Wednesday, 11th December 2024

ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಅಂಕ

ವಿಶ್ಲೇಷಣೆ

ಅಮೃತ್ ಲಾಲ್, ಹಿರಿಯ ಲೇಖಕ

ಕಣ್ಣೆ ಕತಿ ಕೊಲ್ಲಾಟೆ, ಕಂಡಥೈ ಎಲ್ಲಾಮ್ ನಂಬಾಟೇ, ಕಾಕೈ ಕುಲೇ ಆಗಾಟೇ, ಥೋಳಾ ಥಾಡಿಗಲ್ ಎಲ್ಲಾಮ್ ಟಾಗೋರಾ, ಸೈಗಳ್ ಎಲ್ಲಾಮ್ ಭರಥಿಯಾ, ವೇಶಥಿಲ್ ಆಮಾರಾಟೇ ಥೋಳಾ.

(ಕಣ್ಣಿದ್ದೂ ಕುರುಡಾಗಬೇಡಿ. ನೋಡಿದ್ದೆಲ್ಲವನ್ನೂ ನಂಬಬೇಡಿ. ಕಾಗೆ ಯಾವತ್ತೂ ಕೋಗಿಲೆಯಾಗದು. ಕಾಮ್ರೇಡ್, ಗಡ್ಡ ಬಿಟ್ಟವರೆಲ್ಲ ಟಾಗೋರ್ ಆದಾರೇ? ಮೀಸೆ ಬಿಟ್ಟವರೆಲ್ಲ ಭರಥಿ ಆದಾರೇ? ಕಾಮ್ರೇಡ್, ವೇಷ ಮರೆಸಿಕೊಂಡವರನ್ನು ನೋಡಿ ಮೂರ್ಖನಾಗಬೇಡ!) ಹೀಗಂತ ಹೇಳಿದ್ದು ಮಣಿರತ್ನಂ ಸಿನಿಮಾ ‘ಇರುವರ್’  (1997)ನಲ್ಲಿ ಎಂಜಿಆರ್ ಅವರ ಪಾತ್ರ ಮಾಡಿದ್ದ ಆನಂದನ್. ತನ್ನ ಪಕ್ಷದ ವಿರುದ್ಧವೇ ಬಂಡೇಳುವಾಗ ಅವರು ಈ ಡೈಲಾಗ್ ಹೊಡೆಯುತ್ತಾರೆ.

ತಮಿಳುನಾಡಿನ ರಾಜಕೀಯದ ಮಹತ್ವದ ಪದರಗಳನ್ನು ಒಳಗೊಂಡ ಸಿನಿಮಾ ಇದು. ಅದರಲ್ಲೂ 1960ರ ದಶಕದಲ್ಲಿ ಡಿಎಂಕೆಯ ಉತ್ತರಾಽಕಾರ ಸಮರ ತೀವ್ರಗೊಂಡ ಸಂದರ್ಭದ ಹಾಗೂ ವರ್ಣರಂಜಿತ ರಾಜಕಾರಣಿ ಎಂಜಿಆರ್ ಅವರು ಎಐಎಡಿಎಂಕೆಯನ್ನು 1972ರಲ್ಲಿ ಹುಟ್ಟುಹಾಕಿದ
ಸಂದರ್ಭವನ್ನು ಈ ಸಿನಿಮಾ ಬಹಳ ಚೆನ್ನಾಗಿ ತೋರಿಸುತ್ತದೆ. ಈಗ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ತಮಿಳುನಾಡು ರಾಜಕಾರಣ ಮತ್ತೆ ಮಹತ್ವದ ಘಟ್ಟದಲ್ಲಿದೆ.

ಬಹಳಷ್ಟು ನಟರು ಸ್ಕ್ರಿ- ಹಿಡಿದುಕೊಂಡು ಆ ಕಡೆ ಈ ಕಡೆ ಓಡಾಡುತ್ತಿದ್ದಾರೆ. ಆದರೆ ಡೈರೆಕ್ಟರ್ ಮಾತ್ರ ಎಲ್ಲೂ ಕಾಣಿಸುತ್ತಿಲ್ಲ! ಈ ಸೀನ್‌ನಲ್ಲೇ ವೇಷಧಾರಿಗಳು ಹಾಗೂ ನಾಟಕ ಮಾಡುವವರು ಕೂಡ ಸೇರಿಕೊಂಡಿದ್ದಾರೆ. ಹೀಗಾಗಿ ನಿಜವಾದ ದೃಶ್ಯ ಯಾವುದೆಂಬುದನ್ನು ಪತ್ತೆಹಚ್ಚುವುದು ಕಷ್ಟವಾಗುತ್ತಿದೆ. ಸುಮಾರು ಐದು ದಶಕದ ಹಿಂದೆ ಆರಂಭವಾಗಿ ಇತ್ತೀಚಿನವರೆಗೂ ತಮಿಳುನಾಡಿನ ರಾಜಕಾರಣ ಕೇವಲ ಮೂವರು ವರ್ಣರಂಜಿತ ನಾಯಕರ ಸುತ್ತ ತಿರುಗುತ್ತಿತ್ತು.

ಈ ಮೂವರೂ ದ್ರಾವಿಡ ಚಳವಳಿಯ ನೇತಾರರು ತಾವೆಂದು ಹೇಳಿಕೊಳ್ಳುತ್ತಿದ್ದರು: ಒಬ್ಬರು ಡಿಎಂಕೆಯ ಹಿರಿಯ ನಾಯಕ ಎಂ.ಕರುಣಾನಿಧಿ. ಇವರು ತಮಿಳುನಾಡಿನ ರಾಜಕಾರಣದ ಒಂದು ಕಂಬ. ಇನ್ನೊಂದು ತುದಿಯಲ್ಲಿರುವ ಕಂಬವೆಂದರೆ ಎಂಜಿಆರ್ ಮತ್ತು ಜಯಲಲಿತಾ. ಎಂಜಿಆರ್ ೧೯೮೭ರಲ್ಲಿ ಜಾಗ ತೆರವುಗೊಳಿಸಿದರು. ಜಯಲಲಿತಾ ೨೦೧೬ರಲ್ಲಿ ಹಾಗೂ ಕರುಣಾನಿಧಿ ೨೦೧೮ರಲ್ಲಿ ಹೋದರು. ಮುಂಬರುವ ಚುನಾವಣೆ
ಈ ನಾಯಕರ ಪರಂಪರೆಯನ್ನು ಯಾರು ಮುಂದುವರಿಸಬೇಕು ಎಂಬುದಕ್ಕಾಗಿ ನಡೆಯುತ್ತಿರುವ ಯುದ್ಧ ಕೂಡ ಹೌದು.

ಜತೆಗೆ, ತಮಿಳುನಾಡಿನ ರಾಜಕೀಯ ಪಕ್ಷಗಳಿಗೆ ದ್ರಾವಿಡ ಚಳವಳಿಯನ್ನು ಮುಂದಕ್ಕೆ ಹೇಗೆ ತೆಗೆದುಕೊಂಡು ಹೋಗಬೇಕೆಂಬುದನ್ನು ಅರಿತು ಕೊಳ್ಳಲು ಇರುವ ಒಳ್ಳೆಯ ಅವಕಾಶವೂ ಹೌದು. ಇಲ್ಲಿಯವರೆಗೆ ಈ ಪಕ್ಷಗಳ ರಾಜಕಾರಣಿಗಳು ಲುಂಗಿ ಹಾಗೂ ಅಂಗವಸದಂತಹ ಸ್ಥಳೀಯ ಸಾಂಪ್ರದಾಯಿಕ ದಿರಿಸಿನಲ್ಲಿ ಪೊಂಗಲ್ ಮತ್ತು ಜಲ್ಲಿಕಟ್ಟಿನಂತಹ ಸಾಂಪ್ರದಾಯಿಕ ಉತ್ಸವಗಳಲ್ಲಿ ಓಡಾಡುತ್ತಾ ಜನರೊಂದಿಗೆ ಇರುವುದಾಗಿ ತೋರಿಸಿಕೊಳ್ಳುತ್ತಿದ್ದರು.

ಈ ತೋರಿಕೆಯ ರಾಜಕಾರಣದಲ್ಲಿ ಒಕ್ಕೂಟ ರಾಜಕಾರಣ, ಪ್ರಾದೇಶಿಕ ಅಸ್ಮಿತೆ, ಭಾಷಾಭಿಮಾನ ಹಾಗೂ ಸಾಮಾಜಿಕ ನ್ಯಾಯಗಳು ಕೂಡ ಆಗಾಗ ಅತಿಥಿ ನಟರಂತೆ ಬಂದುಹೋಗುತ್ತಿದ್ದವು. ಜತೆಗೆ, ತಮಿಳುನಾಡಿನ ರಾಜಕಾರಣದಲ್ಲಿ ಕಾಣಿಸುವ ಸಾಂಸ್ಕೃತಿಕ ಸಂಗತಿಗಳು ಈ ರಾಜ್ಯದ ರಾಜಕಾರಣ ವನ್ನು ಅದ್ಧೂರಿ ರಾಜಕಾರಣವೆಂಬಂತೆ ಬಿಂಬಿಸಿದ್ದವು. ಅಫ್ಕೋರ್ಸ್, ತುಳುನಾಡಿನ ರಾಜಕಾರಣ ದಲ್ಲಿ ಅದ್ಧೂರಿತನಕ್ಕೆ ಬಹಳ ಮಹತ್ವವಿದೆ. ಆದರೆ, ಅದು ಅಷ್ಟೇ ಅಲ್ಲ, ಇನ್ನೂ ಬಹಳಷ್ಟು ಸಂಗತಿಗಳು ಕೂಡ ಇವೆ.

ಕಳೆದ ಬುಧವಾರ ತಮಿಳುನಾಡಿನ ಎಐಎಡಿಎಂಕೆ ನೇತೃತ್ವದ ಸರಕಾರ ಜಯಲಲಿತಾ ಅವರ ಮರೀನಾ ಬೀಚ್ ಮನೆಯಲ್ಲಿ ಬಹಳ ತರಾತುರಿಯಲ್ಲಿ ಸ್ಮಾರಕ ಉದ್ಘಾಟನೆ ಮಾಡಿತು. ಅದೇ ವೇಳೆಗೆ ಇತ್ತ ಬೆಂಗಳೂರಿನಲ್ಲಿ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ ಅವರ ಜೈಲುಶಿಕ್ಷೆಯೂ ಮುಗಿದಿತ್ತು. ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿದ್ದ ಶಶಿಕಲಾ ಅವರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಹಾಗೂ ಎಐಎಡಿಎಂಕೆಯ ಹಾಲಿ ನಾಯಕರಿಗೆ ಜಯಲಲಿತಾ ಅವರ ಪರಂಪರೆಯನ್ನು ಮುಂದುವರಿಸುವ ಸ್ಮಾರಕವನ್ನು ಉದ್ಘಾಟಿಸುವುದು ಇಷ್ಟವಿರಲಿಲ್ಲ ಎಂಬುದು ಸ್ಪಷ್ಟ.

ಹಾಗೆ ನೋಡಿದರೆ, ಸರಕಾರ ಮುನ್ನಡೆಸಲು ಹಿಂದೊಮ್ಮೆ ಶಶಿಕಲಾ ಅವರಿಂದಲೇ ಆಯ್ಕೆಯಾಗಿದ್ದ ಪಳನಿಸ್ವಾಮಿ ಅವರೇ ಸ್ವಲ್ಪ ಕಾಲದ ನಂತರ ಇನ್ನುಮುಂದೆ ಶಶಿಕಲಾಗೆ ಎಐಎಡಿಎಂಕೆಯಲ್ಲಿ ಜಾಗವಿಲ್ಲ ಎಂದಿದ್ದರು. ಜಯಲಲಿತಾ ಅವರ ಸಾವಿನ ನಂತರ ಎಐಎಡಿಎಂಕೆಯ ಎಲ್ಲ ಕಾರ್ಯಕರ್ತರಿಗೆ ಚಿನ್ನಮ್ಮ ಆಗಿದ್ದ ಹಾಗೂ ತಾಯಿಯಂತೆ ಬಿಂಬಿಸಿಕೊಳ್ಳುತ್ತಿದ್ದ ಶಶಿಕಲಾ, ಭ್ರಷ್ಟಾಚಾರದ ಪ್ರಕರಣದಲ್ಲಿ ಜೈಲಿಗೆ ಹೋದ ನಂತರ ಎಲ್ಲರೂ ಆಕೆಯ ಕೈಬಿಟ್ಟರು.

ಅವರ ಸಂಬಂಧಿ ಟಿಟಿ ದಿನಕರನ್ ಒಬ್ಬರೇ ಜಯಲಲಿತಾಗೆ ಶಶಿಕಲಾ ಅವರೇ ಉತ್ತರಾಧಿಕಾರಿಯೆಂದು ಹೇಳುತ್ತಾ ಹೊಸ ಪಕ್ಷ ಕಟ್ಟಿದರು. ಜೈಲಿಗೆ ಹೋಗುವ ಮುನ್ನ ಶಶಿಕಲಾ ಕೊನೆಯ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಜಯಲಲಿತಾ ಅವರ ಸಮಾಧಿಗೆ ಹೋಗಿ ಕೈ ಬಡಿದು  ಹೂಂಕರಿಸಿ ದ್ದರು. ಅದನ್ನು ಅವರ ಬೆಂಬಲಿಗರು ‘ಎಲ್ಲ ಅಡೆತಡೆ, ವಂಚನೆ ಹಾಗೂ ಷಡ್ಯಂತ್ರಗಳನ್ನು ಮೀರಿ ಮತ್ತೆ ಎದ್ದುಬರುವ’ ಶಪಥ ಎಂಬಂತೆ ಕಂಡಿದ್ದರು. ಅದೇ ಜಾಗದಲ್ಲಿ ಅದಕ್ಕೂ ಮುನ್ನ ಇನ್ನೊಂದು ಹೈಡ್ರಾಮಾ ನಡೆದಿತ್ತು.

ಜಯಲಲಿತಾ ಅವರ ಆಪ್ತ ಹಾಗೂ ಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಅವರು ಶಶಿಕಲಾ ವಿರುದ್ಧ ಬಂಡೇಳುವುದಕ್ಕಿಂತ ಮೊದಲು ಆ ಜಾಗದಲ್ಲಿ ಹೋಗಿ ಧ್ಯಾನಕ್ಕೆ ಕುಳಿತಿದ್ದರು. ನಂತರ ಅವರ ಬಂಡಾಯ ವಿಫಲವಾಯಿತು. ಎಐಎಡಿಎಂಕೆ ಹೋಳಾಗಿ, ಪಳನಿಸ್ವಾಮಿ ಅವರನ್ನು ಶಶಿಕಲಾ ಮುಖ್ಯಮಂತ್ರಿಯಾಗಿ ನೇಮಿಸಿದರು. ತಮಿಳುನಾಡಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮಿತ್ರರು ಶತ್ರುಗಳಾಗಿ, ಶತ್ರುಗಳು ಮಿತ್ರರಾಗಿ ಬದಲಾಗಿದ್ದಾರೆ. ಇದು ರಾಜಕಾರಣದಲ್ಲಿ ಸಾಮಾನ್ಯ ಬಿಡಿ. ಸ್ವಾರ್ಥ, ಅಧಿಕಾರದಾಸೆ, ಬಹುಶಃ ಕೆಲ ಪಾಲು ಕೇಂದ್ರದ ಆಡಳಿತಾರೂಢ ಪಕ್ಷದ ಕುಮ್ಮಕ್ಕೂ
ಇದರಲ್ಲಿ ಪಾತ್ರ ವಹಿಸಿದೆ.

ಆದರೆ, ಈ ಸಂಗತಿಗಳೇ ಕಳೆದ ನಾಲ್ಕು ವರ್ಷಗಳ ಕಾಲ ಎಐಎಡಿಎಂಕೆಯನ್ನು ಒಗ್ಗಟ್ಟಿನಲ್ಲಿಟ್ಟು, ಸರಕಾರವನ್ನು ಬದುಕಿಸಿ ಪೂರ್ಣಾವಧಿ  ಪೂರೈಸು ವಂತೆಯೂ ಮಾಡಿವೆ. ಈಗ ಶಶಿಕಲಾ ಹೊರಬಂದಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಜಯಲಲಿತಾ ಅವರ ಉತ್ತರಾಧಿಕಾರತ್ವವನ್ನು ಉಳಿಸಿಕೊಳ್ಳುವುದಕ್ಕೆ ಶಶಿಕಲಾ ಸವಾಲೆಸೆಯದೆ ಇರುವುದಿಲ್ಲ. ಆಗ ಮತ್ತೊಂದು ಸುತ್ತಿನ ಹೈಡ್ರಾಮಾ ನಡೆಯಬಹುದು. ಅದು ತಮಿಳುನಾಡಿನಲ್ಲಿ ರಾಜಕೀಯ ಧ್ರುವೀಕರಣಕ್ಕೂ ಕಾರಣವಾಗಬಹುದು.

ವಾಸ್ತವವಾಗಿ ತಮಿಳು ನಾಡಿನಲ್ಲಿ ಪೆರಿಯಾರ್ ಇ.ವಿ.ರಾಮಸ್ವಾಮಿ ಅವರಿಂದ ಆರಂಭಿಸಿ ದ್ರಾವಿಡ ಚಳವಳಿ ಚಾಲ್ತಿಯಲ್ಲಿದ್ದ ಅಷ್ಟೂ ಅವಧಿಯಲ್ಲಿ ಚಮತ್ಕಾರ ಹಾಗೂ ಸಿದ್ಧಾಂತಗಳೆರಡೂ ಅಕ್ಕಪಕ್ಕದಲ್ಲೇ ಸಾಗಿವೆ. ಆತ್ಮಗೌರವ, ತಮಿಳು ಅಸ್ಮಿತೆ, ಸಾಮಾಜಿಕ ನ್ಯಾಯ ಹಾಗೂ ನಾಸ್ತಿಕತೆ ಮುಂತಾದ
ಪೆರಿಯಾರ್ ಪ್ರಣೀತ ರಾಜಕೀಯ ಮೌಲ್ಯಗಳು ಅವರು ಆಯೋಜಿಸುತ್ತಿದ್ದ ಸಾರ್ವಜನಿಕ ರ‍್ಯಾಲಿಗಳಲ್ಲಿ ಒಂಥರಾ ಚಮತ್ಕಾರ ಗಳಂತೆಯೂ ತೋರುತ್ತಿದ್ದವು. ಅವರ ಅನುಯಾಯಿ ಸಿ.ಎನ್.ಅಣ್ಣಾದೊರೈ ಸಿನಿಮಾ ಎಂಬ ಪ್ರಬಲ ಮಾಧ್ಯಮವನ್ನು ಆಯ್ದುಕೊಂಡು, ಮತ್ತಷ್ಟು ಚಮತ್ಕಾರಗಳ ಮೂಲಕ ಜನರನ್ನು ಸೆಳೆಯಲು ಯತ್ನಿಸಿದರು.

ಅವರ ರಾಜಕಾರಣದಲ್ಲಿ ಮೆಲೋ ಡ್ರಾಮಾಕ್ಕೆ ಕೊರತೆಯಿರಲಿಲ್ಲ. ಅಣ್ಣಾದೊರೈ ನಿಧನಾ ನಂತರ ಡಿಎಂಕೆ ವಿಭಜನೆಗೊಂಡಾಗ ಎಐಎಡಿಎಂಕೆ ನಾಯಕ ಎಂಜಿಆರ್ ಮತ್ತೆ ಇಂತಹುದೇ ಚಮತ್ಕಾರಗಳಿಗೆ ಅಂಟಿಕೊಂಡರೆ, ಡಿಎಂಕೆ ನಾಯಕ ಕರುಣಾನಿಧಿ ಅವರು ಎಂಜಿಆರ್ ಅವರನ್ನೇ ಹೀರೋ
ಆಗಿಸಿ ತಮ್ಮ ಸಿದ್ಧಾಂತವನ್ನು ಪ್ರಚುರ ಪಡಿಸುವ ಅದ್ಭುತವಾದ ಪ್ರೊಪಗ್ಯಾಂಡಾ ಸಿನಿಮಾಗಳನ್ನು ನಿರ್ಮಿಸಿದರು. ವಾಸ್ತವವಾಗಿ ಇಬ್ಬರೂ ನಾಯಕರಿಗೆ ತಮ್ಮ ತಮ್ಮ ಶಕ್ತಿ ಗೊತ್ತಿತ್ತು. ಅವುಗಳನ್ನು ಬಳಸಿಕೊಂಡೇ ಅವರು ಸಾರ್ವಜನಿಕರ ಬೆಂಬಲ ಗಳಿಸುವ ಪ್ರಯತ್ನ ಜಾರಿಯಲ್ಲಿಟ್ಟರು.

ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳೂ ತಮಿಳು ಅಸ್ಮಿತೆಯ ಮೇಲೆಯೇ ಕಲ್ಯಾಣ ರಾಜ್ಯ ಕಟ್ಟುವ ಕನಸನ್ನು ಬಿತ್ತುತ್ತಿದ್ದವು. ಅದರ ಪರಿಣಾಮ, ತಮಿಳುನಾಡು ರಾಜ್ಯ ಸಂಸತ್ತಿಗೆ ೩೯ ಸಂಸದರನ್ನು ಕಳುಹಿಸಿದರೂ ಕೇಂದ್ರದಲ್ಲಿ ಕಳೆದ ಶತಮಾನದ ಅರ್ಧ ಭಾಗದಷ್ಟು ಸುದೀರ್ಘ
ಕಾಲ ‘ಸಾಮಾನ್ಯ’ ಆಟಗಾರ ನಾಗಿಯೇ ಉಳಿಯಬೇಕಾಯಿತು. ಆದರೆ, ಈ ‘ಸಾಮಾನ್ಯತ್ವ’ವೇ ತಮಿಳುನಾಡಿಗೆ ಸ್ವತಂತ್ರ ಶಕ್ತಿಯಾಗಿ ರೂಪುಗೊಳ್ಳಲು ಹಾಗೂ ಔದ್ಯೋಗಿಕ ಅಧಿಕಾರ ಕೇಂದ್ರವಾಗಿ ತನ್ನನ್ನು ಕಟ್ಟಿಕೊಳ್ಳಲು ಅವಕಾಶವನ್ನೂ ನೀಡಿತು.

ತನ್ಮೂಲಕ ತಮಿಳುನಾಡಿಗೆ ಒಂದು ಜಾತ್ಯತೀತ ಸಮಾಜವಾಗಿ ತನ್ನ ಗುರುತು ಉಳಿಸಿಕೊಂಡು ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಸಹಾಯ ಮಾಡಿತು. ತಮಿಳುನಾಡಿನ ರಾಜಕಾರಣದ ಒಳಮನೆಯೊಳಗೆ ಪ್ರವೇಶಿಸಿ ನೆಲೆಯೂರಲು ಬಯಸುವ ಯಾವುದೇ ರಾಜಕೀಯ ಪಕ್ಷ ಈ ದ್ರಾವಿಡ ಪಕ್ಷಗಳ ಇತಿಹಾಸವನ್ನು ಗುರುತಿಸಿಯೇ ಮುನ್ನಡೆಯ ಬೇಕು ಮತ್ತು ಆ ನೆಲೆಯ ಮೇಲೇ ತಮ್ಮ ಮನೆ ಕಟ್ಟಿಕೊಳ್ಳಲು ಯತ್ನಿಸಬೇಕು.

ರಜಿನೀಕಾಂತ್ ಅವರು ದ್ರಾವಿಡ ಪಕ್ಷಗಳಿಗೆ ತಮ್ಮನ್ನೊಂದು ಪರ್ಯಾಯವೆಂಬಂತೆ ಬಿಂಬಿಸಿಕೊಂಡು ತಮಿಳುನಾಡಿನ ರಾಜಕಾರಣವನ್ನು ರೂಪಾಂತರಗೊಳಿಸುವ ಸಂಕಲ್ಪ ಮಾಡಿದ್ದರು. ಅವರು ‘ಅಧ್ಯಾತ್ಮಿಕ ರಾಜಕಾರಣ’ ಎಂಬ ಅಸ್ಪಷ್ಟ ಸಿದ್ಧಾಂತದ ಮೂಲಕ ತಮ್ಮ ಚಿಂತನೆಗಳನ್ನು ಜನರಿಗೆ ಅರ್ಥಮಾಡಿಸಲು ಹೊರಟಿದ್ದರು. ಅವರು ಪೆರಿಯಾರ್‌ರ ರಾಜಕೀಯ ಉತ್ತರಾಧಿಕಾರತ್ವಕ್ಕೆ ಬಹಿರಂಗವಾಗಿ ಸವಾಲೆಸೆಯದೆ ಇದ್ದಿದ್ದರೆ ಹಿಂದುತ್ವದ ಶಕ್ತಿಗಳು ರಜಿನಿಕಾಂತ್‌ರ ರಾಜಕೀಯ ವನ್ನೂ ಹಿಂದು – ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಎಂದು ಬಿಂಬಿಸುತ್ತಿದ್ದವು.

ಹೆಚ್ಚು ಕಮ್ಮಿ ಅದೇ ವೇಳೆಗೆ ರಾಜ್ಯ ಬಿಜೆಪಿ ನಾಯಕರು ಜನಪ್ರಿಯ ದೇವರು ಮುರುಗನ್ ಸುತ್ತ ರಾಜಕಾರಣವನ್ನು ಕಟ್ಟಿ ನಿಲ್ಲಿಸಲು ವೇಲ್ ಯಾತ್ರಾ ಆರಂಭಿಸಿ ಸೋತರು. ಅದನ್ನು ನೋಡಿದ ಸೂಪರ್‌ಸ್ಟಾರ್‌ಗೆ ತಮಿಳುನಾಡಿನಲ್ಲಿ ಈಗಾಗಲೇ ಸ್ಥಾಪಿತವಾಗಿರುವ ದ್ರಾವಿಡ ರಾಜಕಾರಣದ ವಿರುದ್ಧ ರಾಜಕೀಯ ಪಕ್ಷವನ್ನು ಕಟ್ಟಿ ನಿಲ್ಲಿಸುವುದು ಸಿನಿಮಾದಲ್ಲಿ ರನ್‌ಗಳನ್ನು ಹೊಡೆದಷ್ಟು ಸುಲಭ ವಲ್ಲ ಎಂಬುದು ಅರ್ಥವಾಯಿತು.

ಅಷ್ಟೇ ಹೊತ್ತಿಗೆ ಕರೋನಾ ಕೂಡ ನೆರವಿಗೆ ಬಂತು. ಆ ನೆಪದಲ್ಲಿ ರಜನಿಕಾಂತ್ ಚುನಾವಣಾ ರಾಜಕಾರಣದೊಂದಿಗಿನ ತಮ್ಮ ಸರಸಕ್ಕೆ ಅಂತ್ಯ
ಘೋಷಿಸಿದರು. ತಮಿಳು ಸಿನಿಮಾದ ಇನ್ನೊಬ್ಬ ಸೂಪರ್‌ಸ್ಟಾರ್ ಕಮಲ್ ಹಾಸನ್ ಈಗಲೂ ದ್ರಾವಿಡ ರಾಜಕಾರಣಕ್ಕೆ ತಾವು ಸವಾಲೆಸೆಯುವುದಾಗಿ ಹೇಳುತ್ತಿದ್ದಾರೆ. ಆದರೆ, ಇಲ್ಲಿಯ ವರೆಗೂ ಅವರು ಪೆರಿಯಾರ್‌ರ ಪರಂಪರೆಯ ಜತೆಗೇ ಗುರುತಿಸಿಕೊಂಡಿದ್ದಾರೆಂಬುದು ಗಮನಾರ್ಹ ಸಂಗತಿ. ಅವರ
ರಾಜಕಾರಣವು ಅವರ ಇತ್ತೀಚಿನ ಸಿನಿಮಾಗಳಂತೆ ಎಷ್ಟೊಂದು ಸ್ವಯಂ ವೈಭವೀಕರಣದಲ್ಲಿ ಮುಳುಗಿದೆ ಯೆಂದರೆ ಅಲ್ಲಿ ಸ್ಕ್ರಿಪ್ಟ್ ಯಾರಿಗೂ ಕಾಣಿಸುತ್ತಲೇ ಇಲ್ಲ.ಆ ಸ್ಕ್ರಿಪ್ಟ್‌ನಲ್ಲಿ ಗೃಣಿಯರಿಗೆ ಸಂಬಳ ನೀಡುವಂತಹ ಆಕರ್ಷಕ ಭರವಸೆಗಳಿದ್ದವು.

ಅವು ಕಮಲ್‌ರ ಸ್ವಯಂ ಅಬ್ಬರದಲ್ಲಿ ಹಿನ್ನೆಲೆಗೆ ಸರಿದುಬಿಟ್ಟವು. ಇಷ್ಟಕ್ಕೂ ರಾಜಕಾರಣ ಕ್ಕೆ ಸಿನಿಮಾ ದಂತೆ ಕೇವಲ ಒಳ್ಳೆಯ ಯೋಚನೆಗಳ ಹೀರೋ ಇದ್ದರೆ ಸಾಲದು, ಜೊತೆಗೆ ಒಳ್ಳೆಯ ಸ್ಕ್ರಿಪ್ಟ್, ಉತ್ತಮ ಸಹನಟರು ಹಾಗೂ ಸಮರ್ಥ ತಂಡ ಕೂಡ ಇರಬೇಕಾಗುತ್ತದೆ. ಆಗ ಮಾತ್ರ ಯಶಸ್ವಿಯಾಗಬಹುದು. ಕುತೂಹಲಕರ ಸಂಗತಿಯೆಂದರೆ ತಮಿಳುನಾಡಿನ ರಾಜಕೀಯ ಕಣ ಈಗಾಗಲೇ ಛಿದ್ರವಾಗಿದೆ. ಯಾವುದೇ ಒಂದು ಪಕ್ಷ ತಮಿಳುನಾಡಿಗೆ ತಾನೇ ನಾಯಕನೆಂದು ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ.

ಇದನ್ನು ಡಿಎಂಕೆ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿ ಅದು ಮಿತ್ರ ಪಕ್ಷಗಳ ಜತೆಗೆ ಇಲ್ಲಿಯವರೆಗಂತೂ ಒಳ್ಳೆಯ ಸಂಬಂಧ ಇರಿಸಿಕೊಂಡಿದೆ. ಆ ಮಿತ್ರರು ಯಾರು? ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು ಹಾಗೂ ದುಥಲೈ ಚಿರುಥೈಗಲ್ ಕಚ್ಚಿ (ಸಿಕೆ)ಯಂತಹ ದಲಿತ ಸಂಘಟನೆಗಳು. ಹಾಗಂತ ಇಲ್ಲೂ ಬೆಂಕಿಯುಗುಳುವ ಕೆಲ ಹೀರೋಗಳಿದ್ದಾರೆ. ಅವರ ಕ್ರಾಂತಿಕಾರಿ ಮಾತುಗಳನ್ನು ಇಷ್ಟಪಡುವ ಒಂದಷ್ಟು ಜನರೂ ಇದ್ದಾರೆ. ಅವರ ಸಿನಿಮೀಯ ಭರವಸೆಗಳಿಗೆ ಕೆಲವರು ಮರುಳಾಗಬಹುದು. ಆದರೆ, ಅವರಿಗೆ ಸಾಂಸ್ಥಿಕ ಶಕ್ತಿಯಿಲ್ಲ. ಅಥವಾ ರಾಜ್ಯದ ರಾಜಕಾರಣದ ಮೇಲೆ ಪ್ರಭಾವ ಬೀರುವ ತಾಕತ್ತಿಲ್ಲ. ಉದಾಹರಣೆಗೆ ಸೀಮನ್ ಅವರ ನಾಮ್ ತಮಿಳರ್ ಪಕ್ಷ. ಅವರು ವರ್ಣರಂಜಿತ ರಾಜಕಾರಣಕ್ಕೆ ಒಂದಷ್ಟು ಹೊಸ ಬಣ್ಣವನ್ನಷ್ಟೇ ಸೇರಿಸಬಲ್ಲರು.

ಆದರೆ, ಚುನಾವಣೆಯ ಫಲಿತಾಂಶದ ಮೇಲೆ ಸಣ್ಣ ಪ್ರಭಾವ ಮಾತ್ರ ಬೀರಬಲ್ಲರು. ವಾಸ್ತವ ಏನೆಂದರೆ ತಮಿಳುನಾಡಿನ ಮತದಾರರು ಅಲ್ಲಿನ ರಾಜಕೀಯ ಪಕ್ಷಗಳೊಂದಿಗೆ ನೇರವಾಗಿ ಕೊಡುಕೊಳ್ಳುವ ಸಂಬಂಧ ಹೊಂದಿದ್ದಾರೆ. ಆದರೆ, ಅದನ್ನು ತೆರೆಮರೆಯಲ್ಲೇ ಇರಿಸಲು ಬಯಸುತ್ತಾರೆ.