ಪ್ರತಿಸ್ಪಂದನ
ಶಂಕರನಾರಾಯಣ ಭಟ್
ವಿಶ್ವೇಶ್ವರ ಭಟ್ಟರು ‘ಇದೇ ಅಂತರಂಗ ಸುದ್ದಿ’ ಅಂಕಣದಲ್ಲಿ (ವಿಶ್ವವಾಣಿ ಅ.20) ತಂಬುಳಿ ಬಗ್ಗೆ ಬರೆದದ್ದು ಖುಷಿ ನೀಡಿತು. ಕೊನೆಯಲ್ಲಿ ಅವರೇ ಹೇಳಿಕೊಂಡಂತೆ, ಅವರು ತಂಬುಳಿ ಅಥವಾ ತಂಬಳಿ ಬಗ್ಗೆ ಬರೆದದ್ದು ಏನೇನೂ ಅಲ್ಲ!
ತಂಬುಳಿಯಲ್ಲಿರುವ ವೈವಿಧ್ಯವು ವಿಶೇಷವಾಗಿ ಹವ್ಯಕರ ಊಟದಲ್ಲಿ ಕಾಣಸಿಗುತ್ತದೆ. ಇಲ್ಲೂ, ಕುಡಿಯುವ ತಂಬುಳಿ ಮತ್ತು ಅನ್ನಕ್ಕೆ ಬೇರೆ ಅಂತ ಇದೆ. ಕುಡಿಯಲೆಂದೇ ಇರುವ ತಂಬುಳಿಯು ಸಾಮಾನ್ಯವಾಗಿ ಸ್ವಲ್ಪ ಸಿಹಿಯಾಗಿರುತ್ತದೆ, ಅಷ್ಟೊಂದು ಖಾರವಾ ಗಿಯೂ ಹುಳಿಯಾಗಿಯೂ ಇರುವುದಿಲ್ಲ. ಉದಾಹರಣೆಗೆ, ಉರುಗೆಲೆ ಅಥವಾ ಒಂದೆಲಗ, ಮೊಗೆಕಾಯಿ (ಮದ್ರಾಸ್ ಸೌತೆ) ತಿರುಳಿನಿಂದ ಮಾಡಿದ್ದು. ಇದನ್ನು ‘ಮೊದಲು ಬಡಿಸಿಕೊಳ್ಳುವ ತಂಬುಳಿ’ ಅಂತಲೂ ಕರೆಯುತ್ತಾರೆ.
ಮದುವೆ-ಮುಂಜಿ ಮತ್ತಿತರ ಕಾರ್ಯಕ್ರಮಗಳಲ್ಲಿ ಈ ‘ಕಡುತಂಬ್ಳಿ’ ಇದ್ದೇ ಇರುತ್ತದೆ. ಕುಡಿಯುವ ತಂಬುಳಿಯನ್ನು ಮಜ್ಜಿಗೆ ಹುಲ್ಲಿನಿಂದಲೂ ತಯಾರಿ ಸುತ್ತಾರೆ. ಇನ್ನು, ಅನ್ನದ ಜತೆಗಂತೂ ಸಾಕಷ್ಟು ತಂಬುಳಿಗಳಿವೆ. ಶುಂಠಿ, ಜೀರಿಗೆ-ಕೊತ್ತುಂಬರಿ, ಜೀರಿಗೆ-ಮೆಂತ್ಯ, ಪೇರಲೆ ಕೊಡಿ, ಪತ್ರೆ ಕೊಡಿ, ಒಗ್ಗರಣೆ ಸಪ್ಪು, ಸಂಬಾರ ಸಪ್ಪು, ತೊಂಡೆ ಸಪ್ಪು, ಎಲಬದಿಗೆ ಸಪ್ಪು, ಹಸಿಮೆಣಸು-ಇಂಗು, ದಾಳಿಂಬೆ ಕೊಡಿ, ದಾಸಾಳ ಸಪ್ಪು (ಚಿತ್ರ ದಾಸಾಳ), ಜುಮ್ಮಿನ ಕಾಯಿ, ಮೂಸಂಬಿ ಹಣ್ಣಿನ ಸಿಪ್ಪೆ- ಇವಿಷ್ಟು ಸದ್ಯ ನೆನಪಾಗಿದ್ದು. ತಂಬುಳಿ ಇಲ್ಲದ ಊಟದ ದಿನಗಳೇ ನಮ್ಮ ಹವ್ಯಕರಲ್ಲಿ
ಇರದು; ಒಂದಲ್ಲಾ ಒಂದು ಬಗೆಯ ತಂಬುಳಿ ದಿನನಿತ್ಯ ಇರಲೇಬೇಕು.
ಸಾಮಾನ್ಯವಾಗಿ ಯಾರದ್ದಾದರೂ ಮನೆಯಲ್ಲಿ ವಯಸ್ಸಾದವರು ಯಾರನ್ನಾದರೂ ಊಟಕ್ಕೆ ಕರೆದಾಗ ಹೇಳುವ ಮಾತು- ‘ಮತ್ತೇನೂ ಮಾಡಿ ಬಡಿಸಲಾರೆ, ಅನ್ನ-ತಂಬುಳಿ ಅಷ್ಟೇ’ ಅಂತ. ಅಷ್ಟೇ ಅಲ್ಲ, ಯಾರಾದರೂ ಆಲಸಿ ಗಳಾಗಿದ್ದರೆ, ‘ಏನು, ಒಂದು ಅನ್ನ-ತಂಬುಳಿ ಮಾಡಲೂ ಆಗುವುದಿಲ್ಲವೇ?’ ಎಂದು ಕೇಳುವುದೂ ಉಂಟು.
ತಂಬು ಳಿಗೆ ಅದರದೇ ಆದ ವಿಶಿಷ್ಟ-ವಿಶೇಷ ಸ್ಥಾನ ಇದ್ದೇ ಇದೆ. ತಂಬುಳಿ ಇಲ್ಲದ ಊಟ ಅಪೂರ್ಣ. ತಂಬುಳಿಯು ಅದೆಷ್ಟು ಲಘು ಆಹಾರ ಮತ್ತು ಆರೋಗ್ಯದಾಯಕ ಎಂದರೆ, ಅದನ್ನು ಉಂಡು ಕೆಟ್ಟವರು, ಹೊಟ್ಟೆ ಕೆಡಿಸಿ ಕೊಂಡವರು ಯಾರೂ ಇರಲಿಕ್ಕಿಲ್ಲ!
ಇದರಲ್ಲಿ ಅದೆಷ್ಟೋ ಔಷಧಿಯುಕ್ತ ವಸ್ತುಗಳಿರುವುದರಿಂದ ಜೀರ್ಣ ಕ್ರಿಯೆಯನ್ನು ಸುಲಭವಾಗಿಸುತ್ತದೆ. ತಂಬುಳಿಯು ಅತ್ಯಂತ ಸರಳವಾಗಿ, ಹೆಚ್ಚುವರಿ ಖರ್ಚಿಲ್ಲದೆ ತಯಾರಾಗುವ ಖಾದ್ಯವಾಗಿರು ವುದರಿಂದ ತನ್ನತನ ವನ್ನು ಜೋಪಾನವಾಗಿ ಕಾಪಿಟ್ಟುಕೊಂಡಿದೆ. ಇನ್ನಾವ ಖಾದ್ಯಕ್ಕೂ ಇದರ ಸ್ಥಾನವನ್ನು ತುಂಬಲು ಸಾಧ್ಯವಾಗಿಲ್ಲ. ಹೀಗೆ ಅದು ತನ್ನದೇ ಆದ ‘ಬ್ರ್ಯಾಂಡ್ ಇಮೇಜ್’ ಹೊಂದಿದೆ, ಪೇಟೆಂಟ್ ಕಾಯ್ದಿಟ್ಟುಕೊಂಡಿದೆ ಅಂದರೂ ತಪ್ಪಲ್ಲ. ತಂಬುಳಿಯ ರುಚಿಯನ್ನು ಬಲ್ಲವರೇ ಬಲ್ಲರು, ಒಮ್ಮೆ ರುಚಿ ಕಂಡವರು ಇದರ ಬೆನ್ನು ಹತ್ತುವುದರಲ್ಲಿ ಸಂಶಯವೇ ಇಲ್ಲ.
ಉತ್ಸಾಹಿಯೊಬ್ಬರು ಇಂಥ ಮಹತ್ವದ ಊಟದ ಪದಾರ್ಥದ ಹೆಸರಿನಲ್ಲೇ ಹೊಟೇಲು ಪ್ರಾರಂಭಿಸಿದ್ದಾರೆ ಅಂದರೆ ಅದು ಯಶಸ್ಸು ಕಾಣುವುದರಲ್ಲಿ ಅನುಮಾನವೇ ಇಲ್ಲ. ತಂಬುಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ
ಮಾನ್ಯತೆ ಸಿಕ್ಕರೂ ಆಶ್ಚರ್ಯ ಪಡಬೇಕಾಗಿಲ್ಲ!
(ಲೇಖಕರು ಹವ್ಯಾಸಿ ಬರಹಗಾರರು)
ಇದನ್ನೂ ಓದಿ: Guru Charan Das Column: ಭಾರತೀಯ ಕಾರ್ಪೊರೇಟ್ ಜಗತ್ತಿನ ಸಾಕ್ಷಿಪ್ರಜ್ಞೆ ರತನ್ ಟಾಟಾ