Friday, 22nd November 2024

ತಿಂತ್ರಿಣಿ ಪುರಾಣ, ಹುಣಿಸೆ ಚಿಗಳಿ ಮತ್ತೆ ಚಿಲಿ ಟ್ಯಾಮರಿಂಡ್ ಬೈಟ್ಸ್

ತಿಳಿರು ತೋರಣ

srivathsajoshi@yahoo.com

ಚಿಗಳಿಗೆ ಸರಿಸಾಟಿಯೆನಿಸುವ ಚಿಲಿ ಟ್ಯಾಮರಿಂಡ್ ಬೈಟ್ಸ್ ಸಿಕ್ಕಿರುವುದು ನನಗೆ ತುಂಬ ಖುಷಿಯಾಗಿದೆ. ಖುಷಿಯಾದಾಗ ಎಲ್ಲರಿಗೂ ಸಿಹಿ ಹಂಚಿ ಖುಷಿಯನ್ನು ಹೆಚ್ಚಿಸಿಕೊಳ್ಳುವುದು ಲೋಕರೂಢಿ, ಮಾಮೂಲಿ ಸಂಗತಿ. ಸಿಹಿಯೇ ಆಗಬೇಕಿಲ್ಲ ಹುಳಿಯನ್ನೂ ಹಂಚಬಹುದು ಎಂಬ ಆಲೋಚನೆ ಬರುವುದು ಮತ್ತು ಅನುಷ್ಠಾನಗೊಳ್ಳುವುದು ಬಹುಶಃ ತಿಳಿರುತೋರಣ ಅಂಕಣದಲ್ಲಿ ಮಾತ್ರ!

‘ಅಶ್ವತ್ಥಮೇಕಂ ಪಿಚುಮಂದಮೇಕಂ ನ್ಯಗ್ರೋಧಮೇಕಂ ದಶತಿಂತ್ರಿಣೀಕಂ| ಕಪಿತ್ಥಬಿಲ್ವಾಮಲಕ ತ್ರಯಂಚ ಪಂಚಾಮ್ರರೋಪೀ ನರಕಂ ನ ಯಾತಿ||’ ಅಂತೊಂದು ಶ್ಲೋಕವಿದೆ. ಸತ್ತ ಮೇಲೆ ನರಕಕ್ಕೆ ಹೋಗಬಾರದು ಅಂತಿದ್ದರೆ ಯಾವ್ಯಾವ ಗಿಡಗಳನ್ನು ಕನಿಷ್ಠಪಕ್ಷ ಎಷ್ಟೆಷ್ಟು ಸಂಖ್ಯೆಯಲ್ಲಿ ನೆಟ್ಟು ವೃಕ್ಷಪೋಷಣೆ ಮಾಡಬೇಕು ಎಂದು ಈ ಶ್ಲೋಕ ತಿಳಿಸುತ್ತದೆ. ಇದರ ಪ್ರಕಾರ- ಒಂದು ಅರಳಿ ಮರ, ಒಂದು ಬೇವಿನ ಮರ (ಪಿಚುಮಂದ), ಒಂದು ಆಲದ ಮರ (ನ್ಯಗ್ರೋಧ); ಹತ್ತು ಹುಣಿಸೆ ಮರ (ತಿಂತ್ರಿಣೀಕ), ತಲಾ ಮೂರು ಬೇಲ (ಕಪಿತ್ಥ), ಬಿಲ್ವ, ಮತ್ತು ನೆಲ್ಲಿ ಮರ (ಆಮಲಕ), ಹಾಗೂ
ಐದು ಮಾವಿನ ಮರ (ಆಮ್ರ) – ಇವಿಷ್ಟನ್ನು ಪೋಷಿಸಿದವರು ನರಕಕ್ಕೆ ಹೋಗುವುದಿಲ್ಲವಂತೆ.

ರೋಪಣ ಅಂದರೆ ಗಿಡಗಳನ್ನು ನೆಟ್ಟು ಬೆಳೆಸುವುದು, ರೋಪೀ ಅಂದರೆ ಅಂಥ ಒಳ್ಳೆಯ ಕೆಲಸ ಮಾಡುವವನು ಎಂದರ್ಥ. ಇದೇ ಶ್ಲೋಕದ ಬೇರೆ ಕೆಲವು ಆವೃತ್ತಿ (ಪಾಠಾಂತರ)ಗಳಲ್ಲಂತೂ ಕೊನೆಯ ಸಾಲು ‘ಏತಾಂಶ್ಚ ದೃಷ್ಟ್ವಾ ನರಕಂ ನ ಪಶ್ಯೇತ್’ ಅಂತ ಇದೆ. ಅಂದರೆ ಈಎಲ್ಲ ಗಿಡಗಳನ್ನು ನೆಟ್ಟುಬೆಳೆಸಬೇಕು ಅಂತನೂ ಇಲ್ಲ, ಬರೀ ನೋಡಿದರೂ ಸಾಕು ನರಕವನ್ನು ನೋಡುವ ಸಂದರ್ಭ ಬರುವುದಿಲ್ಲವಂತೆ!

ಅಂದಹಾಗೆ ಈ ಮರಗಳು ನಮಗೆಲ್ಲ ಚಿರಪರಿಚಿತವಾಗಿರುವಂಥವು, ಔಷಽಯ ಗುಣವುಳ್ಳವು ಮತ್ತು ಸನಾತನ ಸಂಸ್ಕೃತಿಯಲ್ಲಿ ಪೂಜ್ಯ ಸ್ಥಾನ ಗಳಿಸಿದಂಥವು ಎಂಬುದನ್ನು ಗಮನಿಸಬೇಕು. ಈ ಶ್ಲೋಕ ಬರುವುದು ಸ್ಕಂದ ಪುರಾಣದಲ್ಲಿ, ಹಾಗಾಗಿ ಸಹಸ್ರಾರು ವರ್ಷಗಳ ಹಿಂದಿನ ಕಾಲದಲ್ಲಿ ವೃಕ್ಷಸಂಪತ್ತು ಹೇರಳವಾಗಿದ್ದಾಗಲೇ ಮರ ಬೆಳೆಸುವುದರ ಅಗತ್ಯವನ್ನು ಪೂರ್ವಜರು ಶ್ಲೋಕದ ಮೂಲಕ ಸಾರಿದ್ದಾರೆ ಎಂಬುದನ್ನೂ ನಾವು ಗಮನಿಸಬೇಕು.

ಈ ಶ್ಲೋಕದಲ್ಲಿ ನನಗೆ ವಿಶೇಷ ಕುತೂಹಲ ಮೂಡಿಸಿದ್ದು ‘ದಶ ತಿಂತ್ರಿಣೀಕಂ’ ಹತ್ತು ಹುಣಿಸೆ ಮರಗಳ ಉಲ್ಲೇಖ. ಬೇರೆಲ್ಲ ಮರಗಳು ತಲಾ ಒಂದು, ಮೂರು, ಐದು ಇತ್ಯಾದಿ ಇದ್ದಾಗ ಹುಣಿಸೆಗೆ ಮಾತ್ರ ಹತ್ತರ ಪ್ರಾಮುಖ್ಯ! ಏಕಿರಬಹುದು? ಬಹುಶಃ ಅದರ ಬಹೂಪಯೋಗಿ ಗುಣದಿಂದಲೇ. ಕಲ್ಪವೃಕ್ಷಕ್ಕೆ ಕಮ್ಮಿಯ ದೇನಲ್ಲ ಹುಣಿಸೆ ಮರ. ಎಂತಹ ಬರಗಾಲಕ್ಕೂ ಅಂಜದೆ ಅಳುಕದೆ ತಲೆಯೆತ್ತಿ ನಿಲ್ಲುವ, ಆಶ್ರಿತರಿಗೆ ತಂಪಾದ ನೆರಳನ್ನು ಕೊಡುವ ಮರವದು. ಜನಸಾಮಾನ್ಯರಿಗಷ್ಟೇ ಏನು ಬ್ರಹ್ಮರಾಕ್ಷಸ ಅಥವಾ ದೆವ್ವ-ಪಿಶಾಚಿ ಮುಂತಾದ ಅತಿಮಾನುಷ ಭಯಾನಕ ಶಕ್ತಿಗಳಿಗೂ
ಹುಣಿಸೆ ಮರ ಆಶ್ರಯ ಕೊಡುತ್ತದೆಂದು ಪ್ರತೀತಿ.

ಹುಣಿಸೆ ಹಣ್ಣಿನ ವಿವಿಧ ಉಪಯೋಗಗಳಂತೂ ನಮಗೆಲ್ಲ ಗೊತ್ತೇ ಇವೆ- ಎಳೆ ಹುಣಿಸೆಯ ತೊಕ್ಕಿನಿಂದ ಹಿಡಿದು, ಹುಣಿಸೆಯೇ ಪ್ರಧಾನವಾಗಿರುವ ಪುಳಿಯೊಗರೆವರೆಗೆ; ಧನುರ್ಮಾಸದಲ್ಲಿ ಹುಗ್ಗಿಯ ಜೊತೆಗಿನ ಗೊಜ್ಜಿನಿಂದ ಹಿಡಿದು, ಸಮೋಸಕ್ಕೆ ಸಂಗಾತಿ ಯಾಗುವ ಸಾಸ್‌ವರೆಗೆ ಭಾರತೀಯ ಅಡುಗೆ ಖಾದ್ಯವೈವಿಧ್ಯಕ್ಕೆ ಹುಣಿಸೆಯ ಕೊಡುಗೆ ಅಪಾರ. ಪಾತ್ರೆಗಳು ಫಳಫಳ ಹೊಳೆಯುವಂತಾಗಬೇಕಾದರೆ ತಿಕ್ಕಲಿಕ್ಕೆ ಹುಣಿಸೆಯೇ ಆಗಬೇಕು. ಹುಣಿಸೆ ಮರದ ಚಿಗುರು ಎಲೆಗಳೂ ತಿನ್ನಲಿಕ್ಕೆ ಯೋಗ್ಯವೇ. ಅಂತೆಯೇ ಹುಣಿಸೆ ಬೀಜಗಳನ್ನು ಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದದ್ದು, ಬಾಲ್ಯದಲ್ಲಿ ಶಾಲೆಗೆ ಹೋಗುವಾಗ ಪಾಟಿಚೀಲದಲ್ಲಿ ಹುಣಿಸೆಯ ಬೀಜಗಳೂ ಇರುತ್ತಿದ್ದದ್ದು, ಅವುಗಳನ್ನು ಕೊಡುಕೊಳ್ಳುವಿಕೆಗೆ ಕರೆನ್ಸಿಯಾಗಿ, ಕಲ್ಲಿಗೆ ಅಥವಾ ಸಿಮೆಂಟ್ ನೆಲಕ್ಕೆ ಉಜ್ಜಿ ಬಿಸಿಮಾಡಿ ಸಹಪಾಠಿಯ ಮೈಗೆ ಬಿಸಿ ಮುಟ್ಟಿಸುವ ಕುಚೋದ್ಯವಾಗಿ ಬಳಸುತ್ತಿದ್ದದ್ದು, ಕೊನೆಗೆ ಮನೆಯಲ್ಲಿ ಹಿರಿಯರಿಂದ ಛಡಿಯೇಟು
ತಿನ್ನಲಿಕ್ಕೂ ಹುಣಿಸೆ ಮರದ್ದೇ ‘ಅಡಾರ್’ (ಇದು ಚಾಟಿ ಎಂಬರ್ಥದ ಪದ. ಕನ್ನಡದಲ್ಲಿದೆಯೋ ಗೊತ್ತಿಲ್ಲ.

ಕರಾವಳಿಯಲ್ಲಿ ತುಳು, ಕೊಂಕಣಿ ಮತ್ತು ನಮ್ಮ ಚಿತ್ಪಾವನಿ ಮರಾಠಿಯಲ್ಲಿ ಬಳಕೆ ಯಲ್ಲಿದೆ. ಅಡಾರ್ ಅಂದರೆ ಚಾಟಿ ಎಂದಷ್ಟೇ ಅರ್ಥವಾದರೂ
ಬಹುಮಟ್ಟಿಗೆ ಅದು ಹುಣಿಸೆ ಮರದ್ದೇ ಆಗಿರುವುದು, ನನಗನಿಸುತ್ತದೆ ಚುರುಕು ಮುಟ್ಟಿಸುವುದಕ್ಕೆ ಅದೇ ಬೆಸ್ಟ್ ಇರಬಹುದು)! ಓಹ್… ಹುಣಿಸೆ ಜೊತೆಗಿನ ಈಎಲ್ಲ ನೆನಪುಗಳು ಹುಳಿಯಲ್ಲ ಸಿಹಿಸಿಹಿ!

ಸಂಸ್ಕೃತದಲ್ಲಿ ಹುಣಿಸೆ ಹಣ್ಣಿಗೆ ತಿಂತ್ರಿಣಿ ಎನ್ನುತ್ತಾರೆ. ‘ತಿಂತ್ರಿಣೀ ಚಿಂಚಾಮ್ಲಿಕಾ…’ ಎಂದು ಅಮರಕೋಶ ವಾಕ್ಯ. ಅಂದರೆ ಚಿಂಚಾ ಮತ್ತು ಆಮ್ಲಿಕಾ ಸಹ ತಿಂತ್ರಿಣಿಯದೇ ಪರ್ಯಾಯ ನಾಮಗಳು. ಸಂಸ್ಕೃತದಲ್ಲಿ ಮಾತ್ರವಲ್ಲ, ಹಳೆಗನ್ನಡ ಮತ್ತು ನಡುಗನ್ನಡ ಕಾಲದಲ್ಲಿ ಮುಖ್ಯವಾಗಿ ಸಾಹಿತ್ಯ ರಚನೆಗಳಲ್ಲಿ ತಿಂತ್ರಿಣಿ ಪದಬಳಕೆ ಇದ್ದಿತೆಂದು ಕಾಣುತ್ತದೆ. ಪುಣ್ಯಕೋಟಿಯ ಪದ್ಯದಲ್ಲಿ ಕಾಳಿಂಗ ಗೊಲ್ಲನಿದ್ದ ಅರುಣಾದ್ರಿ ಬೆಟ್ಟದ ವರ್ಣನೆಯಲ್ಲಿ ಅಲ್ಲಿಯ ಮರಗಳ ಉಲ್ಲೇಖದಲ್ಲಿ ತಿಂತ್ರಿಣಿಯೂ ಬರುತ್ತದೆ: ‘ನಾಗಸಂಪಗೆ ಮಾವು ನೇರಳೆ| ತೇಗ ಚನ್ನಂಗಿ ಬನ್ನಿ ಪಾದರಿ| ಬಾಗೆ ತಿಂತ್ರಿಣಿ ಮತ್ತೆ
ಬಿಲ್ವವು ತಾಗಿ ಮೆರೆದವರಣ್ಯದಿ…’ ಹಾಗೆಯೇ ಲಕ್ಷ್ಮೀಶ ಕವಿಯು ಸೀತೆಯ ವನವಾಸದ ವರ್ಣನೆಗೆಂದು ಗಂಗಾತೀರದಲ್ಲಿ ಕಂಡುಬಂದ ಮರಗಳ ಪಟ್ಟಿ ಮಾಡಿದ್ದರಲ್ಲಿ ‘ತೆಂಗೆಳಗವುಂಗು ಪನಸಂ ದ್ರಾಕ್ಷೆ ಜಂಬು ನಾ| ರಂಗ ಜಂಬೀರ ಖರ್ಜೂರ ಕಿತ್ತಿಳೆ ಮಾತು|

ಳಂಗ ತಿಂತ್ರಿಣಿ ಚೂತ ನೆಲ್ಲಿ ಬಿಲ್ವ ಕಪಿತ್ಥಮೆಂಬ ನಾನಾ ತರುಗಳು…’ ಎಲ್ಲ ಇವೆ! ನಮ್ಮೆಲ್ಲರ ನೆಚ್ಚಿನ ಪುರಂದರದಾಸರೂ ‘ಕ್ಷೀರ ಸಾಗರವ ಪೊಂದಿದವ ಮಥಿಸಿದ ನೀರು ಮಜ್ಜಿಗೆ ಕಾಣನೆ? ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತವಗೆ ದೋರೆ ತಿಂತ್ರಿಣಿ ಬಯಕೆಯೆ?’ ಎಂದು ಒಂದು ನಿಂದಾಸ್ತುತಿ ಯಲ್ಲಿ ಹೇಳಿದ್ದಾರೆ. ‘ವೃತ್ತಾದ ಗುಳ್ಳ ಫಲದುತ್ತಮೋತ್ತಮಶಾಕ ತಿಂತ್ರಿಣಿಯ ರಸಸಹಿತ ಪಾತ್ರದಲಿ ಬಡಿಸಿ ಸತ್ಪಾತ್ರನಾಗಿರುವ ಸರ್ವೋತ್ತಮಗೆ ಅರ್ಪಿಸಿದ ಭಕ್ತಿಯಿಂದ…’ ಅಂತ ಇನ್ನೊಂದು ಕೀರ್ತನೆಯಲ್ಲಿ ಬರುತ್ತದೆ.

ಇದು ಬಹುಶಃ ಉಡುಪಿಯ ಜಗದ್ವಿಖ್ಯಾತ ಮಟ್ಟು-ಗುಳ್ಳದ ಹುಳಿ, ಸರಿಯಾದ ಪ್ರಮಾಣದಲ್ಲಿ ಬೆರೆಸಿದ ಹುಣಿಸೆ ಹಣ್ಣಿನ ಹುಳಿರಸದಿಂದ ರುಚಿಕರ ವಾಗಿರುವುದರ ವರ್ಣನೆ. ಇನ್ನೂ ಒಂದು ವೆರಿ ಇಂಟೆರೆಸ್ಟಿಂಗ್ ತಿಂತ್ರಿಣಿ ಉಲ್ಲೇಖವೆಂದರೆ ‘ನಿಷಿಕ ತಿಂತ್ರಿಣಿ ಬೀಜದಿ ಸಾಲ ತಿದ್ದಿದ ಹಸ್ತ’ ಎಂದು
ವಿಜಯದಾಸರು ಬರೆದ ಹಸ್ತಮಹಿಮಾ ಸ್ತುತಿಯಲ್ಲಿ ಬರುವುದು. ಹನುಮ-ಭೀಮ-ಮಧ್ವಾಚಾರ್ಯರು ವಾಯುದೇವರ ಅವತಾರಗಳು ಎಂಬ ನಂಬಿಕೆಯಿದೆಯಷ್ಟೆ? ಹಸ್ತಮಹಿಮಾ ಸ್ತುತಿಯಲ್ಲಿರುವುದು ಈ ಮೂರು ಅವತಾರಗಳ ಬಣ್ಣನೆ. ಅದರಲ್ಲಿ ಮಧ್ವಾಚಾರ್ಯರ ಮಹಿಮೆಯನ್ನು ಬಣ್ಣಿಸುವಾಗ ಈ ಸಾಲು ಬರುತ್ತದೆ. ಇದರ ಹಿಂದೊಂದು ಕುತೂಹಲಕರ ಕಥೆಯೂ ಇದೆ.

ಮಧ್ವಾಚಾರ್ಯರ ಪೂರ್ವಾಶ್ರಮದ ಹೆಸರು ವಾಸುದೇವ ಭಟ್ಟ ಅಂತಿದ್ದದ್ದು. ತಂದೆಯ ಹೆಸರು ಮಧ್ಯಗೇಹ ಭಟ್ಟ. ಒಮ್ಮೆ ಅವರಿಗೆ ದೈನಂದಿನ ಹೈನುಪದಾರ್ಥಗಳ ಪೂರೈಕೆಗೆಂದು ಧನಿಕನೊಬ್ಬನು ಹಸುವೊಂದನ್ನು ಮಾರಾಟ ಮಾಡಿದ್ದನು. ದುಡ್ಡು ಕೊಡುವಂತೆ ಅವರ ಮನೆಗೆ ಬಂದು ಧರಣಿ ಕುಳಿತಿದ್ದನು. ಕಡುಬಡವರಾಗಿದ್ದ ಮಧ್ಯಗೇಹ ಭಟ್ಟರಿಗೆ ಕೂಡಲೇ ಹಣ ಹೊಂದಿಸುವುದು ಕಷ್ಟವೇ ಆಗಿತ್ತು. ಆಗ ವಾಸುದೇವನು ತಾನು ಆಟವಾಡುತ್ತಿದ್ದ ಹುಣಿಸೆ ಬೀಜಗಳನ್ನು ಬೊಗಸೆಯಲ್ಲಿ ತುಂಬಿ ಧನಿಕನ ಹತ್ತಿರ ತಂದು ‘ತಂದೆಯವರು ನಿಮಗೆ ಕೊಡಬೇಕಿದ್ದ ಹಣದ ಬದಲಿಗೆ
ನಾನಿದನ್ನು ನಿಮಗೆ ನೀಡುವೆ’ ಎಂದು ಕೊಟ್ಟನು. ಆ ಧನಿಕನು ಚೆಂದದ ಮುದ್ದುಮುಖದ ವಾಸುದೇವನನ್ನು ಕಂಡು ಆನಂದ ದಿಂದ ಆ ಬೀಜಗಳನ್ನು ತೆಗೆದುಕೊಂಡು ಹೋದನು. ಮನೆಗೆ ಹೋಗಿ ಆ ಬೀಜಗಳನ್ನು ನೋಡಿದಾಗ ಅದು ಬಂಗಾರವಾಗಿತ್ತು!

ಕೆಲ ದಿನಗಳ ಬಳಿಕ ಮಧ್ಯಗೇಹ ಭಟ್ಟರು ಹಣ ಕೊಡಲು ಹೋದಾಗ, ಧನಿಕನು ತನಗೆ ಬರಬೇಕಾದ ಹಣ ಆಗಲೇ ಬಂದಾಯಿತು ಎಂದು ತಿಳಿಸಿದನು. ಹೀಗೆ ಪವಾಡಸದೃಶ ಹುಣಿಸೆ ಬೀಜಗಳನ್ನು ವಾಸುದೇವನು ನೀಡಿದ ಸ್ಥಳದಲ್ಲಿ ಈಗಲೂ ಒಂದು ಹುಣಿಸೆ ಮರವಿದೆ, ಉಡುಪಿ ಬಳಿಯ ಪಾಜಕ ಕ್ಷೇತ್ರದಲ್ಲಿ. ಅದಷ್ಟು ತಿಂತ್ರಿಣಿ ಪುರಾಣ ಆದಮೇಲೆ, ಹುಣಿಸೆ ಹಣ್ಣಿನ ಇಂಗ್ಲಿಷ್ ಹೆಸರಲ್ಲೂ, ಸಸ್ಯಶಾಸ್ತ್ರೀಯ ಹೆಸರಲ್ಲೂ, ಭಾರತದ ಪಾತ್ರವಿದೆಯೆಂದರೆ ನೀವು ನಂಬಲೇಬೇಕು! ಹುಣಿಸೆ ಹಣ್ಣು ಭಾರತದಿಂದಲೇ ಪಶ್ಚಿಮದ ದೇಶಗಳಿಗೆ ಹೋದದ್ದು ಎಂದು ಹೇಳಲಾಗಿದೆ. ವ್ಯಾಪಾರಕ್ಕೆ ಬಂದಿದ್ದ ಅರಬರೇ ಅದನ್ನೊಯ್ದಿದ್ದು.

ಹುಣಿಸೆ ಹಣ್ಣು ನೋಡುವುದಕ್ಕೆ ಅರಬರ ದೇಶದ ಖರ್ಜೂರದ ಹಣ್ಣಿನ ಹಾಗೆ ಇದೆ. ಖರ್ಜೂರಕ್ಕೆ ಅರಬ್ಬೀ ಭಾಷೆಯಲ್ಲಿ ತಮರ್ ಎಂದು ಹೆಸರು. ಅವರು ಹುಣಿಸೆ ಹಣ್ಣನ್ನು ತಮರ್-ಹಿಂದ್ ಅಂದರೆ ಹಿಂದೂಸ್ಥಾನದ ಖರ್ಜೂರ ಎಂದು ಕರೆದರು. ಅದು ಇಂಗ್ಲಿಷರ ಭಾಷೆಯಲ್ಲಿ ಟ್ಯಾಮರಿಂಡ್ ಆಯ್ತು. ಸಸ್ಯಶಾಸ್ತ್ರೀಯ ನಾಮಕರಣದ ವೇಳೆ ‘ಟ್ಯಾಮರಿಂಡಸ್ ಇಂಡಿಕಾ’ ಆಯ್ತು, ಮಾವಿನಹಣ್ಣು ‘ಮ್ಯಾಂಗಿಫೆರಾ ಇಂಡಿಕಾ’ ಆದಹಾಗೆ! ಪಾಶ್ಚಾತ್ಯ
ಜಗತ್ತಿನಲ್ಲಿ ಟ್ಯಾಮರಿಂಡ್‌ಅನ್ನು ಇಂಡಿಯಾದೊಡನೆ ಎಷ್ಟು ಸಮೀಕರಿಸಲಾಗಿದೆಯೆಂದರೆ ಟ್ಯಾಮರಿಂಡ್ ಹೆಸರಿನ ಇಂಡಿಯನ್ ರೆಸ್ಟೊರೆಂಟ್‌ಗಳೂ ಇವೆ! ನಾನಿರುವ ವಾಷಿಂಗ್ಟನ್ ಡಿಸಿ ಪ್ರದೇಶ ದಲ್ಲಿಯೇ ‘ದ ಟ್ಯಾಮರಿಂಡ್ ಇಂಡಿಯನ್ ಕ್ಯುಸಿನ್’ ಎಂಬ ಹೆಸರಿನ ಒಂದು ಇಂಡಿಯನ್ ರೆಸ್ಟೊರೆಂಟ್ ಇದೆ. ಟ್ಯಾಮರಿಂಡ್ ಇಲ್ಲದ ಇಂಡಿಯನ್ ಕ್ಯುಸಿನ್ ಊಹಿಸಲೂ ಅಸಾಧ್ಯ.

‘ದ ಸಿಂಪಲ್ ಜಾಯ್ಸ್ ಆಫ್ ಟ್ಯಾಮರಿಂಡ್’ ಎಂಬ ಶೀರ್ಷಿಕೆಯ ಲಲಿತಪ್ರಬಂಧವೊಂದು ಒಂದೆರಡು ವರ್ಷಗಳ ಹಿಂದೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಬರೆದವರು ಒಬ್ಬ ನ್ಯೂಯಾರ್ಕ್ ನಿವಾಸಿ ಭಾರತೀಯರೇ. ‘ನಾನು ಬಾಲ್ಯದಲ್ಲಿ ಭಾರೀ ತುಂಟನೆಂದು ಹೆಸರಾಗಿದ್ದವ ನಲ್ಲವಾದರೂ ತಕ್ಕಮಟ್ಟಿಗೆ ಪೋಕ್ರಿ ಕೆಲಸಗಳನ್ನು ಮಾಡಿ ಹೆತ್ತವರನ್ನು ತುದಿಗಾಲಲ್ಲಿರಿಸುತ್ತಿದ್ದೆ. ಅದರಲ್ಲೂ ಬೇಸಗೆ ರಜೆಯಲ್ಲಿ ನನ್ನ ಉಪದ್ವ್ಯಾಪಗಳು ಹೆಚ್ಚುತ್ತಿದ್ದುವು. ಮುಂಬೈಯಲ್ಲಿ ನಮ್ಮ ಮನೆಯ ನೆರೆಕೆರೆಯಲ್ಲಿದ್ದ ಹುಣಿಸೆ ಮರಗಳ ಮೇಲೆ ಹತ್ತುವುದು, ಹುಣಿಸೆ ಕೋಡುಗಳು ಕೈಗೆ ತಾಕುವಂತಿಲ್ಲದಿದ್ದರೆ ಕೋಲಿನಿಂದೆಳೆದೋ ಕಲ್ಲು ಬಿಸಾಡಿಯೋ ಬೀಳಿಸುವುದು.

ನೆರೆಮನೆಯವರ ದೂರುಗಳು, ಹೆತ್ತವರಿಂದ ಖಡಕ್ ಎಚ್ಚರಿಕೆಗಳು, ಮೊಣಕಾಲು-ಕೈಗಳಿಗೆ ತರಚಿದ ಗಾಯಗಳು… ಇವೆಲ್ಲವೂ ಗೌಣವೆನಿಸುತ್ತಿದ್ದವು ಸಾಹಸ ಮಾಡಿ ಕದ್ದು ತಿನ್ನುತ್ತಿದ್ದ ಆ ಹುಣಿಸೆ ಹಣ್ಣಿನ ರುಚಿಯ ಮುಂದೆ!’ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತ ಹುಣಿಸೆಯ ವಿಶ್ವರೂಪವನ್ನು ಆ ಲೇಖನದಲ್ಲಿ ಅವರು ವಿಶ್ವಕ್ಕೆ ಪರಿಚಯಿಸಿದ್ದು ಆಪ್ಯಾಯಮಾನವಾಗಿತ್ತು. ಅದೆಲ್ಲ ಇರಲಿ, ಈ ವಾರದ್ದು ತಿಂತ್ರಿಣಿ ತೋರಣ ಆಗಲಿಕ್ಕೆ ಏನು ಕಾರಣ ಏನು ಪ್ರೇರಣೆ ಎನ್ನುವುದನ್ನು ಬೇಂದ್ರೆಯವರ ಒಂದು ಕವಿತೆಯ ಮೂಲಕ ಈಗ ನಿಮಗೆ ವಿವರಿಸುತ್ತೇನೆ. ಸಖೀಗೀತ ಕವನಸಂಕಲನದಲ್ಲಿರುವ ಈ ಕವಿತೆಯ ಶೀರ್ಷಿಕೆ ‘ಹೂತಧಿದ ಹುಣಸಿ’. ಅಂದರೆ, ಹೂವು ಅರಳಿರುವ ಹುಣಿಸೆ ಮರ ಅಂತ ಧಾರ್ವಾಡ್ ಭಾಷೆಯಲ್ಲಿ. ‘ಹೂತಧಿದ ಹುಣಸಿಯಾ ಚಿಗುರು| ಮದರಂಗಿ ಬಣ್ಣದುಗುರು| ರುಚಿಗೆ ಹುಳಿಯೊಗರು| ನೋಡ್ಯೆ ಜೀವಕ್ಕನಿಸಿತಧಿ ಹಗುರು’ ಎಂದು ಕವಿತೆ ಆರಂಭವಾಗುತ್ತದೆ.

ಕಡು ಬೇಸಿಗೆಯಲ್ಲಿ ತನ್ನ ಹೊಲದ ಕಡೆಗೆ ತೆರಳುತ್ತಿದ್ದ ಹಳ್ಳಿಗನೊಬ್ಬನು ಹೂವು ಬಿಟ್ಟಂಥ ಹುಣಸಿಯ ಮರವನ್ನು ನೋಡಿದಾಗ, ಅದರಲ್ಲಿ ಚೆಲುವಿಕೆಯನ್ನು ಗುರುತಿಸುವ, ಆ ಚೆಲುವಿನಲ್ಲೇ ಪರವಶ ನಾಗುವ, ಹಾಗೆಯೇ ಹಗಲುಗನಸಿನಲ್ಲಿ ತೇಲಿ ಹೋಗುವ ಚಿತ್ರವನ್ನು ಈ ಕವನದಲ್ಲಿ ನೀಡಲಾಗಿದೆ… ಎಂದು ಬರೆದಿದ್ದಾರೆ ಹಿರಿಯ ಮಿತ್ರ ಸುಽಂದ್ರ ದೇಶಪಾಂಡೆಯವರು ‘ಸಲ್ಲಾಪ’ ಬ್ಲಾಗ್‌ನಲ್ಲಿ. ಬೇಂದ್ರೆಯವರ ಕವಿತೆಗಳ ಸುದೀರ್ಘ ಸವಿವರ ಸ್ವಾರಸ್ಯಕರ ವ್ಯಾಖ್ಯಾನಕ್ಕಾಗಿ ನಾನು ಆಗಾಗ ಪರಾಮರ್ಶಿಸುವ ಬ್ಲಾಗ್ ಅದು.

ಪ್ರಸ್ತುತ ಈ ಕವಿತೆಯನ್ನೂ ಅಲ್ಲಿ ಬಹಳ ಚೆನ್ನಾಗಿ ವ್ಯಾಖ್ಯಾನಿಸಿದ್ದಾರೆ. ಹುಣಿಸೆ ಮರ ಆ ಹಳ್ಳಿಗನ ಪಂಚೇಂದ್ರಿಯಗಳಿಗೂ ಹೇಗೆ ಮುದ ಕೊಡುತ್ತದೆಂಬುದನ್ನು ಬೇಂದ್ರೆಯವರು ಬರೆದ ರೀತಿ ಬೇಂದ್ರೆಯವರಿಗೆ ಬೇಂದ್ರೆಯವರೇ ಸಾಟಿ ಎಂದು ಮತ್ತೊಮ್ಮೆ ಹೇಳುವಂತಿದೆ. ಕವಿತೆಯ ಕೊನೆ ಚರಣ ಅತ್ಯಂತ ಮಾರ್ಮಿಕ. ‘ಕವಿ ಜೀವದ ಬ್ಯಾಸರ ಹರಿಸಾಕ| ಹಾಡ ನುಡಿಸಾಕ| ಹೆಚ್ಚಿಗೇನು ಬೇಕ?| ಒಂದು ಹೂತ ಹುಣಸಿಮರ ಸಾಕ||’ ಕವಿಗೆ ಮತ್ತು ರಸಿಕರಿಗೆ ಸುಖ ನೀಡಲಿಕ್ಕೆ ಅದು-ಇದು ಇಂಥದ್ದು-ಅಂಥದ್ದೇ ಬೇಕು ಅಂತೇನಿಲ್ಲ.

ಹೂವು ಬಿಟ್ಟ ಹುಣಸಿ ಮರ ಕೂಡ ಸಾಕಾಗುತ್ತದೆ! ಇದಕ್ಕೆ ಸಂಬಂಧಿಸಿದಂತೆ ಒಂದು ಸ್ವಾರಸ್ಯಕರ ಘಟನೆಯನ್ನೂ ದೇಶ ಪಾಂಡೆ ಅವರು ಅಲ್ಲಿ ದಾಖಲಿಸಿದ್ದಾರೆ: ಗದಗಿನಲ್ಲಿ ನಡೆಯುತ್ತಿದ್ದ ಒಂದು ಸಾಹಿತ್ಯ ಸಮಾರಂಭದ ವೇದಿಕೆಯ ಮೇಲೆ ಬೇಂದ್ರೆ ಮಾಸ್ತರರು, ಆರ್.ಸಿ. ಹಿರೇಮಠ ಹಾಗೂ ರಾ.ಯ. ಧಾರವಾಡಕರ ಉಪಸ್ಥಿತರಿದ್ದರು. ಹಿರೇಮಠರು ಬೇಂದ್ರೆಯವರಿಗೆ ಚೇಷ್ಟೆ ಮಾಡುವ ಉದ್ದೇಶದಿಂದಲೇ ‘ಬೇಂದ್ರೆ ಅವರು ಬೇಕಾದ್ದರ ಮ್ಯಾಲೆ ಕವನಾ ಬರೀತಾರ; ಇಕಾ ನೋಡರಿ, ಆ ಎದುರಿಗಿರೋ ಹುಣಸಿ ಮರದ ಮ್ಯಾಲೂ ಒಂದ ಕವನಾ ಕಟ್ಟತಾರ ಅವರು!’ ಎಂದು ಅಂದರಂತೆ.

ತತ್‌ಕ್ಷಣವೇ ಬೇಂದ್ರೆಯವರು ಎದ್ದು ನಿಂತು, ಹಸ್ತಚಲನೆ ಮಾಡುತ್ತ ಉದ್ಗರಿಸಿದರಂತೆ: ‘ಕವಿಗೇನು ಬೇಕಧಿ ಹೂತ ಹುಣಸಿ ಮರ ಸಾಕಧಿ!’
ಬೇಂದ್ರೆಯವರ ಪಾದಧೂಳಿಗೂ ಸಮವಲ್ಲದ ನಮ್ಮಂಥ ಪಾಮರರಿಗೂ ಅಕ್ಷರ ಕೆತ್ತಲಿಕ್ಕೆ ಹುಣಿಸೆ ಪ್ರೇರಣೆಯಾಗಬಹುದು! ಹೀಗನಿಸಿದ್ದು ಇತ್ತೀಚೆಗೆ ನಾನು ಕೊಂಡುತಂದು ಸವಿಯುತ್ತಿರುವ ‘ಚಿಲಿ ಟ್ಯಾಮರಿಂಡ್ ಬೈಟ್ಸ್’ನಿಂದ. ಇದು ನನಗೆ ಸಿಕ್ಕಿದ್ದು ಇಲ್ಲಿಯ ರಖಂ ಮಳಿಗೆ ‘ಕಾಸ್ಟ್‌ಕೊ’ದಲ್ಲಿ. ಅದೇನಾಯ್ತೆಂದರೆ, ಕಾಸ್ಟ್‌ಕೊ ಗ್ರಾಹಕರ ಒಂದು ಫೇಸ್‌ಬುಕ್ ಗ್ರೂಪ್ ಇದೆ.

ಇತ್ತೀಚೆಗೆ ಅದರಲ್ಲೊಂದು ದಿನ ಯಾರೋ ಒಬ್ಬರು ಗ್ರಾಹಕರು (ಅಮೆರಿಕನ್ನರೇ) ಚಿಲಿ ಟ್ಯಾಮರಿಂಡ್ ಬೈಟ್ಸ್ ಪ್ಯಾಕೆಟ್‌ನದೊಂದು ಚಿತ್ರ ಪೋಸ್ಟ್ ಮಾಡಿದ್ದರು. ಅದು ಕಾಸ್ಟ್‌ಕೊದಲ್ಲಿ ಯಾವಾಗ ಬೇಕೆಂದರೂ ಸಿಗುವ ಉತ್ಪನ್ನವಲ್ಲ, ಸೀಸನಲ್ ಆಗಿ ಅಪರೂಪಕ್ಕೊಮ್ಮೆ ಬಂದಿರುತ್ತದೆ. ಹಾಗಾಗಿಯೇ ಇತರರಿಗೂ ತಿಳಿಸಲಿಕ್ಕೆಂದು ಪೋಸ್ಟ್ ಮಾಡಿದ್ದರು. ಆ ಪೋಸ್ಟ್ ನೋಡಿ ಅನೇಕರಿಗೆ ಬಾಯಿಯಲ್ಲಿ ನೀರೂರಿತೆಂದೂ, ಕೂಡಲೇ ಕಾಸ್ಟ್‌ಕೊಗೆ ಹೋಗಿ
ಕೊಂಡುತಂದರೆಂದೂ, ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದಲೇ ಗೊತ್ತಾಗುತ್ತಿತ್ತು. ಪ್ರತಿಕ್ರಿಯೆ ಬರೆಯಲಿಲ್ಲವಾದರೂ ಆಮೇಲಿನ ಕಾಸ್ಟ್‌ಕೊ ಟ್ರಿಪ್‌ನಲ್ಲಿ ಚಿಲಿ ಟ್ಯಾಮರಿಂಡ್ ಬೈಟ್ಸ್ ಪ್ಯಾಕೆಟನ್ನು ನಾನೂ ಶಾಪಿಂಗ್‌ಕಾರ್ಟ್‌ನಲ್ಲಿ ಸೇರಿಸಿಕೊಂಡೆ.

ಒಂಬತ್ತು ಡಾಲರ್ ಬೆಲೆ ಅಷ್ಟೇನೂ ದುಬಾರಿಯಲ್ಲವೆನಿಸಿತು. ಪ್ಯಾಕೆಟ್ ಮೇಲೆ ‘ಪ್ರಾಡಕ್ಟ್ ಆಫ್ ಥೈಲ್ಯಾಂಡ್’ ಅಂತ ಇದ್ದುದನ್ನೋದಿ, ಅಲ್ಲಿಂದ
ಆಮದಾಗಿರುವುದಕ್ಕೆ ಇಷ್ಟು ಬೆಲೆ ಧಾರಾಳವಾಗಿ ಕೊಡಬಹುದೆಂದು ತೀರ್ಮಾನಿಸಿದೆ. ಮನೆಗೆ ತಂದು ಪ್ಯಾಕೆಟ್ ತೆರೆದು ಒಂದು ಬೈಟ್ ಬಾಯಿಗೆ ಹಾಕಿದಾಗ ಅನಿಸಿದ್ದು ಇದಕ್ಕೆ ಒಂಬತ್ತಲ್ಲ ಹದಿನೆಂಟು ಡಾಲರ್ ಕೊಟ್ಟರೂ ವರ್ತ್ ಇಟ್ ಅಂತ. ಅಷ್ಟೂ ಒಳ್ಳೆಯ ರುಚಿ! ಅದರಲ್ಲೂ ರುಚಿಗಳ ಪೈಕಿ ಹುಳಿಯತ್ತ ತುಸು ಹೆಚ್ಚೇ ಒಲವಿರುವ ನನ್ನಂಥವರಿಗೆ ಸುಪರ್ ಬೆಸ್ಟ್.

’Sಟmಜ್ಚಿZ, oಡಿಛಿಛಿಠಿ, omಜ್ಚಿqs Zಛಿ Z ಛಿಡಿ ಡಿಟ್ಟbo ಠಿeZಠಿ Z bಛಿoಜಿಚಿಛಿ ಘ್ಠೆಠಿಠಿqs – ಊಜಿಠಿqs ಇeಜ್ಝಿಜಿ SZಞZಜ್ಞಿb, ಚ್ಠಿಠಿ ಡಿಟ್ಟbo
Zಛ್ಞಿ’ಠಿ ಛ್ಞಿಟ್ಠಜe ಠಿಟ bಛಿoಜಿಚಿಛಿ ಠಿeಛಿ omಜ್ಚಿqs ಛ್ಡಿmಟoಜಿಟ್ಞ ಟ್ಛ Zqಟ್ಟo ಠಿeZಠಿ Zಛಿ ಜ್ಞಿ ಛಿqಛ್ಟಿqs ಚಿಜಿಠಿಛಿ! Uಛಿ oಠಿZಠಿ ಟ್ಛ್ಛ oಜ್ಞಿಜ ಠಿeಛಿ eಜಿಜeಛಿoಠಿ ಟ್ಠಿZಜಿಠಿqs ಠಿZಞZಜ್ಞಿb, ಚ್ಠ್ಟಿoಠಿಜ್ಞಿಜ ಡಿಜಿಠಿe ಠ್ಟಿಟmಜ್ಚಿZ Zqಟ್ಟo, Zb ಟಞಚಿಜ್ಞಿಛಿ ಜಿಠಿ ಡಿಜಿಠಿe ಟ್ಠ್ಟ oಜಿಜ್ಞZಠ್ಠ್ಟಿಛಿ omಜ್ಚಿಛಿ ಚ್ಝಿಛ್ಞಿb. IZqs qsಛಿZo eZqಛಿ ಜಟ್ಞಛಿ ಜ್ಞಿಠಿಟ ಛಿZಠಿಜ್ಞಿಜ ಠಿeಛಿ mಛ್ಟ್ಛಿಛ್ಚಿಠಿ ಚಿZZಛಿ ಟ್ಛ omಜ್ಚಿqsoಡಿಛಿಛಿಠಿಠಿZಜಜ್ಞಿಛಿoo ಜ್ಞಿ ಟ್ಠ್ಟ ಇeಜ್ಝಿಜಿ SZಞZಜ್ಞಿb! ಎಜಿqಛಿ o Z ಠ್ಟಿqs Zb oಛಿಛಿ ಡಿeqs ಘ್ಠೆಠಿಠಿqs ಊಜಿಠಿqs ಇeಜ್ಝಿಜಿ SZಞZಜ್ಞಿb ಛಿಜಿಜ್ಞo omಛಿಞಛಿ!’ ಎಂದು ಪ್ಯಾಕೆಟ್ ಮೇಲೆ ಬರೆದಿರುವುದು ಅಕ್ಷರಶಃ ಅನುಭವಕ್ಕೆ ಬರುತ್ತದೆ, ಅದಕ್ಕೇ ಎಡಿಕ್ಟ್ ಆಗುವಷ್ಟು! ಚಿಲಿ ಟ್ಯಾಮರಿಂಡ್ ಬೈಟ್ಸ್ ಸವಿಯುವಾಗೆಲ್ಲ ನನಗೆ ಐದಾರು ವರ್ಷಗಳ ಹಿಂದೊಮ್ಮೆ ಇಲ್ಲಿ ಅಮೆರಿಕದಲ್ಲೇ ಮೊತ್ತಮೊದಲ ಬಾರಿಗೆ ಪರಿಚಯವಾದ ಹುಣಿಸೆ ‘ಚಿಗಳಿ’ ಸಹ ನೆನಪಾಗುತ್ತದೆ.

ಅಲ್ಲಿಯವರೆಗೆ ನನಗೆ ಚಿಗಳಿಯ ಹೆಸರು ಕೇಳಿ ಗೊತ್ತಿತ್ತೇ ವಿನಾ ಅದು ತಿನ್ನಲಿಕ್ಕೆ ಹೇಗಿರುತ್ತದೆಂದು ಗೊತ್ತಿರಲಿಲ್ಲ. ‘ಒಂದು ಬಂಡೀಲಿ ವೀಳ್ಳೆದಡ್ಕೆ ಒಂದು ಬಂಡೀಲಿ ಚಿಗಳೀ ತಂಬ್ಟ…’ ಎಂದು ಜನಪದ ಗೀತೆಯಲ್ಲಿ ಕೇಳಿದಾಗೆಲ್ಲ ಇದರಲ್ಲಿ ತಂಬಿಟ್ಟು ಚೆನ್ನಾಗಿ ಗೊತ್ತು, ಚಿಗಳಿ ಅಂದರೆ ಹೇಗಿರಬಹುದು? ಎಂಬ ಕುತೂಹಲ ನನ್ನಲ್ಲಿರುತ್ತಿತ್ತು. ಆ ವರ್ಷ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಸುಬ್ರಹ್ಮಣ್ಯ ಅವರು ಯಶವಂತ ಸರದೇಶಪಾಂಡೆಯವರನ್ನೂ ಜೊತೆಗೊಂಡು ಅಮೆರಿಕ ಪ್ರವಾಸ ಮಾಡಿದ್ದಾಗ, ಇಲ್ಲಿ ಬಾಲ್ಟಿಮೋರ್‌ನಲ್ಲಿದ್ದ ಅವರ ಮಗಳು ರೋಶನಿಯ ಮನೆಗೆ
ಬಂದಿದ್ದಾಗ, ನಾನವರನ್ನು ಭೇಟಿಯಾಗಿದ್ದೆ.

ಆಗ ಅವರು ಉತ್ತರ ಕರ್ನಾಟಕದ ಅಥೆಂಟಿಕ್ ಹುಣಿಸೆ ಚಿಗಳಿಯನ್ನು ನನಗೂ ಕೊಟ್ಟಿದ್ದರು. ಬೇರೇನೋ ಸ್ವೀಟ್ಸ್ ಸಹ ಕೊಟ್ಟಿದ್ದರಾದರೂ ನನಗೆ
ಅಗ್ದೀ ಇಷ್ಟ ಆದದ್ದು ಚಿಗಳಿಯೇ. ಲವ್ ಎಟ್ ಫಸ್ಟ್ ಸೈಟ್ ಅಲ್ಲ, ಲವ್ ಎಟ್ ಫಸ್ಟ್ ಬೈಟ್! ರುಚಿ ಹತ್ತಿದ ಮೇಲೆ, ನನಗೆ ಇನ್ನೂ ಸ್ವಲ್ಪ ಕೊಡುತ್ತೀರಾ ಎಂದು ಯಾವುದೇ ಮುಜುಗರವಿಲ್ಲದೆ ಸುಬ್ರಹ್ಮಣ್ಯರಲ್ಲಿ ಕೇಳಿ ಮತ್ತಷ್ಟು ಪಡೆದು ಸವಿದಿದ್ದೆ. ನಮ್ಮೂರಿನ ಸ್ಪೆಷಲ್ ನಿಮಗೂ ಇಷ್ಟವಾಯ್ತಲ್ಲ ಎಂದು ಅವರೂ ಸಂತೋಷ ದಿಂದಲೇ ಕೊಟ್ಟಿದ್ದರು. ಅದನ್ನು ನೆನಪಿಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರೂರುತ್ತದೆ.

ಅಂತಹ ಚಿಗಳಿಗೆ ಸರಿಸಾಟಿಯೆನಿಸುವ ಚಿಲಿ ಟ್ಯಾಮರಿಂಡ್ ಬೈಟ್ಸ್ ಈಗ ಸಿಕ್ಕಿರುವುದು ನನಗೆ ತುಂಬ ಖುಷಿಯಾಗಿದೆ. ಖುಷಿಯಾದಾಗ ಎಲ್ಲರಿಗೂ ಸಿಹಿ ಹಂಚಿ ಖುಷಿಯನ್ನು ಹೆಚ್ಚಿಸಿಕೊಳ್ಳುವುದು ಲೋಕರೂಢಿ, ಮಾಮೂಲಿ ಸಂಗತಿ. ಸಿಹಿಯೇ ಆಗಬೇಕಿಲ್ಲ ಹುಳಿಯನ್ನೂ ಹಂಚಬಹುದು ಎಂಬ ಆಲೋಚನೆ ಬರುವುದು ಮತ್ತು ಅನುಷ್ಠಾನಗೊಳ್ಳುವುದು ಬಹುಶಃ ತಿಳಿರುತೋರಣ ಅಂಕಣದಲ್ಲಿ ಮಾತ್ರ!