ಹಿಂದಿರುಗಿ ನೋಡಿದಾಗ
ಸಿಫಿಲಿಸ್ ಎಂಬ ಲೈಂಗಿಕ ಕಾಯಿಲೆಯು ಸೋಂಕುಗ್ರಸ್ತ ವ್ಯಕ್ತಿಯೊಡನೆ ನಡೆಸುವ ಮೈಥುನ, ಗುದಮೈಥುನ, ಮುಖಮೈಥುನದ ಮೂಲಕ ಆರೋಗ್ಯವಂತರಿಗೆ ಹರಡುತ್ತದೆ. ಸಿಫಿಲಿಸ್‌ಗ್ರಸ್ತ ತಾಯಿಗೆ ಹುಟ್ಟುವ ಮಗುವಿಗೆ, ತಾಯಿಯ ಮೂಲಕ ಸೋಂಕು ಹರಡಬಹುದು. ಅಪರೂಪಕ್ಕೆ ಸಿಫಿಲಿಸ್ ಪೀಡಿತ ವ್ಯಕ್ತಿ ಬಳಸುವ ವಸ್ತುಗಳನ್ನು ಸ್ವಚ್ಛಗೊಳಿಸದೆ ಹಾಗೇ ಬಳಸಿದವರಿಗೆ ಈ ಕಾಯಿಲೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ.
ಈ ಕಾಯಿಲೆಯು ಪ್ರಾಥಮಿಕ, ದ್ವಿತೀಯಕ, ಸುಪ್ತಾವದಿ ಹಾಗೂ ತೃತೀಯಕ ಎಂಬ ೪ ಘಟ್ಟಗಳಲ್ಲಿ ಬೆಳೆಯುತ್ತದೆ. ಪ್ರತಿ ಘಟ್ಟ ದಲ್ಲೂ, ಆ ಘಟ್ಟಕ್ಕೇ ವಿಶಿಷ್ಟವಾದ ರೋಗ ಲಕ್ಷಣ ಗಳು ಹಾಗೂ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.
ಪ್ರಾಥಮಿಕ ಘಟ್ಟ: ಸೋಂಕುಗ್ರಸ್ತ ವ್ಯಕ್ತಿಯ ಶಿಶ್ನ, ಯೋನಿ, ಗುದ, ತುಟಿ ಇಲ್ಲವೇ ಬಾಯಿಯಲ್ಲಿ ಹುಣ್ಣುಗಳು ಕಾಣಿಸಿ ಕೊಳ್ಳುತ್ತವೆ. ಹುಣ್ಣುಗಳು ಸಾಮಾನ್ಯವಾಗಿ ನೋವು ರಹಿತವಾಗಿರುವ ಕಾರಣ ವ್ಯಕ್ತಿಯು ಇವುಗಳ ಬಗ್ಗೆ ಅಷ್ಟಾಗಿ ಯೋಚಿಸುವುದಿಲ್ಲ. ಈ ಹುಣ್ಣು ಸುಮಾರು ೩-೬ ವಾರಗಳವರೆಗೆ ಉಳಿಯುತ್ತದೆ. ನಂತರ ಯಾವುದೇ ರೀತಿಯ ಚಿಕಿತ್ಸೆಯಿಲ್ಲದೆಯೇ ತನಗೆ ತಾನೇ ಮಾಯುತ್ತದೆ. ಆದರೆ ಆ ವ್ಯಕ್ತಿಯಲ್ಲಿ ಸೋಂಕು ಸುಪ್ತವಾಗಿದ್ದು ದ್ವಿತೀಯಕ ಹಂತಕ್ಕೆ ಬೆಳೆಯುತ್ತದೆ.
ದ್ವಿತೀಯಕ ಘಟ್ಟ: ಕೆಂಪು ಅಥವಾ ಕಂದು ಬಣ್ಣದ ದದ್ದುಗಳು ಶಿಶ್ನ, ಯೋನಿ, ಗುದ, ತುಟಿ, ಮುಖಗಳ ಮೇಲೆ ಹಾಗೂ ದೇಹದ ಇತರ ಭಾಗಗಳ ಮೇಲೆ ಕಾಣಿಸಿಕೊಳ್ಳುತ್ತದೆ. ಅಂಗೈ, ಅಂಗಾಲಿನಲ್ಲಿಯೂ ಕಾಣಿಸಿಕೊಳ್ಳಬಹುದು. ಇವು ಯಾವುದೇ ನೋವನ್ನಾಗಲಿ, ನವೆಯನ್ನಾಗಲಿ ತೋರದ ಕಾರಣ ವ್ಯಕ್ತಿಯು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವರಲ್ಲಿ ದದ್ದುಗಳು ಸೌಮ್ಯ ಸ್ವರೂಪದಲ್ಲಿ ಕಾಣಿಸಿಕೊಳ್ಳುವ ಕಾರಣ, ಅವು ಆತನ ಗಮನಕ್ಕೇ ಬಾರದಿರಬಹುದು. ದದ್ದುಗಳ ಜತೆ ಜ್ವರ, ಗಂಟಲುನೋವು, ತಲೆನೋವು, ಅಲ್ಲಲ್ಲಿ ಕೂದಲುದುರುವುದು, ಗಳಲೆಕಟ್ಟುವುದು, ತೂಕವಿಳಿಯುವುದು, ವಿಪರೀತ ಸ್ನಾಯುನೋವು, ತಡೆಯಲಾಗದ ಸುಸ್ತು ಇತ್ಯಾದಿ ಲಕ್ಷಣಗಳು ತಲೆದೋರ ಬಹುದು. ಇವು ಹಲವು ದಿನಗಳ ಕಾಲ ಕಾಡಿ ಕಡಿಮೆಯಾಗುತ್ತದೆ.
ಸುಪ್ತಾವಧಿ ಘಟ್ಟ: ಸಿಫಿಲಿಸ್ ಸೋಂಕು ಸುಪ್ತಕಾಲಾವಧಿಯನ್ನು (ಲೇಟೆಂಟ್ ಸ್ಟೇಜ್) ಪ್ರವೇಶಿಸುತ್ತದೆ. ಈ ಅವಧಿಯ ವಿಶೇಷ ವೆಂದರೆ ವ್ಯಕ್ತಿಯಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ. ಎಲ್ಲವೂ ಗುಣವಾದ ಹಾಗೆ ಕಾಣುತ್ತಿರುತ್ತದೆ. ಆದರೆ ಸೋಂಕು ಒಳಗೊಳಗೇ ಬೆಳೆಯುತ್ತ ತೃತೀಯಕ ಹಂತವನ್ನು ಪ್ರವೇಶಿಸುತ್ತದೆ. ಈ ಸುಪ್ತಾವಧಿಯು ಹಲವು ವರ್ಷಗಳಷ್ಟು ಸುದೀರ್ಘವಾಗಿರುತ್ತದೆ.
Read E-Paper click here
ತೃತೀಯಕ ಘಟ್ಟ: ವ್ಯಕ್ತಿಯು ಸಿಫಿಲಿಸ್ ಸೋಂಕಿಗೆ ತುತ್ತಾಗಿ ೧೦-೩೦ ವರ್ಷಗಳಾದ ಮೇಲೆ ತೃತೀಯಕ ಘಟ್ಟ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಸಿಫಿಲಿಸ್‌ಗೆ ತುತ್ತಾದವರೆಲ್ಲ ತೃತೀಯಕ ಘಟ್ಟವನ್ನು ತಲುಪುವುದಿಲ್ಲ. ಕೆಲವರು ಮಾತ್ರ ತಲುಪುವರು. ಆಗ ಸಿಫಿಲಿಸ್ ಅವರಲ್ಲಿ ಪ್ರಧಾನವಾಗಿ ಹೃದಯ ಮತ್ತು ರಕ್ತನಾಳಗಳು ಇಲ್ಲವೇ ಮಿದುಳು ಮತ್ತು ನರಮಂಡಲದ ಮೇಲೆ ಉಗ್ರ ಆಕ್ರಮಣವನ್ನು ಮಾಡುತ್ತದೆ.
ತೃತೀಯಕ ಸಿಫಿಲಿಸ್ ಹಂತದಲ್ಲಿ ವಿಪರೀತ ತಲೆನೋವು, ಮೈಕೈ ನೋವು, ಸ್ನಾಯು ದುರ್ಬಲತೆ, ನಡೆಯಲಾಗದ ದುಸ್ಥಿತಿಯಾಗಿ, ನಾನಾ ಮಾನಸಿಕ ಸಮಸ್ಯೆಗಳು ತಲೆದೋರ ಬಹುದು. ಗೊಂದಲ, ಮರೆವು, ಯೋಚಿಸಲಾಗದ ಸ್ಥಿತಿ, ನಿರ್ಧಾರ ಕೈಕೊಳ್ಳಲಾಗದ ಸ್ಥಿತಿಯುಂಟಾಗಿ ವ್ಯಕ್ತಿಯ ವ್ಯಕ್ತಿತ್ವವೇ ಬದಲಾಗುತ್ತದೆ. ಇದುವೇ ಸಿಫಿಲಿಸ್ ನರಬೇನೆ ಅಥವಾ ನ್ಯೂರೋಸಿಫಿಲಿಸ್. ಕಣ್ಣಲ್ಲಿ ವಿಪರೀತ ನೋವು ಕಂಡುಬಂದು, ಕೆಂಪಗಾಗಿ, ದೃಷ್ಟಿ ಮಂದವಾಗಿ ಇಲ್ಲವೇ ಸಂಪೂರ್ಣ ಅಂಧತ್ವವುಂಟಾಗಬಹುದು. ಇದುವೇ ಕಣ್ಣಿನ ಸಿಫಿಲಿಸ್ ಅಥವಾ ಆಕ್ಯುಲಾರ್ ಸಿಫಿಲಿಸ್. ಕಿವಿಯಲ್ಲಿ ನಾನಾ ರೀತಿಯ ಶಬ್ದಗಳ ಮೊರೆತ (ಟಿನ್ನಿಟಸ್) ತಲೆದೋರಿ, ಶ್ರವಣಸಾಮರ್ಥ್ಯ ಕುಗ್ಗಿ, ವಿಪರೀತ ತಲೆಸುತ್ತು ಆರಂಭವಾಗಬಹುದು.
ಇದುವೇ ಶ್ರವಣ ಸಿಫಿಲಿಸ್ ಅಥವಾ ಓಟೋಸಿಫಿಲಿಸ್. ಸಿಫಿಲಿಸ್ ಸೋಂಕು ಹೃದಯ ಮತ್ತು ರಕ್ತನಾಳಗಳಿಗೆ ಹರಡಬಹುದು. ಮಹಾಧಮನಿ ಉರಿಯೂತವುಂಟಾಗಿ (ಅಯೋರ್ಟೈಟಿಸ್) ಮಹಾಧಮನಿ ಕವಾಟವು ದುರ್ಬಲವಾಗಿ, ಹೃದಯದ ಪಂಪ್ ಮಾಡುವ ಸಾಮರ್ಥ್ಯ ಕುಗ್ಗಿ, ಕೆಲವು ಸಲ ಮಹಾಧಮನಿಯ ಭಿತ್ತಿಯು ತೆಳುವಾಗಿ ಬಲೂನಿನಂತೆ ಊದಿಕೊಳ್ಳಬಹುದು. ರಕ್ತದ ಒತ್ತಡಕ್ಕೆ ಇದು ಛಿದ್ರವಾಗಿ ಇಲ್ಲವೇ ಹೃದಯಾಘಾತವಾಗಿ ಸಾವು ಎರಗಬಹುದು.
ಸಿಫಿಲಿಸ್‌ನ ೩ ಹಂತಗಳ ಬಗೆಗಿನ ತಿಳಿವು ಇಷ್ಟೆಲ್ಲ ಸ್ಪಷ್ಟವಾಗಿ ದೊರೆಯಬೇಕಾದರೆ, ಅದರ ಹಿಂದೆ ಒಂದು ಕರಾಳ ಕಥನವಿದೆ; ಹಲವು ಕುಟುಂಬಗಳ ನಿಟ್ಟುಸಿರ ನೋವಿದೆ. ಹಲವು ವ್ಯಕ್ತಿಗಳ ಕಣ್ಣೀರ ಕಥನವಿದೆ. ಸಾವು ನೋವಿನ ರೌದ್ರ ಇತಿಹಾಸವಿದೆ. ವೈದ್ಯಕೀಯ ಜಗತ್ತಿನಲ್ಲಿ ಘಟಿಸಿದ ಅತ್ಯಂತ ಅಮಾನವೀಯ ಕೃತ್ಯಗಳಲ್ಲಿ ಇದೂ ಒಂದೆಂದು ಕುಖ್ಯಾತವಾಗಿದೆ.
ಇದು ೪ ದಶಕಗಳ ವಿಶ್ವಾಸದ್ರೋಹದ ಕಥೆ. ೧೯೩೨ರಿಂದ ೧೯೭೨ರವರೆಗೆ ನಡೆಯಿತು. ಸ್ಥಳ ಅಮೆರಿಕದ ಅಲಬಾಮ ಪ್ರಾಂತದ ಮೆಕಾನ್ ಕೌಂಟಿ. ಈ ಅಧ್ಯಯನದಲ್ಲಿ ಪ್ರಯೋಗ ಪಶುಗಳಾದವರು (ಗಿನಿ ಪಿಗ್) ಆಫ್ರಿಕನ್-ಅಮೆರಿಕನ್ ಕರಿಯರು. ಈ ಕುಖ್ಯಾತ ಪ್ರಯೋಗ ನಡೆಸಿದ್ದು ಅಮೆರಿಕ ಸಂಯುಕ್ತ ಸಂಸ್ಥಾನಗಳ ಪಬ್ಲಿಕ್ ಹೆಲ್ತ್ ಸರ್ವೀಸ್ (ಪಿಎಚ್ ಎಸ್) ಮತ್ತು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಂಸ್ಥೆಗಳು (ಸಿಡಿಸಿ). ಇವೆರಡು ಸರಕಾರದ್ದೇ ಸಂಸ್ಥೆಗಳು. ಜಾಗತಿಕ ಮನ್ನಣೆ ಪಡೆದ ಬಹು ಘನತೆವೆತ್ತ ಸಂಸ್ಥೆಗಳು.
ಸಿಫಿಲಿಸ್ ಅತ್ಯಂತ ಮಾರಕ ಕಾಯಿಲೆ. ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಕೊಂದಿತ್ತು. ಸಿಫಿಲಿಸ್‌ನಲ್ಲಿ ಎಷ್ಟು ಹಂತಗಳಿವೆ, ಯಾವ ಯಾವ ಹಂತಗಳು ಎಷ್ಟು ಕಾಲದವರೆಗೆ ಇರುತ್ತವೆ, ಆ ಸಂದರ್ಭದಲ್ಲಿ ವ್ಯಕ್ತಿಯು ಅನುಭವಿಸುವ ರೋಗ ಲಕ್ಷಣಗಳು ಮತ್ತು ಚಿಹ್ನೆಗಳೇನು, ಅಂತಿಮವಾಗಿ ರೋಗಿ ಹೇಗೆ ಸಾಯುತ್ತಾನೆ ಇತ್ಯಾದಿ ವಿಚಾರಗಳನ್ನು ತಿಳಿಯುವ ಕುತೂಹಲವು ವಿಜ್ಞಾನಿಗಳಿಗಿತ್ತು. ನಾರ್ವೆಯ ಓಸ್ಲೋವಿನಲ್ಲಿ ನಡೆದ ಒಂದು ಅಧ್ಯಯನದಲ್ಲಿ ಕಕೇಶಿಯನ್ನರು (ಬಿಳಿಯ ಜನರು) ಭಾಗ ವಹಿಸಿದ್ದರು. ಆ ಅಧ್ಯಯನದ ಅನ್ವಯ ಕಕೇಶಿಯನ್ನರಲ್ಲಿ ಸಿಫಿಲಿಸ್ ತೃತೀಯಕ ಹಂತವನ್ನು ತಲುಪಿದಾಗ, ಅದು ಪ್ರಧಾನವಾಗಿ ಅವರ ಮಿದುಳು ಹಾಗೂ ನರ ಮಂಡಲದ ಮೇಲೆ ದಾಳಿ ಮಾಡುತ್ತದೆ ಎನ್ನುವ ವಿಚಾರವು ತಿಳಿದುಬಂದಿತ್ತು. ಹಾಗಾಗಿ ಸಿಫಿಲಿಸ್‌ನ ತೃತೀಯ ಹಂತವು ಕರಿಯರಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದನ್ನು ತಿಳಿಯುವ ಕುತೂಹಲವಿತ್ತು.
ಹಾಗಾಗಿ ಸರಕಾರಿ ಅಧಿಕಾರಿಗಳು ಅಮೆರಿಕದ ‘ಆಫ್ರಿಕನ್-ಅಮೆರಿಕನ್’ ಕರಿಯ ನಾಗರಿಕರನ್ನು ಈ ಪ್ರಯೋಗಕ್ಕಾಗಿ ಆಯ್ಕೆ ಮಾಡಿ ಕೊಂಡರು. ಅಮೆರಿಕಕ್ಕೆ ಹೊಟ್ಟೆಪಾಡಿಗೆ ಬಂದ ಆಫ್ರಿಕನ್ ಕರಿಯರು, ಅಮೆರಿಕದವರೇ ಆಗಿ, ಅಲಬಾಮ ಪ್ರಾಂತದ ಮೆಕಾನ್ ಕೌಂಟಿ ಪ್ರದೇಶದಲ್ಲಿ ನೆಲೆಸಿದ್ದರು. ಶ್ರೀಮಂತರ ಭೂಮಿಯನ್ನು ಗೇಣಿಗೆ ಪಡೆದು ದುಡಿಯುತ್ತಿದ್ದರು. ಇವರೆಲ್ಲರೂ ತೀರಾ ಬಡವರು. ಹಾಗಾಗಿ ಅಮೆರಿಕನ್ ಸರಕಾರವು ಇವರ ಮೇಲೆ ಅಧ್ಯಯನ ಮಾಡಲು ಒಂದು ಮಹಾಸಂಚನ್ನು ರೂಪಿಸಿತು. ಇದರ ನೇತಾರ ಅಮೆರಿಕದ ಪಿಎಚ್‌ಎಸ್ ಮುಖ್ಯಸ್ಥನಾಗಿದ್ದ ಡಿ.ಸಿ.ಟೇಲಿಯಾ-ರೋ ಕ್ಲಾರ್ಕ್. ಆಫ್ರಿಕನ್-ಅಮೆರಿಕನ್ ಜನರಲ್ಲಿ
ಸಿಫಿಲಿಸ್‌ಗೆ ತುತ್ತಾದವರನ್ನು ಅಧ್ಯಯನದಲ್ಲಿ ಒಳಪಡಿಸಬೇಕು; ಅಧ್ಯಯನವು ೬ ತಿಂಗಳಿನಿಂದ ಒಂದು ವರ್ಷದವರೆಗೆ
ನಡೆಯಬೇಕು; ಅವರಲ್ಲಿ ಸಿಫಿಲಿಸ್ ಹೇಗೆ ವಿವಿಧ ಹಂತಗಳನ್ನು ತಲುಪುತ್ತದೆ ಎನ್ನುವುದರ ಸಮಗ್ರ ಮಾಹಿತಿಯನ್ನು ಸಂಗ್ರಹಿಸ ಬೇಕು, ಅಧ್ಯಯನದ ನಂತರ ಅವರಿಗೆ ಅಗತ್ಯ ಚಿಕಿತ್ಸೆ ನೀಡಿ ಗುಣಪಡಿಸಬೇಕು ಎನ್ನುವುದು ಯೋಜನೆಯ ಸ್ಥೂಲರೂಪವಾಗಿತ್ತು.
ಈ ಅಧ್ಯಯನದ ಶೀರ್ಷಿಕೆ ‘ಸಿಫಿಲಿಸ್ ಚಿಕಿತ್ಸೆಯನ್ನು ಪಡೆಯದ ನೀಗ್ರೋ ಗಂಡಸರ ಟಸ್ಕೀಗಿ ಅಧ್ಯಯನ’ (ಟಸ್ಕೀಗಿ ಸ್ಟಡಿ ಆಫ್ ಅನ್-ಟ್ರೀಟೆಡ್ ಸಿಫಿಲಿಸ್ ಇನ್ ದಿ ನೀಗ್ರೋ ಮೇಲ್) ಎಂದಾಗಿತ್ತು. ನಂತರದ ದಿನಗಳಲ್ಲಿ ‘ಟಸ್ಕೀಗಿ ಅಧ್ಯಯನ’ ಅಥವಾ ‘ಟಸ್ಕೀಗಿ ಸಿಫಿಲಿಸ್ ಅಧ್ಯಯನ’ ಎಂಬ ಪರ್ಯಾಯ ಹೆಸರುಗಳಿಂದಲೂ ಪರಿಚಿತವಾಯಿತು. ಈ ಅಧ್ಯಯನವು ಟಸ್ಕೀಗಿ ಇನ್‌ಸ್ಟಿಟ್ಯೂಟ್‌ಲ್ಲಿ ನಡೆಯಿತು. ಇದೇ ಸಂಸ್ಥೆಯು ಮುಂದೆ ಟಸ್ಕೀಗಿ ವಿಶ್ವವಿದ್ಯಾನಿಲಯವಾಗಿ ಬೆಳೆಯಿತು.
ಅಧ್ಯಯನಕ್ಕೆಂದು ೬೦೦ ಆಫ್ರಿಕನ್-ಅಮೆರಿಕನ್ ಗೇಣಿ ರೈತರನ್ನು ಆಯ್ಕೆ ಮಾಡಿಕೊಂಡು ೨ ಗುಂಪುಗಳಾಗಿ ವಿಂಗಡಿಸಿದರು. ಮೊದಲ ಪ್ರಾಯೋಗಿಕ ಗುಂಪಿನಲ್ಲಿ (ಎಕ್ಸ್‌ಪೆರಿಮೆಂಟಲ್ ಗ್ರೂಪ್) ೩೯೯ ‘ಸುಪ್ತಾವದಿ ಸಿಫಿಲಿಸ್’ ಹಂತದಲ್ಲಿದ್ದವರನ್ನು ಸೇರಿಸಿ ದರು. ನಿಯಂತ್ರಿತ ಗುಂಪಿನಲ್ಲಿ (ಕಂಟ್ರೋಲ್ ಗುಂಪು) ೨೦೧ ಗಂಡಸರಿದ್ದರು. ಇವರಿಗೆ ಯಾವುದೇ ರೀತಿಯ ಸಿಫಿಲಿಸ್ ಸೋಂಕು ಇರಲಿಲ್ಲ.
ಪ್ರಯೋಗದ ಶೀರ್ಷಿಕೆಯೇ ‘ಸಿಫಿಲಿಸ್ ಇನ್ ಅನ್ -ಟ್ರೀಟೆಡ್ ನೀಗ್ರೋ ಮೇಲ್’ ಎಂದಲ್ಲವೆ! ಹಾಗಾಗಿ ಈ ಅಧ್ಯಯನದಲ್ಲಿ ಪಾಲ್ಗೊಳ್ಳುವ ಸಿಫಿಲಿಸ್ ಗ್ರಸ್ತರಿಗೆ ಯಾವುದೇ ರೀತಿಯ ಸಿಫಿಲಿಸ್ ನಿಗ್ರಹ ಚಿಕಿತ್ಸೆಯನ್ನು ನೀಡುವ ಯೋಜನೆಯೇ ಇರಲಿಲ್ಲ.
‘ಸಿಫಿಲಿಸ್‌ನ ದೀರ್ಘಾವಧಿ ಪರಿಣಾಮದ ಬಗ್ಗೆ ನಿಮ್ಮ ಮೇಲೆ ಅಧ್ಯಯನ ಮಾಡಲಿದ್ದೇವೆ’ ಎನ್ನುವ ವಿಚಾರವನ್ನು ಯಾರಿಗೂ ಹೇಳಲಿಲ್ಲ.
ಈ ಅಧ್ಯಯನದ ಸಾಧಕ-ಬಾಧಕಗಳ ಕುರಿತು ಅವರಿಗೆ ತಿಳಿಹೇಳಲಿಲ್ಲ. ಜೀವಾಪಾಯ ಸಂಭವ ಸಾಧ್ಯತೆಯಿರುವ ಈ ಅಧ್ಯಯನ ದಲ್ಲಿ ಪಾಲ್ಗೊಳ್ಳಲು ನಿಮ್ಮ ಒಪ್ಪಿಗೆಯಿದೆಯೇ ಎಂದು ಅವರಿಂದ ಯಾವುದೇ ‘ತಿಳಿಹೇಳಿದ ಸಮ್ಮತಿ’ಯನ್ನು ಮೌಖಿಕ ಇಲ್ಲವೇ ಲಿಖಿತ ರೂಪದಲ್ಲಿ (ಇನ್-ರ್ಮ್ಡ್ ಕನ್ಸೆಂಟ್) ಪಡೆಯಲಿಲ್ಲ.
‘ನಿಮಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡುತ್ತೇವೆ ಹಾಗೂ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತೇವೆ’ ಎಂಬ ಆಮಿಷವನ್ನು ಒಡ್ಡಿ ಅವರನ್ನು ಅಧ್ಯಯನದಲ್ಲಿ ಸೇರಿಸಿಕೊಂಡರು. ಈ ಪ್ರಯೋಗದಲ್ಲಿ ಪಾಲ್ಗೊಳ್ಳುವವರಿಗೆ ಯಾವುದೇ
ಸಂಭಾವನೆ ಇರಲಿಲ್ಲ. ಆದರೆ ಆಸ್ಪತ್ರೆಗೆ ಬಂದವರನ್ನು ನಯ- ನಾಜೂಕಿನಿಂದ ಸ್ವಾಗತಿಸಿ, ಹೊಟ್ಟೆ ತುಂಬಾ ಬಿಸಿಬಿಸಿ ಊಟ
ನೀಡಿ, ಪ್ರಯೋಗಕ್ಕೆ ಒಳಪಡಿಸಿ ಹಿಂದಕ್ಕೆ ಕಳುಹಿಸುತ್ತಿದ್ದರು. ಸಣ್ಣ ಪುಟ್ಟ ಬೇನೆಗಳಿಗೆ ಔಷಽ ನೀಡುತ್ತಿದ್ದರು. ‘೬ ತಿಂಗಳಿನಿಂದ ೧ ವರ್ಷದವರಿಗೆ ಅಧ್ಯಯನದ ಅವಧಿ’ ಎಂದು ತೀರ್ಮಾನಿಸಿದ್ದವರು, ನಾನಾ ಕಾರಣ ನೀಡಿ ಅಧ್ಯಯನವನ್ನು ೪೦ ವರ್ಷಗಳ ಕಾಲ ಮುಂದುವರಿಸಿದರು.
ಈ ಬಗ್ಗೆ ಅಧ್ಯಯನದಲ್ಲಿ ಭಾಗಿಯಾಗಿದ್ದವರಿಗೆ ಯಾವುದೇ ಮಾಹಿತಿ ನೀಡಲಿಲ್ಲ. ಅವರ ಒಪ್ಪಿಗೆ ಪಡೆಯಲಿಲ್ಲ. ಈ ಅವಧಿಯಲ್ಲಿ ಸಿಫಿಲಿಸ್ ಸ್ಥಿತಿಗತಿ ತಿಳಿಯಲು ನಿಯತ ವಾಗಿ ರಕ್ತದ ಪರೀಕ್ಷೆ, ಮೂತ್ರ ಪರೀಕ್ಷೆ, ಎಕ್ಸ್-ರೇಗಳನ್ನು ಮಾಡುತ್ತಿದ್ದರು. ಮುಖ್ಯವಾಗಿ ಬೆನ್ನುಹುರಿಯಿಂದ ನೀರನ್ನು (ಸ್ಪೈನಲ್ ಟ್ಯಾಪ್) ತೆಗೆಯುತ್ತಿದ್ದರು. ಇದೊಂದು ಯಾತನಾಮಯ ಪರೀಕ್ಷೆಯಾಗಿತ್ತು. ಈ ಅಧ್ಯಯನದ ನಡುವೆ ಮರಣಿಸಿದವರ ಸಿಫಿಲಿಸ್ ಸ್ಥಿತಿ ಗತಿ ತಿಳಿಯಲು ಅವರಿಗೆ ಯಾವುದೇ ರೀತಿಯ ಸುಳಿವು ಬಿಟ್ಟುಕೊಡದೆ ‘ಶವಛೇದನ’ವನ್ನು (ಪೋಸ್ಟ್ ಮಾರ್ಟಮ್) ಮಾಡಿದರು.
ಈ ಅಧ್ಯಯನದಲ್ಲಿ ಪಾಲ್ಗೊಂಡವರು ಬೇರೆ ವೈದ್ಯರನ್ನು ನೋಡಲು/ಚಿಕಿತ್ಸೆ ಪಡೆಯಲು ಅವಕಾಶವನ್ನೇ ಕೊಡದೆ ಅವರನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದರು. ಟಸ್ಕೀಗಿ ಪ್ರಯೋಗವನ್ನು ಆರಂಭಿಸಿದಾಗ ಸಿಫಿಲಿಸ್ ಗುಣಪಡಿಸಲು ಪ್ರಮಾಣಬದ್ಧ ಚಿಕಿತ್ಸೆ ಯಿರಲಿಲ್ಲ. ಆದರೆ ೧೯೪೭ರ ವೇಳೆಗೆ ಪೆನಿಸಿಲಿನ್ ಔಷಧವು ಸಿಫಿಲಿಸ್ ಚಿಕಿತ್ಸೆಗೆ ರಾಮಬಾಣವೆಂದು ಜಗತ್ತಿನಾದ್ಯಂತ ಬಳಕೆಯ ಲ್ಲಿತ್ತು. ಅದನ್ನು ಟಸ್ಕೀಗಿ ಅಧ್ಯಯನದಲ್ಲಿ ಪಾಲ್ಗೊಂಡವರಿಗೆ ಪ್ರಜ್ಞಾಪೂರ್ವಕವಾಗಿ ನೀಡಲಿಲ್ಲ. ಅವರು ಗುಣಮುಖ ರಾದರೆ ಅಧ್ಯಯನವು ಅಪೂರ್ಣವಾಗುತ್ತದೆ ಎಂಬ ಸ್ವಾರ್ಥವಿಲ್ಲಿ ಮೆರೆಯಿತು.
‘ಸಿಫಿಲಿಸ್ ನಿಮ್ಮಿಂದ ನಿಮ್ಮ ಸಂಗಾತಿಗೆ ಹರಡಬಹುದು; ಹಾಗಾಗಿ ಹರಡದಂತೆ ಮುನ್ನೆಚ್ಚರಿಕೆವಹಿಸಿ’ ಎಂದು ಗಂಡಸರಿಗಾಗಲಿ-ಹೆಂಗಸರಿಗಾಗಲಿ ತಿಳಿಹೇಳಲಿಲ್ಲ. ಈ ಅಧ್ಯಯನದಲ್ಲಿ ಅನಕ್ಷರಸ್ಥ, ಮುಗ್ಧ, ಅಸಹಾಯಕ, ರಾಜಕೀಯ ಬೆಂಬಲವಿಲ್ಲದ ಆಫ್ರಿಕನ್-ಅಮೆರಿಕನ್ ಕರಿಯರ ವಿರುದ್ಧದ ವರ್ಣಭೇದ ನೀತಿ ಸ್ಪಷ್ಟವಾಗಿತ್ತು. ಇದು ಅಮೆರಿಕದ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿತ್ತು. ೧೯೭೨ರಲ್ಲಿ ಪೀಟರ್ ಬಕ್ಸ್‌ಟನ್ ಎಂಬಾತ ಈ ಅಮಾನವೀಯ ಅಧ್ಯಯನದ ಸುಳಿವನ್ನು ಪತ್ರಿಕೆಗಳಿಗೆ ನೀಡಿದ. ಇದು ಅಮೆರಿಕದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿಯೇ ದೊಡ್ಡ ಸುದ್ದಿಯಾಯಿತು.
೧೯೭೨ರಲ್ಲಿ ಈ ಪ್ರಯೋಗವನ್ನು ಬಲವಂತವಾಗಿ ನಿಲ್ಲಿಸಿದಾಗ ೩೯೯ ಸಿಫಿಲಿಸ್ ಪೀಡಿತರಲ್ಲಿ ೩೮ ಜನರು ನೇರ ಸಿಫಿಲಿಸ್ ಕಾರಣ, ೧೦೦ ಜನರು ಸಿಫಿಲಿಸ್ ತೊಡಕುಗಳ ಕಾರಣ ಮರಣಿಸಿದ್ದರು. ೪೦ ಸಂಗಾತಿಯರಿಗೆ ಸಿಫಿಲಿಸ್ ಹರಡಿತ್ತು. ಸಿಫಿಲಿಸ್ ಪೀಡಿತ ತಾಯಂದಿರಿಗೆ ಹುಟ್ಟಿದ ೧೯ ಮಕ್ಕಳಿಗೂ ಸಿಫಿಲಿಸ್ ಸೋಂಕು ಅಂಟಿಕೊಂಡಿತ್ತು. ಪ್ರಯೋಗದಲ್ಲಿ ಭಾಗಿಯಾಗಿದ್ದ ೬೦೦ ಜನರಲ್ಲಿ ೭೪ ಮಂದಿ ಮಾತ್ರ ಉಳಿದಿದ್ದರು.
ಈ ಅಧ್ಯಯನದಲ್ಲಿ ಅಳಿದುಳಿದವರಿಗೆ ಅಮೆರಿಕನ್ ಸರಕಾರವು ನ್ಯಾಯಾಲಯದಿಂದ ಹೊರಗೆ ೧೦ ದಶಲಕ್ಷ ಅಮೆರಿಕನ್ ಡಾಲರುಗಳ ಪರಿಹಾರ ನೀಡಿತು. ಬದುಕಿದ್ದವರಿಗೆ ತಲಾ ೩೭,೦೦೦, ಸತ್ತವರ ಬಂಧುಗಳಿಗೆ ೧೫,೦೦೦, ಕಂಟ್ರೋಲ್ ಗುಂಪಿ ನಲ್ಲಿದ್ದವರಿಗೆ ೧೬,೦೦೦ ಹಾಗೂ ಕಂಟ್ರೋಲ್ ಗುಂಪಿನಲ್ಲಿದ್ದು ಮರಣಿಸಿದ ಬಂಧುಗಳಿಗೆ ೫,೦೦೦ ಡಾಲರುಗಳ ಪರಿಹಾರ ದೊರೆಯಿತು.
ಮೇ ೧೬, ೧೯೯೭ರಂದು ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್, ಅಮೆರಿಕನ್ ಸರಕಾರದ ಮೂಗಿನ ಕೆಳಗೇ ನಡೆದ ಈ ಅಮಾನ ವೀಯ ಪ್ರಕರಣಕ್ಕಾಗಿ, ಆಫ್ರಿಕನ್-ಅಮೆರಿಕನ್ ಪ್ರಜೆಗಳ ಕ್ಷಮೆ ಯಾಚಿಸಿದರು. ಮನುಷ್ಯರನ್ನು ಒಳಗೊಂಡ ಎಲ್ಲಾ ವೈದ್ಯಕೀಯ ಅಧ್ಯಯನಗಳಿಗೆ ಅನುಮತಿ ಹಾಗೂ ಉಸ್ತುವಾರಿ ವಹಿಸಲು ವಿಶೇಷ ತಜ್ಞರ ಸಮಿತಿಗಳನ್ನು ಆರಂಭಿಸಬೇಕು ಎಂಬ ಕಾನೂನು ಗಳು ಜಾರಿಗೆ ಬಂದವು.
ಇಷ್ಟೆಲ್ಲ ಆದರೂ ಕೆಲವರು, ವಿಜ್ಞಾನದ ಮುನ್ನಡೆಗೆ ‘ಸಣ್ಣ ಪುಟ್ಟ ತ್ಯಾಗ’ ಅಗತ್ಯ; ತ್ಯಾಗವಿಲ್ಲದೇ ಸಮಾಜ ಕಲ್ಯಾಣವಾಗುವು ದಿಲ್ಲ; ಟಸ್ಕೀಗಿ ಅಧ್ಯಯನವನ್ನು ಮಾಡಿದ್ದರಿಂದಲೇ ನಮಗೆ ಸಿಫಿಲಿಸ್ ಕಾಯಿಲೆಯ ಸಮಗ್ರ ಮಾಹಿತಿ ದೊರೆಯಿತು. ವೈದ್ಯ ವಿಜ್ಞಾನವು ಮುಂದುವರಿಯಿತು ಎಂದು ವಾದಿಸುತ್ತಿದ್ದಾರೆ. ಬಹುಶಃ ಅವರು ಅಥವಾ ಅವರ ಕಡೆಯವರು ಇಂಥ ಅಧ್ಯಯನಗಳ ಪ್ರಯೋಗ ಪಶುಗಳಾಗಿದ್ದಿದ್ದರೆ ಇಂಥ ಮಾತುಗಳನ್ನು ಹೇಳುತ್ತಿದ್ದರೆ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿದೆ.