದ್ದೊಂದು ಆತಂಕವನ್ನು ಹೊರ ಹಾಕುತ್ತಾರೆ. ಬಿಲ್ ಮೆಕಿಬ್ಬನ್‌ರನ್ನು ಟೈಮ್ ನಿಯತಕಾಲಿಕೆ, ‘ವಿಶ್ವದ ಅತ್ಯುತ್ತಮ ಹಸಿರು ಪತ್ರಕರ್ತ’ ಎಂದು ಕರೆದಿದೆ. ಆತಂಕಕಾರಿ ಕೀಸ್ಟೋನ್ ಎಕ್ಸ್‌ಎಲ್ ತೈಲ ಪೈಪ್‌ಲೈನ್ ಯೋಜನೆಯನ್ನು ತಡೆಯುವ ನಿಟ್ಟಿನಲ್ಲಿ ಜಾಗತಿಕ ಧ್ವನಿಯಾದ ಈತ ಇದೇ ಚಳವಳಿಯಲ್ಲಿ ೨೦೧೧ರಲ್ಲಿ ಜೈಲುವಾಸವನ್ನೂ ಅನುಭವಿಸಿದವರು.

ಒಮ್ಮೆ ಬಾಲ್ಯವನ್ನು ನೆನಪಿಸಿಕೊಳ್ಳಿ. ನಾವೆಷ್ಟು ಆರಾಮಿಸಿದ್ದೆವು. ಯಾವ ಗದ್ದಲ, ಗೌಜಿಲ್ಲ. ಶಾಂತ ಸುಂದರ ಪರಿಸರದಲ್ಲಿ ಎಂದರಲ್ಲಿ, ಹೇಗೆಂದರೆ ಹಾಗೆ ಓಡಾಡಿಕೊಂಡಿದ್ದೆವು. ಮತ್ತೆ ನಮ್ಮ ಸುತ್ತಲಿನ ಪ್ರಕೃತಿ; ಅದೆಷ್ಟು ಸ್ವಚ್ಛಂದ, ಸ್ವತಂತ್ರವಾಗಿತ್ತು. ಯಾರೂ ಅದಕ್ಕೆ ನೀರೆರೆದಿರಲಿಲ್ಲ, ಗೊಬ್ಬರ ಹಾಕಿರಲಿಲ್ಲ. ತನ್ನ ಷ್ಟಕ್ಕೆ ತಾನು ಸಹಜವಾಗಿ ಹಬ್ಬಿನಿಂತಿತ್ತು ಆ ಹಸಿರು ವನರಾಜಿ. ಅದರ ಎಲ್ಲ ಪ್ರಯೋಜನವನ್ನು ಎಲ್ಲರೂ ಪಡೆಯುತ್ತಿದ್ದರು. ಅಲ್ಲಿ ಪೈಪೋಟಿಯಿರಲಿಲ್ಲ. ಯಾವ ಭೇದ-ಭಾವಗಳಿಲ್ಲದೆ, ಯಾರ್ಯಾರಿಗೆ ಏನೇನು ಬೇಕೋ ಅದನ್ನು ಪ್ರಕೃತಿ ಕೊಡುತ್ತಿತ್ತು. ಹಾಗೆಂದು ನಮ್ಮ ಪಾಡಿಗೆ ನಾವು ಬದುಕುತ್ತಿದ್ದೆವು.

ನಿಸರ್ಗದ ಪಾಡಿಗೆ ನಿಸರ್ಗವಿತ್ತು. ನಾವೆಂದು ನಿಸರ್ಗದೊಳಗಣ ಯಾವ ಜೀವಿಯ ಬದುಕಿನಲ್ಲೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ನಿಸರ್ಗದ ಇತರ ಯಾವುದೇ ಜೀವಿಗಳೂ ನಮ್ಮ ಬದುಕಿಗೆ ತೊಂದರೆ ಕೊಡುತ್ತಿರಲಿಲ್ಲ. ಕಾಡೊಳಗಿನ ಹಾವು-ಹಕ್ಕಿಗಳು ಅವುಗಳ ಪಾಡಿಗೆ ಅವಿರುತ್ತಿತ್ತು. ನಮ್ಮ ಪಾಡಿಗೆ ನಾವು ಕಾಡಿನ
ಒಳ ಹೊಕ್ಕು ಅಲ್ಲಿನ ಉತ್ಪನ್ನಗಳನ್ನು ತಂದುಕೊಳ್ಳುತ್ತಿದ್ದೆವು. ಎರಡೂ ಬದಿಯಿಂದ ಸಾಮರಸ್ಯ ಕಾಣುತ್ತಿತ್ತು.

ನಾವು ಬೆಳೆಯುತ್ತ ಹೋದೆವು. ನಿಸರ್ಗ ಕ್ಷೀಣಿಸುತ್ತ ಬಂತು. ನಮ್ಮನ್ನು ನಿಯಂತ್ರಿಸಲು ಪ್ರಕೃತಿ ಮುಂದಾಗಲಿಲ್ಲ. ಆದರೆ ಅದನ್ನು ನಿಯಂತ್ರಿಸಲು ನಾವು ಯತ್ನಿಸುತ್ತ ಬಂದೆವು. ಅದರ ಹಕ್ಕೆ ಬಿದ್ದ. ಚೆಂದವಿದ್ದೆಲ್ಲವನ್ನೂ ತನ್ನದಾಗಿಸಿಕೊಳ್ಳುವ ಹಪಾಹಪಿಗೆ ಬಿದ್ದೆವು. ತುಂಬ ದಿನ ಪ್ರಕೃತಿ ಸಹಜವಾಗಿರುವುದನ್ನು ನೋಡಲಾಗಲಿಲ್ಲ. ನಮಗೆ ತಕ್ಕಂತೆ ಅದರ ಸ್ವಭಾವವನ್ನು ಬದಲಿಸಲು ಮುಂದಾದೆವು. ಈಗ? ಪ್ರಕೃತಿಯಎಲ್ಲ ಪ್ರಕ್ರಿಯೆಗಳಲ್ಲಿ ನಾವು ಪಾತ್ರದಾರರು, -ಲಾನುಭವಿಗಳು. ಸಹಜವಾಗಿ ಮೊಳೆಯುತ್ತಿದ್ದ ಬೀಜಗಳೂ ಈಗ ಜೊಳ್ಳಾಗಿವೆ. ನಮ್ಮ ಪ್ರಯತ್ನ ಇಲ್ಲದೇ ಭೂಮಿಗೆ ಬಿದ್ದ ಯಾವ ಬೀಜವೂ ಮೊಳೆಯುವುದಿಲ್ಲ, ಮೊಳೆತದ್ದು ಯಾವುದೂ ಬೆಳೆಯುವುದಿಲ್ಲ.

ಬೆಳೆದದ್ದು ಯಾವುದೂ ಬೆಳೆ ಕೊಡುವುದಿಲ್ಲ  ಎಂಬ ಸ್ಥಿತಿ ನಿರ್ಮಾಣವಾಗಿದೆ. ಈಗ ಎಲ್ಲವನ್ನೂ ನಾವೇ ದೊಡ್ಡ ದೊಡ್ಡ ನಗರಗಳ, ಎಸಿ ಕೊಠಡಿಯಲ್ಲಿ ಕುಳಿತು ನಿರ್ಧರಿಸುತ್ತಿದ್ದೇವೆ. ಯಾವ ಹೊಲದಲ್ಲಿ ಏನು ಬೆಳೆಯಬೇಕು, ಯಾವ ಗಿಡ ಎಂಥಾ ಹೂ ಬಿಡಬೇಕು, ಬಿಟ್ಟ ಹೂವುಗಳಲ್ಲಿ ಎಷ್ಟು ಉದುರಬೇಕು, ಎಷ್ಟು ಕಾಯಾಗಬೇಕು ಎಲ್ಲವನ್ನೂ ನಿರ್ದೇಶಿಸುವುದು ನಾವೇ. ನಮ್ಮ ನಿಸರ್ಗದ ಕೆಮೆಸ್ಟ್ರಿಯಲ್ಲಿ ನಾವು ಮಾಡಿದ ಫಾರ್ಮುಲಾ ಬದಲಾವಣೆಗಳು ಅಷ್ಟಕ್ಕೇ ನಿಲ್ಲುತ್ತಿಲ್ಲ. ನಿಲ್ಲಿಸಲಾಗುವುದೂ ಇಲ್ಲ. ಹೀಗಾಗಿ ನಿರಂತರವಾಗಿ ಮುಂದುವರಿದು, ನಾವು ಏನನ್ನೂ ಮಾಡದೇ ಭೂಮಿಯಲ್ಲಿ ಏನೂ ಬೆಳೆಯದು ಎಂಬ ತೀರ್ಮಾನಕ್ಕೆ ಬಂದು, ನಗರ ಜೀವನದ ಶ್ರೇಷ್ಠತೆ(?)ಯೆಡೆಗೆ ಎಲ್ಲ ಯುವಕರನ್ನೂ ಸೆಳೆದಿದ್ದೇವೆ.

ಕೊನೆಗೊಂದು ದಿನ, ತೀರಾ ಇತ್ತೀಚಿನ ಒಂದು ದಿನ ಹಳ್ಳಿಗಳಿಂದ ಹಾಗೆ ವಲಸೆ ಬಂದಿದ್ದವರಿಗೆ ಬೇಸರ ಕಾಡಿತ್ತು. ನಗರಗಳ ಏಕತಾನತೆ, ನಾಲ್ಕಂಕಿ ಸಂಬಳ ತರುತ್ತಿದ್ದ ವೈಟ್ ಕಾಲರ್ಡ್ ನೌಕರಿಯೂ ಕ್ಷಣಿಕವೆನಿಸಿದೆ. ನಮ್ಮ ಹಳ್ಳಿಯೇ ಚೆಂದ, ಅಲ್ಲಿ ಮಾಡುತ್ತಿದ್ದ ಮಣ್ಣಿನ ಕಾಯಕವೇ ಶ್ರೇಷ್ಠವೆಂಬ ಜ್ಞಾನೋದಯ ಮೂಡಿದೆ.
ಮತ್ತೆ ನಗರಗಳಿಂದ ಹಳ್ಳಿಗಳಿಗೆ ಮರುವಲಸೆಯ ಮಹಾ ಯಾನ ಆರಂಭವಾಗಿದೆ.

ಇದ್ದಕ್ಕಿದ್ದಂತೆ ಯುವ ಜನತೆಗೆ ಪಟ್ಟಣ ಬೇಸರವಾಗುತ್ತಿದೆ. ಹುಟ್ಟೂರು ಆಪ್ಯಾಯಮಾನವೆನಿಸಲಾರಂಭಿಸಿದೆ. ಪಟ್ಟಣದ ಅನಿಶ್ಚಿತ ಬುದಕು, ಪ್ರತಿದಿನದ ಓಟ, ನಾಕರಿಯ ಜಾಗದಲ್ಲಿನ ‘ದೊಂಬರಾಟ’ ದೈನಂದಿನ ಜಂಜಾಟ-ಇವೆಲ್ಲವುಗಳಿಂದ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಕರೋನೋತ್ತರ ಭಾರತದಲ್ಲಿ ಬಹುತೇಕರು ಈಗ ಹಳ್ಳಿಗಳಿಗೆ ಮರಳುತ್ತಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯೊಂದನ್ನು ಗಮನಿಸಿ. ಕರ್ನಾಟಕದಲ್ಲಿ ಕಳೆದ ವರ್ಷದ ಲಾಕ್‌ಡೌನ್
ಸಂದರ್ಭದಲ್ಲಿ ಹಳ್ಳಿಗಳಿಗೆ ವಾಪಸಾದವರ ಪೈಕಿ ಶೇ. ೧೯ರಷ್ಟು ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ಇವರಲ್ಲಿ ಶೇ.೧೦ಕ್ಕಿಂತ ಹೆಚ್ಚು ಮಂದಿ ಹಳ್ಳಿಗಳಲ್ಲೇ ಮುಂದಿನ ಬದುಕನ್ನು ಕಂಡುಕೊಳ್ಳಲು ನಿರ್ಧರಿಸಿ, ಅಲ್ಲಿಯೇ ಉಳಿದಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಇಂದಿಗೂ ಹಳ್ಳಿಗಳಿಗೆ ಮರುವಲಸೆ ನಿಂತಿಲ್ಲ. ನಗರಗಳು ಚೇತರಿಸಿಕೊಳ್ಳುತ್ತಿಲ್ಲ. ಉದ್ದಿಮೆಗಳು ಪುನಾರಂಭಗೊಂಡಿಲ್ಲ. ಎಷ್ಟೋ ಉದ್ದಿಮೆಗಳು ನಷ್ಟ
ದಿಂದ ಮುಚ್ಚಿವೆ. ಕೆಲವೊಂದು ಖಾಸಗಿ ಕಂಪನಿಗಳು ಸಿಬ್ಬಂದಿಯಲ್ಲಿ ಕಡಿತ ಮಾಡಿವೆ. ಇವೆಲ್ಲದರ ಜತೆಗೆ ಬದುಕಿಗಾಗಿ ಬೆಂಗಳೂರಿನಂಥ ನಗರಕ್ಕೆ ಬಂದು ವ್ಯಾಪಾರ ಸೇರಿದಂತೆ ಏನೇನೋ ಮಾರ್ಗ ಕಂಡುಕೊಂಡಿದ್ದವರಿಗೆ ಲಾಕ್ ಡೌನ್ ನಂತರ ಮತ್ತೆ ಅದನ್ನೇ ಮುಂದುವರಿಸುವ ಅವಕಾಶಗಳಿಲ್ಲ. ಹೀಗಾಗಿ ಪ್ರತಿ ತಿಂಗಳೂ ಇನ್ನಷ್ಟು ಮರುವಲಸೆ ನಡೆದೇ ಇದೆ. ಹೀಗೆ ಹಳ್ಳಿ ಸೇರಿರುವರಿಗೆ ಅಲ್ಲಿ ಬದುಕು ಕಟ್ಟಿಕೊಳ್ಳುವ ಅವಕಾಶ ತೆರೆದುಕೊಳ್ಳುತ್ತಿಲ್ಲ.

ಇಂಥ ರೈತ ಕುಟುಂಬಕ್ಕೆ ಸೇರಿದ ಸುಮಾರು ೮ರಿಂದ ೧೦ ಲಕ್ಷ ಮಂದಿಗೆ ಮುಂದೇನು ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಅವರಲ್ಲಿ ಶೇ.೨೩ರಷ್ಟು ಜನರು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಸೇರಿದವರಂತೆ. ಈ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಒಮ್ಮೆ ಬಿಲ್ ಮೆಕಿಬ್ಬನ್‌ರ ಮಾತನ್ನು ಗಮನಿಸಿ. ಸತ್ಯಕ್ಕೂ ಹಳ್ಳಿಗಳು ಸಮಸ್ಯೆಗೆ ಸಿಲುಕಿದೆ ಎನಿಸುತ್ತಿದೆ.

ಇದೊಂದು ಅನಿವಾರ್ಯ ವಿಶೇಷ ಸಂದರ್ಭ. ಇಡೀ ಆರ್ಥಿಕ ಚಟುವಟಿಕೆಯನ್ನೇ ಬರೋಬ್ಬರಿ ಎರಡು ಬಾರಿ ಕರೋನಾ ಸಾಂಕ್ರಾಮಿಕ ಕಟ್ಟಿ ಹಾಕಿತು. ಅದರಲ್ಲೂ ದೇಶದ ಬಹುತೇಕ ನಗರಗಳು ಸ್ತಬ್ಧಗೊಂಡವು. ಆರ್ಥಿಕ ಸಂಕಷ್ಟದಲ್ಲೂ ಕೃಷಿ ಕ್ಷೇತ್ರ ಮಾತ್ರ ಜಗತ್ತಿಗೆ ಜೀವಸೆಲೆಯಾಗಿ ನಿಂತಿದ್ದು. ಭಾರತದ ಆರ್ಥಿಕತೆಗೆ ಕೃಷಿ ಕ್ಷೇತ್ರ ಬಹಳ ಮುಖ್ಯ ಎಂದು ಮತ್ತೊಮ್ಮೆ ಸಾಬೀತಾಗಿದ್ದೇ ಆ ಸನ್ನಿವೇಶದಲ್ಲಿ. ನಗರ ಪ್ರದೇಶಗಳ ಹೋಟೆಲು, ರೆಸ್ಟೋರೆಂಟ್, ಡಾಬಾಗಳು ಕಳೆದ ೫೦-೬೦
ದಿನಗಳವರೆಗೆ ಮುಚ್ಚಿದವು. ಹಾಗಿದ್ದರೂ ಕೃಷಿ ಉತ್ಪನ್ನಗಳ ಸರಬರಾಜು ನಡೆಯುತ್ತಲೇ ಇತ್ತು. ಸ್ಥಳೀಯವಾಗೇ ರೈತರು ತಮ್ಮ ಉತ್ಪನ್ನಗಳಿಗೆ ಗ್ರಾಹಕರನ್ನು ಕಂಡುಕೊಂಡರು. ಸಮುದಾಯ ವ್ಯವಸ್ಥೆಯಡಿ ಉತ್ಪನ್ನಗಳನ್ನು ಮಾರುವ ವ್ಯವಸ್ಥೆ ಮಾಡಿಕೊಂಡರು.

ಇಂಥದೊಂದು ಸಂಕಟದ ಪರಿಸ್ಥಿತಿಯಲ್ಲಿ ಕೆಟ್ಟು ಪಟ್ಟಣ ಸೇರಿದ್ದವರೋ, ಪಟ್ಟಣ ಸೇರಿ ಕೆಟ್ಟವರೋ ಅಂತೂ ಬೃಹತ್ ಸಂಖ್ಯೆಯ ಮಂದಿ ಪುನಃ ಹಳ್ಳಿಗಳತ್ತ
ಹೊರಟರು. ಕೆಲವರು ಅಲ್ಲಿಯೇ ಶಾಶ್ವತವಾಗಿ ನಿಲ್ಲುತ್ತೇವೆಂದರು. ಜಗತ್ತಿನ ಯಾವುದೇ ದೇಶದ ಹಳ್ಳಿಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಯುವಕರು ಊರು ತೊರೆದಿದ್ದರು. ಊರಲ್ಲಿ ಉಳಿದಿರುವ ವೃದ್ಧರು ಜಗತ್ತನ್ನೇ ತೊರೆಯವ ದಿನಗಳನ್ನು ಎಣಿಸುತ್ತಿzರೆ. ಇನ್ನು ಕೆಲವೇ ವರ್ಷಗಳಲ್ಲಿ ಕೋಟೆ ಕೊತ್ತಲಗಳಂತೆ, ಆಳರಸರ ಕಾಲದ ರಾಜಧಾನಿಗಳಂತೆ ‘ಪ್ರಾಚೀನ ಪಳಯುಳಿಕೆ’ಗಳಾಗಿ ಹಳ್ಳಿಗಳು ಪ್ರಸಿದ್ಧವಾಗಬಹುದು ಎಂಬ ಹಂತದಲ್ಲಿ ಮರುವಲಸೆ ಆರಂಭವಾಗಿದೆ.
ಏತನ್ಮಧ್ಯೆ, ಕರೋನಾಕ್ಕೂ ಮೊದಲೇ ನಮ್ಮ ನಗರಿಗರಿಗೆ ತಮ್ಮೂರಿನ ಬಗ್ಗೆ ಪ್ರೀತೀ ಹುಟ್ಟಿತ್ತು. ಇಂಥದ್ದೊಂದು ಪ್ರವೃತ್ತಿ ಆರಂಭವಾಗಿ ದಶಕ ಕಳೆಯುತ್ತ ಬಂತು. ನಗರದಲ್ಲಿ ಉದ್ಯೋಗದಲ್ಲಿದ್ದೂ ಊರಲ್ಲಿ ‘ವೀಕೆಂಡ್ ಕೃಷಿ’ ನಿರ್ವಹಿಸುವುದು.

ಹೀಗಾಗಿ ಪಕ್ಕಾ ವೀಕೆಂಡ್‌ನ ಟೈಪಾಂಸ್ ತಾಣಗಳಾಗುತ್ತಿದ್ದವು ಹಳ್ಳಿಗಳು. ತಾಂತ್ರಿಕ ಜೀವನದ ಒತ್ತಡದಿಂದ ಬೇಸತ್ತ ಮಂದಿ ತಮ್ಮ ಮಾನಸಿಕ ನೆಮ್ಮದಿ ಅರಸಿ
ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದರು. ಹಾಗೆಂದು ಅವರು ಮಾಡುತ್ತಿರುವುದಾದರೂ ಏನು? ವಾಹನಗಳನ್ನು ಬಿಟ್ಟು, ಸೈಕಲ್ ತುಳಿಯುತ್ತಾ, ಅಲ್ಲಿನ ಕೆರೆ ಕಟ್ಟೆಗಳಲ್ಲಿ ವಿಹರಿಸುತ್ತಾ, ಬೆಟ್ಟ-ಗುಡ್ಡಗಳನ್ನು ಹತ್ತಿಳಿಯುತ್ತಾ, ಹಾಗೆ ಸುಮ್ಮನೆ ಅಲೆಡಾಡುತ್ತಾ, ಸುತ್ತಮುತ್ತಲ ನಿಸರ್ಗ ಸೌಂದರ್ಯವನ್ನು ಸವಿಯುತ್ತಾ ಇದ್ದು ಹೋಗುತ್ತಿದ್ದರು. ಹೀಗಾಗಿ ಅಲ್ಲಿನ ಹೊಲಗಳು ಕಾಳು ಕೊಡುತ್ತಿರಲಿಲ್ಲ. ಊರ ಮುಂದಿನ ಕಟ್ಟೆಗಳು ಮಾತಾಡುತ್ತಿರಲಿಲ್ಲ.

ಮೀನುಗಳು ಗೊದಮೊಟ್ಟೆಗಳನ್ನು ಸೃಷ್ಟಿಸುತ್ತಿರಲಿಲ್ಲ. ಹಳ್ಳಿಗಳ ಮಳೆ, ಗಾಳಿ, ಚಳಿ, ಬಿಸಿಲುಗಳು ಯಾರ ಮೇಲೂ ಯಾವುದೇ ಪರಿಣಾಮವನ್ನೂ ಬೀರುತ್ತಿರಲಿಲ್ಲ. ಅಷ್ಟಕ್ಕೂ ಅದರ ಬೆಲೆಯೇ ಗೊತ್ತಿಲ್ಲ ಬಿಡಿ. ಆದರೆ ಗ್ರಾಮಗಳಲ್ಲಿನ ಜನರೊಂದಿಗೆ ಆ ನೆಲ ಯಾವುದೋ ಅವ್ಯಕ್ತ ಸಂಬಂಧವನ್ನು ಬೆಸೆದುಕೊಂಡಿದೆ
ಯಲ್ಲಾ? ಅಂದು ಎಕಾಲಜಿ ಇದೆ. ಅದನ್ನು ಆಧರಿಸಿ ಎಕಾನಮಿಯೊಂದು ಚಿಗುರಿದೆ. ಇಂಥ ಯಾವೊಂದು ನೆಲ-ಬೇರು-ಜಲ-ಜನಗಳ ಬೆಸುಗೆ ನಗರದಿಂದ ಈಗ ಬಂದ ಕರೋನಾ ವಲಸಿಗರಿಗೆ ಅರ್ಥವಾಗುತ್ತಿಲ್ಲ. ಹಳ್ಳಿಗಳಲ್ಲಿ ಉಳಿದವರು, ಬಂದವರು ಯಾರೂ ತಿನ್ನುತ್ತಿರುವುದು ಅಲ್ಲಿನ ಅನ್ನ ವನ್ನಲ್ಲ. ಕುಡಿಯುತ್ತಿರುವುದು ಅಲ್ಲಿ ಉಕ್ಕುವ ನೀರನ್ನಲ್ಲ.

ಆಶ್ರಯ ಪಡೆದುಕೊಂಡಿರುವುದು ಹಳ್ಳಿಯ ಸೊಗಡಿನ ನೆರಳಿನಲ್ಲಲ್ಲ. ಇದಾವುದರ ಬಗ್ಗೆಯೂ ಅವರಿಗೆ ತಿಳಿದೇ ಇಲ್ಲ. ಅಷ್ಟಕ್ಕೂ ಜನರ ಮೂಲಭೂತ ಅವಶ್ಯಕತೆಗೆ ಪೂರಕವಾದ ಪಶುಗಳನ್ನಾಗಲೀ, ದೇಸಿ ನೆಲವನ್ನಾಗಲೀ ಪೊರೆಯುತ್ತಿಲ್ಲ. ಇಂಥ ಸ್ವಾವಲಂಬನೆಯ ಕಾಯಕ ಬಹಳಷ್ಟು ಬಾರಿ ಜಂಜಡವಾಗಿ ತೋರುತ್ತಿದೆ. ಅದರ ಬಗೆಗಿನ ಉದಾಸೀನತೆಯೇ ಅವರನ್ನು ಹಳ್ಳಿ ಬಿಡಿಸಿದ್ದಲ್ಲವೇ? ಹಾಗೆ ಹಳ್ಳಿಗಳಲ್ಲಿ ನೆಲವನ್ನು ಉತ್ತುತ್ತ, ಬಿತ್ತುತ್ತ, ಬೆಳೆಯುತ್ತ, ಕೊಯ್ಯುತ್ತ, ಕೇರುತ್ತ
ಉಳಿದವರೆಲ್ಲ ಕೀಳುಕಾಯಕದಲ್ಲಿರುವವರೆಂಬ ಮನೋ ಭಾವ ಬೆಳೆದಿತ್ತು ಕೆಟ್ಟು ಪಟ್ಟಣ ಸೇರಿದವರಲ್ಲಿ. ಅವರೆಲ್ಲ ಸ್ಕಾರ ಅರಿಯದ, ಅಕ್ಷರಗಳನ್ನು ಕಾಣದ ಮಂದಿಯೆಂಬ ಭಾವನೆಯನ್ನು ಬಿತ್ತಿದ್ದೇ ಆಧುನಿಕ ಶಿಕ್ಷಣದ ಸಾಧನೆ?! ಹೀಗೆ ಶಿಕ್ಷಣದ ಮಾಯಾಜಾಲದ ಬೆನ್ನು ಹತ್ತಿ ಹೊಸಜಗತ್ತಿಗೆ ಹೊರಟ ತಲೆಮಾರಿನಲ್ಲಿ ಇಂದಿಗೂ ಹಳ್ಳಿಗಳ ಬಗೆಗೆ, ಅಲ್ಲಿನ ಕಾಯಕದ ಬಗೆಗೆ ಅಸಹನೆ ಇದೆ.

ಆದರೆ ಪಾಪ ಈಗ ಅದೇ ಕಾಯಕ ಕಲಿಯಬೇಕು. ಆದರೆ ಅದು ಒಗ್ಗುತ್ತಿಲ್ಲ; ಗೊತ್ತಿಲ್ಲ. ತಮ್ಮ ಅಶನ-ವಶನ-ವಸತಿಯನ್ನು ಗಳಿಸಿಕೊಳ್ಳುವ ಕನಿಷ್ಠ ವಿದ್ಯೆಯೂ ಅವರಿಗಿಲ್ಲ. ನಿಜವಾಗಿ ಹಳ್ಳಿಗಳಲ್ಲಿ, ಕೃಷಿಯ ವಿಚಾರದಲ್ಲಿ ಅವರು ‘ಅನ್‌ಎಜುಕೇಟೆಡ್’!

ಮೇಟಿಗೆ ಮರಳುವ ಮಂದಿಯ ಈ ಪರಿಕಲ್ಪನೆಯೇ ಭಯಾನ ಕವೆಂದು ತೋರುತ್ತಿಲ್ಲವೇ? ಜಾಗತಿಕ ವ್ಯಸನವಾಗಿರುವ ಈ ಮನೋಭಾವದಿಂದ ಆದ ಬದಲಾವಣೆಗಳು ಹಿಂದೆ ಪ್ರತಿ ವಸಂತದಲ್ಲಿ ನಾವು ಕಾಣುತ್ತಿದ್ದ, ಅನುಭವಿಸಿದ ರೀತಿಯದ್ದಲ್ಲ ಎಂಬುದು ಗಮನಾರ್ಹ. ಇದೀಗ ನಾವು ನಗರಗಳಿಂದ
ಮರಳಿ ಹಳ್ಳಿಗಳಿಗೆ ಪಲಾಯನ ಮಾಡುವ ಮೂಲಕ ನಿಸರ್ಗದ ಮೇಲಾಗುತ್ತಿರುವ ದುಷ್ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಹಳ್ಳಿಗಳೂ ಕುಲಗೆಡುತ್ತವೆ. ಮೊದಲು ನಮ್ಮ ಪರಿಸರವನ್ನು ವ್ಯಾಖ್ಯಾನಿಸುವ ಜಾಗತಿಕ ಪ್ರಕ್ರಿಯೆಗಳನ್ನು, ನಮ್ಮ ಮನಸ್ಸುಗಳನ್ನು, ಅದು ರೂಢಿಸಿಕೊಂಡ
ಜೀವನಶೈಲಿಯನ್ನು ನಿಜವಾಗಿ ಬದಲಿಸಿಕೊಳ್ಳಬೇಕಿದೆ. ಹಳ್ಳಿಗಳಲ್ಲಿನ ಭೂಮಿಯ ಭಾಗಗಳನ್ನು ನಿಜವಾದ ಪ್ರಕೃತಿಯ ಕ್ಷೇತ್ರದಿಂದ – ಆಧುನಿಕ ಕೃಷಿ, ಗಣಿಗಾರಿಕೆ, ನಿರ್ಮಾಣ ಕ್ಷೇತ್ರಗಳ ಹೆಸರಿನಲ್ಲಿ ವಿಂಗಡಿಸಿ, ನಾವು ಸೋಕಾಲ್ಡ ಪ್ರಗತಿ ಸಾಧಿಸಿಬಿಟ್ಟಿದ್ದೇವೆ.

ಹಳ್ಳಿಗಳಲ್ಲಿ ಅಳಿದುಳಿದ ನೆಲ ಸ್ವಲ್ಪವೇ, ಇದೀಗ ದಿಢೀರ್ ನಗರಗಳಿಂದ ವಾಪಸಾಗಲು ಹೊರಟಿರುವ ಬೃಹತ್ ಜನಸಂಖ್ಯೆಯನ್ನು ತಾಳಿಕೊಳ್ಳುವ ಶಕ್ತಿ ಹಳ್ಳಿಗಳಿಗೆ
ಉಳಿದಿದೆಯೇ? ಅಷ್ಟಕ್ಕೂ ಭೂಮಿಯ ಜತೆ ವ್ಯವಹರಿಸುತ್ತಿರುವ ಕೈಗಳು ಮಾರ್ಗದರ್ಶಕ ಕೈಗಳಾಗಿ ಉಳಿದಿಲ್ಲ. ಅದು ವಿಕಾಸವಾದದ ಬದಲು ವಿಕಾರವಾದ ಪರ ಎತ್ತಲ್ಪಟ್ಟಿದೆ. ಹಳ್ಳಿಗಳಲ್ಲಿ ನಾವು ಬದಲಾಯಿಸಿದ ನೈಸರ್ಗಿಕ ಪ್ರಪಂಚಕ್ಕೆ ಮರುವಲಸೆ ಬರುತ್ತಿರುವ ಆಧುನಿಕ, ಸೌಲಭ್ಯಗಳನ್ನೊಳಗೊಂಡ ಪಟ್ಟಣದ
ಜೀವನ ಶೈಲಿಯ, ಮಂದಿಯ ಮನೋಭಾವಕ್ಕೆ ಹೊಂದಿ ಕೊಳ್ಳುವ ಶಕ್ತಿಯಿಲ್ಲ.

ಇಷ್ಟರವರೆಗೆ ಪಟ್ಟಣಗಳಲ್ಲಿದ್ದು ಹಳ್ಳಿಗಳಿಗೆ ಮರಳುತ್ತಿರುವ ಮಂದಿಗೆ ಅಲ್ಲಿನ ಲಭ್ಯ ಸೌಲಭ್ಯ- ಸಂಪನ್ಮೂಲಗಳಲ್ಲಿ ಬದುಕುವುದು ಕಷ್ಟವಾಗುತ್ತದೆ. ಮಿರಿಮಿರಿ
ಮಿಂಚುವ ರಸ್ತೆಗಳಿಲ್ಲದ, ಕ್ಷಣದಲ್ಲಿ ಸಾಗುವ ವಾಹನಗಳಿಲ್ಲದ, ಕೆಲಸಗಳನ್ನು ಸುಲಭವಾಗಿಸುವ ತಾಂತ್ರಿಕತೆಯ ಸಹಾಯವಿಲ್ಲದ ಬದುಕು ಸಹನೀಯ ವೆನಿಸದು. ಅದೆಲ್ಲವನ್ನೂ ತಮ್ಮ ಗ್ರಾಮ ಜೀವನದಲ್ಲಿ ಪುರ್ನ ಸ್ಥಾಪಿಸಿಕೊಳ್ಳಲು ಮುಂದಾಗುವ ವೇಳೆಗೆ ಕೃಷಿಯಿಂದ ಬರುವ ಆದಾಯ ತೀರಾ ಕ್ಷಣಿಕವೆನಿಸಲಾ ರಂಭಿಸುತ್ತದೆ. ಅದಕ್ಕಾಗಿ ಸಾಲದ ಹವ್ಯಾಸಕ್ಕೆ ಬೀಳುತ್ತಾರೆ. ಅದು ಕುತ್ತಿಗೆಗೆ ಬರುವ ಹೊತ್ತಿಗೆ ಕಂಗಾಲಾಗಿ ಬಿಡುತ್ತಾರೆ. ಅತ್ತ ಹಳ್ಳಿಗಳಲ್ಲೂ ಮುಂದುವರಿಯಲಾಗದೇ, ಇತ್ತ ನಗರದಲ್ಲೂ ಆಶ್ರಯ ಕಳೆದುಕೊಂಡು ಮನಸ್ಸು ಹತಾಶೆಗೆ ದೂಡಲ್ಪಡುತ್ತದೆ.

ಇನ್ನು ಸಾಂಸ್ಕೃತಿಕ ಪಲ್ಲಟಗಳ ಕಥೆ ನೋಡಿ. ಮರು ಮಹಾ ವಲಸೆಯಿಂದಾಗಿ ಹಳ್ಳಿಗಳಲ್ಲಿ ಎರಡು ವಿಭಿನ್ನ ಜೀವನ ಕ್ರಮಗಳ ನಡುವಿನ ಸಂಘರ್ಷ ಆರಂಭ ವಾಗಿದೆ. ಈಗಾಗಲೇ ಹಳ್ಳಿಗಳಲ್ಲಿದ್ದು, ಹಳ್ಳಿಗಳಲ್ಲೇ ಉಳಿದು, ಅಲ್ಲೇ ಬದುಕು ಕಟ್ಟಿಕೊಂಡಿದ್ದವರು ಅಲ್ಲಿನ ಲಭ್ಯತೆ, ವಾತಾವರಣ, ಮನಃಸ್ಥಿತಿಗೆ ಅನುಗುಣವಾಗಿ ಬದುಕುತ್ತಿದ್ದಾರೆ. ಅವರಿಗೆ ಪಟ್ಟಣದ ಮೋಜಿನ ಅರಿವಾಗಲೀ, ನಾಜೂಕಾಗಲೀ ಗೊತ್ತಿಲ್ಲ. ಆದರೀಗ ಮನೆಗೆ ಮರಳಿರುವ ಅವರ ಮಗನೋ, ಅಣ್ಣನೋ, ತಮ್ಮನೋ ಪಟ್ಟಣವನ್ನು ತೊರೆದಿ ದ್ದಾರೆಯೇ ವಿನಃ ಅಲ್ಲಿ ರೂಢಿಸಿಕೊಂಡ ಅಭ್ಯಾಸಗಳನ್ನಾ ಗಲೀ, ಬದುಕಿನ ಕ್ರಮಗಳನ್ನಾಗಲೀ ತೊರೆದಿಲ್ಲ. ಜತೆಗೆ
ಮಕ್ಕಳಿಗೆ ಹಳ್ಳಿಯ ಬದುಕು ಬೇಸರ ತರಿಸುತ್ತಿದೆ. ಇಂಟರ್ ನೆಟ್, ಕಂಪ್ಯೂಟರ್, ಟಿವಿ ಮಾದ್ಯಮಗಳ ಯುಗಕ್ಕೆ ತಕ್ಕಂತೆ ಇನ್ನೂ ನಮ್ಮ ಹಳ್ಳಿಗಳು ತಾಂತ್ರಿಕವಾಗಿ ಅಪ್‌ಡೇಟ್ ಆಗಿಲ್ಲ.

ಹೀಗಾಗಿ ಅವರಿಗೂ ಸಮಸ್ಯೆ ಆಗುತ್ತಿದೆ. ಬದುಕಿನ ಶೈಲಿ, ಆಹಾರ, ಬಟ್ಟೆ, ಮಾತು ಎಲ್ಲವೂ ತೀರಾ ಭಿನ್ನ. ಹಳ್ಳಿಯಲ್ಲಿದ್ದವರಿಗೂ, ಹಳ್ಳಿಗೆ ಮರಳಿದವರಿಗೂ ಒಂದು ರೀತಿಯಲ್ಲಿ ‘ವರ್ಗ ಸಂಘರ್ಷ’ ಆರಂಭವಾಗಿದೆ. ಇವರ ಮಟ್ಟಕ್ಕೆ ಅವರು ಏರುತ್ತಿಲ್ಲ. ಅವರ ಮಟ್ಟಕ್ಕೆ ಇವರು ಇಳಿಯಲು ಸಿದ್ಧರಿಲ್ಲ. ಹಬ್ಬ-ಹುಣ್ಣಿಮೆಗಳ ಆಚರಣೆಯವರೆಗೆ ಎಲ್ಲವೂ ತೀರಾ ಭಿನ್ನ. ಇಂಥ ಸಾಂಸ್ಕೃತಿಕ ಪಲ್ಲಟಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಹಳ್ಳಿಗಳಿಗೆ. ಹೀಗಾಗಿ ಗ್ರಾಮೀಣ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳನ್ನು ಅರಿಯಲು ಸಾಧ್ಯವೇ ಆಗುತ್ತಿಲ್ಲ. ಒಟ್ಟಾರೆ ಮರು ವಲಸೆ ಪ್ರಕಿಯೆನ್ನು ಆರ್ಥಿಕ ದೃಷ್ಟಿಯಿಂದಷ್ಟೇ ಅಲ್ಲ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಣಾಮಗಳನ್ನು, ಹಾಗೆಯೇ ಅದರ ಅಂತಿಮ ಪಥವನ್ನು ಊಹಿಸಲೂ ಆಗುತ್ತಿಲ್ಲ. ಇದು ಕೇವಲ ವೈಯಕ್ತಿಕವಾಗಿ ಒಂದೆರಡು ಕುಟುಂಬಗಳಲ್ಲಿ, ಒಮದೆರಡು ಹಳ್ಳಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ಅಲ್ಲ. ಬದಲಾಗಿ ಎಲ್ಲ ಊರುಗಳ, ಮನೆಮನೆಗಳ ಕಥೆಯೂ ಇದೇ ಆಗಿದೆ. ಸಾರ್ವತ್ರಿಕವಾಗಿ ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅನುಭವಿಸಿದ್ದಕ್ಕಿಂತ ಹೆಚ್ಚಿನ ಅನಿಶ್ಚಿತ ಸ್ಥಿತಿ ಈಗ ಕಾಣಿಸಿಕೊಳ್ಳುತ್ತಿದೆ. ನ್ನೂ ಹೆಚ್ಚಿನ ಅಪಾಯ ಕಾಣುತ್ತಿರುವುದು, ಹಣವಂತರು ಹಾಗೂ ನಿವೃತ್ತರು ಹಳ್ಳಿಗಳಲ್ಲಿ ವಿಶ್ರಾಂತ ಜೀವನ ಬಯಸಿ, ಕೃಷಿಯತ್ತ ಮರಳುವ ಸೋಗು ಹಾಕುತ್ತಿರುವುದರಿಂದ.

ಪಟ್ಟಣದ ಮಂದಿಯ ಬಣ್ಣಕ್ಕೆ ಮೊದಲೇ ಮರುಳಾಗಿ ತಮ್ಮ ನೆಮ್ಮದಿಯನ್ನು ಸುಟ್ಟುಕೊಳ್ಳುತ್ತಿರುವ ಹಳ್ಳಿಗಳ ಅಳಿದುಳಿದ ಯುವಕರ ತಲೆಯಲ್ಲಿ ಸಲ್ಲದ ಕ್ರಾಂತಿಯ ಹುಚ್ಚೆಬ್ಬಿಸುತ್ತಿರುವವರು ಹೀಗೆ ವಿಶ್ರಾಂತಿಗೆ ಬರುತ್ತಿರುವವರೇ. ಇದ್ದುದರಲ್ಲಿ ತೃಪ್ತಿಯನ್ನು ಕಂಡುಕೊಂಡಿದ್ದ ಹಳ್ಳಿಗಳು ಹಾಗೂ ಅಲ್ಲಿದ್ದವರು ಈಗ ದುರಾಸೆಗೆ ಬಲಿಯಾಗಿ ನಲುಗುತ್ತಿದ್ದಾರೆ.

ನಿಜವಾಗಿ, ಹಳ್ಳಿಗಳು ಹಳ್ಳಿಗಳಾಗಿ ಉಳಿಯಬೇಕಿದ್ದರೆ, ಕೃಷಿ ಸಮೃದ್ಧವಾಗಬೇಕಿದ್ದರೆ, ಅಲ್ಲಿನ ನಿಸರ್ಗವಾದರೂ ಶುದ್ಧವಾಗಿರಬೇಕೆಂದಿದ್ದರೆ, ಮಾತ್ರವಲ್ಲ ಈ ಎಲ್ಲವನ್ನೂ ಅವಲಂಬಿಸಿ ಉಸಿರಾಡುತ್ತಿರುವ ನಗರಿಗರ ಹೊಟ್ಟೆ ತುಂಬಬೇಕಿದ್ದರೆ ಹಳ್ಳಿಗಳನ್ನು ಹಳ್ಳಿಗಳಾಗಿ ಉಳಿಯಲು ಬಿಡಿ. ನೀವು ಪಟ್ಟಣಕ್ಕೆ ಬಂದವರು ಇಲ್ಲಿಯೇ ಉಳಿದುಬಿಡಿ. ಹಳ್ಳಿಗಳಿಗೆ-ಕೃಷಿಗೆ ಮರಳುವ ಮನೋಭಾವ ಬಿಡಿ. ಹಳ್ಳಿಗಳೆಂಬ ಆ ‘ವಿನಮ್ರ ಜಗತ್ತು’ ನಿಮ್ಮಿಂದ ಅಹಂಬಾವ ಕಲಿಯದಿರಲಿ.