Friday, 13th December 2024

ಸಾಮಾಜಿಕ ಆರೋಗ್ಯ ಕದಡುತ್ತಿರುವ ವ್ಯವಸ್ಥೆ

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

yoganna55@gmail.com

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲ ಪಕ್ಷಗಳಲ್ಲೂ ಜಾತಿ, ಧರ್ಮಾಂಧತೆ, ಭ್ರಷ್ಟಾಚಾರ, ಸ್ವಾರ್ಥಗಳು ಮೇಳೈಸುತ್ತಿದ್ದು- ಪ್ರತಿಯೊಂದು ಪಕ್ಷವೂ ಇವುಗಳ ಆಧಾರದ ಮೇಲೆ ಸಮಾಜವನ್ನು ಒಡೆದು ಅಧಿಕಾರ ಗಳಿಸಲು ತಾ ಮೇಲು ನಾ ಮೇಲು ಎಂದು ಪೈಪೋಟಿಗಿಳಿದಿರುವುದು ರಾಜಕೀಯ ಅಧಃಪತನಕ್ಕೆ ಹಿಡಿದ ಕೈಗನ್ನಡಿ.

ಮನುಷ್ಯ ಒಬ್ಬಂಟಿಯಾಗಿದ್ದಾಗ ಹಾಗೂ ಸಂಖ್ಯೆ ಕಡಿಮೆಯಿದ್ದಾಗ ತನ್ನ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಂಡು ಸಂತೋಷವಾಗಿ ಬದುಕುತ್ತಿದ್ದ.
ಜನಸಂಖ್ಯೆ ಜಾಸ್ತಿಯಾದಂತೆಲ್ಲ ಮನುಷ್ಯ ತನ್ನ ಸೌಲಭ್ಯಗಳ ಗಳಿಕೆ ಮತ್ತು ವಿತರಣೆಗಾಗಿ ಹಲವಾರು ವ್ಯವಸ್ಥೆ ಗಳನ್ನು ರೂಪಿಸಿಕೊಂಡ.

ಸ್ಥಳೀಯವಾಗಿ ರೂಪುಗೊಂಡ ನಾಯಕತ್ವದ ವ್ಯವಸ್ಥೆಯಿಂದ ಹಿಡಿದು ರಾಜ ಮಹಾರಾಜರ ವ್ಯವಸ್ಥೆ, ಪಟೇಲರು ಗಳ ವ್ಯವಸ್ಥೆ, ತದನಂತರ ಬ್ರಿಟಿಷರ ಆಡಳಿತ ಹೀಗೆ ಹಲವಾರು ವ್ಯವಸ್ಥೆಗಳು ದೇಶದಲ್ಲಿ ಅನುಕರಣೆಗೆ ಬಂದು, ಆಯಾಯ ಕಾಲಘಟ್ಟದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಮನುಷ್ಯನಲ್ಲಿ ಸಂತೋಷ ಮತ್ತು ಸಮಾಜದಲ್ಲಿ ಶಾಂತಿ ಕಾಪಾಡಿಕೊಂಡು ಬಂದಿರುತ್ತವೆ.

ಸ್ವಾತಂತ್ರ್ಯ ಬಂದ ನಂತರ ಚಾಲ್ತಿಗೆ ಬಂದ ಸರಕಾರಗಳು ಮನುಷ್ಯನ ಮತ್ತು ಸಮಾಜದ ಆರೋಗ್ಯವನ್ನು ಕಾಪಾಡುವ ಗುರುತರ ಜವಾಬ್ದಾರಿಯನ್ನು ಹೊಂದಿದ್ದು, ಅದು ಸಮಂಜಸವಾಗಿ ಕಾರ್ಯಗತವಾಗುತ್ತಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಲೇಖನವಿದು. ಮನುಷ್ಯನ ಮೂಲ ಭೂತ ಸೌಕರ್ಯಗಳು, ಅವನ ಮೂಲಭೂತ ಅಪೇಕ್ಷೆಗಳು, ಆಹಾರ ಪದ್ಧತಿಗಳು, ಧಾರ್ಮಿಕ ನಂಬಿಕೆಗಳು, ಸಾಮಾಜಿಕ ನಡವಳಿಕೆಗಳು, ವಸತಿ, ನೀರು ಪೂರೈಕೆ, ಮಲಮೂತ್ರ ಮತ್ತಿತರ ತ್ಯಾಜ್ಯಗಳ ಸೂಕ್ತ ವಿಲೇವಾರಿ, ಪರಿಸರ ಸಂರಕ್ಷಣೆ, ಆರೋಗ್ಯ ಸೌಲಭ್ಯಗಳು ಇವೆಲ್ಲವೂ ಸಾಮಾಜಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಇವೆಲ್ಲವನ್ನೂ ಸಮರ್ಥವಾಗಿ ನಿಯಂತ್ರಿಸುವ ಸಾಮಾಜಿಕ ಆರೋಗ್ಯವನ್ನು ಒದಗಿಸುವುದು ಸರಕಾರದ ಕರ್ತವ್ಯ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಮನಸ್ಸನ್ನು ಸಕಾರಾತ್ಮಕ ಭಾವಗಳಿಂದ ಬೆಳೆಸಿ ಅವನ ಮೂಲಭೂತ ಆದ್ಯತೆಗಳನ್ನು ಮತ್ತು ಬದುಕಿನ ಮೂಲ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟು, ಎಲ್ಲರನ್ನೂ ಪ್ರೀತಿಸಿ ಸದಾಕಾಲ ಸಂತೋಷವಾಗಿಡುವ ಮೌಲ್ಯಯುತ ಶಿಕ್ಷಣವೂ ಸಹ ಸಾಮಾಜಿಕ ಆರೋಗ್ಯವನ್ನು ಕಾಪಾಡಲು ಅತ್ಯವಶ್ಯಕ. ಸ್ವಾತಂತ್ರ್ಯ ಬಂದ ೭೨ ವರ್ಷಗಳಲ್ಲಿ ಸರಕಾರಗಳು ಸಾಮಾಜಿಕ ಆರೋಗ್ಯವನ್ನು ಕಾಪಾಡಲು ಕೈಗೊಂಡಿರುವ ಕ್ರಮಗಳನ್ನು ಅವಲೋಕಿಸಿ ದಾಗ ಸಮಾಜದ ಒಟ್ಟಾರೆ ಆರೋಗ್ಯದ ಸ್ಥಿತಿ ಕ್ಷೀಣಿಸುತ್ತಿರುವುದನ್ನೇ ಗಮನಿಸಬಹುದಾಗಿರುತ್ತದೆ.

ಮೂಲಭೂತ ಸೌಕರ್ಯಗಳ ಬೆಳವಣಿಗೆಗಳಾದ ರಸ್ತೆ, ಸಾರಿಗೆ, ವಸತಿ, ಆಹಾರ ಇತ್ಯಾದಿಗಳಲ್ಲಿ ಅಲ್ಲಲ್ಲಿ ಸಾಧನೆಗಳಾಗಿದ್ದರೂ ಇವಾವುವೂ ಸಾಮಾಜಿಕ
ಆರೋಗ್ಯವನ್ನು ಹಿಂದಿದ್ದ ಸುಸ್ಥಿತಿಗೆ ತರುವಲ್ಲಿ ವಿಫಲವಾಗಿರುವುದನ್ನು ಗುರುತಿಸಬಹುದಾಗಿರುತ್ತದೆ. ಇವಾವುಗಳಿಂದಲೂ ಮನುಷ್ಯನನ್ನು ಮತ್ತು
ಸಮಾಜವನ್ನು ಪೂರ್ಣ ಆರೋಗ್ಯ ಸ್ಥಿತಿಯಲ್ಲಿಡಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬರಲ್ಲೂ ಅಶಾಂತಿ ಮನೆಮಾಡಿದ್ದು, ಒಂದಲ್ಲಾ ಒಂದು ಕಾರಣಕ್ಕಾಗಿ ಮಾನಸಿಕ ಒತ್ತಡಕ್ಕೀಡಾಗಿ ಸಮಾಜದಲ್ಲಿ ಸಾಮರಸ್ಯವಿಲ್ಲದೆ ಇಡೀ ಸಮಾಜ ಅನಾರೋಗ್ಯದಿಂದ ನರಳುತ್ತಿರುವುದನ್ನು ಗಮನಿಸಬಹುದಾಗಿದೆ.

ಇವುಗಳಿಗೆ ಮೂಲಕಾರಣವನ್ನು ಹುಡುಕುತ್ತಾ ಹೋದಲ್ಲಿ ಇದಕ್ಕೆ ಪ್ರಮುಖ ಕಾರಣ ನಮ್ಮನ್ನಾಳುತ್ತಿರುವ ರಾಜಕೀಯ ವ್ಯವಸ್ಥೆಯಾಧಾರಿತ ಸರಕಾರ ಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ಮತ್ತು ರಾಜಕಾರಣಿಗಳ ಪಾತ್ರವೇ ಪ್ರಧಾನ. ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯಿಕ, ಆರ್ಥಿಕ, ಅಧ್ಯಾತ್ಮಿಕ, ಮೌಲಿಕ ಇತ್ಯಾದಿ ಎಲ್ಲ ಕ್ಷೇತ್ರಗಳನ್ನೂ ಆಡಳಿತಾರೂಢ ರಾಜಕೀಯ ವ್ಯವಸ್ಥೆ ನಿಯಂತ್ರಿಸುತ್ತದೆ. ಹೀಗಾಗಿ ರಾಜಕೀಯ ಪಕ್ಷಗಳ ಪರಿಶುದ್ಧತೆ ಮತ್ತು ಪ್ರಬುದ್ಧತೆ ಅತಿಮುಖ್ಯ. ಎಲ್ಲ ರಾಜಕೀಯ ಪಕ್ಷವು ರಾಜಕಾರಣಿಗಳಿಂದಾಗಿದ್ದು, ಅವರವರ ಯೋಗ್ಯತೆಗಳಿಗನುಗುಣವಾಗಿ ಪಕ್ಷಗಳ ಸಿದ್ಧಾಂತ ಮತ್ತು ಅನುಕರಣೆಗಳು ನಿರ್ಧಾರವಾಗುತ್ತವೆ.

ಪಕ್ಷ ರಾಜಕೀಯ ವ್ಯವಸ್ಥೆಯಿರುವ ನಮ್ಮ ದೇಶದಲ್ಲಿ ಸಮಾಜದ ಅನಾರೋಗ್ಯವನ್ನುಂಟುಮಾಡದ ಮತ್ತು ಸಮಾಜದ ಆರೋಗ್ಯವನ್ನು ಪೋಷಿಸುವ ರಾಜಕಾರಣಿಗಳು ರಾಜಕೀಯ ಪಕ್ಷದಲ್ಲಿರಬೇಕು. ಹಾಗಾದಾಗ ಮಾತ್ರ ಅಧಿಕಾರಸ್ಥ ರಾಜಕೀಯ ಪಕ್ಷ ಸಮಾಜದ ಆರೋಗ್ಯಕ್ಕೆ ಪೂರಕವಾಗುವ ಯೋಜನೆ ಗಳನ್ನು ಮಾಡಲು ಸಾಧ್ಯ. ಆದರೆ ಇಂದು ಆಗುತ್ತಿರುವುದಾದರೂ ಏನು? ಇಂದಿನ ಎಲ್ಲ ಪಕ್ಷಗಳಲ್ಲೂ ಸಮಾಜದ ಆರೋಗ್ಯವನ್ನು ಹದಗೆಡಿಸುವ, ಕ್ಯಾನ್ಸರ್‌ಕಾರಕ ವ್ಯಕ್ತಿ ಗಳೇ ತುಂಬಿದ್ದು, ಸಮಾಜದ ಅನಾರೋಗ್ಯಕ್ಕೆ ಕಾರಣ ಕರ್ತರಾಗಿದ್ದಾರೆ. ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಯೋಜನೆ ಗಳನ್ನು ಆಯೋಜಿಸುವ ಮತ್ತು ಕಾರ್ಯಗತಮಾಡುವ ಹಕ್ಕು ಮತ್ತು ಜವಾಬ್ದಾರಿ ಸಂವಿಧಾನಾತ್ಮಕವಾಗಿ ಆಡಳಿತಾರೂಢ ಪಕ್ಷ ಕ್ಕಿರುವುದರಿಂದ ಸಮಾಜದ ಆರೋಗ್ಯವೂ ಸಹ ರಾಜಕೀಯ ನಿರ್ಧಾರಗಳನ್ನೇ ಆಧರಿಸಿರುತ್ತದೆ.

ನಿರ್ಧಾರ ಮಾಡುವ ರಾಜಕಾರಣಿಗಳಿಗೆ ಸಾಮಾಜಿಕ ಆರೋಗ್ಯದ ಸಮಗ್ರ ದೃಷ್ಟಿಕೋನವೇ ಇಲ್ಲದಿದ್ದಲ್ಲಿ ಅವರಿಂದ ನಿರೀಕ್ಷಿಸುವುದಾದರೂ ಏನು?
ಸ್ವಾತಂತ್ರ್ಯ ಪೂರ್ವದಲ್ಲಿ ಯಾವುದೇ ಅಧಿಕಾರದ, ಹಣದ ಮತ್ತು ಸ್ವಾರ್ಥಗಳ ಆಸೆಗಳಿಲ್ಲದೆ, ಜಾತ್ಯತೀತವಾಗಿ, ಧರ್ಮಾತೀತವಾಗಿ ಲಕ್ಷಾಂತರ ಜನ ಸ್ವಾತಂತ್ರ್ಯಕ್ಕಾಗಿ ತಮ್ಮ ಮನೆಮಠಗಳನ್ನು ತ್ಯಾಗ ಮಾಡಿ, ಹೋರಾಟಮಾಡಿ, ಜೈಲು ಸೇರಿ, ಮಡಿದು ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅವರಾರೂ ಅಧಿಕಾರಕ್ಕಾಗಿ ಹೋರಾಟಮಾಡಿದವರಲ್ಲ. ಗಾಂಧೀಜಿಯವರು ಬಯಸಿದ್ದಲ್ಲಿ ಮೊದಲನೇ ಪ್ರಧಾನಮಂತ್ರಿಯೇ ಆಗಬಹುದಿತ್ತು.

ತ್ಯಾಗ, ನಿಸ್ವಾರ್ಥ, ದೇಶಪ್ರೇಮ, ಸರ್ವರ ಹಿತ, ಸಾಮಾಜಿಕ ಆರೋಗ್ಯ ಇವುಗಳೇ ಅಂದಿನ ರಾಜಕೀಯ ನಾಯಕರುಗಳ ಮೂಲಮಂತ್ರಗಳಾಗಿದ್ದವು. ಆದರೆ ಇಂದಿನ ರಾಜಕಾರಣಿಗಳ ಮನೋವೃತ್ತಿ ಏನು? ಹಣಗಳಿಕೆ, ಅಧಿಕಾರ, ಸ್ವಾರ್ಥವಲ್ಲದೆ ಮತ್ತೇನು? ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿ ಕೊಳ್ಳುವುದು ಅತ್ಯವಶ್ಯಕ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಎಲ್ಲ ಪಕ್ಷಗಳಲ್ಲೂ ಜಾತಿ, ಧರ್ಮಾಂಧತೆ, ಭ್ರಷ್ಟಾಚಾರ, ಸ್ವಾರ್ಥಗಳು ಮೇಳೈಸುತ್ತಿದ್ದು, ಪ್ರತಿಯೊಂದು ಪಕ್ಷವೂ ಇವುಗಳ ಆಧಾರದ ಮೇಲೆ ಸಮಾಜವನ್ನು ಒಡೆದು ಅಧಿಕಾರ ಗಳಿಸಲು ತಾ ಮೇಲು ನಾ ಮೇಲು ಎಂದು ಪೈಪೋಟಿ ಗಿಳಿದಿರುವುದು ರಾಜಕೀಯ ಅಧಃಪತನಕ್ಕೆ ಹಿಡಿದ ಕೈಗನ್ನಡಿ.

ಜಾತಿಯ ಆಧಾರದ ಮೇಲೆ ಈ ಹಿಂದೆ ಜ್ಞಾನ ಮತ್ತು ಸೌಕರ್ಯಗಳು ಹಂಚಿಕೆಯಾಗಿದ್ದು, ಅದೂ ಕೂಡ ಸಮಾಜದ ಅಶಾಂತಿಗೆ ಕಾರಣವಾಗಿದ್ದು, ತುಳಿಯಲ್ಪಟ್ಟ ಜಾತಿಗಳಿಗೆ ಶೈಕ್ಷಣಿಕ ಮೀಸಲಾತಿ ನೀಡಿ ಅವರನ್ನು ಪ್ರಬುದ್ಧರನ್ನಾಗಿ ಮಾಡುವುದು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ ರಾಜಕೀಯ ಅಧಿಕಾರದ ಬಳಕೆಗಾಗಿ ಜಾತಿ ಜಾತಿಯ ನಡುವೆ ವೈಷಮ್ಯ ಬಿತ್ತಿ ಒಡೆದು ರಾಜಕೀಯದ ಮತಬ್ಯಾಂಕುಗಳನ್ನಾಗಿ ನಿರ್ಮಿಸಿಕೊಂಡು ವೈಷಮ್ಯದಿಂದ ಸಾಮಾಜಿಕ ಅಶಾಂತಿಗೆ ರಾಜಕೀಯ ಪಕ್ಷಗಳು ನಾಂದಿಯಾಗುತ್ತಿರುವುದು ದುರಂತ. ಮಾನವಕುಲ ಮಾನವ ನಿರ್ಮಿತ ಅವೈಜ್ಞಾನಿಕ ಧರ್ಮಗಳ ಆಧಾರದ ಮೇಲೆ ಒಡೆದುಹೋಗಿದ್ದು, ಅನುಕರಣೀಯರು ಅವರವರ ಧರ್ಮ ಮೇಲು ಎಂದು ಕಚ್ಚಾಡಿಕೊಳ್ಳುವುದನ್ನು ರಾಜಕೀಯ ಪಕ್ಷಗಳು ತಿಳಿಹೇಳದೆ ಪ್ರೋತ್ಸಾಹಿಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸಾಮಾಜಿಕ ಅನಾರೋಗ್ಯಕ್ಕೆ ಮತ್ತೊಂದು ಸಾಕ್ಷಿಯಾಗಿದೆ.

ಹಿಜಾಬ್ ವಿಚಾರದಲ್ಲಿ ಉಚ್ಚ ನ್ಯಾಯಾಲಯದ ತೀರ್ಪನ್ನೇ ಧಿಕ್ಕರಿಸಿ ಪ್ರತಿಭಟಿಸುವುದನ್ನು ರಾಜಕೀಯ ಪಕ್ಷಗಳು ಖಂಡಿಸದೇ, ಮಾರ್ಗದರ್ಶನ ಮಾಡದೆ ಪ್ರೋತ್ಸಾಹಿಸುವುದು ನೈತಿಕ ರಾಜಕಾರಣದ ಅಧಃಪತನಕ್ಕೆ ಜ್ವಲಂತ ಸಾಕ್ಷಿ. ಯೋಗ್ಯ ಮತ್ತು ಸಾಮಾಜಿಕ ಆರೋಗ್ಯ ಕಾಪಾಡುವ ಕಳಕಳಿ ಇರುವ ನೈಜ ರಾಜಕೀಯ ನಾಯಕತ್ವದ ಬೆಳವಣಿಗೆಗೆ ಇದು ಕಂಟಕಪ್ರಾಯವಾಗಿದ್ದು, ಸಾಮಾಜಿಕ ಆರೋಗ್ಯವನ್ನು ಸಮರ್ಥವಾಗಿ ಕಾಪಾಡುವ ಶಕ್ತಿ ಮತ್ತು ಬುದ್ಧಿವಂತಿಕೆ ಇರುವವರಿಗೆ ರಾಜಕೀಯ ದುರ್ವಾಸನೆಯಾಗಿದೆ.

ವಿಧಾನಸಭೆ, ವಿಧಾನಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆಗಳು ಇಂದು ಬಂಡವಾಳಶಾಹಿಗಳು, ಧರ್ಮಾಂಧರು, ಜಾತಿವಾದಿಗಳಿಂದ ತುಂಬಿ
ತುಳುಕುತ್ತಿದ್ದು, ಅವು ಜ್ಞಾನ ಮತ್ತು ವಿಷಯಾಧಾರಿತ ಸಾಮಾಜಿಕ ಆರೋಗ್ಯ ಕಾಪಾಡುವ ವಿಷಯಗಳ ಚರ್ಚೆಗಳ ಅಖಾಡಗಳಾಗದೆ, ಕುಸ್ತಿಯ ಅಖಾಡ ಗಳಾಗಿ ಮಾರ್ಪಟ್ಟಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ. ಸ್ವಾತಂತ್ರ್ಯ ಭಾರತದ ಮೊದಲ ೧೫-೨೦ ವರ್ಷಗಳು ದೇಶವನ್ನಾಳಿದ ಬಹುಪಾಲು ರಾಜಕಾರಣಿಗಳು ದೇಶಭಕ್ತಿ, ತ್ಯಾಗ, ನಿಸ್ವಾರ್ಥತೆ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ದೃಷ್ಟಿಕೋನವನ್ನು ಹೊಂದಿದ್ದು, ಸಾಮಾಜಿಕ ಸಾಮರಸ್ಯ ಇಷ್ಟು ಹದಗೆಟ್ಟಿರಲಿಲ್ಲ.

ಆಪೋಜಿಷನ್ ಎಂದರೆ ಕೈ ಜೋಡಿಸುವುದು ಎಂದರ್ಥ. ವಿರೋಧ ಮಾಡುವುದು ಎಂದಲ್ಲ. ಆಡಳಿತಾರೂಢ ಸರಕಾರಕ್ಕೆ ಯೋಜನೆಗಳನ್ನು ಕಾರ್ಯಗತ ಮಾಡಲು ಆಪೋಜಿಷನ್ ಪಕ್ಷ ಕೈ ಜೋಡಿಸಬೇಕು ಎಂದರ್ಥ. ಪ್ರಾರಂಭಿಕ ದಿನಗಳಲ್ಲಿ ಹೀಗೆ ನಡೆದುಕೊಂಡು ಬರುತ್ತಿತ್ತು. ನೆಹರು ಅವರು ಎಂದೂ ವಿರೋಧ ಪಕ್ಷಗಳನ್ನು ಬಗ್ಗುಬಡಿಯುವ ಬಗ್ಗೆ ಯೋಚಿಸುತ್ತಿರಲಿಲ್ಲ. ಆದರೆ ಇಂದು ವಿರೋಧ ಪಕ್ಷಗಳನ್ನು ಸಂಪೂರ್ಣವಾಗಿ ನಾಶಮಾಡಿಬಿಡಬೇಕೆಂಬ ಇಂದಿನ ಪ್ರಧಾನಮಂತ್ರಿಗಳ ಕಾರ್ಯವೈಖರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ವಿರೋಧ ಪಕ್ಷಗಳೂ ಸಹ ಸಮಾಜದ ಆರೋಗ್ಯಕ್ಕೆ ಪೂರಕವಾದ ಸರಕಾರದ ಕಾರ್ಯಯೋಜನೆಗಳಿಗೆ ಸಹಕಾರ ನೀಡದೆ ವಿರೋಧಕ್ಕಾಗಿ ವಿರೋಧ ಮಾಡುವ ಮನೋವೃತ್ತಿಯೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯ ಗಟ್ಟಿತನಕ್ಕೆ ಧಕ್ಕೆಯಾಗುತ್ತಿದೆ.

ಶ್ರೀ ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಡದ ಕಾಮಗಾರಿಗಳನ್ನು ಕಂಟ್ರ್ಯಾಕ್ಟರ್‌ಗೆ ವಹಿಸುವಾಗ ದೇವರ ಮುಂದೆ ಅವನನ್ನು ಕೂರಿಸಿ
ಹಾಲನ್ನು ನೀಡಿ ಅವನು ಪಾರದರ್ಶಕವಾಗಿ ಯಾರಿಗೂ ಹಣ ನೀಡದೆ ಕಟ್ಟಡವನ್ನು ಮುಗಿಸುತ್ತೇನೆ ಎಂದು ಅವನಿಂದ ಪ್ರತಿಜ್ಞೆ ತೆಗೆದುಕೊಂಡರಂತೆ.
ಇದೇ ಕೆಂಗಲ್ ಹನುಮಂತ ಯ್ಯನವರು ಕರ್ನಾಟಕದ ಏಕೀಕರಣದ ಸಂದ ರ್ಭದಲ್ಲಿ ತಮ್ಮ ಕುಲಬಾಂಧವರು ಇದನ್ನು ವಿರೋಧಿಸಿ ಏಕೀಕರಣವಾದಲ್ಲಿ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯ ಹೆಚ್ಚಾಗಿರುವುದರಿಂದ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆ ಒಕ್ಕಲಿಗರ ಕೈ ತಪ್ಪುತ್ತದೆ ಎಂದು
ಅವರ ಮೇಲೆ ಒತ್ತಡ ಹೇರಿ ಇದನ್ನು ಮಾಡಿದ್ದಲ್ಲಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುತ್ತೇವೆ ಎಂದು ಒಕ್ಕಲಿಗ ಮುಖಂಡರು ಅವಾಜು ಹಾಕಿ
ದರೂ ಸಹ ಅದನ್ನು ಧಿಕ್ಕರಿಸಿ ಏಕೀಕರಣ ಮಾಡಿ ನಂತರ ಮುಖ್ಯಮಂತ್ರಿ ಹುದ್ದೆಯನ್ನೂ ಸಹ ಕಳೆದುಕೊಂಡು ದೇಶಪ್ರೇಮ ಮೆರೆದರು.

ಪ್ರಖ್ಯಾತ ರಾಜಕಾರಣಿ ಡಾ. ಬಿ.ಸಿ. ರಾಯ್ ಅಂದಿನ ಕಾಲಕ್ಕೆ ಪಾಶ್ಚಿಮಾತ್ಯ ರಾಷ್ಟ್ರ ಗಳಲ್ಲಿ ಪ್ರತಿಷ್ಠಿತ ಪದವಿ ಪಡೆದ ತಜ್ಞ ವೈದ್ಯ. ರಾಜಕೀಯ ಅಧಿಕಾರದಿಂದ ಮಾತ್ರ ಸಾಮಾಜಿಕ ಆರೋಗ್ಯವನ್ನು ನೀಡಲು ಸಾಧ್ಯ ಎಂಬುದನ್ನು ಅರಿತು ತಮ್ಮೆಲ್ಲ ಪದವಿಗಳನ್ನು ಬಿಟ್ಟು ರಾಜಕೀಯಕ್ಕೆ ಬಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅದ್ವಿತೀಯ ಸೇವೆ ಸಲ್ಲಿಸಿದ ರಾಷ್ಟ್ರಕಾರಣಿ ಗುಣವುಳ್ಳ ವೈದ್ಯ ರಾಜಕಾರಣಿ. ತಮ್ಮ ಅಧಿಕಾರದ ಅವಧಿಯಲ್ಲಿ
ಪಶ್ಚಿಮ ಬಂಗಾಳದ ಪ್ರಗತಿಯ ದಿಕ್ಕನ್ನೇ ಬದಲಿಸಿದ ಆದರ್ಶ ರಾಜಕಾರಣಿ. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಮಹಾನ್ ವಿದ್ಯಾವಂತನೊಬ್ಬ
ಮುಖ್ಯಮಂತ್ರಿಯಾಗಲು ಸಾಧ್ಯವೇ? ಡಾ.ಬಿ.ಸಿ. ರಾಯ್ ಅವರು ಕಾಂಗ್ರೆಸ್‌ನಿಂದ ಗೆಲ್ಲದಿದ್ದರೂ ಅಂದಿನ ಕಾಂಗ್ರೆಸ್ ಪಕ್ಷ ಇವರ ಸದ್ಗುಣ ನಾಯಕತ್ವ ವನ್ನು ಮೆಚ್ಚಿ ಬೆಂಬಲಿಸಿ ಮುಖ್ಯಮಂತ್ರಿಯನ್ನಾಗಿಸಿ ಪಕ್ಷಾತೀತವಾಗಿ ಒಳ್ಳೆಯ ನಾಯಕರನ್ನು ಬೆಳೆಸಬೇಕೆಂಬ ಮೌಲ್ಯಯುತ ರಾಜಕಾರಣಕ್ಕೆ ನಾಂದಿ ಹಾಕಲಾಗಿತ್ತು. ಆದರೆ ಇಂದಿನ ರಾಜಕೀಯ ಪರಿಸ್ಥಿತಿ ಹಾಗಿದೆಯೇ? ರಾಜಕಾರಣಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದನ್ನು ಮಾತ್ರ ಮನಸ್ಸಿನಲ್ಲಿಟ್ಟು ಕೊಂಡು ವರ್ತಿಸುತ್ತಾನೆ. ಆದರೆ ರಾಷ್ಟ್ರಕಾರಣಿ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಯೋಜನೆಯನ್ನು ರೂಪಿಸುತ್ತಾನೆ. ಇಂದು ರಾಷ್ಟ್ರಕಾರಣಿ ಗುಣವುಳ್ಳ ರಾಜಕಾರಣಿಗಳ ಸಂಖ್ಯೆ ಕ್ಷೀಣಿಸುತ್ತಿರುವುದೇ ಸಮಾಜದ ಅಶಾಂತಿಗೆ ಕಾರಣವಾಗಿದೆ.

ದೇಶದ ಇಂದಿನ ರಾಜಕೀಯ ವ್ಯವಸ್ಥೆ ಅಧಿಕಾರಗಳಿಸುವ ಏಕೈಕ ಉದ್ದೇಶದಿಂದ ಜಾತಿ, ಧರ್ಮಾಂಧತೆ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಇತ್ಯಾದಿಗಳನ್ನು
ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿರುವ ಪರಿಣಾಮದಿಂದಾಗಿ ಸಾಮಾಜಿಕ ಆರೋಗ್ಯ ಹದಗೆಟ್ಟು ಸಮಾಜ ದಲ್ಲಿ ಅಶಾಂತಿ ಮೂಡುತ್ತಿದೆ. ಸಮಗ್ರ ದೃಷ್ಟಿ ಕೋನವಿರುವ ನಿಸ್ವಾರ್ಥ, ತ್ಯಾಗ ಮನೋಭಾವ ಮತ್ತು ಅದಮ್ಯ ದೇಶಪ್ರೇಮ ಇರುವ ರಾಜಕಾರಣಿಗಳು ಹೆಚ್ಚಾದಲ್ಲಿ ಮಾತ್ರ ಸಾಮಾಜಿಕ ಆರೋಗ್ಯ ಸಾಧ್ಯ. ಈ ದಿಕ್ಕಿನಲ್ಲಿ ಸಾರ್ವಜನಿಕರು ಮತ್ತು ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಆಶಿಸೋಣ. ರಾಜಕೀಯ ವ್ಯವಸ್ಥೆ ಪರಿಶುದ್ಧವಾದಲ್ಲಿ ಮಾತ್ರ ಸಾಮಾಜಿಕ ಆರೋಗ್ಯ ಸಾಧ್ಯ. ಈ ದಿಕ್ಕಿನಲ್ಲಿ ಜನಾಂದೋಲನ ಅತ್ಯವಶ್ಯಕ.