ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಸೃಷ್ಟಿ, ಸ್ಥಿತಿ, ಲಯಗಳು ರಾಗ, ತಾಳ, ಪಲ್ಲವಿಗಳಿದ್ದಂತೆ. ಒಂದಕ್ಕೊಂದು ಪೂರಕ, ಒಂದರ ಮೇಲೊಂದು ಅವಲಂಬಿತ. ಇದಕ್ಕೆ ಸರಳ ಹಾಗೂ ಪರಿಣಾಮಕಾರಿ ಉದಾಹರಣೆ ಜೇನ್ನೊಣ.
ನಿಸರ್ಗದ ಆಹಾರಚಕ್ರದಲ್ಲಿ ಅದರ ಪಾತ್ರ ಬೆಕ್ಕಸಬೆರಗಾಗುವಷ್ಟು ದೊಡ್ಡದು. ಪರಾಗಾಧಾನದಲ್ಲಿ ದುಂಬಿ, ಕಣಜ, ಪಾತರಗಿತ್ತಿ ಮುಂತಾದ ಕೀಟಗಳು ಪಾಲ್ಗೊಳ್ಳುತ್ತವಾದರೂ ಜೇನ್ನೊಣ ಮುಖ್ಯ ಪಾತ್ರಧಾರಿ. ವಿಶ್ವದ ಶೇಕಡಾ 90 ಭಾಗ ಜನ ಆಹಾರಕ್ಕಾಗಿ ಅವಲಂಬಿತವಾಗಿರುವ ಮೊದಲ ನೂರು ಸಸ್ಯವರ್ಗಗಳಲ್ಲಿ 70 ಉಳಿದುಕೊಂಡಿರುವುದು ಜೇನ್ನೊಣದ ದಿವ್ಯಸ್ಪರ್ಶದಿಂದ.
ಪರಾಗಸ್ಪರ್ಶದಿಂದ ವಾರ್ಷಿಕವಾಗಿ ಲಭಿಸುವ ಆಹಾರೋತ್ಪನ್ನದ ಮೌಲ್ಯ ಸುಮಾರು 500 ಬಿಲಿಯನ್ ಡಾಲರ್. ಕಾಫಿ, ಮೆಣಸು, ಬಾದಾಮಿ, ಸೂರ್ಯ ಕಾಂತಿ, ಕೋಕೊ, ಸೇಬು, ಆಲೂಗಡ್ಡೆ, ಈರುಳ್ಳಿ, ಟೊಮೇಟೊ, ಕ್ಯಾರಟ್, ಹೂಕೋಸು, ಪಪಾಯ, ಸೌತೆಕಾಯಿ – ಹೀಗೆ ಅನೇಕಾನೇಕ ಬೆಳೆಗಳ ಸಂತಾನೋತ್ಪತ್ತಿಗೆ ಕಾರಣ ಜೇನ್ನೊಣ. ಅಂಟಾರ್ಟಿಕಾ ಬಿಟ್ಟರೆ ಜೇನ್ನೊಣವಿಲ್ಲದ ಭೂಖಂಡವಿಲ್ಲ – ಅದು ಸರ್ವವ್ಯಾಪಿ.
ಜೇನ್ನೊಣ ಮರೆಯಾದರೆ ಮನುಷ್ಯ, ಪ್ರಾಣಿ, ಪಕ್ಷಿಗಳಿಗಾವುದಕ್ಕೂ ಉಳಿಗಾಲವಿಲ್ಲ. ಕರೋನಾ ಹೊಡೆತದಿಂದ ಮನುಕುಲ ಚೇತರಿಸಿಕೊಳ್ಳುತ್ತದೆ, ಆದರೆ ಜೇನ್ನೊಣ ಅಳಿದರೆ ಅದೂ ನಶಿಸಿಹೋಗುತ್ತದೆ. ಅಂತಹ ಜೇನ್ನೊಣದ ಅಸ್ತಿತ್ವಕ್ಕೆ ಸಂಚಕಾರ ತಂದಿದ್ದು ಅಮೆರಿಕ – ಜಂಭದಿಂದ ತನ್ನನ್ನು ತಾನು U S of A ಎಂದು ಕರೆದುಕೊಳ್ಳುವ ಅಮೆರಿಕ. ವುಹಾನ್ ವೈರಸನ್ನು ವಿಶ್ವದ ಅನೇಕ ರಾಷಗಳಿಗೆ ರಫ್ತು ಮಾಡಿದ ಚೀನಾದ ಕೊರಳುಪಟ್ಟಿ ಹಿಡಿದ ಅಮೆರಿಕ ತನಗಾದ ಅಪಾರ ಹಾನಿಗೆ ಪರಿಹಾರ ಬೇಡಿದ್ದು ಸರಿಯೇ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಅದು ತನ್ನದೇ ವಾತಾವರಣದ ಮೂರನೇ ಒಂದು ಭಾಗದಷ್ಟು ಜೇನ್ನೊಣಗಳನ್ನು ಬಲಿ ತೆಗೆದು ಕೊಂಡಿದೆ. ಅದರಿಂದಾ ದ ಅಪಾರ ಹಾನಿಗೆ ಯಾರೂ ಪರಿಹಾರ ನೀಡಲಾರರು. ಸುಮಾರು ಎರಡು ದಶಕಗಳ ಹಿಂದೆ ಜರ್ಮನಿಯ ಬಯರ್ (Bayar) ಕಂಪನಿ ತಯಾರಿಸಿದ ನಿಯೊನಿಕೋಟಿನಾಯ್ಡ ಎಂಬ ಕೀಟನಾಶಕವನ್ನು ಅಮೆರಿಕದ ಬೆಳೆಗಾರರು ಬಳಸಲಾರಂಭಿಸಿದರು.
ನಿಯಾನಿಕ್ಸ್ ಎಂದೂ ಕರೆಯಲ್ಪಡುವ ಆ ವಿಷಪೂರಿತ ಕೀಟನಾಶಕ ಜೇನ್ನೊಣಗಳಿಗೆ ಮಾರಕವಾಯಿತು. ಹಣದ ಮುಂದೆ ಉಳಿದೆಲ್ಲವೂ ಗೌಣ ಎಂಬುದನ್ನೇ ರಾಜನೀತಿಯನ್ನಾಗಿಸಿದ ಅಮೆರಿಕದ ಕೃಷಿಗೆ ಇದರಿಂದಾಗಿ ಮರ್ಮಾಘಾತವಾಗಿದೆ. ಮೆಕ್ಕೆ ಜೋಳ, ಸೂರ್ಯಕಾಂತಿ, ಬಾದಾಮಿಯೇ ಮೊದಲಾದ ಬೆಳೆಗಳಿಗೆ ದೊಡ್ಡ ಪೆಟ್ಟು. ಸ್ವಯಂ ಜೇನಿನ ಉತ್ಪಾದನೆಯೇ ಕುಸಿದಿದೆ. ಬಾದಾಮಿ ಉತ್ಪಾದನೆಯಲ್ಲಿ ಕ್ಯಾಲಿಫೋರ್ನಿಯಾದ್ದು ಮೇಲುಗೈ.
ಸುಮಾರು ಮೂರು ಬಿಲಿಯನ್ ಡಾಲರ್‌ನಷ್ಟು ವಾರ್ಷಿಕ ವಹಿವಾಟಿರುವ ಬಾದಾಮಿ ಬೆಳೆ ಸಂಪೂರ್ಣವಾಗಿ ಅವಲಂಬಿಸಿರು ವುದೇ ಜೇನ್ನೊಣದ ಕ್ರಿಯಾಶೀಲತೆಯನ್ನು. ಅದೀಗ ಹಳ್ಳ ಹಿಡಿದಿದೆ. ಅಮೆರಿಕವಲ್ಲದೆ, ವಿಶ್ವದ ಬೇರೆ ಭಾಗಗಳಲ್ಲೂ ಜೇನ್ನೊಣದ ಸಂಖ್ಯೆ ಕ್ಷೀಣಿಸುವುದಕ್ಕೆ ಕಾರಣ ಹುಡುಕಲು ನಡೆಸಿದ ವ್ಯಾಪಕ ಅಧ್ಯಯನಗಳು ನಿಯಾನಿಕ್ಸ್‌ನತ್ತ ಬೆಟ್ಟು ತೋರಿಸಿವೆ. ಆದರೂ ಅದನ್ನು ದೇಶಾದ್ಯಂತ ಬಳಸಲು ಯೋಗ್ಯವೆಂದು ರಹದಾರಿ ನೀಡಿದ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.
ಯಾನಿಕ್ಸ್‌ನಂಥ ವಿಷವನ್ನು ಭೂಮಿಗೆ ಉಣಿಸಲು ಹಿಂದೆಮುಂದೆ ನೋಡದೆ ತನ್ನ ಕಾಲಿನ ಮೇಲೆ ತಾನು ಚಪ್ಪಡಿ ಎಳೆದುಕೊಂಡ ಅಮೆರಿಕವನ್ನು ಮುಂದುವರೆದ ರಾಷ್ಟ್ರವೆಂದು ಹೇಗಾದರೂ ಪರಿಗಣಿಸಲಾದೀತು. ಹಾಗಂತ ಇದು ಅಮೆರಿಕ ಮಾಡಿದ ಮೊದಲ ಅಪರಾಧವಲ್ಲ!
ಜೇನ್ನೊಣದ ಹಿರಿಮೆಯನ್ನು ಹಾಡಿ ಹೊಗಳಲು ಈ ಒಂದು ವೇದಿಕೆಯ ವ್ಯಾಪ್ತಿ ಸಾಕಾಗುವುದಿಲ್ಲ. ನಮ್ಮ ಅನೇಕ ಡಾಕ್ಟರೇಟ್ ಅಲಂಕೃತ ಮಹನೀಯರುಗಳಿಗಿಂತಲೂ ಹೆಚ್ಚಿನ ಮಹತ್ವ ಈ ಒಂದು ನಿರ್ಲಕ್ಷಿಸಲ್ಪಟ್ಟ ಕೀಟಕ್ಕಿದೆ. ಅವರುಗಳಿಗಿಂತಲೂ ಎಷ್ಟೋ ಪಟ್ಟು ಸಾರ್ಥಕ ಜೀವನ ಜೇನ್ನೊಣದ್ದು. ಪರಾಗಸ್ಪರ್ಶ ಅದರ ಜೀವಿತದ ಒಂದು ಮುಖ್ಯ ಅಂಶವಷ್ಟೆ. ಜೇನ್ನೊಣನಾದ ಪರಾಗಸ್ಪರ್ಶದಿಂದ ಸಂಪನ್ನವಾದ ಸೌತೆಕಾಯಿ, ಅವಕ್ಯಾಡೊ ಮುಂತಾದ ಫಲಗಳ ಇಳುವರಿ ಮೂರುಪಟ್ಟು ಅಥವಾ ಅದಕ್ಕಿಂತ ಹೆಚ್ಚಾಗುವುದು ಸರ್ವೇ ಸಾಮಾನ್ಯ.
ಜೇನ್ನೊಣದ ಮೆದುಳಿನ ಪ್ರೋಟೀನಿನ ರಚನೆಯನ್ನಾಧರಿಸಿ ನಡೆಸಿದ ಸಂಶೋಧನೆಯಿಂದ ಮನುಷ್ಯರ ವೃದ್ಧಾಪ್ಯದಲ್ಲಿ ಕಾಡುವ ಮರೆವು ಆಲ್ಜೀಮರ್ಸ್ ಮುಂತಾದ ರುಜಿನಗಳಿಗೆ ಪರಿಹಾರ ಒದಗಿಸುವ ಸಾಧ್ಯತೆ ಕಾಣುತ್ತಿದೆ. ಜೇನು ಸಾಕಣೆಯಲ್ಲಿ ತೊಡಗಿಸಿ ಕೊಂಡ ಗ್ರಾಮೀಣ ಬ್ರಿಟಿಷ್ ಕುಟುಂಬಗಳ ಸಂಪ್ರದಾಯವೊಂದಿದೆ. ಕುಟುಂಬದಲ್ಲಿ ಯಾರಾದರೂ ಗತಿಸಿದರೆ, ಮನೆಯೊಡತಿ ಅಥವಾ ಮನೆಯೊಡೆಯ ಜೇನುಗೂಡಿನ ಮುಂದೆ ಹೋಗಿ ಮೃದು ದನಿಯಲ್ಲಿ ಸಾವಿನ ಸುದ್ದಿಯನ್ನು ತಿಳಿಸುವುದು.
ಸೆಲ್ಟಿಕ್ ಪುರಾಣ ರೀತ್ಯ ಜೇನ್ನೊಣ ಭೌತಿಕ ಲೋಕಕ್ಕೂ, ಅತಿಮಾನುಷ ಲೋಕಕ್ಕೂ ಸಂಪರ್ಕವನ್ನು ಬೆಸೆಯುತ್ತದಾದ್ದರಿಂದ ಅದರ ಮುಂದೆ ದುಗುಡ ದಲ್ಲಿ ಅರುಹಿದ ಮಾಹಿತಿಯನ್ನು ಜೇನ್ನೊಣ ಅಗಲಿದವರಿಗೆ ಮುಟ್ಟಿಸುತ್ತದೆ. ಹಾಗೆಯೇ, ಜೇನ್ನೊಣಕ್ಕೆ ನೀನು ಇಲ್ಲಿಂದ ಕಾಲ್ತೆಗೆಯಬೇಡ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ಪರಿಪಾಠವೂ ಉಂಟು. ಸುಮಾರು 20000 ಜಾತಿಗಳಿಗೆ ಸೇರಿದ ಜೇನ್ನೊಣ ಜಗತ್ತಿನ ಮೂರನೇ ಒಂದು ಭಾಗದ ವ್ಯವಸಾಯೋತ್ಪತ್ತಿಗೆ ಕಾರಣವಾಗಿದೆ ಎಂದು ತಿಳಿದವರಿಗೆ ಈ ನಂಬಿಕೆಯ ಮೌಲ್ಯ ಅರ್ಥವಾಗುತ್ತದೆ.
ಒಂದು ವೇಳೆ, ಇದನ್ನು ಮೂಢನಂಬಿಕೆ ಎನ್ನುವುದಾದರೆ, ಇಂಥ ಮೌಢ್ಯಗಳು ಹೆಚ್ಚು ಹೆಚ್ಚು ಬೆಳೆಯಲಿ, ವಿಸ್ತಾರವಾಗಲಿ. ಕಾಮಧೇನುವಿನ ಪೋಷಣೆ, ಸಂರಕ್ಷಣೆಯಷ್ಟೇ ಮುಖ್ಯ ಜೇನ್ನೊಣದ ಪಾಲನೆ, ಸಂರಕ್ಷಣೆ. ಇದು ಕೇವಲ ಆರ್ಥಿಕತೆಯ ದೃಷ್ಟಿ ಯಿಂದಲ್ಲ, ಮನುಕುಲದ ಉಳಿವಿಗೂ ಸಕಲ ಜೀವಿಗಳ ಕ್ಷೇಮಾಭಿವೃದ್ಧಿ ಮುಖ್ಯ. ಈ ನಿಟ್ಟಿನಲ್ಲಿ, ಬಲುಮುಖ್ಯವಾದ ವಿಷಯ ವನ್ನು ಹಂಚಿಕೊಳ್ಳುವುದಿದೆ. ಜೇನ್ನೊಣ ವನ್ಯಸಂಪತ್ತಿನ ಮುಖ್ಯಭಾಗ.
ಅರಣ್ಯಗಳಲ್ಲಿನ ಜೇನ್ನೊಣಕ್ಕೆ ಕೀಟನಾಶಕಗಳ ಬಾಧೆಯಿಲ್ಲ. ಹಾಗಾಗಿಯೇ ಅವುಗಳು ನಿಶ್ಚಿಂತೆಯಿಂದ ಹಾರಾಡುತ್ತಲೇ ವನ್ಯಜೀವ ವೈವಿಧ್ಯವನ್ನೂ ಪೋಷಿಸುತ್ತದೆ. ಆದಿವಾಸಿಗಳೂ ವನ್ಯಸಂಪತ್ತಿನ ಒಂದು ಮುಖ್ಯಭಾಗವೇ. ಅಂತಹ ನೈಸರ್ಗಿಕ ಅರಣ್ಯಸಂರಕ್ಷಕರನ್ನು ನಾಗರಿಕತೆಯೆಂಬ ಅನಾಗರಿಕ ವ್ಯವಸ್ಥೆಗೆ ಎಳೆದು ತರಲು ಹಲವಾರು ಸ್ವಯಂಸೇವಾ ಸಂಸ್ಥೆಗಳು ಅವಿರತವಾಗಿ ಶ್ರಮಿಸುತ್ತಿವೆ. ಒಂದೇ ಒಂದು ಸರಳವಾದ ಉದಾಹರಣೆಯನ್ನು ನೀಡಿ ಮುಂದುವರೆಯುತ್ತೇನೆ.
ಸೋಪಿನ ಗಂಧವೇ ತಿಳಿಯದಿದ್ದ ಜೇನುಕುರುಬರಿಗೆ ಬಟ್ಟೆ ಒಗೆಯುವುದಕ್ಕೂ, ಸ್ನಾನಕ್ಕೂ ಸೋಪು ನೀಡುವಾಗ ಅವರು ಅವುಗಳನ್ನು ಬಳಸಿ ಹಾಳು ಗೆಡುವುದನ್ನು ನಾಗರಹೊಳೆಯ ಮೂಲದ ತೊರೆಯನ್ನೇ ಎಂಬ ವಿಷಯ ನೆನಪಿಡಬೇಕಾಗುತ್ತದೆ. ಜೇನುಕುರುಬರ ಪಾರಂಪರಿಕ ಜ್ಞಾನ ಅವರನ್ನು ಉದ್ಧಾರ ಮಾಡಹೊರಟವರು ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನದು. ಅದರಿಂದ ಪ್ರಯೋಜನ ಪಡೆದುಕೊಳ್ಳಬೇಕಾದವರು ನಾವು, ಆಧುನಿಕರು.
ಕಾಡುಗಳ್ಳರ ಚಲನವಲನಗಳ ಬಗ್ಗೆ ಮಾಹಿತಿ ಪಡೆಯುವಷ್ಟಕ್ಕೇ ವನ್ಯಸಂರಕ್ಷಣೆಯಲ್ಲಿ ಅವರ ಪಾತ್ರವನ್ನು ಸೀಮಿತಗೊಳಿಸ ಬಾರದು. ಸುಮಾರು ಏಳು ವರ್ಷಗಳ ಹಿಂದೆ, ಆಫ್ರಿಕಾದ ಸೊಮಾಲಿಲ್ಯಾಂಡ್‌ನಲ್ಲಿ (ಸೊಮಾಲಿಯಾ ಅಲ್ಲ), ವಿವಿಧರಂಗಗಳಲ್ಲಿ ಹೂಡಿಕೆದಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಅವಕಾಶ ನನಗೆ ಒದಗಿಬಂದಿತ್ತು. ವ್ಯವಸಾಯ, ಶಿಕ್ಷಣ, ಆಸ್ಪತ್ರೆ, ವೈದ್ಯಕೀಯ ಶಿಕ್ಷಣ, ಪ್ರವಾಸೋದ್ಯಮ, ಗಣಿ ಕೈಗಾರಿಕೆ ಮುಂತಾದ ಹಲವು ರಂಗಗಳಿಂದ ಉತ್ಸಾಹಿಗಳನ್ನು ಗುರುತಿಸಿ ಚರ್ಚಿಸಿದ್ದೆ.
ನೈಸರ್ಗಿಕ ಕೃಷಿಯನ್ನು ಅಲ್ಲಿ ಜನಪ್ರಿಯಗೊಳಿಸಲು ರೈತ – ಮಿತ್ರ ಸ್ವಾಮೀ ಆನಂದ್ ಮುಂದಾಗಿದ್ದರು. ಅವರು ಪಡೆಯಬಹು ದಾಗಿದ್ದ ಭೂಮಿಯ ವ್ಯಾಪ್ತಿಗೆ ಇರಲಿಲ್ಲ. ಅದಾಗ ತಾನೇ ಪರಿಚಯವಾಗಿದ್ದ ಛಾಯಾ ನಂಜಪ್ಪ ಮತ್ತು ಅನಂತರ ಅವರನ್ನು ಜತೆಗೂಡಿದ ನನ್ನ ಪರಿಚಯದ ರಾಜಪ್ಪ ತಮ್ಮ ಜೇನು ಕೃಷಿಯ ಕನಸನ್ನು ನನ್ನೊಡನೆ ಹಂಚಿಕೊಂಡಿದ್ದರು. ಅವರ ಅಸೀಮ ಕನಸಿನ ಕಲ್ಪನೆಗೆ ನನ್ನದೂ ಒಂದು ಪುಟ್ಟ ಕಾಣಿಕೆ ಇರುತ್ತಿತೇನೊ, ಆದರೆ ಆನಂದ್‌ಗೆ ಹೂಡಿಕೆದಾರರ ಬೆಂಬಲ ಸಿಗಲಿಲ್ಲ. ಜೇನುಸಾಕಾಣಿಕೆಯನ್ನು ಉತ್ತೇಜಿಸುವ ನನ್ನ ಕನಸೂ ಗರಿಗೆದರಲಿಲ್ಲ.
ವಿಜ್ಞಾನದ ವಿದ್ಯಾರ್ಥಿಯಾದರೂ ನಾನು ವೈಜ್ಞಾನಿಕವಾಗಿ ಪುರಾವೆ ಒದಗಿಸಲಾಗದ ನನ್ನದೇ ಒಂದು ತತ್ತ್ವವಿದೆ. ನಮ್ಮನ್ನು ಹೈರಾಣಾಗಿಸಿರುವ ಕರೋನಾ ವೈರಸ್ ನಿಸರ್ಗದಲ್ಲಿರುವುದೋ ಅಥವಾ ಚೀನೀ ಆಡಳಿತಾರೂಢರ ವಿಕೃತಿಯ ಫಲವೋ ಎಂಬ ಚರ್ಚೆ ನನಗೆ ಈ ಕ್ಷಣಕ್ಕೆ ಅಪ್ರಸ್ತುತ. ಆದರೆ, ಕರೋನಾದ ಅಬ್ಬರ ನಮ್ಮ ಹುಟ್ಟಡಗಿಸುವುದಕ್ಕೆ ಸಾಧ್ಯವಾಗಿರುವುದು ನಮ್ಮೆಲ್ಲರ ಸಂಘಟಿತ ವಿಕೃತಿಯಿಂದ. ಆ ವಿಕೃತಿಯಿಂದಾಗಿಯೇ ಜೇನ್ನೊಣ ಇಂದು ವಿನಾಶದ ಅಂಚಿಗೆ ಧಾವಿಸುತ್ತಿದೆ.
ಜೇನ್ನೊಣ ಮಿಥುನದಲ್ಲಿ ತೊಡಗುವುದು ಹೂವಿನ ಪಲ್ಲಂಗದ ಮೇಲಲ್ಲ, ಗಾಳಿಯಲ್ಲಿ. ತದನಂತರದಲ್ಲಿಯೇ ಗಂಡು ಜೇನು ಸಾವನ್ನಪ್ಪುತ್ತದೆ. ಸತ್ತ ನಂತರ ಸ್ವರ್ಗಕ್ಕೆ ಹೋಗುವುದಲ್ಲ, ಸ್ವರ್ಗಸುಖವನ್ನನುಭವಿಸಿ ಇಲ್ಲವಾಗುವುದು. ಅದೇಕೊ, ನಮ್ಮ ಅಲ್ಪಮತಿಯ ರಾಜಕಾರಣಿಗಳು ಮತ್ತೆ ನೆನಪಾಗುತ್ತಿದ್ದಾರೆ.