Sunday, 15th December 2024

ತಾಲಿಬಾನ್‌ ಪಾಕ್‌ ವಿರುದ್ದ ಮುಗಿಬಿದ್ದರೆ ಏನಾದೀತು ?

ಸಂಗತ

ವಿಜಯ್‌ ದರಡಾ

ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರದ ತಾಲಿಬಾನ್ ನಡೆಯನ್ನು ಗಮನಿಸಿದ ಟಿಟಿಪಿ ಪಾಕಿಸ್ತಾನ ದಲ್ಲಿ ಅದನ್ನು ಅನುಸರಿಸುವುದಕ್ಕೆ ಶುರು ಮಾಡಿದೆ. ಮೊದಲಿಗೆ ಅಲ್ಲಿ ಹಲವು ಬಣಗಳಿದ್ದವು. ಆದರೀಗ ಎಲ್ಲವೂ ವಿಲೀನಗೊಂಡಿವೆ. ಈ ಪರಿವರ್ತನೆಯಲ್ಲಿ ಆಫ್ಘಾನ್ ತಾಲಿಬಾನ್ ಪಾತ್ರ ದೊಡ್ಡದಿದೆ.

ನಾವೆಲ್ಲರೂ ಹೊಸ ವರುಷವನ್ನು ಹುರುಪಿನಿಂದ ಸ್ವಾಗತಿಸಿ ನವೋತ್ಸಾಹದೊಂದಿಗೆ ಸಂಭ್ರಮಿಸುತ್ತಿರುವಾಗ, ನಮ್ಮ ಮುಂದಿನ ಭವಿಷ್ಯಕ್ಕೆ ಮಾರಕವಾಗಬಲ್ಲ ಒಂದು ಘೋರ ಸಂಗತಿಯತ್ತ ನಿಮ್ಮ ಗಮನ ಸೆಳೆಯುತ್ತಿದ್ದೇನೆ. ನಮ್ಮ ಬದುಕಿನ ನೆಮ್ಮದಿಯನ್ನು ಹದಗೆಡಿ ಸುವ ನೀಚ ಉದ್ದೇಶಗಳನ್ನು ಯಾರು ಹೊಂದಿದ್ದಾರೆಂಬುದನ್ನು ಚರ್ಚಿಸುವ ಮುನ್ನ ನನ್ನ ಪ್ರಿಯ ಓದುಗರಿಗೆ ಹೊಸ ವರುಷದ ಶುಭಾಶಯಗಳನ್ನು ಮೊದಲಿಗೆ ಸಲ್ಲಿಸುತ್ತೇನೆ. ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವಲ್ಲಿ ನಿಮ್ಮ ಆರೋಗ್ಯ ಚೈತನ್ಯಗಳು ಶಕ್ತಿ ತುಂಬಲಿ ಎಂದು ಹಾರೈಸುತ್ತೇನೆ.

ಪಾಕಿಸ್ತಾನದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ನಿರತವಾಗಿರುವ ತೆಹ್ರಿಕ್-ಎ-ತಾಲಿಬಾನ್ (ಟಿಟಿಪಿ), ಪಾಕಿಸ್ತಾನದ ಅಧಿಕಾರದ ಗದ್ದುಗೆ ಹಿಡಿಯಲು ಮುಂದಾದಂತಿದೆ. ಇಂದು ನನ್ನನ್ನು ಬಹುವಾಗಿ ಕಾಡುತ್ತಿರುವ ಸಂಗತಿ. ಮೊದಲಿಗೆ ಇದು ನಿಮಗೆ ತರಾತುರಿಯ ಪ್ರಶ್ನೆ ಎಂದೆನಿಸಬಹುದು, ಆದರೆ ಉಗ್ರವಾದದ ಪ್ರತಿಪಾದಕರ ತಲೆಯಲ್ಲಿ ಇಂತಹದೊಂದು ಹುಳ ಕೆಲಸ ಮಾಡುತ್ತಿದೆ ಎಂಬುದನ್ನು ಮರೆಯದಿರಿ. ಪೂರ್ವ ಪಾಕಿಸ್ತಾನದಲ್ಲಿ ಶಾಂತಿ ಮತ್ತು ಭದ್ರತೆಯ ಹೆಸರಿನಲ್ಲಿ ಮು ಮಹಮದ್ ಒಮರ್ ತಾಲಿಬಾನ್ ಸೃಷ್ಟಿಸಿದ್ದನ್ನು ನೆನಪಿಸಿಕೊಳ್ಳಿ. ಇದು ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆದುಕೊಳ್ಳಬಹುದು ಎಂದು ಯಾರಾದರೂ ಊಹಿಸಿದ್ದರಾ? ಅಧಿಕಾರ ಕಳೆದುಕೊಂಡ ನಂತರದಲ್ಲಿ ಅದು ಅಮೆರಿಕಾದಂತಹ ಸೂಪರ್ ಪವರ್ ದೇಶವನ್ನು ಎದುರು ಹಾಕಿಕೊಂಡು ಕಾಡಿದ್ದು ನಮಗೆಲ್ಲ ಗೊತ್ತೇ ಇದೆ.

ಫ್ಘಾನ್ ತಾಲಿಬಾನ್ ಜತೆ ಸೇರಿ ಶಕ್ತಿಯುತವಾಗಿರುವ ಟಿಟಿಪಿ ಪಾಕಿಸ್ತಾನದ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಭಯವನ್ನು ಸೃಷ್ಟಿಸಿದೆ. ಅದರ ಪ್ರಾಬಲ್ಯ ವಜಿರಿಸ್ತಾನದಿಂದ ಖೈಬರ್ ಫಕ್ತೂನ್ ವರೆಗೂ ಹಬ್ಬಿದೆ. ಕಳೆದ ತಿಂಗಳು ಟಿಟಿಪಿ ನಡೆಸಿದ ಕಾರ್ಯಾ ಚರಣೆಯಲ್ಲಿ ಅದು ಹಲವಾರು ಮಿಲಿಟರಿ ಅಧಿಕಾರಿಗಳನ್ನು ಮತ್ತು ಜೈಲು ಅಧಿಕಾರಿಗಳನ್ನು ತನ್ನ ವಶಕ್ಕೆ ಪಡೆದಿದೆ.

2007ರಲ್ಲಿ ಪ್ರಾರಂಭವಾದ ಈ ಸಂಘಟನೆ 2009 ರಲ್ಲಿ ಮ್ಯಾರಿಯಟ್ ಹೋಟೆಲ್ ಮೇಲೆ ಬಾಂಬ್ ದಾಳಿ ನಡೆಸಿತ್ತು. ಆರ್ಮಿಯ ಕೇಂದ್ರಸ್ಥಾನ ಮತ್ತು ಪೇಶಾವರದ ಸೈನಿಕ ಶಾಲೆಯ ಮೇಲೂ ಅದು ದಾಳಿಗಳನ್ನು ಮಾಡಿತ್ತು. 130ಕ್ಕೂ ಹೆಚ್ಚು ಶಾಲಾ ಮಕ್ಕಳು ಹತರಾಗಿದ್ದರು. ಇಂತಹ ಹೀನಾತಿಹೀನ ಕೃತ್ಯಗಳನ್ನು ತಾನೇ ಮಾಡಿದ್ದು ಎಂದು ಹೇಳಿಕೊಳ್ಳುವ ದಾರ್ಷ್ಟ್ಯತನ ಬೇರೆ. ವಜಿರಿಸ್ತಾನ ಮತ್ತು ಫಕ್ತೂನಿನ ಅನೇಕ ಕಡೆಗಳಲ್ಲಿ ಟಿಟಿಪಿಯ ಉಗ್ರಪಡೆಗಳಿಗೆ ಅಲ್ಲಿನ ಪೊಲೀಸರು ಕೂಡ ಹೆದರುತ್ತಾರೆ.

ಇದೇ ಅಂಕಣದಲ್ಲಿ ಹಿಂದೊಮ್ಮೆ ಬರೆದಿದ್ದೆ, ನೀವು ನಿಮ್ಮ ಮನೆಯಲ್ಲಿ ಸಾಕುವ ಹಾವುಗಳು ಪಕ್ಕದ ಮನೆಯವರಿಗೆ ಮಾತ್ರ ಕಚ್ಚುತ್ತವೆಂಬುದು ಕೇವಲ ಭ್ರಮೆ. ಅದು ಹಾಗಾಗುವುದಿಲ್ಲ. ಒಂದಲ್ಲ ಒಂದು ದಿನ ಅವು ನಿಮ್ಮನ್ನೂ ಕಚ್ಚುತ್ತವೆ. ಪಾಕಿಸ್ತಾನ ದಗುತ್ತಿರುವುದು ಕೂಡ ಅದೇ ಆಗಿದೆ. ಮೊದಲ ಬಾರಿಗೆ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರದಲ್ಲಿ ತಾಲಿಬಾನಿನ ಕಣ್ಣು ನೆಟ್ಟಿದ್ದು ಪಾಕಿಸ್ತಾನದ ಕಡೆಗೆ.

ಏಕೆಂದರೆ ತಾಲಿಬಾನು ಹುಟ್ಟಿದ್ದು ಕೂಡ ಪಾಕಿಸ್ತಾನದ ಗರ್ಭದಿಂದಲೇ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಪ್ರಾಬಲ್ಯ ಮೆರೆದರೆ ಪಾಕಿಸ್ತಾನದಲ್ಲಿ ಟಿಟಿಪಿ ವಿಜೃಂಭಿಸತೊಡಗಿದೆ. ಶರಿಯಾ ಕಾನೂನಿನ ಅಡಿಯಲ್ಲಿ ಪಾಕಿಸ್ತಾನದಲ್ಲಿ ಆಳ್ವಿಕೆ ನಡೆಸುವುದಾಗಿ ಟಿಟಿಪಿ ಈಗಾಗಲೇ ಘೋಷಿಸಿದೆ. ಪಾಕಿಸ್ತಾನ ಅರ್ಮಿಯ ವಿರುದ್ಧ ಅದು ಆಂದೋಲನವನ್ನೇ ಶುರುಮಾಡಿದೆ. ಆರ್ಮಿ ಅಧಿಕಾರಿಗಳ
ಹತ್ಯೆ ಆಗುತ್ತಲೇ ಇದೆ. ಅಫ್ಘಾನದ ತಾಲಿಬಾನ್ ಟಿಟಿಪಿ ಉಪಟಳ ಮಟ್ಟಹಾಕಲು ಸಹಾಯ ಮಾಡಬಹುದೆಂದು ಪಾಕಿಸ್ತಾನ ನಿರೀಕ್ಷಿಸಿದ್ದರೆ, ಆಗಿರುವುದು ತದ್ವಿರುದ್ಧ.

ಅಷ್ಟೇ ಅಲ್ಲ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಉದ್ವಿಗ್ನತೆ ಏರ್ಪಟ್ಟಿದೆ. ಇಮ್ರಾನ್ ಖಾನ್ ಸರಕಾರ ಟಿಟಿಪಿ ಯನ್ನು ಹಿಮ್ಮೆಟ್ಟಿಸಲು ಹಿಂಜರಿದು ಅದರೊಂದಿಗೆ ಮಾತುಕತೆಗೆ ಮುಂದಾಗುವ ಮಟ್ಟಕ್ಕೆ ಬಂದಿದ್ದನ್ನು ಗಮನಿಸಿದರೆ ಟಿಟಿಪಿಯ ಶಕ್ತಿ ಎಷ್ಟಿದೆ ಎಂಬುದನ್ನು ಅಂದಾಜು ಮಾಡಬಹುದಾಗಿದೆ. ಈ ಬಗ್ಗೆ ಹಲವು ಸುತ್ತಿನ ಮಾತುಗಳಾದವು. ಜಿಗಾರ್ ಎಂಬ ಬುಡ ಕಟ್ಟು ಜನರ ನಾಯಕರು, ಉಲೇಮಾಗಳ ಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಅದರಲ್ಲಿ ಭಾಗವಹಿಸಿದ್ದರು.

ನಂತರದಲ್ಲಿ ಐಎಸ್‌ಐ ನ ಡೈರೆಕ್ಟರ್ ಜನರಲ್ ಫೈಜ್ ಹಮೀದ ಕೂಡ ಅದರಲ್ಲಿ ಸೇರ್ಪಡೆಯಾದರು. ತದನಂತರದಲ್ಲಿ ಒಂದು ತಿಂಗಳ ಕದನ ವಿರಾಮ ಘೋಷಣೆಯಾಯಿತು. ನಂತರದಲ್ಲಿ ಅದು ಅನಿರ್ದಿಷ್ಟವಾಗಿ ಮುನ್ನಡೆದು ಒಮರ್ ಖಾಲಿದ್
ಖೊರಸಾನಿ, ಅಫ್ಘಾನ್ ತಾಲಿಬಾನಿನ ಪ್ರಮುಖ ನಾಯಕನ ಹತ್ಯೆಯೂ ಆಯಿತು. ಕೆಲತಿಂಗಳು ಶಾಂತವಾಗಿದ್ದ ನಂತರದಲ್ಲಿ ಟಿಟಿಪಿ ತಕ್ಷಣಕ್ಕೆ ಕದನ ವಿರಾಮವನ್ನು ಮರೆತು ದಾಳಿಗಳಿಗೆ ಶುರುವಿಟ್ಟಿತು. ಸೆಪ್ಟೆಂಬರ್‌ನಿಂದ ಈವರೆಗೆ ಟಿಟಿಪಿ ಸುಮಾರು 130 ದಾಳಿಗಳನ್ನು ಮಾಡಿದೆ.

ಪ್ರತಿಯೊಂದು ದಾಳಿಯ ಹೊಣೆಯನ್ನೂ ಅದು ಮುಕ್ತವಾಗಿ ತನ್ನದೆಂದು ಹೇಳಿಕೊಂಡಿದೆ. ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರದ ತಾಲಿಬಾನ್ ನಡೆಯನ್ನು ಗಮನಿಸಿದ ಟಿಟಿಪಿ ಪಾಕಿಸ್ತಾನದಲ್ಲಿ ಅದನ್ನು ಅನುಸರಿಸುವುದಕ್ಕೆ ಶುರು
ಮಾಡಿದೆ. ಮೊದಲಿಗೆ ಅಲ್ಲಿ ಹಲವು ಬಣಗಳಿದ್ದವು. ಅವುಗಳ ನಡುವೆಯೇ ತಿಕ್ಕಾಟಗಳು ಕೂಡ ನಡೆಯುತ್ತಿದ್ದವು, ಆದರೀಗ ಎಲ್ಲವೂ ವಿಲೀನಗೊಂಡಿವೆ. ಈ ಪರಿವರ್ತನೆಯಲ್ಲಿ ಆಫ್ಘಾನ್ ತಾಲಿಬಾನ್ ಪಾತ್ರ ದೊಡ್ಡದಿದೆ. ಇದೀಗ ನೂರ್ ವಲಿ ಮೆಹ್ಸೂದ್
ನಾಯಕತ್ವದಲ್ಲಿ ಟಿಟಿಪಿ ಇನ್ನಷ್ಟು ಬಲಶಾಲಿಯಾಗಿದೆ. ಅಲ್ಲಿ ಆಯುಧಗಳಿಗೆ ಕೊರತೆಯೇ ಇಲ್ಲ.

ಪಾಕಿಸ್ತಾನದ ಆರ್ಮಿಯ ವಿರುದ್ಧ ತನ್ನ ಶಕ್ತಿಪ್ರದರ್ಶನವನ್ನೂ ಅದು ಮಾಡಿದೆ. ಪಾಕಿಸ್ತಾನದ ಸೇನೆಯನ್ನು ಮಣಿಸುವುದು
ಅಷ್ಟು ಸುಲಭವಲ್ಲ, ಆದರೆ ಆಫ್ಘಾನ್ ತಾಲಿಬಾನಿಗಳೂ ಕೈಜೋಡಿಸಿದರೆ ಟಿಟಿಪಿಗೆ ಅದು ಕಷ್ಟದ ಕೆಲಸವೇನಲ್ಲ. ಜನಪ್ರತಿನಿಧಿ ಗಳು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗದ ಅರಾಜಕ ಸ್ಥಿತಿ ಅಲ್ಲಿದೆ. ಇಂತಹ ಡಜನ್‌ಗಟ್ಟಲೆ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿವೆ. ಅವು ಭಾರತದ ವಿರುದ್ಧವೂ ವಿಷಕಾರುತ್ತಲೇ ಇವೆ. ಅವುಗಳೊಂದಿಗೆ ಟಿಟಿಪಿ ಸೇರಿಕೊಂಡರೆ ಏನಾದೀತು? ಅಂತಹದು ಸದ್ಯದಲ್ಲಿ ಆಗಲಾರದು ಎಂಬ ಅನಿಸಿಕೆ ನನ್ನದು. ಆದರೆ ನಾಳೆ ಹೇಗೋ ಏನೋ ಬಲ್ಲವರಾರು? ಒಂದು ವೇಳೆ ಅದಾದರೆ, ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೇ ಅದು ಮಾರಕವಾಗಬಹುದು.

ಏಕೆಂದರೆ ಈಗ ಉಗ್ರಗಾಮಿ ಸಂಘಟನೆಗಳ ಕೈಯ್ಯಲ್ಲೂ ಅಣುಬಾಂಬು ಇದೆ. ಟಿಟಿಪಿ ಪಾಕಿಸ್ತಾನಕ್ಕೆ ಮಾತ್ರ ಸಮಸ್ಯೆಯಲ್ಲ, ಅದು
ಇಡೀ ವಿಶ್ವದ ಪ್ರಗತಿಗೆ ಮಾರಕವಾಗುವ ಕೆಟ್ಟಹುಳ. ಅದು ಯಶಸ್ವಿಯಾಗದಿರಲಿ ಎಂದು ಆಶಿಸೋಣ.

Read E-Paper click here