Sunday, 15th December 2024

ಆಶ್ರಯ ಕೊಟ್ಟ ತಪ್ಪಿಗೆ ಈ ಶಿಕ್ಷೆಯೇ ?!

ವಿಶ್ಲೇಷಣೆ

ಮಾರುತೀಶ್ ಅಗ್ರಾರ

ಅದು ೨೦೧೪-೧೫ರ ಸಮಯ. ಸಿರಿಯಾದಲ್ಲಿ ಮುಸ್ಲಿಂ ಪಂಗಡಗಳ ಒಳಜಗಳ ತಾರಕಕ್ಕೇರಿತ್ತು. ಅದೇ ವೇಳೆಗೆ ಇರಾಕ್ ಕೂಡ ಸುನ್ನಿ ಬಂಡು
ಕೋರರ ವಿರುದ್ಧ ತಿರುಗಿಬಿದ್ದಿತ್ತು. ನೋಡನೋಡುತ್ತಲೇ ಉಭಯದೇಶಗಳ ಮುಸ್ಲಿಮರ ಒಳಜಗಳಗಳು ಸಂಘರ್ಷದ ರೂಪ ತಳೆದವು. ಈ ಸಂಘರ್ಷಗಳಿಗೆ ಅಲ್ ಖೈದಾ ಮತ್ತು ಐಸಿಸ್ ಉಗ್ರರು ಎಂಟ್ರಿ ಕೊಟ್ಟ ಪರಿಣಾಮ ಅನೇಕ ಸಾವು -ನೋವುಗಳಾದವು. ಅನೇಕರು ಆಸ್ತಿ-ಪಾಸ್ತಿ, ಮನೆ-ಮಠ ಕಳೆದುಕೊಂಡು ತಮ್ಮ ನೆಲದಲ್ಲೇ ನಿರಾಶ್ರಿತರಾಗಿ ಬರಿಗೈಲಿ

ನಿಂತುಬಿಟ್ಟರು. ಅದೆಷ್ಟೋ ಮಕ್ಕಳು ಪೋಷಕರನ್ನು ಕಳೆದು ಕೊಂಡು ಅನಾಥರಾದರು. ಒಳಜಗ ಳಕ್ಕೆ ಅಕ್ಷರಶಃ ನಲುಗಿದ ಸಾವಿರಾರು ಮುಸ್ಲಿಂ ಕುಟುಂಬಗಳು ಸಿರಿಯಾ-ಇರಾಕ್ ತೊರೆಯಲು ನಿರ್ಧರಿಸಿದವು. ದುರಂತವೆಂದರೆ ತಮ್ಮದೇ ಸಮುದಾಯದ ಇಂಥ ನಿರಾಶ್ರಿತರನ್ನು ಮುಸ್ಲಿಂ ರಾಷ್ಟ್ರಗಳೇ ಒಳಗೆ ಬಿಟ್ಟುಕೊಳ್ಳಲಿಲ್ಲ! ಈ ಅಸಡ್ಡೆ ಕಂಡು ಮುಸ್ಲಿಂ ನಿರಾಶ್ರಿತರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಆಗ ಇವರ ನೆರವಿಗೆ ನಿಂತಿದ್ದು ಐರೋಪ್ಯ ರಾಷ್ಟ್ರಗಳು. ಅದರಲ್ಲೂ  ಫ್ರಾನ್ಸ್ ಸರಕಾರವು ಮಾನವೀಯತೆಯ ನೆಲೆಗಟ್ಟಿನಲ್ಲಿ ಈ ನಿರಾಶ್ರಿತರಿಗೆ ನೆಲೆ ಒದಗಿಸಿತು.

ಮಾತ್ರವಲ್ಲ, ಹೊಟ್ಟೆಗೆ ಹಿಟ್ಟು, ಕುಡಿಯಲು ನೀರು, ದುಡಿಯಲು ಕೆಲಸ ಎಲ್ಲವನ್ನೂ ಕೊಟ್ಟು ತನ್ನ ನಾಗರಿಕರಂತೆಯೇ ನೋಡಿಕೊಂಡಿತು. ಈ ಉದಾರತೆಯನ್ನು ಕಂಡ ಜಾಗತಿಕ ನಾಯಕರು, ‘ಫ್ರಾನ್ಸ್‌ನ ಈ ನಡೆ ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ’ ಎಂದು ಅಂದೇ ಎಚ್ಚರಿಸಿದ್ದರು. ಆದರೆ ಅದುವರೆಗೂ ಕೋಮು ಗಲಭೆ, ಒಳಸಂಘರ್ಷ, ಅಲ್ಪಸಂಖ್ಯಾತರ ವಿಚಿತ್ರ ಹೋರಾಟಗಳ ಅನುಭವವಾಗಿರದಿದ್ದ ಫ್ರಾನ್ಸ್, ಈ ಎಚ್ಚರಿಕೆಯನ್ನು
ಅಲಕ್ಷಿಸಿತು.

ಫ್ರಾನ್ಸ್ನ ಇಂಥ ಔದಾರ್ಯವನ್ನು ಚೆನ್ನಾಗೇ ಬಳಸಿಕೊಂಡ ಮುಸ್ಲಿಂ ಸಮುದಾಯ, ಹೆಚ್ಚಿನ ಸಂಖ್ಯೆಯಲ್ಲಿ ಫ್ರಾನ್ಸ್ ಕಡೆಗೆ ಮುಖಮಾಡಿತು. ಪರಿಣಾಮ, ಅಲ್ಲಿಯವ ರೆಗೂ ಫ್ರಾನ್ಸ್ನಲ್ಲಿ ಶೇ.೧ ಅಥವಾ ೨ರಷ್ಟಿದ್ದ ಮುಸ್ಲಿಂ ಸಮುದಾಯ ೨೦೨೦ರ ಹೊತ್ತಿಗೆ ಶೇ.೯ಕ್ಕೆ ಏರಿಕೆಯಾಯಿತು! ಇತ್ತೀಚಿನ ವರದಿಗಳ ಪ್ರಕಾರ ಫ್ರಾನ್ಸ್ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ.೧೦ರಷ್ಟು. ಅಂದರೆ, ಕೇವಲ ಏಳೆಂಟು ವರ್ಷಗಳಲ್ಲಿ ಈ ಹೆಚ್ಚಳವಾಗಿದೆ ಎಂಬುದು
ಗಮನಾರ್ಹ.

ಫ್ರಾನ್ಸ್‌ನಲ್ಲಿ ಈಗಿರುವ ಬಹುಪಾಲು ಮುಸ್ಲಿಮರು ಸುನ್ನಿ ಪಂಗಡಕ್ಕೆ ಸೇರಿದವರು. ಮುಂದೊಂದು ದಿನ ಇದೇ ಸಮುದಾಯ ತನ್ನ ಮೇಲೆ ತಿರುಗಿ ಬೀಳಬಹುದೆಂದು ಫ್ರಾನ್ಸ್ ಯೋಚಿಸಿರಲಿಲ್ಲ. ಏಕೆಂದರೆ ಅವರಿಗೆ ಕೊಡ ಬಹುದಾದ ಸೌಲಭ್ಯಗಳನ್ನೆಲ್ಲ ಫ್ರಾನ್ಸ್ ಸರಕಾರ ಕೊಟ್ಟಿತ್ತು. ಪ್ರಾರ್ಥನೆ ಗೆಂದು ಮಸೀದಿಗಳನ್ನು ಅದು ಕಟ್ಟಿಸಿಕೊಟ್ಟಿತ್ತು. ಮದರಸಾ, ಇಸ್ಲಾಮಿಕ್ ಶಾಲೆಗಳೂ ಶುರುವಾಗಿದ್ದವು. ಹೀಗೆ ಫ್ರಾನ್ಸ್‌ನಲ್ಲಿ ಗಟ್ಟಿಯಾಗಿ ನೆಲೆಯೂ ರಿದ ಮುಸ್ಲಿ ಸಮುದಾಯ ಕ್ರಮೇಣ ಮೆಲ್ಲಗೆ ಬಾಲ ಬಿಚ್ಚತೊಡಗಿತು. ಅಕ್ರಮವಾಗಿ ಮಸೀದಿಗಳು ಮೈದಳೆದು, ಅಲ್ಲಿ ಜಿಹಾದ್ ಸಮರ್ಥಿಸಿ
ಉಪದೇಶ ನೀಡುವ, ಜಿಹಾದಿಗಳನ್ನು ವೀರರು ಎಂದು ಅಟ್ಟಕ್ಕೇರಿಸಿ ಪ್ರಚೋದಿಸುವ ಕೆಲಸಗಳು ನಡೆಯತೊಡಗಿದವು.

ಇಷ್ಟೇ ಅಲ್ಲ, ಫ್ರಾನ್ಸ್ ಕಾನೂನಿಗಿಂತ ಇಸ್ಲಾಂ ಧರ್ಮದ ಕಾನೂನು (ಷರಿಯಾ), ಆಚರಣೆಗಳು ಶ್ರೇಷ್ಠವೆಂದು ಈ ಮಸೀದಿಗಳ ಮೂಲಕ ಇಮಾಮ್‌ ಗಳು ಫ್ರಾನ್ಸ್‌ನ ಮುಸ್ಲಿಮರಿಗೆ ಹೇಳತೊಡಗಿದರು. ಸಾಲದೆಂಬಂತೆ, ಮಸೀದಿಯ ಮೂಲಕ ನಿರ್ವಹಿಸಲಾಗುತ್ತಿದ್ದ ಶಾಲೆಗಳಲ್ಲಿ ಸಶಸ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿರುವ ವಿಚಾರವೂ ಬೆಳಕಿಗೆ ಬಂದು, ‘ರ‍್ಯಾಡಿಕಲ್ ಇಸ್ಲಾಮಿಸ್ಟ್‌ಗಳು ಫ್ರಾನ್ಸ್‌ನ ಬಹುಸಂಖ್ಯಾತರ ವಿರುದ್ಧ ದ್ವೇಷ ಹಬ್ಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ’ ಎಂಬ ಸತ್ಯ ಫ್ರಾನ್ಸ್ ಸರಕಾರಕ್ಕೆ ತಲುಪಿತು.

ಕೂಡಲೇ ಎಚ್ಚೆತ್ತ ಸರಕಾರ, ‘ಗಣರಾಜ್ಯದ ಮೌಲ್ಯ’ಗಳಿಗೆ ವಿರುದ್ಧವಾದ ಮತ್ತು ದೇಶವಿರೋಽ ನೀತಿಯನ್ನು ಬಿತ್ತುತ್ತಿದ್ದಂಥ ಮಸೀದಿಗಳನ್ನು ನಿರ್ಬಂಧಿಸುವ ಕ್ರಮವನ್ನು ೨೦೨೧ ರಲ್ಲಿ ಕೈಗೊಂಡಿದ್ದರ ಜತೆಗೆ, ಮಸೀದಿಯ ಮರ್ಜಿಯಲ್ಲಿದ್ದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ ಕೊಂಡಿತು ಮತ್ತು ಮಸೀದಿಯ ಮೂಲಕ ನಿರ್ವಹಿಸಲಾಗುತ್ತಿದ್ದ ಶಾಲೆ ಗಳನ್ನು ೬ ತಿಂಗಳು ಮುಚ್ಚಬೇಕು ಎಂದು ಆದೇಶಿಸಿತು. ಫ್ರಾನ್ಸ್ ಸರಕಾರದ ಈ ನಿರ್ಧಾರದಿಂದ ಕೆರಳಿದ ಅನೇಕ ಇಸ್ಲಾಂ ಮೂಲಭೂತವಾದಿಗಳಿಂದ ಸಣ್ಣಪುಟ್ಟ ಪ್ರತಿಭಟನೆಗಳು, ಹೋರಾಟಗಳು ನಡೆದವು. ಆದರೆ, ದೊಡ್ಡ ಮಟ್ಟದ ದುಷ್ಕೃತ್ಯಗಳು ಜರುಗದಂತೆ ಫ್ರಾನ್ಸ್ ಪೊಲೀಸರು ಅಂದು ಎಚ್ಚರಿಕೆ ವಹಿಸಿದ್ದರು. ಪರಿಣಾಮ ದೊಡ್ಡ ದೊಂಬಿಯುಂಟು ಮಾಡುವ ಇಸ್ಲಾಮಿಕ್ ಉಗ್ರರ ಯೋಜನೆ ಅಂದು ನೆಲಕಚ್ಚಿತ್ತು.

ಏತನ್ಮಧ್ಯೆ, ಫ್ರಾನ್ಸ್‌ನ ಶಾಲೆಯೊಂದರಲ್ಲಿ ಸ್ಯಾಮ್ಯುಯೆಲ್ ಪಾಟಿ ಎಂಬ ಶಿಕ್ಷಕರು ಪಾಠ ಮಾಡುವಾಗ ಪ್ರವಾದಿ ಮಹಮ್ಮದ್ ಅವರ ವ್ಯಂಗ್ಯಚಿತ್ರ ತೋರಿಸಿದರೆಂಬ ಕಾರಣಕ್ಕೆ ರ‍್ಯಾಡಿಕಲ್ ಇಸ್ಲಾಮಿಸ್ಟ್‌ಗಳು ಅವರ ಶಿರಚ್ಛೇದ ಮಾಡಿದ್ದರು! ನೆನಪಿಡಿ, ಇಂಥ ವಿಧ್ವಂಸಕ ಕೃತ್ಯ ಎಸಗಿದವನು ನಿರಾಶ್ರಿ
ತನಾಗಿ ಬಂದಿದ್ದ ‘ಅಬ್ದುಲ್ಲಾಖ್ ಅಬೌಯಜಿಡೋವಿಚ್’ ಎಂಬ ವ್ಯಕ್ತಿ. ಈ ಮಧ್ಯೆ ಫ್ರಾನ್ಸ್‌ನಲ್ಲಿ ಇಸ್ಲಾಂ ಭಯೋತ್ಪಾದನೆಯ ಅಟ್ಟಹಾಸ ಶುರುವಾಗಿ ಹಿಂಸಾಚಾರ ಭುಗಿಲೆದ್ದಾಗ, ಇಸ್ಲಾಮಿಕ್ ಉಗ್ರವಾದದ ವಿರುದ್ಧ ಅನೇಕ ಬಿಗಿನಿರ್ಧಾರಗಳನ್ನು ಕೈಗೊಳ್ಳಲು ಫ್ರಾನ್ಸ್ ಸರಕಾರ ಮುಂದಾಯಿತು. ಇದರ ಭಾಗವಾಗಿ, ಫ್ರಾನ್ಸ್‌ನಲ್ಲಿದ್ದ ೨೫೦೦ ಮಸೀದಿಗಳ ಪೈಕಿ ಅನ್ಯಚಟುವಟಿಕೆ ನಡೆಸುತ್ತಿದ್ದ ಸುಮಾರು 100 ಮಸೀದಿಗಳನ್ನು ಮುಚ್ಚಿಸ ಲಾಯಿತು.

ಜತೆಗೆ ಸಮಾಜಕ್ಕೆ ಅಪಾಯ ತಂದೊಡ್ಡಬಲ್ಲ ಸುಮಾರು ೩೬ ಸಾವಿರ ವಿದೇಶಿ ವ್ಯಕ್ತಿಗಳ ಪರವಾನಗಿಯನ್ನು ಫ್ರಾನ್ಸ್ ಸರಕಾರ ರದ್ದುಗೊಳಿಸಿತು, ‘ಪ್ರತ್ಯೇಕತಾ- ವಿರೋಧಿ ಮಸೂದೆ’ಯನ್ನೂ ಜಾರಿಗೆ ತಂದಿತು. ಇವೆಲ್ಲವೂ ಫ್ರಾನ್ಸ್‌ಗೆ ನಿರಾಶ್ರಿತರಾಗಿ ಬಂದಿದ್ದ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾದವು.
ನಿಜ ಹೇಳಬೇಕೆಂದರೆ, ದೇಶದ ಆಂತರಿಕ ಭದ್ರತೆಯ ವಿಚಾರವಾಗಿ ಸರಕಾರವೊಂದು ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅವೆಲ್ಲವನ್ನೂ ಫ್ರಾನ್ಸ್ ಸರಕಾರ ಕಾನೂನಿನ ಮೂಲಕ ತಂದು ಹತೋಟಿಗೆ ಮುಂದಾಗಿತ್ತು. ಆದರೆ ಇವನ್ನೆಲ್ಲ ಸಹಿಸದ ಅಲ್ಲಿನ ರ‍್ಯಾಡಿಕಲ್ ಇಸ್ಲಾಮಿಸ್ಟ್‌ಗಳು ತಮಗೆ ಆಶ್ರಯ ಕೊಟ್ಟ ದೇಶದ ವಿರುದ್ಧವೇ ದಂಗೆಯೇಳಲು ಒಂದು ಸಣ್ಣ ಪ್ರಮಾದ ಜರುಗಲೆಂದು ಕಾಯುತ್ತಿದ್ದರು ಎನಿಸುತ್ತದೆ! ಈಗ ಫ್ರಾನ್ಸ್ ಪೊಲೀಸರು ನಹೆಲ್ ಎಂಬ ೧೭ರ ಹರೆಯದ ಯುವಕನ ವಿಷಯದಲ್ಲಿ ಎಸಗಿದ ಎಡವಟ್ಟು ದಂಗೆಯೇಳುವುದಕ್ಕೆ ಅಲ್ಲಿನ ಮುಸ್ಲಿಂ ಸಮುದಾಯಕ್ಕೆ ಪ್ರಚೋದನೆ ಕೊಟ್ಟಂತಾ
ಗಿದೆ. ನಹೆಲ್‌ನ ಶೂಟೌಟ್ ಪ್ರಕರಣಕ್ಕೆ ಧರ್ಮದ ಲೇಬಲ್ ಅಂಟಿಸಿರುವ ಫ್ರಾನ್ಸ್‌ನ ಮೂಲಭೂತವಾದಿ ಮುಸ್ಲಿಮರು ಪ್ರತಿಭಟನೆ-ಗಲಭೆಗೆ ಮುಂದಾಗಿದ್ದಾರೆ.

ಪರಿಣಾಮ ಕಳೆದ ೧೦ ದಿನಗಳಿಂದ ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ನೂರಾರು ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು ಸಾಕಷ್ಟು ಪ್ರಮಾಣದ ಸಾರ್ವಜನಿಕ ಸ್ವತ್ತುಗಳನ್ನು ನಾಶಮಾಡಿದ್ದಾರೆ. ಸಾಲದ್ದಕ್ಕೆ ಮುಂದಿನ ಪೀಳಿಗೆಗೆ ಜ್ಞಾನವನ್ನು ಹಂಚಬೇಕಿದ್ದ ಪ್ಯಾರಿಸ್‌ನ ದೊಡ್ಡ ಗ್ರಂಥಾಲಯಕ್ಕೆ ಬೆಂಕಿಯಿಟ್ಟು ಲಕ್ಷಾಂತರ ಪುಸ್ತಕಗಳನ್ನು ಸುಟ್ಟಿದ್ದಾರೆ. ಒಟ್ಟಿನಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಫ್ರಾನ್ಸ್ ಬಿಲಿಯನ್‌ಗಟ್ಟಲೆ ನಷ್ಟ ಅನುಭವಿಸು ವಂತಾಗಿದೆ!

ಅಷ್ಟಕ್ಕೂ, ಪೊಲೀಸರ ಗುಂಡೇಟಿಗೆ ಬಲಿಯಾದ ನಹೆಲ್ ಯಾರು? ಪ್ಯಾರಿಸ್ ಪೊಲೀಸರ ಪ್ರಕಾರ ಅವನೊಬ್ಬ ಡೆಲಿವರಿ ಬಾಯ್. ಡ್ರಗ್ಸ್ ಪ್ರಕರಣದಲ್ಲಿ ಅವನ ಹೆಸರು ಕೇಳಿ ಬಂದಿದ್ದು ಮಾತ್ರವಲ್ಲದೆ, ಈ ಹಿಂದೆಯೇ ಅವನ ಮೇಲೆ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದವು. ಈತ ಯುವಕರಿಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದ ಮತ್ತು ಹಿಂದೆಯೂ ಅನೇಕಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಎಂಬುದು ಪ್ಯಾರಿಸ್ ಪೊಲೀಸರು ಕೊಟ್ಟ ಮಾಹಿತಿ. ನಿಜ, ಸಂಚಾರಿ ನಿಯಮದ ಉಲ್ಲಂಘನೆ ಯಂಥ ಸಣ್ಣ ವಿಷಯಕ್ಕೆ ಒಬ್ಬರನ್ನು ಗುಂಡಿಕ್ಕಿ ಕೊಲ್ಲುವುದನ್ನು ಯಾರೂ ಒಪ್ಪುವುದಿಲ್ಲ.

ಆದರೆ, ಅಂಥ ಯಾವ ಆಕ್ರೋಶಗಳಿದ್ದರೂ ಕಾನೂನಿನ ಮೂಲಕ ಅವಕ್ಕೆ ಪರಿಹಾರ ಕಂಡುಕೊಳ್ಳಬೇಕಾದ್ದು ಸಭ್ಯ ಸಮಾಜದ ಲಕ್ಷಣ. ಆದರೆ ಈ
ವಿಷಯದಲ್ಲಿ ಫ್ರಾನ್ಸ್‌ನ ಮುಸ್ಲಿಮರು ಎಲ್ಲೆಮೀರಿದ್ದಾರೆ. ಈ ಪರಿಯ ವಿಧ್ವಂಸಕ ಕೃತ್ಯವನ್ನು ಎಸಗುವುದು ನ್ಯಾಯವೇ? ಸಾವಿಗೆ ಬೆಂಕಿಯ ಮೂಲಕ ಉತ್ತರವೇ? ಪ್ರತಿಭಟನೆಕಾರರು ತೋರಿರುವ ಪಾಶವೀಕೃತ್ಯದಿಂದಾಗಿ ಪ್ರೀತಿ-ಪ್ರೇಮ-ಪ್ರಣಯಕ್ಕೆ ಹೆಸರಾಗಿದ್ದ ಫ್ರಾನ್ಸ್‌ನ ಹೃದಯಕ್ಕೆ ಕೊಳ್ಳಿ ಇಟ್ಟಂತಾಗಿದೆ.

ಹೌದು, ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಗಮನಿಸುತ್ತಿದ್ದರೆ, ಪ್ರತಿಭಟನೆಕಾರರ ಉದ್ದೇಶ ಬೇರೇನೋ ಇದೆ ಎಂಬ ಅನುಮಾನ ಮೂಡುತ್ತದೆ. ಬಹುಶಃ ರ‍್ಯಾಡಿಕಲ್ ಇಸ್ಲಾಮಿಸ್ಟ್‌ಗಳ ನಿಜಬಣ್ಣವೇನು ಎಂಬುದು ಫ್ರಾನ್ಸ್‌ಗೆ ಈಗ ಗೊತ್ತಾಗಿದೆ ಎನಿಸುತ್ತದೆ. ವಿಷಯ ಏನೇ ಇರಲಿ, ಮಾನವೀಯತೆಯ ಆಧಾರದಲ್ಲಿ ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ಕೊಟ್ಟ ತಪ್ಪಿಗೆ ಫ್ರಾನ್ಸ್ ಇಂದು ಕಂಡು ಕೇಳರಿಯದ ನೋವು ಅನುಭವಿಸುತ್ತಿರುವು ದಂತೂ ದಿಟ.