Monday, 16th September 2024

ಆಯ್ದ ನಕಾರಾತ್ಮಕ ಅಂಕಿಅಂಶಗಳ ಮೂಲಕ ದೇಶದ ತೇಜೋವಧೆಗೆ ಯತ್ನ!

ಅವಲೋಕನ 

ಗಣೇಶ್‌ ಭಟ್, ವಾರಣಾಸಿ

ನನ್ನ ಕಾಲೇಜು ದಿನಗಳಲ್ಲಿ ನಮ್ಮ ಸ್ಟಾಟಿಸ್ಟಿಕ್ಸ್ ಪ್ರೊಫೆಸರ್ ಒಬ್ಬರು ಸ್ಟಾಟಿಸ್ಟಿಕ್ಸ್‌ ಹಾಗೂ ಸ್ಟಾಟಿಸ್ಟೀಶಿಯನ್‌ಗಳ ಬಗ್ಗೆ ಒಂದು ಜೋಕ್ ಹೇಳುತ್ತಿದ್ದರು. ನದಿಯನ್ನು ದಾಟಲು ಬಯಸಿದ ಒಬ್ಬ ವ್ಯಕ್ತಿಯು ನದೀ ದಡದಲ್ಲಿದ್ದ ವ್ಯಕ್ತಿಯೋರ್ವನ ಬಳಿ ನದಿಯ
ಆಳದ ಬಗ್ಗೆ ವಿಚಾರಿಸುತ್ತಾನೆ.

ನದೀ ದಡದಲ್ಲಿದ್ದ ವ್ಯಕ್ತಿ ಸ್ಟಾಟಿಸ್ಟೀಶಿಯನ್(ಅಂಕಿಅಂಶ ತಜ್ಞ) ಆಗಿದ್ದ. ಅಂಕಿ ಅಂಶಗಳ ತಜ್ಞ ನದಿಯ ಆಳ ಸರಾಸರಿ ಮೂರು ಅಡಿಗಳಷ್ಟು ಎಂದು ಉತ್ತರಿಸಿದ. ನದಿಯ ಆಳ ಮೂರು ಅಡಿಗಳಷ್ಟು ಮಾತ್ರ ಎಂದು ನಂಬಿದ ವ್ಯಕ್ತಿ ನದಿಗೆ ಇಳಿದು ದಾಟಲು ಪ್ರಯತ್ನಿಸಿ ನಡುವೆ 8 ಅಡಿಯ ಆಳಕ್ಕೆ ಸಿಲುಕುತ್ತಾನೆ. ಹೊಂಡದಿಂದ ಹೇಗೋ ಬಚಾವಾಗಿ ಮೇಲೆ ಬಂದ ಆ ವ್ಯಕ್ತಿ ಅಂಕಿಅಂಶಗಳ
ತಜ್ಞನ ಬಳಿಗೆ ಬಂದು ನೀನು ಏಕೆ ನದಿಯ ಆಳ ಮೂರು ಅಡಿ ಮಾತ್ರ ಎಂದು ಸುಳ್ಳು ಹೇಳಿದೆ ಎಂದು ದಬಾಯಿಸಿದಾಗ, ತಜ್ಞ
ನಾನು ಹೇಳಿದುದು ನದಿಯ ಸರಾಸರಿ ಆಳ ಮಾತ್ರ.

ಆದರೆ ಕೆಲವು ಕಡೆ ನದಿ 8 ಅಡಿ ಆಳ ಇದ್ದರೆ, ಕೆಲವು ಕಡೆ ನದಿ ಅರ್ಧ ಅಡಿ ಮಾತ್ರ ಆಳ ಇರುತ್ತದೆ. ಇದರ ಸರಾಸರಿ ತೆಗೆದು ನಾನು
ನದಿಯ ಆಳ ಮೂರು ಅಡಿ ಎಂದು ಹೇಳಿದ್ದು ಎಂದು ಸಮಜಾಯಿಶಿ ಕೊಡುತ್ತಾನೆ. ಇದೇ ರೀತಿಯಲ್ಲಿ ಇತ್ತೀಚೆಗಿನ ದಿವಸಗಳಲ್ಲಿ ಆಯ್ದ ಅಂಕಿಅಂಶಗಳನ್ನು ಮಾತ್ರ ಎತ್ತಿ ತೋರಿಸಿ ದೇಶದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳೆಯುವ  ಪ್ರಯತ್ನ ವಾಗುತ್ತಿದೆ.

ಕೆಲವು ದಿವಸಗಳ ಹಿಂದೆ ಕಾಂಗ್ರೆಸ್ ಪಕ್ಷದ ಸಂಸದ ಶಶಿ ತರೂರ್ ಅವರು ಪಾಕಿಸ್ತಾನದ ಲಾಹೋರ್ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಮಾತನಾಡುತ್ತಾ ಭಾರತದಲ್ಲಿ ಕರೋನಾ ವೈರಸ್ ಮಹಾಮಾರಿಯ ನಿರ್ವಹಣೆಯು ಪಾಕಿಸ್ತಾನಕ್ಕಿಂತಲೂ ಕೆಳ ಮಟ್ಟದಲ್ಲಿದೆ ಎಂದು ಹೇಳಿ ಪಾಕಿಸ್ತಾನವನ್ನು ಹೊಗಳಿ ಭಾರತವನ್ನು ಹೀಯಾಳಿಸಿದ್ದರು. ಅವರ ಗುರಿ ಪ್ರಸ್ತುತ ದೇಶವನ್ನು ಆಳು ತ್ತಿರುವ ನರೇಂದ್ರ ಮೋದಿ ಸರಕಾರವಾಗಿದ್ದರೂ ಅವರ ಹೇಳಿಕೆಯಿಂದ ಹಾನಿಯಾದುದು ಭಾರತದ ಇಮೇಜ್‌ಗೆ.

ಪಾಕಿಸ್ತಾನದಲ್ಲಿ ಸುಳ್ಳು ಅಂಕಿ ಅಂಶಗಳ ಮೂಲಕ ಕರೋನಾ ಸತ್ಯಸ್ಥಿತಿಯನ್ನು ಮುಚ್ಚಿ ಹಾಕಲಾಗುತ್ತಿದೆ. ಭಾರತದಲ್ಲಿ ಇದೀಗ ದಿನವೊಂದಕ್ಕೆ ಸರಾಸರಿ 11 ಲಕ್ಷ ಮಂದಿಗೆ ಕರೋನಾ ಟೆಸ್ಟ್‌‌ಗಳನ್ನು ಮಾಡಲಾಗುತ್ತಿದೆ. ಪಾಕಿಸ್ತಾನದಲ್ಲಿ ದಿನವೊಂದಕ್ಕೆ ಸರಾಸರಿ 20 ಸಾವಿರ ಕರೋನಾ ಟೆಸ್ಟ್’‌‌ಗಳನ್ನು ಮಾತ್ರ ಮಾಡಲಾಗುತ್ತಿದೆ. ಭಾರತದಲ್ಲಿ ಇದೀಗ 9.2 ಕೋಟಿ ಮಂದಿಗೆ ಕರೋನಾ ಟೆಸ್ಟ್ ಅನ್ನು ಮಾಡಲಾಗಿದೆ. ಪಾಕಿಸ್ತಾನದಲ್ಲಿ ಇದುವರೆಗೆ 27 ಲಕ್ಷ ಮಂದಿಗೆ ಮಾತ್ರ ಕರೋನಾ ಟೆಸ್ಟ್‌ ಮಾಡಲಾಗಿದೆ.

ಭಾರತದಲ್ಲಿ ಜನಸಂಖ್ಯೆಯ ಶೇ.7ರಷ್ಟು ಜನರನ್ನು ಕರೋನಾ ಟೆಸ್ಟ್‌‌ಗೆ ಒಳಪಡಿಸಲಾಗಿದ್ದರೆ ಪಾಕಿಸ್ತಾನದಲ್ಲಿ ಇದುವರೆಗೆ ಶೇ.1.2 ರಷ್ಟು ಜನರನ್ನು ಮಾತ್ರ ಕರೋನಾ ತಪಾಸಣೆಗೆ ಒಳಪಡಿಸಲಾಗಿದೆ. ಜರ್ಮನಿಯ ಡ್ಯೂಷೆ ವೆಲೆ ಪತ್ರಿಕೆ ಹಾಗೂ ಇತರ ಕೆಲವು ಅಂತಾರಾಷ್ಟ್ರೀಯ ಪತ್ರಿಕೆಗಳು ಪಾಕಿಸ್ತಾನದಲ್ಲಿ ನಿಜವಾದ ಕರೋನಾ ಅಂಕಿಅಂಶಗಳನ್ನು ಮುಚ್ಚಿಟ್ಟು ಕಡಿಮೆ ಸಂಖ್ಯೆ ಗಳನ್ನು ತೋರಿಸಲಾಗುತ್ತಿದೆ ಎಂದಿವೆ. ಒಸಾಮಾ ಬಿನ್ ಲಾಡೆನ್, ದಾವೂದ್ ಇಬ್ರಾಹಿಂನಂಥ ಉಗ್ರರನ್ನೇ ತನ್ನಲ್ಲಿ ಬಚ್ಚಿಟ್ಟು ಕೊಂಡು ಹೊರ ಜಗತ್ತಿಗೆ ಸಭ್ಯನಂತೆ ಸೋಗು ಹಾಕಿದ್ದ ಪಾಕಿಸ್ತಾನವು ಕರೋನಾ ವಿಷಯದಲ್ಲಿ ಕೊಟ್ಟ ಅಂಕಿಅಂಶ ಗಳನ್ನು ನಂಬಲು ಸಾಧ್ಯವೇ ಇಲ್ಲ.

ಹೀಗಿರಲು ಪಾಕಿಸ್ತಾನವು ಕರೋನಾ ನಿರ್ವಹಣೆಯ ವಿಷಯದಲ್ಲಿ ಭಾರತಕ್ಕಿಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು
ಹೇಳುವುದರಲ್ಲಿ ಅರ್ಥವಿದೆಯೇ? ಇದೇ ರೀತಿ ಜಾಗತಿಕ ಹಸಿವಿನ ಸೂಚ್ಯಂಕದ(ಗ್ಲೋಬಲ್ಹಂಗರ್ ಇಂಡೆಕ್ಸ್‌) ಆಧಾರದಲ್ಲಿ ಭಾರತದ ಮಾನವನ್ನು ಹರಾಜು ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ವಿರೋಧ ಪಕ್ಷಗಳು ತಮ್ಮ ರಾಜಕೀಯ ಉದ್ದೇಶ ಗಳನ್ನು ಸಾಧಿಸಲು ಇಂತಹ ಆಯ್ದ ಅಂಕಿ ಅಂಶಗಳನ್ನು ಬಳಸಿಕೊಳ್ಳುತ್ತಿರುವುದು ಬಹಳ ದುರದೃಷ್ಟಕರ ವಿಚಾರ. ಕನ್ಸರ್ನ್ ವಲ್ಡರ್ ವೈಡ್ ಅನ್ನುವ ಹೆಸರಿನ ಅಮೆರಿಕಾದ ಸರಕಾರೇತರ ಸಂಸ್ಥೆಯು ಜಾಗತಿಕ ಹಸಿವಿನ ಸೂಚ್ಯಂಕದ ಪಟ್ಟಿಯನ್ನು ತಯಾ ರಿಸಿ ಪ್ರಕಟಿಸುತ್ತದೆ.

ಇದು ವಿಶ್ವ ಸಂಸ್ಥೆ ಅಥವಾ ವಿಶ್ವ ಆರೋಗ್ಯ ಸಂಸ್ಥೆಯಿಂದ ರೂಪಿಸಲ್ಪಟ್ಟ ಸಂಸ್ಥೆ ಅಲ್ಲ. ಈ ವರ್ಷ ಜಾಗತಿಕ ಹಸಿವಿನ ಸೂಚ್ಯಂಕದ ಪಟ್ಟಿಯಲ್ಲಿ ಭಾರತವು 94ನೇ ಸ್ಥಾನದಲ್ಲಿದೆ ಎಂದು ತೋರಿಸಲಾಗಿದೆ. ಬಾಂಗ್ಲಾದೇಶ, ಪಾಕಿಸ್ತಾನಗಳೂ ಹಸಿವಿನ ಸೂಚ್ಯಂಕ ಸಾಧನೆಯ ಪಟ್ಟಿಯಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿವೆ ಎಂಬುದು ಪ್ರಸ್ತುತ ಸರಕಾರದ ಮೇಲೆ ಇರುವ ತುಲನಾತ್ಮಕ ಟೀಕೆ. ಹಸಿವಿನ ಸೂಚ್ಯಂಕದ ವಿಚಾರವಾಗಿ 130 ಕೋಟಿ ಜನಸಂಖ್ಯೆ ಇರುವ ಬಹಳ ವಿಸ್ತಾರವಾದ ದೇಶ ಭಾರತದ ಅಂಕಿ ಅಂಶಗಳನ್ನು ಯಾವ ಮೂಲದಿಂದ ಸಂಗ್ರಹಿಸಲಾಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.

ಹಸಿವಿನ ಸೂಚ್ಯಂಕವನ್ನು ಪ್ರಕಟಿಸುವ ಈ ಸಂಸ್ಥೆಯು ದೇಶವೊಂದರ ಜನರ ಅಪೌಷ್ಟಿಕತೆಯ ಆಧಾರದಲ್ಲಿ, ಆ ದೇಶದ 5 ವರ್ಷದ ಮಕ್ಕಳಲ್ಲಿನ ಪ್ರಾಯಕ್ಕೆ ಅನುಗುಣವಾದ ತೂಕದ ಕೊರತೆ, ಈ ಮಕ್ಕಳಲ್ಲಿ ವಯಸ್ಸಿಗೆ ಅನುಗುಣವಾದ ದೈಹಿಕ ಬೆಳವಣಿಗೆಯ ಕೊರತೆ ಹಾಗೂ ಶಿಶು ಮರಣಗಳ ಆಧಾರದಲ್ಲಿ ಹಸಿವಿನ ಸೂಚ್ಯಂಕ ಪಟ್ಟಿಯನ್ನು ರಚಿಸಲಾಗಿದೆ ಎಂದಿದೆ. ಅಪೌಷ್ಟಿಕತೆ, ಶಿಶು ಮರಣ, ದೈಹಿಕ ಬೆಳವಣಿಗೆಯ ಕೊರತೆ ಮೊದಲಾದ ಅಂಶಗಳನ್ನು ಕೆಲವೇ ವರ್ಷಗಳ ವರ್ಷಗಳ ಅಂಕಿ ಅಂಶಗಳನ್ನಿಟ್ಟುಕೊಂಡು ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಇಂತಹ ಮೂಲಭೂತ ವಿಷಯ ಗಳಲ್ಲಿ ಆಗುತ್ತಿರುವ ಪರಿವರ್ತನೆ ಯನ್ನು ಗಮನಿಸಲು ಕನಿಷ್ಠ ಎರಡು ಮೂರು ದಶಕಗಳ ಅಂಕಿ ಅಂಶಗಳನ್ನು ಇಟ್ಟುಕೊಂಡು ವಿಶ್ಲೇಷಣೆಯನ್ನು ಮಾಡ ಬೇಕಾಗುತ್ತದೆ.

ಎರಡು ದಶಕಗಳ ಹಿಂದೆ ಭಾರತದಲ್ಲಿ ಪ್ರತೀ ಎರಡು ಮಕ್ಕಳಲ್ಲಿ ಒಂದು ಮಗುವು ಅಪೌಷ್ಟಿಕತೆಯಿಂದ ಬಳಲುತ್ತಿತ್ತು. 1990ರಲ್ಲಿ ವಾರ್ಷಿಕವಾಗಿ 1.25 ಕೋಟಿ ಶಿಶುಗಳು ಅವಧಿಪೂರ್ವ ಹೆರಿಗೆ ಅಪೌಷ್ಟಿಕತೆ, ಸೋಂಕು ಮೊದಲಾದವುಗಳಿಂದ ಸಾವಿಗೀಡಾಗು ತ್ತಿದ್ದವು. ಈಗ ಆ ಸಂಖ್ಯೆ ಸುಮಾರು 50 ಲಕ್ಷಗಳಿಗೆ ಇಳಿದಿದೆ. 1990ರ ಅವಧಿಯಲ್ಲಿ ಭಾರತದಲ್ಲಿ ಜನಿಸಿದ ಪ್ರತೀ ಸಾವಿರ ಶಿಶು ಗಳಲ್ಲಿ 126 ಮಕ್ಕಳು ಮರಣಿಸುತ್ತಿದ್ದರೆ 2019ರಲ್ಲಿ ಪ್ರತೀ ಸಾವಿರದಲ್ಲಿ ಮರಣಿಸುತ್ತಿರುವ ಮಕ್ಕಳ ಸಂಖ್ಯೆ 29ಕ್ಕೆ ಇಳಿದಿದೆ.

ಕಳೆದ 30 ವರ್ಷಗಳಲ್ಲಿ ಪ್ರತೀ ವರ್ಷ ಶಿಶುಮರಣಾ ಪ್ರಮಾಣ ಶೇ.4.5ರಷ್ಟು ಕಡಿಮೆಯಾಗುತ್ತಲೇ ಬಂದಿದೆ. 2014ರಲ್ಲಿ ಪ್ರತೀ ಸಾವಿರ ನವಜಾತ ಶಿಶುಗಳಲ್ಲಿ 36.9 ಶಿಶುಗಳು ಮರಣಿಸುತ್ತಿದ್ದರೆ, 2019-20ರಲ್ಲಿ ಪ್ರತೀ ಸಾವಿರ ನವಜಾತ ಶಿಶುಗಳಲ್ಲಿ ಮರಣದ ಪ್ರಮಾಣ 26ಕ್ಕೆ ಇಳಿದಿದೆ. 2017 ರಿಂದ ಕೇಂದ್ರ ಸರಕಾರವು ಗರ್ಭಿಣಿ ಮಹಿಳೆಯರು ಹಾಗೂ ಹಾಲೂಡಿಸುವ ತಾಯಂದಿರಿಗೆ ಅವರಿಗೆ ಪೋಷಕಾಹಾರಗಳನ್ನು ಸ್ವೀಕರಿಸಲು ನೆರವಾಗುವಂತೆ 6000 ರುಪಾಯಿಗಳ ಆರ್ಥಿಕ ಸಹಾಯ ನೀಡುತ್ತಿದೆ. ಸ್ವಚ್ಛ ಭಾರತ್ ಅಭಿಯಾನದ ಪರಿಣಾಮವಾಗಿ ದೇಶದ ಶೇ.99ರಷ್ಟು ಮನೆಗಳಿಗೆ ಶೌಚಾಲಯವು ಲಭಿಸಿದ್ದು ತೆರೆದ ಸ್ಥಳಗಳಲ್ಲಿ ಮಲ ವಿಸರ್ಜನೆ ಕಡಿಮೆಯಾಗುತ್ತಿದೆ. ಈ ಮೊದಲು ತೆರೆದ ಸ್ಥಳಗಳಲ್ಲಿ ಮಲವಿಸರ್ಜನೆಯ ಕಾರಣದಿಂದಾಗಿ ವಾರ್ಷಿಕವಾಗಿ ಸುಮಾರು 3 ಲಕ್ಷ ಮಕ್ಕಳು ವಿವಿಧ ಸೋಂಕಿಗೆ ಒಳಗಾಗಿ ಮರಣಿಸುತ್ತಿದ್ದರು.

ಎಲ್ಲರಿಗೂ ಶೌಚಾಲಯವು ಲಭಿಸಿದುದರಿಂದ ವಾರ್ಷಿಕವಾಗಿ 3 ಲಕ್ಷ ಮಕ್ಕಳ ಸಾವು ಸಂಭವಿಸುವುದನ್ನು ತಡೆದಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತದ ಸ್ವಚ್ಛ ಭಾರತ್ ಅಭಿಯಾನವನ್ನು ಹೊಗಳಿದೆ. 2017ರವರೆಗೆ ಪ್ರತೀ ವರ್ಷ ಮೆದುಳು ಜ್ವರಕ್ಕೆ
ಸಾವಿರಾರು ಮಕ್ಕಳು ಉತ್ತರಪ್ರದೇಶದಲ್ಲಿ ಸಾವಿಗೀಡಾಗುತ್ತಿದ್ದು 2017ರ ನಂತರ ಉತ್ತರಪ್ರದೇಶ ರಾಜ್ಯಾದ್ಯಂತ ಪ್ರತೀ ಮಗುವಿಗೆ ಲಸಿಕೆ ಹಾಕಿಕುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗಿದೆ. ಹಿಂದಿನ ವರ್ಷಗಳ ಸಾವುಗಳಿಗೆ ಹೋಲಿಸಿದರೆ 2019ರಲ್ಲಿ ಯುಪಿಯಲ್ಲಿ ಮೆದುಳು ಜ್ವರಕ್ಕೆ ಬಲಿಯಾದ ಮಕ್ಕಳ ಪ್ರಮಾಣದಲ್ಲಿ ಶೇ.99.9ರಷ್ಟು ಇಳಿಕೆಯಾಗಿದೆ. ಜಾಗತಿಕ ಹಸಿವಿನ ಸೂಚ್ಯಂಕವನ್ನು ರಚಿಸುವಾಗ ಈ ಮೇಲೆ ಕೊಡಲಾದ ಎಲ್ಲಾ ಅಂಶಗಳನ್ನು ಕನ್ಸರ್ನ್ ವಲ್ಡರ್ ವೈಡ್ ಸಂಸ್ಥೆಯು ಗಮನಿಸಿ ದೆಯೇ? ಬಹುಷಃ ಇಲ್ಲ!

ಇನ್ನು ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ಹಾಗೂ ಕರೋನಾ ಕಾರಣದ ಆರ್ಥಿಕ ಕುಸಿತವನ್ನಿಟ್ಟುಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಭಾರತದ ಜಿಡಿಪಿಯು ಕರೋನಾ ಕಾರಣದಿಂದ ಕುಸಿದಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ( ಐಎಮ್‌ಎಫ್) ಸಂಸ್ಥೆಯು ಬಾಂಗ್ಲಾ ದೇಶದ ತಲಾ ದೇಶೀಯ ಉತ್ಪಾದನೆ ಭಾರತದ ತಲಾ ದೇಶೀಯ ಉತ್ಪಾದನೆಗಿಂತ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿರುವುದು ಆರ್ಥಿಕತೆಯ ವಿಚಾರದಲ್ಲಿ ದೇಶದೊಳಗೆ ಮತ್ತೊಮ್ಮೆ ಚರ್ಚೆ ಗಳನ್ನು ಹುಟ್ಟುಹಾಕಿದೆ. ತಲಾ ದೇಶೀಯ ಉತ್ಪಾದನೆ ಎನ್ನುವುದು ಆರ್ಥಿಕ ಅಭಿವೃದ್ಧಿಯ ಒಂದು ಸೂಚ್ಯಂಕ ಮಾತ್ರ. ದೇಶಗಳ ನಡುವಿನ ಆರ್ಥಿಕತೆಯನ್ನು ತುಲನೆ ಮಾಡುವುದಿದ್ದರೆ ಇನ್ನೂ ಹಲವು ಸೂಚ್ಯಂಕಗಳು ಇವೆ. ಹಾಗಾಗಿ ತಲಾ ಜಿಡಿಪಿ ವಿಚಾರ ವೊಂದನ್ನೇ ಇಟ್ಟುಕೊಂಡು ಬಾಂಗ್ಲಾದೇಶ ಹಾಗೂ ಭಾರತದ ಆರ್ಥಿಕ ಅಭಿವೃದ್ಧಿಯನ್ನು ತುಲನೆ ಮಾಡುವ ಅಸಮಂಜಸ ಎನ್ನುತ್ತಾರೆ ಆರ್ಥಿಕ ತಜ್ಞರಾದ ಅರವಿಂದ ಸುಬ್ರಹ್ಮಣ್ಯಂ.

ಭಾರತದ ವಾರ್ಷಿಕ ಜಿಡಿಪಿ 2600 ಶತಕೋಟಿ ಅಮೇರಿಕನ್ ಡಾಲರ್. ಆದರೆ ಬಾಂಗ್ಲಾ ದೇಶದ ವಾರ್ಷಿಕ ಜಿಡಿಪಿ 275 ಶತಕೋಟಿ ಡಾಲರ್ ಗಳು. ಪ್ರಸ್ತುತ ಭಾರತದಲ್ಲಿ ಸಂಗ್ರಹವಿರುವ ವಿದೇಶೀ ವಿನಿಮಯದ ಪ್ರಮಾಣ 551 ಶತಕೋಟಿ ಡಾಲರ್‌ಗಳಾದರೆ ಬಾಂಗ್ಲಾದಲ್ಲಿ ಸಂಗ್ರಹವಿರುವ ವಿದೇಶೀ ವಿನಿಮಯದ ಪ್ರಮಾಣ 40 ಶತಕೋಟಿ ಡಾಲರ್ ಗಳು. ಪ್ರಸ್ತುತ ಬಾಂಗ್ಲಾದೇಶದಲ್ಲಿ ಸಂಗ್ರಹದಲ್ಲಿರುವ ವಿದೇಶಿ ವಿನಿಮಯಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಪ್ರಮಾಣದಲ್ಲಿ ನೇರ ವಿದೇಶಿ ಹೂಡಿಕೆ 2019-20ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಆಗಿದೆ. ಭಾರತವಿಂದು ಜಾಗತಿಕವಾಗಿ 6ನೇ ಅತೀ ದೊಡ್ಡ ಆರ್ಥಿಕ ಶಕ್ತಿ.

ಅತಿ ಹೆಚ್ಚು ನೇರ ವಿದೇಶಿ ಹೂಡಿಕೆ ಆಗುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವಿಂದು ಸ್ಥಾನವನ್ನು ಪಡೆದುಕೊಂಡಿದೆ. 7ನೇ ಅತೀ ಹೆಚ್ಚು ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿರುವ ದೇಶ ಭಾರತ. ಹೀಗಿರುವಾಗ ಕೇವಲ ತಲಾ ದೇಶೀಯ ಉತ್ಪನ್ನ ಎನ್ನುವ ಒಂದು ಅಂಕಿ ಅಂಶವನ್ನಿಟ್ಟುಕೊಂಡು ಬಾಂಗ್ಲಾದೇಶದೊಂದಿಗೆ ಹೋಲಿಕೆ ಮಾಡಿ ಭಾರತದ ಆರ್ಥಿಕತೆಯನ್ನು ಹೀಯಾಳಿಸು ವುದು ಸರಿಯೇ? ಭಾರತೀಯರು ಹೆಮ್ಮೆಪಟ್ಟುಕೊಳ್ಳಬಹುದಾದ ಬಹಳಷ್ಟು ಅಂಕಿಅಂಶಗಳು ನಮ್ಮ ಮುಂದಿವೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು ಭಾರತದ ಜಿಡಿಪಿ ಅಭಿವೃದ್ಧಿ ದರವು 2021ನೇ ಇಸವಿಯಲ್ಲಿ ಚೀನಾದ ಜಿಡಿಪಿ ಅಭಿವೃದ್ಧಿ ದರವನ್ನೂ ಮೀರಿಸಲಿದೆ ಎಂದು ಹೇಳಿದೆ. 2019-20ರಲ್ಲಿ ಭಾರತದಲ್ಲಿ 73.4 ಶತಕೋಟಿ ಡಾಲರ್‌ಗಳ ನೇರ ವಿದೇಶಿ ಹೂಡಿಕೆ ನಡೆದಿದೆ. ಜಾಗತಿಕವಾಗಿ ನೇರ ವಿದೇಶಿ ಹೂಡಿಕೆಯ ಪ್ರಮಾಣದಲ್ಲಿ ಶೇ.1 ಕುಸಿತವಾಗಿದ್ದರೂ ಭಾರತದಲ್ಲಾದ ನೇರ
ವಿದೇಶಿ ಹೂಡಿಕೆಯಲ್ಲಿ ಭಾರೀ ಹೆಚ್ಚಳವಾಗಿತ್ತು. 2020ರ ಕೋವಿಡ್ ಸಂಕಷ್ಟದ ಕಾಲದಲ್ಲೂ ಭಾರತದಲ್ಲಿ 21 ಶತಕೋಟಿ
ಡಾಲರ್‌ಗಳ ನೇರ ವಿದೇಶಿ ಹೂಡಿಕೆಯಾಗಿದೆ. 2014ರಲ್ಲಿ ಉದ್ಯಮ ಸ್ನೇಹಿ ರಾಷ್ಟ್ರಗಳ(ಈಜ್ ಆಫ್ ಡೂಯಿಂಗ್ ಬ್ಯುಸಿನೆಸ್) ಪಟ್ಟಿಯಲ್ಲಿ 142ನೇ ಸ್ಥಾನದಲ್ಲಿದ್ದ ಭಾರತವು 2019ರಲ್ಲಿ 63ನೇ ಸ್ಥಾನಕ್ಕೆ ಏರಿದ ಮಹತ್ತರ ಸಾಧನೆ ಮಾಡಿದೆ.

ಉತ್ತಮಗೊಂಡ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳು, ಕಡಿಮೆಗೊಂಡ ಭ್ರಷ್ಟಾಚಾರ, ಹೆಚ್ಚಿದ ಸರಕಾರಿ ಸ್ಪಂದನೆ ಮೊದಲಾದ ವಿಷಯಗಳು ಭಾರತವು ಈಜ್ ಆಫ್ ಡೂಯಿಂಗ್ ಬ್ಯುಸಿನೆಸ್ ಪಟ್ಟಿಯಲ್ಲಿ ಮೇಲೇರಲು ಸಹಾಯಕವಾದ ಅಂಶಗಳು.

ಇದರಿಂದಾಗಿ ಭಾರತದಲ್ಲಿ ನೇರ ವಿದೇಶಿ ಹೂಡಿಕೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಕಳೆದ 10 ವರ್ಷಗಳಲ್ಲಿ
ಭಾರತದಲ್ಲಿ ಸುಮಾರು 27 ಕೋಟಿ ಪ್ರಜೆಗಳನ್ನು ಬಡತನದ ರೇಖೆಯಿಂದ ಮೇಲೆತ್ತಲಾಗಿದೆ ಎಂದು ವಿಶ್ವ ಸಂಸ್ಥೆಯೇ ಹೇಳಿದೆ. ದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಇದ್ದ 18,452 ಹಳ್ಳಿಗಳಿಗೆ 1000 ದಿನಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಿ, 2.63 ಕೋಟಿ ಬಡವರ ಮನೆಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ದೇಶದ ಶೇ.99.93ರಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ವನ್ನು ಒದಗಿಸಲಾಗಿದೆ.

ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ 9 ಕೋಟಿ ಮನೆಗಳಿಗೆ ಉಚಿತವಾಗಿ ಶೌಚಾಲಯವನ್ನು ಕಟ್ಟಿಸಿ ಕೊಡಲಾಗಿದೆ. ಉಜ್ವಲ ಯೋಜನೆಯಡಿಯಲ್ಲಿ 8 ಕೋಟಿ ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಿಕೊಡಲಾಗಿದೆ.  ಭಾರತ ವಿಂದು ನವೀಕರಿಸಬಹುದಾದ ಇಂಧನದ ಉತ್ಪಾದನೆಯಲ್ಲಿ ಜಾಗತಿಕವಾಗಿ ಅಗ್ರಗಣ್ಯ ದೇಶವಾಗುವೆಡೆಗೆ ಹೆಜ್ಜೆ ಹಾಕುತ್ತಿದೆ. ಭಾರತವಿಂದು ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಇಂಟರ್‌ನ್ಯಾಷನಲ್ ಸೋಲಾರ್ ಅಲಾಯನ್ಸ್’ನ ನಾಯಕನ ಸ್ಥಾನವನ್ನು ಸತತವಾಗಿ ಎರಡನೇ ಬಾರಿಗೆ ಅಲಂಕರಿಸುತ್ತಿದೆ. ಆದರೆ ಕೆಲವರು ರಾಜಕೀಯ ಕಾರಣಕ್ಕಾಗಿ ಆಯ್ದ ಅಂಕಿ ಅಂಶಗಳನ್ನು ತೋರಿಸಿ ಭಾರತದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ.

ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ದೇಶಿಯವಾಗಿಯೇ ತಯಾರಿಸಲ್ಪಟ್ಟ ಭಾರತದ ಅತೀ ವೇಗದ ರೈಲು ಎಂದು ಗುರುತಿಸಲ್ಪಟ್ಟ ಟ್ರೈನ್ 18 (ವಂದೇ ಭಾರತ್ ಎಕ್ಸ್’‌ಪ್ರೆಸ್) ಪ್ರಾಯೋಗಿಕ ಹಂತದಲ್ಲಿ ಯಾವುದೋ ತಾಂತ್ರಿಕ ಅಡಚಣೆಯನ್ನು ಎದುರಿಸಿದುದನ್ನುಉಲ್ಲೇಖಿಸಿ ರಾಹುಲ್ ಗಾಂಧಿಯವರು ಇಡೀ ಮೇಕ್ ಇನ್ ಇಂಡಿಯಾ ಯೋಜನೆಯನ್ನೇ ಅಪಹಾಸ್ಯ ಮಾಡಿದ್ದರು. ಆದರೆ ದೆಹಲಿ ಮತ್ತು ವಾರಣಾಸಿಗಳ ನಡುವೆ ಸತತವಾಗಿ ಒಂದು ವರ್ಷದ ಕಾಲ (ಕರೋನಾ ಲಾಕ್‌ಡೌನ್ ಶುರು ವಾಗುವವರೆಗೂ) ಯಾವುದೇ ಅಡಚಣೆ ಹಾಗೂ ತಾಂತ್ರಿಕ ದೋಷವಿಲ್ಲದೆ ವಂದೇ ಭಾರತ್ ಎಕ್ಸ್’‌‌ಪ್ರೆಸ್ ಓಡಿರುವುದು ರಾಹುಲ್ ಅವರ ಟೀಕೆಯನ್ನು ಸುಳ್ಳಾಗಿಸಿದೆ.

ರಾಜಕೀಯ ಪಕ್ಷಗಳು ವಿರೋಧಕ್ಕಾಗಿ ವಿರೋಧ ಮಾಡದೆ ರಚನಾತ್ಮಕ ಟೀಕೆಯನ್ನು ಮಾಡುತ್ತಿದ್ದರೆ ಅದು ಪ್ರಜಾಪ್ರಭುತ್ವಕ್ಕೆ ಹಾಗೂ ದೇಶಕ್ಕೆ ಒಳಿತು. ಇಲ್ಲದಿದ್ದರೆ ಅದೊಂದು ದೇಶದ ಮೇಲೆ ಕೆಸರೆರಚುವ ನಕಾರಾತ್ಮಕ ಕೆಲಸವಾಗಲಿದೆ.

Leave a Reply

Your email address will not be published. Required fields are marked *