ಶಿಶಿರ ಕಾಲ
shishirh@gmail.com
ಈಗಿನ ಪರಿಸ್ಥಿತಿ ಹೇಗಾಗಿದೆಯೆಂದರೆ ಅಸಹಜ ರುಚಿಯ ಆಹಾರಗಳು ನಾಲಿಗೆಯ ಮೇಲೆ ಬೀಳುತ್ತಿದ್ದಂತೆ ಅದಕ್ಕಿಂತ ಹೆಚ್ಚಿನ ರುಚಿಯ ಆಹಾರದ ಬಯಕೆ ಹೆಚ್ಚುತ್ತ ಹೋಗುತ್ತದೆ, ಮತ್ತಷ್ಟು ತೀವ್ರವಾಗುತ್ತದೆ.
ಇದೇನಿದು? ಊಟವೇ ಚಟವಾಗುತ್ತಿದೆಯೇ? ಇಪ್ಪತ್ತು ಚಪಾತಿ, ಮೂವತ್ತು ಜಿಲೇಬಿ, ಕೊಳಗದಷ್ಟು ಕೇಸರಿಬಾತು, ಹದಿನೈದು ದೋಸೆ ಹೀಗೆಲ್ಲ ಅತಿಮಾನುಷ ಲೆಕ್ಕದಲ್ಲಿ ತಿಂಡಿ, ಊಟ ಮಾಡುವವರು ಈಗೀಗ ಕಾಣುವುದು ಕಡಿಮೆ. ಆದರೆ ನಾನು ಹೇಳಲು
ಹೊರಟಿರುವ ವಿಷಯ ಆ ರೀತಿ ಊಟದ ಬ್ಯಾಟಿಂಗ್ ಬಾರಿಸುವ ಘಟಾನುಘಟಿಗಳದ್ದಲ್ಲ. ಅಥವಾ ಯಾವುದೋ ಒಂದು ಆಹಾರವನ್ನು ಅತಿಯಾಗಿ ಪ್ರೀತಿಸುವ, ಬಯಸುವವರ ಬಗ್ಗೆಯೂ ಅಲ್ಲ.
ನನ್ನ ಕಾಲೇಜಿನ ಸ್ನೇಹಿತರ ಗುಂಪಿನಲ್ಲಿ ಒಬ್ಬನಿಗೆ ದೋಸೆ, ಇಡ್ಲಿಯ ಜತೆಯಲ್ಲಿ ಕೊಡುವ ಚಟ್ನಿಯೆಂದರೆ ಪಂಚಪ್ರಾಣ. ಅವನು ಹೋಟೆಲ್ಲಿಗೆ ಹೋಗುತ್ತಿದ್ದುದೇ ಚಟ್ನಿ ತಿನ್ನಲಿಕ್ಕೆ, ಕುಡಿಯಲಿಕ್ಕೆ. ಪ್ಲೇಟಿನ ತಿಂಡಿ ಖಾಲಿಯಾದ ಮೇಲೆಯೂ ಚಟ್ನಿ ತರಿಸಿಕೊಂಡು ತಿನ್ನುತ್ತಿದ್ದ. ಆಗೆಲ್ಲ ಚಟ್ನಿ, ಸಾಂಬಾರಿಗೆ ಎಕ್ಸ್‌ಟ್ರಾ ದುಡ್ಡು ಎಂದಿರಲಿಲ್ಲ. ಆದರೆ ಆ ಹೋಟೆಲ್ ಮಾಲೀಕ ಕೊನೆಗೊಂದು ದಿನ, ಇವನ ಕಾರಣಕ್ಕೇ ಚಟ್ನಿಗೆ ಎಕ್ಸ್‌ಟ್ರಾ ದುಡ್ಡು ಎಂದು ಘೋಷಿಸಿದ್ದಾಯಿತು.
ಹೀಗೆ ಯಾವುದೋ ಒಂದು ತಿನಿಸನ್ನು ಅಥವಾ ಉಮೇದಿಗೆ ಯಾವತ್ತೋ ಒಂದು ದಿನ ಸವಾಲು ಹಾಕಿಕೊಂಡು ತಿನ್ನುವವರ ವಿಷಯ ಇದಲ್ಲ. ಇದು ಊಟವೇ ಚಟವಾಗುತ್ತಿರುವ- ಆಧುನಿಕ ಆಹಾರ ವ್ಯಸನದ ಬಗ್ಗೆ. ಆಸೆ ದುಃಖಕ್ಕೆ ಮೂಲವೇ ಆಗಿರಬಹುದು. ಆದರೆ ಚಿಕ್ಕ ಅಮೀಬಾದಿಂದ ಅತ್ಯಂತ ವಿಕಸಿತ ಮನುಷ್ಯನವರೆಗೆ ಇಡೀ ಜೀವವ್ಯವಸ್ಥೆ ನಿಂತಿರುವುದೇ ಆಸೆ, ಬಯಕೆಯ ಮೇಲೆ. ಆಹಾರ ಸೇವನೆ, ವಂಶಾಭಿವೃದ್ಧಿ ಇವೆಲ್ಲವೂ ಅದೇ ಬದುಕುವ ಪರಮ ಆಸೆಯ ವಿಸ್ತರಣೆಯೇ ಆಗಿದೆ. ಈ ಎಲ್ಲ ಜೀವಸಹಜ ಆಸೆಯನ್ನು ಸದಾ ಜಾಗೃತವಾಗಿಡಲು ವಿಕಸನದ ಹಾದಿಯಲ್ಲಿ ಒಂದು ಅನನ್ಯ ವ್ಯವಸ್ಥೆಯೂ ರೂಪುಗೊಂಡಿದೆ.
Neural Reward Function.. ಮಿದುಳಿನ ನರಗಳ ಆಂತರಿಕ ಪುರಸ್ಕಾರ ವ್ಯವಸ್ಥೆ. ಏನಿದು ವ್ಯವಸ್ಥೆ? ಉದಾಹರಣೆಗೆ, ನಮಗೆ ತೀರಾ ಬಾಯಾರಿಕೆಯಾದಾಗ ನೀರಿನ ಆಸೆಯಾಗುತ್ತದೆ. ಈ ಆಸೆ ತಣಿಯುವುದು ನೀರು ಕುಡಿದಾಕ್ಷಣ. ಜತೆಯಲ್ಲಿ ನಮ್ಮ ಮಿದುಳು ಒಂದಿಷ್ಟು ಖುಷಿಯ ಹಾರ್ಮೋನ್‌ಗಳನ್ನು ಆ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತದೆ. ನೀರು ಕುಡಿದಾಗ ಬಾಯಾರಿಕೆ ತಣಿಯು ವುದರ ಜತೆಗೆ ಖುಷಿಯಾಗುವಂತೆ ಅನುಭವವಾಗುವುದು ಮಿದುಳಿನಲ್ಲಿನ ಈ ರಾಸಾಯನಿಕ ಉತ್ಪತ್ತಿ ಮತ್ತು ಗ್ರಹಿಕೆಯಿಂದ.
ಇದು ಇನ್ನೊಮ್ಮೆ ಬಾಯಾರಿಕೆ ಯಾದರೆ ತಕ್ಷಣ ಕಾರ್ಯಪ್ರವೃತ್ತಿಯಾಗುವಂತೆ ಖುಷಿಯನ್ನು ನೆನಪಿಸಿ, ಉತ್ತೇಜನ ಕೂಡ ಕೊಡುತ್ತದೆ. ಹಸಿದಾಗ ಆಹಾರ ತಿಂದರೂ ಹಾಗೆಯೇ. ಅಷ್ಟೇ ಅಲ್ಲ, ಆಟದಲ್ಲಿ ಗೆದ್ದಾಗ, ಪಂದ್ಯ ವೀಕ್ಷಿಸುವಾಗ, ಲಾಟರಿ ಗೆದ್ದಾಗ ಹೀಗೆ ಅತ್ಯಂತ ಖುಷಿಯಾಗುವ ಸಂದರ್ಭದಲ್ಲೆಲ್ಲ ಈ ಡೋಪಮೈನ್ ಪ್ರಮಾಣಕ್ಕನುಗುಣವಾಗಿ ಬಿಡುಗಡೆಯಾಗುತ್ತದೆ. ಅವು ಬಿಡುಗಡೆಯಾದಾಗ ಅಲ್ಲಿಯೇ ಇರುವ ಅವುಗಳ ಗ್ರಾಹಿಗಳು ಸಾಂತ್ವನಗೊಳ್ಳುತ್ತವೆ.
ಈ ಮೂಲಕ ಒಂದು ಸರ್ಕಲ್ ಪೂರ್ಣವಾಗುತ್ತದೆ. ನಾವು ಆದಿಮಾನವರಾಗಿದ್ದಾಗ ಆಹಾರವನ್ನು, ನೀರನ್ನು ಹೋಗಿ ಪಡೆಯು ವಂತೆ ಪ್ರೇರೇಪಣೆ ನೀಡುತ್ತಿದ್ದುದೇ ಈ ನರಗಳ ಆಂತರಿಕ ಪುರಸ್ಕಾರ ವ್ಯವಸ್ಥೆ. ಅದಿಲ್ಲದಿದ್ದರೆ ಮನುಷ್ಯರೆಲ್ಲ ಪರಮ ಆಲಸಿ ಗಳಾಗಿ, ಹಸಿವಿನಿಂದಲೇ ಅವಸಾನವಾಗಿ ಬಿಡುತ್ತಿದ್ದರು. ಪ್ರೇರಣೆಗಷ್ಟೇ ಅಲ್ಲ, ಹೆಚ್ಚಿನ ಪೌಷ್ಟಿಕ ಆಹಾರವನ್ನು ಪಡೆಯುವಂತೆ ಪ್ರೇರೇಪಿಸುತ್ತಿದ್ದದ್ದೂ ಇದೇ Neural Reward Function. ಆಹಾರ ಹೆಚ್ಚಿನ ಸಿಹಿ, ಕೊಬ್ಬು ಹೊಂದಿದೆ ಎಂದರೆ ಹೆಚ್ಚಿನ ರಾಸಾಯ ನಿಕ ಬಿಡುಗಡೆಯಾಗುವ, ಖುಷಿಯ ಅನುಭವವಾಗುವ ವ್ಯವಸ್ಥೆ ಇದು.
ನೆಲದ ಹಂತದಲ್ಲಿ ಯಾವುದೋ ತಿನ್ನುವ ಸೊಪ್ಪಿದೆ, ಮರದ ಮೇಲೆ ಮಾವಿನ ಹಣ್ಣಿದೆ ಎಂದರೆ ಮರವನ್ನು ಏರುವಂತೆ ಮನುಷ್ಯ
ನಿಗೆ ಪ್ರೇರೇಪಿಸುತ್ತಿದ್ದುದು ಇದೇ ವ್ಯವಸ್ಥೆ. ಯಾರೋ ಕೊಯ್ದ ಹಣ್ಣಿಗಿಂತ ನಾವೇ ಮರ ಹತ್ತಿ ಕೊಯ್ದು ತಿಂದರೆ ಆಗುವ ಅನುಭವ ಜಾಸ್ತಿ ಖುಷಿ ಕೊಡಲು ಇದುವೇ ಕಾರಣ. ಒಟ್ಟಾರೆ Action-Reward-ಕ್ರಿಯೆ ಮತ್ತು ಬಹುಮಾನದ ಆಂತರಿಕ ವ್ಯವಸ್ಥೆ ನಮ್ಮೆಲ್ಲರ, ಸಕಲ ಪ್ರಾಣಿಸಂಕುಲದ ಬದುಕನ್ನು ನಿರ್ದೇಶಿಸುತ್ತದೆ. ಈಗ ನೀವಿಷ್ಟಪಡುವ ಯಾವುದೇ ಒಂದು ತಿಂಡಿಯನ್ನು ನೆನಪಿಸಿಕೊಳ್ಳಿ. ಆ ತಿಂಡಿ ಪ್ರಕೃತಿ ಸಹಜವಾಗಿ ಸಿಗುವ ಯಾವುದೇ ಆಹಾರಕ್ಕಿಂತ ಜಾಸ್ತಿ ಸಿಹಿ ಅಥವಾ ಕೊಬ್ಬು ಅಥವಾ ಉಪ್ಪನ್ನು ಹೊಂದಿರುತ್ತದೆ ಎಂದೇ ಅರ್ಥ.
ನಾವು ಬದುಕುವ ರೀತಿ ಬದಲಾಗಿದ್ದರೂ ನಮ್ಮ ಈ ಆಂತರಿಕ ಬಹುಮಾನದ ವ್ಯವಸ್ಥೆ ನೂರಿನ್ನೂರು ವರ್ಷದಲ್ಲಿ ಬದಲಾಗಿ ಬಿಡುವುದಿಲ್ಲವಲ್ಲ. ನಮ್ಮ ಈ ವ್ಯವಸ್ಥೆ ಇನ್ನೂ ಗೆಣಸು, ಒಳ್ಳೆಯ ಹಣ್ಣು, ಧಾನ್ಯ, ಮಾಂಸ ಇವಷ್ಟನ್ನೇ ಪ್ರಶಂಸಿಸುವಷ್ಟು ಹೊಂದಿಕೊಂಡಿವೆ. ಆದರೆ ಈಗ ಅಸಹಜ ಪ್ರಮಾಣದ ಕೊಬ್ಬು, ಸಿಹಿ ಮತ್ತು ಉಪ್ಪಿನ ಆಹಾರ ನಮ್ಮ ಸೇವನೆಗೆ ಲಭ್ಯವಿದೆ. ಇವು ನಾಲಿಗೆಗೆ ತಾಕಿದಾಗ ಉಂಟಾಗುವ ಅನುಭವ ಸಹಜ ಹಣ್ಣಿನ ಅನುಭವಕ್ಕಿಂತ ಸಾವಿರಪಟ್ಟು ಜಾಸ್ತಿಯದು. ಹೀಗಾಗಿ ಗೋಬಿ ಮಂಚೂರಿ ಪಕ್ಕದಲ್ಲಿ ಸೇಬುಹಣ್ಣು ಇಟ್ಟರೆ ಗೋಬಿಯನ್ನೇ ಆಯ್ಕೆಮಾಡಿಕೊಳ್ಳುವುದು. ಕೊಬ್ಬು, ಸಿಹಿ ಮತ್ತು ಉಪ್ಪು ನಾಲಿಗೆಗೆ ತಾಕಿದಾಕ್ಷಣ ಅದರ ಪ್ರಮಾಣಕ್ಕನುಗುಣವಾಗಿ ಖುಷಿಯ ಹಾರ್ಮೋನ್ ಬಿಡುಗಡೆ ಮಾಡುವ ಯಾಂತ್ರಿಕತೆ ಮಿದುಳಿನ ಅನಿವಾರ್ಯ. ಮಸಾಲೆದೋಸೆ ತೆಗೆದುಕೊಂಡರೆ ಯಥೇಚ್ಛ ತುಪ್ಪವೆಂಬ ಕೊಬ್ಬು, ಸಾಂಬಾರಿಗೆ ಸಿಹಿ ಸೇರಿಸಿ, ಚಟ್ನಿಗೆ ಸ್ವಲ್ಪ ಉಪ್ಪು ಮುಂದೆ ಮಾಡಿಬಿಟ್ಟರೆ ಈ ನರವ್ಯವಸ್ಥೆಗೆ ಅದೊಂದು ಪೂರ್ಣ ಪ್ಯಾಕೇಜ್.
ಮನುಷ್ಯ ಕ್ರಿಯಾಶೀಲನಾಗಿರುವಂತೆ, ಆಹಾರವನ್ನು, ಬಯಸಿದ್ದನ್ನು ಪಡೆಯುವಂತೆ ಪ್ರೇರೇಪಿಸುವ ಈ ವ್ಯವಸ್ಥೆಯಲ್ಲಿ ಇನ್ನೊಂದು ಕಿರಿಕ್ ಇದೆ. ಆದಿಮಾನವನ ಉದಾ ಹರಣೆಯನ್ನೇ ತೆಗೆದುಕೊಳ್ಳೋಣ. ಅವನಿಗೆ ಹಸಿವಾದಾಗ ಹಣ್ಣನ್ನು ತಿಂದಾಗ ಡೋಪಮೈನ್ ಬಿಡುಗಡೆಯಾಗುತ್ತಿತ್ತು. ಅದು ಅದರ ಗ್ರಾಹಿಗಳನ್ನು ತಲುಪಿ ಖುಷಿಯ ಅನುಭವ ವಾಗುತ್ತಿತ್ತು. ಆದರೆ ದೇಹಕ್ಕೆ ಒಂದೇ ತೆರನಾದ ಆಹಾರ ಕೊಟ್ಟರೆ ಹೇಗೆ? ಅದನ್ನು ದೇಹ ಪ್ರಶಂಸಿಸಬಾರದಲ್ಲ. ದೇಹ ಅದಕ್ಕೊಂದು ಉಪಾಯ ಮಾಡಿ ಕೊಂಡಿದೆ.
ಇಲ್ಲಿ ಈ ಡೋಪಮೈನ್ ಗ್ರಾಹಿಗಳಿವೆಯಲ್ಲ, ಅವುಗಳ ಸೂಕ್ಷ್ಮತೆ ಕ್ರಮೇಣ ಕ್ಷೀಣಿಸುತ್ತದೆ. ಅವು ಜಾಡ್ಯತೆ ಬೆಳೆಸಿಕೊಂಡು ಬಿಡುತ್ತವೆ. ಇದರಿಂದ ವ್ಯಕ್ತಿ ಇನ್ನಷ್ಟು ರುಚಿಯನ್ನು ಬಯಸುವಂತೆ ಪ್ರೇರೇಪಿಸಲು ಶುರುಮಾಡುತ್ತವೆ. ಹಾಗಾದಾಗ ಮಾತ್ರ ಮನುಷ್ಯ ಇನ್ನೂ ಹೆಚ್ಚಿನ ಪೌಷ್ಟಿಕ ಆಹಾರಕ್ಕೆ ಹಾತೊರೆಯು ವುದು ಎಂಬ ಕಾರಣಕ್ಕೆ ಇದೆಲ್ಲ ಇದ್ದದ್ದು. ಆದರೆ ಈಗ ಹೇಗಾಗಿದೆಯೆಂದರೆ ಅಸಹಜ ರುಚಿಯ ಆಹಾರಗಳು ನಾಲಿಗೆಯ ಮೇಲೆ ಬೀಳುತ್ತಿದ್ದಂತೆ ಅದಕ್ಕಿಂತ ಹೆಚ್ಚಿನ ರುಚಿಯ ಆಹಾರದ ಬಯಕೆ ಹೆಚ್ಚುತ್ತ ಹೋಗುತ್ತದೆ. ಈ ಗ್ರಾಹಿಗಳ ಜಾಡ್ಯದಿಂದ ಕ್ರಮೇಣ ಇನ್ನಷ್ಟು ಕೊಬ್ಬಿನ, ಸಿಹಿಯ ಆಹಾರದ ಕಡುಬಯಕೆ ಹೆಚ್ಚುತ್ತದೆ. ರುಚಿ ತಿಂದಷ್ಟು ಇನ್ನಷ್ಟು ರುಚಿಯ ಬಯಕೆ. ಹೋಟೆಲ್ಲಿನಲ್ಲಿ ಏನೋ ಒಂದನ್ನು ನೀವು ಕಾಯಂ ತಿನ್ನುತ್ತಿದ್ದರೆ ಆ ರುಚಿಯ ಜಾಡ್ಯತೆ ಹುಟ್ಟುವುದು ಹಾಗೆ.
ಅಲ್ಲಿ ನಮ್ಮ ನರಮಂಡಲ ಖುಷಿಯನ್ನು ಗ್ರಹಿಸಲಾಗದ ಆಲಸ್ಯ ಬೆಳೆಸಿಕೊಂಡು ಇನ್ನೂ ಹೆಚ್ಚಿನ ಸಿಹಿ, ಉಪ್ಪು ಅಥವಾ ಕೊಬ್ಬಿನ
ಆಹಾರದ ಬಯಕೆ ಮುಂದಿಡುತ್ತವೆ. ಈ ಕಾರಣಕ್ಕೇ ಮಸಾಲೆ ದೋಸೆ ಕೆಲವೊಂದಿಷ್ಟು ಸಮಯ ಇಷ್ಟವಾದ ನಂತರ ಕ್ರಮೇಣ ನಾಲಿಗೆ, ದೇಹ ಹೆಚ್ಚಿನ ಕೊಬ್ಬಿನ ಪಿಜ್ಜಾ ಮೊದಲಾದವನ್ನು ಬಯಸುವುದು. ಕೋಟ್ಯಾನುಕೋಟಿ ವರ್ಷ ಸಮರ್ಥವಾಗಿ ಕೆಲಸ ನಿಭಾಯಿಸಿದ್ದ Neural Reward Function ಇಂದಿನ ಆಹಾರ ಲಭ್ಯತೆ ಮತ್ತು ರುಚಿಯ ಸಾಧ್ಯತೆಯಿಂದಾಗಿ ಸಂಪೂರ್ಣ
ಅಪರಾತಪರಾ ಕೆಲಸಮಾಡುತ್ತಿದೆ. ಆರೋಗ್ಯವಾಗಿದ್ದದ್ದಷ್ಟೇ ರುಚಿಯಾಗಬೇಕಾಗಿದ್ದ ವ್ಯವಸ್ಥೆಗೆ ಅನಾರೋಗ್ಯಕರ ಆಹಾರವೇ ಜಾಸ್ತಿ ರುಚಿಸುತ್ತಿದೆ.
ನಾವು ಇಂದು ಈ ಆಂತರಿಕ ವ್ಯವಸ್ಥೆಯನ್ನೇ ಸೋಲಿಸಿದ್ದೇವೆ. ಹೆಂಡ, ತಂಬಾಕು, ನಾರ್ಕೊ, ಡ್ರಗ್ಸ್ ಇವೆಲ್ಲವುಗಳಿಂದ ಆಗುವ ಅನುಭವ ಮತ್ತು ಒಳ್ಳೆಯ ಆಹಾರ ಸೇವನೆಯಿಂದಾಗುವ ಅನುಭವ ವ್ಯವಸ್ಥೆ ಒಂದೇ. ಇದೇ ವ್ಯವಸ್ಥೆ ಮತ್ತೆ ಮತ್ತೆ ಬಯಸುವಂತೆ ಮಾಡುವುದು. ಅದುವೇ ಚಟವೆನಿಸಿಕೊಳ್ಳುವುದು. ನೀವು ಪೇಟೆಯಲ್ಲಿರುವವರಾದರೆ ಇದನ್ನು ಗಮನಿಸಿರಲಿಕ್ಕೆ ಸಾಕು. ಇಂದಿನ ಮಕ್ಕಳು ಮನೆಯ ಅನ್ನ, ಸಾಂಬಾರು ಇತ್ಯಾದಿಗಿಂತ ಹೋಟೆಲ್ಲಿನ ತಿಂಡಿ ಬಯಸುತ್ತಾರೆ. ಮನೆಯಲ್ಲಿ ಮಕ್ಕಳ ಆಹಾರ ಸೇವನೆ ಎಂಬುದೇ ಸುಪ್ರೀಂ ಕೋರ್ಟಿಗೆ ಹೋಗುವಷ್ಟು ದೊಡ್ಡ ವಿಷಯ. ಅದೇ ಮಕ್ಕಳು ಪಿಜ್ಜಾ, ಬರ್ಗರ್ ಎಂದರೆ ತಕ್ಷಣ ಜಾಗೃತ ರಾಗುತ್ತಾರೆ.
ಚಾಟ್ಸ್, ಹೋಟೆಲ್ ತಿಂಡಿ ಎಂದರೆ ರೋಮಾಂಚನಗೊಳ್ಳುತ್ತಾರೆ, ಕೇಕೆ ಹಾಕುತ್ತಾರೆ. ಅವರ ಖುಷಿಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕೂಡ ಈ ವ್ಯವಸ್ಥೆಯೇ ನೇರ ಕಾರಣ. ಮಕ್ಕಳಿಗೂ ನಮ್ಮಂತೆಯೇ, ಅತ್ಯಂತ ಹೆಚ್ಚಿನ ಕೊಬ್ಬಿನ, ಸಿಹಿಯ, ಉಪ್ಪಿನ ಆಹಾರ ಕೊಟ್ಟಾಗ ಹೆಚ್ಚಿನ ಡೋಪಮೈನ್ ಬಿಡುಗಡೆಯಾಗುತ್ತದೆ. ನಂತರ ಸಹಜ ರುಚಿಯ ಆಹಾರ ಅವರ ಮಿದುಳಿನಲ್ಲಿ ಅಷ್ಟೇ ಪ್ರಮಾಣದ ಡೋಪಮೈನ್ ಸೂಸುವುದಿಲ್ಲ. ಹಾಗಾಗಿಯೇ ಮನೆಯ ಆಹಾರ ರುಚಿಸುವುದಿಲ್ಲ.
ಈ ವ್ಯವಸ್ಥೆ ಕೆಲವೊಮ್ಮೆ ನಮ್ಮ ಪಾಕಶಾಸ ಪ್ರಾವೀಣ್ಯ ದಿಂದಾಗಿ ಗೊಂದಲಕ್ಕೊಳಗಾಗುವುದುಂಟು. ನಮಗೆ ಪಾನಿಪುರಿ, ಮಸಾಲ ಪುರಿ, ಮಿಸಾಳ್ ಭಾಜಿ ಇವನ್ನು ಸೇವಿಸಿದಾಗ ಅದು ನಡೆಯುತ್ತದೆ. ಆ ಆಹಾರದಲ್ಲಿ ಎಲ್ಲಾ ರುಚಿಗಳು ಮಿಶ್ರಿತವಾಗಿವೆ. ಹಾಗಾಗಿ ಅದನ್ನು ಸೇವಿಸಿದಾಗ ಮಿದುಳು ಅತ್ಯಂತ ಶ್ರೇಷ್ಠ ಆಹಾರ ಸೇವಿಸಿದಾಗ ಸ್ರವಿಸುವಷ್ಟು ಡೋಪಮೈನ್ ಸ್ರವಿಸಿಬಿಡುತ್ತದೆ. ಹಾಗಾಗಿಯೇ ಚಾಟ್ ಅಷ್ಟು ಇಷ್ಟವಾಗುವುದು. ನಾಲಿಗೆಯ ಮೇಲೆ ಬಿದ್ದಾಕ್ಷಣ ರುಚಿಯ ಕಚಗುಳಿಯೆನಿಸುವುದು.
ಇನ್ನು ಕೆಲವೊಮ್ಮೆ ಈ ವ್ಯವಸ್ಥೆ ಸಂಪೂರ್ಣ ದಾರಿತಪ್ಪಿ ಬಿಡುವುದೂ ಇದೆ. ಉದಾಹರಣೆಗೆ ಪೃಕೃತಿ ಸಹಜವಲ್ಲದ, ಉಪ್ಪು, ಹುಳಿ ಮತ್ತು ಖಾರವಲ್ಲದ ಐದನೆಯ ರುಚಿ ನಾಲಿಗೆಗೆ ತಾಗಿದಾಗ. ಅದು ಅಜಿನೋಮೊಟೊ. ನರವ್ಯವಸ್ಥೆಗೆ ಇದು ಅತ್ಯಂತ ಅಸಹಜ ರುಚಿ. ನಮ್ಮ ಮಿದುಳು ಆ ರುಚಿಯನ್ನು ಗ್ರಹಿಸಲಾಗದೇ ಗೊಂದಲವಾಗಿ ಇದು ಅತ್ಯುತ್ಕೃಷ್ಟ ಎಂದು ಕೊಳ್ಳುವ ತಪ್ಪು ಲೆಕ್ಕಾಚಾರ ಅಲ್ಲಿ ಆಗುತ್ತದೆ. ಪ್ರಪಂಚದ ದೇಶಗಳನ್ನು ಮುಂದುವರಿದ, ಮುಂದುವರಿಯುತ್ತಿರುವ ಮತ್ತು ಹಿಂದುಳಿದ ದೇಶ ಎಂದು ಮೂರು ಭಾಗವಾಗಿ ವಿಂಗಡಿಸಬಹುದು. ಅಮೆರಿಕ ಮುಂದುವರಿದ ದೇಶ. ಇಲ್ಲಿ ಬಡತನವಿದ್ದರೂ ಆಹಾರಕ್ಕೆ ಕೊರತೆ ಯಿಲ್ಲ.
ಕೃಷಿ ಕ್ರಾಂತಿಯ ನಂತರ ಅತ್ಯುತ್ಕೃಷ್ಟ ರುಚಿಯ (ಹೆಚ್ಚಿನ ಸಿಹಿ, ಕೊಬ್ಬು ಮತ್ತು ಲವಣಾಂಶ ಅತಿಯಾಗಿರುವ) ಆಹಾರ ಅತ್ಯಂತ ಕಡಿಮೆ ಬೆಲೆಗೆ ಇಲ್ಲಿ ಸಿಗುತ್ತದೆ. ಯಾವುದೇ ದೇಶ ಶ್ರೀಮಂತವಾದಂತೆ ಅಲ್ಲಿನ ಪ್ರಜೆಯ Neural Reward Function-
ಖರೀದಿ ಸುವ ತಾಕತ್ತು ಜಾಸ್ತಿಯಾಗುತ್ತದೆ. ಅದಕ್ಕೆ ಅನುಗುಣ ವಾಗಿ ಆಹಾರ ಉತ್ಪಾದನೆ ಹೆಚ್ಚಿದಂತೆ ಹೆಚ್ಚಿನ ಕೊಬ್ಬಿನ ಆಹಾರ
ಅಗ್ಗ. ಇಲ್ಲಿ ಹೇಗಾಗಿದೆಯೆಂದರೆ ಸಾವಿರ ಕ್ಯಾಲೊರಿಯಿರುವ ಬರ್ಗರ್ ಖರೀದಿಸಬೇಕೆಂದರೆ ಆ ವ್ಯಕ್ತಿ ಹದಿನೈದು ನಿಮಿಷ
ಕೆಲಸ ಮಾಡಿದರೆ ಸಾಕು. ಅಗ್ಗದ, ಅಸಹಜ ಪ್ರಮಾಣದ ರುಚಿಯ ಕೊಬ್ಬಿನ ಆಹಾರ. ಇದರಿಂದ ಅಮೆರಿಕದಲ್ಲಿ ಸ್ಥೂಲ ಕಾಯ ಸಮಸ್ಯೆ ಈಗ ಒಂದು ಸಾಂಕ್ರಾಮಿಕದಂತಾಗಿದೆ.
ಇಲ್ಲಿ ಸರಾಸರಿ ಶೇ.೫೦ರಷ್ಟು ಜನರು ಇಂದು ಅತಿತೂಕದವರು, ಸ್ಥೂಲಕಾಯದವರು. ಕೊಬ್ಬು ಹೆಚ್ಚುಳಿದಾಗ, ಮುಂದೊಂದು
ದಿನ ಉಪವಾಸ ಬಿದ್ದಾಗ ಬೇಕಾದೀತು ಎಂದು ಶೇಖರಿಸಿಡುವ ವ್ಯವಸ್ಥೆ ದೇಹದಲ್ಲಿರುವುದು. ಇದಕ್ಕೊಂದು ಮೇಲ್ಮಿತಿ ಯಾ ಅವಶ್ಯಕತೆ ವಿಕಸನದಲ್ಲಿ ಹಿಂದೆಂದೂ ಎದುರಾಗಿರಲಿಕ್ಕಿಲ್ಲ. ಅತಿಯಾದ ಕೊಬ್ಬಿನ ಶೇಖರಣೆಯಿಂದ ಡಯಾಬಿಟೀಸ್, ಬ್ಲಡ್ ಪ್ರೆಶರ್ ಇತ್ಯಾದಿ ಸಕಲ ಪ್ಯಾಕೇಜ್ ಕಾಯಿಲೆಗಳು. ದೇಶದ ಜನರ ಸರಾಸರಿ ಆಹಾರ ಸೇವನೆಯ ಕ್ಯಾಲೊರಿಯ ಆಧಾರದ ಮೇಲೆ ದೇಶದ ಶ್ರೀಮಂತಿಕೆಯನ್ನು ಅಳೆಯಬಹುದು.
ದೇಶ ಶ್ರೀಮಂತವಾದಂತೆ ಅಲ್ಲಿನ ಜನಸಾಮಾನ್ಯರು ಸೇವಿಸುವ ಕೊಬ್ಬು, ಸಿಹಿಯ ಪ್ರಮಾಣ ಕೂಡ ಹೆಚ್ಚುತ್ತದೆ. ಏಕೆಂದರೆ ಹೆಚ್ಚಿನ ಬಯಕೆಯ ಆಹಾರ ಹೆಚ್ಚಿನ ಜನರಿಗೆ ಕೈಗೆಟುಕಲು ಶುರುವಾಗುತ್ತದೆ. ಭಾರತದಲ್ಲಿಯೂ ಹಾಗೆಯೇ ಆಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇಂದು ನಮ್ಮವರ, ಅದರಲ್ಲಿಯೂ ಪೇಟೆಯಲ್ಲಿ, ಬೇಕಾದ ಆಹಾರ ಕೈಗೆಟಕುವ ವ್ಯವಸ್ಥೆಯ ನಡುವೆ ಇರುವವರ ಆಹಾರ ಪದ್ಧತಿ ಪೂರ್ಣ ಬದಲಾಗಿದೆ. ವಾರದಲ್ಲಿ ನಾಲ್ಕಾರು ಬಾರಿ ಹೋಟೆಲ್ ಆಹಾರಕ್ಕೆ ಹಾತೊರೆಯುವುದು ಸಹಜವೆನಿಸತೊಡಗಿದೆ. ಜತೆ ಯಲ್ಲಿಯೇ ಸ್ಥೂಲಕಾಯ, ಆರೋಗ್ಯ ಸಮಸ್ಯೆಗಳಲ್ಲಿನ ಏರಿಕೆ ಪರೋಕ್ಷವಾಗಿ ಇದೆಲ್ಲವನ್ನು ಸಾಕ್ಷೀಕರಿಸುತ್ತಿದೆ.
ಇಂದು ಶೇ. ೪೦ರಷ್ಟು ಭಾರತೀಯ ಮಹಿಳೆಯರು ಹೊಟ್ಟೆಯ ಭಾಗದ ಸ್ಥೂಲಕಾಯ ಹೊಂದಿದ್ದಾರೆ. ಇದು ಇಪ್ಪತ್ತೇ ವರ್ಷದ ಹಿಂದೆ ಶೇ.೧೨ರಷ್ಟು ಇತ್ತು. ಅದರಲ್ಲಿಯೂ ೩೦-೪೯ ವಯೋ ಮಿತಿಯ ಹತ್ತರಲ್ಲಿ ಆರು ಹೆಂಗಸರು abdominal
obesity ಹೊಂದಿದ್ದಾರೆ ಎಂಬುದು ಸರಕಾರಿ ಲೆಕ್ಕ. ಹೇಗೆ ಲೆಕ್ಕಮಾಡಿದರೋ ಗೊತ್ತಿಲ್ಲ. ಏಕೆಂದರೆ ಅದನ್ನೆಲ್ಲ ಲೆಕ್ಕಿಸುವ
ವ್ಯವಸ್ಥೆ ನಮ್ಮಲ್ಲಿಲ್ಲ. ಆದರೆ ಸುಮ್ಮನೆ ಸುತ್ತಲೊಮ್ಮೆ ಗ್ರಹಿಸಿ. ಇಂದು ಹೊಟ್ಟೆಯ ಭಾಗದ ಕೊಬ್ಬು ಶೇಖರಣೆ ಗಂಡಸರಲ್ಲಿ
ಕೂಡ ಅಷ್ಟೇ ಸಾಮಾನ್ಯ. ವಯಸ್ಸು ೩೫ ದಾಟುವುದರೊಳಗೆ ಡಯಾಬಿಟೀಸ್ ಬರದೇ ಇನ್ನೇನಾದೀತು? Neural Reward Function ಮನುಷ್ಯನನ್ನು ಕ್ರಿಯಾಶೀಲರಾಗುವಂತೆ ನೋಡಿಕೊಳ್ಳುವ ಕೆಲಸವನ್ನೂ ಮಾಡುತ್ತದೆ ಎಂದೆನಲ್ಲ.
ಇದು ಯಥೇಚ್ಛ, ಪೌಷ್ಟಿಕವೆನಿಸುವ ಆಹಾರ ಸಿಕ್ಕಾಗ ಇನ್ನೊಂದು ಅಧ್ವಾನಕ್ಕೆ ಕಾರಣವಾಗುತ್ತದೆ. ಆಹಾರ ನಿರಾಯಾಸ ಸಿಗುತ್ತಿದೆ ಎಂದರೆ ಅಲ್ಲಿ ಮನುಷ್ಯ ಸಹಜ ಉತ್ಸಾಹದ ಅವಶ್ಯಕತೆಯೇ ಇಲ್ಲವಲ್ಲ. ಇದರಿಂದ ಡೋಪಮೈನ್ ದಾಹ ಹೆಚ್ಚುತ್ತದೆ. ಇದುವೇ ಮುಂದುವರಿದಾಗ ಗೇಮಿಂಗ್, ಜೂಜು ಮತ್ತುಳಿದ ಚಟಗಳಿಂದ ಅದೇ ಡೋಪಮೈನ್ ಪಡೆಯುವಂತೆ, ಥ್ರಿಲ್ ಅನುಭವಿಸುವಂತೆ
ಪ್ರೇರಣೆಯಾಗುತ್ತದೆ. ಹೀಗೆ ಒಂದಕ್ಕೊಂದು ಚಟ ಥಳಕು.
ನಮಗೆ ಹೊಟ್ಟೆ, ಪಚನ ವ್ಯವಸ್ಥೆ ಕೇವಲ ರುಬ್ಬುವ ಕಲ್ಲು ಎಂದೇ ತಪ್ಪಾಗಿ ಪರಿಭಾವಿಸುವುದಿದೆ. ಇದೊಂದು ಅನನ್ಯ ವ್ಯವಸ್ಥೆ. ಇಲ್ಲಿ ಹಾಕಿದ ಆಹಾರದಲ್ಲಿ ಯಾವುದು ದೇಹಕ್ಕೆ ಬೇಕು, ಯಾವುದು ಬೇಡವೆಂದು ನಿರ್ಧರಿಸಬೇಕು. ಅಷ್ಟೇ ಅಲ್ಲ, ದೇಹಕ್ಕೆ ಅವಶ್ಯವೆನಿಸಿದ ಆಹಾರ ಸಿಕ್ಕರೆ, ಆ ವಿಷಯವನ್ನು ಮಿದುಳಿಗೆ ಮುಟ್ಟಿಸಬೇಕು. ಮಿದುಳು ಅದನ್ನು ನೆನಪಿಟ್ಟುಕೊಂಡು ಮತ್ತೆ ಬಯಸುವಂತೆ ನೋಡಿಕೊಳ್ಳಬೇಕು. ಈ ಮೂಲಕ ಪೌಷ್ಟಿಕ, ರುಚಿಯಾದ, ವೈವಿಧ್ಯದ ಆಹಾರ ನಿರಂತರ ದೇಹಕ್ಕೆ ಪೂರೈಕೆಯಾಗ ಬೇಕು. ಈ ಲೆಕ್ಕಾಚಾರ ಸಂಪೂರ್ಣ ಬುಡಮೇಲಾಗುವುದು ಈ ಜಂಕ್ ಆಹಾರವನ್ನು ಒಳಬಿಟ್ಟುಕೊಂಡಾಗ. ಅಷ್ಟೇ ಅಲ್ಲ, ನಮ್ಮ ಜೀರ್ಣಕ್ರಿಯೆ ಯಲ್ಲಿ ಹೊಟ್ಟೆಯ ಟ್ರಿಲಿಯನ್ ಲೆಕ್ಕದ ಸೂಕ್ಷ್ಮಾಣುಜೀವಿಗಳ ಪಾತ್ರ ದೊಡ್ಡದು. ಅವು ವ್ಯಕ್ತಿ ಸೇವಿಸುವ ಆಹಾರಕ್ಕೆ ಅನುಗುಣ ವಾಗಿ ವೈವಿಧ್ಯ ಸಂಖ್ಯೆಯಲ್ಲಿ ಹೆಚ್ಚುಕಡಿಮೆಯಾಗುತ್ತವೆ.
ಹೀಗೆ ನಾವು ಸೇವಿಸುವ ಆಹಾರದ ಮೇಲೆ ಅವುಗಳ ಒಗ್ಗಿಕೊಳ್ಳುವಿಕೆ. ಒಂದು ವೇಳೆ ಲೆಕ್ಕಮೀರಿ ಕೊಬ್ಬಿನ ಆಹಾರ ಸೇವಿಸಿದರೆ ಅದನ್ನು ದೇಹಕ್ಕೆ ಜೀರ್ಣಿಸಿಕೊಳ್ಳಲಿಕ್ಕಾಗುವುದಿಲ್ಲ. ಅಮೆರಿಕದ ಪಾಪ್ ದಂತಕತೆ ಎಲ್ವಿಸ್ ಪ್ರೆಸ್ಲಿ ಸತ್ತದ್ದಕ್ಕೆ ಕಾರಣ ಇತ್ತೀಚೆ ಯಷ್ಟೇ ಬಯಲಾಯಿತು. ಆತ ಸತ್ತಿದ್ದು ಅತಿಯಾದ ಕೊಬ್ಬಿನ ಆಹಾರ ನಿರಂತರ ಸೇವಿಸಿದ್ದರಿಂದ, ಅದು ಜೀರ್ಣವಾಗದೇ, ದೇಹ ಅದನ್ನು ಹೊರಹಾಕಲಿಕ್ಕಾಗದೇ ಹೋದದ್ದರಿಂದ.
ದೇಶ ಮುಂದುವರಿದಂತೆ, ಶ್ರೀಮಂತವಾದಂತೆ ಅದೆಷ್ಟೋ ಇಂಥ ಜೀವ ಅನಿಷ್ಟಗಳು ಕೂಡ ಒಳಸೇರಿಕೊಳ್ಳುತ್ತವೆ. ಇಂಥ ವೆಲ್ಲ ಪಶ್ಚಿಮದ ಮುಂದುವರಿದ ದೇಶಗಳಲ್ಲೇ ಮೊದಲು ಹುಟ್ಟುವುದಕ್ಕೆ ಅಲ್ಲಿನ ಆಧುನಿಕತೆಯ ಮಾರ್ಗವೇ ಕಾರಣ. ಇವೆಲ್ಲ ಆಧುನಿ ಕತೆಯ ಉಪೋತ್ಪನ್ನಗಳು. ಆದರೆ ಭಾರತ ದಂಥ ಮುಂದುವರಿಯುತ್ತಿರುವ ದೇಶಕ್ಕೆ ಒಂದು ಅನುಕೂಲ ವಿದೆ. ಇಂಥ ಪಸ್ಟ್ ವರ್ಲ್ಡ್ ಸಮಸ್ಯೆಗಳನ್ನು ತಡೆಯಲು ಅವಕಾಶಗಳಿವೆ. ಇಂದು ಹೋಟೆಲ್ಲಿನ ಶುಚಿತ್ವ ಮೊದಲಾದವುಗಳನ್ನು ಪರೀಕ್ಷಿಸಲು ಡಿಪಾರ್ಟ್‌ಮೆಂಟುಗಳಿವೆ. ಆದರೆ ದೋಸೆಗೆ ಎಷ್ಟು ತುಪ್ಪ ಸುರಿಯಬೇಕು, ಕೇಸರಿಗೆ ಎಷ್ಟು ಸಕ್ಕರೆ ಹಾಕಬೇಕು, ಅಜಿನೋಮೊಟೊ ಎಷ್ಟಿದ್ದರೆ ಸರಿ ಎಂಬ ಯಾವುದಕ್ಕೂ ಅಂಕುಶವೇ ಇಲ್ಲ.
ಹೆಚ್ಚಿಗೆ ತುಪ್ಪ ಹಾಕಿದಂತೆ, ಎಣ್ಣೆ ಸುರಿದಂತೆ, ಉಪ್ಪು ಬೆರೆಸಿದಂತೆ, ಸಕ್ಕರೆ ಹೊಯ್ದಂತೆ ಬಯಸಿ ಬರುವವರು, ಗ್ರಾಹಕರು ಜಾಸ್ತಿ. ಈ ಎಲ್ಲ ಕಾರಣಗಳಿಂದ ಮನುಷ್ಯನಿಗೆ ಊಟವೇ ಚಟವಾಗುತ್ತಿದೆ. ಹಸಿವೆಯಿಲ್ಲದಿದ್ದರೂ ಅದು ಇದು ತಿನ್ನಬೇಕೆನ್ನುವ ನಿರಂತರ
ಉತ್ಕಟತೆ. ಸರಕಾರಗಳು ಆಸ್ಪತ್ರೆ ಕಟ್ಟುವುದನ್ನೇ ಆಧುನಿಕತೆ ಎಂದು ಪೂರ್ಣ ತಪ್ಪಾಗಿ ಗ್ರಹಿಸಿವೆ. ಸರಕಾರಕ್ಕೆ ಪ್ರಜೆಗಳು ಏನು ತಿನ್ನುತ್ತಿದ್ದಾರೆ ಎನ್ನುವುದೂ ಮುಖ್ಯ ವಿಷಯವಾಗ ಬೇಕು. ಅದು ಆಧುನಿಕತೆಯ ಹೊಸ್ತಿಲಲ್ಲಿರುವ ಭಾರತದಂಥ ದೇಶದ ಅವಶ್ಯಕತೆ ಕೂಡ ಹೌದು. ಇಲ್ಲದಿದ್ದರೆ ದಿನಗಳೆದಂತೆ, ಅಮೆರಿಕನ್ನರಂತೆ ಊಟವೇ ಚಟವಾಗಿಸಿಕೊಳ್ಳುವವರ ಪ್ರಮಾಣ ಏರುತ್ತದೆ. ಇದರಿಂದ ಜನರ ಆರೋಗ್ಯದ ಜತೆ ಯಲ್ಲಿ ಅದೆಲ್ಲದರ ಹೊರೆ ದೇಶಕ್ಕೆ. ರುಚಿಗೂ ಒಂದು ಲೆಕ್ಕವಿರಬೇಕು, ಮಾಪಕವಿರ ಬೇಕು, ಮಿತಿಯಿರಬೇಕು. ಜತೆಯಲ್ಲಿ ಜನರಲ್ಲಿ ನಿರಂತರ ಜಾಗೃತಿಯೂ ಬೇಕು, ಆದರೆ ಅದಷ್ಟೇ ಸಾಕಾಗದ ಸ್ಥಿತಿಯಿದೆಯಲ್ಲ!!