ಇಣಕು ನೋಟ ಯಾರಿಗೂ ಯಾವಾಗಲೂ ಪ್ರಿಯ. ಮುಚ್ಚಿದ ಬಾಗಿಲು, ಕದ ನಮಗೆ ಕುತೂಹಲಕ್ಕೆ ಒಂದು ಮೂಕ ಕರೆ, ಅದು ತುಸು ಬಿರುಕು ಬಿಟ್ಟರಂತೂ ಸರಿಯೇ. ಅಲ್ಲಿ ಅಧಿಕ ಪ್ರಸಂಗಿಯ ಕಣ್ಣು ಅಂಟಿಕೊಳ್ಳದೆ ಬಿಡುವುದೇ ಇಲ್ಲ. ಆದರೆ ಅನೇಕ ಸಲ ವಿಪರೀತ ಕುತೂಹಲ ಕ್ಷೇಮಕರವಲ್ಲವೆಂಬುದೇ ಲೋಕಾನುಭವವು. ಆಂಗ್ಲ ಭಾಷೆಯಲ್ಲಿ ‘‘ಪೀಪಿಂಗ್ ಟಾಂ’’ ಎಂಬುದೊಂದು ವಾಕ್ ಪ್ರಯೋಗವಿದೆ. ಟಾಮ್ ಒಬ್ಬ ಅಧಿಕಪ್ರಸಂಗಿಯಾಗಿ ಅತಿ ಕುತೂಹಲಿ, ನೋಡಲಾರ ದ್ದನ್ನು ನೋಡಲು ಹೋಗಿ ಕಣ್ಣು ಕುಕ್ಕಿಸಿಕೊಂಡಂತೆ. ಇಣಕಿ ನೋಡಲು ಕಣ್ಣು ಬಿಟ್ಟು ಈ ಬಡಪಾಯಿ ಕುರುಡಾದನು. ಅದು ಹೇಗೆ?
-ಗೌರೀಶ ಕಾಯ್ಕಿಣಿ
ಇಂದು ಹಿರಿಯ ಸಾಹಿತಿ ಗೌರೀಶ ಕಾಯ್ಕಿಣಿಯವರ 108ನೆಯ ಜನ್ಮದಿನ. ಅವರು ಬರೆದ ಈ ಒಂದು ಬರಹವನ್ನು ಓದುವುದ ರೊಂದಿಗೆ ಆ ಹಿರಿಯ ಚೇತನಕ್ಕೆ ಗೌರವ ಸಲ್ಲಿಸೋಣ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಗೌರೀಶ ಕಾಯ್ಕಿಣಿ ಯವರು 1937ರಿಂದ 1976ರ ತನಕ ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1973ರಲ್ಲಿ ಆದರ್ಶ ಶಿಕ್ಷಕ ಗೌರವಕ್ಕೆ ಭಾಜನರಾದರು.
ಸುಮಾರು 50ಕ್ಕೂ ಹೆಚ್ಚು ಪುಸ್ತಕಗಳನ್ನು, ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುವ ಕಾಯ್ಕಿಣಿಯವರು, ಕನ್ನಡದ ಜತೆ ಮರಾಠಿ, ಕೊಂಕಣಿ, ಇಂಗ್ಲಿಷ್‌ನಲ್ಲೂ ಬರೆದಿದ್ದಾರೆ. ಖ್ಯಾತ ಲೇಖಕ, ಕವಿ ಜಯಂತ ಕಾಯ್ಕಿಣಿಯವರು ಗೌರೀಶ ಕಾಯ್ಕಿಣಿಯವರ ಪುತ್ರ. ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ (1980), ವರ್ಧಮಾನ ಪ್ರಶಸ್ತಿ (1992), ರಾಜ್ಯೋತ್ಸವ ಪ್ರಶಸ್ತಿ (1993), ಕ.ವಿ.ವಿ.ಗೌರವ ಡಾಕ್ಟೊರೇಟ್ (1993), ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿ (1996), ಉಗ್ರಾಣ ಪ್ರಶಸ್ತಿ (1998) ಜಚನಿ
ವಿಚಾರ ಸಾಹಿತ್ಯ ಪ್ರಶಸ್ತಿ (2000) ಮೊದಲಾದ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಗೌರೀಶ ಕಾಯ್ಕಿಣಿಯವರು 16.11.2002 ರಂದು ಗೋಕರ್ಣದಲ್ಲಿ ಸ್ವರ್ಗಸ್ಥರಾದರು.
ಮರ್ಸಿಯಾ ಎಂಬುದೊಂದು ಚಿಕ್ಕ ರಾಜ್ಯ, ಯುರೋಪಿನಲ್ಲಿ. ಅಲ್ಲಿಯ ಸರದಾರ ಲಿಯೋಫ್ರಿಕ್. ಈ ರಾಜ್ಯ ಅವನದೇ ಜಾಗೀರು, ಅದಕ್ಕೆ ಅವನೇ ದೊರೆ. ಆದರೆ ಲಿಯೋಫ್ರಿಕ್ ಒಬ್ಬ ಕ್ರೂರ – ಕಠೋರ ಆಳರಸನಾಗಿದ್ದನು. ತನ್ನ ಪ್ರಜೆಗಳನ್ನು ಚಿಕ್ಕ ಪುಟ್ಟ ನೆವಕ್ಕೆ ಪೀಡಿಸುತ್ತಿದ್ದನು. ಆದರೆ ಅವನ ಹೆಂಡತಿ ಗಾಡಿವಾ ಹಾಗಲ್ಲ, ಗಂಡನಿಗೆ ಸರಿವಿರುದ್ಧ ಮಹಾಸಾಧ್ವಿ ಶಿರೋಮಣಿ. ಅವಳಿಗೆ ಪ್ರಜೆಯೆಂದರೆ, ತನ್ನ ಮಕ್ಕಳಂತೆ, ಅವಳಿಗೆ ಮಕ್ಕಳೂ ಇದ್ದಿಲ್ಲ, ಗಂಡನೆಷ್ಟು ನಿಷ್ಠುರನೋ ಹೆಂಡತಿ ಅಷ್ಟೇ ನಯವಿನಯವಂತೆ, ಅವಳ ರೂಪಕ್ಕೆ ಅವಳ ಗುಣವೇ ಸರಿಸಾಟಿ. ಪರಮ ಸುಂದರಿ, ಪರಮ ಪತಿವ್ರತೆ, ರಾವಣನಿಗೆ ಮಂಡೋದರಿಯಿದ್ದಂತೆ.
ದೊರೆ ಲಿಯೋಫ್ರಿಕನ ದಬ್ಬಾಳಿಕೆಯ ಜುಲುಮೆ ಜಬರುಗಳಿಂದ ಪಾರಾಗಲು ಪ್ರಜೆಗೆ ಒಂದೇ ಉಪಾಯ ಗೊತ್ತಿತ್ತು.
ದೊರೆಸಾನಿ ಗಾಡಿವಾಳನ್ನು ಮೊರೆ ಹೊಕ್ಕುವುದು. ಒಮ್ಮೆ ಹಾಗೆಯೇ ಆಯಿತು. ಲಿಯೋಫ್ರಿಕ್ ಕಾವೆಂಟ್ರಿ ಎಂಬ ಒಂದು ವಟ್ಟಳಾದ ಜನರ ಮೇಲೆ ಭಾರಿ ಕರವನ್ನು ಹೇರಿದನು. ಅಲ್ಲಿಯ ಪ್ರಜೆಗೆ ಅದು ತಲೆಭಾರವಾಯಿತು. ತೆರಿಗೆ ತೆತ್ತು ಸಾಯಲು
ತಪ್ಪಿದರೂ ಸಾಯುವುದು ತಪ್ಪದು. ದಂಡ ತೆರುವದೆಂದರೆ ತಲೆದಂಡವೇ! ಮಾಡುವದೇನು? ಕಾವೆಂಟ್ರಿಯ ಪ್ರಜೆಯೆಲ್ಲ ರಾಣಿಯಲ್ಲಿಗೆ ಧಾವಿಸಿದರು. ಈ ತೆರಿಗೆಯಿಂದ ತಮ್ಮನ್ನು ಉಳಿಸೆಂದು ಮೊರೆಯಿಟ್ಟರು. ಸಾದ್ವಿ ಗಾಡಿವಾ ಅವರಿಗೆ ಅಭಯವಿತ್ತಳು. ಅವಳಿಗೂ ತನ್ನ ಗಂಡನು ಪ್ರಜೆಗಳಿಗೆ ಹೀಗೆ ಗಂಡಾಂತರಕ್ಕೆ ಕಾರಣನಾದದ್ದು ಏನೂ ಸೇರಲಿಲ್ಲ. ಪ್ರಜೆಗಳ ಪೀಡಾ ಪರಿಹಾರಕ್ಕಾಗಿ ಆಕೆ ಏನು ಮಾಡಲೂ ಸಿದ್ದಳಾದಳು.
ಅಂದು ರಾತ್ರಿ ಅಂತಃಪುರದಲ್ಲಿ ಗಾಡಿವಾ ಲಿಯೊಫ್ರಿಕ್‌ನನ್ನು ಏಕಾಂತದಲ್ಲಿ ಈ ಕುರಿತು ಕೇಳಿದಳು. ಲಿಯೊಫ್ರಿಕ್ ಪಜೆಗೆ ನಿರ್ದಯ
ಪೀಡಕನಾಗಿದ್ದರೂ ಗಾಡಿವಾಳನ್ನು ಮನವಾರೆ ಪ್ರೀತಿಸುತ್ತಿದ್ದನು. ಆ ರಾತ್ರಿ ಆತ ತುಂಬ ಗೆಲುವಿನಲ್ಲಿ ಇದ್ದುದ್ದನ್ನು ಕಂಡು ರಾಣಿಯು ಈ ತೆರಿಗೆಯ ಪ್ರಸ್ತಾಪವೆತ್ತಿದಳು. ಅದನ್ನು ತೆಗೆದುಹಾಕಲು ಬೇಡಿಕೊಂಡಳು. ಲಿಯೊಫ್ರಿಕ್ ಯಾವ ಲಹರಿಯಲ್ಲಿ
ಓಲಾಡುತ್ತಿದ್ದನೋ! ತುಂಬ ಪರಿಹಾಸದಲ್ಲಿ ಅಂದುಬಿಟ್ಟ – ‘‘ನೋಡು ಚಿನ್ನ, ನಿನ್ನ ಇಷ್ಟದಂತೆಯೇ ಆಗಲಿ, ಆದರೆ ನನ್ನದೊಂದು ಶರ್ತು’’
‘‘ಅದೇನು ದೊರೆ?’’
ಆತ ನಕ್ಕು ಅಂದನು- ‘‘ಏನಿಲ್ಲ, ನೀನು
ನಡುಹಗಲಿನಲ್ಲಿ ನಗರದ ಬೀದಿಯಲ್ಲಿ
ಬೆತ್ತಲೆಯಾಗಿ ಕುದುರೆಯನ್ನೇರಿ ಸಾಗಬೇಕು.
ಅಂದರೆ ನಾನು ಆ ಕರವನ್ನು ರದ್ದು
ಮಾಡುತ್ತೇನೆ.’’
ಗಾಡಿವಾ ಒಂದು ಕ್ಷಣ ಅಪ್ರತಿಭಳಾದಳು.
ಇದೆಂಥ ವಿಕೃತ ಹಟ! ಆದರೆ ಮರುಕ್ಷಣವೆ
ಅವಳಿಗೆ ಅನಿಸಿತು. ನಗರದ ಜನಕ್ಕೆಲ್ಲ
ಪರಿಹಾರದ ಸಂತೋಷ ದೊರೆಯುವದಾದರೆ
ಬೆತ್ತಲೆಯಾಗಿ ಬೆತ್ತಲೆಯಾಗಿ ಬೀದಿಯಲ್ಲಿ
ಸಾಗಿ ಬಂದರೆ ನನಗಾಗುವ ನಷ್ಟವೇನು? ಈ
ಪ್ರಜೆಯೆಲ್ಲ ನನ್ನ ಮಕ್ಕಳೆ ತಾನೆ? ಕೂಡಲೆ ಆ
ವಿಚಿತ್ರ ಶರ್ತನ್ನು ಒಪ್ಪಿಕೊಂಡಳು, ಅವಳಿಗೆ
ಗೊತ್ತು ಗಂಡ ಹಠಮಾರಿ, ಹೆಮ್ಮಾರಿ, ಆದರೂ
ಪ್ರಾಮಾಣಿಕ, ತುಂಬ ಹೆಮ್ಮೆಯ ವ್ಯಕ್ತಿ.
ಮರುದಿನ ರಾಣಿ ಗಾಡಿವಾ
ರಾಜಮಾರ್ಗದಲ್ಲಿ ನಗ್ನಳಾಗಿ ಕುದುರೆಯೇರಿ
ಸಾಗಿ ಬರುವಳೆಂದೂ, ಆ ಸಮಯಕ್ಕೆ
ಜನರೆಲ್ಲರೂ ತಮ್ಮ ತಮ್ಮ ಮನೆಯೊಳಗೇ
ಇದ್ದು ಹೊರಗೆ ತಲೆ ಹಾಕತಕ್ಕದ್ದಲ್ಲವೆಂದೂ
ಗಾಡಿವಾ ಡಂಗುರ ಹೊಯಿಸಿದಳು.
ಮಧ್ಯಾಹ್ನಕ್ಕೆ ಅಶ್ವಾರೋಹಿಣಿಯಾಗಿ
ರಾಣಿಯು ಬೀದಿಯಲ್ಲಿ ಹೊರಟಳು.
ನಾಗರಿಕರೆಲ್ಲರೂ ತಮ್ಮ ಬಾಗಿಲು ಕಿಟಕಿ
ಗಳನ್ನೆಲ್ಲ ಮುಚ್ಚಿಕೊಂಡಿದ್ದರು. ರಾಣಿಯ
ಮಾತೆಂದರೆ ಅವರಿಗೆ ಮಹಾಪ್ರಸಾದ,
ಅವಳು ಅವರಿಗೆ ಮಹಾತಾಯಿ, ಅವಳನ್ನು
ಬೆತ್ತಲೆ ನೋಡುವ ಧೈರ್ಯ ಯಾರಿಗಿದೆ?
ಅಲ್ಲದೆ ಆಕೆ ಮಹಾಪತಿವ್ರತೆ, ಅವಳ ತೇಜಸ್ಸು
ಯಾರ ಕಣ್ಣಿಗೆ ದಕ್ಕಿತು?
ರೂಪಸುಂದರಿ ಗಾಡಿವಾ ಕುದುರೆಯ
ಮೇಲೆ ಕುಳಿತು ರಾಜಮಾರ್ಗದಲ್ಲಿ ನಡೆದು
ಬಂದಳು – ರಾಜನಿಟ್ಟ ಶರ್ತನ್ನು ಪ್ರಜೆಯ
ಕಲ್ಯಾಣಕ್ಕಾಗಿ ಪೂರ್ತಿ ಮಾಡಲಿಕ್ಕೆ. ಬೀದಿ-ಕೇರಿ -ಮನೆ-ಮಹಡಿ-ಜಗುಲಿಗಳೆಲ್ಲ ನಿರ್ಜನ ಶೂನ್ಯ.
ಆದರೆ ಥಾಮಸ್ ಅಥವಾ ಟಾಂ ಒಬ್ಬ ಅಸಾಧ್ಯ ಅಧಿಕಪ್ರಸಂಗಿ. ತಿಳಿಗೇಡಿಯಿದ್ದಷ್ಟೇ ಕಿಡಿಗೇಡಿ, ಈತನಿಗೆ ಸುಮ್ಮನೆ ಬಿದ್ದಿರುವ
ದಾಗಲಿಲ್ಲ. ಕೂತಲ್ಲಿಂದಲೇ ಕೊಂಚ ಕದ ತೆರೆದು ಕುತ್ತಿಗೆ ಹೊರಚಾಚಿ ರಾಣಿಯತ್ತ ಕಣ್ಣು ಹಾಯಿಸಿಯೇ ಬಿಟ್ಟನು ಮತ್ತು
ತಕ್ಷಣವೇ ಕುರುಡಾಗಿಬಿಟ್ಟನು. ಸಾದ್ವಿ ಗಾಡಿವಾಳ ಸಾತ್ವಿಕ ಸೌಂದರ್ಯದ ತೇಜಸ್ಸು ಅವನ ಆ ತುಂಟ ಕಣ್ಣುಗಳನ್ನು ಕುಕ್ಕಿತು.
ಇಣಕಿ ನೋಡಿದ ಟಾಂ- ‘‘ಪೀಪಿಂಗ್ ಟಾಂ’’-ತನ್ನ ವಿಪರೀತ ಕುತೂಹಲದ ಫಲವಾಗಿ ಕಣ್ಣನ್ನೇ ಕಳೆದುಕೊಂಡನು.
ನಮ್ಮಲ್ಲಿ ಸತಿ ಅನಸೂಯೆಯಿಂದ ತ್ರಿಮೂರ್ತಿಗಳು ನಗ್ನಭಿಕ್ಷೆ ಬೇಡಿದ ಪುರಾಣ ಕಥೆಯು ಪ್ರಸಿದ್ಧವಾಗಿದೆ. ಆದರೆ ಈ ಗಾಡಿವಾಳ ಅಥವಾ ಇಣಕಿ ನೋಡಿದ ಟಾಂನ ಕಥೆ ಅದಕ್ಕಿಂತ ಪ್ರಭಾವಿಯಾಗಿದೆ.