ಚಿಂತನ ಮಂಟಪ
ಶಿವಪ್ರಸಾದ್ ಎ.
ಬ್ರಿಟಿಷ್ ಸಂಸತ್ತಿನಲ್ಲಿ ಒಂದು ದಿವಸಕ್ಕೆ ಸರಾಸರಿ ಎಂಟೂವರೆ ಗಂಟೆಗಳ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆಯುತ್ತವೆ. ಆದರೆ ನಮ್ಮಲ್ಲಿ ಸಾಮಾನ್ಯವಾಗಿ ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ಕಾರ್ಯಕಲಾಪಗಳು ನಡೆದರೆ ಅದೇ ಒಂದು ದೊಡ್ಡ ಸಾಧನೆ. ನಮ್ಮಲ್ಲಿ ಈ ನಿಟ್ಟಿನಲ್ಲಿ ಗಮನಾರ್ಹ ಸುಧಾರಣೆಗಳಿಗೆ ಮುಂದಾಗಬೇಕಿದೆ.
ಸಂಸತ್ತಿನ ವಿಶೇಷ ಅಧಿವೇಶನ ಈಗಷ್ಟೇ ಮುಗಿದಿದೆ. ಹದಿನೇಳನೇ ಲೋಕಸಭೆಯ ಈ ಅಧಿವೇಶನ ಮುಗಿಸಿ, ಕೇಂದ್ರ ಸರಕಾರವು ೩ ರಾಜ್ಯಗಳ ಚುನಾವಣೆ ಗಳ ತಯಾರಿಯಲ್ಲಿದೆ. ಆದರೆ ಹದಿನೇಳನೇ ಲೋಕಸಭೆಯ ಸಂಸದರು ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆಯೇ ಮತ್ತು ಇದೇ ಸಂಸದರನ್ನು ಮತ್ತೆ ಆರಿಸಿ ಕಳಿಸಿದರೆ ಅವರು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಯನ್ನು ಸರಿಯಾಗಿ ಮಾಡಬಲ್ಲರೇ ಎಂಬುದನ್ನು ಪ್ರತಿಯೊಬ್ಬ ಮತದಾರನೂ ಕೂಲಂಕಷವಾಗಿ ವಿಶ್ಲೇಷಿಸಬೇಕಾಗಿದೆ.
ಭಾರತದ ಸಂಸತ್ತಿನಲ್ಲಿ ಸ್ವಾತಂತ್ರ್ಯಾನಂತರ ಸಂಸದರೆಲ್ಲರೂ ಪಕ್ಷಭೇದ ತೋರದೆ ತಮ್ಮ ತಮ್ಮ ಮನಸ್ಸಿಗೆ ಒಪ್ಪಿದಂತೆ ವಿಧೇಯಕಗಳ ಪರ ಅಥವಾ ವಿರುದ್ಧವಾಗಿ ಮತನೀಡುವ ಪರಂಪರೆ ನಡೆದುಕೊಂಡು ಬಂದಿಲ್ಲ. ಇದು ಹೆಚ್ಚಾಗಿ ಅಮೆರಿಕದಲ್ಲಿ ನೋಡಸಿಗುವ ಪರಂಪರೆ. ಸಂಸತ್ತಿನಲ್ಲಿ ಮಂಡಿಸಲಾದ ಒಂದು ವಿಧೇಯಕ ವೇನಾದರೂ ತನ್ನ ಕ್ಷೇತ್ರದ ಪ್ರಜೆಗಳಿಗೆ ಉಪಯುಕ್ತವಾಗಿದೆ ಎಂದು ಪ್ರತಿಪಕ್ಷದ ಸಂಸದ ಭಾವಿಸಿದರೆ, ಸರಕಾರದ ಪರವಾಗಿಯೂ ಆತ ಮತನೀಡಬಹುದು. ಹೀಗೆ ಅಮೆರಿಕದಲ್ಲಿ ಹಲವು ಬಾರಿ ನಡೆದಿರುವುದೂ ಇದೆ. ಆದರೆ ಭಾರತದಲ್ಲಿ ಪ್ರಮುಖ ವಿಧೇಯಕಗಳು ಸಂಸತ್ತಿನಲ್ಲಿ ಮತಕ್ಕೆ ಬಂದಾಗ, ಪ್ರತಿಯೊಂದು ರಾಜಕೀಯ ಪಕ್ಷ ಅದರ ಪರವಾಗಿ ಅಥವಾ ವಿರುದ್ಧವಾಗಿ ನಿಲುವನ್ನು ತಳೆಯುತ್ತದೆ ಹಾಗೂ ತನ್ನ ಸಂಸದರು ಪಕ್ಷದ ಮಾರ್ಗಸೂಚಿ ಯನ್ನು ಪಾಲಿಸಿ, ‘ವಿಪ್’ ನಿರ್ದೇಶನದಂತೆಯೇ ಮತ ಚಲಾಯಿಸಬೇಕೆಂಬ ನಿರ್ಬಂಧ ಹೇರುತ್ತದೆ. ಈ ವಿಪ್ ಅನ್ನು ಉಲ್ಲಂಘಿಸಿದ ಸಂಸದರು ತಮ್ಮ ಪಕ್ಷದ ಸದಸ್ಯತ್ವವನ್ನು ಕಳೆದು ಕೊಳ್ಳುವ ಸಾಧ್ಯತೆಯಿರುವುದರಿಂದ ತಮ್ಮ ತಮ್ಮ ಪಕ್ಷಗಳ ನಿಲುವನ್ನು ಒಪ್ಪಿ ವಿಪ್‌ನ ಸೂಚನೆಯಂತೆ ಮತ ಚಲಾಯಿಸುತ್ತಾರೆ. ಹೀಗಾಗಿ, ವಿಧೇಯಕಗಳ ಮೇಲೆ ವೈಯಕ್ತಿಕವಾದ ನಿಲುವನ್ನು ಹೊಂದುವ ಆಯ್ಕೆ ಸಂಸದರಿಗೆ ಇರುವುದಿಲ್ಲ.
ಹೀಗಿರುವಾಗ ಪ್ರತಿಯೊಬ್ಬ ಸಂಸದನ ಆದ್ಯ ಕರ್ತವ್ಯವೇನೆಂದರೆ ತನ್ನ ಕ್ಷೇತ್ರಕ್ಕೆ ಅಥವಾ ಕ್ಷೇತ್ರದ ಮತದಾರರ ಜೀವನಕ್ಕೆ ಯಾವುದಾದರೂ ರೀತಿ
ಯಲ್ಲಿ ಸಂಬಂಧಪಡುವ ವಿಧೇಯಕವನ್ನು ಸರಕಾರವು ಮಂಡಿಸಿದಾಗ, ಆತ ಅದರ ಬಗ್ಗೆ ಸಮಗ್ರ ಚರ್ಚೆ ನಡೆಸಿ ಆ ವಿಧೇಯಕದಲ್ಲಿ ಏನಾದರೂ ತಿದ್ದುಪಡಿಯ ಅವಶ್ಯಕತೆಯಿದ್ದರೆ ಸರಕಾರಕ್ಕೆ ಅದರ ಬಗ್ಗೆ ತಿಳಿಸಬೇಕು. ಇದಕ್ಕಾಗಿಯೇ ಮತದಾರ ಆ ಸಂಸದನನ್ನು ಆರಿಸಿ ಕಳಿಸಿರುತ್ತಾನೆ. ಆದರೆ ನಾವು
ಆರಿಸಿ ಕಳಿಸಿದವರಲ್ಲಿ ಎಷ್ಟು ಜನ ಸಂಸದರು ಇದನ್ನು ಸರಿಯಾಗಿ ಮಾಡುತ್ತಿದ್ದಾರೆ ಎಂಬುದನ್ನು ಅವಲೋಕಿಸಿ ನೋಡಲು, ಪ್ರಾಯಶಃ ಪ್ರತಿ ಹತ್ತರಲ್ಲಿ ಒಬ್ಬ ಸಂಸದ ಮಾತ್ರ ಈ ಕೆಲಸವನ್ನು ತಕ್ಕಮಟ್ಟಿಗೆ ಸಮರ್ಪಕವಾಗಿ ಮಾಡುತ್ತಿದ್ದಾನೆ ಎಂದು ಮನ ದಟ್ಟಾಗುತ್ತದೆ.
ಇದರರ್ಥ, ಸುಮಾರು ೯೦ ಪ್ರತಿಶತ ಸಂಸದರು ಅವರನ್ನು ಆರಿಸಿ ಕಳಿಸಿದ ಮೂಲ ಉದ್ದೇಶವನ್ನೇ ನೆರವೇರಿಸುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ, ಪಾಶ್ಚಿ ಮಾತ್ಯ ದೇಶಗಳಲ್ಲಿ ಆ ಸಂಸದ ನಂತರದ ಯಾವುದೇ ಚುನಾವಣೆಯಲ್ಲಿ ಗೆದ್ದು ಬರುವ ವಿಷಯವಿರಲಿ, ಖಂಡಿತ ತನ್ನ ಪಕ್ಷದ ಅಭ್ಯರ್ಥಿಯಾಗಿಯೂ ಆಯ್ಕೆಯಾಗುವುದಿಲ್ಲ. ಆದರೆ ಗರಬಡಿದವರಂತೆ ಕುಳಿತು, ನಿದ್ದೆ ಮಾಡುತ್ತ ಅಥವಾ ಕಲಾಪ ನಡೆಯುತ್ತಿರುವಾಗ ಹಾಜರಿರದೆ ಸಂಸತ್ತಿನಲ್ಲಿ ಕಾಲಕಳೆದು ತಮ್ಮ ಅರ್ಹತೆಗನುಗುಣವಾಗಿ ಭತ್ಯೆಗಳನ್ನು ಮತ್ತು ಇತರ ಸೌಲಭ್ಯಗಳನ್ನು ಮಾತ್ರ ತಪ್ಪದಂತೆ ಅನುಭವಿಸುವ ನಮ್ಮ ಎಷ್ಟೋ ಜನ ಸಂಸದರನ್ನು ಮತ್ತೆ ಮತ್ತೆ ನಾವು ಆರಿಸಿ ಕಳುಹಿಸುವುದೇಕೆ? ಇಷ್ಟೇ ಅಲ್ಲದೆ, ಒಂದು ಬಾರಿ ಸಂಸದರಾಗಿ ಆಯ್ಕೆಯಾದರೆ ಅವರಿಗೆ ಪಿಂಚಣಿಯನ್ನು ಪಡೆಯುವ ಅರ್ಹತೆಯೂ ಬರುತ್ತದೆ.
ಸಮರ್ಪಕವಾಗಿ ಕೆಲಸಮಾಡದ ಇಂಥ ಎಷ್ಟೋ ಸಂಸದರಿಗೆ ತೆರಿಗೆದಾರರ ಹಣದಿಂದ ಪಿಂಚಣಿಯನ್ನೂ ಪಾವತಿಸುವುದು ನಮ್ಮ ಪ್ರಜಾಪ್ರಭುತ್ವ
ವ್ಯವಸ್ಥೆಯ ವಿಡಂಬನೆಯಲ್ಲದೆ ಮತ್ತೇನೂ ಅಲ್ಲ. ಹೌದು, ಈ ಪ್ರಶ್ನೆಗೆ ಉತ್ತರ ನೀಡಲು ನಮ್ಮೆಲ್ಲರಿಗೂ ಸಮಾನ ಜವಾಬ್ದಾರಿಯಿದೆ. ಬ್ರಿಟಿಷ್ ಸಂಸತ್ತಿ
ನಲ್ಲಿ ಒಂದು ದಿವಸಕ್ಕೆ ಸರಾಸರಿ ಎಂಟೂವರೆ ಗಂಟೆ ಗಳ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆಯುತ್ತವೆ. ಆದರೆ ನಮ್ಮಲ್ಲಿ ಸಾಮಾನ್ಯವಾಗಿ ೩ ಗಂಟೆಗಳಿಗಿಂತ ಹೆಚ್ಚು ಸಮಯ ಕಾರ್ಯಕಲಾಪಗಳು ನಡೆ ದರೆ ಅದೇ ಒಂದು ದೊಡ್ಡ ಸಾಧನೆ.
ಬಹುಪಾಲು ಸಮಯವನ್ನು ಸದಸ್ಯರು ಗದ್ದಲ ಮತ್ತು ವೃಥಾ ಕಾಲಹರಣ ಮಾಡುವುದರಲ್ಲಿ ಕಳೆದು, ಆಗಬೇಕಾದ ಚರ್ಚೆ, ಮಾತುಕತೆಗೆ ಸ್ವಲ್ಪವೂ ಆಸ್ಪದವಿಲ್ಲದಂತೆ ಮಾಡುತ್ತಾರೆ. ಇವೆಲ್ಲದಕ್ಕೂ ಮೂಲ ಕಾರಣವೆಂದರೆ ನಮ್ಮ ದೇಶದಲ್ಲಿ ಸಂಸದರಾಗಲು ಯಾವುದೇ ಕನಿಷ್ಠ ವಿದ್ಯಾರ್ಹತೆಯ ಅವಶ್ಯಕತೆಯಿಲ್ಲದಿರುವುದು. ಹೀಗಾಗಿ ತಮ್ಮ ಕ್ಷೇತ್ರದ ಬಗ್ಗೆಯೇ ಏಕೆ, ಕೆಲವೊಮ್ಮೆ ತಮ್ಮ ಬಗ್ಗೆಯೇ ಸರಿಯಾದ ತಿಳಿವಳಿಕೆಯಿಲ್ಲದ ಅಜ್ಞಾನಮೂರ್ತಿ ಗಳೂ ಕೋಟ್ಯಂತರ ಜನರ ಪ್ರತಿನಿಧಿಗಳಾಗುತ್ತಾರೆ. ಸಂಸತ್ ಭವನವನ್ನು ಹೊಕ್ಕು ತಮ್ಮ ಅಜ್ಞಾನವನ್ನು ಪ್ರದರ್ಶಿಸಲು ನಾಚಿಕೆಯಾಗಿ, ಮೌನವಾಗಿ ಕುಳಿತು ಅಽವೇಶನ ಮುಗಿದ ನಂತರ ಎದ್ದುಬರುತ್ತಾರೆ.
ಇದರಿಂದಾಗಿ ಇವರು ಪ್ರತಿನಿಧಿಸುವ ಮತಕ್ಷೇತ್ರಗಳು ದಶಕಗಳೇ ಕಳೆದರೂ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ನಿರ್ಲಕ್ಷ್ಯದ ಆಗರಗಳಾಗಿ ಕೊಳೆಯು ತ್ತಿರುತ್ತವೆ. ಪರಿಸ್ಥಿತಿ ಹೀಗಿರಲು, ಭಾರತದ ಸಂಸದೀಯ ವ್ಯವಸ್ಥೆ ಕಾರ್ಯನಿರ್ವಹಿಸುವ ರೀತಿಯು ದೇಶದ ಪ್ರಜೆಗಳ ಆಶೋತ್ತರಗಳನ್ನು ಸಮರ್ಪಕವಾಗಿ ಎತ್ತಿಹಿಡಿಯುವಂತೆ ಇದೆಯೇ ಎಂದು ನಾವು ನೋಡಬೇಕಾದ ಮತ್ತು ಅದರಲ್ಲಿ ಅಳವಡಿಸಬೇಕಾದ ಸುಧಾರಣೆಗಳೆಡೆಗೆ ಗಮನ ಹರಿಸಬೇಕಾದ ತುರ್ತು ಈಗ ಇದೆ. ಭಾರತೀಯ ಸಂಸದೀಯ ವ್ಯವಸ್ಥೆಯಲ್ಲಿ ಹಲವಾರು ದೋಷಗಳಿದ್ದು, ಇವನ್ನು ಸಂಸದೀಯ ಕಾರ್ಯಕಲಾಪಗಳಲ್ಲಿ ನುರಿತವರು ಮತ್ತು ರಾಜಕೀಯ ವಿಮರ್ಶಕರು ಗುರುತಿಸಿದ್ದಾರೆ.
ಕೆಲವು ಪ್ರಮುಖ ನ್ಯೂನತೆಗಳು ಹೀಗಿವೆ:
ದುರ್ಬಲ ವಿರೋಧ ಪಕ್ಷಗಳು: ಪ್ರಸ್ತುತ ಭಾರತೀಯ ಸಂಸದೀಯ ವ್ಯವಸ್ಥೆಯು ಆಡಳಿತ ಪಕ್ಷದ ಪ್ರಾಬಲ್ಯ ಹೊಂದಿದ್ದು, ಇದು ಸಾಮಾನ್ಯವಾಗಿ ಲೋಕಸಭೆಯಲ್ಲಿ ಹೆಚ್ಚಿನ ಬಹುಮತ ಹೊಂದಿರುವ ಪಕ್ಷದ ಕಡೆಗೆ ಬಲವಾಗಿ ತಿರುಗಿದೆ. ಇದರಿಂದಾಗಿ ಸರಕಾರದ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡಲು ಮತ್ತು ಆಡಳಿತ ಪಕ್ಷವು ಜಾರಿ ಗೊಳಿಸುವ ಶಾಸನವನ್ನು ಪರಿಣಾಮಕಾರಿಯಾಗಿ ಪ್ರಶ್ನಿಸಲು ಪ್ರತಿಪಕ್ಷಗಳಿಗೆ ಕಷ್ಟವಾಗುತ್ತದೆ.
ಪಕ್ಷದ ಪ್ರಾಬಲ್ಯ: ಭಾರತೀಯ ಸಂಸದೀಯ ವ್ಯವಸ್ಥೆಯು ಪ್ರಬಲವಾದ ಪಕ್ಷಕ್ಕೇ ಅನುಕೂಲವಾಗುವ ಹಾಗೆ ಅಗತ್ಯಕ್ಕಿಂತ ಹೆಚ್ಚಾಗಿ ಏರ್ಪಟ್ಟಿದೆ.
ರಾಜಕೀಯ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಮತ್ತು ಸಂಸದರು ಸಾಮಾನ್ಯವಾಗಿ ತಮ್ಮ ಪಕ್ಷದ ನಾಯಕರ
ನಿಯಂತ್ರಣದಲ್ಲಿರುತ್ತಾರೆ. ಹೀಗಾಗಿ ನಿರ್ದಿಷ್ಟ ವಿಷಯದ ಬಗ್ಗೆ ಪಕ್ಷದ ನಿಲುವನ್ನು ಒಪ್ಪದೆ ಹೋದರೂ ಸಂಸದರು ಪಕ್ಷ ಹೇಳಿದಂತೆ ಮತ
ಚಲಾಯಿಸುವುದನ್ನು ಅನಿವಾರ್ಯವನ್ನಾಗಿಸುತ್ತದೆ.
ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಕೊರತೆ: ಭಾರತದ ಸಂಸದೀಯ ವ್ಯವಸ್ಥೆಯು ತನ್ನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆ
ಯಿಂದಾಗಿ ಆಗಾಗ್ಗೆ ಟೀಕೆಗೊಳಗಾಗುತ್ತಿರುತ್ತದೆ. ನಿರ್ಧಾರ ತೆಗೆದುಕೊಳ್ಳುವ ತನ್ನ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸುವ ಅಗತ್ಯ
ಸರಕಾರಕ್ಕಿಲ್ಲ ಮತ್ತು ಈ ವಿಷಯಕ್ಕೆ ಸಂಬಂಧಿಸಿ ಸರಕಾರವನ್ನು ಕಟ್ಟಿಹಾಕಲು ಸಂಸದರಿಗೆ ಬಹಳ ಕಷ್ಟವಾಗುತ್ತದೆ.
ಭ್ರಷ್ಟಾಚಾರ: ಭಾರತೀಯ ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವು ಒಂದು ಪ್ರಮುಖ ಸಮಸ್ಯೆಯಾಗಿದ್ದು, ಸಂಸದೀಯ ವ್ಯವಸ್ಥೆಯೂ ಇದಕ್ಕೆ
ಹೊರತಾಗಿಲ್ಲ. ಸಂಸದರು ಲಂಚ, ಸ್ವಜನ ಪಕ್ಷಪಾತ, ಸಾರ್ವಜನಿಕ ಹಣ ದುರುಪಯೋಗ ಸೇರಿದಂತೆ ವಿವಿಧ ರೀತಿಯಲ್ಲಿ ಭ್ರಷ್ಟಾಚಾರದ ಆರೋಪ ಗಳನ್ನು ಎದುರಿಸುತ್ತಿದ್ದಾರೆ.
ಕಡಿಮೆ ಉತ್ಪಾದಕತೆ: ಭಾರತೀಯ ಸಂಸತ್ತು ಕಡಿಮೆ ಉತ್ಪಾದಕತೆಗೆ ಹೆಸರುವಾಸಿಯಾಗಿದೆ. ಸಂಸತ್ತಿನ ಅಧಿವೇಶನ ಸಾಮಾನ್ಯವಾಗಿ ಅಲ್ಪಾವಧಿಗೆ ನಡೆ
ಯುತ್ತದೆ ಮತ್ತು ಬಾಕಿ ಉಳಿದಿರುವ ಶಾಸನಗಳ ದೊಡ್ಡಪಟ್ಟಿ ಹಾಗೆಯೇ ಉಳಿಯುತ್ತದೆ. ಪ್ರತಿಪಕ್ಷಗಳ ಪ್ರತಿಭಟನೆಯಿಂದ ಉಂಟಾಗುವ ಅವಾಂತರಗ
ಳಿಂದಾಗಿ ಮತ್ತು ಶಾಸನವು ಜಾರಿಗೆ ಬರದಿರಬಹುದು ಎಂಬ ಸಂಶಯದೊಂದಿಗೆ ಅದನ್ನು ಮಂಡಿಸಲು ಸರಕಾರವು ಹಿಂದೇಟು ಹಾಕುತ್ತದೆ. ಹೀಗೆ ಹಲವು
ಅಂಶಗಳಿಂದಾಗಿ ಒಳ್ಳೆಯ ಜನಸ್ನೇಹಿ ಶಾಸನಗಳು ಜಾರಿಗೆ ಬರುವುದಿಲ್ಲ. ನಮ್ಮ ಸಂಸದೀಯ ವ್ಯವಸ್ಥೆಯಲ್ಲಿನ ಈ ದೋಷಗಳು ಹಲವಾರು ಸಮಸ್ಯೆಗಳಿಗೆ
ಕಾರಣವಾಗಿವೆ, ಅವುಗಳೆಂದರೆ:
ದುರ್ಬಲಗೊಂಡ ಪ್ರಜಾಪ್ರಭುತ್ವ: ಆಡಳಿತ ಪಕ್ಷದ ಪ್ರಾಬಲ್ಯ ಮತ್ತು ಪ್ರಬಲ ಪ್ರತಿಪಕ್ಷದ ಕೊರತೆಯು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲ
ಗೊಳಿಸಿದೆ. ಹೆಚ್ಚಿನ ಪರಿಶೀಲನೆಯಿಲ್ಲದೆ ಶಾಸನದ ಅಂಗೀಕಾರ ಪಡೆಯಲು ಸರಕಾರಕ್ಕೆ ಸಾಧ್ಯವಾಗುತ್ತದೆ ಮತ್ತು ಪ್ರತಿಪಕ್ಷಗಳಿಗೆ ಸರಕಾರದ ಹೊಣೆಗಾರಿ ಕೆಯ ಮೇಲೆ ಒತ್ತಡ ಹೇರಲು ಕಷ್ಟವಾಗುತ್ತದೆ.
ನೀತಿ ಪಾರ್ಶ್ವವಾಯು: ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ಒಮ್ಮತದ ಕೊರತೆಯು ಹಲವಾರು ಕ್ಷೇತ್ರಗಳಲ್ಲಿ ನೀತಿ ಪಾರ್ಶ್ವವಾಯುವಿಗೆ
ಕಾರಣವಾಗಿದೆ. ಪ್ರಮುಖ ಕಾನೂನುಗಳನ್ನು ಜಾರಿಗೆ ತರಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಮತ್ತು ಇದರಿಂದ ಭಾರತದ ಆರ್ಥಿಕ ಮತ್ತು ಸಾಮಾಜಿಕ
ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ.
ಸಾರ್ವಜನಿಕ ಸಿನಿಕತನ: ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆ ಕುಸಿದಿದೆ. ಸರಕಾರಗಳ ಭ್ರಷ್ಟ ನಡೆ ಮತ್ತು ಅದಕ್ಷತೆ ಒಂದು ಗಂಭೀರ ಸಮಸ್ಯೆಯಾಗಿದೆ. ಇದು ರಾಜಕೀಯ ವ್ಯವಸ್ಥೆಯ ನ್ಯಾಯಸಮ್ಮತತೆಯನ್ನು ಹಾಳುಮಾಡುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮತದಾರರಾಗಿ ನಾವು ಮಾಡಬೇಕಾದುದೇನೆಂದರೆ ಚುನಾವಣೆಯ ದಿನದಂದು ತಪ್ಪದೆ ಮತ ನೀಡಬೇಕು. ಚುನಾವಣಾ ಕಣದಲ್ಲಿರುವ ಪ್ರತಿಯೊಬ್ಬ ಅಭ್ಯರ್ಥಿ ಎಷ್ಟರ ಮಟ್ಟಿಗೆ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಯೋಗ್ಯತೆಯುಳ್ಳವನೆಂಬುದನ್ನು ಸರಿಯಾಗಿ ವಿಶ್ಲೇಷಿಸಿ ಮತ ಚಲಾ ಯಿಸಬೇಕು.
ಹಾಗೆಯೇ ಆತನ ವಿದ್ಯಾರ್ಹತೆ, ಆತ ಸಮಾಜಕ್ಕೆ ಅಲ್ಲಿಯತನಕ ಮಾಡಿದ ಸೇವೆ ಇಂಥ ವಿಷಯಗಳನ್ನು ಪರಿಗಣಿಸಿಯೇ ಮತನೀಡಬೇಕು. ನಮ್ಮ
ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಿ, ಸಂಸತ್ ಅಧಿವೇಶನದಲ್ಲಿ ಎಲ್ಲಕ್ಕಿಂತ ಮೊದಲು ಜನಪ್ರತಿನಿಧಿಗಳಿಗೆ ಕನಿಷ್ಠಪಕ್ಷ ಪದವಿಯ ವಿದ್ಯಾರ್ಹತೆಯಿರ
ಬೇಕೆಂಬ ವಿಧೇಯಕವನ್ನು ಸರ್ವಾನುಮತದಿಂದ ಅನುಮೋದಿಸಿ ಕಾನೂನು ಜಾರಿಮಾಡುವಂತೆ ಒತ್ತಡ ಹೇರಬೇಕು. ಆಗ ವಿದ್ಯಾರ್ಹತೆಯೇ ಇಲ್ಲದೆ
ತಮಗಿಂತ ಎಷ್ಟೋ ವಿದ್ಯಾವಂತರಾದ ಜನರನ್ನು ಪ್ರತಿನಿಧಿಸುವ ಧೂರ್ತ ಸಂಸದರ ಪರಂಪರೆ ಕೊನೆಗೊಳ್ಳುತ್ತದೆ.
ದೇಶವು ಪ್ರಗತಿ ಪಥದಲ್ಲಿ ಸಾಗುತ್ತದೆ. ಪ್ರಜೆಗಳ ಸುಖ, ಆರ್ಥಿಕ ಅಭಿವೃದ್ಧಿ ಹಾಗೂ ಸುರಕ್ಷತೆ ಹೆಚ್ಚುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)